-ಬಸವನಗೌಡ ಹೆಬ್ಬಳಗೆರೆ
ಬಸವ ಮತ್ತು ನಾನು…
ಮಾಡೋ ಕಾಯಕದಲೇ
ಕೈಲಾಸ ಕಾಣಿರಿ ಎಂದ ಆ ಬಸವ…
ನಾನೋ…
ಕೈಲಾಸಕ್ಕಷ್ಟೇ ಆದ್ಯತೆ ಕೊಡುತ್ತಿದ್ದೇನೆ;
ಸರಿಯಾಗಿ ಮಾಡದೇ ಕಾಯಕವ!!
“ಇವ ನಮ್ಮವ …ಇವ ನಮ್ಮವ”
ಎನುತಾ ಸರ್ವರನ್ನೂ ಪ್ರೀತಿಸಿದ
ಸಮಾನತೆಯ ಹರಿಕಾರ ಆ ಬಸವ…
ನಾನೋ….
“ಇವನಾರವ ಇವನಾರವ
ಇವನಾರವ” ನೆಂದೆಣಿಸುತಾ
ಭೇದ ಭಾವದಲೇ ಬಳಲುವವ!!
ದೇಹವೇ ದೇಗುಲವೆನ್ನುತ್ತಾ
ಅಂತರಂಗ ಶುದ್ಧಿಗೆ ಆದ್ಯತೆ ಕೊಟ್ಟನೋ
ನಿರ್ಮಲ ಭಾವದ ಆ ಬಸವ…
ನಾನೋ…
ಮನದಲ್ಲಿ ವಿಷ ಕಪಟ ತುಂಬಿ
ಮಂದಿರಗಳನು ನಿರ್ಮಿಸುತಾ
ಡಾಂಭಿಕ ಭಕ್ತಿಯಲೇ ದೇವರ ಹುಡುಕುವವ!!
ಜಾತಿ ಪೆಡಂಭೂತ ಹೆಮ್ಮರವಾಗಿಹ
ಕಾಲದಲೇ ಅಂತರ್ಜಾತೀಯ ವಿವಾಹ
ಮಾಡಿಸಿದ್ದ ಕ್ರಾಂತಿಪುರುಷ ಆ ಬಸವ…
ನಾನೋ…
ಜಾತ್ಯತೀತತೆಯ ಭಾಷಣ ಕುಟ್ಟುತ್ತ
ಜಾತಿ ಜಾತಿ ಜಾತಿಯೆಂವ
ಭ್ರಾಂತಿಯಲೇ ಬದುಕ ದೂಡುವವ!!
“ದಯವಿಲ್ಲದ ಧರ್ಮವಾವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಳಲಿ” ಎಂದ
ದಯಾಳು ಕರುಣಾಮಯಿ ಆ ಬಸವ..
ನಾನೋ…
ದಯೆ ದಾಕ್ಷಿಣ್ಯ ಬಿಟ್ಟು
ಧರ್ಮ ಶ್ರೇಷ್ಠತೆಯ ವ್ಯಸನಿಯಾಗಿರುವವ!!
ವರ್ಗ ಜಾತಿ ಗೋಡೆಗಳನು
ಪದಗಳನು ಅಸ್ತ್ರವಾಗಿಸಿಕೊಂಡು
ಸಮಾಜದ ಅಂಕುಡೊಂಕುಗಳ
ತಿದ್ದಿದ ಆ ಬಸವ….
ನಾನೋ…
ಸ್ವಾರ್ಥದ ಲೋಭದಲಿ
ಸಮಾಜದ ಸಮಸ್ಯೆಗಳಲಿ
ಲಾಭ ಮಾಡಿಕೊಳ್ಳಲು
ಬಯಸುವವ!!
ನಿನ್ನಂತೆ ನಾನಾಗಲಾರನೇ ಬಸವ?
ಬಯ್ದವರು, ಜರಿದವರನು ಜನ್ಮಬಂಧುಗಳು
ಎಂದು ಕರೆದ ಸ್ಥಿತಪ್ರಜ್ಞ ಬಸವ
ನಾನೋ…
ತಲೆ ಎತ್ತಿ ಆಗಸಕ್ಕೆ ಉಗುಳಿದರೆ
ಪುನಃ ನನ್ನಡೆಗೆ ಬಂದೀತೆಂಬ
ಸತ್ಯವನರಿಯದೇ ಉಗುಳುತ್ತಿರುವವ!!






0 Comments