ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಡದ ತಪ್ಪಿಗೆ ಮೈತುಂಬ ಬರೆ

-ತಿರುಪತಿ ಭಂಗಿ

ನಾಯಿ ಒಂದೇ ಸವನೆ ಬೊಗಳುವುದ ಕಿರಿಕಿರಿಯನಿಸಿ ಲೋಕ್ಯಾ ಮಲಗಿದಲ್ಲಿಯೇ ಮಗ್ಗಲು ಬದಲಿಸಿದ. ಆದರೂ ನಾಯಿ ಬೋಗಳುವುದು ನಿಲ್ಲಿಸಲಿಲ್ಲ. “ಇದಕೇನ ಕೆಟಬ್ಯಾನಿ ಆಗೇತ್ಲೆ ಹುಚಪ್ಯಾಲಿಗೆ” ಅಂದವ್ನ ದಡಗ್ನ ಹಾಸಗ್ಯಾಗಿಂದ ಕಿತಗೊಂದ ಎದ್ದು ಮೋತಿ ಮುಸಗ ತಗದಾ. ಹೊರಗ ಹಿಟ್ಟಚೆಲ್ಲಿದ್ಹಂಗ ಬೆಳದಿಂಗಳ ಬೆಳಕು ಬಿದ್ದಿತ್ತು. “ಹಚ್ಯಾ ಹಚ್ಯಾ ಯಾಕ್ವದರ್ತಿ ಆಗಳೆ ಅರss ಒಂದ ಬುಟ್ಟಿಗಂಟ್ಲೆ ಬಕ್ಕರ್ಸಿ ಥಣ್ಣಗ ಯಾಕ ಬೀಳಬಾರ್ದು” ಬೋಗಳುವ ನಾಯಿಗೆ ಅಂವ ಬೈಯ್ಯುತ್ತಿದ್ದಂತೆ ಅದು ತೀರಾ ಹುಚ್ಚಾಪಟಿ ಬೋಗಳಾಕ ಹತ್ತಿತ್ತು. ದೂರದಲ್ಲಿ ನಾಕೈದ ಮಂದಿ ಆ ಬೆಳದಿಂಗಳ ಬೆಳ್ಳನ ಬೆಳಕನ್ಯಾಗ ಮಸಕ ಮಸಕ ಲೋಕ್ಯಾನ ನಿದ್ದಿಗಣ್ಣನ್ಯಾಗ ಕಂಡ್ಹಂಗ ಆತು. ನಾಯಿ ಇದಕss ಇಷ್ಟ ಬೊಗಳಾಕ್ಹತೈತಿ ಅಂತ ಖಾತ್ರಿ ಮಾಡ್ಕೊಂಡ. ದೂರಿದ್ದವರನ್ನು ಕೂಗಿ ಯಾರು ನೀವು ಅನಬೇಕಂದ. “ಯಾಕ ಸುಮನss ಕೆದರಿ ಕ್ಯಾರ ಹಕ್ಕೊಂದ ಇದರಿಗೆ ನಿಲ್ಲತಿ ಬಿಡೊಪಾ ಮಾರಾಯನಾ” ಅವನ ಮನಸ್ಸು ಅವನನ್ನು ಅನಗೊಡದೆ ತಡೆದು ಸುಮ್ಮನಿರಿಸಿತು.

ಮೋತಿಮ್ಯಾಲ ಮುಸಗ ಹಕ್ಕೊಂಡ ಮಲಗೀನಿ ಅಂದ್ರ ಈ ಬಿಡಾಡಿ ನಾಯಿಯೊಂದ ಒಂದss ಸವನ ಒದರಾಕ ಬ್ಯಾರೆ ಹತ್ತೇತಿ ಹ್ಯಾಂಗ ಮಾಡೂದು ಅನಕೋತ ಹಾಸಗ್ಯಾಗ ಹೋಗಿ ಡುಬಕ್ನ ಉಳ್ಳಿದ.  ನೀರಗೊಜ್ಜಿದಂಗ ತಂಡಿ ಬ್ಯಾರೆ ಇತ್ತು. ಕಂಬಳಿ ಮುಖದ ಮ್ಯಾಲ ಹಕ್ಕೊಂಡ ಕಣ್ಣ ಮುಚ್ಚಿದ. ಕಿವ್ಯಾಗ ನಾಯಿ ಬೊಗಳು ದನಿ ಹಾರಿ ಹೊಡದ್ಹಂಗ ಆದ್ರೂ ಜೀವಾ ಗಟ್ಟಿಮ್ಯಾಡಿ ಮಲಗಿದ. ಬೆಳಕ ಆದಾಗ ದಡ್ಯಾಗಿನ ಅರ್ಧಕ್ಕ ಅರ್ಧ ಕುರಿಗಳು ನಾಪತ್ತೆಯಾಗಿದ್ದು. ನಾಯಿ ಕಡೆ ನೋಡಿದ. ಬೆಳತಾನ ಕಳ್ಳರ ಜೋಡಿ ಒದರಾಡಿ ಒದರಾಡಿ ಸಾಕಾಗಿ ಸುಮ್ಮನ ಮಲಗಿ ನಿದ್ದಿಮಾಡಾಕ್ಹತ್ತಿತ್ತು. “ಹೆಂತಾ ಪಾಮಾಲತನಕ ಬಿದ್ನೋ ಮಾರಾಯಾ ನಾನು, ನಾಯಿ ಒಂದss ಸವನ ಬೊಗಳಿ ಬೊಗಳಿ ಬ್ಯಾಸತ್ರೂ ಅದನss ಬೈದು ಮಲಗಿದ್ಯಾ. ಮಾಡಿದ್ದೆಲ್ಲ ಮಂದಿ ಬಾಯ್ಯಾಗ ಹಾಕಿದ್ಹಂಗಾತಲ್ಲ ನನ್ನ ಗತಿ” ಮನಿಯಾಗ ಕಳ್ಳರ ಕದ್ದಕೊಂದ ಹೋಗ್ಯಾರಂದ್ರ ಹ್ಯಾಂಗ ನಂಬ್ಯಾರು? “ನನಗ ಬೈಕ್‌ ಕೊಡಸಲಿಲ್ಲಂದ್ರ ಕುರಿ ಮಾರಿ ಅರss ನಾ ತಗೊಂದ ತಗೋತೀನಿ” ಈ ಮಾತ ನಿನ್ನೆ ಅರss ಅಂದೀನಿ. “ಹಾವೂ ಎತ್ತಿನ ಕೊಂಬ ಮುಂದ” ಅಂದ್ಹಂಗ ಈಗ ಈ ಹರಲಿಯೊಂದ ನನ್ನ ಕೊಳ್ಳಿಗೆ ಬಿಳತೈತಲ್ಲೋ ಬೀರದೇವ್ರಾ ಲೋಕ್ಯಾ ಹಳಹಳಸಾಕ್ಹತ್ತಿದ.

ಈ ಕಳ್ಳ ಸೂ..ಮಕ್ಳ ಎಂದೂ ಇಲ್ದ ಇಂದss ಬಂದ ಕದ್ದಕೊಂದ ಹೋಗ್ಬೇಕಾ? “ನೀ ಹೋಗೂದ ಬ್ಯಾಡ ಇಲ್ಲೇ ಮನ್ಯಾಗ ಬೀಳಲೇ ಅಡವ್ಯಾಗ ಮಲಗೂದಂದ್ರ ಮೈಯಲ್ಲಾ ಕಣ್ಣಾಗಿರ್ಬೇಕು, ನೀ ಪ್ಯಾಟ್ಯಾಗ ಪ್ಯಾನ ಹಚಗೊಂದ ಮಲಗಿ ನಿದ್ದಿ ಮಾಡಿದ್ಹಂಗ ಅಲ್ಲಾ” ಅವರಪ್ಪ ಮೂರು ಸಂಜೀಮುಂದ ಅಂದ ಮಾತು ಲೋಕ್ಯಾಗ ಜ್ಞಾಪಕ್ಕ ಬಂತು.  ದಿನಾ ನೀನss ತಂಡ್ಯಾಗ ಹೊಕ್ಕಿ ಒಂದವಾರ ನನ್ನ ಕಾಲೇಜನೂ ಸೂಟಿ ಐತಿ ನಾನss ಒಂದ ವಾರದ ತನಕಾ ದಡ್ಡಿಗೆ ಮಲಗಾಕ ಹೊಕ್ಕಿನಿ, ನೀ ಬೆಚ್ಚಗ ಮನಿಯಾಗ ಮಲಗೆಂದು ಅಪ್ಪನ ಮ್ಯಾಲಿನ ಕಾಳ್ಜಿಗೆ ತಾನss ಬಂದಿದ್ದ. ಕುರಿ ಕಳ್ಳರು ಇಷ್ಟೊಂದ ಮುಂದವರ್ದಾರಂತ ಲೋಕ್ಯಾಗ ಗೊತ್ತಾಗಿದ್ದು ತಮ್ಮ ಕುರಿ ನಾಪತ್ತೆಯಾದಗ.

ಹೊತ್ತೇರಿ ಮುಗಲಾಗಿದ್ದ ಸೂರ್ಯಾ ಎರಡ ಮಾರ ದೂರ ಬಂದಿದ್ದ. ಲೋಕ್ಯಾರಪ್ಪ ಮುದಕಣ್ಣ ದೂರದಾಗ ತಲಿಮ್ಯಾಲ ಪಟಗಾ ಸುತಗೊಂದ, ಗುದಗಲಂಗಟಾ ಹಕ್ಕೊಂದ, ಕಾಲಾಗ ಗಡ್ಡಿ ಕಾಲ್ಮರಿ ಮೆಟಗೊಂದ ದಡ್ಡಿಕಡೆ ಬರೂದು ನಿಚ್ಚಳವಾಗಿ ಲೋಕ್ಯಾನ ಕಣ್ಣಿಗೆ ಕಾಣತೊಡಗಿತು. ಲೋಕ್ಯಾಗ ಅವರಪ್ಪಗ ಏನ್‌ ಹೇಳ್ಬೇಕು, ಏನ್‌ ಬಿಡ್ಬೇಕು ಅನ್ನೂದ ತಲಿಯಾಗ ಹೊಳಿಯಾಕ ಹತ್ತಲಿಲ್ಲ.

“ಮಗನ ನೀನು ದುಡದ ತಿನ್ನು ಮನಷ್ಯಾ ಅಲ್ಲಾ ಹರಾಮಿ ಬರ್ಲಿ ಅನ್ನುವ ಲಪಂಗ! ನಿಮ್ಮ ಅಣ್ಣ ಒಂದss ಕತ್ತಿ ದುಡದ್ಹಂಗ ದುಡಿತೈತಿ, ನಿಮ್ಮವ್ವನೂ ಕ್ವಾಣಿನಗತೆ ಕೆಲಸಾ ಮಾಡ್ತೈತಿ, ನನಗ ದಿನಾ ಕುರಿ ಜೋಡಿ ಗುಡ್ಡಾ ಸುತ್ತೂದು ತಪ್ಪಂಗಿಲ್ಲ, ನೀ ಸಾಲಿ ಕಲಿತೀನಂತ ಪ್ಯಾಟಿ ಸೇರಿದ ಮ್ಯಾಲ ನನಗ ಬೈಕ್‌ ಬೇಕು, ಕಾರ್‌ ಬೇಕು, ಇಮಾನ ಬೇಕು ಅಂತ ಬರೀ ಬೇಡಕೀನ ಮುಂದ ಇಡ್ತೀ, ಒಬ್ಬರ ಮನ್ಯಾಗ ಸಾಲಿ ಕಲೀಲಿ ಅಂತ ನಮ್ಮ ಜೀವನಾ ಸಣ್ಣ ಮಾಡ್ಕೊಂಡ ನಿನ್ನ ಓದಸಾಕ ಹತ್ತೀವಿ, ನೀ ಏನ್‌ ದಡಾ ಮುಟ್ಟತಿಯೋ ನಡಬರಕ ಮುಳಗತಿಯೋ ನಿನಗ ಬಿಟ್ಟದ್ದು”  ಮುದಕಪ್ಪ ಮಗಾ ಊರಿಗೆ ಬಂದಾಗೊಮ್ಮೆ ಮನಿಯಾಗಿದ್ದವರು ದಿನಾ ಕಷ್ಟಾ ಪಡುವುದನ್ನು ಕತಿ ಮಾಡಿ ಹೇಳ್ತಿದ್ದ. ಲೋಕ್ಯಾ ಅವರಪ್ಪನ ಮಾತು ಕುಂಡಿ ಹಿಂದಿನ ಗಾಳಿಮಾಡಿ ಮತ್ತ ತನ್ನ ಕತ್ತೀ ತಾನ ಹೋಡಿತಿದ್ದ. ನನಗ ಅಷ್ಟ ರೊಕ್ಕ ಬೇಕು, ನಮ್ಮ ದೋಸ್ತರು ಟೂರಿಗೆ ಹ್ವಂಟಾರು ಇಷ್ಟ ಕೊಡು ಇದನ್ನ ಬಿಟ್ಟ ಬ್ಯಾರೇನೂ ಇಚಾರ ಮಾಡ್ತಿರಲಿಲ್ಲ. ಈಗ ಕುರಿ ಕಳುವು ಆದದ್ದು ಅವನಿಗೊಂದು ದೊಡ್ಡ ಪಾಠ ಕಲಿಸಿತ್ತು.

ಅವರಪ್ಪ ದಡ್ಡಿ ಹತ್ತಿರಕ ಬಂದ್ಹಂಗ ಲೋಕ್ಯಾನ ಮೋತಿ ಕಪ್ಪಿಟಿತು. “ಯಾಕ್ಲೆ ರಾತ್ರೀ ತಂಡೀಗೆ ನಿದ್ದಿ ಆಗಲಿಲ್ಲೇನು? ಪ್ಯಾಟ್ಯಾಗ ಮೆತ್ತನ ರಗ್ಗನ್ಯಾಗ ಕಾಲಸೇರಿಸಿ ನಿದ್ದಿ ಬಡಿದಾಂವಾ, ಇಲ್ಲಿಯ ಕಂಬಳಿ ನಿನಗ ಪಸಂದ ಅನಸಿರಾಕಿಲ್ಲೇನೋ? ಅನಕೋತ ದಡ್ಡಿಕಡೆ ಕಣ್ಣಾಡಿಸಿದ. ಅರ್ಧಕ್ಕರ್ಧ ಕುರಿ ಗಡದಗಪ್‌ ಆಗಿದ್ದು ಕಂಡು ಮುದಕಣ್ಣ “ಇಂಗತಿಂದ ಮಂಗನಗತೆ” ಅತ್ತಿತ್ತ ಸುತ್ತಾಡತೊಡಗಿದ. “ಏನ್‌ ಅನಾಹುತಾ ಮಾಡಿದೋ ಹೊಲಸಾ ರಾತ್ರೀನ ಕುರಿ ಪ್ಯಾಟಿಗೆ ಸಾಗಸೀದ್ಯಾ, ನನಗ ಗೊತ್ತಾಗಲಿಲ್ಲೋ ನೀ ಇಷ್ಟ ಉದ್ದ ನೀರಿಗೆ ಇಳಿತಿ ಅನ್ನೂದು” ಎಂದು ಕಣ್ಣತುಂಬಿಕೊಂಡು ಸಣ್ಣ ಹುಡಗೂರ ಹಂಗ ಗಳಗಳ ಅಳಾಕ್ಹತ್ತಿದ. “ಯಪ್ಪಾ ನಾನೇನೂ ಮಾಡಿಲ್ಲಪ್ಪೋ ಗುಡಿಯಾಗೀನ ಭೀರಪ್ಪನ ಆನೀಗೂ ರಾತ್ರಿ ಕಳ್ಳರss ಬಂದ ಕದಕೊಂದ ಹೋಗ್ಯಾರ” ಲೋಕ್ಯಾ ಪರಿಪರಿಯಾಗಿ ಹೇಳಿದ್ರೂ ಮಗನ ನಂಬಾಕ ಅವರಪ್ಪ ಒಟ್ಟೊಟ್ಟ ತಯಾರ ಇರಲಿಲ್ಲ. “ಈಗಿಂದ ಈಗ ನೀ ನನ್ನ ಕಣ್ಣಿಗೆ ಕಾಣದ್ಹಂಗ ಹಾಳಾಗಿ ಹೋಗು. ನನಗ ಇನ್ನಮ್ಯಾಲಿಂದ ಒಬ್ಬ ಮಗಾ, ಇನ್ನೊಬ್ಬ ನನ್ನ ಪಾಲಿಗೆ ಇಂದಿನಿಂದ ಸತ್ತಹ್ವಾದಂತ ತಿಳ್ಕೋತಿನಿ” ಮಗನ ಕಡೆ ಮೋತಿ ಕೊಡದ ಮುದಕಣ್ಣ ಗಂಟಲ ಹರದ ಬೀಳುವ್ಹಂಗ ಕಿರಚ್ಯಾಡಿದ. ಲೋಕ್ಯಾಗ ಅವರಪ್ಪನ ಮಾತ ಕೇಳಿ “ನಿಂತ ನೆಲವೇ ಖುಷಿದಂತೆ” ಅನಿಸಿತು. 

ಲೋಕ್ಯಾ ಕಾಣದ ದಾರಿ ಹಿಡಿದು ಕಣ್ಣೊರಿಸಿಕೊಳ್ಳುತ್ತ  ಅವರಪ್ಪನ ತಿರುತಿರುಗಿ ನೋಡುತ್ತ ನೆಡೆದ. ಅವನ ಹಿಂದಿಂದೆ ನಾಯಿ  ಬೆನ್ನು ಹತ್ತಿತ್ತು ಬಾಗಿ ಕಲ್ಲು ತಗೆದುಕೊಂಡು ಅದರತ್ತ ತೆಪ್ಪಗಲ್ಲು ಎಸೆದು ಅದನ್ನು ಹಿಂಬರಕಿ ಅಟ್ಟಿ ತಾನು ಮುಂದೆ ಹೆಜ್ಜೆ ಹಾಕಿದ.

                                                  *****

ಎರಡ ವರುಷ ಆದರೂ ಲೋಕ್ಯಾನ ಸುಳಿವೇ ಕಾಣಲಿಲ್ಲ. ಮುದಕಣ್ಣ ಹ್ವಾದ್ರ ನಾಕ ಕುರಿ ಹೋಗಿರ್ತಿದ್ದು ಮತ್ತ ಹಂಗss ಅವುತರ ಸಂತತಿ ಬೆಳದ್ಹಂಗ  ದಡ್ಡಿ ತುಂಬತಿತ್ತು. ತೆಲಿಯೆತ್ತರಕ ಬೆಳದ ಮಗನನ್ನು ಹುಚ್ಚಾಪಟಿ ಯಾಕ ಬೈದ್ನೋ.. ಅಂವಗ್ಯಾಕ ಮನಿಬಿಟ್ಟ ಹೋಗಂದ್ನೋ.. ಬರೀ ಇದss ಚಿಂತಿ ಮಾಡಿ ಮಾಡಿ ಮುದಕಣ್ಣ ಎಡೀ ಚಿಂಪ ಸಂವದ್ಹಂಗ ಸಂವದಿದ್ದ. ಲೋಕ್ಯಾನ ತಾಯಿ ಗೌರವ್ವಾ ಅಂವ ಹ್ವಾದ ಮ್ಯಾಲ ಹಾಸಗಿ ಹಿಡದ ಮಲಗಿದಾಕಿ ಮ್ಯಾಲ ಏಳಲೇ ಇಲ್ಲ. ಲೋಕ್ಯಾನ ಅಣ್ಣ ರಾಯಪ್ಪ ತಮ್ಮನ ಹುಡಕಾಕ ನಾಕಾರ ಮಂದೀ ಕರ್ಕೊಂಡ ಜೀಪ ಬಾಡಗಿ ಮಾಡಿ ಪ್ಯಾಟಿ ಪಟ್ಟಣ ಸುತ್ತಾಡಿ ಸುತ್ತಾಡಿ ಕೈಸೋತ ಕುಂತಿದ್ದ. ಮಗಾ ಬದಕ್ಯಾನೋ ಏನರss ಮಾಡ್ಕೋಂಡ್ನೋ ಇದss ದ್ಯಾನದಾಗ ಮುದಕಪ್ಪ ಸಂಚೆನಾ ಬೆಳತನಾ ಇರಾಂವ.

            ಮಗಗss ಒಂದ ಬೈಕ್‌ ಕೊಡಸಿದ್ರ ಅಂವ ಹಿಂಗತಿ ಕಳ್ಳತನಾ ಮಾಡ್ತಿರಲಿಲ್ಲ. ಮನಿ ಬಿಟ್ಟ, ಹೊಕ್ಕಿರಲಿಲ್ಲ. ಜೀವಾ ಕಳಕೋತಿರಲಿಲ್ಲಾ.. ಗುಡಿಯಾನ ಭೀರಪ್ಪಾ ಅಂವನ ಜೀವಕ್ಕೇನೂ ಆಗ ಬಾರ್ದಪೋ, ಬೇಕಾರ ನನ್ನ ಜೀವನ ಹ್ವಾದ್ರ ಹೋಗ್ಲಿ ನನ್ನ ಮಗಾ ಎಲ್ಲೆರ ಬದಕಿದ್ರ ಸಾಕು. ಅಂವ ಜಿಂವತ ಇದ್ರ ತಿಂಗಳ ಒಪ್ಪತ್ತನ್ಯಾಗ ಹೊಡಮರಳಿ ಬರ್ತಿದ್ದ. ಈಗ ಎರಡ ವರಸ ದಾಟಿ ಹ್ವಾದ್ರೂ  ಇನ್ನೂತನ ಅವನ ಸುಳಿವು ಇಲ್ಲಂದ್ರ ಅಂವ ಈ ಭೂಮಿಮ್ಯಾಲ ಇಲ್ಲ. ಅಯ್ಯೋ ನನ್ನ ಮಗನ್ನ ನಾನ ಕೊಂದನಲ್ಲೋ ದೇವ್ರಾ, ನಾನು ಎಂಥಾ ಪಾಪಿ! ನನಗ ಒಳ್ಳೆ ಸಾವು ಕೊಡಬ್ಯಾಡಪೋ ಎಂದು ಮುದಕಣ್ಣ ಒಂದ ನಮೂನಿ ಹುಚ್ಚರಗತೆ ಮಗನ ನೆನಪ ಮಾಡ್ಕೊಂಡ ತನ್ನಷ್ಟಕ್ಕ ತಾನ ಹುಚ್ಚರಗತೆ ಮಾತಾಡುವ ರೂಢಿ ಮಾಡ್ಕೊಂಡಿದ್ದ.

ಗೌರವ್ವ ಈಗಲೋ ಆಗ್ಲೋ ಸಾಯುವ್ಹಂಗ ಆಗಿದ್ಳು. ರಾಯಪ್ಪ ತಮ್ಮನಿಲ್ಲದ ನೋವಲ್ಲಿ ಕಬ್ಬಿನ್ಹಂಗ ಇದ್ದ ಮನುಷ್ಯಾ ಸೂರಪಾನ ದಂಟಿನ್ಹಂಗ ಆಗಿದ್ದ. ಇಂದಲ್ಲಾ ನಾಳೆ ನನ್ನ ತಮ್ಮಾ ಬರಬಹುದೆನ್ನುವ ನಂಬಿಕೆ ಮೇಲೆ ಅಂವನ ಮನಸ್ಸು ಕಟದ ಕಲ್ಲಿನ್ಹಂಗ ದೃಡವಾಗಿ ನಿಂತು ಅವನು ಬರುವ ಹಾದಿ ಕಾಯುತ್ತಿತ್ತು.

                                                    ***** 

ಮನಿ ಬಿಟ್ಟು ಹ್ವಾದ ಮ್ಯಾಲ ಲೋಕ್ಯಾ ಸೀದಾ ಬೆಂಗಳೂರ ಬಸ್ ಹತ್ತಿದ್ದ. ಕಿಸೇದಾಗ ನೈಯ್ಯಾಪೈಸ್ಯಾನೂ ಇರಲಿಲ್ಲ. ಬಸ್ಸಿನ ಕಂಡಕ್ಟರ್‌ ಕಾಲಿಗೆ ಬಿದ್ದು ಕಣ್ಣೀರ ಹರಸಿದ್ದ. ಕೊಳ್ಳಾಗ ಹಕ್ಕೊಂಡಿದ್ದ ಎಂಟ ಗುಂಜಿ ಬಂಗಾರ ತೈಯತಾ ಬಿಚ್ಚಿ “ಇದನ್ನ ಇಟಗೊಂದ ನನ್ನ ಬೆಂಗಳೂರ ಮುಟ್ಟಸರಿ” ಎಂದು ದೈನಾಸದಿಂದ ಹಲಬಿಕೊಂಡಾಗ ಮುಗ್ದನಾದ ಕಂಡಕ್ಟರನ ಮನಸ್ಸು ಬೆನ್ನಿಯಂತೆ ಕರಗಿತ್ತು. ತನ್ನ ಕಿಸೇದಾಗಿನ ಐದನೂರ ರೂಪಾಯಿ ತಗದು ಲೋಕ್ಯಾನಿಗೊಂದು ಬೆಂಗಳೂರ ತನಕ ಟಿಕೀಟು ಕೊಟ್ಟಿದ್ದ. ನಡು ದಾರ್ಯಾಗ ತರಬೀದಾಗ ಲೋಕ್ಯಾನಿಗೆ ಅನ್ನಾ ಸಾಂಬರ ತಿನಿಸಿದ್ದ. “ಮನಿ ಬಿಟ್ಟ ಬಂದಿಯೇನು?” ಅಂತ ಕಂಡಕ್ಟರ್‌ ಕೇಳಿದಾಗ ಲೋಕ್ಯಾ ತಲಿ ಅಲ್ಲಾಡಿಸಿ ಹೌದೆಂದಿದ್ದ. “ನೋಡಾಕ ವಿದ್ಯಾವಂತನಗತೆ ಕಾಣತಿ, ಮನಿಯಾಕ ಬಿಟ್ಟಬಂದೀ?” ಎಂದು ಕಂಡಕ್ಟರ್‌ ಮರು ಪ್ರಶ್ನೆ ಮಾಡಿದಾಗ ಲೋಕ್ಯಾ ನಡದ ಘಟನೆ ಕತಿ ಮಾಡಿ ಹೇಳಿ ಕಣ್ಣೊರಿಸಿಕೊಂಡಿದ್ದ. ಆಗ ಕಂಡಕ್ಟರ್‌ನ ಮನಸ್ಸು ಮತ್ತೆ ಕರಗಿತು. “ವಾಪಸ್‌ ಮನಿಗೆ ಹೋಗು, ರೊಕ್ಕಿಲ್ದ ರೂಪಾಯಿ ಇಲ್ಲದ ಬೆಂಗಳೂರಾಗ ಇದ್ದೇನು ಮಾಡ್ತಿ, ಮಣ್ಣ ತಿಂದ ಬದಕತೀನೆಂದರೂ ಅಲ್ಲಿ ಒಂದ ಮುಟಗಿ ಮಣ್ಣ ಸಿಗಂಗಿಲ್ಲ, ತಂದಿ-ತಾಯಿ ಬೈದರ ಮನಿ ಬಿಟ್ಟ ಬರ್ತಾರೇನು?” ಎಂದು ಗಧರಿಸಿದ. ಆಗ ಲೋಕ್ಯಾ “ನಾನು ಹೊಡಮರಳಿ ಊರಿಗೆ ಹೋಗಂಗಿಲ್ಲರೀ ಸಾಹೇಬ್ರ ನಿಮಗ ಗೊತ್ತ ಇದ್ದವರ ಕಡೆ ನನಗೊಂದ ಕೆಲಸಾ ಕೊಡಸಿ ಪುಣ್ಯಾ ಕಟಗೋರಿ” ಮತ್ತೊಮ್ಮೆ ಕಂಡಕ್ಟರ್‌ಗೆ ದೈನಾಸದಿಂದ ಬೇಡಿಕೊಂಡ. “ನಮಾಜ್‌ ಮಾಡಾಕ ಹ್ವಾದ್ರ ಮಸೀದಿನss ಕೊಳ್ಳಿಗೆ ಬಿದ್ಹಂಗಾತಲ್ಲಾ ನನ್ನ ಗತಿ” ಅಂತ ಮನದಲ್ಲಿಯೇ ಕಂಡಕ್ಟರ್‌ ಅನಕೊಂಡು ಒಂದಿಷ್ಟು ಹೊತ್ತು ಸುಮ್ಮನಾಗಿ ಆಯ್ತು ಏನಾರ ಒಂದ ಮಾಡೂನು ಅಂತ ಹೇಳಿದಾಗ ಲೋಕ್ಯಾನ ಮನಸ್ಸಿಗೆ ನೆಮ್ಮದಿ ಸಿಕ್ಕಂಗ ಅನಿಸಿತು. 

ರಾತ್ರಿ ಎರಡಾಗಿತ್ತು. ಲೋಕ್ಯಾನಿಗೆ ಅವರಪ್ಪ ನೆನಪಾದ, ಅವರವ್ವನ ಮೋತಿ ಕಣ್ಣಮುಂದೆ ಬಂದಂತೆ ಅನಿಸಿ ಕುಂತ ಸೀಟಿನಲ್ಲಿಯೇ ಗಳಗಳ ಅಳತೊಡಗಿದ. ಇಡೀ ಬಸ್ಸಿನಲ್ಲಿದ್ದವರು ನಿದ್ದಿ ಮಾಡುತ್ತಿದ್ದರೇ ಲೋಕ್ಯಾ ಒಬ್ಬನೇ ಕಣ್ಣೀರು ಹಾಕುತ್ತಾ ತನ್ನೂರು, ತನ್ನ ಮನೆ, ತನ್ನ ಅವ್ವ- ಅಪ್ಪರನ್ನು ನೆನಪಿಗೆ ತಗೆದುಕೊಂಡು ಬಿಕ್ಕುತ್ತಿದ್ದ. ಅಪ್ಪ ತನ್ನ ರಕ್ತ ಬಸೀದು ಗುಡ್ಡ ಗುಡ್ಡ ಸುತ್ತಿ ಕುರಿ ಮೇಸಿ, ಅವುಗಳ ಬಳ್ಳಿ ಹಬ್ಬಿಸಿದ್ದಾ, ನನ್ನ ಪಾಮಲತನದಿಂದ ಅಂವನು ಮಾಡಿಟ್ಟ ಸಂಪತ್ತು ಒಂದೇ ರಾತ್ರಿಯಲ್ಲಿ ಕಳ್ಳರ ಕೈ ಸೇರಿತು. ಅಪ್ಪ ನನ್ನೆಂದೂ ನಂಬಲಾರದ್ಹಂಗಾತು. ನಾನು ಅವನ ದೃಷ್ಠಿಯಲ್ಲಿ ಮಹಾ ಕಳ್ಳನಾಗಿಬಿಟ್ಟೆ. ಪಾಪ ನನ್ನವ್ವ! ಅವಳು ದುಡಿದು ದುಡಿದು ಮೈ ಮುದ್ದಿಮಾಡಿಕೊಂಡಿದ್ದಾಳೆ. ನಾನಿಲ್ಲ ಅನ್ನುವ ಕೊರಗಿನಲ್ಲಿ ನಾಳೆಯಿಂದ ಅವಳು ಹೇಗಿರುತ್ತಾಳೋ ಏನೋ? “ನನ್ನ ತಮ್ಮ ಓದಿ ದೊಡ್ಡ ಸಾಹೇಬನಾಗಲಿ” ಅಂತ ಅಣ್ಣ ತಾನು ಬಿಸಿಲು ಮಳಿ ಅನ್ನದೇ ದುಡಿದು ನನ್ನನ್ನು ಓದಿಸಲು ಪಣತೊಟ್ಟಿದ್ದ. ಅವನ ಕನಸ್ಸಿಗೂ ನಾನೀಗ ನೀರೆರಚಿದೆ. ಲೋಕ್ಯಾನಿಗೆ ಒಂದರ ಹಿಂದೆ ಒಂದು ನೆನಪುಗಳು ಬೆನ್ನತ್ತಿ ಬಂದು ಅವನ ಎದೆಯಲ್ಲಿ ಚೂಜಿಯಂತೆ ಚುಚ್ಚುತ್ತಿದ್ದವು. ಕಣ್ಣೀರು ಹಾಗೇ ದಳದಳ ಇಳಿಯುತ್ತಿದ್ದವು.

ಮೂಡಲು ಹರಿದು ಬೆಳಕು ಬಿದ್ದಾಗ ಬಸ್ಸು ಕೆಂಪೆಗೌಡ ಬಸ್ಸ ನಿಲ್ದಾಣವನ್ನು ತಲುಪಿತ್ತು. ಬಸ್ಸಿನಲ್ಲಿದ್ದವರು ಇರುವೆಯ ಸಾಲಿನಂತೆ ಒಬ್ಬರ ಹಿಂದೆ ಒಬ್ಬರು ಇಳಿದು ಅವರು ಹೋಗಬೇಕಾದ ದಿಕ್ಕುದೆಸೆಗೆ ಮುಖಮಾಡಿ ನಡೆಯತೊಡಗಿದರು. ಉಟ್ಟ ಬಟ್ಟೆಯಲ್ಲಿಯೇ ಬಂದಿದ್ದ ಲೋಕ್ಯಾ ಬಸ್‌ ಇಳಿದು ಸುತ್ತಲೂ ಕಣ್ಣು ಹಾಯಿಸಿದಾಗ ಬೆಂಗಳೂರಿನ ದುಬಾರಿ ಲೋಕ ಅವನ  ಕಣ್ಣಪರದೆಯ ಮೇಲೆ  ಹಾಗೇ ತೇಲತೊಡಗಿತು.

ಕಂಡಕ್ಟರ್‌ ಲೋಕ್ಯಾನ ಮರಿತು ಬಸ್‌ ಸ್ಟ್ಯಾಂಡಿನೊಳಗೆ ಹೋಗಿ ತಮ್ಮ ಅಧಿಕಾರಿಗಳೊಂದಿಗೆ ತಮ್ಮ ಬಸ್ಸಿನ ಬಂದಿದ್ದ ಪ್ರಯಾಣಿಕರ ಮಾಹಿತಿಯನ್ನು ನೀಡುವುದರಲ್ಲಿ ಬ್ಯೂಸಿಯಾಗಿದ್ದ. ಮುಳಗುವ ಜೀವಕ್ಕೆ ಹುಲ್ಲು ಕಡ್ಡಿಯೇ ಆಸರೆ ಅನ್ನುವಂತೆ ಲೋಕ್ಯಾನಿಗೆ ಆ ಮುಗ್ದ ಕಂಡಕ್ಟರ್‌ನೇ ಆಸರೆ ಆಗಿದ್ದ. 

ಲೋಕ್ಯಾ ದೈತ್ಯಾಕಾರವಾದ ಬೆಂಗಳೂರನ್ನು ಸಿನಿಮಾದಲ್ಲಿ ಮಾತ್ರ ನೋಡಿದ್ದ. ಕಣ್ಣಾರೆ ಕಂಡಾಗ ಎದೆಯಲ್ಲಿ ಒಂದು ರೀತಿಯ ನಡುಕ ಹುಟ್ಟಿತು. ಮರಳಿ ಬಸ್ಸು ಹತ್ತಿ ಊರಿಗೆ ಹೋಗಬೇಕೆನಿಸಿತು. ಕಂಡಕ್ಟರ್‌ ಮೇಲೆ ಭರವಸೆ ಇಟ್ಟುಕೊಂಡದ್ದರಿಂದ ಲೋಕ್ಯಾ ಮನಸ್ಸು ಬದಲಿಸಿಕೊಂಡ.

ಗಿಜಿಗಿಜಿ ವಾಹನಗಳ ಗದ್ದಲ, ಇಡೀ ದೇಶದ ಜನರೇ ಇದೇ ನಗರದಲ್ಲಿದ್ದಾರೇನೋ ಅನ್ನುವಂತೆ ಅವನಿಗೆ ಅನಿಸತೊಡಗಿತು. ಒಂದು ತಾಸ ಆದ ಮೇಲೆ ಕಂಡಕ್ಟರ್‌ ಮರಳಿ ಬಸ್ಸ ಬಳಿ ಬಂದಾಗ ಲೋಕ್ಯಾ ಆ ಬಸ್ಸಿಗೇ ಆನಿಸಿಕೊಂಡು ನಿಂತದ್ದು ನೋಡಿ ಅಯ್ಯೋ! ಈ ಹುಡುಗ ಇಲ್ಲೇ ಇದ್ದಾನಲ್ಲಾ ಅಂದುಕೊಂಡು ಅವನ ಹೆಗಲ ಮೇಲೆ ಕೈಹಾಕಿಕೊಂಡು ಹೋಗಿ ಒಂದು ಹೋಟೆಲ್‌ನಲ್ಲಿ ಕುಳ್ಳರಿಸಿ ಇಡ್ಲಿವಡಾ ತಿನಿಸಿದ. ಅವನಿಗೆ ಗೊತ್ತಿದ್ದ ಒಬ್ಬನಿಗೆ ಹೇಳಿ ಲೋಕ್ಯಾನಿಗೊಂದು ಕೆಲಸ ನಿಗಧಿ ಮಾಡಿದ. ಲೋಕ್ಯಾ ಆ ಕಂಡಕ್ಟರನಲ್ಲಿ ದೇವರನ್ನು ಕಂಡುಕೊಂಡು ಆ ಪ್ರತಿಮೆಗೆ ಕೈಜೋಡಿಸಿ ನಮಸ್ಕರಿಸಿದ. 

ಒಂದು ರಿಕ್ಷಾದಲ್ಲಿ ಲೋಕ್ಯಾನನ್ನು ಹತ್ತಿಸಿ ಕೈಕರ್ಚಿಗೆ ಒಂದಿಷ್ಟು ಹಣ ಕೊಟ್ಟು ಕಳಿಸಿಕೊಟ್ಟ. ಲೋಕ್ಯಾನ ಬದುಕು ಆಗ ಹೊಸ ದಿಕ್ಕಿನ ಕಡೆ ನಡೆಯತೊಡಗಿತು.

                                                          ******

ಲೋಕ್ಯಾನಿಗೆ ಅವನು ಕಲಿತ ವಿದ್ಯೆಯೇ ಅವನನ್ನು ಕೈಹಿಡದು ನಡೆಸಿತು. ಅವನು ಇಂಗ್ಲೀಷ್‌ ಕುರಿ ಹಾಲು ಕುಡಿದಷ್ಟು ಸರಳವಾಗಿ ಮಾತಾಡುತ್ತಿದ್ದ. ಹತ್ತು ವರುಷದಲ್ಲಿ ಕೈತುಂಬ ಹಣ ಮಾಡಿಕೊಂಡಿದ್ದ. ಮೊದಲು ಹೋಟೆಲ್‌ನಲ್ಲಿ ಎರಡು ವರುಷ ವೇಟರ್‌ ಆಗಿ ಕೆಲಸ ಮಾಡಿದ. ಲೋಕ್ಯಾ ಕೆಲಸ ಮಾಡುವ ಹೋಟೆಲ್ ಗೆ  ಮಸಾಲಿ ದೋಸೆ ತಿನ್ನಲು ಬಂಗಾರ ಅಂಗಡಿಯ ಸೇಡ್ಜಿ ದಿನವೂ ತಪ್ಪದೇ ಬರುತ್ತಿದ್ದ. ಲೋಕ್ಯಾ ದಿನವೂ ಬರುತ್ತಿದ್ದ ಆ ಸೇಡ್ಜಿಯನ್ನು ತುಂಬಾ ಆತ್ಮೀಯವಾಗಿ ಮಾತಾಡಿಸಿ, ಅವರಿಗೆ ಶುದ್ಧನೀರು, ಬಿಸಿಬಿಸಿ ದೋಸೆ ಕೊಟ್ಟು ಅವರ ಪ್ರೀತಿಯನ್ನು ಗಿಟ್ಟಿಸಿಕೊಂಡಿದ್ದ. ಲೋಕ್ಯಾನ ಮಾತೀನ ಶೈಲಿ, ಜನರೊಂದಿಗೆ ಅವನು ಮಾತಾಡುವ ರೀತಿಯನ್ನು ಗಮನಿಸಿದ  ಆ ಸೇಡ್ಜಿ ಈ ಹುಡುಗನನ್ನು ನನ್ನ ಅಂಗಡಿಯಲ್ಲಿ ಇಟ್ಟುಕೊಂಡರೆ ನನ್ನ ವ್ಯಾಪಾರ ದ್ವಿಗುಣವಾಗಬಹುದೆಂಬ ಆಸೆ ಅವನಲ್ಲಿ ಚಿಗುರಿತು. ಒಂದು ದಿನ ಆ ಸೇಡ್ಜಿ ನನ್ನ ಬಂಗಾರ ಅಂಗಡಿಯಲ್ಲಿ ನೀ ಕೆಲಸಕ್ಕೆ ಬಂದರೆ ಇಲ್ಲಿ ಕೊಡುವ ಸಂಬಳಗಿಂದ ಒಂದು ಪಟ್ಟು ಹೆಚ್ಚುಕೊಡುತ್ತೇನೆಂದು ಹುಡುಗ ಲೋಕ್ಯಾನಿಗೆ ಆಸೆ ಹಚ್ಚಿದ. ನೀರಲ್ಲಿ ಮುಳಗುವವನಿಗೆ ತೆಪ್ಪ ಸಿಕ್ಕಂತೆ ಲೋಕ್ಯಾನ ಬದುಕಿನಲ್ಲಿ ಆ ಸೇಡ್ಜಿ ಸಿಕ್ಕು ಅವನ ಬದುಕಿನ ದಿಕ್ಕನ್ನೇ ಬದಲಿಸಿದ.

ಲೋಕ್ಯಾ ಬಿಳಿಜೋಳದ ದಂಟಿನಂತೆ ಸಬೂಳವಾಗಿ, ಎತ್ತರವಾಗಿ ಇದ್ದ. ಮುಖದಲ್ಲಿ ಕುರಚಲು ಗಡ್ಡ,ಚಿಗುರು ಮೀಸೆ ಅವನ ಮುಖದ ಕಳೆಯನ್ನು ಹೆಚ್ಚಿಸಿದ್ದವು.  ಅವನ ಮಾತುಗಳು ಟಿ.ವ್ಹಿ ಯಲ್ಲಿ ನಿರೂಪಣೆ ಮಾಡುವ ನಿರೂಪಕರಂತೆ. ಆಕರ್ಶಕವಾದ ಮಾತಿನ ಶೈಲಿ. ಅಂಗಡಿಗೆ ಬಂದ ವ್ಯಾಪಾರಿಗಳಿಗೆ ಅವನು ತಮ್ಮವನೇ ಅನ್ನುವಷ್ಟು ಹತ್ತಿರವಾಗಿ ಮಾತಾಡಿ ಅವರ ಮನಸ್ಸನು ಗೆದ್ದು ಅಚ್ಚುಕಟ್ಟಾಗಿ ವ್ಯಾಪಾರ ಮಾಡುವ ಬಗೆ ಅಂಗಡಿಯ ಮಾಲಕರ ಸಂತಸವನ್ನು ಹೆಚ್ಚಿಸಿತ್ತು.

ಕುರಿದಡ್ಡಿಯಿಂದ ಎದ್ದು ಬಂದ ಹೈದ ಬೆಂಗಳೂರಿನ ಬಂಗಾರದ ಅಂಗಡಿಯಲ್ಲಿ ಇಂಗ್ಲೀಷ್‌, ಹಿಂದಿ, ಕನ್ನಡ, ತೆಲುಗು ಭಾಷೆಗಳನ್ನು ಮಾತಾಡುತ್ತ ಎಲ್ಲರ ಗಮನ ಸೆಳೆಯುತ್ತಿದ್ದ. ಆಗಾಗ ಸೇಡ್ಜಿಗಳು ಸೂರತ್‌, ಮುಂಬೈ, ದೇಹಲಿ ಹೀಗೆ ಅನೇಕ ನಗರಗಳಿಗೆ ಲೋಕ್ಯಾನನ್ನು ಕಳಿಸುತ್ತಿದ್ದರು. ಲೋಕ್ಯಾ ಸೇಡ್ಜಿಗಳು ಹೇಳಿದಂತೆ ವ್ಯಾಪಾರ ವೈವಾಟ ಮಾಡಿಕೊಂಡು ಬಂದು ಸೈ ಅನಿಸಿಕೊಳ್ಳುತ್ತಿದ್ದ. ಅವನ ಪ್ರಾಮಾಣಿಕ ಕೆಲಸದಿಂದ ಲೋಕ್ಯಾ ಬಂಗಾರ ಅಂಗಡಿಯ ಮಾಲಿಕರ ವಿಶ್ವಾಸ ಉಳಿಸಿಕೊಂಡಿದ್ದ. ಹಿಂಗಾಗಿ ಲೋಕ್ಯಾನನ್ನು ಬಂಗಾರ ಅಂಗಡಿಯ ಮಾಲಿಕರಾದ ಸೇಡ್ಜಿಗಳು ಅವನನ್ನು ತಮ್ಮ ಮನೆ ಮಗನಿಗಿಂತ ಹೆಚ್ಚು ಕಾಳ್ಜಿಯಿಂದ ನೋಡಿಕೊಳ್ಳುತ್ತಿದ್ದರು.

ಲೋಕ್ಯಾನಿಗೆ ಬಂಗಾರ ವ್ಯಾಪಾರದಲ್ಲಿ ಆಗುವ ಲಾಭ ಮತ್ತು ಲುಕ್ಸಾನಗಳ ಅರಿವು ಗಮನದಲ್ಲಿತ್ತು. ಎಷ್ಟು ಹಣ ಹಾಕಿ ಎಷ್ಟು ಲಾಭ ಪಡೆಯಬಹುದು ಅನ್ನು ಚಾನಾಕ್ಷತೆ ಅವನ ಗಮನಕ್ಕೆ ಬರಲು ಹೆಚ್ಚು ಸಮಯ ತಗೆದುಕೊಳ್ಳಲಿಲ್ಲ. ಮುಂದೆ ತಾನೇ ಒಂದು ಸ್ವಂತ ಬಂಗಾರದ ಅಂಗಡಿಯ ವ್ಯಾಪಾರ ನಡೆಸುವುದಾಗಿ ತಮ್ಮ ಮಾಲಕರಲ್ಲಿ ಹೇಳಿಕೊಂಡಿದ್ದ. ಅವರು ಅವನ ಮಾತಿಗೆ ಒಪ್ಪಿಗೆ ನೀಡಿ ತಮ್ಮ ಕೈಲಾದ ಸಹಾಯ ಮಾಡುವುದಾಗಿಯೂ ತಿಳಿಸಿದ್ದರು. ಬಂಗಾರ ಅಂಗಡಿಯ ಮಾಲಿಕರ ಸಹಾಯ ಸಹಕಾರದಿಂದ ಲೋಕ್ಯಾ ತನ್ನ ಜಿಲ್ಲೆಯಲ್ಲಿಯೇ ಒಂದು ಅಂಗಡಿಯನ್ನು ತಗೆಯುವ ಕನಸ್ಸು ಇಟ್ಟುಕೊಂಡು ಸಜ್ಜಾಗಿದ್ದ.

ಆ ರಾತ್ರಿ ಇದ್ದಕಿದ್ದಂತೆ ಲೋಕ್ಯಾನಿಗೆ ಅವನ ಊರು ನೆನಪಾಯಿತು. ಅವರ ಅಪ್ಪ ಅಮ್ಮನ ನೆನಪು ಘಾಡವಾಗಿ ಕಾಡತೊಡಗಿತು. ಊರು ಬಿಟ್ಟು ಹತ್ತು ವರ್ಷದ ಮೇಲಾಗಿತ್ತು. ಅಪ್ಪ ಏನು ಮಾಡುತ್ತಿದ್ದಾನೋ, ಅವ್ವ ನನ್ನ ನೆನಪಲ್ಲಿ ಸೊರಗಿ ಹೋಗಿರಬೇಕು. ಓದು ಬರಹ ಗೊತ್ತಿಲ್ಲದ ಮುಗ್ದ ಅಣ್ಣನಿಗೆ ಮದುವೆ ಆಗಿರಬೇಕು. ನನ್ನನ್ನು ಅವರು ಸಂಪೂರ್ಣ ಮರತಿರಬೇಕು. ಮಗಾ ರೈಲು ಕಂಬಿಗೆ ತಲೆ ಕೊಟ್ಟು ಸತ್ತಿರಬಹುದು ಅಥವಾ ನದಿಗೆ ಹಾರಿ ಪ್ರಾಣ ಬಿಟ್ಟಿರಬೇಕು. ಇಷ್ಟು ದಿನವಾದರೂ ಹೆತ್ತವರನ್ನು ನೋಡಲು ಬಂದಿಲ್ಲವಂದೆ ಖಂಡಿತ ಅವನು ಜೀವಂತವೇ ಇಲ್ಲ, ಜೀವಂತ ಇದ್ದರೇ ಯಾವ ಮಗನೂ ಅಪ್ಪ- ಅಮ್ಮರನ್ನು ಇಷ್ಟು ದಿನ ಬಿಟ್ಟು ಇರುತ್ತಾನೆ? ಹೀಗೆ ಅವ್ವ ಅಪ್ಪಂದಿರು ತಾನು ಸತ್ತಿರಬೇಕೆಂದು ನಂಬಿರಬಹುದು. 

ತಾನು ನಾಳೆನೇ ಊರಿಗೆ ಹೋಗಬೇಕು ಎಂದು ಲೋಕ್ಯಾ ನಿರ್ಧರಿಸಿದ.  ಊರಿಗೆ ಹೋಗುವುದಾದರೆ ನಾನು ಬರಿಗೈಯಲ್ಲಿ ಹೋಗಬಾರದು. ಅವ್ವಳಿಗೆ ಬಂಗಾರದ ಆಭರಣ ಒಯ್ಯಬೇಕು. ಅಪ್ಪನಿಗೆ ಆ ರಾತ್ರಿ ತ್ವಾಳಿನಂತೆ ನುಗ್ಗಿ ಎಷ್ಟು ಕುರಿಗಳನ್ನು ಹೊತ್ತು ಒಯ್ದರೋ ಆ ಕಳ್ಳ ಮಹಾಶಯರು ಅದರ ನಾಕು ಪಟ್ಟು ಕುರಿಗಳನ್ನು ಕರಿದಿಮಾಡಿಕೊಂಡೇ ಊರಿಗೆ ಹೋಗಬೇಕೆಂದು ಲೋಕ್ಯಾ ಆ ರಾತ್ರಿ ಮಲಗಿದಾಗ ಲೆಕ್ಕ ಹಾಕಿಕೊಳ್ಳುತ್ತ ಮಲಗಿದಾಗ ಅವನಿಗೆ ಎಷ್ಟೋ ಹೊತ್ತಿಗೆ ನಿದ್ದೆ ಆವರಿಸಿತು.

ಮರುದಿನ ಒಂದು ಹಳ್ಳಿಯಲ್ಲಿರುವ ಕುರಿ ಪಾರ್ಮ ಹೌಸ್‌ ಗೆ ಹೋಗಿ ಅಲ್ಲಿರುವ  ನೂರೈವತ್ತು ಕೆಂಗುರಿಗಳನ್ನು ಲೋಕ್ಯಾ ಕರಿದಿ ಮಾಡಿಕೊಂಡು ಒಂದು ದೊಡ್ಡ ಕ್ಯಾಂಟರ್‌ ನಲ್ಲಿ ಹೇರಿಸಿ ತನ್ನ ಕಾರನ್ನು ಹತ್ತಿ ಊರು ಕಡೆ ಮುಖಮಾಡಿ ಹೊರಟುಬಿಟ್ಟ. 

ಮೂಡಣದಲ್ಲಿ ಸೂರ್ಯ ಕರಗಿ ಹೋಗುತ್ತಿದ್ದ ಆ ಹೊತ್ತಿಗೆ ಲೋಕ್ಯಾನ ಕಾರು ಅವನ ಊರನ್ನು ಪ್ರವೇಶಿಸಿತು. ಅವನ  ಕಾರಿನ ಹಿಂದೆಯೇ ಕುರಿ ತುಂಬಿಕೊಂಡ ಕ್ಯಾಂಟರ್‌ ಗಾಡಿಯೂ ಬೆನ್ನುಹತ್ತಿಕೊಂಡು ಬರುವುದನ್ನು ಊರಿನಲ್ಲಿ ಅಲ್ಲಿ ಕುಳಿತ ಜನರೆಲ್ಲರೂ ಕುತೂಹಲದಿಂದ ನೋಡತೊಡಗಿದರು. ಲೋಕ್ಯಾ ತನ್ನ ಕಾರನ್ನು ಮನೆಯ ಅಂಗಳದಲ್ಲಿ ನಿಲ್ಲಿಸಿ ಮೆಲ್ಲಗೆ ಕೆಳಗಿಳಿದ. ಆಗ ಅವನ ಮನೆಯ ಕಟ್ಟಿಯ ಮೇಲೆ ಒಬ್ಬಳು ಹೆಂಗಸು ಚಿಕ್ಕ ಹುಡುಗನಿಗೆ ಅ.ಆ.ಇ.ಈ ಬರೆಯುವುದನ್ನು ಅಭ್ಯಾಸಮಾಡಿಸುತ್ತಿದ್ದಳು. ಲೋಕ್ಯಾ ಮೆಲ್ಲಗೆ ನಡೆದು ಮನೆ ಬಾಗಿಲಿಗೆ ಬಂದಾಗ ಆ ಹೆಂಗಸು ಗಾಬರಿಯಾಗಿ ಯಾರೆಂದು ಕೇಳಿದಳು. ಲೋಕ್ಯಾ ನೀವ್ಯಾರು? ಅನ್ನುತ್ತ ಅವರ ಮನೆಯ ಬಾಗಿಲ ದಾಟಿ ಒಳಗೆ ಹೆಜ್ಜೆ ಇಟ್ಟ. ಎದುರಿಗೆ ಗೋಡೆಯ ಮೇಲೆ ಅವರ ಅವ್ವ- ಅಪ್ಪನ ದೊಡ್ಡ ಪೋಟೋಗಳಿಗೆ ಪ್ಲಾಸ್ಟಿಕ್‌ ಹಾರವನ್ನು ಹಾಕಿ, ಸಣ್ಣದೊಂದು ಜೀರೋ ಬಲ್ಬ್‌ ಹಚ್ಚಿರುವುದನ್ನು ನೋಡಿದ ಲೋಕ್ಯಾ ನಿಂತ ಜಾಗದಲ್ಲಿಯೇ ಖುಷಿದುಬಿದ್ದ. ಒಂದೇ ಸಮನೇ ಅಪ್ಪಾ- ಅವ್ವಾ ಎಂದು ಗೊಗರೆಯತೊಡಗಿದ. ಹೊರಗೆ ಹೋಗಿದ್ದ ಲೋಕ್ಯಾನ ಅಣ್ಣ ಬಂದು ಬೋರಾಡಿ ಅಳುತ್ತಿದ್ದ ತನ್ನ ತಮ್ಮನನ್ನು ತಬ್ಬಿಕೊಂಡು ಅವನೂ ಬಿಕ್ಕತೊಡಗಿದ. 

“ನೀ ಹೋದ ಎರಡು ವರುಷದಲ್ಲಿಯೇ ಅವ್ವ ಹೋದಳು. ಅವ್ವ ಹೋದ ಆರು ತಿಂಗಳಲ್ಲಿ ಅಪ್ಪನೂ ಹೋದ. ಅವರಿಬ್ಬರೂ ಹೋದ ಮೇಲೆ ಕುರಿಗಳ ಉಸಾಬರಿ ಬಿಟ್ಟು ನಾನು ಕೂಲಿ ಕೆಲಸಕ್ಕೆ ಹೋಗುತ್ತಿದ್ದೇನೆ. ಇಕಿ ನಿಮ್ಮ ಅತ್ತಿಗೆ. ಅಂವ ಹಿರಿಮಗ ಅವನಿಗೆ ಅಪ್ಪನ ಹೆಸರಿಟ್ಟಿದ್ದೀನಿ. ಇವಳು ಕಿರಿಮಗಳು ಇವಳಿಗೆ ಅವ್ವನ ಹೆಸರಿಟ್ಟಿದ್ದಿನಿ” ಎಂದು ಲೋಕ್ಯಾನ ಅಣ್ಣ ಬಿಕ್ಕಿ ಬಿಕ್ಕಿ ಅಳತೊಡಗಿದ. ಲೋಕ್ಯಾ ಅವರ ಅಣ್ಣನ ಮಕ್ಕಳನ್ನು ತಬ್ಬಿಕೊಂಡು “ಅವ್ವಾ- ಅಪ್ಪಾ ನನ್ನನ್ನು ಕ್ಷಮಿಸಿರಿ, ನಾನು ಕುರಿ ಕದ್ದಿಲ್ಲಾ, ನಾನು ಕಳ್ಳನಲ್ಲಾ” ಮಾಡದ ತಪ್ಪಿಗೆ ಮೈತುಂಬ ಬರೆ ಬಿದ್ದಂತೆ ಅಂದು ಲೋಕ್ಯಾ ಒಂದೇ ಸಮನೆ ಬಿಕ್ಕಿತೊಡಗಿದ ಅವನ ಕೆನ್ನೆಯಿಂದ ಜಾರುವ ಕಣ್ಣೀರ ಹನಿಗಳನ್ನು ಅವರ ಅಣ್ಣನ ಮಗ ಪುಟ್ಟಕೈಗಳಿಂದ ವರೆಸಿತ್ತಿರುವುದು ಲೋಕ್ಯಾನಿಗೆ ಥೇಟ್!‌ ಅವರಪ್ಪನೇ ರಮೀಸಿದಂತೆ ಅನಿಸಿತು. ಮನೆ ಅಂಗಳದ ಕ್ಯಾಂಟರದಲ್ಲಿದ್ದ ಕುರಿಗಳು ಒಂದೇ ಸಮನೇ ಒದರುತ್ತಲಿದ್ದವು. ಅಪ್ಪನ ಪ್ರತಿರೂಪದಂತೆ ಇದ್ದ ಹುಡುಗ ಆ ಕುರಿಗಳ ದನಿ ಕೇಳಿ ಅಂಗಳಕ್ಕೆ ಜಿಗಿದ.

****** 

‍ಲೇಖಕರು Admin

3 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading