ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂಜರು ಭೂಮಿ

-ಜಿ.ಪಿ.ಬಸವರಾಜು

ಕುರುಕ್ಷೇತ್ರ ಯುದ್ಧಾನಂತರ ಕುಂತಿಯ ಸ್ವಗತ

ಸ್ವಗತ ೧ : ಬಂಜರು ಭೂಮಿ

ಕುಣಿಕುಣಿದು ದಣಿದ ಹೆಜ್ಜೆಗಳೆಲ್ಲ ಕುಸಿದು ಬಿದ್ದಿವೆ
ಗೆಜ್ಜೆಗಳೆಲ್ಲ ಒಡೆದು ಚೂರುಚೂರಾಗಿ ನೆಲಕಚ್ಚಿವೆ
ಮುಗಿಲು ಮುಟ್ಟಿದ ವಿಜಯ ಘೋಷಗಳ ಸದ್ದಡಗಿ
ಮಸಣ ಬಾಯ್ತರೆದು ನೋಡುತಿದೆ ಮೌನ ಆಕಾಶವನು

ಬರಡಾದ ಕುರುಭೂಮಿ ಹೆರಲಾರದು ಇನ್ನು, ಒಡಲು
ಬರಿದಾಗಿದೆ, ಜೀವಕಣ ಹೆಣಗಳಾಗಿ ಎಲ್ಲೆಲ್ಲು ಚೆಲ್ಲಾಡಿ
ಕುಡಿಕುಡಿದು ನೆತ್ತರನು, ಮತ್ತೇರಿ, ಏಳಲಾರದೆ ಬಿದ್ದು
ನವೆಯುತಿದೆ ಕುರುಭೂಮಿ , ಹನಿಹನಿಯಲ್ಲ ಕಣ್ಣೀರು
ಹೊಳೆಹೊಳೆಗಳೇ ತುಂಬಿ ಹರಿದು ಕೆಸರಾಗಿದೆ ನೆಲ

ವೀರರೊ ಧೀರರೊ ಯುವಕರೊ ಜೀವರಸ ಉಕ್ಕಿಸುವ
ವೀರ್ಯವಂತರೊ, ಗುರುತಿಸುವುದು ಹೇಗೆ ಈ ರುಂಡ-
ಮುಂಡಗಳ ಚೆಲ್ಲಾಟದಲ್ಲಿ; ಎತ್ತರಕೆ ಎದ್ದ ಮೂಳೆಗುಡ್ಡ
ಕೊಳತು ನಾರುವ ಮಾಂಸ ಮಜ್ಜೆ; ಬೆದರಿ ದೂರ ದೂರ
ಹೋಗಿರುವ ರಣಹದ್ದು ಸಂಕುಲ; ರಣರಣಿಸುತ್ತಿದೆ ಗಗನ
ಉರಿದುರಿದು ಕಪ್ಪಾಗಿ ನಡು ಹಗಲಿಗೇ ಇಳಿದು ಕಾರಿರುಳು

ಜೀವದ ನೆರಳೂ ಸುಳಿಯದು ಈ ಬಂಜೆ ನೆಲದಲ್ಲಿ, ವಿಜಯದ
ಭೂತ ಕುಣಿಯುತ್ತಿದೆ ಸೋತವರ ಗೆದ್ದವರ ಸತ್ತವರ ವಿಕಾರಗಳ
ತುಳಿಯುತ್ತ, ನೆತ್ತರ ಕೆಸರಲ್ಲಿ ಹೂತ ಹೆಜ್ಜೆಗಳ ಕೀಳುತ್ತ ಕೀಳುತ್ತ

ಈ ಬಂಜೆಭೂಮಿ ಹೆರುವುದಿಲ್ಲ ಇನ್ನು
ಇಲ್ಲಿ ಬೇರಿಲ್ಲ, ಬೀಜವಿಲ್ಲ, ಉಸಿರಿಲ್ಲ
ಮಳೆಕರೆವ ಹಸಿರಿಲ್ಲ, ಬಂಜರು ಬಂಜರು
ಈ ಭೂಮಿ, ಈ ಕ್ಷೇತ್ರ, ಕುರುಕ್ಷೇತ್ರ ಬಂಜರು

ಸ್ವಗತ ೨. ನದಿಯ ನೆಮ್ಮದಿ

ಉಕ್ಕು ಸೊಕ್ಕುಗಳೆಲ್ಲ ಕಳೆದು
ಶಾಂತವಾಗಿದೆ ನದಿ
ಗುಡ್ಡಬೆಟ್ಟಗಳಿಂದಿಳಿದು
ರಭಸದಲಿ ನುಗ್ಗಿ
ಕಾಡು ಹೊಕ್ಕು
ಕಣಿವೆಗಳಲ್ಲಿ ಇಳಿದಿಳಿದು
ಪ್ರಪಾತಗಳಲ್ಲಿ ಅಬ್ಬರಿಸಿ
ದಣಿದಣಿದು ಬಂದಿದೆ ನದಿ
ಸಮತಟ್ಟು ಬಯಲಿಗೆ ಈಗ

ಬಯಲು ಸಿಕ್ಕಿದೆ ಬಯಲು
ಎಲ್ಲ ಬಯಲೋ ಬಯಲು

ತಣ್ಣಗಾಗಿದೆ ಧಗಧಗ ಉರಿದ ಒಡಲು
ಬೂದಿಯೂ ಆರಿ ಬರಿದಾಗಿದೆ ಎಲ್ಲ
ಉದ್ವೇಗ ಉನ್ನಾದಗಳೆಲ್ಲ ಇಳಿದು
ಶಾಂತವಾಗಿದೆ ನದಿಯು

ಹಂಬಲಗಳಿಲ್ಲ ತುಂಬಿಕೊಳ್ಳುವ ಬಯಕೆಗಳಿಲ್ಲ
ಮೋಡಗಳಿಲ್ಲದ ಖಾಲಿ ಖಾಲಿ ಆಕಾಶ
ಭರಭರನೆ ಸುತ್ತಿ ಸುಳಿದು ಸುಮ್ಮನಾಗಿದೆ ಗಾಳಿ

ನೋಟ ಹರಿದಷ್ಟೂ ಕಣ್ಣುತುಂಬುವ ಬಯಲು
ಬರಿದು ಬರಿಬರಿದು ಬರಿಯ ಬಯಲು
ನಂಟಿಲ್ಲದ ಅಂಟಿಲ್ಲದ ಬದುಕಿನ ಸಿಕ್ಕಿಲ್ಲದೆ
ಸುಮ್ಮನಾಗಿದೆ ಸುಮ್ಮಾನ

ಆಹಾ ನದಿಯೇ
ನೆಮ್ಮದಿಯೇ
ಸಮತಟ್ಟು ನೆಲವೇ

ಉಕ್ಕದ ಸೊಕ್ಕದ
ನಿಲ್ಲದೆಯೂ ನಿಂತಂತೆ ತೋರುವ ನದಿಯೇ
ಮಲಗಿಬಿಡು ಸುಮ್ಮನೆ, ತಟ್ಟಿ ಮಲಗಿಸಲಿ ಈ ಗಾಳಿ,
ತಟ್ಟಿ ಮಲಗಿಸಲಿ ಈ ಭೂಮಿ, ತಟ್ಟಿ ಮಲಗಿಸಲಿ ಈ ಬಯಲು ;

ಈ ಗಳಿಗೆಯಲಿ ಯುದ್ಧಗಳಿಲ್ಲ ಸೋಲುಗೆಲುವುಗಳಿಲ್ಲ ಥಳಥಳಿಸುವ
ಸಿಂಹಾಸನಗಳಿಲ್ಲ, ಎಲ್ಲದರ ಆಚೆಗೆ ಸರಿದು ನೋಡುವ ನೋಟವೇ ,
ನೆಮ್ಮದಿಯೇ
ಉಳಿದು ಬಿಡಲಿ ಈ ಕಾಲ ಹೀಗೆಯೇ ಹೀಗೆಯೇ
ಹೀಗೆಯೇ
ಈ ನದಿಯ ಹಾಗೆಯೇ

‍ಲೇಖಕರು Admin

17 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading