ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಲಿನ ಬೆಲೆ…!

–ಎಚ್. ಗೋಪಾಲಕೃಷ್ಣ

ಮೊನ್ನೆ ಅಂದರೆ ಮೊನ್ನೆನೇ ಅಲ್ಲ, ಕಳೆದವಾರ ಅಂತ ಇಟ್ಕಳಿ. ನಮ್ಮನ್ನು ಈ ಪ್ರಜಾಪ್ರಭುತ್ವ ದಲ್ಲಿ ಆಳುವ ಮಹಾಪ್ರಭುಗಳು ಒಂದು ದಿವಸ ನಮ್ಮ ಬಸ್ ದರ ಏರಿಸಿಬಿಟ್ಟರು, ಅದರ ಮೂರನೇ ದಿವಸಕ್ಕೆ ಹಾಲಿನ ದರ ಏರಿಸಿಬಿಟ್ಟರು ತಾನೇ? ಇದು ಅಂದರೆ ಬಸ್ ದರ ಹಾಲಿನ ದರ ಏರಿಸಿದ್ದು ಹಿಂದು ಮುಂದು ಆಗಿರಬೋದು, ಆದರೆ ಏರಿಸಿದ್ದು ನಿಜ ತಾನೇ? ಅದೂ ನವಂಬರ್ ತಿಂಗಳಲ್ಲಿ ನಮ್ಮ ರಾಜ್ಯೋತ್ಸವದ ತಿಂಗಳಿನಲ್ಲಿ ಏರಿಕೆ ಆಯ್ತಲ್ಲಾ ಆಗ ನಾವು ಎಪ್ಪತ್ತೈದು ಎಂಬತ್ತರ ಯುವಕರು ಏರಿಸಿ ಹಾರಿಸಿ ಕನ್ನಡದ ಬಾವುಟ ಎಂದು ಉತ್ಸವ ಆಚರಣೆ ಬದಲು ಮಾಡಿದೆವು. ಏರಿಸಿ ಏರಿಸಿ ಏರಿಸಿ ನಂದಿನಿಯ ಏರಿಸಿ ಏರಿಸಿ ಏರಿಸಿ ಅಂತ ಒಂದು ಸ್ಲೋಗನ್ ಇದ್ದರೆ ಮತ್ತೊಂದು ಹಾರಿಸಿ ಹಾರಿಸಿ ಹಾರಿಸಿ ಕರ್ನಾಟಕದ ಬಸ್ಸನ್ನು ಆಕಾಶದೆತ್ತರಕೆ ಹಾರಿಸಿ ಹಾರಿಸಿ ಹಾರಿಸಿ ಅಂತ ಇತ್ತು. ಎರಡನೇ ಸಾಲು ಆಳ್ ಕನ್ನಡ ತಾಯ್ ಬದಲು ಆಳ್ ಕನ್ನಡ ಮಂತ್ರಿ ಎಂದು ಇದ್ದವು. ಬಾಳ್ ಕನ್ನಡ ತಾಯ್ ಬದಲಿಗೆ ಬಾಳ್ ಮಂತ್ರಿ ಮಹೋದಯ ಎಂದು ಖೋರೇಸ್ ಹಾಡಿದೆವು. ಈ ನಮ್ಮ ಹಾಡು ಒಂದು ರೀತಿ ವೈರಲ್ ಆಗಿ ಎಲ್ಲಾ ರಾಜ್ಯೋತ್ಸವದ ಸಮಾರಂಭಗಳಲ್ಲೂ ಮಿಂಚಿದವು.
ಮಂತ್ರಿಗಳ ಭಾಷಣದ ಹಾಗೆ ನಿಮ್ಮನ್ನು ಎಲ್ಲೆಲ್ಲಿಗೋ ಎಳೆದುಕೊಂಡು ಹೋಗ್ತಾ ಇದೀನಿ, ಕ್ಷಮಿಸಿ ಬಿಡಿ.

ಬಸ್ ದರ ಏರಿಕೆ ಆದಾಗ ಹೇಗೆ ಶಾಪ ಕೊಟ್ಟೆವು ಅಂತ ಆಗಲೇ ನಿಮಗೆ ಹೇಳಿದ್ದೀನಿ ಅಂತ ಕಾಣುತ್ತೆ. ಈಗ ಹಾಲಿನ ಸುದ್ದಿಗೆ ಬಂದೆ. ಹಾಲು ಬಸ್ಸು ಎರಡೂ ನಮ್ಮ ಅವಿಭಾಜ್ಯ ಅಂಗಗಳು, ಆದರೂ ಹಾಲು ಒಂದು ಗುಲಗಂಜಿ ತೂಕ ಹೆಚ್ಚಿನದು. ಯಾಕೆ ಅಂತೀರಾ? ನಾವು ಸೀನಿಯರ್ ಮೋಸ್ಟ್ ಸಿಟಿಜನ್ಸು ಬಸ್ಸಲ್ಲಿ ಹೋಗೋದು ಬರೋದು ಅದೂ ನಮ್ಮದೇ ಖರ್ಚಿನಲ್ಲಿ ತಿಂಗಳಿಗೆ ಒಂದೋ ಎರಡೋ ಸಲ ಅಷ್ಟೇ, ಅದೂ ಇಲ್ಲೇ ಹತ್ರ ಹತ್ರ. ಡಾಕ್ಟರ ಮಾತ್ರೆ ಬರೆಸಿಕೊಂಡು ಬರೋಕ್ಕೆ, ಯಶವಂತಪುರಕ್ಕೆ ಹೋಗಿ ವೋಲ್ ಸೇಲ್ ದರದಲ್ಲಿ ಕಡ್ಲೆ ಮಿಠಾಯಿ, ಪಾಕಂ ಪೊಪ್ಪು ತರಲು, ಅಪರೂಪಕ್ಕೆ ಮಸಾಲೆ ತಿನ್ನಲು ಅಷ್ಟೇ. ಊರು ಗೀರು ಮಂತ್ರಾಲಯ, ತಿರುಪತಿ, ಶಿರಡಿ, ಗೊರವನಹಳ್ಳಿ.. ಈ ತರಹ ಜಾಸ್ತಿ ದೂರ ಹೋಗಬೇಕು ಅಂದರೆ ಅದರ ಹೊಣೆ ನಮ್ಮ ಪ್ರೆಸೆಂನ್ಸ್ ಯಾರಿಗೆ ಬೇಕೋ ಅವರದು. ಇದು ಎಲ್ಲಾ ಸೀನಿಯರ್ಸ್ ಹಣೆಬರಹ ಯಾನೆ ಜಾತಕ ತಾನೇ?

ಆದರೆ ಹಾಲಿನ ವಿಷಯಕ್ಕೆ ಬಂದರೆ ಇದು ಪ್ರತಿ ಗಂಟೆ ಎರಡು ಗಂಟೆಗೆ ನಿಮ್ಮ ಎದೆ ನೋವು ಬರಿಸುವ ವಿಷಯ. ರಿಟೈರ್ ಆದಮೇಲೆ ಮಿಕ್ಕ ಎಲ್ಲಾ ಚಟಗಳನ್ನೂ ನೀವು ಬಿಟ್ಟು ಬಿಡ್ತೀರಿ. ಕಾಸಿಲ್ಲ ಅನ್ನೋದು ಮುಖ್ಯ ಕಾರಣ.ಮನೇಲಿರೋ ದೆವ್ವದ ಕಾಟ ನನ್ನನ್ನು ಚಟ ಬಿಡೋ ಹಾಗೆ ಮಾಡ್ತು ಅಂತ ಖಾಸಗಿಯಾಗಿ ಮುದುಕರು ಮಾತಾಡಿಕೊಳ್ಳುವುದು ನನಗೆ ಸ್ವಂತ ಅನುಭವ. ಅಜ್ಜಿಯರ ಗುಂಪಿನಲ್ಲಿ ದೆವ್ವದ ಮಾತು ಬಂದರೆ ಅದು ಗಂಡ ಎಂದೂ ತಾತದಿರ ಗುಂಪಿನಲ್ಲಿ ದೆವ್ವ ಶಬ್ದ ಬಂದರೆ ಅದು ಹೆಂಡತಿ ಎಂದೂ ಎಲ್ಲರಿಗೂ ಗೊತ್ತಿರುವ ಓಪನ್ ಸೀಕ್ರೆಟ್.

ಹಾಲಿನ ದರ ಏರಿದ ಕೂಡಲೇ ನಮಗೆ ಬಿಪಿ ಶೂಟ್ ಆಯಿತು. ಬೆಳಿಗ್ಗೆ ವಾಕಿಂಗ್ ಸೇರಿದ್ದ ಮುದಿಗಳು ಕಲ್ಲು ಬೆಂಚಿನ ಮೇಲೆ ಕೂತೆವು. ಇನ್ನುಮೇಲೆ ಕಾಫಿ ನಿಲ್ಲಿಸಿ ಬಿಡೋಣ ಎಂದು ಒಂದು ಸೀನಿಯರ್ ಸಲಹೆ ಕೊಟ್ಟಿತು.

ಇಪ್ಪತ್ತು ವರ್ಷದಿಂದ ಈ ಅಭ್ಯಾಸ ರೂಡಿಸಿಕೊಂಡು ಬಂದಿದೀವಿ.ಒಮ್ಮೆಲೇ ಈ ಅಭ್ಯಾಸ ಬಿಡಬಾರದು. ವಿತ್ ಡ್ರಾವಲ್ ಸಿಂಡ್ರೋಮ್ ಆಗುತ್ತೆ. ಅದರಿಂದ ಕಾಫಿ ಬಿಡೋ ಯೋಚನೆ ಬಿಟ್ಟು ಪರ್ಯಾಯ ಹುಡುಕೋಣ ಅಂತ ಅಂದುಕೊಂಡರಾ?ಹಾಗೆ ಮಾಡೋದು ಬೇಡಿ. ಹೋಟಲ್ ನವರ ಹತ್ರ ಮಾತಾಡೋಣ ಬನ್ರೀ ಅಂತ ಹಿಂದೆ ಟ್ರೇಡ್ ಯೂನಿಯನ್ ಲೀಡರ್ ಆಗಿದ್ದ ಒಬ್ಬರು ಸಲಹೆ ಕೊಟ್ರಾ?
ವಾಕಿಂಗ್ ನಂತರ ಇಡ್ಲಿ ವಡೆ ಕಾಫಿ ಮುಕ್ಕುತ್ತಿದ್ದ ಮಾಮೂಲಿ ಶಿವು ಉಪಹಾರಕ್ಕೆ ಹೋದವು. ಯಜಮಾನರ ಗುಂಪು ನೋಡಿ ಓನರ್ ಎಂದಿನ ಹಾಗೇ ಕೈಮುಗಿದು ಹತ್ತಿರ ಬಂದರು.

“ತಿಂಡಿ ರೇಟ್ ಜಾಸ್ತಿ ಮಾಡಿದ್ರಾ… “ಹಿರಿಯರ ಗುಂಪಿನಿಂದ ಒಂದು ದನಿ
“ಇನ್ನೂ ಇಲ್ಲ. ನಾಳೆ ಇಂದ ಮಾಡಿ ಅಂತ ನಮ್ಮ ಮಾಲೀಕರ ಅಶೋಸಿಯೇಶನ್ ಹೇಳಿದೆ…”
“ರೇಟು ಜಾಸ್ತಿ ಆದರೆ ನಾವು ಬರೋಲ್ಲ…”
“ಸರ್ ಹಾಲು ರೇಟು ಜಾಸ್ತಿ ಆಯ್ತಲ್ವಾ? ಹಳೇ ರೇಟ್ ನಲ್ಲಿ ಕೊಡೋದು ಕಷ್ಟ….”ಅಂತ ಓನರ್ ಅವನ ಸಮಸ್ಯೆ ಹೇಳಿಕೊಂಡರೆ ರೇಟ್ ಜಾಸ್ತಿ ಮಾಡಿದರೆ ನಮಗೇನು ಪೆನ್ಷನ್ ಜಾಸ್ತಿ ಆಗಿದೆಯೇ? ನಾವು ಹಳೇ ರೇ ಟೇ ಕೊಡೋದು ಅಂತ ಸೀನಿಯರ್ಸ್.
ಹಿರಿಯರು ಹೋಟೆಲ್ ಓನರ್ ನಡುವೆ ಎರಡು ಮೂರು ಗಂಟೆ ಮಾತುಕತೆ ಆಯ್ತಾ?
ಬೆಳಿಗ್ಗೆ ಒಂಬತ್ತು ಗಂಟೆವರೆಗೆ ಹಳೇ ರೇಟ್ ಇಡಿ, ಅಷ್ಟರಲ್ಲಿ ಸೀನಿಯರ್ಸ್ ಬಂದು ಹೋಗ್ತಾರೆ, ತಿಂಡಿ ರೇಟು ಮದ್ಯಾಹ್ನ ಏರಿಸಿ ಅದರಲ್ಲಿ ಸರಿ ತೂಗಿಸಿ, ರಾತ್ರಿ ರೇಟ್ ಡಬಲ್ ತ್ರಿಬಲ್ ಮಾಡಿ.. ಮೊದಲಾದ ನೂರು ಐಡಿಯಾಗಳು ಬಂದವಾ? ಸ್ಟೋರ್ಮ್ ಇಂಗ್ ಸೇಷನ್ ಆಯ್ತಾ?
ಏನೂ ಒಮ್ಮತಕ್ಕೆ ಬರದೇ ಸುಮಾರು ಹೊತ್ತು ಚರ್ಚೆ ನಡೆದು ಸಭೆ ಬರಕಾಸ್ತು ಅಂತ ಆಯ್ತಾ?

ಓನರ್ ಮತ್ತು ಎಲ್ಡೆರ್ಸ್ ಮೂತಿ ತಿರುಗಿಸಿಕೊಂಡು ಉತ್ತರ ದಕ್ಷಿಣ ಅಥವಾ ಪೂರ್ವ ಪಶ್ಚಿಮ ಆದರಾ? ಸುದ್ದಿ ನಮ್ಮ ಹಿರೇಕನ ಕಿವಿಗೆ ಮುಟ್ಟಿತಾ?
ನಮ್ಮ ಸೀನಿಯರ್ ಮೋಸ್ಟ್ ಹಿರೇಕ ಶೇಷಣ್ಣನ ಎಂಟ್ರಿ ಈಗ ಆಯ್ತು. ಇಂವನ ಬಗ್ಗೆ ತುಂಬಾ ಹಿಂದೆ ನಿಮಗೆ ಹೇಳಿದ್ದೆ. ಮರೆತಿದ್ದರೆ ನೆನಪು ಮಾಡ್ಕಳಿ.ವಯಸ್ಸಲ್ಲಿ ಪುಂಡು ಪೋಕರಿ ಇಂವ. ಈಗಲೂ ಅದೇ ಗುಣ ಇದೆ. ಮನೇಲಿ ಇವನು ಇಷ್ಟ ಪಟ್ಟ ಹುಡುಗಿಯನ್ನು ಮದುವೆ ಆಗಲು ಬಿಡಲಿಲ್ಲ ಎನ್ನುವ ಕಾರಣಕ್ಕೆ ಬ್ರಹ್ಮಚಾರಿಯಾಗಿ ಉಳಿದ ಧೀರ ಗಂಡು ಇವನು. ಮುದುಕರ ಹಿಂಡಿಗೆ ಅಘೋಷಿತ ಲೀಡರು!ಜೀನ್ಸ್ ಪ್ಯಾಂಟು, ಕೆಂಪು ಟಿ ಶರ್ಟು ತೊಟ್ಟು ಕಣ್ಣಿಗೆ ಕರೀ ಕನ್ನಡಕ ಏರಿಸಿ, ಕಾಲಿಗೆ ಸ್ಪೋರ್ಟ್ಸ್ ಶೂ ಹಾಕಿ ಎಂ ಜಿ ರಸ್ತೆ, ಕೇಜಿ ರಸ್ತೆ, ವಿದ್ಯಾರಣ್ಯಪುರ ದ ಮುಖ್ಯ ರಸ್ತೇಲಿ ಹಗಲು ರಾತ್ರಿ ಎನ್ನದೇ ಓಡಾಡ್ತಾ ಇರ್ತದಲ್ಲ ಒಂದು ಮುದುಕ ಅದೇ ಇದು.

ಶೇಷಣ್ಣನ ಎಂಟ್ರಿ ಆಯ್ತಾ? ಎರಡೂ ಕಡೆ ತಕರಾರು ಕೇಳಿದ್ನಾ?
ಅಯ್ಯೋ ಪುಟ್ಟ ಸಮಸ್ಯೆ ಇದಕ್ಕೆ ಯಾಕೆ ಇಷ್ಟು ತಲೆ ಕೆಡಿಸ್ಕೊತಿರಿ… ಅಂತ ಬಾಯಿ ಅಗಲ ಮಾಡಿ ನಕ್ಕ.
“ತುಂಬಾ ಸಿಂಪಲ್ಲು ಸಾಮೀ, ಸಮಸ್ಯೆಗೆ ಪರಿಹಾರ. ಕಾಫಿ ಲೋಟದ ತುಂಬಾ ಕೊಡಬೇಡಿ. ಅರ್ಧ ಇಂಚು ಮೇಲೆ ಜಾಗ ಬಿಡಿ. ಇಡ್ಲಿ ಸೈಜ್ ಒಂದು ಸುತ್ತು ಕಡಿಮೆ ಮಾಡಿ, ವಡೆ ಒಳಗಿನ ತೂತು ದೊಡ್ಡದು ಮಾಡಿ…. ನಮ್ಮಲ್ಲಿ ಬೆಲೆ ಏರಿಸಿಲ್ಲ ಅಂತ ಸಖತ್ ಪಬ್ಲಿಸಿಟಿ ಕೊಡಿ. ಹಳೇ ಗಿರಾಕಿ ಇಲ್ಲೇ ಇರ್ತಾರೆ, ಹೊಸಾ ಗಿರಾಕಿನೂ ಬರ್ತಾರೆ……..”ಅಂತ ಐಡಿಯಾ ಕೊಟ್ಟ ನೋಡಿ….

ಈಗ ಶಿವು ಉಪಾಹಾರ ಗೃಹದಲ್ಲಿ ಕಾಫೀಗೂ ಕ್ಯೂ ನಿಲ್ಲಬೇಕು ಮತ್ತು ತಿಂಡಿಗೆ ಒಂದು ಗಂಟೆ ಕಾಯಬೇಕು…!ಶೇಷಣ್ಣನ ಕಂಡ್ರೆ ಹೋಟಲ್ ಓನರ್ ಓಡಿ ಓಡಿ ಬಂದು ಕೈ ಮುಗಿದು ಕಾಫಿ ತಿಂಡಿ ಅವನೇ ತಂದು ಟೇಬಲ್ ಮೇಲೆ ಇಡ್ತಾನೆ!

‍ಲೇಖಕರು Admin

17 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading