ವಿಜಯಶ್ರೀ ಹಾಲಾಡಿ ಅವರ ‘ಕಾಡಂಚಿನ ಊರಿನಲ್ಲಿ’
ಪ್ರಗತಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿ ಕುರಿತ ಶ್ರೀಧರ ಗಸ್ತಿ ಅವರ ಬರಹ ಇಲ್ಲಿದೆ.
-ಶ್ರೀಧರ ಗಸ್ತಿ
‘ಕಾಡಂಚಿನ ಊರಿನಲ್ಲಿ’ ಇದು ವಿಜಯಶ್ರೀ ಹಾಲಾಡಿಯವರ ಮಕ್ಕಳಿಗಾಗಿ ಬರೆದ ಅನುಭವ ಕಥನ. ಒಟ್ಟು 25 ಅನುಭವ ಕಥನಗಳನ್ನು ಹೊಂದಿದೆ. ನಾಡಿನ ಖ್ಯಾತ ಲೇಖಕಿ ದಿವಂಗತ ಡಾ. ಕಮಲಾ ಹೆಮ್ಮಿಗೆಯವರ ಬೆನ್ನುಡಿಯ ಶುಭಾಶಯ ಇದಕ್ಕಿದೆ. ‘ಜಂಬಿಕೊಳ್ಳಿ ಮತ್ತು ಪುಟ್ಟವಿಜಿ’ ಪುಸ್ತಕದ ಮುಂದುವರೆದ ಭಾಗವೇ ಈ ಪುಸ್ತಕವೆಂದು ಕಮಲಾ ಹೆಮ್ಮಿಗೆಯವರು ಹೇಳುತ್ತಾರೆ. ಈ ಪುಸ್ತಕ ಗಮನಿಸಿದಾಗ ಹೊಸತನದ ವಿಚಾರಗಳನ್ನು ಹಳೆಯ ಪಳೆಯುಳಿಕೆಗಳ ಮೇಲೆ ಸುಂದರ ಸಾಹಿತ್ಯದ ಸೌಧ ಕಟ್ಟಿದ್ದಾರೆ ಎಂದು ಹೇಳಬಹುದು. ವಿಜಯಶ್ರೀ ಹಾಲಾಡಿಯವರು ಮಲೆನಾಡಿನ ಉಡುಪಿ ಜಿಲ್ಲೆಯವರು. ಹೀಗಾಗಿ ಅವರ ಎಲ್ಲ ಕೃತಿಗಳಲ್ಲಿ ಕಾಡು ನಳನಳಿಸುತ್ತದೆ. ಓದುಗ ಸಹೃದಯರಿಗೆ ಮಲೆನಾಡಿನ ಸೊಬಗು ಸಿಗುತ್ತದೆ.
ಈ ಪುಸ್ತಕದ ಮೊದಲ ಅಧ್ಯಾಯದಲ್ಲಿ ಗುಮ್ಮಗಳ ಬಗ್ಗೆ ಉಲ್ಲೇಖವಿದೆ. ಅವರ ಬಾಲ್ಯದಲ್ಲಿ ಅನುಭವಿಸಿದ, ಅಜ್ಜಿಯೊಂದಿಗೆ ಕಳೆದ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಗುಮ್ಮನ ಚಿತ್ರ ಬಿಡಿಸುವುದು, ಊಟ ಮಾಡದಿದ್ದರೆ ಗುಮ್ಮ ಬರುತ್ತದೆ ಎಂದು ಹೆದರಿಸುವುದು, ಯಕ್ಷಗಾನ ವೀಕ್ಷಣೆಗಾಗಿ ರಾತ್ರಿ ಹೊತ್ತು ಆ ಕಾಡಿನಲ್ಲಿ ನಡೆದು ಹೋಗುವ ಪಯಣ, ಮಲಗಿಕೊಳ್ಳುವಾಗ “ಜೋರಾಗಿ ಮಳೆ ಬರಲಿ ದೇವರೇ” ಎಂದು ಬೇಡಿಕೊಳ್ಳುವುದು ಕಂಡು ಬರುತ್ತದೆ. ಈ ಪುಸ್ತಕದ ಕೇಂದ್ರಬಿಂದು ವಿಜಿ. ಬಾಲ್ಯದ ಪಯಣವನ್ನು ನೆನಪಿಸಿಕೊಳ್ಳುತ್ತಾ ಹಲವಾರು ಸಂಗತಿಗಳನ್ನು ಹೊರಹಾಕುತ್ತಾರೆ. ಬಾಲ್ಯದ ಆ ದಿನಗಳಲ್ಲಿ ಅಜ್ಜಿಯ ಪಕ್ಕದಲ್ಲಿಯೇ ನಿದ್ರೆ. ಆ ಕತ್ತಲೆಯ ರಾತ್ರಿಗಳು ಬೇಗನೆ ನಿದ್ರೆಗೆ ಜಾರಿಸುತ್ತಿದ್ದವು. ಹಾಂ, ಹಾಗಂತ ಲೇಟಾಗಿ ಏಳುವಂತಿರಲಿಲ್ಲ. ಆರು ಗಂಟೆಗೆಂದರೆ ಎಲ್ಲರೂ ಏಳಲೇಬೇಕು. ಈ ಸಂದರ್ಭದಲ್ಲಿ ಅವಳು ಅನುಭವಿಸಿದ ಆ ಕತ್ತಲೆ ರಾತ್ರಿಯಲ್ಲಿ ನಾಯಿ, ನರಿ, ಹಂದಿಗಳು ಕೂಗುವಾಗ, ಅವು ಒಂದೆಡೆ ಸೇರಿದಾಗಿನ ಆ ಆರ್ತನಾದವನ್ನು ಅನುಭವಿಸುತ್ತಾರೆ. ಆ ರಾತ್ರಿಯಿಡಿ ಮಳೆ ಬಂದಾಗ ಆ ಕತ್ತಲು ರಾತ್ರಿ ಒಂದು ಸುಂದರ ಅನುಭವವೇದ್ಯವಾಗುತ್ತದೆ. ಆ ಮಳೆಯಲ್ಲಿ ಕಪ್ಪೆ, ಕ್ರಿಮಿ, ಕೀಟಗಳೆಲ್ಲ ಹೊರಹೊಮ್ಮಿಸುವ ನಿನಾದ ಒಂದು ಸಂಗೀತದ ಓಘದಂತೆ ಭಾಸವಾಗುತ್ತದೆ.
ಇಲ್ಲಿ ಲೇಖಕಿಯ ನೆನಪುಗಳು ಕೇವಲ ವೈಯಕ್ತಿಕ ಅನುಭವಗಳಾಗಿ ಉಳಿಯದೆ, ಒಂದು ಕಾಲದ ಮಲೆನಾಡಿನ ಬದುಕಿನ ಚಿತ್ರಣವಾಗುತ್ತವೆ. ಅವಳ ಹಳ್ಳಿಮನೆಯ ಅನುಭವಿಸುವ ಬಯಕೆ ಹಾಗೆ ಉಳಿಯುವುದು ಇದರಲ್ಲಿ ಕಂಡು ಬಂದರೂ, ಮುಂದಿನ ಅವರ ಸೂರಕ್ಕಿ ಗೇಟ್ ಪುಸ್ತಕದಲ್ಲಿ ಫಲಪ್ರದವಾದಂತಿದೆ. ಕೆಲವು ಸಲ ಮಳೆಯ ರಭಸ ಕಡಿಮೆಯಾಗುವ ವಿಶ್ರಾಂತಿ ಸಮಯಗಳಲ್ಲಿ ನೆಂಟರಿಷ್ಟರ ಮನೆಗೆ ಹೋಗುವುದು ಬರುವುದು ಇರುತಿತ್ತು. ಆ ಸಂದರ್ಭದಲ್ಲಿ ಹದಿನೈದಿಪ್ಪತ್ತು ದಿನಗಳ ಕಾಲ ನೆಂಟರು ಉಳಿಯುತ್ತಿದ್ದರು. ಆಗ ಅವರೆಲ್ಲ ನಗೆಯಾಟ ಆಡುತ್ತಿದ್ದರು, ಹಾಡುತ್ತಿದ್ದರು, ಹೊಸತೆರನಾದ ತಿಂಡಿಯನ್ನೆಲ್ಲ ಮಾಡಿ ತಿನ್ನುವುದು ರೂಢಿಯಾಗಿತ್ತು. ಈ ಸಂದರ್ಭದಲ್ಲಿ ಅಮ್ಮ, ಅಜ್ಜಿ, ದೊಡ್ಡಮ್ಮ ಕೂಡಿಕೊಂಡು ಅತ್ರಾಸ, ಚಕ್ಕುಲಿ, ಉಂಡಿ, ಕಾಯಿಕಡುಬು, ಶಾವಿಗೆ, ಬರಿಯಕ್ಕಿ ದೋಸೆ-ರಸಾಯನ, ಹೆಸರುಗಂಜಿ, ಕೊಟ್ಟೆಕಡುಬು, ಮುಳ್ಳು, ಶುಕ್ಕಿನುಂಡೆ, ಪೋಡಿ ತಯಾರಿಸುತ್ತಿದ್ದರು.
ಲೇಖಕಿಯರು ತಾವೇ ಹೇಳಿಕೊಂಡಂತೆ ಅವರು ಪದವಿ ಮುಗಿಸಿದ ಮೇಲೆ ಅವರ ಊರಿಗೆ ವಿದ್ಯುತ್ ಬಂದಿದ್ದು ಎಂಬುದನ್ನು ತಿಳಿಸುತ್ತಾರೆ, ಅವರ ಬಾಲ್ಯದ ಚಿಮಣಿ ಬಳಕೆ, ರಸ್ತೆಯಿಲ್ಲದೇ ಕಾಲುಹಾದಿಯಲ್ಲೇ ನಡೆದು ಬಂದ ದಿನಗಳನ್ನು ಮೆಲುಕು ಹಾಕುತ್ತಾರೆ. ಇಂತಹ ವಿವರಗಳು ಇಂದಿನ ಮಕ್ಕಳಿಗೆ ಒಂದು ಅಪರಿಚಿತ ಬದುಕಿನ ಪರಿಚಯ ಮಾಡಿಕೊಡುತ್ತವೆ. ಆದರೆ ಆಹಾರ ಮತ್ತು ಹಳೆಯ ಬದುಕಿನ ವಿವರಗಳು ಕೆಲವೆಡೆ ಸ್ವಲ್ಪ ದೀರ್ಘವಾಗಿ ಬರುವುದರಿಂದ ಕಥನದ ವೇಗ ನಿಧಾನವಾಗುವ ಅನುಭವವೂ ಆಗುತ್ತದೆ. ಅವುಗಳಲ್ಲಿ ಮುಖ್ಯವಾದ ಅನುಭವಗಳನ್ನು ಇನ್ನಷ್ಟು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದರೆ ಮಕ್ಕಳ ಓದಿನ ಆಸಕ್ತಿ ಮತ್ತಷ್ಟು ನಿರಂತರವಾಗಬಹುದಿತ್ತು. ಮಲೆನಾಡಿನ ತೋಟ, ಹಾಡಿ, ಗದ್ದೆಗಳಲ್ಲಿ ಮಾಡುವ ಅನೇಕ ಕೆಲಸಗಳು ವಿಶೇಷವಾಗಿದ್ದವು. ಮಡೆಬಳ್ಳಿ ಅನ್ನುವುದು ಒಂದು ಬಗೆಯ ಹಗ್ಗ. ಬಿಸ್ಕಲ್ ಹಲಗೆ ಇದು ಬೀಜ ಸಂಗ್ರಹಕ್ಕಾಗಿ ಬಳಸುವ ಉಪ್ಪರಿಗೆಯ ಸ್ಥಳ. ಅಕ್ಕಚ್ಚು ಅನ್ನುವಂತದ್ದು ಮತ್ತೊಂದು ದನಕರುಗಳಿಗಾಗಿ ಮಾಡುವ ಆಹಾರ.
ಕಾಟುಮಾವಿನ ಹಣ್ಣಿನಿಂದ ತಯಾರಿಸಿದ ಹಣ್‌ಚಟ್ ಹಳ್ಳಿಮಕ್ಕಳಿಗೆ ಶಹರದ ಮಕ್ಕಳು ತಿನ್ನುವ ಕಟ್ಟಾಮಿಟ್ಟಾ ಚಾಕ್ಲೇಟ್ ಇದ್ದ ಹಾಗೆ. ಅದನ್ನು ತಯಾರಿಸುವ ಬಗೆ ಮತ್ತು ಅದರ ಸುತ್ತಲಿನ ಹಲವಾರು ಸಂಗತಿಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಇಂತಹ ಸ್ಥಳೀಯ ಪದಗಳು, ಆಹಾರಗಳು ಮತ್ತು ಪದ್ಧತಿಗಳು ಕೃತಿಯ ವಿಶೇಷತೆ. ಇವುಗಳ ಮೂಲಕ ಲೇಖಕಿ ಮರೆಯಾಗುತ್ತಿರುವ ಗ್ರಾಮೀಣ ಬದುಕನ್ನು ದಾಖಲಿಸಿದ್ದಾರೆ. ಆದರೆ ಇಂದಿನ ಮಕ್ಕಳಿಗೆ ಇಂತಹ ಅನೇಕ ಪದಗಳು ಅಪರಿಚಿತವಾಗಿರುವುದರಿಂದ ಕೆಲವು ಕಡೆ ಸಂದರ್ಭದ ಮೂಲಕ ಅವುಗಳ ಅರ್ಥವನ್ನು ಇನ್ನಷ್ಟು ಸ್ಪಷ್ಟಪಡಿಸಿದ್ದರೆ ಓದುಗರಿಗೆ ಅನುಕೂಲವಾಗುತ್ತಿತ್ತು.
‘ದೊಡ್ಡಬೆಕ್ಕು’ ಕಥನ, ಪ್ರಾಣಿ ಮತ್ತು ಮನುಷ್ಯರ ನಡುವಿನ ಸಂಬಂಧಗಳ ಕುರಿತ ಬರಹ ಚೆನ್ನಾಗಿ ಮೂಡಿ ಬಂದಿದೆ. ವಿಜಿ ಮತ್ತು ಆಕೆಯ ಸ್ನೇಹಿತರು ಪರೀಕ್ಷಾ ಸಮಯದಲ್ಲಿ ಕಾಡಿಗೆ ಹೋಗಿ ಓದುತ್ತಿದ್ದರು. ತೋಟದ ಹಾಡಿಗಳಲ್ಲಿ ಹುಲ್ಲುಕತ್ರೆ ಇರುತ್ತಿತ್ತು. ಅದರ ಮೇಲೆ ಮಲಗಿ, ಕುಳಿತು ಅಭ್ಯಾಸ ಮಾಡಿದ್ದು ಇದೆ. ಹೀಗೆ ಮಾಡುತ್ತಾ ಅನೇಕ ಬಗೆಯ ಹಣ್ಣುಗಳನ್ನು ತಿಂದಿದ್ದು ನೆನಪಿಸಿಕೊಳ್ಳುತ್ತಾರೆ. ಹತ್ತನೇ ಕ್ಲಾಸಿಗೆ ಬಂದಾಗ ಗರ್ಚನಾ ಗಿಡಗಳ ಗುಡ್ಡೆಯಲ್ಲಿ ಗಂಟೆ ಬಿಟ್ಟುಕೊಂಡು ಒಬ್ಬಳೇ ಓದುತ್ತಿದ್ದುದು, ಪಿಯುಸಿಗೆ ಬಂದಾಗ ನಾಗದೇವರ ಬನದ ಸುರುಳಿ ಸುರುಳಿ ಸುತ್ತಿದ ದಪ್ಪ ಬೀಜಗಳ ಮೇಲೆ ಕುಳಿತು ಓದಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಆಚೆ-ಒಳ ಎನ್ನುವ ಆಹಾರ ಪದಾರ್ಥಗಳನ್ನಿಡುವ ಸ್ಥಳಗಳಲ್ಲಿಯೂ ಓದಿದ್ದನ್ನು ನೆನಪಿಸಿಕೊಳ್ಳುತ್ತಾರೆ.
ಮಲೆನಾಡಿನ ಆ ಕಾಡು ಮನುಷ್ಯರಾದಿಯಾಗಿ ಸಕಲ ಪ್ರಾಣಿಗಳಿಗೂ ಆಶ್ರಯತಾಣ ಮತ್ತು ಆರೋಗ್ಯಕ್ಕೆ ಔಷಧಿಯ ಕಣಜ. ಈ ಕುರಿತು ಲೇಖಕಿ ಸಾಕಷ್ಟು ವಿಷಯ ವಿಸ್ತಾರ ಮಾಡಿದ್ದಾರೆ. ‘ಕಾಡಂಚಿನ ಊರಿನಲ್ಲಿ’ ಪುಸ್ತಕದ ತಲೆಬರಹದ ಲೇಖನ ಓದಿದಾಗ ಅನೇಕ ಪ್ರಾಣಿಗಳ, ಪಕ್ಷಿಗಳ, ಕ್ರಿಮಿಕೀಟಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಗೊಂಕ್ರ ಕೊಪ್ಪೆ, ನರಿ, ಕಾಡುಹಂದಿಗಳ ಹಲವಾರು ವಿಷಯಗಳು ಕಾಡಿನ ಮಹತ್ವ ತಿಳಿಸುತ್ತವೆ. ಇಲ್ಲಿ ಕಾಡನ್ನು ಕೇವಲ ಸೌಂದರ್ಯದ ದೃಷ್ಟಿಯಿಂದ ನೋಡದೇ, ಮನುಷ್ಯ ಮತ್ತು ಇತರ ಜೀವಿಗಳ ಬದುಕಿನ ಅವಿಭಾಜ್ಯ ಭಾಗವಾಗಿ ನೋಡಿರುವುದು ಕೃತಿಯ ಪ್ರಮುಖ ವೈಚಾರಿಕ ಅಂಶ. ಇಂದಿನ ಮಕ್ಕಳಿಗೆ ಕಾಡಿನೊಂದಿಗೆ ನೇರವಾದ ಒಡನಾಟ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಅನುಭವಗಳು ಪರಿಸರ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತವೆ.
ಮತ್ತೊಂದು ಅಧ್ಯಾಯದಲ್ಲಿ ಅವರು ಕಲಿತ ಮುದೂರಿ ಏಕೋಪಾಧ್ಯಾಯ ಶಾಲೆಯ ಬಗ್ಗೆ ಬರೆಯುತ್ತಾ ಅನೇಕ ಬಾಲ್ಯದ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಹಲವಾರು ಹಣ್ಣಿನ ಗಿಡಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ನೇರಳೆ ಹಣ್ಣನ್ನು ತಿಂದಾಗ ಎದುರಾಗುವ ತೊಂದರೆಗಳು, ನಿವಾರಿಸಲು ತಿನ್ನುವ ಮತ್ತೊಂದು ಸಳ್ಳೆ ಹಣ್ಣು. ಮತ್ತು ತಾವು ಕಲಿತ ಆ ಶಾಲೆಯಲ್ಲಿ ಗೆಳತಿ ಕುಸುಮಾಳೊಂದಿಗೆ ಶೀತಲ ಸಮರ ಚೆನ್ನಾಗಿದೆ. ಚಂದ್ರನ್ ಎಂಬ ಕಳ್ಳ ಹಾಲಾಡಿಗೆ ದಾಳಿಯಿಟ್ಟ ಸಂದರ್ಭದಲ್ಲಿ ಹಬ್ಬಿಕೊಂಡ ಸುದ್ದಿಗಳು ಇಡೀ ಊರನ್ನು ಭಯಾನಕಗೊಳಿಸಿ, ವಿಜಿ ಹಾಗೂ ಆತನ ಪರಿವಾರವೆಲ್ಲ ಇಡೀ ರಾತ್ರಿ ಪರದಾಡಿದ ಪ್ರಸಂಗ ಕುತೂಹಲಕಾರಿಯಾಗಿದೆ. ಇಂತಹ ಪ್ರಸಂಗಗಳು ಕೃತಿಯ ಅನುಭವ ಕಥನಕ್ಕೆ ಕಥೆಯ ಸ್ವಾರಸ್ಯವನ್ನೂ ಸೇರಿಸುತ್ತವೆ.
ಲೇಖಕಿ ತಮ್ಮ ಊರು ಹಾಲಾಡಿಯ ಕುಡುಬಿ ಜನಾಂಗದ ಜೀವನ, ಅವರ ಆಚಾರ-ವಿಚಾರಗಳು ಮತ್ತು ಹೋಳಿ ಹಬ್ಬದಲ್ಲಿ ಅವರು ಧರಿಸಿಕೊಳ್ಳುವ ವೇಷಭೂಷಣ, ಹೋಳಿ ಅಜ್ಜನ ವಿನೋದ ಓದುಗನಿಗೆ ತುಂಬಾ ಇಷ್ಟವಾಗುವಂತೆ ಬರೆದಿದ್ದಾರೆ. ಈ ಭಾಗ ಕೃತಿಯ ಸಾಂಸ್ಕೃತಿಕ ಮಹತ್ವವನ್ನು ಹೆಚ್ಚಿಸುತ್ತದೆ. ಒಂದು ಸಮುದಾಯದ ಬದುಕು, ಆಚರಣೆ ಮತ್ತು ಸಂಸ್ಕೃತಿಯನ್ನು ಬಾಲ್ಯದ ನೆನಪುಗಳ ಮೂಲಕ ದಾಖಲಿಸಿರುವುದು ಮುಂದಿನ ತಲೆಮಾರಿಗೆ ಒಂದು ದಾಖಲೆಯಾಗಿ ಉಳಿಯುವಂತಿದೆ. ಕರಾವಳಿ ತೀರಗುಂಟ ಮಲೆನಾಡಿನ ಅಸದೃಶ್ಯ ಕಾಡಿನ ಘಮಲಿನ ವಾಸನೆ ಆರೋಗ್ಯಕ್ಕೆ ಆಧಾರವಾಗಿದೆಯೆಂದೇ ಹೇಳಬೇಕು. ಚಾರ್ ಹಣ್ಣು ತಿನ್ನಲು ಯೋಗ್ಯವಾಗಿದ್ದರೂ ಸಹ ಮುಟ್ಟಿದರೆ ಸ್ಕಿನ್ ಮೇಲೆ ಪರಿಣಾಮ ಬೀರುವಂತಹ ಹಣ್ಣು. ಹೀಗಾಗಿ ಅದರ ಸುತ್ತ ಯಾರ ಸುಳಿವೂ ಇರುತ್ತಿರಲಿಲ್ಲ. ಆದರೆ ಮಂಗಗಳೂ ಲೀಲಾಜಾಲವಾಗಿ ಜಿಗಿಯುತ್ತಿದ್ದವು. ವಿಜಿ ಇದೆಲ್ಲವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು.
ಅಲ್ಲಿ ನಿತ್ಯ ಬಳಕೆಯ ಎಲ್ಲ ತರಹದ ತರಕಾರಿಗಳನ್ನು ಬೆಳೆಯುತ್ತಿದ್ದರು. ರುಚಿಕರವಾದ ಮತ್ತು ಆರೋಗ್ಯಕರವಾದ ಆಹಾರ ಸೇವಿಸುತ್ತಿದ್ದರು. ಆಚೆಮನೆಯ ದೊಡ್ಡಮ್ಮಳಿಗಂತೂ ವಿಜಿಯೆಂದರೆ ಪ್ರಾಣ. ಹಾಗೆನೇ ವಿಜಿಗೂ ಅಷ್ಟೇ. ದೊಡ್ಡಮ್ಮ ಮಾಡುವ ಅಡುಗೆ ತಿಂಡಿ ವಿಜಿಗೆ ಬಹಳ ಇಷ್ಟವಾಗುತ್ತಿತ್ತು. ವಿಜಿ ತುಂಬಾ ಸಂಕೋಚ ಸ್ವಭಾವದ ಹುಡುಗಿ. ಚಿಕ್ಕವಳಿದ್ದಾಗಿನ ಧೈರ್ಯ ಬೆಳವಣಿಗೆಯಾದಂತೆಲ್ಲ ಹಿಂಜರಿಕೆ, ಮನೋಭಾವ, ಹೆದರಿಕೆ ಕಾಡಲಾರಂಭಿಸಿತು. ಬಹುಶಃ ಅವಳ ದೈಹಿಕ ಬದಲಾವಣೆಯಿಂದ ಹಾಗಾಗಿರಬಹುದೆಂದು ತಾವೇ ಹೇಳಿಕೊಂಡಿದ್ದಾರೆ. ಅದು ಹತ್ತನೇ ವರ್ಗಕ್ಕೆ ಬಂದಾಗ ಅವಳ ಆತ್ಮವಿಶ್ವಾಸ ಇಮ್ಮಡಿಗೊಂಡಿತು. ಈ ಬದಲಾವಣೆಯನ್ನು ಲೇಖಕಿ ಯಾವುದೇ ದೊಡ್ಡ ತಾತ್ವಿಕ ವಿವರಣೆ ನೀಡದೆ ತಮ್ಮ ಅನುಭವದ ಮೂಲಕ ಹೇಳಿಕೊಂಡಿರುವುದು ಸಹಜವಾಗಿ ಮೂಡಿಬಂದಿದೆ.
ಅವಳು ಓದುತ್ತಿದ್ದ ಶಾಲೆ ಮತ್ತು ಶಿಕ್ಷಕರ ವರ್ತನೆಗಳ ಪ್ರಭಾವವೂ ಅವಳ ಮೇಲಾಯಿತು. ಅವಳ ಸಾಹಿತ್ಯಿಕ ಬೆಳವಣಿಗೆಗೆ ಅವಳಲ್ಲಿದ್ದ ಕನ್ನಡದ ಬಗೆಗಿನ ಅಪಾರ ಕಾಳಜಿ ಕಾರಣವಾಯಿತು. ಒಂದು ಸಲ ಹಿಂದಿ ವಿಷಯದಲ್ಲಿ ಪೂರ್ಣ ಅಂಕಗಳನ್ನು ಪಡೆದಾಗ ಅವಳಿಗಾದ ಸಂತೋಷವೂ ಸಾಹಿತ್ಯ ಕೃಷಿಗೆ ಸಹಾಯವಾಯಿತು. ಇಲ್ಲಿ ಒಬ್ಬ ವ್ಯಕ್ತಿಯ ಸಾಹಿತ್ಯಿಕ ಬೆಳವಣಿಗೆಯ ಹಿಂದೆ ಬಾಲ್ಯದ ಪರಿಸರ, ಶಾಲೆ, ಶಿಕ್ಷಕರು, ಭಾಷೆಯ ಮೇಲಿನ ಪ್ರೀತಿ ಮತ್ತು ವೈಯಕ್ತಿಕ ಅನುಭವಗಳು ಹೇಗೆ ಕೆಲಸ ಮಾಡುತ್ತವೆ ಎಂಬುದು ತಿಳಿಯುತ್ತದೆ. ವಿಜಿಯ ಮನೆಗೆ ಪ್ರತಿ ವರ್ಷಕ್ಕೊಮ್ಮೆ ನಗರದ ಕೆಲವು ಜನ ಅವರ ಹಳ್ಳಿಗೆ ಬರುತ್ತಿದ್ದರು. ಬಂದವರು ಅಲ್ಲಿಯ ಅಕ್ಕಪಕ್ಕದ ಪರಿಸರವನ್ನು ಸವಿಯುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಈ ಮನೆ ಆಶ್ರಯತಾಣವಾಗಿತ್ತು. ಹಳ್ಳಿಯ ಜನರಾದ ಇವರು ನಗರದಿಂದ ತಮ್ಮ ಮನೆಗೆ ಬಂದವರಿಗೆ ಅತಿಥಿ ಉಪಚಾರ ಚೆನ್ನಾಗಿಯೇ ಮಾಡುತ್ತಿದ್ದರು. ಕೆಲಸ, ತಿಂಡಿ-ತಿನಿಸುಗಳನ್ನು ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದರು. ತಮಗೆ ಬೇಕಾದ ತಿಂಡಿ-ತಿನಿಸುಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ ಒಂದು ದಿನವೂ ಅವರ ಮೇಲೆ ಅನುಕಂಪವಾಗಲೀ ಪ್ರೀತಿಯಾಗಲೀ ತೋರಿಸುತ್ತಿರಲಿಲ್ಲ. ಈ ಪ್ರಸಂಗ ಗ್ರಾಮೀಣ ಬದುಕಿನ ಆತಿಥ್ಯ ಮತ್ತು ಅದರೊಳಗಿನ ವರ್ಗಭೇದದ ಸೂಕ್ಷ್ಮತೆಯನ್ನೂ ತೋರಿಸುತ್ತದೆ. ಆದರೆ ಈ ಅನುಭವವನ್ನು ಇನ್ನಷ್ಟು ವೈಚಾರಿಕವಾಗಿ ತೆರೆದಿಟ್ಟಿದ್ದರೆ ಅದರ ಸಾಮಾಜಿಕ ಅರ್ಥ ಇನ್ನಷ್ಟು ಸ್ಪಷ್ಟವಾಗಬಹುದಿತ್ತು. ಈಗಿರುವ ರೀತಿಯಲ್ಲಿ ಅದು ಒಂದು ನೆನಪಿನ ಪ್ರಸಂಗವಾಗಿ ಹೆಚ್ಚು ಉಳಿಯುತ್ತದೆ.
ಹಳ್ಳಿಗಳು ಅಂದ್ರೆ ಸದಾ ಚಟುವಟಿಕೆಗಳ ಕೇಂದ್ರ. ಮಕ್ಕಳಾದಿಯಾಗಿ ಎಲ್ಲರೂ ಒಂದಿಲ್ಲೊಂದು ಕೆಲಸದಲ್ಲಿ ತೊಡಗುವವರೇ. ಹಾಗೇನೇ ವಿಜಿ ಕೂಡ ತನ್ನ ಅಜ್ಜಿ, ಅಮ್ಮನೊಂದಿಗೆ ಜೊತೆಯಾಗುತಿದ್ದಳು. ದನದ ಕೊಟ್ಟಿಗೆ ಶುಚಿಗೊಳಿಸುವುದು, ರವಿವಾರದ ರಜೆ ದಿನದಂದು ಗಂಟಿಗಳನ್ನು ಕರೆದುಕೊಂಡು ಮೇಯಿಸಲು ಹೋಗುವುದು, ರಜೆಯಲ್ಲಿ ಗೇರುಹಣ್ಣಿನ ಬೀಜ ಸಂಗ್ರಹಿಸಲು ಹೋಗುವುದು. ಹೀಗೆ ಒಂದಿಲ್ಲೊಂದು ಏನಾದರೂ ಇರುತ್ತಿತ್ತು. ವಿಜಿ ತಾನು ನೋಡಿದ ಅನೇಕ ವಿಧದ ಗಿಡಗಳನ್ನು ನೆಡುತ್ತಿದ್ದಳು, ಆದರೆ ಯಾವುದು ಉಳಿಯುತ್ತಿರಲಿಲ್ಲ. ಹೀಗಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಳು. ಅದರಲ್ಲೂ ಮದರಂಗಿ ಗಿಡದ ಬಗ್ಗೆ ಬಹಳ ಆಕರ್ಷಿತಳಾಗಿದ್ದಳು. ಅದರ ತೊಪ್ಪಲು ತಂದು ಅರೆದು ಅದರಲ್ಲಿ ಹುಣಸೆಹುಳಿ, ಟೀ ಪೌಡರ್ ಹಾಕಿ ಕಲಸಿ ಕೈ ಮೇಲೆ ಬಿಡಿಸುವ ಚಿತ್ತಾರ ಅವಳಲ್ಲಿ ಮನೆ ಮಾಡಿತ್ತು. ಹೀಗಾಗಿಯೇ ತಾನೊಂದು ಗಿಡ ನೆಟ್ಟಿದ್ದಳು. ಆದರೆ ಅದು ಬೆಳೆಯದೇ ಇದ್ದುದಕ್ಕೆ ತುಂಬಾ ನೊಂದುಕೊಂಡಳು.
ಒಬ್ಬಳೇ ಕಾಡಿನಲ್ಲಿ ತಿರುಗಾಡುವುದೆಂದರೆ ವಿಜಿಗೆ ಬಹಳ ಇಷ್ಟ. ಇದನ್ನು ಅವಳಿಗೆ ಮನೆಯ ಪರಿಸರವೇ ಕಲಿಸಿಕೊಟ್ಟಿತ್ತು. ರಾತ್ರಿ ಹೊತ್ತಿನಲ್ಲೂ ಒಬ್ಬಳೇ ಬ್ಯಾಟರಿ ಹಿಡಿದುಕೊಂಡು ಗದ್ದೆಯೆಲ್ಲ ನಡೆದಾಡುತ್ತಿದ್ದಳು. ಹೂ, ಹಣ್ಣು, ತರಕಾರಿಗಳನ್ನು ತರುವುದು ಸಹ ಅವಳ ಒಂದು ಕಾಯಕವಾಗಿತ್ತು. ಅವಳ ಗಟ್ಟಿಗಿತ್ತಿ ಅಜ್ಜಿಯ ನೆರಳಿನಲ್ಲಿ ದಿಟ್ಟತನ ಬೆಳೆಸಿಕೊಂಡಿದ್ದಳು. ಸಂಕೋಚ ಸ್ವಭಾವದ ವಿಜಿ ತನ್ನ ಬಾಲ್ಯದ ದಿನಗಳಲ್ಲಿ ಬಹಳಷ್ಟು ನೋವುಗಳನ್ನು ಅನುಭವಿಸಿದಳು. ಹೆಣ್ಣು ಮಕ್ಕಳು ದೊಡ್ಡವರಾದ ಸಂದರ್ಭದಲ್ಲಿ ಏನೂ ಗೊತ್ತಿರದ ಮಕ್ಕಳನ್ನು ಆ ಮೂರು ದಿನಗಳ ಹೊರಕೋಣೆಯಲ್ಲಿ ಅನುಭವಿಸುವ ನರಕಯಾತನೆಗೆ ಮರುಗುತ್ತಾಳೆ. ಈಗಿನಂತೆ ಅಷ್ಟೊಂದು ಪ್ರಜ್ಞಾವಂತರೇ ಇರದ ಸಂದರ್ಭಗಳು ವಿಜಿಯನ್ನು ತೀರಾ ಕುಬ್ಜರನ್ನಾಗಿ ಮಾಡಿದ್ದವು. ಈ ಅನುಭವ ಕೃತಿಗೆ ಮತ್ತೊಂದು ಗಂಭೀರ ಆಯಾಮ ನೀಡುತ್ತದೆ. ಬಾಲ್ಯದ ನೆನಪುಗಳ ನಡುವೆ ಹೆಣ್ಣುಮಕ್ಕಳ ದೈಹಿಕ ಬದಲಾವಣೆ, ಸಾಮಾಜಿಕ ಕಟ್ಟುಪಾಡು ಮತ್ತು ಅದರೊಳಗಿನ ನೋವನ್ನು ಪ್ರಸ್ತಾಪಿಸಿರುವುದು ಗಮನಾರ್ಹ.
ಇಂತಹ ಸೂಕ್ಷ್ಮ ಅನುಭವವನ್ನು ಲೇಖಕಿ ಇನ್ನಷ್ಟು ವಿಸ್ತರಿಸಿ, ಆ ಸಂದರ್ಭದ ಮನಸ್ಥಿತಿ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಆಳವಾಗಿ ತೆರೆದಿಟ್ಟಿದ್ದರೆ ಕೃತಿಯ ವೈಚಾರಿಕ ಮೌಲ್ಯ ಇನ್ನಷ್ಟು ಹೆಚ್ಚಬಹುದಾಗಿತ್ತು. ಆದರೂ ಈ ಅನುಭವವನ್ನು ಮುಚ್ಚಿಡದೆ ದಾಖಲಿಸಿರುವುದೇ ಮುಖ್ಯವಾದ ಸಂಗತಿ. ಈ ಎಲ್ಲ ಸಂದರ್ಭಗಳಲ್ಲಿ ತನ್ನ ಅಪ್ಪನ ಆಶ್ರಯಕ್ಕಾಗಿ ಹಂಬಲಿಸುತ್ತಿದ್ದಳು. ಅಪ್ಪಯ್ಯ ಇರುವುದು ಹೊರರಾಜ್ಯ ಆಂಧ್ರದಲ್ಲಿ. ಅವರು ಬರುವುದು ವರ್ಷದಲ್ಲಿ ನಾಲ್ಕು ಬಾರಿ. ಅವರು ಬಂದಾಗಿನ ಮನೆಯ ಸಡಗರ, ಅವರು ತರುತ್ತಿದ್ದ ತಿಂಡಿಗಳು ಅಂದರೆ ವಿಜಿಗೆ ಬಹಳ ಇಷ್ಟ. ನೀಲಿಮಾ ಮತ್ತು ಇವಳಿಗೆ ಹೇಳಿ ಒಂದೇ ರೀತಿಯಲ್ಲಿ ಆರೈಕೆ ಮಾಡುತ್ತಿದ್ದರು. ತಂದೆಯೊಂದಿಗಿನ ಈ ದೂರ ಮತ್ತು ಭೇಟಿಯ ಸಂದರ್ಭದ ಸಡಗರವೂ ವಿಜಿಯ ಬಾಲ್ಯದ ಭಾವನಾತ್ಮಕ ಬದುಕಿನ ಒಂದು ಮುಖ್ಯ ಭಾಗವಾಗಿ ಕಾಣಿಸುತ್ತದೆ.
ಒಟ್ಟಿನಲ್ಲಿ ಕಾಡಂಚಿನ ಊರಿನಲ್ಲಿ ಕೇವಲ ಬಾಲ್ಯದ ನೆನಪುಗಳ ಸಂಕಲನವಲ್ಲ. ಮಲೆನಾಡಿನ ಕಾಡು, ಮಳೆ, ಹಳ್ಳಿಯ ಬದುಕು, ಆಹಾರ ಪದ್ಧತಿ, ಸ್ಥಳೀಯ ಆಚರಣೆಗಳು, ಪ್ರಾಣಿ-ಪಕ್ಷಿಗಳು, ಶಾಲೆ, ಕುಟುಂಬ ಸಂಬಂಧಗಳು ಮತ್ತು ಹೆಣ್ಣುಮಕ್ಕಳ ಬಾಲ್ಯದ ಅನುಭವಗಳನ್ನು ಒಂದೇ ನೆನಪಿನ ಲೋಕದಲ್ಲಿ ಕಟ್ಟಿಕೊಟ್ಟಿರುವ ಅನುಭವ ಕಥನ. ಈ ಕೃತಿಯ ದೊಡ್ಡ ಶಕ್ತಿ ಅದರ ಸಹಜತೆ ಮತ್ತು ಸ್ಥಳೀಯತೆಯಲ್ಲಿ ಇದೆ. ಲೇಖಕಿ ತನ್ನ ಬಾಲ್ಯವನ್ನು ಹೇಳಿಕೊಳ್ಳುವಾಗ ಕಾಡು, ಮಳೆ, ಅಜ್ಜಿ, ಅಪ್ಪ, ಶಾಲೆ, ಗೆಳತಿ, ಹಣ್ಣು, ಆಹಾರ, ಪ್ರಾಣಿ-ಪಕ್ಷಿ ಎಲ್ಲವನ್ನೂ ಒಂದೇ ಬದುಕಿನ ಭಾಗವಾಗಿ ಕಾಣಿಸುತ್ತಾರೆ. ಕೆಲವೆಡೆ ವಿವರಗಳು ದೀರ್ಘವಾಗುವುದರಿಂದ ಕಥನದ ವೇಗ ಕಡಿಮೆಯಾಗುತ್ತದೆ. ಕೆಲವು ಪ್ರಸಂಗಗಳನ್ನು ಇನ್ನಷ್ಟು ಸಂಕ್ಷಿಪ್ತಗೊಳಿಸಿ, ಕೆಲವು ಪ್ರಮುಖ ಅನುಭವಗಳನ್ನು ದೃಶ್ಯಾತ್ಮಕವಾಗಿ ವಿಸ್ತರಿಸಿದ್ದರೆ ಕೃತಿ ಮಕ್ಕಳ ಓದಿಗೆ ಇನ್ನಷ್ಟು ಚುರುಕು ನೀಡಬಹುದಿತ್ತು. ಆದರೂ ಮಲೆನಾಡಿನ ಒಂದು ಕಾಲಘಟ್ಟದ ಬದುಕನ್ನು ಮಕ್ಕಳ ಮುಂದಿಡುವಲ್ಲಿ ಕಾಡಂಚಿನ ಊರಿನಲ್ಲಿ ತನ್ನದೇ ಆದ ಮಹತ್ವ ಹೊಂದಿದೆ. ವಿಜಿಯ ಬಾಲ್ಯದ ನೆನಪುಗಳ ಮೂಲಕ ಒಂದು ಕಾಡಂಚಿನ ಊರು, ಅದರ ಜನ, ಪ್ರಾಣಿ-ಪಕ್ಷಿಗಳು, ಆಹಾರ, ಆಚರಣೆಗಳು ಮತ್ತು ಬದುಕಿನ ಸೊಗಡು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಮರೆಯಾಗುತ್ತಿರುವ ಆ ಬದುಕಿನ ನೆನಪುಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವುದೇ ಈ ಕೃತಿಯ ದೊಡ್ಡ ಕೊಡುಗೆ.






0 Comments