-ಬಾಗೂರು ಮಾರ್ಕಾಂಡೇಯ
ಸತ್ತವರ ಹಿಂದೆ ಯಾರು ಹೋಗುತ್ತಾರೆ.
ಈಗ ನಾನು
ನಿಂತಿದ್ದೇನೆ ಚಿತೆಯೆದುರು
ದಗದಗಿಸುವ ಬೆಂಕಿಯ ಕನ್ನಾಲಿಗೆ
ಚಾಚಿ ಬಾಚಿ ಬಳಿದಿದೆ ದೇಹವನು
ಸುಟ್ಟು ಕರುಕುಲಾಗಿ ಭಸ್ಮವಾಗಿದೆ
ಕ್ಷಣಮಾತ್ರದಿ
ಅಡಿಗಿಟ್ಟ ಒಣ ಕಟ್ಟಿಗೆ ಕೊಬ್ಬರಿ ತುಪ್ಪ
ಹಚ್ಚಿದ ಕೊಳ್ಳಿ ತಾಗಿದ ಕ್ಷಣ
ದಗ್ಗನೆದ್ದು ಉರಿ ಎದ್ದಿದೆ ಎದೆಮಟ್ಟ
ಬೋರ್ ಎನ್ನುತ್ತಿದೆ ಕಿಡಿ ಸಿಡಿದು
ರಕ್ತಮಾಂಸ ಮೂಳೆಗಳು
ಬೆಂಕಿಯಲಿ ಬೂದಿ
ಅತ್ತು ಕರೆಯುವ ಹೆಂಡತಿ ಮಕ್ಕಳು
ಮನೆಯ ತುಂಬಿದ ನೆಂಟರು
ಬಂಧುಬಳಗ ಜನಸ್ಥೋಮ
ಸ್ಮರಿಸುವ ಉಪಕೃತರು
ಮನದೊಳಗೆ ಮಂಡಿಗೆ ತಿನ್ನುವ ಕೆಲವರು
ಹನಿಗಣ್ಣಾಗಿಸಿ ಮೂಖವಿಸ್ಮಿತರು
ಈಗಿದ್ದು ಇಲ್ಲವಲ್ಲ ಎನ್ನುವರು
ಒಬ್ಬೊಬ್ಬರೇ ಸರಿದು ಹೋಗುವರು
ಒಂಟಿಯಾಗುವ ಪತ್ನಿ
ತಂಟೆಯ ನೆನಪ ಸಂಪುಟ
ತೆರೆದಷ್ಟು ದುಃಖ ಉಮ್ಮಳಿಕೆ
ಅತ್ತು ಅತ್ತು ದನಿ ಸಣ್ಣಾಗಿದೆ
ಕಣ್ಣೀರು ಬತ್ತಿದೆ
ಬರಿ ಉಸಿರ ಮಾತು
ಯಾರಿಗೂ ಕೇಳಿಸದು
ಚಿತಾಭಸ್ಮ ವನು ನದಿಗೆ ಸುರಿದರೆ
ನೆನಪುಗಳ ಅಳಿಸಲಾರದೆ
ಹಿಂಡುವ ಮೈಮನಸಿನ ಭ್ರಮೆ
ಕಣ್ಣು ಮುಚ್ಚಿ ಬಿಡುವಷ್ಟರಲಿ
ಬದಲಾದ ಪರಿಸ್ಥಿತಿ
ಒಬ್ಬರ ಕತೆ ಮುಗಿದೇ ಹೋಯಿತೆ
ಯಾರಿದರ ಸೂತ್ರದಾರ
ಏನಿದರ ಅರ್ಥ
ಅಗೋಚರವೆನಿಸುವ ತತ್ವ ಸುಖ
ಮಸಣ ವೈರಾಗ್ಯದ ಮಾತು
ತಿಕ್ಕಲು ಬಾಲ್ಯ ಯೌವ್ವನ
ಮುಪ್ಪು ಮತ್ತೆಲ್ಲಿಗೆ ಪಯಣ
ಯಾವುದು ಋಣ
ಬಂಧ ಸಂಬಂಧಗಳಾವು
ಸತ್ತವರ ಹಿಂದೇಕೆ ಹೋಗಲಿಲ್ಲ
ನಿಲ್ಲು ಎಂದರು ಕೇಳಲಿಲ್ಲ….






0 Comments