ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಷಾದಾಂತ ವಿಚಾರಹಾರ

ಶ್ಯಾಮಲಾ ಮಾಧವ ಅವರ ‘ತುಷಾರ ಹಾರ’ 

‘ಬಹುರೂಪಿ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಎಸ್.ಜಿ.ಸೀತಾರಾಮ್ ಅವರ ಬರಹ ಇಲ್ಲಿದೆ.

ಕೃತಿ – ತುಷಾರ ಹಾರ
ಲೇಖಕರು – ಶ್ಯಾಮಲಾ ಮಾಧವ
ಪ್ರಕಾಶನ – ಬಹುರೂಪಿ
ಬೆಲೆ – 175/-
ಕೊಳ್ಳಲು ಸಂಪರ್ಕಿಸಿ

-ಎಸ್.ಜಿ.ಸೀತಾರಾಮ್

ಕಣ್ಮರೆಯಾದ ನಡುಹರೆಯದ ಮಗನಿಗೆ ತಾಯಿಯು ಒಪ್ಪಿಸಿದ ‘ಅಕ್ಷರ ಹಾರ’; ಮಗನ ನೆನವರಿಕೆಯಲ್ಲಿ ತಾಯಿಯು ಬರೆದ ‘ಬಖೈರು’ (‘memoirs’); ’ಕ್ಯಾನ್ಸರ್’ ಎಂಬ ಉಗ್ರ ಶಿಕ್ಷೆಯ, ‘ಮರಣದಂಡನೆ’ಯ ಸಂಕ್ಲೇಶವನ್ನು ಬಿಚ್ಚಿಡುವ ‘medical chronicle, medical tragedy’… ‘ಶ್ಯಾಮಲಾ ಮಾಧವ’ರವರ “ತುಷಾರ ಹಾರ” ಪುಸ್ತಕವು ಹೀಗೊಂದು ವಿಶಿಷ್ಟ ‘ಬಹು-ಪ್ರಕಾರ’ ನಿಬಂಧನವಾಗಿ, ಸಾಧಾರಣ ರೂಪಣಗಳಿಗೆ ಸವಾಲೊಗೆಯುತ್ತದೆ. ಇಂಥ ಮರ್ಮಭೇದಕ, ನೈಜ ಚಿತ್ರಣಕ್ಕಾಗಿ, ಈ ಮೂಲಕ ಕ್ಯಾನ್ಸರ್ ರೋಗಿಗಳ-ಕುಟುಂಬಗಳ ಪರವಾಗಿ ಮತ್ತೊಂದು ಬಲವಾದ ದನಿಯೆತ್ತಿದ್ದಕ್ಕಾಗಿ, ಮತ್ತು ವೈದ್ಯ ಸಾಹಿತ್ಯಕ್ಕೆ ಒಂದು ‘ಅನನ್ಯ ಕಾಣಿಕೆ’ಯಿತ್ತಿದ್ದಕ್ಕಾಗಿ, ಅವರನ್ನು ಅಭಿನಂದಿಸಬೇಕೋ, ಅಥವಾ ಅವರ ಎದೆಗಿಚ್ಚನ್ನು ನಂದಿಸಲು ಏನಾದರೂ “palliative phrases” ನುಡಿಯಬೇಕೋ, ಅಥವಾ ಈ ಯಾತನಾಮಯ ವೃತ್ತಾಂತವನ್ನೋದಿದ ಸಂಕಟದಲ್ಲಿ ಬಾಯೇ ಬಿಡಲಾಗದೆ, ಯಾ “post-mortem platitudes” ನುಡಿದು ಫಲವೇನು?” ಎಂದೆನಿಸಿ, ಮೌನವನ್ನು ತಾಳಬೇಕೋ – ಎಂಬಂಥ ಪ್ರಶ್ನೆಗಳನ್ನೇಳಿಸಿ, “ತುಷಾರಹಾರ”ವು, ಪ್ರತಿಕ್ರಿಯಿಸಬಯಸುವವರಿಗೂ ಸವಾಲೊಡ್ಡುತ್ತದೆ. ಉದಾಹರಣೆಗೆ, “ಕಥೆ ಓದಿಸಿಕೊಂಡು, ಓಡಿಸಿಕೊಂಡು ಹೋಯಿತು” ಎನ್ನುವುದು ಅದರ ಒಕ್ಕಣೆಯ ಸೊಬಗಿನಿಂದಾಗಿ ಸೂಕ್ತವೇ ಆದರೂ, ಲೇಖಕಿಯವರ ನೋವಿನ ಬಿಸಿಯುಸಿರು ತಟ್ಟುತ್ತಿರುವಾಗ, ಉಸಿರು ಕಟ್ಟಿಸುತ್ತಿರುವಾಗ, ಪುಸ್ತಕವಿಷಯವು “ವೈತರಣಿ”ಯನ್ನು ಹಾಯುವಂತೆನಿಸುತ್ತಿರುವಾಗ, “ಸುಲಭವಾಗಿ ಓದಿಸಿಕೊಂಡು ಹೋಯಿತು” ಎಂದು ತಿಳಿಸುವುದೇ? 

ಇವಷ್ಟೇ ಅಲ್ಲದೆ, “ತುಷಾರ ಹಾರ”ವು, ’ಆಹಾರ-ಔಷಧ-ಉಪಶಮನ’ ಉಪಚಾರ ಕುರಿತಂತೆಯೂ, ‘received wisdom’ ಮತ್ತು ಇಂದಿನ ‘therapeutic paradigms’ ಎದಿರು ಸವಾಲೊಗೆಯುತ್ತದೆ. “Cancer” ಎಂದರೇ “death warrant” ಬಂದಂತೆ; ಹಾಗೆಂದೇ ಅದನ್ನು “Big C” ಎಂದು ವಿಶೇಷಿಸಿದುದು.  ಈ ಕಾರಣದಿಂದಾಗಿ, ಮನುಷ್ಯಪ್ರಯತ್ನವು  ಹೇಗೆ ಸಾಗಬಹುದೆಂಬುದನ್ನೂ, ವೈದ್ಯ ವಿಜ್ಞಾನಕ್ಕೆ (ಇನ್ನೂ) ಎಷ್ಟು ಇತಿಮಿತಿಗಳಿವೆಯೆಂಬುದನ್ನೂ ಕೂಡ “ತುಷಾರ ಹಾರ”ವು ಎತ್ತಿ ತೋರಿಸುತ್ತದೆ. ಇದರಲ್ಲಿ ತುಂಬಿರುವ ಒಳನೋಟಗಳು, ಚಿಕಿತ್ಸೆಯ ವಿಚಾರಗಳಿಂದಾಚೆಗೂ, ಸಾವು-ನೋವು, ಸುಖ-ದುಃಖ, ಆಶ್ವಾಸ-ಆತಂಕ, ಸ್ಥೈರ್ಯ-ಸಹಾನುಭೂತಿ, ಕೃತಜ್ಞತೆ-ಉಪಕಾರಕತ್ವ ಮೊದಲಾದ ಮೂಲಭೂತ ವಿಷಯಗಳನ್ನು ಕುರಿತಂತೆ, psychological, behavioral, ethical and metaphysical ಆಯಾಮಗಳಲ್ಲಿ ಚಿಂತನೆಯ ಎಲ್ಲೆಗಳನ್ನು ಹಿಗ್ಗಿಸುವ ಪ್ರಭಾವವನ್ನೂ ಹೊಂದಿವೆ.       

“ತುಷಾರಹಾರ”ವು ಹೀಗೊಂದು ’ಬುಡ ನಡುಗಿಸಿ ಗಡಿ ನೂಕುವ ಸಾಹಸಿಕ ರಚನೆ’ಯಾಗಿ ’ಧವಳಿಸು’ತ್ತದೆ. ಇಂಗ್ಲಿಶ್ ಜೊತೆಗೆ ಮರಾಠಿ, ಕೊಂಕಣಿ, ಮಲೆಯಾಳ, ಹಿಂದಿ ಮೊದಲಾದ ಭಾಷೆಗಳಲ್ಲೂ ಈ ಕೃತಿಯು ಮೈದೋರಿ, ಹೆಚ್ಚು ಸಾರ್ಥಕವಾಗಬೇಕು. ಅಲ್ಲದೆ, ಪ್ರೌಢಶಾಲಾ ಕನ್ನಡ ಪಾಠ್ಯದ ಭಾಗವಾಗಬೇಕು. ‘YouTube’ ಮೂಲಕ ಇದರ ವಾಚನವನ್ನು ಆಯೋಜಿಸುವುದೂ ಉಪಯುಕ್ತವಾಗಬಹುದು. 

ಮತ್ತಿಷ್ಟು ವಿಶಿಷ್ಟಾಂಶಗಳು

’ರಣವ್ರಣ’ದಲ್ಲಿ (’malignant cancer’) ‘ಅತಿಸ್ಥಿತ್ಯಂತರ’ (’metastasis’) ಹೇಗೆ ಉಂಟಾಗುತ್ತದೆ ಮತ್ತು ’ಜೋಯಿ-ಗುಮ್ಮ’ ಕಳ್ಳಹೆಜ್ಜೆಗಳಿಂದ ಅದು ಅಂಗೋಪಾಂಗಗಳನ್ನು ಒಂದೊಂದಾಗಿ  ಹೇಗೆ ಕಬಳಿಸುತ್ತ ಹೋಗುತ್ತದೆ ಎಂಬುದರ ದಾರುಣ ಚಿತ್ರವನ್ನು ಈ ಕೃತಿಯು MRI/PET Scan ಮಾದರಿಯಲ್ಲಿ ಬಿಡಿಬಿಡಿಯಾಗಿ, ’ಜೀವಂತ’ವಾಗಿ-ಜ್ವಲಂತವಾಗಿ ತೋರ್ಪಡಿಸುತ್ತದೆ. ಇದರ ಕಥಾವಸ್ತುವಿನ “electromagnetic” ಶಕ್ತಿಯು, ಯಾವ “ಮಾತೃಹೃದಯಾಲಜಿಸ್ಟ್” ಅಂತರಂಗದಲ್ಲಾದರೂ “ultrasonic resonance” ಉಂಟಾಗಿಸುವಂತಿದೆ. 

ಈ ಪುಸ್ತಕದಲ್ಲಿ “ಜ್ಯಾದಾ ನಾಟಕ್ ಮತ್ ಕರ್‍ನಾ”, “ಇದೆಲ್ಲ ಅವನ ಡ್ರಾಮಾ” ಎಂಬೆರಡು ಪ್ರಕರಣಗಳಿವೆ. ಇವುಗಳದ್ದೇ ಮರುದನಿಯೋ ಎಂಬಂತೆ, ಈ ಆಖ್ಯಾನವು ಒಂದು ಪ್ರಭಾವಕ ಸಾಕ್ಷ್ಯಚಿತ್ರಕ್ಕೆ ತಕ್ಕನಾದ ’ready script’ ಒದಗಿಸುತ್ತದೆ. ಆದರೆ ಆಗ ಇದರ ’ಶೀರ್ಷಿಕೆ’ ಮಾತ್ರ ಬದಲಾಗಬೇಕು; ಏಕೆಂದರೆ, “ತುಷಾರ ಹಾರ” ಎಂಬ ‘cool’ ಹೆಸರು ಈ ಕಥೆಯ ‘ice cap’ (‘ತುಷಾರ’= ‘ice’) ಆಗಿದ್ದು, ಅದರಡಿಯಲ್ಲಿ ಎಂಥ ‘volcano’ ಕುದಿಯುತ್ತಿದೆ ಎಂಬುದಕ್ಕೆ ಯಾವ ಸೂಚನೆಯನ್ನೂ ಬಿಟ್ಟುಕೊಡುವುದಿಲ್ಲ; ಇದೂ ಒಂದು ‘ಮಾಮೂಲು ಕಾದಂಬರಿ’ ಅಥವಾ’ವ್ಯಥೆಯ ಕಥೆ’ ಎಂಬ ’ಭ್ರಾಂತಿ’ಯನ್ನು ಬರಿಸುತ್ತದೆಯಷ್ಟೇ. ಮಗನ “pancreatography” ಜೊತೆಗೆ ಅವನ “biography”ಯ ಉಜ್ಜ್ವಲಾಂಶಗಳನ್ನೂ ಇದರಲ್ಲಿ ಜಾಣ್ಮೆಯಿಂದ ಹೆಣೆದಿರುವುದರಿಂದ, ಇದರ ನಾಮಕರಣವು ಸರಳವಲ್ಲವಾದರೂ, ’ಇದರ ಹುರುಳಿರುವುದೇ ಇದರ ಮನೋವೇಧಕತೆಯಲ್ಲಿ’; ಹಾಗಾಗಿ. ಅದೇ ಇದರ ನಾಮಧೇಯದಲ್ಲೂ ಇಣುಕಬೇಕು. ಸುವಿಖ್ಯಾತ ಕವಿ ’ರಘುಪತಿ ಸಹಾಯ್ (ಫಿರಾಕ್‍ ಗೋರಖ್‍ಪುರಿ)’ ಅವರು, “ಗಾಯಕನಿಗೆ ಈ ಧಾಟಿಯಲ್ಲಿ ಹಾಡು ಎಂದು ಹೇಳು: ಪ್ರತಿ ಹೃದಯವೂ ತಲ್ಲಣಿಸಲಿ; ಪ್ರತಿ ಕಣ್ಣೂ ತುಂಬಿ ಬರಲಿ” ಎಂದು ತಮ್ಮ ದೋಹೆಯೊಂದರಲ್ಲಿ ಸೂಚಿಸಿರುವಂತೆ, ಭಾವತೀವ್ರತೆಯಿಂದ ಹೊಮ್ಮಿರುವ ಈ ಸರ್ವತ್ರಗತ ಗಾಥೆಯು ಜನಮನವನ್ನು ನಾಟುವಂತಾಗಲಿ! 

ಲೇಖಕಿಯವರ ಉದ್ದಾಮ ಸ್ಮರಣಶಕ್ತಿ, ಮತ್ತು ’ಅವರ್ಣನೀಯ ವರ್ಣನ ಪ್ರತಿಭೆ’, ಅಥವಾ ಅವರು ’diary’ ಬರೆದಿಟ್ಟುಕೊಂಡಿದ್ದರೂ, ಎಂಟು ತಿಂಗಳ ಪ್ರಾಣಾಪತ್ತಿನ ಅವಧಿಯಲ್ಲೂ, ಇಷ್ಟು ಸೂಕ್ಷ್ಮವಾಗಿ, ವಿಶದವಾಗಿ, ಪ್ರತಿಯೊಂದು  ಘಟನೆಯನ್ನೂ ದಾಖಲಿಸಿದ ಅವರ ಸಮಚಿತ್ತ; ಸಕಲ ವಿದ್ಯಮಾನಗಳನ್ನೂ ಹಾಗೆಯೇ  ತೆರೆದಿರಿಸಿರುವ ಅವರ ’ದಿಟತನ-ದಿಟ್ಟತನ’,  ಮತ್ತು ಅವು ಎಲ್ಲರಿಗೂ ತಿಳಿದಿರಲಿ ಎಂಬ ಅವರ ಕಾಳಜಿ; “ಇವರು ಡಾಕ್ಟರೇ?” ಎನಿಸುವ  ಮಟ್ಟಿಗೆ ವೈದ್ಯ ವಿಚಾರಗಳನ್ನು ಕುರಿತು ಅವರಿಗಿರುವ ಪರಿಚಿತಿ, ಮತ್ತು ಮಿಂಚಿನಂತೆ ತಮ್ಮ ಮಗನ ವೈದ್ಯ ವರದಿಗಳನ್ನು ತಮ್ಮ ’ವಿಶ್ವವಾಪಿ ಸ್ನೇಹಕೂಟ’ಕ್ಕೆ ಹಂಚುವ ಅವರ ಪರಿಣತಿ; ತಮ್ಮ ಹೆತ್ತೊಡಲಿನಾಳದ ಉರಿಯನ್ನೇ “fire in one’s belly” ಎಂಬಂತೆ ಈ ಬರವಣಿಗೆಗೆ ಇಂಧನವನ್ನಾಗಿ ಪರಿವರ್ತಿಸಿಕೊಂಡ  ಕೌಶಲ; ಅಗಲಿಕೆಯ ಕೊರಗಿನಲ್ಲಿ ಕರಗದೆ, ಮರಳಿ  ತಮ್ಮ ಬಾಳಿನ, ಕುಟುಂಬದ ಹೊಣೆಹೊತ್ತು ಮುನ್ನಡೆಯುತ್ತಿರುವುದು… ಇವೆಲ್ಲವೂ ಓದುಗರನ್ನು ’ಮೆಚ್ಚಿಬೀಳಿಸುತ್ತವೆ’.

ಬರಹಗಾರ್ತಿಯವರಲ್ಲಿ ಬಿನ್ನಹ

ನಿಮ್ಮ ’ಮಾಧವೀ’ (‘honey-sugar’) ಕುಮಾರನಿಗೆ ನೀವು ನಿಮ್ಮ ಪ್ರೇಮಸುಧೆಯ ಸಾಗರವನ್ನೇ ಹರಿಸಿದಿರಿ. ’ಅಗ್ನಿಪರೀಕ್ಷೆ’ಯ ಆ ಅಷ್ಟಮಾಸಗಳ ಪರ್ಯಂತ ನಿಮ್ಮ ನಡುಹರೆಯದ ಮಗನನ್ನು ಮಗುವಿನಂತೆ ಒಡಲಿನಲ್ಲಿ-ಮಡಿಲಿನಲ್ಲಿ ಧರಿಸಿ, ’ಪುನಃ ಅವನಿಗೆ ತಾಯಿಯಾದ’ ವಿಚಿತ್ರ ಅನುಭವವನ್ನು ಪಡೆದಿರಿ.  ಅವನಿಗೆ ’ಅಂಗದಾನ’ವನ್ನೇ ಮಾಡಲು ಓಡಿದಿರಿ. ನಿಮ್ಮ ಜೀವದ ’ಕಸಿ’ ಮಾಡಿ ಅವನ ಜೀವವನ್ನು ಉಳಿಸಿಕೊಳ್ಳುವಂತಿದ್ದರೆ, ಅದಕ್ಕೂ ಮುನ್ನುಗ್ಗುತ್ತಿದ್ದಿರಿ.  ತುಷಾರನು ಹುಷಾರಾಗಲು ಅತ್ಯುತ್ಕೃಷ್ಟ ಶುಶ್ರೂಷೆಯನ್ನು ಒದಗಿಸಿದಿರಿ. ಅವನು ಚಿರನಿದ್ರೆಗೆ ಸರಿಯುವವರೆಗೂ ಲಾಲಿಸಿ, ಅತಿಶಯವಾದ ವಿದಾಯವನ್ನಿತ್ತಿರಿ. ಆ ಬಳಿಕ “ನೋವೇ ಉಸಿರಾಗಿ ಬದುಕಿರುವಾಗಲೂ”, ’ಅರ್ಬುದವು ನನ್ನ ಪುಣ್ಯಕೋಟಿಯನ್ನು ಹೇಗೆ ಆಹುತಿ ತೆಗೆದುಕೊಂಡಿತು’ ಎಂದು ಜಗದೆಲ್ಲ ತಾಯಂದಿರಿಗೆ – ಅಷ್ಟೇ ಏಕೆ ‘ತಾಯಿಕರುಳಿರುವ’ ಎಲ್ಲರಿಗೂ – ಕೇಳಿಸಲು, ಈ “ತುಷಾರ-ಪೂರ್ಣ ಸಾಕ್ಷರಾಂಜಲಿ”ಯನ್ನು ಸಮರ್ಪಿಸಿ, “ಅವನ ಅಮ್ಮನಾದ ಪರಮಭಾಗ್ಯ” ಪಡೆದುದಕ್ಕಾಗಿ ಕೃತಾರ್ಥತೆಯನ್ನೂ ಸಲ್ಲಿಸಿದಿರಿ. ಈ ‘writing therapy’ ದೆಸೆಯಿಂದಾಗಿ ನೀವೀಗ ನವಚೇತನವನ್ನೂ ಗಳಿಸಿರುವಿರಿ. ನಿಮ್ಮ ಮುದ್ದುಕಂದ ”ಕೃಷ್ಣರಾಜ”ನು ಈಗ ನಿಮ್ಮ ಪ್ರಿಯತಮ “ಚೆಲ್ವ ಕೃಷ್ಣ”ನ ’ಗೋಲೋಕ ಗೋಕುಲ’ದಲ್ಲಿದ್ದು, ಅಲ್ಲಿಂದಲೇ ನಿಮ್ಮ ಈ ಚುರುಕು ಚೇತರಿಕೆಗಾಗಿ ಚಪ್ಪಾಳೆ ತಟ್ಟಿರುವನೆಂದು ಎಣಿಸಿರಿ. ಅಲ್ಲೇ long-walk, ’glacier’ (’ತುಷಾರ ರಾಶಿ’) trekking, clicking, football ಮುಂತಾದ ಚಟುವಟಿಕೆಗಳಲ್ಲಿ ತೊಡಗಿ, ಅಲ್ಲಿಂದಲೇ ತನ್ನ “Brainvisa” ಗೆಳೆಯರಿಗೆ “instructional design” ಕುರಿತ ‘instructions’ ಕೂಡ ನೀಡುತ್ತ, ಚಿರಂಜೀವಿಯಾಗಿ ಖುಶಿಯಿಂದ ವಿಹರಿಸುತ್ತಿದ್ದಾನೆಂದು ಭಾವಿಸಿರಿ. “ತುಷಾರ್ ಗಿರ್ ಗಯಾ” ಎಂಬುದನ್ನು “dewfall” ಎಂಬ ಚೆಂದದಲ್ಲಿ ಗುರುತಿಸಿ, ಅವನು ನಿಮ್ಮನ್ನು refresh ಮಾಡಲು ನಿತ್ಯ ಮುಂಜಾನೆ ನಿಮ್ಮ ಕೈತೋಟಕ್ಕೆ ಇಳಿದುಬರುತ್ತಿದ್ದಾನೆ ಎಂದುಕೊಳ್ಳಿ. “ಚಲ್ ರೇ ವಾಪಸ್ ಆಕೇ ಮಿಲ್‍ತಾ ಹ್ಞೂ” ಎಂಬ ನೆಚ್ಚಿಕೆಯಲ್ಲಿರುವ ತುಷಾರನ “Resurrection” ಇಷಾರೆಯನ್ನು ಕಿವಿದೆರೆದು ಕೇಳಿಸಿಕೊಳ್ಳಿ, ಹುರಿದುಂಬಿಸಿಕೊಳ್ಳಿ. “ಅಬ್ಬಣು”ವಿನ ಅಮ್ಮನ ಅಣು-ಅಣುವಿನಲ್ಲೂ “ಅಬ್ಬಣುಶಕ್ತಿ” ಯಾವತ್ತೂ ಸಂಚರಿಸುತ್ತಿರಲಿ!  ಅವನು ‘ಶ್ಯಾಮಲಾತಾಯಿ’ಯ (“Momala”) ಪ್ರೇಮಲ, ವಿಮಲ, ಸುಕೋಮಲ ಹೃದಯಕಮಲದಲ್ಲಿ ನೆಲಸಿ, ಸತ್ಕಾರ್ಯಗಳಿಗೆ ಸದಾ ಸ್ಫೂರ್ತಿಯೆರೆಯುತ್ತಿರಲಿ!  

“Cancer” ಎದೆಗುದಿಯಿಂದ ಎದೆಗುಂದದೆ, ತನ್ನ ಕರ್ತವ್ಯಗಳಿಗೂ, ಚಿಕಿತ್ಸೆಗಳಿಗೂ, “I can, sir!” ಎನ್ನುತ್ತಲೇ ಪೂರ ಹುಮ್ಮಸ್ಸಿನಿಂದ ಮುಂದಾದ, “ಮಂಜು” (ತುಷಾರ್) ಉಚ್ಚಿಲ್‍ನ ಕೆಚ್ಚಿಗೆ, ಅದಮ್ಯ ಜೀವನೋತ್ಸಾಹಕ್ಕೆ, “ವಿಷಕಂಠ” ಚೇತನಕ್ಕೆ ಶರಣು ಶರಣು!

“…ತುಷಾರಹಾರಧವಳಾ … ನಿಃಶೇಷಜಾಡ್ಯಾಪಹಾ”! “ಸರ್ವೇ ಸನ್ತು ನಿರಾಮಯಾಃ … ಮಾ ಕಶ್ಚಿದ್ ದುಃಖಭಾಗ್‍-ಭವೇತ್”! (“ಶೇಷವಿಲ್ಲದಂತೆ ಜಾಡ್ಯಗಳು ನೀಗಲಿ! ಸರ್ವರೂ ‘ಕಾಯಿಲೆ’ (ಆಮಯ) ಇಲ್ಲದವರಾಗಲಿ! … ಯಾರೂ ದುಃಖಕ್ಕೆ ಭಾಜನರಾಗದಿರಲಿ!”)

ಮೇಲ್ನುಡಿ

“Pancreatic cancer” ವ್ಯಾಧಿಗೆ ಬಲಿಯಾದ ‘Randy Pausch’ (1960-2008), ತನ್ನ ನಿರ್ಗಮನಕ್ಕೆ ಸ್ವಲ್ಪವೇ ಮುಂಚೆ, “Carnegie Mellon University” ಆಶ್ರಯದಲ್ಲಿ ನೀಡಿದ “The Last Lecture”, ಜಗದಗಲಕ್ಕೂ ಅಲೆಗಳನ್ನೆಬ್ಬಿಸಿತು. ಇದರಿಂದ ಹೊಮ್ಮಿದ ಪುಸ್ತಕವು, ’ಹತ್ತಾರು ಲಕ್ಷ’ಗಟ್ಟಳೆ ಮಾರಾಟವಾಯಿತು, ಹತ್ತಾರು ಭಾಷೆಗಳಲ್ಲಿ ಬೆಳಕು ಕಂಡಿತು.

ತುಷಾರನು ತನ್ನ ವೃತ್ತಿಜೀವನವನ್ನು ತಾನೇ ಆಯ್ದುಕೊಂಡು ಸಫಲನಾದುದನ್ನು ಕಂಡಾಗ, “pancreatic cancer” ರುಜೆಗೆ ತುತ್ತಾದ “Steve Jobs”, ವಿದ್ಯಾರ್ಥಿಗಳಿಗೆ ನೀಡಿದ ವಿಶ್ವವಿಖ್ಯಾತ ಹಿತವಚನದ (Commencement Address at Stanford University, June 2005) ಈ ಸಾಲುಗಳು ನೆನಪಾದುವು: “Don’t let the noise of others’ opinions drown out your own inner voice. And most important, have the courage to fallow your heart and  intuition ..Stay hungry, stay foolish!”

ವೈದ್ಯಕೀಯ ಕರ್ಕ(ಟ)(ಕ) ವೃತ್ತ”ದಲ್ಲಿ (“Medical Tropic of Cancer”!) ಈ ಸಮಯ ಸಂಶೋಧನೆ, ಅನ್ವೇಷಣೆ ಮತ್ತು ಆವಿಷ್ಕಾರಗಳ ’ಮಹಾಕ್ರಾಂತಿ’ಯಾಗುತ್ತಿದ್ದು, ಇಡೀ ದೇಹವ್ಯೂಹವನ್ನೇ ಜಗ್ಗಿಸುವ ’chemotherapy’ಯ ಬದಲಿಗೆ, ಸೂಕ್ಷ್ಮ ಗುರಿಯನ್ನುಳ್ಳ ’targeted therapy’ ಪ್ರಯೋಗವು ಹೆಚ್ಚು ಗಮನ ಸೆಳೆಯುತ್ತಿದೆ. Immunotherapy, gene therapy, monoclonal antibodies ಮತ್ತು cancer vaccines ವಿಚಾರಗಳಲ್ಲದೆ, stem cell transplantation, cancer cell bio-printing, AI & robotics ಮೊದಲಾದ ನವನವೀನ ವಿಜ್ಞಾನ-ತಂತ್ರಜ್ಞಾನ ಶಾಖೆಗಳ ಪಾತ್ರಗಳೂ, ಈಚೆಗೆ ಹೊಸ-ಹೊಸ ಆಶಾಕಿರಣಗಳನ್ನು ’radiate’ ಮಾಡತೊಡಗಿವೆ.

‍ಲೇಖಕರು Admin

26 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading