ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹುಟ್ಟಬಾರದು, ಈ ಪಾಪಿತನದಲ್ಲಿ…

–ಡಾ. ರವಿಶಂಕರ್ ಎ.ಕೆ

ಈ ಪಾಪಿ ಹೊಟ್ಟೆ

ಈ ಪಾಪಿ ಹೊಟ್ಟೆ
ಏನೇನೆಲ್ಲಾ ಮಾಡ್ಸುತ್ತೆ ನೋಡಿ..
ನಮ್ಮನ್ನೆ ನಾವು
ಕಳೆದುಕೊಂಡು
ಈ ಸಮಾಜಕ್ಕಾಗಿ ಏನೇನೋ
ಬಳಿದುಕೊಂಡು
ಬದುಕುವಂತೆ, ಬಡಿದಾಡುವಂತೆ
ಈ ಪಾಪಿ ಹೊಟ್ಟೆ
ಏನೇನೆಲ್ಲಾ ಮಾಡ್ಸುತ್ತೆ ನೋಡಿ…

ಊರು, ಮನೆ, ಸಂಬಂಧ
ಎಲ್ಲವನ್ನೂ, ಎಲ್ಲರನ್ನೂ ಮರೆತು,
ನಾಲ್ಕು ಕಾಸಿಗಾಗಿ
ಬೇಸರಕ್ಕೂ ಬೈಗುಳಕ್ಕೂ ಹಲ್ಕಿರಿಯುತ್ತಾ
ಬಾಲ್ಯದಿಂದ ಕಟ್ಟಿಕೊಂಡ
ಕನಸುಗಳನ್ನೆಲ್ಲಾ ಕಟ್ಟಿಟ್ಟು
ಯಾರದೋ ಕೈಗೊಂಬೆಯಾಗಿ
ಹೆಸರಿಲ್ಲದೆ ಉಸಿರಾಡುವಂತೆ
ಈ ಪಾಪಿ ಹೊಟ್ಟೆ
ಏನೇನೆಲ್ಲಾ ಮಾಡ್ಸುತ್ತೆ ನೋಡಿ..

ಸುಳ್ಳು ಹೇಳಿಸುತ್ತೆ,
ಮೋಸ ಮಾಡಿಸುತ್ತೆ,
ನಿಯತ್ತು, ಶಿಸ್ತು ಎಲ್ಲಾ ಬರಿಸಿ
ಪಾಪ ಪುಣ್ಯಗಳನ್ನು ಕಲಿಸಿ
ಯಾರನ್ನೋ ನಂಬಿಸಿ
ಇನ್ಯಾರನ್ನೊ ಅವಮಾನಿಸಿ,
ಸುಮ್ಮನೆ ಖುಷಿಪಡುವ
ಬಾಡಿಗೆ ನಗುವಿಗಾಗಿ
ಈ ಪಾಪಿ ಹೊಟ್ಟೆ
ಏನೇನೆಲ್ಲಾ ಮಾಡ್ಸುತ್ತೆ ನೋಡಿ…

ಕಾಸಿಗೆ ಕಾಸು ಕೂಡಿಡುತ್ತಾ
ಹಸಿವು ಆಸೆಗಳನ್ನು ತಳ್ಳುತ್ತಾ
ಗೊತ್ತಿಲ್ಲದ ಒಂದು ದಿನ
ಉಳಿವಿಗಾಗಿ ಶ್ರೀಮಂತ
ಸೌಧಗಳಿಗೆ ಸಾಲದಂತೆ ಸುರಿದು
ಆರೋಗ್ಯ, ಶಿಕ್ಷಣ, ಸುಖಗಳೆಂದು
ಹಣೆಪಟ್ಟಿ ಪಡೆದು
ಖಾಲಿಯಾಗುವ
ಖಾಯಂ ಗಿರಾಕಿತನಕ್ಕಾಗಿ
ಈ ಪಾಪಿ ಹೊಟ್ಟೆ
ಏನೇನೆಲ್ಲಾ ಮಾಡ್ಸುತ್ತೆ ನೋಡಿ…

ಹಬ್ಬಕ್ಕೂ, ಜಾತ್ರೆಗೂ
ಇನ್ಯಾವುದೋ ಸಂತೋಷಕ್ಕೂ
ಕಾದಿಟ್ಟ ರಜೆಗಳನ್ನು
ಬಿಗಿದಿಟ್ಟ ಭಯದಲ್ಲಿ
ಕಳೆದು ಖಾಲಿಯಾಗುವ
ಕನಸುಗಳ ಕೈಗೊಂಬೆಗಳಿಗೆಲ್ಲ
ಈ ಪಾಪಿ ಹೊಟ್ಟೆ
ಏನೇನೆಲ್ಲಾ ಮಾಡ್ಸುತ್ತೆ ನೋಡಿ…

ಶ್ರೀಮಂತರಾಗಿ
ಹುಟ್ಟಿದರೆ ತಾನೇ ಪಾಪಿ !
ಹೊಟ್ಟೆಗೇನು ಚಿಂತೆ…
ಬಡವರಾಗಿ ಹುಟ್ಟಿದರೆ
ಹೊಟ್ಟೆಗಾಗಿ ಪಾಪಿ !
ಚಿಂತೆಯೇ ಸಂತೆ…

ಹುಟ್ಟಬಾರದು,
ಈ ಪಾಪಿತನದಲ್ಲಿ…

‍ಲೇಖಕರು Admin

23 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading