-ನಾ ದಿವಾಕರ
ಸಾಂಘಿಕ- ಸಾಂಸ್ಥಿಕ ಪ್ರಜಾಪ್ರಭುತ್ವ ಇಲ್ಲದ ಸಾಂವಿಧಾನಿಕ ಸಂಸ್ಕೃತಿ ಕೇವಲ ಔಪಚಾರಿಕವಾಗುತ್ತದೆ
“ಭಾರತದ ಜನಗಳಾದ ನಾವು ,,,,,” ಎಂದು ಆರಂಭವಾಗುವ ಭಾರತೀಯ ಸಂವಿಧಾನದ ಪ್ರಸ್ತಾವನೆಯನ್ನು ಪಠಣ ಮಾಡುವುದು ಇತ್ತೀಚಿನ ದಿನಗಳಲ್ಲಿ ನಿತ್ಯಕಾಯಕವಾಗಿದೆ. ಈ ಆಚರಣಾತ್ಮಕ (Ritualistic) ನಡೆ ಸ್ವಾಗತಾರ್ಹವೇ ಆದರೂ, ಭಾರತೀಯ ಸಂವಿಧಾನ ಕೇವಲ ಪಠಣ, ಆಚರಣೆ ಅಥವಾ ಮೂರ್ತ ರೂಪದ ಆರಾಧನೆಗಳಿಗೆ ಸೀಮಿತವಾದ ಗ್ರಂಥವಲ್ಲ. ಲಿಖಿತ ಸಂವಿಧಾನ ಸ್ವಾಭಾವಿಕವಾಗಿ ಮೂರ್ತ ರೂಪದಲ್ಲೇ ಇರುವುದಾದರೂ, ನಮ್ಮ ಸಂವಿಧಾನದ ಒಳಗೆ ಮತ್ತು ಹಿಂದೆ ಒಂದು ಅಮೂರ್ತ ಮೌಲ್ಯ, ಸಂಸ್ಕೃತಿ ಹಾಗೂ ಸಂವೇದನೆ ಇದೆ. ಈ ಔನ್ನತ್ಯಗಳನ್ನೇ ಸಂವಿಧಾನ ಪೀಠಿಕೆಯಾಗಿ ಜನರ ಮುಂದಿಡಲಾಗಿದೆ. ಅದನ್ನೇ ನಾವು ಬಾಯಿಪಾಠ ಮಾಡಿಕೊಂಡು, ಗೀತ ರೂಪಕವನ್ನಾಗಿಸಿ, ರಂಗಪ್ರಯೋಗವನ್ನಾಗಿಸಿ ಜನರ ನಡುವೆ ಕೊಂಡೊಯ್ಯುತ್ತಿದ್ದೇವೆ.
ವರ್ತಮಾನದ ಸಂಕೀರ್ಣ ಪರಿಸ್ಥಿತಿಯಲ್ಲಿ ಇದು ಸ್ವಾಗತಾರ್ಹ. ಭಾರತೀಯ ಸಂವಿಧಾನದ ಸೌಂದರ್ಯ ಇರುವುದು ಅದರ ನಮ್ಯತೆಯಲ್ಲಿ (Flexibility) ಮತ್ತು ಅದರ ಅಂತಃಸತ್ವ ಇರುವುದು ಈ ನಮ್ಯತೆಯನ್ನು ಬಳಸುವಾಗ ಇರಬೇಕಾದ ಪ್ರಜಾಪ್ರಭುತ್ವೀಯ ಸಂವೇದನೆಯಲ್ಲಿ (Democratic Sensitivity) ̤ ಇವೆರಡರ ಮಿಶ್ರಣವನ್ನು ಸಾಂವಿಧಾನಿಕ ಸಂಸ್ಕೃತಿ (Constitutional Culture) ಎಂದು ನಿರ್ವಚಿಸಬಹುದು. ಸಂವಿಧಾನ ಕರ್ತೃಗಳು ಉದ್ದೇಶಪೂರ್ವಕವಾಗಿಯೇ ನಮ್ಯ (Flextible) ಸಂವಿಧಾನವನ್ನು ಕೊಟ್ಟುಹೋಗಿದ್ದಾರೆ. ಏಕೆಂದರೆ ದೇಶದ ಬಹುವೈವಿಧ್ಯತೆ ಮತ್ತು ಸಾಂಸ್ಕೃತಿಕ ಬಹುತ್ವವನ್ನು ಶಾಶ್ವತವಾಗಿ ಕಾಪಾಡಬೇಕಾದರೆ, ಬದಲಾಗುವ ಸಮಾಜಗಳನ್ನು ಕಾಲಕಾಲಕ್ಕೆ ಸಕಾರಾತ್ಮಕವಾಗಿ ಒಳಗೊಳ್ಳುವುದು ಮುಖ್ಯವಾಗುತ್ತದೆ.
ಒಳಗೊಳ್ಳುವಿಕೆ ಮತ್ತು ಬಹುತ್ವ
ಈ ಒಳಗೊಳ್ಳುವಿಕೆಯೇ (Inclusiveness) ಭಾರತೀಯ ಸಂವಿಧಾನದ ಮೂಲ ಸ್ಥಾಯಿ. “ ಭಾರತದ ಜನಗಳಾದ ನಾವು,,,,,, ” ಎಂಬ ಆರಂಭದ ಸಾಲುಗಳು ಇದನ್ನೇ ನೇರವಾಗಿ ಹೇಳುತ್ತದೆ. ಪ್ರಸ್ತಾವನೆಯ ಕೊನೆಯಲ್ಲಿ “ ನಮಗೆ ನಾವೇ ಅರ್ಪಿಸಿಕೊಂಡು,,,,,,” ಎಂದೂ ಹೇಳಲಾಗಿದೆ. ಅಂದರೆ ಪ್ರಜಾಪ್ರಭುತ್ವ, ಬಹುತ್ವ ಮತ್ತು ಗಣತಂತ್ರವನ್ನು ಕಾಪಾಡಲು ಅಗತ್ಯವಾದ ಮಾರ್ಗಸೂಚಿಗಳನ್ನು ನೀಡುವ ಸಂವಿಧಾನ ಎಂಬ ಗ್ರಂಥವನ್ನು “ ಜನಗಳೇ ಸಿದ್ಧಪಡಿಸಿ ಜನಗಳೇ ರೂಪಿಸಿ ಜನರೇ ಸ್ವತಃ ತಮಗೇ ಅರ್ಪಿಸಿಕೊಂಡಿದ್ದಾರೆ ” ಎಂದು ಸರಳೀಕರಿಸಬಹುದು. ಹೀಗೆ ಅರ್ಪಿಸಿಕೊಂಡ ದಿನವನ್ನು (ನವಂಬರ್ 26) ಡಿಜಿಟಲ್ ಯುಗದ ವಿಕಸಿತ ಭಾರತದಲ್ಲಿ “ ಸಂವಿಧಾನ ದಿನಾಚರಣೆ ” ಯಾಗಿ ಸಂಭ್ರಮಿಸುತ್ತಿದ್ದೇವೆ. ಚುನಾಯಿತ ಸರ್ಕಾರಗಳು ಹಾಗೂ ನಾಗರಿಕ ಸಂಘಟನೆಗಳು ಸಮಾನಾಂತರವಾಗಿ ಈ ಆಚರಣೆಯನ್ನು ತಮ್ಮದಾಗಿಸಿಕೊಳ್ಳುತ್ತಿವೆ.
ಸಂವಿಧಾನವನ್ನು ಒಂದು ʼ ಸಂಸ್ಕೃತಿ ʼಯ ರೂಪದಲ್ಲಿ ಕಾಣುವುದೇ ಆದರೆ ಈ ಆಚರಣೆಗಳನ್ನು ಪ್ರಾಮಾಣಿಕವಾಗಿ ಮರುವ್ಯಾಖ್ಯಾನಿಸುವುದು (Re-interpret) ಅಗತ್ಯ. ಏಕೆಂದರೆ ಭಾರತದ ಪ್ರಜಾಪ್ರಭುತ್ವೀಯ ಗಣತಂತ್ರ (Democratic Republic ) ಶಾಶ್ವತವಾಗಿ ತನ್ನ ಆಂತರಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕಾದರೆ ಸಂವಿಧಾನವನ್ನು ಗ್ರಾಂಥಿಕ ಶಾಸನವಾಗಿ ಮಾತ್ರ ನೋಡಲಾಗುವುದಿಲ್ಲ. ಅಥವಾ ಮೂರ್ತರೂಪದ ಪವಿತ್ರ ಗ್ರಂಥದ ರೂಪದಲ್ಲಿ ನೋಡಲಾಗುವುದಿಲ್ಲ. ಈ ಶಾಸನ ಗ್ರಂಥದಲ್ಲಿ ಅಮೂರ್ತ ರೂಪದಲ್ಲಿರುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಪ್ರತಿಯೊಂದು ಹಂತದ ಆಡಳಿತ-ಆಳ್ವಿಕೆಯ ಚೌಕಟ್ಟುಗಳಲ್ಲಿಟ್ಟು ಪರಾಮರ್ಶಿಸಬೇಕಾಗುತ್ತದೆ. ಇಲ್ಲಿ ಸಂವಿಧಾನ ಅನುಸರಣೀಯ ಆಡಳಿತಾತ್ಮಕ ಗ್ರಂಥಸೂಚಿಯಾಗಿ ಕಾಣುತ್ತದೆ.
ಸಾಂಸ್ಥಿಕ ಸವಾಲುಗಳ ನಡುವೆ
ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು 77 ವರ್ಷಗಳು ಕಳೆದಿವೆ. ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಿಕೊಂಡು 80ನೆಯ ವರ್ಷ ತಲುಪಿದ್ದೇವೆ. ಗಣತಂತ್ರವಾಗಿ ರೂಪಿಸಿಕೊಂಡು 77 ವಸಂತಗಳನ್ನು ಪೂರೈಸಲಿದ್ದೇವೆ. ಒಟ್ಟಾರೆಯಾಗಿ ನೋಡಿದಾಗ ಸ್ವತಂತ್ರ ಸಾರ್ವಭೌಮ ಭೌಗೋಳಿಕ ದೇಶವಾಗಿ ನಾವು ಎಂಟನೆಯ ದಶಕದಲ್ಲಿ ಪಯಣಿಸುತ್ತಿದ್ದೇವೆ. ಈ ಪಯಣದ ಏಳುಬೀಳುಗಳನ್ನು ಪರಾಮರ್ಶೆ ಮಾಡುತ್ತಾ ಚರಿತ್ರೆಯಲ್ಲಿ ಮುಖ ಹುದುಗಿಸಿ ಭವಿಷ್ಯಕ್ಕೆ ಕಣ್ಣು ಮುಚ್ಚುವುದರ ಬದಲು, ವರ್ತಮಾನಕ್ಕೆ ಕಣ್ತೆರೆದು ಭವಿಷ್ಯದ ಹಾದಿಗೆ ಅಗತ್ಯವಾದ ನೆಲಹಾಸು (Mosaic) ಸಿದ್ಧಪಡಿಸುವುದು ನಮ್ಮ ಈಗಿನ ಆದ್ಯತೆಯಾಗಬೇಕಿದೆ. ಈ ದೃಷ್ಟಿಯಿಂದ ನಮ್ಮಲ್ಲಿ ಎರಡು ಪ್ರಶ್ನೆಗಳು ಮೂಡಲೇಬೇಕಿದೆ.
ಮೊದಲನೆಯದು, ನಾವು ಸಾಂವಿಧಾನಿಕ ಸಂಸ್ಕೃತಿಯ ಚೌಕಟ್ಟಿನಲ್ಲಿ ಪ್ರಜಾಪ್ರಭುತ್ವೀಯ ಹಾದಿಯಲ್ಲಿ ಸಾಗುತ್ತಿದ್ದೇವೆಯೇ ಎಂಬ ಪ್ರಶ್ನೆ. ಎರಡನೆಯದು, ಈ ಹಾದಿಯಲ್ಲಿ ಪ್ರಜಾಪ್ರಭುತ್ವವನ್ನು ಮೌಲಿಕವಾಗಿ ಸಾಂಸ್ಥೀಕರಿಸಿಕೊಳ್ಳಲು (Institutionalise) ನಮ್ಮಿಂದ ಸಾಧ್ಯವಾಗಿದೆಯೇ ಎಂಬ ಪ್ರಶ್ನೆ. ಈ ಪ್ರಶ್ನೆಗಳು ಏಕೆ ಮುಖ್ಯವಾಗುತ್ತವೆ ಎಂದರೆ, ಭಾರತೀಯ ಸಂವಿಧಾನದ ಅಂತರ್ದನಿ ಇರುವುದು “ ಸಾಂಸ್ಥಿಕ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಳ್ವಿಕೆ ”ಯಲ್ಲಿ. (Institutional Democracy & Constitutional Governance ) . ಭಾರತದ ಸಂವಿಧಾನ ನಮ್ಮನ್ನು ಕಾಪಾಡುತ್ತದೆ ಎಂಬ ಭರವಸೆ ಸಾಮಾಜಿಕ ಪಿರಮಿಡ್ಡಿನ ತಳಪಾಯದವರೆಗೂ ಕಾಣುತ್ತದೆ. ಈ ಭರವಸೆಗೆ ಕಾರಣ ಸಂವಿಧಾನದ ಪ್ರಸ್ತಾವನೆಯಲ್ಲಿರುವ ನಿಬಂಧನೆಗಳು.
ಆದರೆ ಜನಸಾಮಾನ್ಯರ ಈ ವಿಶ್ವಾಸ ಸಾಕಾರವಾಗಬೇಕಾದರೆ ನಮ್ಮ ಆಡಳಿತ ವ್ಯವಸ್ಥೆಯ ನರನಾಡಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ನಿರಂತರವಾಗಿ ಹರಿಯುತ್ತಲೇ ಇರಬೇಕು ಅಲ್ಲವೇ ? ಸಾಂಸ್ಥಿಕ ಪ್ರಜಾಪ್ರಭುತ್ವದ ವಿಶಾಲ ಹಂದರದಲ್ಲಿ ನೋಡಿದಾಗ ನಮಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ಮತ್ತು ಆಡಳಿತ ಯಂತ್ರ ಇವೆಲ್ಲವೂ ಮುಖ್ಯ ಎನಿಸುತ್ತವೆ. ಈ ಸಾಂಸ್ಥಿಕ ನೆಲೆಗಳಲ್ಲಿ ಪ್ರಜಾಪ್ರಭುತ್ವ ಕುಸಿಯದಂತೆ ಎಚ್ಚರ ವಹಿಸಲು ನಾಗರಿಕ ಸಮಾಜದ ಸಂಘಟನೆಗಳು ಸದಾ ಕ್ರಿಯಾಶೀಲವಾಗಿರುವುದು ಅಗತ್ಯ. ಇದು ಸಾಧ್ಯವಾಗಬೇಕಾದರೆ ಈ ನಾಗರಿಕ ಸಂಘ-ಸಂಸ್ಥೆ-ಸಂಘಟನೆಗಳ ಸಂರಚನೆಯಲ್ಲಿ ಒಳಗೊಳ್ಳುವಿಕೆ (Inclusiveness) ಹಾಸುಹೊಕ್ಕಾಗಿರಬೇಕು.
ಸಾಂಘಿಕ ಪ್ರಜಾಪ್ರಭುತ್ವದ ಸಿಕ್ಕುಗಳು
ಜಾತಿ-ಲಿಂಗ-ಧರ್ಮ-ಜನಾಂಗ-ಭಾಷೆ ಮತ್ತು ಸಾಮುದಾಯಿಕ ಅಸ್ಮಿತೆಗಳ ಚೌಕಟ್ಟಿನಲ್ಲಿ ಸಂವಿಧಾನ ರಕ್ಷಣೆಗಾಗಿ ಹೋರಾಡಲು ಪಣ ತೊಡುವ ಪ್ರತಿಯೊಂದು ನಾಗರಿಕ ಸಂಘಟನೆಯೂ (Civic Organisation) ಆಂತರಿಕವಾಗಿ ಸಮಾನ ಅವಕಾಶಗಳು, ಸ್ಥಾನಮಾನಗಳು, ನಾಯಕತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನ ಸ್ವಾಯತ್ತತೆಯನ್ನು ತನ್ನೊಳಗೆ ಅಳವಡಿಸಿಕೊಳ್ಳುವುದು ಅತ್ಯವಶ್ಯ. “ ಭಾರತದ ಜನಗಳಾದ ನಾವು ,,,,,” ಎಂಬ ಔದಾತ್ಯ ಸಾಂಘಿಕ ಸಂರಚನೆಯ ಪ್ರತಿಯೊಂದು ಸ್ತರದಲ್ಲೂ ಧ್ವನಿಸುವಂತಿರಬೇಕು. ಹಾಗೆಯೇ ಸಂವಿಧಾನ ಧ್ವನಿಸುವ ʼಬಹುತ್ವʼದ ಕಲ್ಪನೆ ಸಾಂಸ್ಕೃತಿಕ ನೋಟದಿಂದಾಚೆಗೆ ಪ್ರತಿಧ್ವನಿಸುವಂತಿರಬೇಕು. ಬಹುತ್ವ ಎಂದರೆ ಕೇವಲ ಬಹುಸಾಂಸ್ಕೃತಿಕ ಅಲ್ಲ ಅಥವಾ ಬಹುಭಾಷಿಕ ಅಲ್ಲ. ಇದನ್ನೂ ಮೀರಿ ನೋಡಿದಾಗ ಅಲ್ಲಿ ಬಹುಚಿಂತನೆಯ ಔದಾತ್ಯವನ್ನು ಗುರುತಿಸಬಹುದು.
ಅಂದರೆ ಒಳಗೊಳ್ಳುವಿಕೆಯ ಸಾಂವಿಧಾನಿಕ ಸಂಸ್ಕೃತಿಯಲ್ಲಿ ಎಲ್ಲ ಚಿಂತನೆಗಳನ್ನೂ ಸಮ್ಮಾನಿಸುವ ಅಥವಾ ಯಾವುದೇ ಚಿಂತನಾಕ್ರಮವನ್ನೂ ತಿರಸ್ಕರಿಸದ ಒಂದು ಬಹುತ್ವದ ಚಿಂತನೆ ಇದೆ. ನಾವೇ ವಿಂಗಡಿಸಿ, ವಿಭಾಗೀಕರಣಗೊಳಿಸಿ ನಾವೇ ಕಟ್ಟಿಕೊಂಡ ಗೋಡೆಗಳು ಸಮಾಜದ ಎಲ್ಲ ಸ್ತರಗಳಲ್ಲೂ, ಎಲ್ಲ ದಿಕ್ಕುಗಳಲ್ಲೂ ಪ್ರತ್ಯೇಕತೆಯ ಗೂಡುಗಳನ್ನು ನಿರ್ಮಿಸಿರುವುದನ್ನು ಇನ್ನಾದರೂ ಒಪ್ಪಬೇಕಿದೆ. ತತ್ವಶಾಸ್ತ್ರೀಯ ನೆಲೆಯಲ್ಲಿ ನೋಡಿದಾಗ, ವಿಭಿನ್ನ ತತ್ವಶಾಸ್ತ್ರದ ಪ್ರತಿಪಾದಕರು ಭವಿಷ್ಯದ ಸಮಾಜಕ್ಕೆ ಕೊಟ್ಟುಹೋಗಿರುವ ಸೈದ್ಧಾಂತಿಕ ಆಲೋಚನಾ ಕ್ರಮಗಳು ನಿರ್ದಿಷ್ಟ ಸಮಾಜಗಳನ್ನು ಉದ್ದೇಶಿಸಿರಲಿಲ್ಲ. ಹಾಗೊಮ್ಮೆ ಇದ್ದರೂ ಅದಕ್ಕೊಂದು ಬಲವಾದ ಚಾರಿತ್ರಿಕ ಕಾರಣಗಳಿದ್ದವು. ಅದರಿಂದಾಚೆ ನೊಡಿದಾಗ ತಮ್ಮ ಒಳನೋಟ-ಮುನ್ನೋಟಗಳಿಗೆ ಅನುಗುಣವಾಗಿ, ಮನುಷ್ಯ ಸಮಾಜ ಅನುಸರಿಸಬಹುದಾದ ಜೀವನ ವಿಧಾನಗಳನ್ನು ಕಟ್ಟಿಕೊಟ್ಟಿರುವುದನ್ನು ಗುರುತಿಸಬಹುದು.
ಈ ಸಿದ್ಧಾಂತಗಳ ನಡುವೆ ಕಾಣಬಹುದಾದ ಭಿನ್ನಭೇದಗಳು, ವಿರೋಧಾಭಾಸಗಳು ಇವೆಲ್ಲವೂ ಇಂದಿಗೂ ಚರ್ಚೆಗೊಳಗಾಗುತ್ತಲೇ ಇರುವುದು ಸ್ವಾಗತಾರ್ಹ. ಆದರೆ ಚರ್ಚೆ ಮತ್ತು ಸಂವಾದ ಮನುಕುಲವನ್ನು ಬೆಸೆಯುವ ಬೌದ್ಧಿಕ ಸೇತುವೆಗಳಾಗಬೇಕೇ ಹೊರತು, ವಿಂಗಡಿಸುವ ಭೌತಿಕ ಬೇಲಿಗಳಾಗಬಾರದು. ಭಾರತದ ಸಂವಿಧಾನ “ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ,,,,,” ಎಂದು ಹೇಳುವಾಗ ಈ ಎಚ್ಚರಿಕೆಯನ್ನು ಸೂಚ್ಯವಾಗಿ ನೀಡುತ್ತದೆ. ತತ್ವ ಸಿದ್ದಾಂತಗಳೂ ಸಹ ನಮಗೆ ನಾವೇ ಅರ್ಪಿಸಿಕೊಂಡಂತಹ ಅಥವಾ ನಮ್ಮ ಸುತ್ತ ನಾವೇ ಕಟ್ಟಿಕೊಂಡಂತಹ ಹುತ್ತಗಳು. ನಮಗೆ ಅಪ್ಯಾಯಮಾನ ಎನಿಸುವ ಚಿಂತನಾಧಾರೆಗಳನ್ನು ಒಳಗೆಳೆದುಕೊಂಡು ಹುತ್ತದ ಬಾಗಿಲು ಮುಚ್ಚಿಬಿಟ್ಟರೆ, ಸಮಾಜದ ಬೌದ್ಧಿಕ ವಿಕಾಸಕ್ಕೆ ತಡೆಯೊಡ್ಡಿದಂತಾಗುತ್ತದೆ.
ಭಿನ್ನ ಭೇದಗಳ ಕೂಪಗಳಲ್ಲಿ
ತತ್ಪರಿಣಾಮವಾಗಿ ನಾವೇ ಹೇರಿಕೊಂಡ ಆಲೋಚನೆಗಳು ನಮ್ಮನ್ನು ಕೂಪವಾಸಿಗಳನ್ನಾಗಿ ಮಾಡಿಬಿಡುತ್ತವೆ. ಇದರಿಂದ ವೈಯುಕ್ತಿಕವಾಗಿ ಅಥವಾ ವ್ಯಕ್ತಿಗತವಾಗಿ ನಷ್ಟವಾಗದೆ ಹೋದರೂ, ವಿಶಾಲ ಸಮಾಜದ (Broader society) ಬೌದ್ಧಿಕ ವಿಕಾಸಕ್ಕೆ ಈ ಕೂಪವಾಸಿ ಸ್ಥಾವರಗಳು ಅಡಚಣೆಗಳಾಗಿಬಿಡುತ್ತವೆ. ಈ ಹಂತದಿಂದಲೇ ಚಿಂತನೆಗಳ ನೆಲೆಯಲ್ಲಿ ಬಹುತ್ವದ ನಾಶ ಆರಂಭವಾಗುತ್ತದೆ. ಪಾರಂಪರಿಕವಾಗಿ ಕಾಣಬಹುದಾದ ಭಾರತದ ಮಣ್ಣಿನ ಗುಣ ಎಂದರೆ ಶ್ರೇಷ್ಠತೆ ಅಥವಾ ಹಿರಿಮೆಯ ಮನೋಭಾವ. ಇದು ಯಾವ ಧರ್ಮವನ್ನೂ, ಜಾತಿಯನ್ನೂ, ಭಾಷೆಯನ್ನೂ ಬಿಡದೆ ಆವರಿಸಿರುವ ಒಂದು ಮನೋಗುಣ ಅಥವಾ ವ್ಯಾಧಿ. ಈ ವಾತಾವರಣದಲ್ಲಿ ನಾವು ನಿರ್ಮಿಸಿಕೊಳ್ಳುವ ಬೌದ್ಧಿಕ ಕೂಪಗಳು ಪ್ರಚಂಡ ವಿದ್ವಾಂಸರನ್ನು ಸೃಷ್ಟಿಸಬಹುದು ಆದರೆ ಅದರ ವ್ಯಾಪ್ತಿ ಮತ್ತು ಹರವು ಸಂಕುಚಿತವಾಗಿಯೇ ಉಳಿಯುತ್ತದೆ. ಫಲಿತಾಂಶ ?
ಪ್ರತಿಯೊಂದು ಕಾಲಘಟ್ಟದಲ್ಲೂ ಬೌದ್ಧಿಕ ವಿಕಾಸ ಸಾಧಿಸಿದ ಪೀಳಿಗೆಗೆ ತಾನು ಗಳಿಸಿದ ಅರಿವು-ಜ್ಞಾನವನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಹೇಗೆ ಎಂಬ ಜಿಜ್ಞಾಸೆ ಕಾಡುತ್ತದೆ. ಸ್ವಾತಂತ್ರ್ಯದ ಹೊಸ್ತಿಲಲ್ಲಿ, 1970ರ ದಶಕದಲ್ಲಿ ಸಮಾಜವನ್ನು ಕಾಡಿದ ಈ ಜಿಜ್ಞಾಸೆಯೇ 2026ರ ಡಿಜಿಟಲ್ ಯುಗದಲ್ಲೂ ಕಾಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. 1950 ರಿಂದ 1975ರವರೆಗೂ ಈ ಜಟಿಲ ಸಿಕ್ಕುಗಳನ್ನು ಬಿಡಿಸಲು ನಮ್ಮ ಹಿರಿಯ ತಲೆಮಾರು ಒಂದು ಮಾದರಿಯನ್ನು ಕಂಡುಕೊಂಡಿತ್ತು. ಲಿಖಿತ ಸಾಹಿತ್ಯ, ಮೌಖಿಕ ಉಪನ್ಯಾಸ, ರಂಗಪ್ರಯೋಗ, ಕೋಣೆಯೊಳಗಿನ ಕಮ್ಮಟ ಅಥವಾ ಶಿಬಿರ, ಆಳವಾದ ಅಧ್ಯಯನ ಕೂಟ ಹೀಗೆ ವಿಭಿನ್ನ ಮಾದರಿಗಳನ್ನು ಅನುಸರಿಸುತ್ತಲೇ ಸಮಕಾಲೀನ ಭಾರತ ಹಿಮಾಲಯದೆತ್ತರದ ಬೌದ್ಧಿಕ ಕಣಜಗಳನ್ನು ಎಲ್ಲ ದಿಕ್ಕುಗಳಲ್ಲೂ ನಿರ್ಮಿಸಿದೆ. ಇದು ವಾಸ್ತವ.
ಜೆನ್ ಝಿ ಯುಗದ ಸವಾಲುಗಳು
ಭಾರತ ಬೆಳೆದುಬಂದಿರುವ ದಾರಿಯನ್ನು ಗಮನಿಸಿದಾಗ, ಇಂದು ನಾವು ವೇಗವಾಗಿ ಬದಲಾಗುವ ಸಮಾಜಕ್ಕೆ (Fast Changing Society) ಮುಖಾಮುಖಿಯಾಗುತ್ತಿರುವುದು ಸ್ಪಷ್ಟವಾಗುತ್ತದೆ. ಓದು, ಬರಹ, ಗ್ರಹಿಕೆ, ಸ್ಮರಣೆ, ಸಂಗ್ರಹಣೆ, ಸಂಪಾದನೆ ಎಲ್ಲವೂ ಸಹ ವೇಗ ಪಡೆದುಕೊಂಡಿವೆ. ಕ್ಷಣ ಮಾತ್ರದಲ್ಲಿ ಸಮಗ್ರ ಮಾಹಿತಿ ಒದಗಿಸುವ ತಂತ್ರಜ್ಞಾನ ಒಂದೆಡೆಯಾದರೆ, ಒಂದೇ ಕ್ಷಣದಲ್ಲಿ ವಾಸ್ತವಗಳೆಲ್ಲವನ್ನೂ ಅಳಿಸಿಹಾಕುವ, ಚಾರಿತ್ರಿಕ ಸತ್ಯಗಳನ್ನು ಮಿಥ್ಯೆ ಎಂದು ನಿರೂಪಿಸುವ ಹಾಗೂ ಸುಳ್ಳುಗಳನ್ನೇ ಸತ್ಯ ಎಂದು ಇಡೀ ಸಮಾಜವನ್ನು ತಲುಪುವ ವಿಧಾನಗಳೂ ನಮ್ಮ ಮುಂದಿವೆ. ಬದಲಾಗುತ್ತಿರುವ ಸಮಾಜದಲ್ಲಿ ಭವಿಷ್ಯ ಭಾರತಕ್ಕೆ ನಿರ್ಣಾಯಕವಾಗಬಹುದಾದ ಯುವ ತಲೆಮಾರು ಈ ಎರಡು ಅತಿರೇಕಗಳ ನಡುವೆ ನಿಂತಿದೆ. ಜೆನ್ ಝಿ ಮತ್ತು ಜೆನ್ ಆಲ್ಫಾ ( 1997ರ ಬಳಿಕ ಜನಿಸಿದ ಪೀಳಿಗೆ) ಈ ಯುವ ತಲೆಮಾರನ್ನು ಪ್ರತಿನಿಧಿಸುತ್ತದೆ.
ಈ ಯುವ ಸಮಾಜಗಳಿಗೆ ನಾವು ಸಂವಿಧಾನ, ಸಾಂವಿಧಾನಿಕ ಸಂಸ್ಕೃತಿ, ಬಹುತ್ವ, ಪ್ರಜಾಪ್ತಭುತ್ವ ಇತ್ಯಾದಿಗಳನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ಮರುವ್ಯಾಖ್ಯಾನಿಸಿ ರವಾನಿಸಬೇಕಿದೆ. ಕರ್ನಾಟಕದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ʼಬಸವತತ್ವʼದ ವಿವಾದ ಈ ಯುವ ಜನಾಂಗವನ್ನು ಕಿಂಚಿತ್ತೂ ಅಲುಗಾಡಿಸಿಲ್ಲವೇಕೆ ? ಈ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ? ಏಕೆಂದರೆ 12ನೆಯ ಶತಮಾನದ ವಚನ ಚಳುವಳಿಯಲ್ಲಿ ಗುರುತಿಸಬಹುದಾದ ವರ್ತಮಾನದ ಬಹುತ್ವ ಕಲ್ಪನೆ ಅಥವಾ ಸಮ ಸಮಾಜ-ಸಮಾನತೆಯ ಔದಾತ್ಯಗಳನ್ನು ನಾವು ಇವರಿಗೆ ಪರಿಚಯಿಸಿಲ್ಲ. ಇದನ್ನೇ ಕೊಂಚ ವಿಸ್ತರಿಸಿ ನೋಡಿದರೆ, ಮಾರ್ಕ್ಸ್-ಏಂಗೆಲ್ಸ್ ಬೋಧಿಸಿದ ವೈಜ್ಞಾನಿಕ ಸಮಾಜವಾದ ಮತ್ತು ಭೌತವಾದವನ್ನು, ಅಂಬೇಡ್ಕರ್ ಬೋಧಿಸಿದ ಜಾತಿ ವಿನಾಶದ ಕಲ್ಪನೆಗಳನ್ನು, ಗಾಂಧಿ ಠಾಗೋರ್ ಫುಲೆ ಪೆರಿಯಾರ್ ವಿವೇಕಾನಂದ ಮುಂತಾದವರು ಹುಟ್ಟುಹಾಕಿದ ಸಮಷ್ಟಿ ಪರಿಕಲ್ಪನೆಗಳನ್ನು ಅವರ ಭಾಷೆಯಲ್ಲೇ ಪುನರುಚ್ಛಾರ ಮಾಡುತ್ತಿದ್ದೇವೆಯೇ ಹೊರತು, ಡಿಜಿಟಲ್ ಯುಗದ ಯುವ ಮನಸ್ಸುಗಳನ್ನು ಭೇದಿಸುವಂತಹ ಹೊಸ ಪರಿಭಾಷೆಗಳನ್ನು ನಮ್ಮಿಂದ ಸೃಷ್ಟಿಸಲಾಗಿಲ್ಲ.
ಸಂವಹನದ ಸಿದ್ಧ ಮಾದರಿಗಳು
1970ರ ದಶಕದವರೆಗೂ ಅನುಸರಿಸಿದಂತಹ ಸಂವಹನ ಮಾದರಿಗಳು ಈಗಲೂ ಪರಿಣಾಮಕಾರಿಯಾಗಿವೆ ಆದರೆ ಡಿಜಿಟಲ್ ಯುಗವನ್ನು ಪ್ರಭಾವಿಸುವುದಿಲ್ಲ. ಈ ವಾಸ್ತವ ನಮಗಿನ್ನೂ ಅರ್ಥವಾಗಿಲ್ಲ. ಹಾಗಾಗಿಯೇ ನಾವು ಚರಿತ್ರೆ ಮತ್ತು ವರ್ತಮಾನವನ್ನು ಒಂದೇ ಆವರಣದೊಳಗಿಟ್ಟು, ಹಿರಿಯ ತಲೆಮಾರು ಪಡೆದುಕೊಂಡ ಬೌದ್ಧಿಕ ಸಂಪತ್ತನ್ನು ಹಂತಹಂತವಾಗಿ, ತುಣುಕುಗಳ ರೂಪದಲ್ಲಿ, ಯುವ ಜನಾಂಗದ ಅಂಗಳದಲ್ಲಿ ಚೆಲ್ಲುತ್ತಿದ್ದೇವೆ. ಇದನ್ನು ಸೆಮಿನಾರ್, ಸಮಾವೇಶ, ಸಮ್ಮೇಳನ, ವಿಚಾರ ಸಂಕಿರಣ ಇತ್ಯಾದಿ ವಿಶೇಷಣಗಳಿಂದ ಬಣ್ಣಿಸುತ್ತೇವೆ. ಒಬ್ಬರು ಮಾತನಾಡುವ- ನೂರಾರು ಜನ ಆಲಿಸುವ ಈ ಸಂವಹನ ಮಾದರಿ ಯುವ ಜನಾಂಗವನ್ನು ಆಕರ್ಷಿಸುವುದಿಲ್ಲ. ಕೆಲವೊಮ್ಮೆ ವಿಕರ್ಷಣೆಗೊಳಗಾಗುತ್ತವೆ. ಹೀಗೆ ದೂರಮಾಡಲ್ಪಟ್ಟ ಬೃಹತ್ ಸಂಖ್ಯೆಯ ಸಮಾಜಗಳನ್ನು ಆರೆಸ್ಸೆಸ್-ಬಿಜೆಪಿ-ಹಿಂದುತ್ವ ರಾಜಕಾರಣ ಬಲೆ ಬೀಸಿ ಹಿಡಿಯುತ್ತದೆ.
ಈ ಯುವ ಜನತೆಗೆ ವಚನ ಚಳುವಳಿಯನ್ನು, ವೈಜ್ಞಾನಿಕ ಮಾರ್ಕ್ಸ್ವಾದವನ್ನು, ಅಂಬೇಡ್ಕರ್ ಅವರ ಬೌದ್ಧ ಚಿಂತನೆಗಳನ್ನು, ಪೆರಿಯಾರ್ ಅವರ ವೈಚಾರಿಕತೆಯನ್ನು ಹೇಗೆ ತಲುಪಿಸುವುದು ? ಈ ಪ್ರಶ್ನೆಯೇ ಹಿರಿಯ ತಲೆಮಾರಿಗೆ ಸೇರಿದ ನಮ್ಮನ್ನು ಮರುಚಿಂತನೆಗೆ ಒಳಪಡಿಸಬೇಕಿತ್ತು. ನಮ್ಮ ಸೈದ್ಧಾಂತಿಕ ಆಕರಗಳನ್ನು ಮರುವ್ಯಾಖ್ಯಾನಿಸಲು ಪ್ರಚೋದಿಸಬೇಕಿತ್ತು. ಉದಾಹರಣೆಗೆ ಅಂಬೇಡ್ಕರ್ ಶೂದ್ರರು ಯಾರು ಎಂದು ಹೇಳಿರುವುದನ್ನು ಯಥಾವತ್ತಾಗಿ ಗ್ರಂಥದಿಂದ ಹೆಕ್ಕಿ ತೆಗೆದು ಯುವ ಜನಾಂಗದ ಮುಂದಿಡುವಾಗ, ಈ ಯುವ ಸಮಾಜ ನಿತ್ಯ ಮುಖಾಮುಖಿಯಾಗುವ ಆಧುನಿಕ ಶೂದ್ರ ಸಮಾಜವನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎನ್ನುವುದನ್ನೂ ತಿಳಿಯಪಡಿಸಬೇಕಲ್ಲವೇ ? ಏಕೆಂದರೆ 1950ರಲ್ಲಿ ಶೋಷಿತ ವರ್ಗಗಳ ಭಾಗವಾಗಿದ್ದ ಶೂದ್ರ ಸಮುದಾಯದ ದೊಡ್ಡ ವಲಯ ಈಗ ಫಲಾನುಭವಿಗಳಾಗಿ, ದಲಿತರನ್ನು ಶೋಷಿಸುವ ಪ್ರಬಲ ವರ್ಗಗಳಾಗಿವೆ. ಹಾಗೆಯೇ ಇಂದಿಗೂ ಶೋಷಣೆಗೊಳಪಡುವ ಶೂದ್ರ ಸಮುದಾಯಗಳೂ ನಮ್ಮ ನಡುವೆ ಇದೆ.
ಜಾತಿ-ಲಿಂಗತ್ವದ ನಡುವೆ
ಬದಲಾದ ಭಾರತದಲ್ಲಿ ವರ್ಗಗಳು ಸ್ತರೀಯ ವಿಭಾಗೀಕರಣಕ್ಕೊಳಗಾಗಿವೆ. ಶೋಷಿತ ವರ್ಗಗಳ (Exploited classes) ಒಳಗೇ ಕೆಳಸ್ತರದ ಜಾತಿ-ಉಪಜಾತಿ ಸಮುದಾಯಗಳನ್ನು, ಅಲ್ಪಸಂಖ್ಯಾತರನ್ನು, ಮಹಿಳೆಯರನ್ನು ಶೋಷಿಸುವ ಹಿತವಲಯಗಳು ಸೃಷ್ಟಿಯಾಗಿವೆ. ಆದರೆ ಜಾತಿ ಶೋಷಣೆಯನ್ನು ಗುರುತಿಸುವಷ್ಟು ಗಂಭೀರವಾಗಿ ಲಿಂಗತ್ವ ಶೋಷಣೆಯನ್ನು ನಾವು ಗಮನಿಸುವುದಿಲ್ಲ. ಕತೆ, ಕಾವ್ಯ, ಕಾದಂಬರಿ, ನಾಟಕಗಳಲ್ಲಿ ʼ ದಲಿತ ಪ್ರಜ್ಞೆ ʼಗಾಗಿ ತಡಕಾಡುವ ನಾವು ಅಲ್ಲಿ ʼ ಸ್ತ್ರೀವಾದಿ ಪ್ರಜ್ಞೆ ʼಯ ಕೊರತೆಯನ್ನು ಕಂಡೂ ಕಾಣದಂತಿರುತ್ತೇವೆ. ಏಕೆಂದರೆ ಮಹಿಳೆ ತನ್ನ ಜಾತಿಯ ಒಳಗೇ ಅನುಭವಿಸುವ ಯಾತನೆ, ನೋವುಗಳಿಗೆ ಆಯಾ ಸಮಾಜಗಳ ಪುರುಷಾಳ್ವಿಕೆ, ಪಿತೃಪ್ರಧಾನತೆ (Patriarchy) ಕಾರಣವಾಗಿರುತ್ತದೆ. ಶೋಷಿತ ಸಮುದಾಯಗಳಲ್ಲೂ ಇದನ್ನು ಭೇದಿಸುವ ಮನೋಭಾವ ಇರುವುದಿಲ್ಲ.
ಭಾರತದ ಸಂವಿಧಾನ ಇದನ್ನು ಒಪ್ಪುತ್ತದೆಯೇ ? ಹೊರ ಜಗತ್ತಿನಲ್ಲಿ ಬಹುತ್ವ-ಬಹುಸಾಂಸ್ಕೃತಿಕ ವಾತಾವರಣವನ್ನು ಪ್ರತಿಪಾದಿಸುವ ಸ್ಥಾಪಿತ ಸಮಾಜಗಳಲ್ಲಿ (Established Societies) ಇಂದಿಗೂ ಸಹ ಮಹಿಳೆ ಸಾಂಸ್ಕೃತಿಕ ಸಂಕೋಲೆಗಳಿಂದ ಬಂಧಿಯಾಗಿರುತ್ತಾಳೆ. ಕೌಟುಂಬಿಕ-ಸಾಮುದಾಯಿಕ ಚೌಕಟ್ಟುಗಳಲ್ಲಿ ಇದು ಸಹಜ ಪ್ರಕ್ರಿಯೆಯ ಹಾಗೆ ಸ್ವೀಕರಿಸಲ್ಪಡುತ್ತದೆ. ಆಕೆಯ ಅಂತರಂಗದ ಅಭಿವ್ಯಕ್ತಿಗೆ ಅವಕಾಶಗಳೇ ಇಲ್ಲದಂತೆ ನಾಗರಿಕ-ಸಾಮಾಜಿಕ ಸಂಘಟನೆಗಳು ತಮ್ಮ ಸಂವಹನ ವೇದಿಕೆಗಳನ್ನು ರೂಪಿಸುತ್ತವೆ. ವೇದಿಕೆಯ ಮೇಲೆ “ ಭಾರತದ ಜನಗಳಾದ ನಾವು,,,,,” ಎಂದು ಪ್ರಮಾಣೀಕರಿಸುವಾಗ, ಅಲ್ಲಿ ಮಹಿಳೆಯ ಅಸ್ತಿತ್ವ ಕಾಣೆಯಾಗಿರುತ್ತದೆ. ಈ ದ್ವಂದ್ವವನ್ನು ಈಗಲಾದರೂ ನಿವಾರಿಸಬೇಕಲ್ಲವೇ ?
ಏಕೆಂದರೆ ಜಾತಿ-ಧರ್ಮಗಳ ಗೋಡೆಗಳಿಂದಾಚೆ ಕಾಣುವ ಕರಾಳ ಸತ್ಯ ಎಂದರೆ ಭಾರತೀಯ ಮಹಿಳೆ ದೌರ್ಜನ್ಯಗಳಿಂದ ಮುಕ್ತವಾಗಿಲ್ಲ. ಜಾತಿಯ ಕಾರಣಕ್ಕಾಗಿ, ಧರ್ಮದ ಕಾರಣಕ್ಕಾಗಿ, ಮಹಿಳೆ ಎಂಬ ಕಾರಣಕ್ಕಾಗಿಯೇ ದೌರ್ಜನ್ಯಗಳು ನಡೆಯುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಈ ವಾತಾವರಣದಲ್ಲಿ ಜೆನ್ಝಿ-ಜೆನ್ಆಲ್ಫಾ ಯುವತಿಯರಿಗೆ, ಹರೆಯದವರಿಗೆ, ಅಪ್ರಾಪ್ತರಿಗೆ ಸಂವಿಧಾನದ ಒಳತಿರುಳನ್ನು ಹೇಗೆ ಅರ್ಥಮಾಡಿಸುವುದು ? ಸಂವಿಧಾನ ನಿಮ್ಮನ್ನು ಕಾಪಾಡುತ್ತದೆ ಎಂದು ಹೇಳಿದ ಕೂಡಲೇ ಈ ಬಾಲೆಯರ ಮನಸ್ಸಿನಲ್ಲಿ ಪ್ರತಿವರ್ಷ ದೇಶದಲ್ಲಿ ಸಂಭವಿಸುವ 4-5 ಲಕ್ಷ ಮಹಿಳಾ ದೌರ್ಜನ್ಯಗಳು ಸುಳಿದಾಡುತ್ತವೆ. ಈ ಯುವ ಮಹಿಳಾ ದನಿಗೆ ಅಭಿವ್ಯಕ್ತಿಯ ಒಂದು ಮುಕ್ತ ವೇದಿಕೆಯನ್ನು ಕಲ್ಪಿಸುವುದಕ್ಕೂ ಪಿತೃಪ್ರಧಾನ ಮನಸ್ಸುಗಳು ಹಿಂಜರಿಯುತ್ತಿವೆ. ಇದು ಕಟು ವಾಸ್ತವ.
ಈ ಋಣಾತ್ಮಕ ಬೆಳವಣಿಗೆಗೆ ಕಾರಣ ಏನು ? ಯಾರು ? ಈ ಪ್ರಶ್ನೆ ನಮ್ಮನ್ನು ಕಾಡುವುದೇ ಆದರೆ ನಮ್ಮ ಗಮನ ಸಾಂಸ್ಥಿಕ (Institutional) ಪ್ರಜಾಪ್ರಭುತ್ವದಿಂದ ಸಾಂಘಿಕ (Organisational) ಪ್ರಜಾಪ್ರಭುತ್ವದೆಡೆಗೆ ಸಾಗಬೇಕಾಗುತ್ತದೆ. ಕಳೆದ ಹನ್ನೆರಡು ವರ್ಷಗಳಲ್ಲಿ ಭಾರತದ ಸಾಂವಿಧಾನಿಕ ಸಂಸ್ಕೃತಿ ಎದುರಿಸುತ್ತಿರುವ ಬಹುದೊಡ್ಡ ಸವಾಲು ಸಾಂಸ್ಥಿಕ ಪ್ರಜಾಪ್ರಭುತ್ವದ ಅವನತಿ ಅಥವಾ ಶಿಥಿಲಾವಸ್ಥೆ. ಸಂವಿಧಾನದ ನಾಲ್ಕೂ ಸ್ತಂಭಗಳಲ್ಲಿ ಈ ವ್ಯತ್ಯಯವನ್ನು ಕಾಣುತ್ತಿದ್ದೇವೆ. ಇದನ್ನು ನಿರ್ವಹಿಸುವ ರಾಜಕೀಯ ಪಕ್ಷಗಳು ಮತ್ತು ಚುನಾಯಿತ ಸರ್ಕಾರಗಳು ಈ ಪಾತಾಳ ಕುಸಿತವನ್ನೇ ಪುಷ್ಟೀಕರಿಸುತ್ತಿವೆಯೇ ಹೊರತು, ಬಲಪಡಿಸುತ್ತಿಲ್ಲ. ಏಕೆಂದರೆ ಯಾವ ಪಕ್ಷದಲ್ಲೂ (ಎಡಪಕ್ಷಗಳನ್ನೂ ಸೇರಿದಂತೆ ) ಆಂತರಿಕ ಪ್ರಜಾಪ್ರಭುತ್ವ ನಿಜಾರ್ಥದಲ್ಲಿ ಇಲ್ಲ. ಮಹಿಳಾ ಪ್ರಾತಿನಿಧ್ಯಕ್ಕೆ ಪ್ರಾಥಮಿಕ ಆದ್ಯತೆ ಇಲ್ಲ. ನಾಯಕತ್ವದಲ್ಲಿ ಮಹಿಳೆಗೆ ಅವಕಾಶಗಳೇ ಇಲ್ಲ. ನಿರ್ಣಾಯಕ ಹಂತಗಳಲ್ಲಿ ಮಹಿಳೆಗೆ ಧ್ವನಿಯೇ ಇರುವುದಿಲ್ಲ. ಇದನ್ನು ನಿವಾರಿಸದೆ ನಾವು ಬಹುತ್ವ ಮತ್ತು ಸಂವಿಧಾನದ ಬಗ್ಗೆ ಮಾತನಾಡುವುದು ಬೂಟಾಟಿಕೆ ಎನಿಸುವುದಿಲ್ಲವೇ?
ಸಮರ್ಪಣೆಯ ದಿನದಂದು,,,,,,,
ನವಂಬರ್ 26 ಭಾರತದ ನಾಗರಿಕರು ಹೆಮ್ಮೆ ಪಡುವಂತಹ ದಿನ. ಏಕೆಂದರೆ ನಮ್ಮನ್ನು ನಾವೇ ಆಳಿಕೊಳ್ಳಲು ನೆರವಾಗುವಂತಹ ಒಂದು ಶಾಸನವನ್ನು ಈ ದಿನದಂದು ವಿಧಿಸಿಕೊಂಡಿದ್ದೇವೆ. ಭಾರತದ ಸಾಂಪ್ರದಾಯಿಕ ಸಮಾಜದ ಸಮಸ್ಯೆ ಎಂದರೆ ಎಲ್ಲ ಸ್ಮರಣ ದಿನಗಳನ್ನೂ ನಾವು ವಿಧಿವತ್ತಾದ ಆಚರಣೆಗಳಾಗಿ ಪರಿವರ್ತಿಸಿಬಿಡುತ್ತೇವೆ. ಭಾಷಾವಾರು ರಾಜ್ಯ, ದೇಶದ ಸ್ವಾತಂತ್ರ್ಯ, ಗಣತಂತ್ರದ ಸ್ಥಾಪನೆ ಹೀಗೆ ಎಲ್ಲವೂ ಸಾರ್ವಜನಿಕವಾಗಿ ಆಚರಿಸಲೇಬೇಕಾದ ನಾಡಹಬ್ಬಗಳಂತೆ ನಮ್ಮ ನಡುವೆ ಬೆಳೆದುಬಂದಿವೆ. ಇದರಲ್ಲಿ ತಪ್ಪೇನೂ ಇಲ್ಲ. ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ಬಳಿಕ ಪ್ರತಿಯೊಂದು ತಲೆಮಾರಿಗೂ ಆ ದಿನಗಳನ್ನು ಪರಿಚಯಿಸುವ ಅವಶ್ಯಕತೆ ಇರುತ್ತದೆ. ಹಾಗಾಗಿ ʼದಿನಾಚರಣೆʼಗಳು, ʼ ಉತ್ಸವಗಳು ʼ ಜನಸಾಮಾನ್ಯರಲ್ಲಿ ಹೊಸ ಪ್ರಜ್ಞೆಯನ್ನು ಉದ್ಧೀಪನಗೊಳಿಸುತ್ತದೆ.
ಆದರೆ ಈ ಸ್ಮರಣ ದಿನಗಳಿಂದ ಭಿನ್ನವಾಗಿ ʼ ಸಂವಿಧಾನ ದಿನ ʼ ವನ್ನು ನೋಡಬೇಕಾಗುತ್ತದೆ. ಕರ್ನಾಟಕದಲ್ಲಿ ಈ ʼದಿನಾಚರಣೆʼಯೂ ಸಾಂಘಿಕ ಅಸ್ಮಿತೆಗಳ, ಅಸ್ತಿತ್ವದ ಭೂಮಿಕೆಯಾಗಿ ಪರಿವರ್ತನೆಯಾಗಿದ್ದು, ಮತ್ತೊಂದು ಜನೋತ್ಸವದ ರೀತಿಯಲ್ಲಿ ಸಂಭ್ರಮಿಸಲ್ಪಡುತ್ತಿದೆ. ಸಂವಿಧಾನ ರಕ್ಷಣೆಗಾಗಿ ಸಂಘಟನೆಗಳೂ ನಮ್ಮ ನಡುವೆ ಹುಟ್ಟಿಕೊಂಡಿವೆ. ನಾವು ರಕ್ಷಿಸಬೇಕಿರುವುದು ಸಂವಿಧಾನವನ್ನೋ ಅಥವಾ ಸಂವಿಧಾನ ನಿಷ್ಠೆಯಿಂದ ಅನುಸರಿಸಬೇಕಾದ ಪ್ರಜಾಪ್ರಭುತ್ವದ ಮಾರ್ಗವನ್ನೋ ? ಈ ಪ್ರಶ್ನೆ ಬಹುಶಃ ಎಲ್ಲಿಯೂ ಚರ್ಚೆಯಾಗುವುದಿಲ್ಲ. ಮೇಲ್ ಸ್ತರದಿಂದ ಕೆಳಸ್ತರದವರೆಗೂ ಪ್ರತಿಯೊಂದು ಹಂತದಲ್ಲೂ ಶಿಥಿಲವಾಗುತ್ತಿರುವುದು, ಅಪಾಯದಲ್ಲಿರುವುದು ಪ್ರಜಾಪ್ರಭುತ್ವೀಯ ಮೌಲ್ಯಗಳು ಎಂದಾದ ಮೇಲೆ ನಮ್ಮ ರಕ್ಷಣೆಯ ಕೂಗು ಎಲ್ಲಿ ಧ್ವನಿಸಬೇಕು ?
ಸಾಂಸ್ಥಿಕ ನೆಲೆಯ ಸವಾಲುಗಳು
ಕಳೆದ 80 ವರ್ಷಗಳಲ್ಲಿ ಸಾಂಸ್ಥಿಕ ಪ್ರಜಾಪ್ರಭುತ್ವ (Institutional Democracy) ಹಂತಹಂತವಾಗಿ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಲೇ ಬಂದಿದೆ. ಆಡಳಿತದ ಎಲ್ಲ ಮಗ್ಗುಲುಗಳನ್ನೂ ವ್ಯಾಪಿಸಿರುವ ಈ ಸಮಸ್ಯೆಗೆ ಚಿಕಿತ್ಸಕ ಧ್ವನಿಯಾದರೂ ಯಾವುದು ? ಶಾಸನ ರೂಪದಲ್ಲಿರುವ ಸಂವಿಧಾನ ಇದನ್ನು ಧ್ವನಿಸುವುದಿಲ್ಲ ಬದಲಾಗಿ ಶಾಸನಾತ್ಮಕ ಚಿಕಿತ್ಸಕ ಮಾರ್ಗಗಳನ್ನು ಸೂಚಿಸುತ್ತದೆ. ಈ ಸಮಸ್ಯೆಯ ಪರಿಹಾರ ಇರುವುದು ಸಾಂವಿಧಾನಿಕ ಆಶಯಗಳಿಗೆ ಬದ್ಧರಾಗಿ ಚುನಾಯಿತವಾಗುವ ಸರ್ಕಾರಗಳಲ್ಲಿ. ಪಂಚಾಯತ್ ಹಂತದಿಂದ ಸಂಸತ್ತಿನವರೆಗೂ ಈ ಜವಾಬ್ದಾರಿಯನ್ನು ಅರಿತು ನಿಭಾಯಿಸಬೇಕಿರುವುದು ನಮ್ಮ ಜನಪ್ರತಿನಿಧಿಗಳು ಮತ್ತು ಅವರ ನಿಯಂತ್ರಣ-ನಿರ್ದೇಶನದಲ್ಲೇ ಕಾರ್ಯನಿರ್ವಹಿಸುವ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಸಂಸ್ಥೆಗಳು. ಕೆಲವು ಸಂದರ್ಭಗಳಲ್ಲಿ ನ್ಯಾಯಾಂಗವನ್ನು ಹೊರತುಪಡಿಸಿದರೆ, ಉಳಿದೆರಡೂ ಅಂಗಗಳು ಈ ಹಾದಿಯಲ್ಲಿ ವಿಫಲವಾಗಿರುವುದು ಸ್ಪಷ್ಟ.
ಇಲ್ಲಿ ನಮಗೆ ಜನಸಂಘಟನೆಗಳ ಪ್ರಜಾಪ್ರಭುತ್ವೀಯ ಬುನಾದಿ ಮುಖ್ಯವಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಸಾಂಸ್ಥಿಕ ಪ್ರಜಾಪ್ರಭುತ್ವ ನಾಶವಾಗುತ್ತಿದೆ ಎಂಬ ಕೂಗು ಗಟ್ಟಿಯಾಗುತ್ತಲೇ ಇದೆ. ಈಗ ಜನರ ಪ್ರತಿಭಟನೆಯ ಹಕ್ಕುಗಳಿಗೂ ಸಂಕೋಲೆ ತೊಡಿಸಲಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ಈ ವಿನಾಶಕಾರಿ ಬೆಳವಣಿಗೆಯನ್ನು ತಡೆಗಟ್ಟುವುದು ,ಎಲ್ಲ ಸ್ತರದ ಜನತೆಯನ್ನೂ ಪ್ರತಿನಿಧಿಸುವಂತಹ ರಾಜಕೀಯ ಪಕ್ಗಗಳ, ನಾಗರಿಕ ಸಂಘಟನೆಗಳ, ಕಾರ್ಮಿಕ ಸಂಘಟನೆಗಳ ಹಾಗೂ ಸಂಬಂಧಿತ ಸಂಸ್ಥೆಗಳ ಕರ್ತವ್ಯ ಹಾಗೂ ಜವಾಬ್ದಾರಿ. ಈ ಸಾಂಘಿಕ ನೆಲೆಯಲ್ಲಿ ನಾವು ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ? ಮತ್ತೊಂದು ರೀತಿಯಲ್ಲಿ ಕೇಳುವುದಾದರೆ, ಜನಸಾಮಾನ್ಯರ ಹಕ್ಕೊತ್ತಾಯಗಳಿಗಾಗಿ ನಿರಂತರ ಹೋರಾಡುವ ಸಾಂಘಿಕ ವಲಯದಲ್ಲಿ ಪ್ರಜಾಪ್ರಭುತ್ವ ಎಷ್ಟರ ಮಟ್ಟಿಗೆ ಬೇರೂರಿದೆ ? ಈ ಪ್ರಶ್ನೆಗಳಿಗೆ ನಾವೇ ಉತ್ತರಿಸಬೇಕಿದೆ.
ಸಾಂಘಿಕ ಸವಾಲುಗಳ ನಡುವೆ
ಭಾರತದ ನಾಗರಿಕ ಸಮಾಜ (Civil Society) ವಿಫಲವಾಗಿರುವುದು ಈ ಸಾಂಘಿಕ ನೆಲೆಯಲ್ಲೇ. ಯಾವುದೇ ಪಕ್ಷ, ಸಂಘಟನೆಗಳ ಒಳಹೊಕ್ಕು ನೋಡಿದರೂ ಅಲ್ಲಿ ನಮಗೆ ಸಂವಿಧಾನದ ಧ್ವನಿ ಗಟ್ಟಿಯಾಗಿ ಕೇಳಿಸುತ್ತದೆ ಆದರೆ ಆಂತರಿಕ ಪ್ರಜಾಪ್ರಭುತ್ವದ ಆಶಯ ಕ್ಷೀಣವಾಗಿರುವುದು ಕಾಣುತ್ತದೆ. ಇದನ್ನು ಸರಿಪಡಿಸಲಾಗದೆ, ಅಪಾಯದಲ್ಲಿರುವ ಸಂವಿಧಾನವನ್ನು ರಕ್ಷಿಸಲು ಹೋರಾಡುವುದು, ಸಡಿಲ ಅಡಿಪಾಯದ ಕಟ್ಟಡದಲ್ಲಿ ಗೋಡೆಗಳನ್ನು ಮಾತ್ರ ದುರಸ್ತಿ ಮಾಡಿದಂತಾಗುತ್ತದೆ. ಈ ಪ್ರಕ್ರಿಯೆಯಲ್ಲೇ ಗುರುತಿಸಬಹುದಾದ ಮತ್ತೊಂದು ವಿಲಕ್ಷಣ ಎಂದರೆ, ಸಂವಿಧಾನ ದಿನಾಚರಣೆಯ ಹೆಸರಿನಲ್ಲಿ ಸೃಷ್ಟಿಸಲಾಗುತ್ತಿರುವ ʼ ಆಚರಣಾತ್ಮಕ ʼ (Ritualistic) ಉತ್ಸಾಹ ಅಥವಾ ಉನ್ಮಾದ. ಯಾವುದೇ ಆಚರಣೆಯಲ್ಲಾಗುವಂತೆ ಇಲ್ಲೂ ಸಹ ವೇದಿಕೆಯ ಕಾರ್ಯಕ್ರಮಗಳು, ಮೆರವಣಿಗೆ, ಘೋಷಣೆ ಮತ್ತು ಭಾಷಣಗಳು ಮೇಳೈಸುತ್ತವೆ. ಸಹಜವಾಗಿ ಉನ್ಮತ್ತ ಆಚರಣೆಗಳು ಉದ್ದೇಶಿತ ಗುರಿಯ ದಾರಿ ತಪ್ಪಿಸುತ್ತವೆ.
ಸಾಮಾನ್ಯ ಜನರಿಗೆ “ ನಾವು ಸಂವಿಧಾನ ದಿನವನ್ನು ಏಕೆ ಆಚರಿಸುತ್ತಿದ್ದೇವೆ ” ಎಂದು ಅರ್ಥವಾಗುವುದೇ ಇಲ್ಲ. ದಲಿತ ಸಂಘಟನೆಗಳಿಗೆ ಇದು ಅಸ್ತಿತ್ವದ ದೃಷ್ಟಿಯಿಂದ ನಿರ್ಣಾಯಕವಾದರೆ, ಚುನಾಯಿತ ಸರ್ಕಾರಗಳಿಗೆ ಜನರಲ್ಲಿ ವಿಶ್ವಾಸ ಮೂಡಿಸುವ ಒಂದು ಅವಕಾಶವಾಗುತ್ತದೆ. ಕರ್ನಾಟಕ ಸರ್ಕಾರ ಮುಂದಿನ ಒಂದು ವರ್ಷವನ್ನು “ಸಂವಿಧಾನ ಧ್ವನಿ–ಜನರ ಧ್ವನಿ” ಎಂಬ ಉದ್ಘೋಷದೊಂದಿಗೆ ಜನಜಾಗೃತಿಯ ಅಭಿಯಾನವಾಗಿ ಹಮ್ಮಿಕೊಂಡಿದೆ. ಇದಕ್ಕೆ ದಲಿತ ಸಂಘಟನೆಗಳು, ಇತರ ಪ್ರಜಾಸತ್ತಾತ್ಮಕ ಗುಂಪುಗಳೂ (Democratic Groups) ಬೆಂಬಲ ವ್ಯಕ್ತಪಡಿಸಿವೆ. ಭಾರತದ ಸಂವಿಧಾನ ಮೂಲತಃ ಜನರ ಧ್ವನಿಯೇ ಆಗಿದೆಯಲ್ಲವೇ ? ಆ ಧ್ವನಿ ಕ್ರಮೇಣ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದೇಕೆ ? ಸಾಂಸ್ಥಿಕ ಪ್ರಜಾಪ್ರಭುತ್ವದ ಅಡಿಪಾಯ ಕುಸಿಯುತ್ತಿರುವುದರಿಂದ ಅಲ್ಲವೇ ?
ಪ್ರಜಾಪ್ರಭುತ್ವೀಯ ಸವಾಲುಗಳು
ಈ ಅಡಿಪಾಯದ ಅಂತಃಸತ್ವವನ್ನು, ಅಂತಃಶಕ್ತಿಯನ್ನು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ವರ್ತಮಾನದ ಯುವ ಜನತೆಗೆ ನಾವು ಪರಿಚಯಿಸಬೇಕಿದೆ. ರಸ್ತೆಯಲ್ಲಿ ಪ್ರತಿಭಟಿಸುವ ನಾಗರಿಕ ಹಕ್ಕುಗಳನ್ನೂ ಕಳೆದುಕೊಳ್ಳುತ್ತಿರುವ ಸಮಾಜದಲ್ಲಿ ಯುವ ಜನಾಂಗಕ್ಕೆ ಪ್ರಜಾಪ್ರಭುತ್ವದ ಮೂಲಭೂತ ಲಕ್ಷಣಗಳನ್ನು ತಿಳಿಯಪಡಿಸುವುದೇ ಅಲ್ಲದೆ ಇದಕ್ಕೆ ಅಪಾಯ ಇರುವುದು ಯಾರಿಂದ, ಯಾವ ಕಾರಣಕ್ಕಾಗಿ, ಯಾವ ರೀತಿಯಲ್ಲಿ ಎಂದು ಸ್ಪಷ್ಟತೆ ನೀಡಬೇಕಿದೆ. ಕೇವಲ ಮನುವಾದ ಅಲ್ಲ, ಬಂಡವಾಳಶಾಹಿ ಆರ್ಥಿಕತೆ, ಹಿಂದುತ್ವದ ಫ್ಯಾಸಿಸ್ಟ್ ತಂತ್ರಗಳು , ಇವೆರಡನ್ನೂ ನಿಯಂತ್ರಿಸುವ ಪಿತೃಪ್ರಧಾನ ಮೌಲ್ಯಗಳು ಹಾಗೂ ಧಾರ್ಮಿಕ ಮತೀಯವಾದ ಮತ್ತು ಜಾತಿವಾದವನ್ನು ಸಂರಕ್ಷಿಸುವ ಸಾಮಾಜಿಕ ಸಂರಚನೆ ಇವೆಲ್ಲವನ್ನೂ ಯುವ ಜನಾಂಗಕ್ಕೆ ಬಿಡಿಸಿ ಹೇಳಬೇಕಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದರೆ ಪಿತೃಪ್ರಧಾನತೆಯನ್ನು ಹೊಡೆದೋಡಿಸಬೇಕು, ಜಾತಿ ಶ್ರೇಷ್ಠತೆಯನ್ನು ತೊಡೆದುಹಾಕಬೇಕು, ಮತೀಯ ಹಿರಿಮೆ-ಅಹಮಿಕೆಯನ್ನು ಇಲ್ಲವಾಗಿಸಬೇಕು ಮತ್ತು ಸಮ ಸಮಾಜದ ಆರ್ಥಿಕ ಚಿಂತನೆಯನ್ನು ರೂಢಿಸಿಕೊಳ್ಳಬೇಕು.
ಈ ಆದರ್ಶಗಳನ್ನು ಯುವ ಜನಾಂಗದ ಮುಂದಿಟ್ಟು ಸಂಭಾಷಿಸುವ ಮುನ್ನ ತಮ್ಮೊಳಗಿನ ವೈಪರೀತ್ಯಗಳನ್ನು, ವ್ಯತ್ಯಯಗಳನ್ನು, ವಿರೋಧಾಭಾಸಗಳನ್ನು ನಿವಾರಿಸಿಕೊಳ್ಳುವುದು ಪ್ರತಿಯೊಂದು ಪ್ರಗತಿಪರ ಸಂಘಟನೆಯ ಆದ್ಯತೆಯಾಗಬೇಕು. ಸಾಂಸ್ಥಿಕ ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಡುವ ಪ್ರತಿಯೊಂದು ಎಡಪಕ್ಷ-ಎಡಪಂಥೀಯ ಸಂಘಟನೆ ಆಂತರಿಕವಾಗಿ ಸುಧಾರಣೆಯಾಗಬೇಕು. ದಲಿತ-ಹಿಂದುಳಿದ-ಶೋಷಿತ ಜನಗಳ ಸಂಘಟನೆಗಳು ತಮ್ಮ ಮೊದಲ ಎದುರಾಳಿ ಯಾರು/ಏನು ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಪ್ರಯತ್ನವನ್ನೇ ಮಾಡದೆ, ಯುವ ಜನಾಂಗಕ್ಕೆ ʼ ಪ್ರಜಾಪ್ರಭುತ್ವ ʼ ಉಳಿಸಿ, ಸಂವಿಧಾನವನ್ನು ಸಂರಕ್ಷಿಸಿ ಎಂದು ಕರೆ ಕೊಡುವುದಾದರೂ ಹೇಗೆ ? ಸಂವಿಧಾನ ಸಂರಕ್ಷಣೆಯ ಪಣ ತೊಡುವ ಸಂಘಟನೆಗಳಿಗೆ ಒಂದು ನೈತಿಕ ನೆಲೆ ಇರಬೇಕಲ್ಲವೇ ?
ಆಂತರಿಕ ಸುಧಾರಣೆಯ ಪರ್ವಕಾಲ
ಆಂತರಿಕ ಪ್ರಜಾಪ್ರಭುತ್ವಕ್ಕಾಗಿ (Internal Democracy) ಅಥವಾ ಮಹಿಳಾ ಪ್ರಾತಿನಿಧ್ಯಕ್ಕಾಗಿ (ಪಿತೃಪ್ರಧಾನ ಸಂರಚನೆಯ ವಿರುದ್ಧ) ಯಾವ ಪಕ್ಷಗಳಲ್ಲಿ, ಸಂಘಟನೆಗಳಲ್ಲಿ ಒಳಸಂಘರ್ಷ ನಡೆದಿದೆ. ಹಾಗೊಮ್ಮೆ ಸದ್ದಿಲ್ಲದೆ ನಡೆದಿದ್ದರೂ, ಇಂತಹ ದನಿಗಳನ್ನು ಉಚ್ಛಾಟಿಸಲಾಗುತ್ತದೆ, ಇಲ್ಲವೇ ಆಮಿಷಗಳನ್ನೊಡ್ಡಿ ಶಮನ ಮಾಡಲಾಗುತ್ತದೆ, ಹೆಚ್ಚೆಂದರೆ ವಿಘಟನೆಗೊಳಗಾಗಿ ಮತ್ತೊಂದು ಗುಂಪು/ಸಂಘಟನೆ ರಚನೆಯಾಗುತ್ತದೆ. ಕೇಂದ್ರ ಸರ್ಕಾರ ಪ್ರತಿರೋಧದ ಹಕ್ಕುಗಳನ್ನು ದಮನಿಸುತ್ತಿರುವುದು ನಮ್ಮ ಗಮನಕ್ಕೆ ಬರುತ್ತದೆ ಆದರೆ ಪಕ್ಷ/ಸಂಘಟನೆಗಳಲ್ಲಿ ಆಂತರಿಕವಾಗಿ ಇರಬಹುದಾದ ಸೈದ್ಧಾಂತಿಕ ಪ್ರತಿರೋಧಗಳಿಗೆ ಎಷ್ಟರ ಮಟ್ಟಿಗೆ ಅವಕಾಶ ಕಲ್ಪಿಸಲಾಗಿದೆ ಎನ್ನುವುದು ಗೋಪ್ಯವಾಗಿಯೇ ಉಳಿಯುತ್ತದೆ. ನಾವು ಜೆನ್ ಝಿ, ಜೆನ್ ಅಲ್ಫಾಗಳೊಡನೆ ಸಂವಾದ ನಡೆಸುವಾಗ ಈ ಕೊರತೆಗಳು ತಿವಿಯುತ್ತಲೇ ಇರುತ್ತವೆ ಅಲ್ಲವೇ ?
ಸಂವಿಧಾನದ ಪ್ರಸ್ತಾವನೆಯನ್ನು ಈ ಯುವ ಜನಾಂಗದ ಮುಂದಿಟ್ಟು, ಅವರ ಪ್ರಾಮಾಣಿಕ ಅನಿಸಿಕೆ, ಅಭಿವ್ಯಕ್ತಿಗೆ ಅವಕಾಶ ಮಾಡಿಕೊಟ್ಟರೆ, ಏನೆಲ್ಲಾ ಪ್ರಶ್ನೆಗಳು ಎದುರಾಗಬಹುದು ? ಎಲ್ಲರನ್ನೊಳಗೊಳ್ಳುವ, ಎಲ್ಲರೊಳಗೊಂದಾಗುವ, ಪ್ರಾತಿನಿಧಿಕ ಮೌಲ್ಯಗಳನ್ನು (Representative Valueş ) ಆಂತರಿಕವಾಗಿ ಅಳವಡಿಸಿಕೊಳ್ಳುವ ಔದಾತ್ಯಗಳ ಬಗ್ಗೆ ಪ್ರಶ್ನಿಸಿದರೆ ನಮ್ಮ ಉತ್ತರ ಏನಾಗಿರಬಹುದು ? ಯುವ ಜನಾಂಗಕ್ಕೆ ಈ ಸಾಂಘಿಕ ಅನುಭವವಾಗಲೀ, ಚಳುವಳಿಗಳ ಹಿನ್ನೆಲೆಯಾಗಲೀ ಇಲ್ಲದಿರುವುದರಿಂದ, ತನ್ನದೇ ಆದ ಹೊಸ ಮಾದರಿಗಳನ್ನು, ನವೀನ ಭಾಷೆಯನ್ನು ರೂಪಿಸಿಕೊಳ್ಳುತ್ತದೆ. ಈ ಮಾದರಿಗಳಿಗೆ ನಾವು ಸಕಾರಾತ್ಮಕವಾಗಿ ಸ್ಪಂದಿಸುವುದು ಹೇಗೆ ? ನಾವು ನಿಂತ ನೆಲೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೇಗೆ, ಯಾವ ಪ್ರಮಾಣದಲ್ಲಿ, ಯಾವ ರೀತಿಗಳಲ್ಲಿ ಅಳವಡಿಸಿಕೊಂಡಿದೆ ಎಂಬ ಪ್ರಶ್ನೆ ನಮ್ಮ ಪ್ರಜ್ಞೆಯನ್ನು ತಿವಿಯುವುದಿಲ್ಲವೇ ?
ಹೀಗೆ ತಿವಿಯುವುದೇ ಆದರೆ ಸಂವಿಧಾನ ದಿನವನ್ನು ನಾವು ಆಚರಣಾತ್ಮಕವಾಗಿ ಸಂಭ್ರಮಿಸಬೇಕಿಲ್ಲ. ಬದಲಾಗಿ ಸ್ವ ವಿಮರ್ಶಾತ್ಮಕವಾಗಿ (Self Critical)̧ ಸ್ವಯಂ ಅವಲೋಕನದ (Self introspection) ಹಾದಿಯಲ್ಲಿ ಸಮಾಜದ ತಳಮಟ್ಟದವರೆಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತುವುದು ನಮ್ಮ ಆದ್ಯತೆಯಾಗಬೇಕಿದೆ. ಸಂವಿಧಾನ ನಮಗೆ ಸರ್ಕಾರಗಳ ಅಸಾಂವಿಧಾನಿಕ ಆಳ್ವಿಕೆ ಮತ್ತು ಪ್ರಜಾತಂತ್ರ ವಿರೋಧಿ ಆಡಳಿತ ನೀತಿಗಳನ್ನು ವಿರೋಧಿಸುವ ಹಕ್ಕು ನೀಡಿದೆ. ಹಾಗೆಯೇ ಸಾಂವಿಧಾನಿಕ ಸಂಸ್ಕೃತಿ ಮತ್ತು ಸಾಂಸ್ಥಿಕ ಪ್ರಜಾಪ್ರಭುತ್ವವನ್ನು ಕಾಪಾಡುವ ಜವಾಬ್ದಾರಿಯನ್ನೂ ವಹಿಸಿದೆ. ಇದನ್ನು ನಿಭಾಯಿಸಬೇಕಾದರೆ ನಾವು ಸಾಂಘಿಕ ಪ್ರಜಾಪ್ರಭುತ್ವವನ್ನು (Organisational Democracy) ಎಲ್ಲ ಸ್ತರಗಳಲ್ಲೂ ಗಟ್ಟಿಗೊಳಿಸಬೇಕು. ಎಡ ಪಕ್ಷಗಳು, ಅಂಬೇಡ್ಕರ್ವಾದಿಗಳು, ಲೋಹಿಯಾ ಸಮಾಜವಾದಿಗಳು ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಬೇಕಿದೆ.
ಸಂಕೀರ್ಣ ಕಾಲಘಟ್ಟದ ಸವಾಲು
ಇದು ಸಾಧ್ಯವಾದರೆ, ಬಿಜೆಪಿ ಅನುಸರಿಸುತ್ತಿರುವ ಆರೆಸ್ಸೆಸ್ ಪ್ರಣೀತ ಹಿಂದುತ್ವ ರಾಜಕಾರಣ ಮತ್ತು ಅದು ಪೋಷಿಸುತ್ತಿರುವ ಫ್ಯಾಸಿಸ್ಟ್ ಧೋರಣೆಯ ಆಡಳಿತ ನೀತಿಗಳನ್ನು ಎದುರಿಸಲು ಸುಲಭವಾಗುತ್ತದೆ. ಇಂತಹ ಸಂಕೀರ್ಣ ಸನ್ನಿವೇಶದಲ್ಲೂ (Complex situation) ಶಿಥಿಲವಾಗುತ್ತಿರುವ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗಾಗಿ ಏಕೀಕೃತ ಧ್ವನಿ (Unified Voice) ಕೇಳಿಸದಿರುವುದು ನಮ್ಮ ದೃಷ್ಟಿ ದೋಷದ ಪ್ರತೀಕ ಎಂದೇ ಹೇಳಬಹುದು. ಇದಕ್ಕೆ ಕಾರಣ ʼ ಪ್ರಗತಿಪರ-ಎಡಪಂಥೀಯ ʼ ಲೇಬಲ್ ಅಂಟಿಸಿಕೊಂಡ ಸಂಘಟನೆಗಳ ನಡುವೆ ಇರುವ ಸೈದ್ಧಾಂತಿಕ ಮಡಿವಂತಿಕೆಯ ಗೋಡೆಗಳು. ಇದನ್ನು ಕೆಡವದೆ ಸಂವಿಧಾನ ದಿನವನ್ನು ಆಚರಿಸುವುದು ಕೇವಲ ಸಾರ್ವಜನಿಕ ಪ್ರದರ್ಶನವಾಗುತ್ತದೆ (Public Spectacle) .
ರಾಜ್ಯ ಸರ್ಕಾರದ “ ಸಂವಿಧಾನ ಧ್ವನಿ,,,, ಜನರ ಧ್ವನಿ ” ಅಭಿಯಾನ 2023ರಿಂದಲೇ ಚಾಲನೆ ಪಡೆದಿದ್ದರೆ ಈ ವೇಳಗೆ ರಾಜ್ಯ ಮೂಲೆ ಮೂಲೆಗಳನ್ನು ತಲುಪಬಹುದಿತ್ತು. ಇದನ್ನೇ ತಮ್ಮ ಕಾರ್ಯಕ್ರಮವಾಗಿ ಭಾವಿಸಿ ಜೊತೆಗೂಡಿರುವ ದಲಿತ ಸಂಘಟನೆಗಳಿಗೆ ಈ ಅಭಿಯಾನ ಪ್ರತ್ಯೇಕವಾಗಿರಬೇಕಿಲ್ಲ. ಸಂಘಟನೆಯ ಚಟುವಟಿಕೆಗಳ ಒಂದು ಭಾಗವಾಗಿ ನಿರಂತರ ಯೋಜನೆ ಆಗಬಹುದಿತ್ತು. ʼಪ್ರಜಾಪ್ರಭುತ್ವʼ ಜನರ ಧ್ವನಿಯಾದರೆ ಸಹಜವಾಗಿ ಸಂವಿಧಾನವೂ ಅಲ್ಲಿ ಧ್ವನಿಸುತ್ತದೆ. ಈ ಅಭಿಯಾನವನ್ನು ಜನರ ನಡುವೆ ಕೊಂಡೊಯ್ಯಬೇಕಾದರೆ ಒಂದು ಏಕೀಕೃತ ಧ್ವನಿ (unified Voice) ಬೇಕಿದೆ. ನಮ್ಮ ನಡುವೆ ಇರುವ ಗೋಡೆಗಳನ್ನು ಕೆಡವಿ ಕೈಜೋಡಿಸುವುದಾದರೆ ಈ ಧ್ವನಿ ಸಹಜವಾಗಿ ಹೊರಹೊಮ್ಮುತ್ತದೆ.
ಭವಿಷ್ಯದ ನಿರ್ಣಾಯಕ ಹಾದಿ
ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಾದರೂ ಎಡಪಂಥೀಯ, ಅಂಬೇಡ್ಕರ್ವಾದಿ ಪಕ್ಷ/ಸಂಘಟನೆಗಳು ಈ ಏಕೀಕೃತ ಧ್ವನಿಯನ್ನು ರೂಪಿಸಿ, ಯುವ ಜನಾಂಗದ ಬಳಿ ಹೋಗುವ ಸಂಕಲ್ಪ ಮಾಡಬೇಕಿದೆ. ಭಾರತದ ಭವಿಷ್ಯ , ಯುವ ಜನಾಂಗದ ನಾಳೆಗಳು ಇದನ್ನು ನಿರೀಕ್ಷಿಸುತ್ತಿದೆ. ಈ ಹಾದಿಯಲ್ಲಿ ನಾವು ವಿಫಲವಾದರೆ ಇತಿಹಾಸ ನಮ್ಮನ್ನು ಕ್ಷಮಿಸಬಹುದೇನೋ ಆದರೆ ನಮ್ಮ ಆತ್ಮಸಾಕ್ಷಿಯೇ ಕ್ಷಮಿಸುವುದಿಲ್ಲ. ಪ್ರಜಾಪ್ರಭುತ್ವದ ರಕ್ಷಣೆ ನಮ್ಮ ಘೋಷವಾಕ್ಯವಾದರೆ, ಸಹಜವಾಗಿ ಸಂವಿಧಾನ ರಕ್ಷಣೆಯೂ ಆಗುತ್ತದೆ. ಇಲ್ಲವಾದರೆ ಸಂವಿಧಾನದ ಚೌಕಟ್ಟಿನಲ್ಲೇ ಚುನಾಯಿತ ಸರ್ಕಾರಗಳು ಪ್ರಜಾಪ್ರಭುತ್ವವನ್ನು ಹಂತಹಂತವಾಗಿ ನಾಶಮಾಡುತ್ತಲೇ ಇರುತ್ತವೆ. ಈಗಾಗಲೇ ಇದರ ಮೊದಲ ಪರ್ವವನ್ನು ನೋಡಿದ್ದೇವೆ. ಯುವ ಜನಾಂಗ ಎರಡನೆ ಪರ್ವಕ್ಕೆ ಮುಖಾಮುಖಿಯಾಗಲಿದೆ.
ಈ ದೃಷ್ಟಿಯಿಂದ ನಾವು ಯುವ ಜನಾಂಗದೊಡನೆ ಮಾತನಾಡಬೇಕಿದೆ. ಒಂದೆಡೆ ಕುಳಿತು ಚರ್ಚೆ ಮಾಡಬೇಕಿದೆ. ಅವರ ಆತಂಕಗಳನ್ನು, ನಿರೀಕ್ಷೆಗಳನ್ನು ಗ್ರಹಿಸಬೇಕಿದೆ. ಬೃಹತ್ ಜನಸಮ್ಮೇಳನಗಳನ್ನು ಆಯೋಜಿಸಿ ಹಿರಿಯ ತಲೆಮಾರಿನ ಜ್ಞಾನ ಸಂಪತ್ತನ್ನು ಸಾಮೂಹಿಕವಾಗಿ ರವಾನಿಸುವ ಮಾದರಿಯಿಂದ ಹೊರಬಂದು, ಯುವ ಜನಾಂಗದಲ್ಲಿ ಪ್ರಜಾಪ್ರಭುತ್ವೀಯ ಅರಿವು (Democratic Knowledge) ಮತ್ತು ಸಾಂವಿಧಾನಿಕ ಪ್ರಜ್ಞೆ (Constitutional Conscience) ಮೂಡಿಸಲು ಕಾರ್ಯತಂತ್ರಗಳನ್ನು ರೂಪಿಸಬೇಕಿದೆ. ಪರಸ್ಪರ ಸಂವಾದ-ಚರ್ಚೆಗಳು ಉಪಯುಕ್ತವಾಗಲಿವೆ, ಜೆನ್ ಝಿ ಜನಾಂಗ ಇದನ್ನೇ ಅಪೇಕ್ಷಿಸುತ್ತದೆ. ನವಂಬರ್ 26ರ ಸಂವಿಧಾನ ಸಮರ್ಪಣಾ ದಿನವನ್ನು ಈ ದೃಷ್ಟಿಯಿಂದ ನೋಡಿ ಮುಂದಡಿ ಇಟ್ಟರೆ “ ಭಾರತದ ಜನಗಳಾದ ನಾವು,,,,” ಉಜ್ವಲ ನಾಳೆಗಳನ್ನು ಕಾಣಲು ಸಾಧ್ಯವಾಗುತ್ತದೆ.






0 Comments