-ದೀಕ್ಷಿತ್ ನಾಯರ್
ನಾವು ಬರೆಯುತ್ತೇವೆ
ಬರೆಯುವ ನಾವು ಸುಖಿಗಳಲ್ಲ ಯಾರೂ ಸಂತೋಷದಿಂದಿಲ್ಲ
ಗಿರವಿಯಿಟ್ಟಿರುವ ನಗುವಿನ ಖರೀದಿಗಾಗಿ ಬರೆಯುತ್ತಿದ್ದೇವೆ
ಕೈ ನವೆಗೆ ಬರೆಯುವವರಲ್ಲ ನಾವು ; ಉಂಡ ನೋವ ಮರೆಯಲು ಎದೆಗಂಟಿದ ಗಾಯ ಮಾಯಲೆಂದು ಬರೆಯುತ್ತೇವೆ
ಬರೆದು ಬದುಕುತ್ತೇವೆ ಬದುಕಲೆಂದೇ ಬರೆಯುತ್ತೇವೆ
ನಾವು ಹಾಯಾಗಿ ಬರೆಯುತ್ತೇವೆಂದು ಲೋಕ ಭ್ರಮಿಸಿದೆ
ಇರಿಯುತ್ತಿರುವ ಮುಳ್ಳುಗಳ ಬಗ್ಗೆ ಯಾರೂ ಚಕಾರ ಎತ್ತಲಾರರು!
ಬರೆಯುವಾಗ ಅತ್ತು ಗೋಳಾಡುವುದಿಲ್ಲ ನಾವು
ಪ್ರತಿ ಕವಿತೆಯ ಸಾಲು ಬರೆಯುವಾಗಲೂ ಮೆಲ್ಲಗೆ ನಿಟ್ಟುಸಿರು ಬಿಡುತ್ತೇವೆ
ದುಃಖ ದುಮ್ಮಾನ ಕವಿತೆಯ ಸರಕಾಗಬಾರದು ಅಲ್ಲವೇ?
ಸಂಕಟದ ಸೂತಕವೇ ಮನದೊಳಗೆ ಹೊಕ್ಕಿರುವಾಗ ಇದ್ಯಾವ ಲೆಕ್ಕ?
ನಮ್ಮ ಎದೆಯ ಕುಲುಮೆಯಲ್ಲಿ ಕನಸು ಪ್ರೀತಿ ನಂಬಿಕೆ ಪೂರಾ ಬೆಂದು ಹೋಗಿದೆ ;
ಬೂದಿಯಿಂದಲೇ ಅಕ್ಷರಗಳನ್ನು ಹೆಕ್ಕಿ ತೆಗೆದು ನಾವು ಹಾಳೆಯ ಮೇಲೆ ಹರಡಬೇಕು
ಅಕ್ಷರಗಳ ನೆತ್ತಿ ಸವರಿ ಸಮಾಧಾನಪಡಿಸಬೇಕು
ಚುಕ್ಕುತಟ್ಟಿ ಮಲಗಿಸಬೇಕು
ಮತ್ತದೇ ಎದೆಯ ನೆಲ ಮಹಡಿಯಿಂದ ಮೇಲಕ್ಕೆದ್ದು ಬರುವ ಸಂಕಟವನ್ನು ಒಳಗೇ ಅದುಮಬೇಕು
ಅಷ್ಟು ಸುಲಭವಿಲ್ಲ ನೋಡಿ ಬರೆಯುವುದು!
ನಾವು ಬರೆಯುವ ಪ್ರತಿ ಸಾಲಿಗೂ ನೀವೊಂದು ಕಥೆ ಕಟ್ಟುತ್ತೀರಿ
ಕಟು ವಿಮರ್ಶೆಯನ್ನು ತೂರುತ್ತೀರಿ
ನಾವು ನಿದ್ದೆಗೆಟ್ಟ ರಾತ್ರಿಗಳ ಬಗ್ಗೆ ಮಾತ್ರ ನಿಮಗೆ ಗೊತ್ತಿಲ್ಲ
ಕಿಟಕಿಯಾಚೆಗೆ ಮುಖವಿಟ್ಟು ಅತ್ತಿದ್ದೂ ನೀವು ಕಂಡಿಲ್ಲ
ಪ್ರತಿ ಪದದ ಹಿಂದೆ ದಶಕದ ಎದೆಗುದಿ ಇದೆ
ಚಿತ್ತಾದ ಅಕ್ಷರಗಳಲ್ಲಿ ತಡೆಹಿಡಿದ ಬಿಕ್ಕಳಿಕೆ ಇದೆ
ಬರೆಯುವ ನಮ್ಮನ್ನು ಸಿಕ್ಕಲೆಲ್ಲ ಹೊಸಕಿ ಹಾಕುತ್ತೀರಿ
ಮತ್ತೆಲ್ಲಿ ಹೂವು ಅರಳೀತು?
ಎದೆಯೊಳಗೆ ಈಗ ಅಕ್ಷರಗಳ ಹೂದೋಟವಿಲ್ಲ
ಕೀವು ತುಂಬಿದ ಗಾಯವಿದೆ ;
ನೀವೇ ಸೂಜಿಯಿಂದ ಚುಚ್ಚಿ ಮಾಡಿದ ಅವಾಂತರವದು!
ಇರಲಿ ಬಿಡಿ ಅವು ತಮ್ಮ ಪಾಡಿಗೆ
ನಾವು ಬರೆದೇ ತೀರುತ್ತೇವೆ
ನೀವು ಹಂಗಿಸಿದಷ್ಟು ಬರೆಯುತ್ತೇವೆ
ನಿಮ್ಮ ಮೇಲಿನ ಸಿಟ್ಟಿಗೆ ಬರೆಯುತ್ತೇವೆ
ನಿಮ್ಮ ಮೇಲೆ ಸವಾರಿ ಮಾಡಿ ಬರೆಯುತ್ತೇವೆ
ಕಣ್ಣಲ್ಲಿ ಕಣ್ಣಿಟ್ಟು ಸವಾಲು ಹಾಕಿ ಬರೆಯುತ್ತೇವೆ
ಗುಂಪು ಕಟ್ಟಿ ಬನ್ನಿ
ಚದುರಿಸಿ ನಮ್ಮನ್ನು
ಚುಚ್ಚಿ ಈಟಿಯಿಂದ
ಎದೆ ಒಡೆದು ಹೋಗಲಿ
ನಾವು ಮಾತ್ರ ಬರೆಯುತ್ತೇವೆ
ಬರೆಯುತ್ತಲೇ ಬದುಕುತ್ತೇವೆ
ನೀವು ಚುಚ್ಚಿದಷ್ಟು ನಾವು ಚೂಪಾಗುತ್ತೇವೆ ಮತ್ತೆ ಮೇಲಕ್ಕೇಳುತ್ತೇವೆ
ನಿಮ್ಮದೇ ಎದೆಯನ್ನು ನಮ್ಮ ಕವಿತೆಗಳಿಂದ ಸುಡುತ್ತೇವೆ






0 Comments