ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಷರ ಲೋಕದ ಅಚ್ಚರಿಯ ನೆನಪುಗಳು ಮತ್ತು ನವಿರು ಹಾಸ್ಯ

ಪಿ.ಶ್ರೀಧರ್ ನಾಯಕ್ ಅವರ ‘ಅಕ್ಷರ ಪ್ರೇಮಿಯ ಅಕ್ಷತ ನೆನಪುಗಳು’

ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ.

-ಉದಯಕುಮಾರ ಹಬ್ಬು

ಪಿ.ಶ್ರೀಧರ್ ನಾಯಕ್ ಅವರು ಓರ್ವ ಪತ್ರಕರ್ತ ಮಾತ್ರವಲ್ಲ; ಅವರೊಬ್ಬ ಸೃಜನಶೀಲ ಬರಹಗಾರರೂ ಹೌದು‌. ಈಗಾಗಲೇ ಅನನ್ಯ  ನವನವೋನ್ಮೇಷಶಾಲಿನಿ ಪ್ರಬಂಧ ಸಂಕಲನಗಳನ್ನು ಬರೆದು ಪ್ರಕಟಿಸಿದ್ದುದಲ್ಲದೆ ಈ ಸಂಕಲನ “ಅಕ್ಷರ ಪ್ರೇಮಿಯ ಅಕ್ಷತ ನೆನಪುಗಳು” ಎಂಬ ಹತ್ತನೆಯ ಕೃತಿಯನ್ನು ಬರೆದಿದ್ದಾರೆ.

 ಅವರ ವೃತ್ತಿಯಾದ ಪತ್ರಿಕೋದ್ಯಮದ  ಸೇವಾವಧಿಯಲ್ಲಿ ಕಣ್ಣಾರೆ ಕಂಡ, ಸ್ವತಃ ಅನುಭವಿಸಿದ ಘಟನೆಗಳನ್ನು ಪ್ರತ್ಯಕ್ಷ ಸಾಕ್ಷಿಯಾಗಿ ಮಾನವೀಯ ಕಳಕಳಿಯಿಂದ ಬರೆದ ಲೇಖನಗಳು ಇದರಲ್ಲಿವೆ.

ಇವುಗಳಲ್ಲಿ ಪತ್ರಿಕಾ ಲೋಕದಲ್ಲಿ ಪತ್ರಕರ್ತರ ಎಡವಟ್ಟಿನಿಂದ ಆದ ಅವಾಂತರಗಳನ್ನು, ಎಡಬಿಡಂಗಿತನವನ್ನು, ಒಳ ಸಂಬಂಧಗಳನ್ನು ವಿಡಂಬನೆ ಮತ್ತು ಹಾಸ್ಯದ ಲೇಪನದಿಂದ ನವಿರಾಗಿ ಬರೆದಿದ್ದಾರೆ.

ಕಂಪ್ಯೂಟರ್  ಬಳಕೆಗೆ ಬರುವ ಮೊದಲಿನ ಪತ್ರಿಕಾ ರಂಗದ ಗತಿಸ್ಥಿತಿಯನ್ನು, ಕಂಪ್ಯೂಟರ್ ಪತ್ರಿಕಾರಂಗದಲ್ಲಿ ಮೂಡಿಸಿದ ಆತಂಕಗಳನ್ನು , ಪತ್ರಕರ್ತರ ಇರಿಸುಮುರಿಸು ಅನುಭವಗಳ ಪ್ರಸ್ತುತಿಯೊಂದಿಗೆ ನವಿರಾದ ಹಾಸ್ಯ ಲೇಪನ ಕೊಟ್ಟು ಹೃದ್ಯವಾಗಿಸಿದ್ದಾರೆ‌.

ಕಂಪ್ಯೂಟರ್ ಹೊಸತಾಗಿ ಬಂದಾಗ ಅದರ ಬಳಕೆಯಲ್ಲಿ ಆತಂಕಗೊಂಡು ಸುಖಾಸುಮ್ಮನೆ ಪೇಚಿಗೊಳಗಾದ ಪತ್ರಕರ್ತರ ಕುರಿತು ಹಾಸ್ಯಮಯವಾಗಿ ಚಿತ್ರಿಸಿದ್ದಾರೆ. ‌ 

ಕುಟುಂಬ ನಿಯಂತ್ರಣ ಯೋಜನೆಯ ಪ್ರಚಾರದ ಸಂದರ್ಭದಲ್ಲಿ ಕಾಂಡೋಮ್ ಪಡಿತರ ಅಂಗಡಿಯಲ್ಲೂ ಲಭ್ಯ ಎಂದು ಪತ್ರಿಕೆಯಲ್ಲಿ ಪ್ರಕಟವಾಗುವ ಬದಲು ‘ಪಂಡಿತರ ಅಂಗಡಿಯಲ್ಲೂ ಲಭ್ಯ’ ಎಂದು ಪ್ರಕಟವಾದಾಗ ಆದ ಅವಾಂತರ- ಇಂತಹ ಹತ್ತು ಹಲವು ತಮಾಷೆಯ ಪ್ರಸಂಗಗಳು ಇದರಲ್ಲಿ ಇವೆ.

ಸಾವಿನ ಕುರಿತಾದ ತಪ್ಪು ವರದಿಯಿಂದಾಗಿ ಬೇಸ್ತುಬಿದ್ದ ವರದಿಗಾರರ ಹಳವಂಡದ ಕುರಿತಾಗಿ ಹಾಸ್ಯದ ಚಟಾಕಿ ಹಾರಿಸಿದ್ದಾರೆ‌.

ಪ್ರೌಢ ಶಾಲೆಯ ಚಂದದ ಹುಡುಗಿಯ ಚಿತ್ರ ಪತ್ರಿಕೆಯಲ್ಲಿ ಪ್ರಕಟವಾಗಿ ಅವರ ಕುಟುಂಬ ಕಿರಿಕಿರಿ ಅನುಭವಿಸಿ ಊರಿಗೆ ವಾಪಸು ಆದ ಪ್ರಸಂಗ ಇಲ್ಲಿದೆ.

ಕೊಟ್ಟೂರಿನ ಯಜಮಾನ್ರು ತಾವು ” ಸತ್ತ ಸುದ್ದಿ” ಓದಿ ಸಿಟ್ಟಿಗೆದ್ದರೆ ಮಂಗಳೂರಿನ ಇನ್ನೊಬ್ಬರು ತಮ್ಮ “ಸಾವಿನ ಸುದ್ದಿ” ಓದಿ ತಮಾಷೆ ಮಾಡಿ ತಿದ್ದುಪಡಿ ಹಾಕಿಸಿಕೊಂಡರು‌.

ಇಂತಹ ನಲ್ವತ್ತು ಪ್ರಸಂಗಗಳು ಇದರಲ್ಲಿ ಇವೆ.

ಇವು ಲಘುಪ್ರಬಂಧಗಳಲ್ಲ. ಬದುಕಿನಲ್ಲಿ ಮನುಷ್ಯರ ಕ್ಷುದ್ರತೆ, ಮೋಸ, ವಂಚನೆ, ಅಪರಾಧ, ಕರುಣೆ, ಪ್ರಾಣಿದಯೆ‌ ಮುಂತಾದ ವಸ್ತುಗಳು ಇರುವ ಇವನ್ನು ಓದಿಯೇ ಅನುಭವಿಸಬೇಕು. ಕೇವಲ ಹಾಸ್ಯ ಪ್ರಸಂಗಗಳು ಮಾತ್ರವಲ್ಲ, ಮೌಲ್ಯಗಳನ್ನು ಸಾರುವ ಮೌಲ್ಯಯುತ ಬರಹಗಳು ಇದರಲ್ಲಿವೆ.

ಮನರಂಜನೆಗಾಗಿ ಬರೆದವುಗಳಲ್ಲ‌, ನಮ್ಮ ಸದ್ವರ್ತನೆಗೆ ದಾರಿದೀಪದಂತಿವೆ. 

ಇವರದ್ದೇ ಆದ ವಿಶಿಷ್ಟ ಶೈಲಿ, ವಿಡಂಬನೆ, ಹಾಸ್ಯ ಮತ್ತು ಕರುಣೆ ಇವು ಇವರ ಬರಹಗಳ ಲಕ್ಷಣಗಳು‌.

‍ಲೇಖಕರು Admin

16 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading