ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬುದ್ಧಚರಣ ಕಥಾಮೃತ’ ಕಾವ್ಯದಿಂದ ರಂಗದತ್ತ ಕರುಣೆಯ ಪಯಣ


 
ಸತೀಶ್‌ ಹುಳಿಯಾರ್‌ ಅವರ ʻಬುದ್ಧಚರಣ ಕಥಾಮೃತʼ

ಈ ಕೃತಿಗೆ ಡಾ.ಬಿ.ವಿ.ರಾಜಾರಾಂ ಅವರು ಬರೆದ ಮುನ್ನುಡಿ ಇಲ್ಲಿದೆ.

-ಡಾ.ಬಿ.ವಿ.ರಾಜಾರಾಂ

ಡಾ.ಎಚ್.ಎಸ್.ವೆಂಕಟೇಶಮೂರ್ತಿ ಕವಿಗಳು ರಚಿಸಿದ ಮಹಾಕಾವ್ಯವಾದ ʻಬುದ್ಧಚರಣʼವನ್ನು ಆಧರಿಸಿ ಸತೀಶ್‌ಹುಳಿಯಾರ್‌ ಅವರುʻಬುದ್ಧಚರಣ ಕಥಾಮೃತʼಎಂಬ ರಂಗರೂಪಾಂತರದ ಮಹಾರೂಪಕವನ್ನು ಸಾಧಿಸಿದ್ದಾರೆ.

ಸತೀಶ್‌ ಅವರು ಎಚ್ಚೆಸ್ವಿಯವರ ಹಾದಿಯಲ್ಲಿ ಹೆಜ್ಜೆ ಹಾಕಿದವರು. ಅವರ ಅನೇಕ ರಂಗರೂಪಕಗಳನ್ನು ಸಂಕಲಿಸಿ ಸಂಪಾದಿಸಿಕೊಟ್ಟವರು. ʻಪುತಿನ ರಂಗ ರೂಪಕʼದಲ್ಲಿ ಅಭಿನಯಿಸಿದವರು. ಹಾಗೆಯೇ ಹಲವಾರು ನಾಟಕಗಳನ್ನುರಚಿಸಿರುವವರು. ಹಾಸ್ಯ ಪ್ರದಾನವಾದ ಹಾಗು ಸಾಮಾಜಿಕ ನಾಟಕಗಳನ್ನು ಬರೆದಿದ್ದಾರೆ. ಅವು ಪ್ರದರ್ಶನ ಕಂಡು ಯಶಸ್ವಿಯಾಗಿವೆ ಕೂಡ.ಕ್ರೀಡೆಯಲ್ಲಿ ಅತೀವ ಆಸಕ್ತಿಯಿದ್ದರೂ ಸಹ, ಕಲಾ ಕ್ಷೇತ್ರದಲ್ಲಿ, ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ ಅವರಿಗೆ ಅಭಿರುಚಿಯಿದೆ ಮತ್ತು ಸೊಗಸಾದ ಸಂಭಾಷಣೆ ರಚಿಸುವ ಚತುರತೆ ಇದೆ. ಆ ಸಮಾಜಿಕ ಚಿಂತನೆ, ವ್ಯಂಗ್ಯ, ವಿಡಂಬನೆ, ಹಾಸ್ಯ, ಕಾಲೆಳೆಯುವ ಮಾತುಗಳು ಈ ಎಲ್ಲವೂ ಸಮಾಜಕ್ಕೆ ಕನ್ನಡಿ ಹಿಡಿದ ಹಾಗೆ. ಅದು ಅಲ್ಲಿ ಸಮಾಜಿಕತೆಯಲ್ಲಿ ಸಾಧ್ಯ.

ಇದು ಬುದ್ಧಚರಣ. ಅಂದರೆ ಬುದ್ಧನ ಪವಿತ್ರ ಪಾದಗಳಲ್ಲಿ ಅರ್ಪಿತವಾದ ಕಾವ್ಯ ಕುಸುಮ. ಎಚ್ಚೆಸ್ವಿಯವರ ಕಾವ್ಯ ತಪಸ್ಸಿನ ಸಂಧ್ಯಾಕಾಲದ ರಚನೆ. ಧ್ಯಾನಸ್ತರಾಗಿ ಮಹಾಧ್ಯಾನಿ ಬುದ್ಧ ಗುರುವಿನ ಅರಿವಿನ ಬಗ್ಗೆಕನ್ನಡಿಗರಿಗೆ ಅರ್ಪಿಸಿರುವ ಮಹಾಕಾವ್ಯ.

ಚರಣವೆಂದರೆ ಕಾವ್ಯದ ಸಾಲುಗಳೂ ಹೌದು. ಅದನ್ನು ಸುಲಲಿತ ಸರಳ ಭಾಷೆಯಲ್ಲಿ ಕನ್ನಡ ಹಾಡುಗಬ್ಬವಾಗಿಸಿದ್ದಾರೆಎಚ್ಚೆಸ್ವಿ. ಈ ಚರಣಗಳಲ್ಲಿ ಬುದ್ಧಕಥೆಯನ್ನು ಚೌಪದಿ, ಷಟ್ಪದಿ ಸಾಲುಗಳಲ್ಲಿ ಅನೇಕ ಜಾತಕ ಕಥೆಗಳ ಹಿನ್ನೆಲೆ ತಿಳಿಸುತ್ತಾ, ಸುಮೇಧ – ಸಿದ್ಧಾರ್ಥನಾಗಿ ಕಾಲಾನಂತರದಲ್ಲಿ ಬುದ್ಧ ಸಿದ್ಧನಾದ ಕಥೆಯನ್ನು ಕಾವ್ಯಚರಣಗಳಲ್ಲಿ ಕಟ್ಟಿಕೊಟ್ಟಿದ್ದಾರೆನಮ್ಮ ಜೀವನ ಪ್ರೀತಿಯ ಕವಿ ಎಚ್ಚೆಸ್ವಿ.ಅದನ್ನು ಆಧಾರವಾಗಿಟ್ಟುಕೊಂಡು ರಂಗ ರೂಪಾಂತರ ಮಾಡಿ ಸತೀಶ್‌ಹುಳಿಯಾರ್‌ ಒಂದು ಸಶಕ್ತ ಕೃತಿಯಾಗಿಸಿದ್ದಾರೆ.

ಎಚ್ಚೆಸ್ವಿಯವರ ʻಬುದ್ಧಚರಣʼ, ಎಂಟು ಕಾಂಡಗಳ ಮಾಹಾಕಾವ್ಯ. ಹಾಗೆಯೇ ಇಲ್ಲಿಯೂ ಎಂಟು ಅಂಕಗಳಿವೆ ಮತ್ತು ಅಂಕಗಳೊಳಗೆ ಕೆಲವು ದೃಶ್ಯಗಳಾಗಿ ಮೂಡಿವೆ. ಕಾವ್ಯದ ಸಾಲುಗಳು ಬೌದ್ಧ ಸಂನ್ಯಾಸಿಯ ಮೂಲಕ ದೃಶ್ಯಗಳಾಗಿ, ಸಂಭಾಷಣೆಗಳಾಗಿ ಅನೇಕ ಪಾತ್ರಗಳಲ್ಲಿ ಮೂಡಿದೆ. ಕವಿಬರೆದಿರುವ ಆರಂಭ ಹಾಗು ಅಂತ್ಯದ ಕವಿಧ್ವನಿಗಳನ್ನು ಉಳಿಸಿಕೊಂಡಿದ್ದಾರೆ.

ಬುದ್ಧಪಾದದ ಸುತ್ತ, ನಮಿಸಿರುವ ಶಿರಗಳ ವೃತ್ತ.ಆದಿ ಬಿಂದು ಬುದ್ಧ ಅಂತ್ಯ ಅನಂತ.ಕೋಟಿ ಕೋಟಿ ಜನರು ನಮಿಸಿರುವ ಪಾದ ಬುದ್ಧಪಾದ. ರಾಗರತಿಯ ನಂಜು ಏರುತ್ತಿರುವ ಈ ಸಮಾಜದಲ್ಲಿ, ಬೇಕು ಬೇಕುಎಂದೆನಿಸುವ ಈ ಜಗತ್ತಿನಲ್ಲಿ, ಬೇಡ ಬೇಡ ಎಂದು ಜೀವಿಸುವುದು ಕಷ್ಟಸಾಧ್ಯ. ತಿಸರಣ, ಪಂಚಶೀಲ, ನಾಲ್ಕು ಶ್ರೇಷ್ಠ ದುಃಖ ಸತ್ಯಗಳು, ದುಃಖನಿರೋಧದ ಎಂಟು ಮಾರ್ಗಗಳ ಪಾಲಿಸಬೇಕು, ಧ್ಯಾನ ಸಮಾಧಿ ಸಾಧಿಸಬೇಕು, ವಿಜ್ಞಾ-ಪರಜ್ಞಾನವನ್ನು ಪಡೆಯಬೇಕು, ಅನಿಚ್ಚ ದುಃಖ ಅನತ್ತ ಮನನ ಮಾಡಬೇಕು.ಸದಾ ಜಾಗ್ರತೆಯಿಂದ, ಎಚ್ಚರಿಕೆಯಿಂದ ಮನಸ್ಸನ್ನು ಕಾಯಬೇಕು, ಅತಿಯಾಗಿ ದೇಹ ದಂಡಿಸದೆ, ಅತಿಯಾದ ಕಾಮಭೋಗ ಲಾಲಸೆಯಿಂದ ದೂರವುಳಿದು ಮಧ್ಯಮ ಮಾರ್ಗ ಅನುಸರಿಸಬೇಕು. ಇದೇ ಬೇಡಗಳನ್ನು ಬಿಟ್ಟು, ಬೇಕೆನಿಸುವ ಪರಿ. ಈ ಎಲ್ಲಾ ಬುದ್ಧ ತಿಳಿಸಿದ ಧಮ್ಮಸಾರವನ್ನು ಈ ಕಥಾಮೃತ ಒಳಗೊಂಡಿದೆ.

ಆಸೆ ಗೆದ್ದವನು ಬುದ್ಧ, ಯುದ್ಧಗಳನ್ನು ಗೆದ್ದವನು ಬುದ್ಧ.ಶಾಕ್ಯರ – ಕೋಲಿಯರ ನೀರಿನ ಯುದ್ಧ, ರಾಜ ಪಸೇನದಿ – ರಾಜ ಅಜಾತಶತ್ರುವಿನ ಯುದ್ಧ, ಮಾರನೊಡನೆ ಯುದ್ಧ, ಮದೋನ್ಮತ್ತ ನಾಲಾಗಿರಿ ಆನೆಯೊಂದಿಗಿನ ಯುದ್ಧ, ಅಂಧರೂಡಿಗಳಮೇಲಿನ ಯುದ್ಧ, ಸಾವಿರಾರು ಹೆಣ್ಣುಮಕ್ಕಳು ಬಿಕ್ಕುಣಿಯರಾಗಬಹುದು ಎಂಬುದಕ್ಕಾಗಿ ಸಮಾನತೆಯ ಯುದ್ಧ.ಎಲ್ಲ ವರ್ಣ-ಜಾತಿಯವರು ಬುದ್ಧಮಾರ್ಗದಲ್ಲಿ ನಡೆಯಬಹುದು, ಅದಕ್ಕಾಗಿ ಸಾಮಾಜಿಕ ಯುದ್ಧ.ಪ್ರತಿ ಮಾನವನು ಮಾನಸಿಕ ಶಾಂತಿ, ನೆಮ್ಮದಿ ಪಡೆಯಲು ಅನುಕೂಲ ನಡೆಗಾಗಿ ಯುದ್ಧ.ಈ ಎಲ್ಲಾ ಬಗೆಯ ಯುದ್ಧಗಳನ್ನು ಯಾವ ಅಸ್ತ್ರ-ಶಸ್ತ್ರ-ಆಯುಧಗಳಿಲ್ಲದೆಯೇ ಪ್ರೀತಿ, ಕರುಣೆ, ಮೈತ್ರಿಯಿಂದಲೇ ಗೆದ್ದವನು ಬುದ್ಧ. ಸಾವಿರಾರು ಪಾತ್ರಗಳಿಗೆ ಸಮಾಧಾನ ನೀಡಿರುವ ಬುದ್ಧ, ೨೬೦೦ ವರ್ಷಗಳಿಂದಲೂ ಮನಸಾಂತ್ವನ ಪಡೆದಜೀವಿಗಳ ಸೀಮೆ ವಿಸ್ತರಿಸಲು ಸಹಕಾರಿಯದವ ಬುದ್ಧ. ಅವರವರ ಪ್ರತಿ ಮಾನವರ ಮನೋಲಹರಿಗಳ ಮೇಲೆ ವಿಜಯ ಸಾಧಿಸಲು ಸರಿದಾರಿ ತೋರಿದವ ಬುದ್ಧ.

ಇದೇ ಬುದ್ಧಚರಣ ಕಥಾಮ್ರತ. ರಂಗ ರೂಪಾಂತರಪಡೆದ ರಂಗ ಕೃತಿ. ಸತೀಶ್‌ ಹುಳಿಯಾರ್ ಅವರು ಅನೇಕ ತಿಂಗಳುಗಳು ಧ್ಯಾನಸ್ಥ ಸ್ಥಿತಿಯಿಂದ ಬರೆದು, ಮರುಬರೆದು ರೂಪ ಪಡೆದ ಕೃತಿಗೆ ಶರಣು, ಶರಣು. ಬಹುಜನ ಹಿತಾಯ, ಬಹುಜನ ಸುಖಾಯ, ಲೋಕಾನು ಕಂಪಾಯ – ಇದು ಬುದ್ಧವಾಣಿ. ಬುದ್ಧ-ದಮ್ಮ-ಸಂಘದ ಹರಕೆ ಹಾರೈಕೆ ಈ ಕೃತಿಗೆ ಒದಗಿಬರಲಿ ಎಂದು ಆಶಿಸುತ್ತೇನೆ.
ಶುಭವಾಗಲಿ, ಏಲ್ಲಾ ಜೀವಿಗಳು ಸುಖ-ಸಂತೋಷದಿಂದ ಜೀವಿಸಲಿ.

ಪುಸ್ತಕ ಕೊಳ್ಳಲು ಈ ಲಿಂಕನ್ನು ಬಳಸಿ :

Amazon :
Shop on Amazon
https://amzn.in/d/050bJ9oq
Flipcart :
https://dl.flipkart.com/s/!cenzqNNNN
E-Book (Google play
book) :
https://play.google.com/store/books/details?id=v7YLEgAAQBAJ

—

‍ಲೇಖಕರು Admin

28 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading