-ಎಚ್ ಗೋಪಾಲಕೃಷ್ಣ
ಶೇಷಜ್ಜ ತನ್ನ ಆತ್ಮಕತೆ ಬರೀತಾನೆ ಅಂತ ಸುದ್ದಿ ಹೊರಟಾಗ ಇಡೀ ನಮ್ಮ ವಂಶದಲ್ಲಿ ಒಂದು ರೀತಿ ಸುಮಾನಿ ಹುಟ್ಟಿದ ಹಾಗಾಯಿತು. ಏನಿದು ಸುಮಾನಿ ಅಂತ ತಲೆ ಕೆಡಿಸಿಕೊಂಡಿರಾ? ಸುನಾಮಿ ಕೇಳಿದ್ದೀರಿ ಅಲ್ಲವೇ? ಅದರ ತಂಗಿ ಇದು, ಅಕ್ಕನಿಗಿಂತಲೂ ಕಠೋರಿ ಮತ್ತು ಹೆಚ್ಚು ಫೋರ್ಸ್ ಉಳ್ಳದ್ದು. ಸಿಂಪಲ್ ಆಗಿ ಹೇಳಬೇಕು ಅಂದರೆ ಹೆಚ್ಚು ಪವರ್ ಫುಲ್ ಚಂಡ ಮಾರುತ.
ಶೇಷಜ್ಜ ಯಾರು ಅಂತ ತುಂಬಾ ಹಿಂದೆ ನಿಮಗೆ ಹೇಳಿದ್ದೆ. ನಿಮ್ಮ ನೆನಪಿನಲ್ಲಿ ಶೇಷಜ್ಜ ಇನ್ನೂ ಇದ್ದರೆ ಅದನ್ನ ನೆನೆಸಿಕೊಳ್ಳಿ. ಅಷ್ಟು ಹೊತ್ತಿಗೆ ನಾನು ಶೇಷಜ್ಜ ಯಾರು ಅಂತ ನ್ಯೂ ಕಮರ್ಸ್ ಗೂ ಮರೆತಿರುವವರಿಗೂ ಒಂದು ಚೂರು ಹಿನ್ನೆಲೆ ಒದಗಿಸಿ ಬಿಡುತ್ತೇನೆ.
ಶೇಷಜ್ಜ ಆ ಕಾಲದ ಅಂದರೆ ಐವತ್ತು ಅರವತ್ತು ವರ್ಷದ ಹಿಂದೆ ರೆಬೆಲ್ ಅಂತ ಲೇಬಲ್ ಆಗಿದ್ದೋನು.ಅಂದರೆ ಕ್ರಾಂತಿಕಾರಿ, ಯಾವುದೇ ಸಾಮಾಜಿಕ ಬೈಡಿಂಗ್ ಅಂದರೆ ಕಟ್ಟು ಪಾಡು ಇಲ್ಲದೇ ದೇವರಿಗೆ ಬಿಟ್ಟ ಗೂಳಿ ಹಾಗೆ ಬೆಳೆದೋನು.ಬಂಡಾಯ ದ ಮನೋಭಾವ ಮತ್ತು ಆ ಕಾಲಕ್ಕೆ ಬೇರೆ ರೀತಿ ಯೋಚನೆ ನಡಾವಳಿ ಹೊಂದಿದ್ದೋನು.
ಈಗ ಶೇಷಜ್ಜನಿಗೆ ಎಂಬತ್ತರ ಹತ್ತಿರ ಹತ್ತಿರ ವಯಸ್ಸು. ಈಗಲೂ ಅವನ ವಯಸ್ಸಿನ ದಿನಗಳನ್ನು ಅವನು ಹೇಳುತ್ತಾ ಕೂತರೆ ಅವನ ಸುತ್ತ ಇಡೀ ಪುಟ್ಟ ಪುಟ್ಟ ವಯಸ್ಸಿನ ಮಕ್ಕಳು ಹೆಣ್ಣು ಗಂಡು ಎರಡೂ ಸೇರಿದಂತೆ ನೆರೆದು ಕೇಕೆ ಹಾಕುತ್ತಾ ಸಂತೋಷ ಪಡುತ್ತವೆ. ಪುಟ್ಟಪುಟ್ಟ ವಯಸ್ಸು ಅಂದರೆ ಕಾಲೇಜು ವಯಸ್ಸಿನೋವು, ಶೇಷಜ್ಜನಿಗೆ ಹೇಗೆ ಆಪ್ತವಾಗಿವೆ ಅಂದರೆ ಅವರ ತಂದೆ ತಾಯಿ ಹತ್ತಿರ ಹೇಳದ ಸಂಗತಿಗಳನ್ನು ಇವನ ಸಂಗಡ ಹಂಚಿಕೊಳ್ಳುತ್ತವೆ ಮತ್ತು ಗೈಡೆನ್ಸ್ ಪಡೆಯುತ್ತವೆ. ಮಕ್ಕಳನ್ನ ದಾರಿ ತಪ್ಪಿಸುತ್ತಾನೆ ಎಂದು ಹೆಣ್ಣು ಮಕ್ಕಳ ಅಮ್ಮಂದಿರು ಇವನ ಮುಖ ಕಂಡರೆ ಸಿಂಡರಿಸುತ್ತಾರೆ. ಗಂಡು ಮಕ್ಕಳ ಅಮ್ಮಂದಿರು ಅದೇನು ಹೊಸಾ ಸಮಸ್ಯೆ ಹುಟ್ಟುತ್ತೋ ಅಂತ ಕಳವಳ ಪಡುತ್ತಾರೆ!ಇದಕ್ಕೂ ಹಲವಾರು ಕಾರಣಗಳು ಇವೆ. ಅದರಲ್ಲಿ ಈಗಲೂ ಚರ್ಚಿತ ವಿಷಯ ಅಂದರೆ ಶೇಷಜ್ಜ ನ ಕಾಲೇಜ್ ದಿನಗಳು ಮತ್ತು ಅವನ ಲೋವ್ ಅಫೇರ್ ಗಳು. ಶೇಷಜ್ಜ ಸರ್ಕಾರೀ ಕಾಲೇಜಲ್ಲಿ ಓದಬೇಕಾದರೆ ಎದುರಿನ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದ ಇವನಿಗಿಂತಲೂ ಮೂರು ವರ್ಷ ದೊಡ್ಡವಳನ್ನು ಪ್ರೇಮಿಸಿದನಂತೆ (ಈ ಕತೆ ಶೇಷಜ್ಜ ಸುಮಾರು ಸಾವಿರ ಸಲ ನಮ್ಮೊಂದಿಗೆ ಹಂಚಿಕೊಂಡಿದ್ದಾನೆ ). ಹುಡುಗಿ ಇವರ ಪಂಗಡದ್ದಲ್ಲ ಮತ್ತು ಇನ್ನೂ ಹೇಳಬೇಕು ಅಂದರೆ ಅನ್ನ ಸಾರು ಊಟಕ್ಕೆ ಡಯಾಮೇಟ್ರಿಕಲ್ಲಿ ಆಪೋಸಿಟ್ ನವು.ಸರಿ ಮನೇಲಿ ಉಹೂಂ ಅಂದರು. ಹುಡುಗಿಗೆ ಹೆದರಿಸೋ ಬೆದರಿಸೋ ಇವನು ಬೇಡ ಅಂತ ಹೇಳಿಸಿದರು ಹಾಗೂ ಬೇರೆ ಹುಡುಗನ ಜತೆಗೆ ಅವಳಿಗೆ ಮದುವೆ ಆಯಿತು. ಬೇಕೂಫ ಸೋದರಮಾವ ಈ ಹುನ್ನಾರದ ಹಿಂದೆ ಇದ್ದ ಅಂತ ಶೇಷಜ್ಜ ಹೇಳಿದ್ದ.
ಮೊದಲನೇ ಪ್ರೇಮ ಹೀಗೆ ಫೇಲ್ ಆದಮೇಲೆ ಇವನು ದೇವದಾಸ್ ಆಗಬಹುದು ಅಂತ ಮನೇಲಿ ಚಿಂತೆ ಶುರು ಆಯಿತು. ಇವನ ಅಮ್ಮನಿಗೆ ಮೊದಲು ಈ ಯೋಚನೆ ಬಂದದ್ದು.ಅವರಪ್ಪನ ಹತ್ತಿರ ಗೋಳಾಡಿದಳು, ಮಗ ಕುಡುಕ ಆಗಿಬಿಡ್ತಾನೆ ಅಂತ. ಅಪ್ಪ ಪೋಲಿಸು, ಸಲ್ಪ ದೊಡ್ಡ ಅಧಿಕಾರಿ.ವೀಕ್ ಮೈಂಡ್ ನವನು ಅಲ್ಲ, ಆದರೂ ಹೆಂಡತಿ ಮುಂದೆ ಕರಗಿದ. ಪೊಲೀಸ್ ಮಗ ಕುಡುಕ ಆಗಿ ಮೋರಿಯಲ್ಲಿ ಬಿದ್ದಿದ್ದರೆ ಯಾರ ಮರ್ಯಾದೆ ಹೋಗುತ್ತೆ? ಆ ಕಾಲದವರು ಅವರ ಯೋಚನಾ ಧಾಟಿ ಹಾಗಿತ್ತು. ಒಬ್ಬ ಪೇದೆಯನ್ನ ಇವನ ಕಾವಲಿಗೆ ಹಾಕಿದರು. ಅಷ್ಟು ಪವರ್ ಇತ್ತು ಅವರಿಗೆ. ಪೇದೆ ಡ್ಯೂಟಿ ಅಂದರೆ ಶೇಷಜ್ಜ ನನ್ನು ಕಾವಲು ಕಾಯೋದು. ಮನೆಯಿಂದ ಹೊರಟು ಕಾಲೇಜು, ಅಲ್ಲಿಂದ ಮನೆ.. ಇಲ್ಲಿವರೆಗೆ ಕಾವಲು.
ಶೇಷಜ್ಜನಿಗೆ ಮೊದಲೆರಡು ವಾರ ಇದು ಗೊತ್ತಾಗಲಿಲ್ಲ. ಕಾಲೇಜಿಗೆ ಹೊರಟ ಕೂಡಲೇ ಸಂದಿಯಿಂದ ಆಚೆ ಬಂದು ಇವನ ಹಿಂದೆ ಹಿಂದೆ ಬರೋದು, ಕಾಲೇಜು ಬಿಟ್ಟಮೇಲೆ ಇನ್ನೊಂದು ಸಂದಿಯಿಂದ ಆಚೆ ಬಂದು ಇವನ ಬಾಲ ಹಿಡಿಯೋದು ನೋಡಿದ. ಅಪ್ಪನ ಪೊಲೀಸ್ ಐಡಿಯಾ ಗೊತ್ತಾಯ್ತಾ? ಪೇದೆ ಇವನಿಗೆ ಫ್ರೆಂಡ್ ಆದ. ಪೇದೆಗೆ ನಾಟಕದ ಹುಚ್ಚು. ಶೇಷಜ್ಜ ಅವನಿಗೆ ಸಾಥ್ ಆದ. ಸುಮಾರು ನಾಟಕ ಒಟ್ಟಿಗೆ ನೋಡಿದ್ರಾ? ಅಪ್ಪನ ಐಡಿಯಾ ಇಲ್ಲಿ ಉಲ್ಟಾ ಹೊಡೆದು ಬಿಟ್ಟಿತು.
ಹೇಗೆ ಉಲ್ಟಾ ಆಯಿತು ಅಂತ ಶೇಷಜ್ಜನ ಬಾಯಲ್ಲೇ ಕೇಳಬೇಕು..
“ದಿನಾ ಎರಡು ಶೋ ನಾಟಕದ್ದು. ಪೇದೆ ಶಂಕರಪ್ಪ ನಿಗೆ ಗೇಟ್ ಕೀಪರ್ ಪರಿಚಯ. ಇವನನ್ನ ನೋಡಿದ ಕೂಡಲೇ ಅಣ್ಣಾ ಅಂತ ಎದ್ದುನಿಂತು ಜೇಬಿನಿಂದ ಗಣೇಶ ಬೀಡಿ ಕಟ್ಟು ತೆಗೆದು ಮುಂದೆ ಹಿಡಿಯೋನು. ಇವನು ಮೊದಲು ಮೊದಲು ಬೇಡ ಅಂತ ಬಿಂಕ ಮಾಡೋನು, ನಾನಿದ್ದೀನಿ ಅಂತ. ಪರವಾಗಿಲ್ಲ ತಗೋ ಸಂಕ್ರಪ್ಪ ಅಂದರೆ ಬೀಡಿ ತಗೊಂಡು ಜೇಬಿನಿಂದ ಕಡ್ಡಿ ಪೆಟ್ಟಿಗೆ ತೆಗೆದು ಕಡ್ಡಿ ಗೀರಿ ಬೀಡಿ ಹತ್ತಿಸ್ಕೊತಿದ್ದ. ನನ್ನ ಜೇಬಲ್ಲಿ ವಿಲ್ಸ್ ಇರೋದು, ಆಗಾಗ ಅವನಿಗೂ ಕೊಡ್ತಿದ್ದೆ. ಇಬ್ಬರಲ್ಲೂ ಒಂದು ಅನ್ ರಿಟನ್ ಅಗ್ರಿಮೆಂಟು. ನಾನು ಸಿಗರೇಟು ಸೇದೋದು ಅವನು ಹೇಳಬಾರದು ಡ್ಯೂಟಿ ಟೈಮ್ ನಲ್ಲಿ ಅವನು ನಾಟಕ ನೋಡೋದು ನಾನು ಹೇಳಬಾರದು. ನನ್ನ ಕಾವಲಿಗೆ ಅವನನ್ನ ಹಾಕಿದ್ದರಿಂದ ಅವನು ಮಫ್ತಿ ಲಿ ಇರ್ತಾ ಇದ್ದ….
“ದಿವಸಕ್ಕೆ ನಾಟಕದ ಎರಡು ಶೋ. ಭಾನುವಾರ ಮೂರು ಶೋ ಇರ್ತಿತ್ತು. ಭಾನುವಾರ ಕಾಲೇಜು ರಜಾ, ಅದರಿಂದ ನಾಟಕ ಇಲ್ಲ. ದಿವಸಾ ನಾಟಕ ನೋಡ್ತಾ ಇದ್ದೆವಲ್ಲಾ.. ನಿಧಾನಕ್ಕೆ ನಾಟಕದಲ್ಲಿ ಆಕ್ಟ್ ಮಾಡೋರ ಪರಿಚಯ ಆಯ್ತು. ಭಂಡಾದಿ ಭಂಡ ಗಂಡ ಅಂತ ಒಂದು ನಾಟಕ. ಅದರಲ್ಲಿ ಹೀರೋಯಿನ್ ಗುಲಾಬಿ ಅಂತ. ಸಖತ್ತಾಗಿ ಆಕ್ಟ್ ಮಾಡ್ತಾ ಇದ್ದಳು. ಮೊದಲನೇ ವಾರ ನಾಲ್ಕು ಶೋ ಅವಳ ನಾಟಕ ನೋಡಿದೆ. ಎರಡನೇ ವಾರ ಮೊದಲನೇ ಶೋ ನೋಡ್ತಾ ನೋಡ್ತಾ ಅವಳ ಮೇಲೆ ಲೋವ್ ಹುಟ್ಟಿಬಿಡ್ತು. ಎರಡನೇ ಶೋ ಇಂಟರವಲ್ ನಲ್ಲಿ ಅವಳ ಹತ್ರ ಮಾತಾಡಿದೆ. ಶೋ ಕೊನೆಗೆ ಅವಳನ್ನ ಮದುವೆ ಆಗೋದು ಅಂತ ನಿರ್ಧಾರಿಸಿಬಿಟ್ಟೆ. ಗುಲಾಬಿನೂ ಒಪ್ಪಿಕೊಂಡಳು. ಸಂಕ್ರಪ್ಪನಿಗೆ ಎರಡನೇ ವಾರದ ಮೂರನೇ ಶೋ ನಡುವೆ ಡೌಟ್ ಬಂತಾ?
“ಏನಾಗ್ತಾ ಇದೆ? ಯಾಕೆ ಹಾಗೆ ಮಧ್ಯ ಮಧ್ಯ ಎದ್ದು ಸ್ಟೇಜ್ ಹಿಂದೆ ಹೋಗ್ತೀ….. ಅಂತ ಕೇಳಿದ.
ಸಂಕ್ರಪ್ಪ ನಾನು ಗುಲಾಬಿ ಮದುವೆ ಆಗ್ತೀವಿ. ಅವಳು ಒಪ್ಪೋಳೆ… ಅಂದೆ.ಥಿಯೇಟರ್ ಪಕ್ಕದ ಟೀ ಅಂಗಡಿಲಿ ಅವನು ಟೀ ಕುಡೀತಾ ಬೀಡಿ ಸೇದುತ್ತಾ ಇದ್ದ. ನನ್ನ ಕೈಲಿ ಟೀ ಗ್ಲಾಸ್ ಇತ್ತು, ಬಾಯಲ್ಲಿ ಸಿಗರೇಟಿತ್ತು!
ಸಂಕ್ರಪ್ಪ ತಲೆ ಮೇಲೆ ಕೈ ಇಟ್ಟು ಕೂತ. ಶೇಷು ನನ್ನ ಕೆಲಸ ಹೋಗಿಬಿಡುತ್ತೋ ನಿಮ್ಮಪ್ಪ ನನ್ನ ಅಡ್ಡಡ್ಡ ಕತ್ತರಿಸಿ ಬಿಸಾಕಿ ಬಿಡ್ತಾನೆ. ಕಾವಲು ಕಾಯಿ ಅಂತ ಬಿಟ್ರೆ ಹಿಂಗಾ ಮಾಡೋದು ಅಂತ ನನ್ನ ಪ್ರಾಣ ತೆಗೆದು ಬಿಡ್ತಾನೋ ಅಂತ ಗೋಳಾಡಿದ.
ಆಕೆ ಸಾವಾಸ ಬೇಡ ನಿಮ್ಮಪ್ಪಗೆ ಹೇಳಿ ಒಳ್ಳೇ ಕುಲಸ್ತರನ್ನ ಹುಡುಕೋಣ… ಅಂತ ಎರಡು ಗಂಟೆ ಬೇಡಿಕೊಂಡ. ಉಹೂಂ ಗುಲಾಬಿನ ಬಿಡಲ್ಲ ನನಗೂ ಅವಳಿಗೂ ನಾವು ಈ ಜಗತ್ತಿಗೆ ಬರುವ ಮೊದಲೇ ನಿಶ್ಚಯ ಆಗಿದೆ ಅಂತ ನಾನೂ ಕೂತೆ.
ಸಂಕ್ರಪ್ಪ ನನ್ನ ಕೈ ಹಿಡಕೊಂಡ. ನಾನು ಊರಿಗೆ ಹೋಗ್ಬಿಡ್ತೀನಿ, ಆಮೇಲೆ ನೀನು ನಿನ್ನ ವಿಷಯ ಮನೇಲಿ ಹೇಳ್ಕೋ…. ಅಂತ ಕಾಲಿಗೆ ಬಿದ್ದ. ಶಿವಮೊಗ್ಗ ಕಡೆ ಯಾವುದೋ ಹಳ್ಳಿ ಅವನೂರು. ಯಾರೋ ಮಂತ್ರಿನ ಹಿಡಿದು ಪೊಲೀಸಾಗಿದ್ದ. ಊರ ಕಡೆ ಜಮೀನು ಇದೆ ಅಂದಿದ್ದ. ಅವನ ತಾಯಿ ಹುಷಾರಿಲ್ಲದೆ ಮಲಗವಳೇ, ಕೊನೆಗಾಲ ಅಂತ ಒಂದು ಟೆಲಿಗ್ರಾಂ ಅವನಿಗೆ ಬರೋ ತರ ನಾನೇ ಮಾಡಿದೆ. ಅವನು ಮುಸು ಮುಸು ಅಳ್ತಾ ಊರಿಗೆ ಹೋದ್ನಾ?
ಅವನು ಊರಿಗೆ ಹೋದ ಎರಡನೇ ದಿವಸಕ್ಕೆ ರಾತ್ರಿ ಊಟ ಮಾಡ್ತಾ ಅಮ್ಮಂಗೆ ಈ ವಿಷಯ ಹೇಳಿದೆ. ಗುಲಾಬಿ ಅಂತ ಅವಳೆ, ನಾಟಕದಲ್ಲಿ ರಾಣಿ ಪಾರ್ಟನ ತುಂಬಾ ಚೆನ್ನಾಗಿ ಮಾಡ್ತಾಳೆ… ಅಂತ ಅಮ್ಮನ ಮುಖ ನೋಡಿದೆ. ಅವಳ ಮುಖದಲ್ಲಿ ಗಾಬರಿ ಆತಂಕ ಕಳವಳ ಎಲ್ಲಾ ಒಟ್ಟಿಗೆ ಎದ್ದು ಕಂಡಿತು. ಅಪ್ಪ ದಿವಸಾ ತಡ ರಾತ್ರಿ ಮನೇಗೆ ಬರೋದು. ಅವತ್ತೂ ಇನ್ನೂ ಬಂದಿರಲಿಲ್ಲ.
“ಅಮ್ಮ ತಡವರಿಸುತ್ತಲೇ ಹೂಂ ಅವಳ ವಿಷಯ ಯಾಕೆ ಇವಾಗ?…. ಅಂತ ಕೇಳಿದಳು.
“ನಾನು ಗುಲಾಬಿ ಮದುವೆ ಆಗ್ತೀವಿ… ಅಂದೆ.
ಅಮ್ಮ ಅಲ್ಲೇ ಕುಸಿದು ಕೂತಳು. ಯಾರು ಆ ಹುಡುಗಿ? ಅವರ ಅಪ್ಪ ಅಮ್ಮ ಯಾರು? ಯಾವೂರಿನವರು?….. ಕೇಳಿದಳಾ?
ಹುಡುಗಿ ಅಪ್ಪ ಅಮ್ಮ ಯಾರು ಅಂತ ನಂಗೆ ಗೊತ್ತಿಲ್ಲಾ ಅಂದೆ. ಯಾವೂರು ಅನ್ನೋದೂ ತಿಳೀದು….. ಅಂದೆ.
ಆಗಲೇ ಅವಳ ಕಣ್ಣಲ್ಲಿ ಗಂಗೆ ಭಾಗೀರತಿ ಶುರು ಆಗಿತ್ತು. ಸೊರ ಸೊರ ಅಂದುಕೊಂಡು ಎದ್ದು ಒಳಗೆ ಹೋದಳು.
ರಾತ್ರಿ ಅಪ್ಪ ಬರೋ ಹೊತ್ತಿಗೆ ನಾನು ಮಲಗಿದ್ದೆ.
“ಅಪ್ಪ ರಜಾ ಹಾಕಿದ್ದ. ಹಾಲಿನಲ್ಲಿ ಸೋಫಾ ಮೇಲೆ ಕೂತಿದ್ದ. ಪಕ್ಕದಲ್ಲಿ ಅಮ್ಮ ಸೊರ ಸೊರ ಅಂತ ಇದ್ದಳು. ಒಟ್ಟು ಕುಟುoಬ ನಮ್ಮದು. ಅಜ್ಜಿ ತಾತ ಊರಲ್ಲಿದ್ದರು. ಇಲ್ಲಿ ನಮ್ಮ ಜತೆ ಸೋದರ ಮಾವಂದಿರು, ಅವರ ಕುಟುಂಬ, ಅವರ ಮಕ್ಕಳು ಅಪ್ಪನ ತಮ್ಮ… ಹೀಗೆ ಹದಿನೆಂಟು ಜನ ಮನೇಲಿ. ನನ್ನ ಓರಗೆ ಯವರು ಆಗಲೇ ಕಾಲೇಜು ಸ್ಕೂಲಿಗೆ ಹೋಗಿದ್ದರು.ಮಿಕ್ಕವರು ಅಲ್ಲೇ ಸುತ್ತ ಮುತ್ತ ನಿಂತು ಕೂತಿದ್ದರು. ಅಮ್ಮನ ಹಿಂದೆ ಸೋದರತ್ತೆಗಳು, ಅಪ್ಪನ ಹಿಂದೆ ಅವನ ಗಂಡು ನೆಂಟರು..
“ಅಪ್ಪ ಎದುರಿಗೆ ನಿಲ್ಲಿಸಿಕೊಂಡ.ಏನು ಯಾರನ್ನೋ ಮದುವೆ ಆಗ್ತೀನಿ ಅಂದೆಯಂತೆ
“ಹೌದು ಗುಲಾಬಿ ಅಂತ….
“ಅವರಪ್ಪನಿಗೆ ಏನು ಕೆಲಸ?
ತಲೆ ಆಡಿಸಿದೆ, ಗೊತ್ತಿಲ್ಲ ಅಂತ
“ಅವರಮ್ಮ ಎಲ್ಲಾದರೂ ವರ್ಕ್ ಮಾಡ್ತಾರಾ…?
ತಲೆ ಆಡಿಸಿದೆ, ಗೊತ್ತಿಲ್ಲ ಅಂತ
“ಯಾವೂರಂತೆ ಅವರದ್ದು…….?
ತಲೆ ಆಡಿಸಿದೆ, ಗೊತ್ತಿಲ್ಲ ಅಂತ
“ಹುಡುಗಿಗೆ ಎಷ್ಟು ವಯಸ್ಸು..?
ತಲೆ ಆಡಿಸಿದೆ, ಗೊತ್ತಿಲ್ಲ ಅಂತ
“ಏನು ಓದಿದ್ದಾಳೆ..?
ತಲೆ ಆಡಿಸಿದೆ, ಗೊತ್ತಿಲ್ಲ ಅಂತ
“ನಿನ್ನ ಕ್ಲಾಸ್ ಮೇಟಾ? ನಿಮ್ಮದು ಬಾಯ್ಸ್ ಕಾಲೇಜು ತಾನೇ?
ಈಗ ಬಾಯಿಬಿಟ್ಟೆ
“ನನ್ನ ಕಾಲೇಜಲ್ಲ ಅವಳು…
“ಮತ್ತೆ ಹೇಗೆ ಅವಳ ಪರಿಚಯ..?
ಹೀಗೆ ನಾಟಕಕ್ಕೆ ಹೋಗ್ತಾ ಇರ್ತೀನಿ, ಅಲ್ಲಿ ಪರಿಚಯ ಆಯ್ತು ಅಂತ ಹೇಳೋಕ್ಕೆ ಆಗ್ತದಾ..?
ಎರಡು ಸಲ ಎಂಜಲು ನುಂಗಿದೆ.
“ಅವಳು ನಾಟಕದಲ್ಲಿ ಮಾಡ್ತಾಳಂತೆ. ಸಂಕ್ರಣ್ಣ ನ ಕೇಳಿದರೆ ಗೊತ್ತಾಗುತ್ತೆ…… ಇದು ಅಮ್ಮ
“ಶಂಕ್ರ ನಿನ್ನೇನೆ ಊರಿಗೆ ಹೋದ್ನಲ್ಲಾ ಅವರಮ್ಮಂಗೆ ಹುಷಾರಿಲ್ಲ ಅಂತ…. ಇದು ಅಪ್ಪ.
ಇನ್ನೂ ಇದೆ






0 Comments