ಸುಪ್ರಸನ್ನ ನಕ್ಕತ್ತಾಯ ಅವರ ಸಂದರ್ಶನ ಡಾ.ಪಾರ್ವತಿ ಜಿ.ಐತಾಳ್ ಅವರಿಂದ ಓದಿ
ಸುಪ್ರಸನ್ನ ನಕ್ಕತ್ತಾಯ ಅವರು ಕುಂದಾಪುರದ ಹೆಮ್ಮೆಯ ಚಿತ್ರಕಲಾವಿದೆ. ಅವರ ಬೆರಳುಗಳಿಂದ ವಿವಿಧ ರೇಖೆಗಳು ಮತ್ತು ವಿನ್ಯಾಸಗಳು ರೂಪುಗೊಳ್ಳುವ ಪರಿ ಬೆರಗು ಹುಟ್ಟಿಸುತ್ತದೆ. ಉಡುಪಿಯ ಅಂಬಲಪಾಡಿಯ ಪ್ರಸಿದ್ಧ ಬಲ್ಲಾಳ ಮನೆತನದ ಅಣ್ಣಾಜಿ ಬಲ್ಲಾಳರು ಮತ್ತು ಲಕ್ಷ್ಮಿ ಬಲ್ಲಾಳರ ಮಗಳು ಅವರು. ತಮ್ಮ ಸ್ವಂತ ಪ್ರತಿಭೆ- ಪರಿಶ್ರಮಗಳಿಂದ ಅವರು ಓರ್ವ ಉತ್ತಮ ಕಲಾವಿದೆಯಾಗಿ ಬೆಳೆದ ಹಂತಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಅವರ ಒಂದು ಪುಟ್ಟ ಸಂದರ್ಶನ ಮಾಡಬೇಕೆಂದು ಅವರ ಮನೆಗೆ ಹೋದಾಗ ಅವರು ಪ್ರೀತಿಯಿಂದ ಮಾತನಾಡಿದರು. ಅವರ ಜತೆಗೆ ಅವರನ್ನು ಸದಾ ಪ್ರೋತ್ಸಾಹಿಸಿ ಬೆಂಬಲಿಸಿದ ಅವರ ಪತಿ ಬಾಲಕೃಷ್ಣ ನಕ್ಕತ್ತಾಯರೂ ಇದ್ದರು :
ಪ್ರಶ್ನೆ : ನಮಸ್ಕಾರ. ಮನೆಯ ತುಂಬಾ ನೀವು ಮಾಡಿದ ವರ್ಣಚಿತ್ರಗಳಿವೆ. ಹೀಗೆ ಚಿತ್ರಗಳನ್ನು ಮಾಡುವ ಆಸಕ್ತಿ ನಿಮ್ಮಲ್ಲಿ ಹೇಗೆ ಬೆಳೆಯಿತು? ನಿಮ್ಮ ಜರ್ನಿಯ ಬಗ್ಗೆ ಸ್ವಲ್ಪ ಹೇಳುತ್ತೀರಾ?

ಉತ್ತರ : ನಮಸ್ಕಾರ. ಇವತ್ತು ನಾನು ನೂರಾರು ವರ್ಣಚಿತ್ರಗಳನ್ನು ಬರೆದಿದ್ದೇನೆ. ಅವುಗಳಲ್ಲಿ ಹಲವು ಮಾರಾಟವಾಗಿವೆ. ಕೆಲವನ್ನು ನಾನು ಸ್ನೇಹಿತರಿಗೂ ಬಂಧುಗಳಿಗೂ ಉಡುಗೊರೆಯಾಗಿ ಕೊಟ್ಟಿದ್ದೇನೆ. ನಾನು ಆರಂಭದಲ್ಲಿ ಬರೆದದ್ದು ಚಿತ್ರಗಳನ್ನಲ್ಲ. ನನ್ನ ಅಮ್ಮ ಮತ್ತು ದೊಡ್ಡಮ್ಮ ಮೂಲತಃ ತೀರ್ಥಹಳ್ಳಿಯವರು. ತುಂಬಾ ಚೆನ್ನಾಗಿ ರಂಗೋಲಿ ಬಿಡಿಸುತ್ತಿದ್ದರು. ಅಮ್ಮನ ಬೆರಳುಗಳು ಓಡುತ್ತಿದ್ದ ರೀತಿಯನ್ನೂ ರಂಗೋಲಿಯಲ್ಲಿ ಬಣ್ಣ ಬಣ್ಣದ ವಿನ್ಯಾಸಗಳು ರೂಪುಗೊಳ್ಳುತ್ತಿದ್ದ ಬಗೆಯನ್ನೂ ನೋಡಿ ನನಗೂ ರಂಗೋಲಿಯಲ್ಲಿ ಆಸಕ್ತಿ ಮೂಡಿತು. ಹಾಗೆ ನಾನು ಎಂಟು ವರ್ಷದ ಹುಡುಗಿಯಾಗಿದ್ದಾಗಲೇ ಅಕ್ಕಿ ಹಿಟ್ಟಿನಿಂದ ರಂಗೋಲಿ ಬಿಡಿಸಲಾರಂಭಿಸಿದೆ. ಒಮ್ಮೆ ಶಾಲೆಯಲ್ಲಿ ರಂಗೋಲಿ ಸ್ಪರ್ಧೆಯಿತ್ತು. ಹಿರಿಯ ಕಲಾವಿದರಾದ ಬಿ.ಪಿ.ಬಾಯಿರಿಯವರು ತೀರ್ಪುಗಾರರಾಗಿ ಬಂದಿದ್ದರು. ನನಗೆ ಮೊದಲ ಬಹುಮಾನ ಕೊಟ್ಟು ಹೇಳಿದರು : ನಿನ್ನಲ್ಲಿ ಅದ್ಭುತ ಪ್ರತಿಭೆಯಿದೆ. ರಂಗೋಲಿಗೆ ರಂಗು ಎಷ್ಟು ಮುಖ್ಯವೋ ವಲ್ಲಿಯೂ( ಎಳೆಗಳು) ಅಷ್ಟೇ ಮುಖ್ಯ. ನಿನ್ನ ಬೆರಳುಗಳಿಗೆ ಎರಡನ್ನೂ ಸಾಧಿಸುವ ಶಕ್ತಿಯಿದೆ ಎಂದು. ಅವರ ಮಾತುಗಳು ನನಗೆ ಸ್ಫೂರ್ತಿಯಾದವು.
ಪ್ರಶ್ನೆ : ಕರಕುಶಲ ವಸ್ತುಗಳನ್ನೂ ಮಾಡಿದ್ದೀರಲ್ಲ?
ಉತ್ತರ : ಹೌದು. ಚಿಕ್ಕವಳಿದ್ದಾಗ ತುಂಬಾ ಕರಕುಶಲ ವಸ್ತುಗಳನ್ನು ತಯಾರಿಸಿದ್ದೆ. ಕಸೂತಿ, ಕ್ರೋಷಾ ವರ್ಕ್, ನಿಟ್ಟಿಂಗ್, ವೈರ್ ಮತ್ತು ಮಣಿಗಳನ್ನು ಬಳಸಿ ಬ್ಯಾಗು-ಪರ್ಸು ಹಾಗೂ ಇತರ ಆಕರ್ಷಕ ವಸ್ತುಗಳನ್ನು ತಯಾರಿಸಿ ಸ್ನೇಹಿತರಿಗೆ ಉಡುಗೊರೆಯಾಗಿ ಕೊಡುತ್ತಿದ್ದೆ. ನನ್ನ ಅಪ್ಪ-ಅಮ್ಮ ನನ್ನನ್ನು ತುಂಬಾ ಪ್ರೋತ್ಸಾಹಿಸುತ್ತಿದ್ದರು. ಆಗ ನಾನು ಚಿತ್ರಗಳನ್ನು ಮಾಡುತ್ತಿರಲಿಲ್ಲ.
ಪ್ರಶ್ನೆ : ಚಿತ್ರಗಳಲ್ಲಿ ಆಸಕ್ತಿ ಹುಟ್ಟಿದ್ದು ಯಾವಾಗ ?
ಉತ್ತರ : ಮದುವೆಯಾಗಿ ಕುಂದಾಪುರಕ್ಕೆ ಬಂದ ನಂತರ ಸಾಂಸಾರಿಕ ಜವಾಬ್ದಾರಿಗಳನ್ನೆಲ್ಲ ನಿರ್ವಹಿಸಿ ಮುಗಿಸಿದ ನಂತರ ವರ್ಣಚಿತ್ರಗಳನ್ನು ಮಾಡುವುದರಲ್ಲಿ ಆಸಕ್ತಿ ಹುಟ್ಟಿತು. ಪ್ರಕೃತಿಯಲ್ಲಿ ಕಾಣಸಿಗುವ ಪ್ರಾಣಿ-ಪಕ್ಷಿ-ಗಿಡ-ಮರಗಳೇ ನನ್ನ ಮಾದರಿಗಳಾದವು. ಯಾರ ಹತ್ತಿರವೂ ತರಬೇತಿ ತೆಗೆದುಕೊಳ್ಳಲಿಲ್ಲ. ಹಿರಿಯ ಚಿತ್ರಕಾರರು ಮಾಡಿದ ಚಿತ್ರಗಳ ವೈಖರಿಯನ್ನು ಸುಮ್ಮನೆ ಗಮನಿಸುತ್ತಿದ್ದೆ. ನಿಧಾನವಾಗಿ ಒಂದೊಂದೇ ಚಿತ್ರಗಳು ನನ್ನ ಕುಂಚದಲ್ಲಿ ಆಕಾರ ಪಡೆದವು. ಕೆಲವೊಮ್ಮೆ ಅಮೂರ್ತ ಪರಿಕಲ್ಪನೆಯಲ್ಲೂ ಚಿತ್ರಗಳು ಮೂಡಿದವು. ಮಧುಬನಿ, ವರ್ಲಿ, ಕಲಂಕಾರಿ, ಮಂಡಲ, ಪಿಚ್ವಾಯಿ ಶೈಲಿಗಳಲ್ಲೂ ಚಿತ್ರಗಳನ್ನು ಮಾಡಿದ್ದೇನೆ.

ಪ್ರಶ್ನೆ : ನೀವು ಮಾಡಿದ ಚಿತ್ರಗಳು ತುಂಬಾ ಸುಂದರವಾಗಿವೆ. ವಿನ್ಯಾಸ, ಪ್ರಮಾಣ, ಆಕಾರ ಮತ್ತು, ಹದವಾದ ಬಣ್ಣಗಳಿಂದ ನೋಡುಗರ ಕಣ್ಣುಗಳಿಗೆ ಹಿತವಾಗಿ ಕಾಣಿಸುತ್ತವೆ. ನೀವು ಇದುವರೆಗೆ ನಿಮ್ಮ ಚಿತ್ರಗಳ ಪ್ರದರ್ಶನ ಮಾಡಿಲ್ಲವೇ?
ಉತ್ತರ : ಒಮ್ಮೆ ಮಾಡಿದ್ದೆ. ಹಿರಿಯ ಕಲಾವಿದರಾದ ಹರೀಶ್ ಸಾಗಾ ಅವರು ಕುಂದಾಪುರದಲ್ಲಿ ಚಿತ್ರಕಲಾ ತರಗತಿಗಳನ್ನು ನಡೆಸುತ್ತಿದ್ದರು. ಒಮ್ಮೆ ನನ್ನ ಸ್ನೇಹವಲಯದ ಚಿತ್ರಾ ಕಾರಂತರು( ಹಲವು ವಿದ್ಯಾಸಂಸ್ಥೆಗಳಲ್ಲಿ ಪ್ರಾಂಶುಪಾಲರಾಗಿದ್ದವರು) ನನ್ನನ್ನು ಅವರಿಗೆ ಪರಿಚಯ ಮಾಡಿಸಿದರು. ಹರೀಶ ಸಾಗಾ ಅವರು ನನ್ನ ಚಿತ್ರಗಳನ್ನು ನೋಡಿ ಮೆಚ್ಚಿಕೊಂಡು ಒಮ್ಮೆ ಅವುಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಿದರು. ನೋಡಲು ಬಂದವರೆಲ್ಲರೂ ನನ್ನ ಚಿತ್ರಗಳ ಬಗ್ಗೆ ಮೆಚ್ಚುಗೆ ಸೂಸಿದಾಗ ತುಂಬಾ ಸಂತೋಷವಾಯಿತು..
ಪ್ರಶ್ನೆ : ಅನಂತರ ನಿಮ್ಮ ಚಿತ್ರಗಳಿಗೆ ತುಂಬಾ ಬೇಡಿಕೆ ಬಂತೇ?

ಉತ್ತರ : ನಾನು ಹಾಗೆ ಪ್ರೊಮೋಟ್ ಮಾಡಲು ಹೋಗಿಲ್ಲ. ಅವಕಾಶ ಸಿಕ್ಕಿದಾಗೆಲ್ಲ ಚಿತ್ರಗಳನ್ನು ಮಾಡಿ ಉಡುಗೊರೆಯಾಗಿ ಕೊಡುತ್ತೇನೆ. ಇತ್ತೀಚೆಗಂತೂ ನಿಮಗೆ ಗೊತ್ತೇ ಇದೆ ನಮ್ಮ ‘ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ’ ರೂಪುಗೊಂಡ ನಂತರ ಪ್ರತಿಯೊಂದು ಕಾರ್ಯಕ್ರಮದಲ್ಲೂ ಅತಿಥಿಗಳಿಗೆ ಸ್ಮರಣಿಕೆಯಾಗಿ ನನ್ನದೇ ಕಲಾಕೃತಿಗಳನ್ನು ಕೊಡುತ್ತಿದ್ದೇನೆ. ನನಗದು ತುಂಬಾ ತೃಪ್ತಿಯನ್ನು ಕೊಡುತ್ತದೆ. ಹವ್ಯಾಸ ಬೆಳೆಸಿಕೊಂಡದ್ದು ಸಾರ್ಥಕವಾಯಿತು ಅನ್ನಿಸುತ್ತದೆ.
ಪ್ರಶ್ನೆ : ನಿಮಗೆ ಬೇರೆ ಹವ್ಯಾಸಗಳೇನಾದರೂ ಇವೆಯೇ?
ಉತ್ತರ : ಹೌದು. ಗಾರ್ಡನಿಂಗ್(ಉದ್ಯಾನಕಲೆ) ನನ್ನ ಪ್ರಿಯವಾದ ಹವ್ಯಾಸಗಳಲ್ಲೊಂದು. ಮನೆಯ ಸುತ್ತ ಬೇರೆ ಬೇರೆ ಜಾತಿಯ ಹೂಗಿಡಗಳನ್ನೂ ಹಣ್ಣಿನ ಗಿಡಗಳನ್ನೂ ತರಕಾರಿಗಳನ್ನೂ ನಾನೇ ನೆಟ್ಟು ಬೆಳೆಸಿದ್ದೇನೆ. ಅಲಂಕಾರಕ್ಕಾಗಿ ಮನೆಯ ಸುತ್ತ ವಿವಿಧ ವಿನ್ಯಾಸಗಳ ಚಟ್ಟಿಗಳಲ್ಲೂ ಜೋಡಿಸಿಟ್ಟಿದ್ದೇನೆ. ಹ್ಯಾಂಗಿಂಗ್ ಪಾಟ್ ಗಳನ್ನೂ ತೂಗಾಡಿಸುತ್ತಿದ್ದೆ. ಆದರೆ ಈಗೀಗ ಎಲ್ಲವನ್ನೂ ನಿಭಾಯಿಸುವುದು ಸ್ವಲ್ಪ ಕಷ್ಟವಾಗುತ್ತಿದೆ.
ಪ್ರಶ್ನೆ : ಸಾಹಿತ್ಯಾಸಕ್ತಿ…?
ಉತ್ತರ : ಇದೆ. ಕಥೆ- ಕಾದಂಬರಿಗಳನ್ನು ಓದುವ ಹವ್ಯಾಸ ಇದೆ. ನನ್ನ ಪತಿ-ಮಗ ಎಲ್ಲರೂ ಓದುವವರೇ. ಮನೆಯಲ್ಲಿ ಒಳ್ಳೆಯ ಪುಸ್ತಕ ಸಂಗ್ರಹವಿದೆ. ಮಾವ ಹೆಚ್.ಎನ್.ನಕ್ಕತ್ತಾಯರು ಕುಂದಾಪುರದ ಪ್ರಸಿದ್ಧ ರಂಗ ಕಲಾವಿದರಾಗಿದ್ದವರು. ‘ರೂಪ ರಂಗ ‘ ಎಂಬ ನಾಟಕ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು. ಶಿವರಾಮ ಕಾರಂತರ ‘ಮಲೆಯ ಮಕ್ಕಳು’ ಎಂಬ ಚಲನಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು ಕೂಡಾ. ನನ್ನ ತವರು ಮನೆಯವರು ಸಾಹಿತ್ಯ-ನಾಟಕ -ಸಂಗೀತ -ಧಾರ್ಮಿಕ -ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಉಡುಪಿಯಲ್ಲಿ ಬಹಳ ಪ್ರಸಿದ್ಧರು. ಸಹಜವಾಗಿಯೇ ನನ್ನಲ್ಲೂ ಆ ಆಸಕ್ತಿಗಳು ಬೆಳೆದಿವೆ. ಲಹರಿ ಬಂದಾಗ ಕವಿತೆಗಳನ್ನೂ ಬರೆಯುತ್ತೇನೆ. ನನ್ನ ಕೆಲವು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಪ್ರಶ್ನೆ : ನಿಮ್ಮ ಬಗ್ಗೆ ತಿಳಿದು ತುಂಬಾ ಸಂತೋಷವಾಯಿತು. ಮಾಹಿತಿಗಳನ್ನು ಒದಗಿಸಿದ್ದಕ್ಕೆ ಧನ್ಯವಾದಗಳು. ನೀವು ಕಲಾವಿದೆಯಾಗಿ ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಹಾರೈಸುತ್ತೇನೆ. ನಮಸ್ಕಾರ.









0 Comments