-ಪದ್ಮ ಟಿ ಚಿನ್ಮಯಿ
ಕಿರಂ ಹೆಸರಿನ ಬಯಲು
ಕಲ್ಲು ನೀರು ಕರಗುವ ಹೊತ್ತು ಹರಳು ಕಟ್ಟಿತ್ತು
ಬದುಕು; ಕಾದಿದೆ ಬಿಳಿ ಹಾಳೆ ಒಂದಲ್ಲ ಎರಡಲ್ಲ
ದಿಕ್ಕು ದಿಕ್ಕಿಗೂ ಚೆಲ್ಲಿದೆ ಸಾವಿರ ಸಾವಿರ ಹಾಳೆ; ಕವಿತೆ ಹುಡುಕಿ ಹುಡುಕಿ ಹೆಕ್ಕುವ ಲೇಖನಿ ತೆಗೆದಷ್ಟು ಬಗೆದಷ್ಟು
ಬರೆಯುತ್ತಿದೆ ಬರೆಯುತ್ತಲೇ ಇದೆ
ಸರಿಸದೆ ಯಾರನ್ನು ನನ್ನನ್ನೂ ಪಕ್ಕಕ್ಕೆ
ತಲೆಯಷ್ಟೇ ಸಾಕೆ; ತಲೆಯ ಕೂದಲುಗಳು
ಬಿಸಿಲಿಗೆ ಬಿಚ್ಚಿಕೊಂಡು ಬೆಳಕಿನ ಪಕಳೆಗಳಂತೆ ಕಾವ್ಯ ಹರಿಯುತ್ತಿದೆ ;ಹಸುಕಂದನ ಎದೆಗವಿಚಿಕೊಂಡ
ಹಸಿ ಬಾಣಂತಿ
Pಆಗತಾನೆ ಎರೆದುಕೊಂಡು ಸಾಮ್ರಾಣಿ ಹೊಗೆಗೆ ಬೆವರುವಂತೆ
ಬೆವರಿದನು ಶ್ರೀ ಗುರು; ಹರುಷ ತುಂಬಿ ಹೊಳಪು ಚೆಲ್ಲಿದೆ
ಮುಖದ ತುಂಬ ಇಣುಕುವ ಕಿರಿಕಿರಿ ಸದ್ದಿನ ನಗು ಬಿರಿದು ಬಿಮ್ಮಾನದ ಗರಿಗಳು ಎತ್ತರಕ್ಕೆ ಏರುವಾಗ ಮುಡಿಗೆ
ಬಾಸಿಂಗದಂತೆ ಹೊಸ ವರನಾಗಿ ನಾಚಿ ನೀರಾದವನು
ಮನ ಮೆಚ್ಚಿದ ಮಡದಿ ಮೊದಲ ದಿನ
ಕಂಡಂತೆ ಕಂಡಿದ್ದರೇನೊ ಈ ಲಿಂಗಜಂಗಮಗೆ
ಜೋತು ಬಿದ್ದ ಜೋಳಿಗೆ ಇಣುಕಿದ್ದೆ ಹಾಗೆ
ಪಂಪ ರನ್ನ ಕುಮಾರವ್ಯಾಸ ಒಂದರ ಮೇಲೆ
ಒಂದು ತಾಳೆಗರಿಗಳಂತೆ ಪುಸ್ತಕಗಳು
ಒಳಗೆ ಬಂದಷ್ಟು ನೋಟು ಕಾಗದದ ಚೂರು
ಕಿಸೆಯ ಸಿಗರೇಟು ಹೊಸ ಹೊಗೆಯ ರಾಶಿ
ಕುಂತಲ್ಲೆ ಮಿರುಗುವ ಮುಗಿಲ ಬಿಳಿ ಮೋಡಗಳು ಕವಿತೆಯೆಂಬ ಸೋಜಿಗದ ಸೋನೆಮಳೆ ಜಿನುಗುತ್ತಲೇ
ಇದೆ; ಅಲ್ಲಮನ ಅಕ್ಕಡಿ ಸಾಲಿನಲ್ಲಿ ಮದ್ದಲೆಯ ಸದ್ದು
ಯಾರಾದರೂ ಮುಟ್ಟಬಹುದು ಮುಟ್ಟದಿರಬಹುದು ಮುಟ್ಟಲಾಗದ ಮುಗಿಲ ಚೆಂದಿರನ ಬೆಳದಿಂಗಳ ಬಯಲೆ;
ಬಯಲೊಳಗಿನ ಬಯಲೆ ಅರಿವಿನ ಗುರು ನಿನ್ನ ಗುರುತ್ವಾಕರ್ಷಣೆ, ಎಲ್ಲವೂ ಒಳಗು






0 Comments