-ಸಂಕೇತ್ ಗುರುದತ್
ಈ ಕಲಾ ಪ್ರದರ್ಶನದ ಹೆಸರೇ ಹೇಳುವಂತೆ ರೋಮಾಂಚಕ ದೃಷ್ಠಿಯನ್ನು ಇದು ಹೊಂದಿದೆ. ದೇಶದ ವಿವಿಧ ರಾಜ್ಯಗಳಿಂದ ಬಂದ ಚಿತ್ರಕಲಾವಿದರು ಹಾಗೂ ಶಿಲ್ಪಗಾರರು ತಮ್ಮ ಕಲಾಕೃತಿಗಳನ್ನು ನಮ್ಮಲ್ಲಿನ ಕಲಾಸಕ್ತರಿಗೆ ಪರಿಚಯಿಸಿದ್ದಾರೆ. ಈ ದಿನಮಾನದಲ್ಲಿನ ಕಲಾ ಪಯಣಕ್ಕೆ ಇದು ಪ್ರತಿಬಿಂಬದಂತಿದೆ. ಈ ಪ್ರದರ್ಶನವು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿಗಳಲ್ಲಿ ನ.18 ರಂದು ಉದ್ಘಾಟನೆಗೊಂಡಿದೆ, ನ.22 ರವರೆಗೆ ನಡೆಯಲಿದ್ದು ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.
ನಾಡಿನ ಹಿರಿಯ ಕಲಾವಿದರೂ ಹಾಗೂ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆದ ಚಿ ಸು ಕೃಷ್ಣಶೆಟ್ಟಿ ಅವರು ಪ್ರದರ್ಶನವನ್ನು ಉದ್ಘಾಟಿಸಿ ಮಾತಾಡುತ್ತಾ ದೇಶದ ವಿವಿಧ ಭಾಗಗಳ ಹದಿನೇಳು ಕಲಾವಿದರನ್ನು ಇದು ಒಟ್ಟುಗೂಡಿಸಿದ್ದು ರಾಷ್ಟ್ರೀಯ ಪ್ರದರ್ಶನವಾಗಿದೆ. ಈ ಪ್ರದರ್ಶನವನ್ನು ಕಲ್ಪಿಸಿ, ಆಯೋಜಿಸಿದ ಕಲಾವಿದರಾದ ದೇಬಾಶಿಸ್ ಮೈಟಿ ಮತ್ತು ನೀಲಕಂಠ ಮಂಡಲ್ ಅವರನ್ನು ಅಭಿನಂದಿಸಿದರು. ಕೋಲ್ಕತ್ತಾ ಮತ್ತು ಬೆಂಗಳೂರಿನ ನಡುವೆ ಬೆಳೆಯುತ್ತಿರುವ ಕಲಾತ್ಮಕ ಸಂಬಂಧವನ್ನು ಶ್ಲಾಘಿಸಿದರು. ಕಲೆಗೆ ಯಾವುದೇ ಭೌಗೋಳಿಕ ಗಡಿಗಳಿಲ್ಲ. ಇದು ಭಾಷೆ, ಪ್ರದೇಶ ಮತ್ತು ರಾಷ್ಟ್ರೀಯತೆಗಳನ್ನು ಮೀರಿದೆ. ಈ ಸಮೂಹ ಪ್ರದರ್ಶನವು ಸಾಂಸ್ಕೃತಿಕ ಮತ್ತು ಕಲಾತ್ಮಕ ಸಂಪರ್ಕವನ್ನು ಪ್ರತಿನಿಧಿಸುತ್ತದೆ ಎಂದರು. ಎಲ್ಲ ಕಲಾವಿದರ ಕಲಾಕೃತಿಗಳ ಬಗ್ಗೆ ಮೆಚ್ಚುಗೆಯ ಮಾತಾಡಿದರು.
ಈ ಪ್ರದರ್ಶನದ ಅತಿಥಿಗಳಾದ ಹಿರಿಯ ಕಲಾವಿದರಾದ ಬಾಬು ಜತ್ತಕರ್ ಅವರು ಮಾತನಾಡಿ ವೆಸ್ಟ್ ಬೆಂಗಾಲ್, ಮಹಾರಾಷ್ಟ್ರ ಒಡಿಸ್ಸಾ ಹಾಗೂ ಹರಿಯಾಣಗಳಿಂದ ರಾಷ್ಟ್ರಮಟ್ಟದ ಕಲಾವಿದರು ಇಲ್ಲಿ ನಮ್ಮ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ. ಕಲಾವಿದರಾದ ದೇಬಾಶಿಸ್ ಮೈಟಿ ಹಾಗೂ ನೀಲಕಂಠ ಮಂಡಲ್ ಅವರು ಮುಂದಾಳತ್ವ ವಹಿಸಿ ಬೇರೆ ಬೇರೆ ರಾಜ್ಯದ ಕಲಾವಿದರನ್ನು ಒಗ್ಗೂಡಿಸಿ ಈ ಪ್ರದರ್ಶನ ಏರ್ಪಡಿಸಿದ್ದಾರೆ. ಅವರ ಶ್ರಮ ಹಾಗೂ ಎಲ್ಲಾ ಕಲಾವಿದರ ಸಹಕಾರವು ಶ್ಲಾಘನೀಯ ಎಂದರು.
ಈ ಪ್ರದರ್ಶನದ ಅತಿಥಿಗಳಾದ ನಾಗರಾಜ್ ಕುಂಬಾರ್ ಅವರು ಮಾತನಾಡಿ ಸಮಯ ಮತ್ತು ತಾಳ್ಮೆಯ ಕೊರತೆಯ ಈ ದಿನಗಳಲ್ಲಿ ತಮ್ಮ ಕಲಾಕೃತಿಗಳನ್ನು ಜನರು ನೋಡಲಿ, ಮೆಚ್ಚಲಿ. ನಮ್ಮ ಬೆಂಗಳೂರಿಗೆ ಬಂದು ಪ್ರದರ್ಶನ ಮಾಡಿರುವುದು ಸಂತಸ ತಂದಿದೆ ಎಂದರು. ಮುಂದಾಳತ್ವ ವಹಿಸಿರುವ ದೇಬಾಶಿಸ್ ಮೈಟಿ ಹಾಗೂ ನೀಲಕಂಠ ಮಂಡಲ್ ಅವರನ್ನೂ ಹಾಗೂ ಕಲಾವಿದರನ್ನು ಅಭಿನಂದಿಸಿದರು.
ಉದ್ಘಾಟನೆಯಲ್ಲಿದ್ದ ಜ್ಞಾನೇಶ್ ಮಿಶ್ರಾ ಅವರು ಮಾತಾಡಿ ಕಲಾವಿದರು ನಮ್ಮ ಜೀವನದ ಭಾಗವೇ ಆಗಿದ್ದಾರೆ ಎಂದರಲ್ಲದೇ ಎಲ್ಲಾ ಕಲಾವಿದರನ್ನು ಅಭಿನಂದಿಸಿದರು. ಕಲಾವಿದರಾದ ಉಷಾ ಮಿಶ್ರಾ ಹಾಗೂ ಧನಂಜಾಯ್ ದಾಸ್ ಅವರು ಉಪಸ್ಥಿತರಿದ್ದರು. ನಾಡಿನ ಹಲವಾರು ಹಿರಿಯ ಕಲಾವಿದರು ಸಾಕ್ಷಿಯಾಗಿದ್ದರು.
ನೀಲಕಂಠ ಮಂಡಲ್ ಅವರು ನಿಸರ್ಗ ಚಿತ್ರಗಳನ್ನು ತಮ್ಮದೇ ಛಾಪಲ್ಲಿ ಚಿತ್ರಿಸಿದ್ದಾರೆ. ಪ್ರಖರ ಬಣ್ಣಗಳಲ್ಲೂ ಪ್ರಖರತೆ ಕಾಣದಂತೆ ರಚಿಸಿದ್ದಾರೆ. ಮಿಶ್ರ ತಂತ್ರಗಳ ಮೂಲಕ ಅಭಿವ್ಯಕ್ತ ಪಡಿಸಲಾಗಿದೆ. ತಂತ್ರಗಳ ಬಗ್ಗೆ ಇತರೇ ಕಲಾವಿದರೂ ಆಲೋಚಿಸುವಂತೆ ಮಾಡಿದೆ.
ದೇಬಾಶಿಸ್ ಮೈಟಿ ಅವರು ಸಮುದ್ರ ಹಾಗೂ ಅಲ್ಲಿಯ ತೀರವನ್ನು ತೆಳು ಬಣ್ಣದ ಹರಡುವಿಕೆಯೊಂದಿಗೆ ರಚಿಸಿದ್ದಾರೆ. ಬಣ್ಣದ ಬಳಕೆಯಷ್ಟೇ ಅಲ್ಲದೇ ಬಣ್ಣದ ಹೊಡೆತಗಳ ಬಗ್ಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಮಾಸ್ಟರ್ ಸ್ಟ್ರೋಕ್ಗಳು ನಿಖರತೆಯಿಂದ ಕೂಡಿವೆ.
ಸುಧಿ ರಂಜನ್ ಮಹಾರಥ ಅವರು ನಾಲ್ಕು ವಿಭಾಗಳ ಚಿಕ್ಕ-ಪುಟ್ಟ ಹಾಗೂ ಸರಣಿಯ ಉಬ್ಬು ಚಿತ್ರಗಳು ಮನದಾಳವನ್ನು ಹೊಕ್ಕಂತಹ ಅನುಭವ ನೀಡುತ್ತವೆ.
ದೊಡ್ಡ ಕ್ಯಾನವಾಸ್ಗಳಲ್ಲಿ ಬಣ್ಣವೇ ಇರದ ಗೂಸುಂಬೆಗಳು ಒಂದರಳೊಂದು ಸೇರಿವೆ. ಅವುಗಳ ಬಣ್ಣನೆಯ ಚಿತ್ರವನ್ನು ನರೇಂದ್ರ ಅವರು ವಿಭಿನ್ನ ಎನಿಸಿದ್ದಾರೆ.
ಪ್ರೀತಮ್ ಬಾಸಕ್ ಅವರ ರಚನೆಯಲ್ಲಿ ಗೂಳಿ, ಚಂಡಮಾರುತ ಹಾಗೂ ಬಲ ಪ್ರಯೋಗ ಬಿತ್ತರಿಸುವ ಚಿತ್ರಗಳು ಚಲನಶೀಲತೆಯಿದೆ, ಕತೆಗಾರನ ಚಿತ್ರದಲ್ಲಿ ಕತ್ತಲು ಬೆಳಕಿನ ದೃಶ್ಯ ಸೆಳೆಯುತ್ತವೆ.
.
ಬೆಕ್ಕಿನ ಬಾಲದ ಮೇಲೆ ಹಕ್ಕಿ, ನೃತ್ಯಗಾರ್ತಿ, ಗೂಬೆಯ ಇಲಿ ಬೇಟೆ, ಮಹಿಳಾ ಗೋಲ್ಡೆನ್ ಶೂ, ಧೂಮಪಾನ ಒಳಿತಲ್ಲ ಎಂಬ ಸಂದೇಶವನ್ನು ಶಿಲ್ಪದ ಮೂಲಕ ಎಸ್ಕೆ ಇಕ್ಬಾಲ್ ಹುಸೇನ್ ಅಭಿವ್ಯಕ್ತ ಪಡಿಸಿದ್ದಾರೆ.
ವಿಶ್ವಾಸ್ ಸಹಾನಿ ಕಲಾಕೃತಿಗಳಲ್ಲಿ ವೈವಿಧ್ಯತೆ ಇದೆ ಬೇಕಾದಲ್ಲಿ ಮಾತ್ರ ಬಣ್ಣ ಬಳಕೆ ಇದ್ದು ಬ್ರೀಥಿಂಗ್ ಸ್ಪೇಸ್ ಹೆಚ್ಚಿದೆ. ನಿಖರವಾದ ಹಾಗೂ ಪ್ರಬಲವಾದ ರೇಖೆಗಳಿಂದ ರಚಿಸಿದ ಸಮೂಹ ವ್ಯಕ್ತಿ ಚಿತ್ರಗಳು ಸೆಳೆಯತ್ತವೆ.
ಬಿಸ್ವಜಿತ್ ಜನ ಅವರು ಕಾಲ್ಪನಿಕತೆಯ ನಿಸರ್ಗ ಚಿತ್ರಗಳು ನೈಜತೆಯ ಆಚೆಯಲ್ಲಿ ಕಾಡುವ ಅವ್ಯಕ್ತ ಸೌಂದರ್ಯವನ್ನು ಕಲಾ ವಿನ್ಯಾಸಕ್ಕೆ ಇಳಿಸಿದ್ದಂತಿದೆ. ಮಿಶ್ರ ಮದ್ಯಮದಲ್ಲಿದ್ದು ಗಮನೀಯವಾಗಿವೆ.
ನರೋತಮ್ ದಾಸ್ ಅವರ ಶಿಲ್ಪಕಲೆಗಳಲ್ಲಿ ಹೆಚ್ಚಿನ ವಿಚಾರಗಳಿವೆ. ಪ್ರತಿ ಶಿಲ್ಪದಲ್ಲೂ ಸೂಕ್ಷ ವಿಷಯಗಳನ್ನು ಇಟ್ಟಿದ್ದಾರೆ. ಇಲ್ಲಿನ ಕಾಮಧೇನು, ನಬಗುಂಜಾರ್ ಶಿಲ್ಪಗಳು ಏಕತೆಯಲ್ಲಿ ವೈವಿಧ್ಯತೆಯನ್ನು ಸ್ಫುರಿಸುತ್ತಿದೆ.
ಸೋಫೈಯ ಯಸ್ಮಿನ್ ಅವರ `ಹ್ಯೂಮನ್ ಸ್ಕೇಪ್” ಎಂಬ ಹೊಸ ಆಯಾಮದ ಪ್ರಯತ್ನವಿದೆ. ಮನೆಯ ವಸ್ತುಗಳಿಗೆ ಜೀವವಿದೆ, ಜೀವಿಗಳು ನಿರ್ಜೀವಿಯಂತಿವೆ. ಖಾಲಿ ಜಾಗದಲ್ಲೇ ಹೆಚ್ಚು ಹೇಳಿದ್ದಾರೆ. ಕತೆಯನ್ನು ಹೇಳುತ್ತವೆ.
ಸೋನು ಡಿ ಗುಪ್ತಾ ಅವರು ಮುಖವಾಡಗಳ ಸುತ್ತ ಸುತ್ತುತ್ತಾ ಹೊರಗಿನ ಒಳಗಿಗೂ, ಒಳಗಿನ ಹೊರಗಿಗೂ ಕೊಂಡಿ ಬೆಸೆದಿದ್ದಾರೆ. ನೀರವತೆಯ ವಿಷಯದಲ್ಲಿ ಹೊಸತೇನನ್ನೋ ಕಟ್ಟಿ ಕೊಟ್ಟಿದ್ದಾರೆ.
ಜಾಹ್ನವಿ ಶರ್ಮ ಅವರು ಕಟ್ಟು ಕಟ್ಟಳೆಯ ಆಚೆಗೂ ಪ್ರೀತಿಯನ್ನೂ ಅಭಿವ್ಯಕ್ತ ಪಡಿಸಿದ್ದಾರೆ. ಆಟಿಕೆಗಳನ್ನೂ ಜೀವತ್ವವನ್ನು ತುಂಬಿದ್ದಾರೆ. ಮುಗ್ಧ ಮಕ್ಕಳ ಮನಸ್ಥಿತಿಯನ್ನು ಕಲಾಕೃತಿಗಳ ಮೂಲಕ ಪ್ರಚುರ ಪಡಿಸಿದ್ದಾರೆ.
ಸ್ನೇಹಂಗ್ಶು ದಾಸ್ ಅವರು ಮಾನವನ ಹಲವು ಸ್ತರಗಳ ಅಭಿವ್ಯಕ್ತಿಯನ್ನು ಇಲ್ಯೂಶನ್ ತಂತ್ರದೊಂದಿಗೆ ಸಮ್ಮಿಲನಗೊಳಿಸಿದ್ದಾರೆ. ಮಿನೇಚರ್ ಶೈಲಿಯ ಗಡಿಯಲ್ಲಿ ಲ್ಯಾಂಡ್ ಸ್ಕೇಪ್ ರಚಿಸಿದ್ದಾರೆ.
ಅವಿಜಿತ್ ಚಟರ್ಜಿ ಅವರು ವಾಟರ್ ಸ್ಕೇಪ್ ಮಾಡಿದ್ದಾರೆ. ಬಾತುಕೋಳಿಗಳ ಜೀವನ ಚಿತ್ರಣವನ್ನು ವರ್ಣಮಯವಾಗಿಸಿದ್ದಾರೆ. ಸೀಸ್ಕೇಪ್ ಮೂಲಕ ದಂಡೆಯ ಹವಾಮಾನವನ್ನು ಹಿಡಿದಿಟ್ಟಿದ್ದಾರೆ.
ಸುರಂಜಿತ್ ಗಿರಿ ಅವರು ಮನದಾಳದ ಗ್ರಹಗತಿಯನ್ನು, ಚಂಡಮಾರುತವನ್ನು ಆಂತರ್ಯದ ತಳಮಳಗಳನ್ನು ಸೂಕ್ಷ್ಮಾತಿ ಸೂಕ್ಷ್ಮ ಗೆರೆಗಳಲ್ಲಿ ಕೊರೆದಿದ್ದಾರೆ. ರಚನೆಯಷ್ಟೇ ಅರ್ಥೈಕೆಗೂ ಸಮಯ ಬೇಕು.
ಪ್ರಣಬ್ ಕುಮಾರ್ ಮಲ್ಲಿಕ್ ಅವರು ಕಾಷ್ಟ ಕಲೆಯಲ್ಲಿ ಪರಿಣತಿ ಹೊಂದಿದ್ದು ಮರದ ಆಕೃತಿಗಳನ್ನು ರಚಿಸಿದ್ದಾರೆ. ಕಲ್ಲಿನಲ್ಲೂ ಕಲೆಯನ್ನು ಅರಳಿಸುವ ಇವರ ನೈಪುಣ್ಯತೆ ಮೆಚ್ಚಲರ್ಹ.
ಹಿಮಾಂಶು ಮೊಹಂತ ಅವರ ಸೆರಾಮಿಕ್ ಬಳಕೆಯ ಪುರಾತನ ಹೊತ್ತಿಗೆಗಳೂ ಹಾಗೂ ಗ್ರಾನೇಟ್ನಲ್ಲಿ ರಚಿಸಿರುವ ಕ್ಯಾರಿ ಬ್ಯಾಗು ಗಮನ ಸೆಳೆಯುತ್ತವೆ. ಸಾಮಾನ್ಯವಾಗಿ ಕಲಾಕೃತಿಗಳನ್ನು ಮುಟ್ಟುವುದು ನಿಷಿದ್ಧ, ಆದರೆ ಈ ಶಿಲ್ಪಕೃತಿಗಳನ್ನು `ಮುಟ್ಟಿ-ಅನುಭವ ಪಡೆಯರಿ’ ಎಂದು ನಮೂದಿಸಬೇಕು. ಬ್ಯಾಗನ್ನು ಸ್ಪರ್ಶಿಸಿದರಷ್ಟೇ ಕಲಾವಿದನ ಕುಶಲತೆ ತಿಳಿಯುವುದು.
ಒಂದೇ ಭೇಟಿಯಲ್ಲಿ ರಾಷ್ಟ್ರದ ಎಲ್ಲಾ ವಿಧಧ ಕಲಾಪ್ರಕಾರಗಳನ್ನು ಈ ಹದಿನೇಳು ಕಲಾವಿದರ ಸಮೂಹ ಕಲಾ ಪ್ರದರ್ಶನದಲ್ಲಿ ಅನುಭವಿಸಬಹುದಾಗಿದೆ. ಶೀರ್ಷಿಕೆಯೇ ಹೇಳುವಂತೆ ರೋಮಾಚನವನ್ನು ಉಂಟು ಮಾಡುತ್ತದೆ. ನೋಟ ಉಚಿತ, ರಮ್ಯ ಅನುಭವ ಖಚಿತ!






0 Comments