ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳೆ ಬರುವ ನಂಬಿಕೆಯಿಲ್ಲ

-ಮಹಾದೇವ ಬಸರಕೋಡ

ಕನಸುಗಳ ದಾರಿಯಲಿ..

ಬೆಳಗಿನಿಂದ ಸಂಜೆಯ ತನಕ
ಮೈ ಮುರಿದು ದುಡಿ ದುಡಿದು
ಸೋತು ಸುಣ್ಣವಾದರೂ
ದಣಿವಿಲ್ಲ ಒಂದಿನಿತು

ಬೇಸಿಗೆಯ ಮಧ್ಯಾಹ್ನದುರಿ ಬಿಸಿಲು
ಬಿಸಿಗಾಳಿ ಧೂಳರೆಸುತಿದೆ ಕಣ್ಣಿಗೆ
ಬಂಜರು ನೆಲವ ಹಸುರಾಗಿಸುವ
ನೂರಾರು ಕನಸುಗಳ ಕಂಡು
ಬಿತ್ತುತಿರುವರು ಬಿಡುವಿಲ್ಲದೆ
ಬರಿದು ಮಣ್ಣಿನೆದೆಗೆ ಬೀಜಗಳನು

ಮಳೆ ಬರುವ ನಂಬಿಕೆಯಿಲ್ಲ
ಬಿತ್ತಿದ್ದು ಬೆಳೆಯಾಗಿ
ತೆನೆದೂಗುವ ನಿರೀಕ್ಷೆಯೂ ಇಲ್ಲ
ಬೆಳೆದರೂ ಉಳಿಯುವ ಮಾತೂ
ತೀರ ದೂರ ದೂರವೇ
ಹಾಗೋ-ಹೀಗೋ ಬಂದರೂ
ಚೂರು ಪಾರು ಫಸಲು
ಬೆಲೆ ಸಿಗದು ಬೆವರ ಹನಿಗೆ

ಚಿಂತೆಯ ನೇಗಿಲು ಗೆರೆ
ಬಾಡಿದ ಮೊಗದ ಮೇಲೆ
ಮೈ ತುಂಬ ಚುಚ್ಚುವ ಸಾಲದ ಮುಳ್ಳು
ನಿಟ್ಟುಸಿರು ಕಣ್ಣೀರಿನಾಷಾಢದಲಿ
ಬೆಳೆದದ್ದು ಬರಿ ಹಸಿವೆ
ಬದುಕೆಲ್ಲ ತರಗೆಲೆ ಬಿರುಗಾಳಿಗೆ

ತಮ್ಮ ಮನೆಯ ಒಲೆಯಲಿ
ಕಾಣದಿದ್ದರೂ ಹೊಗೆ
ದುಡಿಯುತ್ತಲೇ ಇರುತ್ತಾರೆ
ಮೈ ಬಾಗಿಸಿ, ತಲೆ ತಗ್ಗಿಸಿ
ಇತರರ ಸಾವಿರ ಒಲೆಗಳ
ಹೊತ್ತಿಸುವ ಮಹದಾಸೆ ಹೊತ್ತು
ಅದೇಷ್ಟೆ ಕತ್ತರಿಸಿದರೂ
ಕನಸುಗಳ ಕುಡಿಯನು
ಮತ್ತೆ ಚಿಗುರುತ್ತಲೇ ಇರುತ್ತವೆ
ಇಂದಲ್ಲ ನಾಳೆ
ಹಸಿರು ತೊಟ್ಟೀತು ಇಳೆ
ಒಂದಿನಿತಾದರೂ ತಣಿದೀತು
ಹಸಿದವರ ಒಡಲುರಿಯ ಬೇಗೆ


ಅಮೀನಗಡ-587112
9902755950

‍ಲೇಖಕರು Admin

17 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading