-ಕವಿತಾ ವಿರೂಪಾಕ್ಷ
ಎಮೋಜಿಗಳ ಲೋಕದಲ್ಲಿ…!
ಹಗಲಿನ ಹಿಂದೆ
ಕತ್ತಲು ಇರುವಂತೆ
ಒಂದು ತೀರಾ ಕಪ್ಪಾದ ರಾತ್ರಿ
ಅದೆಷ್ಟು ಎಂದರೆ
ನಾಳೆಯ ಹಗಲೇ
ಇಲ್ಲವೇನೋ ಎಂಬಷ್ಟು.!
ಅತ್ತ ಕಡೆಯಿಂದ ಟಣ್
ಎನ್ನುವ ಮೆಸೇಜು
ಏನೇ ಹಿಂಗಾಯ್ತ೦ತಲ್ಲ?
ಹಾ..
ಏನೂ ಮಾಡಲಾಗದ ಅಸಹಾಯಕತೆ;
ಪರಿಸ್ಥಿತಿ ಕೈ ಮೀರಿಯಾಗಿತ್ತು?
ಮತ್ತೆ ಅತ್ತ ಕಡೆಯಿಂದ
10 ಗೊಳೋ ಎಂದಳುವ
loudly crying ಎಮೋಜಿಗಳು.
ನಾನು ಹೇಳುತ್ತಾ ಹೋದೆ
ಇತ್ತ ಎಮೋಜಿಗಳು
Inbox ತುಂಬುತ್ತಾ ಹೋದವು.
ಸಮಯ ಮೀರಿತ್ತು ಕೊನೆಗೊಂದು
crying ಎಮೋಜಿ ಮೇಲೊಂದು
sleeping ಎಮೋಜಿ..!
ಮೊನ್ನೆ ಮಗನ ಬರ್ತ್ಡೇ
ಅದೆಷ್ಟು ಕೇಕ್ಸ್, ಚಾಕೊಲೇಟ್ಸ್
ಕಪ್ ಕೇಕ್ಸ, ಹೂ ಗುಚ್ಚಗಳು!
ಜೊತೆಗೆ Heart eyes
Face blowing kiss
Smiling face with smiling eyes
ಎಮೋಜಿಗಳು
ಉಫ್..!
ಬೆಳಗ್ಗೆ, ಮದ್ಯಾಹ್ನ,ರಾತ್ರಿಯ ಲೆಕ್ಕದಲ್ಲಿ
Gm,Ga,Gn ಎನ್ನುವ ಅಂಗವಿಕಲ ವಿಶ್ಗಳು.!
ರಾತ್ರಿ ಹತ್ತರ ಮೇಲಾಗಿತ್ತು
ಕಿಟಕಿಯ ಆಚೆ ಕಣ್ಣಾಡಿಸಿದೆ
ಹಿತ್ತಲ ಆಚೆ ಹುಣಸೇಮರದಲ್ಲಿ
ನಿಜ ನಗು, ಅಳು, ಪ್ರೀತಿ, ಕಾಳಜಿ, ವಾತ್ಸಲ್ಯ,
ಅನುಕಂಪ ಅನುಭೂತಿಗಳು
ಕಣ್ಣೀರು ಹಾಕುತ್ತಾ ನೇತಾಡುತ್ತಿದ್ದವು..!!
ಎಲ್ಲಾ ತತ್ ಗಳ ನಡುವೆ
ಭಾರವಾದ ಶ್ವಾಸ,ದಣಿದ ಕಣ್ಗಳು
ನಿದ್ದೆಗೆ ಜಾರಿದ್ದವು….






0 Comments