ಯಲ್ಲಾಪುರದ ನವಚೇತನ ಸಾಂಸ್ಕೃತಿಕ ಕಲಾ ಸಾಹಿತ್ಯ ವೇದಿಕೆ ಬಾಳಗಿಮನೆ ಕೊಡಮಾಡುವ ರಾಜ್ಯ ಮಟ್ಟದ ‘ಮಾತೆ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿ’ಗೆ ಸದಾಶಿವ ಸೊರಟೂರು ಅವರ ‘ದೇವರನ್ನು ಹೊರಹಾಕುತ್ತೇನೆ’ ಕವನ ಸಂಕಲನ ಆಯ್ಕೆಯಾಗಿದೆ.
2025 ನೇ ಸಾಲಿಗಾಗಿ ಈ ಆಯ್ಕೆ ನಡೆದಿದ್ದು, ಪ್ರಶಸ್ತಿ 5 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಹಾಗೂ ಸನ್ಮಾನಗಳನ್ನೊಳಗೊಂಡಿರುತ್ತದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸೊರಟೂರಿನವರಾದ ಸದಾಶಿವ ಸೊರಟೂರು ಅವರು ಪ್ರಸ್ತುತ ತರಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಇವರು ‘ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ’, ‘ಗಾಯಗೊಂಡ ಸಾಲುಗಳು’, ‘ಕಂಡಕ್ಟರ್ ಕವಿತೆಗಳು’, ‘ನಿನ್ನ ಬೆರಳು ತಾಕಿ’, ‘ಕೊಲ್ಲುವುದಕ್ಕೆ ಸದ್ದುಗಳಿವೆ’ ಹಾಗೂ ‘ದೇವರನ್ನು ಹೊರಹಾಕುತ್ತೇನೆ’ ಎಂಬ ಕವನಸಂಕಲನಗಳನ್ನು; ‘ಅರ್ಧ ಬಿಸಿಲು ಅರ್ಧ ಮಳೆ’, ‘ಧ್ಯಾನಕ್ಕೆ ಕೂತ ನದಿ’, ‘ಹಗಲೆಂದರೆ ಬೆಳಕಲ್ಲ’ ಎಂಬ ಕಥಾಸಂಕಲನಗಳನ್ನು; ‘ಆ ಹಾದಿ’ ಎಂಬ ವಿಶೇಷ ಕಥಾನಕ ಮತ್ತು ‘ಪುಟ್ಟ ದೇವರ ಕಣ್ಣೀರು’ ಎಂಬ ಲಘು ಪ್ರಬಂಧ ಸಂಕಲನವನ್ನು ಪ್ರಕಟಿಸಿದ್ದಾರೆ.
ಇವರ ಸಾಹಿತ್ಯ ಕೃಷಿಗೆ ಹರಿಹರಶ್ರೀ ಪ್ರಶಸ್ತಿ, ಬಳ್ಳಾರಿ ಎನ್. ಗವಿಸಿದ್ದ ಕಾವ್ಯಪುರಸ್ಕಾರ, ಕಾವ್ಯಸಂಜೆ ದಶಮಾನೋತ್ಸವ ಕಾವ್ಯ ಪ್ರಶಸ್ತಿ, ಭೂಮಿ ಸಾಹಿತ್ಯ ಪುರಸ್ಕಾರ, ಕ.ಸಾ.ಪ.ದ ಹೇಮರಾಜ್ ಜಿ.ಎನ್. ಕುಶಾಲನಗರ ದತ್ತಿ ಪ್ರಶಸ್ತಿ, ‘ಈ ಹೊತ್ತಿಗೆ’ ಕಥಾ ಪುರಸ್ಕಾರ, ಸಾಂಬಶಿವಪ್ಪ ಕಥಾ ಪುರಸ್ಕಾರ, ಮಂಗಳೂರಿನ ಹಂಸಕಾವ್ಯ ರಾಷ್ಟ್ರೀಯ ಪುರಸ್ಕಾರ, ವಿಭಾ ಸಾಹಿತ್ಯ ಪ್ರಶಸ್ತಿ ಹಾಗೂ ದಿನಕರ ದೇಸಾಯಿ ಕಾವ್ಯ ಪುರಸ್ಕಾರ, ಸೇಡಂ ಅಮ್ಮ ಪ್ರಶಸ್ತಿ ಸಂದಿವೆ.






0 Comments