ತೆಲುಗು ಮೂಲ: ಮೆರ್ಸಿ ಮಾರ್ಗರೇಟ್
ಕನ್ನಡಕ್ಕೆ: ಶಿವಕುಮಾರ್ ಕಂಪ್
ಕಿಟಕಿಯ ಅಂಚಿನ ಒಂದು ಮಳೆ
ನೀನು ಈ ವಯಸ್ಸಿನಲ್ಲಿ ಬಂದಿದ್ದಿಯೇಕೆ …
ಈಗ ನನ್ನ ಬಳಿ
ಕಾದು ನೋಡುವ ಸಂಜೆಗಳಿಲ್ಲ
ಆದರೆ
ಕಾದು ನೋಡಿದ ನೆನಪುಗಳಿವೆ.
ಕಿಟಕಿಯ ಗಾಜಿನ ಮೇಲೆ
ಬೆರಳೂರಿದ ಮಳೆ ಹನಿಗಳು
ಏನನ್ನೋ…. ಬರೆಯುತ್ತಿವೆ!
ಎಂದೋ ನಾ ಬರೆಯಬೇಕೆಂದುಕೊಂಡ
ಎದೆಯ ಗೂಡೊಳಗೇ ಬಚ್ಚಿಟ್ಟ
ನಿನ್ನ ಹೆಸರಿರದ ಉತ್ತರಗಳನು.
ತುಂಬಾ ಎನಿಸುತ್ತಿದೆ….
ಇನ್ನೊಂದು ಸಲ
ನನ್ನ ಕಣ್ಣುಗಳ ಹೊಲವಾಗಿ ಬದಲಿಸಿ
ಅಲ್ಲಿ ನಿನ್ನ ಕಣ್ಣುಗಳ ಬಿತ್ತಬೇಕೆಂದು….
ನಿನ್ನ ನಗುವ ಸಸಿಗಳ ಬೆಳಸಿ
ನನ್ನ ಒಂಟಿ ಕೋಣೆಯಲೆಲ್ಲಾ
ನಿನ್ನ ಹಿತವಾದ ನೆರಳ ಕಾಡಾಗಿ ಬದಲಿಸಬೇಕೆಂದು…
ಕರೆದು ಆ ಮಳೆಗೆ
“ ಕೊಂಚ ಮೆಲ್ಲಗೆ ಸುರಿ….ಇಲ್ಲೊಂದು ಬಹು ಸೋಮಾರಿ ವಸಂತ ಚಿಗುರುತ್ತಿದೆ”
ಎಂದು ಹೇಳಬೇಕೆಂದು.
ಆದರೆ ನನ್ನೊಲವೇ….
ನೀನು ಬಂದ ಈ ಕಾಲದಲ್ಲಿ
ನಾನು ಕೇವಲ ನಾನು ಮಾತ್ರವೇ ಅಲ್ಲ.
ನನ್ನ ಸುತ್ತಲೂ
ಹೊಣೆಗಾರಿಕೆಗಳಿಂದ ಕಟ್ಟಿದ ಗೋಡೆಗಳಿವೆ
ನನ್ನ ಕೈ ಬೆರಳೊಳಗೆ
ಇನ್ನೊಂದಿಷ್ಟು ಬದುಕುಗಳ ಬೆರಳುಗಳಿವೆ.
ಈಗ
ಒಬ್ಬರ ಮುಗಿಲ ನೀಲಿಯ ಪಡೆಯಲಾರೆ
ಒಬ್ಬರ ಬೆಳಕಿನ ಬೆಳಕ ಕದಿಯಲಾರೆ.
ಆದರೆ ಹೇಳು….
ಎಂದೋ ನೆಟ್ಟಿದ್ದ ಮರದ ಮೇಲೆ
ಹೊಸ ಹಕ್ಕಿ ಬಂದು ಕುಳಿತರೆ
ಆ ಕೊಂಬೆ ಪಾಪ ಮಾಡಿದಂತೆಯಾ..?
ವರ್ಷ ವರ್ಷಗಳಿಂದಲೂ…..
ಮುಚ್ಚಿದ ಕಿಟಕಿಯ ಮೇಲೆ
ಒಂದು ಮಳೆ ಹನಿ ಇಳಿದು ನಿಂತರೆ
ಆ ಗಾಜು ತಪ್ಪು ಮಾಡಿದಂತೆಯಾ…?
ನೀನು ನಿರ್ಲಕ್ಷ್ಯದಿಂದಲೇ… ಬೀರಲಿಲ್ಲ
ಬಹುಶಃ ಬದುಕು
ನಮ್ಮನ್ನು ಒಂದುಗೂಡಿಸಲು
ಇಷ್ಟು ಕಾಲ ತೆಗೆದುಕೊಂಡಿದೆ ಅಷ್ಟೇ.
ಈಗ ಒಲವೆಂದರೆ
ಕೈ ಕೈ ಹಿಡಿಯುವುದಲ್ಲ….
ದೂರದಿಂದಾದರೂ
ಒಬ್ಬರ ಒಳಗೆ ಇನ್ನೊಬ್ಬರು
ನಿಶ್ಯಬ್ದವಾಗಿ ಅರಳುವುದು.
ಈ ಮಳೆ ನಿಂತುಹೋಗುತ್ತದೆ…
ಆದರೆ ಈ ದಿನ
ಕಿಟಕಿಯ ಬಳಿ ಕುಳಿತಿರುವ ನಾನು ಮಾತ್ರ
ಎಷ್ಟೋ ವರ್ಷಗಳ ನಂತರ
ನನ್ನೊಳಗೇ ನಾನು ತೊಯ್ದು ಹೋಗಿರುವೆ
ನೀನು ಯಾವ ವಯಸ್ಸಿನಲ್ಲಿ ಬಂದೆಯೋ ತಿಳಿಯದು…
ಆದರೆ
ಒಣಗಿ ನಿಂತ ಹೊಲಕ್ಕೂ ಕೂಡಾ
ಕೊನೆ ಮಳೆಯ ನೆನಪು ಉಳಿದಿರುತ್ತದೆಂದು
ಈ ದಿನವೇ ತಿಳಿಯಿತು.






0 Comments