-ವಿಜಯಲಕ್ಷ್ಮಿ ಸತ್ಯಮೂರ್ತಿ
ಕಂತೆ ಒಗೆಯುವ ಸಮಯಕ್ಕೆ
ಎಷ್ಟು ನಿಜ ಅನಿಸಿಬಿಡುತ್ತೆ
ಕಂತೆ ಒಗೆಯುವ ಸಮಯಕ್ಕೆ
ಒಂದಷ್ಟು ಖುಷಿ ಸಂಭ್ರಮಗಳು
ಮಡಿಲಿಗೆ ಬಂದು ಬೀಳುತ್ತವೆ
ಅದನ್ನು ಕೊಂಡೊಯ್ಯುವುದು ಹೇಗೆ? ಎಲ್ಲಿಗೆ? ಪ್ರಶ್ನೆಯೊಂದು
ಉದ್ಭವಿಸುತ್ತಿದ್ದಂತೆ…
ಇದು ಸ್ವರ್ಗ ನರಕಗಳ ಮಾತಲ್ಲ
ಅವೆಲ್ಲವನ್ನೂ ಈಗಾಗಲೇ ಕಂಡಾಗಿದೆ
ಹೃದಯ ಸುಟ್ಟು ಕರಕಲಾದ ಮೇಲೆ ಭಾವನೆಗಳಿಗೆ ಜಾಗವೆಲ್ಲಿ?
ಹಸಿರಾಗಿ ಉಸಿರಾಡಬೇಕೆಂದಿದ್ದ ಜೀವಕ್ಕೆ ಕೊಳ್ಳಿ ಹತ್ತಿಕೊಂಡ ಗಳಿಗೆ ಗೋಚರಿಸಲೇ ಇಲ್ಲ
ಇನ್ನು ಕೃಷಿ ಮಾಡುವುದೆಲ್ಲಿಂದ?
ಪ್ರೀತಿ ತೋರಿದ ಜೀವಗಳಿಗೆ ಪ್ರತಿಪ್ರೀತಿಯಷ್ಟೇ ಸಲ್ಲಿಕೆ
ಅಷ್ಟಕ್ಕೂ ಕಂತೆ ಒಗೆಯುವುದೆಂದರೆ……
ಪ್ರೀತಿ, ನೋವು, ಎಲ್ಲದರ ಮಧ್ಯ ಸುಖವಾಗಿ, ನೆಮ್ಮದಿಯಿಂದ ಮಲಗಿಬಿಡುವುದು ಆತ್ಮಸಾಕ್ಷಿಯನಪ್ಪಿ ಬಿಗಿಯಾಗಿ






0 Comments