-ಕವಿತಾ ವಿರೂಪಾಕ್ಷ
ದಾರಿಯಲ್ಲಿ ಬಿದ್ದ ಅಕ್ಷರ…!
ಹುಡುಕುವ ಉದ್ದೇಶವೇನೂ ಇರಲಿಲ್ಲ
ತಲೆತಗ್ಗಿಸಿ
ಒಂದೇ ಸಮನೆ ನಡೆಯುತ್ತಿದ್ದೆ
ದೃಷ್ಟಿಗೆ ಏನೋ ಗೋಚರವಾಗಿ ಗಕ್ಕನೆ ನಿಂತೆ..
ಅರೆ..
ಇದೇನಿದು
ಇಷ್ಟೊಂದು ಅಕ್ಷರಗಳು!
ದೂರದರಿವ ತೋರದ
ತೂರುವ ಕಲ್ಲಿನಂತೆ
ಅನಾಥವಾಗಿ ಬಿದ್ದಿವೆ.!
ನಡೆದಷ್ಟೂ ಅವೆ
ಅವೇ ಅಕ್ಷರಗಳು
ಮಾತಾಗದೆ ಹಾಡಾಗದೆ
ಕಥೆಯಾಗದೆ ಕಾವ್ಯವಾಗದೆ
ಎಸೆವ ಶಾಪ ತೊಟ್ಟ
ಪಾಪದ ಪದಗಳು.
ನೋಡಿ ಪಿಚ್ ಎನಿಸಿ
ಸೂಕ್ಷ್ಮವಾಗಿ ಗಮನಿಸುತ್ತಾ ನಡೆದೆ.
ಬದಲಾದ ಕಾಲಾಗಟ್ಟದಲಿ
ಬಳಕೆಯಾಗದೆ ಎಸೆದ
ಸ್ಪಟಿಕದ ಹೊಳಪುಳ್ಳ
ಪ್ರಾಸದ ಪದಗಳು.
ಅನ್ಯಥಾ ಅಪರಾಧಿ ಪಟ್ಟಕೆ
ಗುರಿಯಾಗುವೆನೆಣಿಸಿ ಎಸೆದ
ಕವಿಯ ಕರುಳಿಗೊಗ್ಗದ
ಅಪರಾಧಿ ಪದಗಳು
ಬರೆವ ಭರದಲಿ
ಒಪ್ಪಾಗದೆ ತಪ್ಪಾಗಿ
ಮುದುರಿ ಮಡಚಿ ಎಸೆದ
ಅಪ್ರಾಪ್ತ ಕವಿಯ
ಅದೆಷ್ಟೋ ಅಸಂಖ್ಯ ಪದಗಳು.
ಹೆಜ್ಜೆಯಿಟ್ಟ ಹಾದಿಯಲೆಲ್ಲ
ಎಡ ಬಲದಲ್ಲಿ ಬಿದ್ದು
ನಾವೆತ್ತ ಎಂದು ಕಂಗಾಲಾಗಿ ಕುಳಿತು :
ಅಸ್ಮಿತೆಯ ಪ್ರಶ್ನೆ ಎಸೆವ
ಮುಗ್ಧ ಪದಗಳು..
ಹೀಗೆ
ಹೆಜ್ಜೆಗೊಂದು ಭಾವಹೊತ್ತ
ಆ
ಅಕ್ಷರಗಳ ನಗು,ಕೋಪ
ತಾಪ, ಮುಗ್ಧತೆ
ನನ್ನೊಡಲ ಕಲಕಿ
ಪಿಚ್ ಎನಿಸಿತು.
ಈಗಷ್ಟೇ
ಜ್ಞಾನದ ಜೋಳಿಗೆ ಹಿಡಿದ
ಜಂಗಮಳು ನಾನು
ಅದ್ಹೇಗೆ
ಎತ್ತಿಕೊಂಡು ಪೊರೆಯಲಿ?
ಎತ್ತಿಕೊಳ್ಳುವ ಮನಸಾದರೂ
ಬೇಡವೆನ್ನಿಸಿತು..
ಹೇ.,
ಕವಿತೆಯೇ
ಕೈಜೋಡಿಸಿ ಪ್ರಾರ್ಥಿಸುವೆ
ಅಕ್ಷರಗಳ ಒಗ್ಗಿಸಿಕೋ,
ಯಾವ ಕಾಲದ ಪದವಾದರೇನು
ಪದದ ಹಿಂದಣ
ಏನಾಗಿದ್ದರೇನು
ಬಿದ್ದ ಪದವನೆಲ್ಲ
ಆಯ್ದು ಕಟ್ಟಿ
ಪದ್ಯಮಾಡುವ ಜಾದುಗಾರನೊಬ್ಬ
ಈ ಜಾಡು ಹಿಡಿದು ಬರಲಿ
ಎಂದು ಪ್ರಾರ್ಥಿಸಿ
ಮುಂದೆ ನಡೆದೆ.!!






0 Comments