‘ಪ್ರತ್ಯಭಿಜ್ಞ’ ತಂಡದವರಿ೦ದ ‘ಜ್ಞಾಪಕ ಚಿತ್ರಶಾಲೆ’ (ಡಿ.ವಿ.ಜಿ ಅವರ ಬದುಕಿನ ರಸ ಪ್ರಸಂಗಗಳು) ನಾಟಕ ನವೆಂಬರ್ ೨೨ರಂದು ಸಂಜೆ ೬.೩೦ಕ್ಕೆ ನಗರದ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಪ್ರದರ್ಶನಗೊಳ್ಳಲಿದೆ. ಶತಾವಧಾನಿ ಆರ್. ಗಣೇಶ್ ಅವರ ‘ಬ್ರಹ್ಮಪುರಿಯ ಭಿಕ್ಷುಕ’ ಕೃತಿಯನ್ನು ನಾಟಕ ಆಧರಿಸಿದ್ದು, ಎನ್.ಸಿ. ಮಹೇಶ್ ರಂಗರೂಪಕ್ಕೆ ತಂದು ನಿರ್ದೇಶಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8971383155 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಾಟಕದ ಕುರಿತು: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಡಿ.ವಿ.ಜಿ (ಡಿ.ವಿ. ಗುಂಡಪ್ಪ) ಯವರು ಮೂಡಿಸಿರುವ ಛಾಪು ಅನನ್ಯವಾದದ್ದು. ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಡಿವಿಜಿಯವರು ಜೀವನದ ಉದ್ದಕ್ಕೂ ಯಾರ ಮರ್ಜಿಗೂ ಸಿಕ್ಕಿಕೊಳ್ಳದೆ ಬದುಕಿದವರು.
ಮೈಸೂರು ಸಂಸ್ಥಾನದ ಹಲವು ದಿವಾನರನ್ನು ಹತ್ತಿರದಿಂದ ಕಂಡು ವಿಮರ್ಶೆಗೆ ಒಳಪಡಿಸಿದವರು ಡಿವಿಜಿ. ಸರ್ ಎಂ. ವಿಶ್ವೇಶ್ವರಯ್ಯನವರು ಡಿವಿಜಿ ಅವರಿಗೆ ಆಪ್ತರು. ಸರ್ಕಾರದಿಂದ ನೆರವಿನ ಹಸ್ತ ಚಾಚಿದರೂ ಅದನ್ನು ಸ್ವೀಕರಿಸದೆ ತಮ್ಮ ನಿಲುವಿನಲ್ಲೇ ಕಡೆಯವರೆಗೂ ಉಳಿದವರು ಡಿವಿಜಿ. ಮಿರ್ಜಾ ಇಸ್ಮಾಯಿಲ್ ಅವರ ಆಡಳಿತ ಅವಧಿಯಲ್ಲಿ ಡಿವಿಜಿ ನಿರ್ವಹಿಸಿದ ಪಾತ್ರ ಮಹತ್ವದ್ದು.
ಡಿವಿಜಿ ಅವರ ಕುರಿತು ಇರುವ ಹಲವು ರಸಪ್ರಸಂಗಗಳನ್ನು ಡಾ. ಶತಾವಧಾನಿ ಗಣೇಶ್ ಅವರು ತಮ್ಮ ʻಬ್ರಹ್ಮಪುರಿಯ ಭಿಕ್ಷುಕʼ ಕೃತಿಯಲ್ಲಿ ಸಂಗ್ರಹಿಸಿದ್ದಾರೆ. ಪ್ರಸ್ತುತ ಈ ಪ್ರಯೋಗ ಅದೇ ಕೃತಿಯನ್ನು ಆಧಾರವಾಗಿಟ್ಟುಕೊಂಡು ರೂಪುಗೊಂಡಿದೆ. ಜೀವನದ ಉದ್ದಕ್ಕೂ ರಾಜಿಗಳಿಗೆ ಒಳಗಾಗದೆ ಬದುಕಿದ ಡಿವಿಜಿ ಅವರ ಬದುಕಿನ ಕೆಲವು ಚಿತ್ರಗಳನ್ನು ಈ ಪ್ರಯೋಗದಲ್ಲಿ ಕಟ್ಟಿಕೊಡಲಾಗಿದೆ.







0 Comments