ಆಲದ ಮರ
– ಸತ್ಯಪ್ರಕಾಶ್ ರಾಮಯ್ಯ
ಒಂದು ಆಲದ ಮರದಲ್ಲಿ
ಒಂದು ಹಕ್ಕಿಯು ಕೂತಿತ್ತು
ಅದು ಹಾರಲು ಹೋದಾಗ
ತನ್ನ ರೆಕ್ಕೆಯು ಮುರಿದಿತ್ತು!
ಒಂದು ಮೀನಿನ ಬಲೆಯಲ್ಲಿ
ಒಂದು ಮೀನು ಸಿಲುಕಿತ್ತು
ಅದು ಜೀವ ಬಿಡುವಾಗ
ತನ್ನ ಕಣ್ಣು ತೆರೆದಿತ್ತು!
ಸುಳ್ಳು ಪ್ರಶ್ನೆಗೆ ಉತ್ತರ ಹುಡುಕಿದೆ
ನನ್ನದಲ್ಲದ ಜೀವಕೆ ಹೆದರಿದೆ
ಭಿನ್ನವಿಲ್ಲದ ಬಂಧಕೆ ಸಿಲುಕಿದೆ
ಬಣ್ಣವಿಲ್ಲದ ಕನಸಲಿ ಕರಗಿದೆ
ಪಾತಾಳ ನಿಂದೆ, ಆಕಾಶ ನಿಂದೆ!
ಈ ಜೀವ ನಿಂದೆ? ಅಲ್ಲಲ್ಲ ನಂದೆ?!
ನೀ ಮೇಲೆ ಎಂದೆ, ನಾನಿಲ್ಲ ಎಂದೆ
ನೀನಿರುವ ಮನೆಗೆ ನಾ ಬರಲೆ ತಂದೆ?!
ಎಷ್ಟು ಕಾದರೂ ಭಕ್ತಿಗೆ ಪಂಕ್ತಿಯಿಲ್ಲ!
ಸತ್ತ ಮೇಲೂ ಜೀವಕೆ ಮುಕ್ತಿಯಿಲ್ಲ
ಬೂದಿಯಾದರೂ ಕರಗುವ ಇಚ್ಛೆಯಿಲ್ಲ!
ಪಾಪಿಯಾದರೂ ಸ್ವರ್ಗಕೆ ಶುಲ್ಕವಿಲ್ಲ!
ಒಂದು ಕಾಲದ ಬುಡದಲ್ಲಿ
ಗಡಿಯಾರದ ಮುಳ್ಳಿತ್ತು
ಅದು ಟಿಕ್ ಟಿಕ್ ಎನುವಾಗ
ಸಮಯವು ನಿಂತಿತ್ತು!
ಒಂದು ಬಯಲಿನ ಕೊನೆಯಲ್ಲಿ
ಒಂದು ಪರ್ವತ ಕರಗಿತ್ತು
ಅದು ಹರಿಯುವ ದಾರಿಯಲಿ
ಹೆಜ್ಜೆಯು ಮೂಡಿತ್ತು!






0 Comments