ವರ್ಜೀನಿಯಾ ವೂಲ್ಫ್ ಅವರ ಕಾದಂಬರಿ ಕನ್ನಡ ಅನುವಾದಿತ ಡಾ.ಬಸು ಬೇವಿನ ಗಿಡದ ಅವರ ‘ಲೈಟ್‌ಹೌಸ್’
ಈ ಕೃತಿಯ ಕುರಿತ ನಟರಾಜ ಕುಂಬಾರ ಅವರ ಬರಹ ಇಲ್ಲಿದೆ.
-ನಟರಾಜ ಕುಂಬಾರ
ಇಂಗ್ಲಿಷ್ ಸಾಹಿತ್ಯದ ಓದುಗರಿಗೆ ವರ್ಜೀನಿಯಾ ವೂಲ್ಫ್ ಅವರ ಹೆಸರು ಚಿರಪರಿಚಿತ. ಬಹುತೇಕ ಅವರನ್ನು ಓದಿಕೊಳ್ಳದೆ ಇಂಗ್ಲಿಷ್ ಸಾಹಿತ್ಯದ ಓದು ಪೂರ್ಣವಾಗಲಾರದು.
ನಾವು ಪದವಿಯಲ್ಲಿ ಇದ್ದಾಗ ವರ್ಜೀನಿಯಾ ವೂಲ್ಫ್ ಅವರ ಕವಿತೆಯೊಂದನ್ನು ನಮ್ಮ ಇಂಗ್ಲಿಷ್ ವಿಷಯದ ಪಠ್ಯಕ್ಕೆ ಅಳವಡಿಸಿದ್ದರು.ಆಗಲೇ ಇವರ ಕುರಿತಾಗಿ ಕುತೂಹಲ ಇತ್ತಾದರೂ ಇವರ ಕೃತಿಗಳು ಆಗ ಓದಲು ಸಿಕ್ಕಿರಲಿಲ್ಲ.
ಇತ್ತೀಚೆಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ವರ್ಜೀನಿಯಾ ವೂಲ್ಫ್ ಅವರ ‘ಟು ದಿ ಲೈಟ್ ಹೌಸ್’ ಎಂಬ ಕಾದಂಬರಿಯನ್ನು ಡಾ.ಬಸು ಬೇವಿನ ಗಿಡದ ಅವರು ‘ಲೈಟ್‌ಹೌಸ್’ ಎಂಬ ಹೆಸರಿನಿಂದ ಕನ್ನಡಕ್ಕೆ ತಂದ ಮೇಲೆ ಅವರ ಕೃತಿಯನ್ನು ಓದುವ ಭಾಗ್ಯ ಲಭಿಸಿತೆನ್ನಬಹುದು.
20ನೇ ಶತಮಾನದ 100 ಸರ್ವಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿತವಾದ ಈ ಲೈಟ್‌ಹೌಸ್ ಕಾದಂಬರಿ ಮನುಷ್ಯ ಸಂಬಂಧಗಳು, ಗಂಡು ಹೆಣ್ಣಿನ ನಡುವಿನ ಸಂಕೀರ್ಣತೆಗಳು,ಯುದ್ಧದ ಪರಿಣಾಮಗಳನ್ನು ಬಿಂಬಿಸುತ್ತದೆ.
ಮೂಲತಃ ಕವಯಿತ್ರಿಯಾಗಿದ್ದ ವೂಲ್ಫ್ ಅವರ ಗದ್ಯ ಕೃತಿಗಳಲ್ಲಿಯೂ ಸಹ ಸಹಜವಾಗಿಯೇ ಕಾವ್ಯದ ಲಾಲಿತ್ಯ ,ಭಾವಗೀತಾತ್ಮಕತೆಯ ಶೈಲಿ ಹೇರಳವಾಗಿ ಕಾಣಸಿಗುತ್ತದೆ.
ಇದರಲ್ಲಿ ಕಥೆಯ ಓಘಕ್ಕಿಂತ, ಭಾವನೆಗಳಿಗೆ ಹೆಚ್ಚು ಪ್ರಾಶಸ್ತ್ಯವಿದೆ.ಕಥೆ ನಿಂತ ನೀರಿನಂತೆ ಅಲ್ಲಿಯೇ ಇದ್ದಂತೆ ಭಾಸವಾದರೂ ಸಹ ಅಲ್ಲಿ ಮನುಷ್ಯರ ಮನೋವ್ಯಾಪಾರಗಳು,ಆಲೋಚನಾ ಧಾಟಿಗಳು,ಅವರ ಬಾಹ್ಯ ವರ್ತನೆಗೂ ಆಂತರಿಕ ವ್ಯಕ್ತಿತ್ವಕ್ಕೂ ಇರುವ ಅಂತರ, ಕೌಟುಂಬಿಕ ವ್ಯವಸ್ಥೆಯ ಮಹತ್ವ,ಯುದ್ಧದ ಭೀಕರ ಪರಿಣಾಮಗಳು ಇತ್ಯಾದಿಗಳ ಮೇಲೆ ಬೆಳಕು ಚೆಲ್ಲುತ್ತಾ ಹೋಗುತ್ತದೆ.
ಪ್ರತಿ ಬೇಸಿಗೆಯನ್ನು ಕಳೆಯಲು ತಮ್ಮ ಬೇಸಿಗೆ ಧಾಮಕ್ಕೆ ಬರುವ ರಾಮ್‌ಸೆ ದಂಪತಿಗಳು ಮತ್ತು ಅವರ 6 ಜನ ಪುಟ್ಟ ಮಕ್ಕಳು, ಅವರೊಂದಿಗೆ ಅತಿಥಿಗಳಾಗಿ ಇರಲು ಬರುವ ವಿಲಿಯಂ, ಕವಿ ಆಗಸ್ಟಸ್ ಕಾರ್ಮೈಕಲ್, ಚಿತ್ರ ಕಲಾವಿದೆ ಲಿಲಿ, ಜೋಡಿಗಳಾದ ಮಿಂಟಾ ಮತ್ತು ಪಾಲ್,ರಾಮ್‌ಸೆನ ಶಿಷ್ಯ ಟಾನ್‌ಸ್ಲೇ ಇವರಿಷ್ಟೇ ಜನರ ಸುತ್ತ ಈ ಕಾದಂಬರಿ ಸುತ್ತುತ್ತದೆ.
ಜಗತ್ತು ಈಗ ಇದ್ದಷ್ಟೇ ಯಾವಾಗಲೂ ಇದ್ದುಬಿಡಬೇಕು ಅದು ಬದಲಾಗಬಾರದು ಎಂದು ಬಯಸುವ ಶ್ರೀಮತಿ ರಾಮ್‌ಸೆ ಮೇಡಂ ತನ್ನ ಸುತ್ತ ಕಾಣುವ ಪ್ರತಿಯೊಂದರಲ್ಲೂ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಂತೋಷವನ್ನೇ ಕಾಣಬಯಸುವಾಕೆ. ಸುತ್ತಲಿನ ವಾತಾವರಣವನ್ನು ಲವಲವಿಕೆಯಿಂದ ಇಟ್ಟುಕೊಳ್ಳಬಯಸುವಾಕೆ. ಇವಳೇ ಈ ಕಥೆಯ ಕಥಾನಾಯಕಿಯಾದರೂ ಸಹ ಇವಳು ಪರಿಪೂರ್ಣ ವ್ಯಕ್ತಿತ್ವದ ಮಹಿಳೆಯಲ್ಲ. ಇವಳಲ್ಲೂ ಅನೇಕ ಲೋಪ ದೋಷಗಳಿವೆ, ಮಾನವ ಸಹಜ ದೌರ್ಬಲ್ಯಗಳಿವೆ. ಸಿಕ್ಕಸಿಕ್ಕವರನ್ನೆಲ್ಲ ಜೋಡಿಗಳನ್ನಾಗಿ ಮಾಡಿ ಮದುವೆ ಮಾಡಲು ಮುಂದಾಬೇಕೆನ್ನುವ,ಇನ್ನೊಬ್ಬರ ಜೀವನದ ಬಗ್ಗೆ ಅತಿಯಾಗಿ ತಲೆ ಕೆಡಿಸಿಕೊಳ್ಳುವ ಶ್ರಿಮತಿ ರಾಮ್‌ಸೆ ಮೇಡಂಳ ವ್ಯಕ್ತಿತ್ವ ಎಷ್ಟೋ ಸಲ ಉಳಿದ ಪಾತ್ರಗಳಿಗಷ್ಟೇ ಅಲ್ಲದೆ ಓದುಗರಿಗೆ ಸಹ ಕಿರಿಕಿರಿ ಎನಿಸುವುದುಂಟು. ಆದರೂ ಸಹ ಆಕೆ ತನ್ನ ದೌರ್ಬಲ್ಯಗಳೊಂದಿಗೆ ಇಷ್ಟವಾಗುತ್ತಾಳೆ.ಆಕೆಯೇ ಆ ಮನೆಯ ಕೇಂದ್ರಬಿಂದು.ಅವಳಿಲ್ಲದೆ ಆ ಮನೆಗೆ ಅರ್ಥವೇ ಇಲ್ಲ.
ಮಹಾ ಕೋಪಿಷ್ಠನಾದ ಆಕೆಯ ಗಂಡ ಶ್ರೀ ರಾಮ್‌ಸೆ ಯಾವಾಗಲೂ ತನ್ನ ಬರಹ, ಆವಿಷ್ಕಾರದ ಲೋಕದಲ್ಲೇ ಮುಳುಗುತ್ತಾ ಕುಟುಂಬದ ಎಲ್ಲರ ಮೇಲೂ ಹರಿಹಾಯುತ್ತ ಮಿಲಿಟರಿ ಕಟ್ಟುನಿಟ್ಟನ್ನು ಒಳಪಡಿಸಿದಾತ.ಮೇಡಂ ರಾಮ್‌ಸೆ ಒತ್ತಾಯಕ್ಕೆ ಈ ಬೇಸಿಗೆಧಾಮಕ್ಕೆ ಇರಲು ಬರುವ ಮಿಂಟಾ ಮತ್ತು ಪಾಲ್ ಮೇಡಂ ರಾಮ್‌ಸೆಯ ಸತತ ಬೆಂಬಲದಿಂದ ಪ್ರೇಮಿಗಳಾದರೆ, ಪ್ರಬುದ್ಧರಾದ ವಿಲಿಯಂ ಬ್ಯಾಂಕ್ ಮತ್ತು ಲಿಲಿ ಸ್ನೇಹಿತರಾಗಿ ಇರಲು ಬಯಸುತ್ತಾರೆ.
ಕಥೆಯ ಆರಂಭದಲ್ಲಿ ಮೇಡಂ ರಾಮ್‌ಸೆ ಆರು ವರ್ಷದ ತನ್ನ ಪುಟ್ಟ ಮಗ ಜೇಮ್ಸ್‌ನನ್ನು ತಮ್ಮ ಬೇಸಿಗೆಧಾಮದ ಸಮೀಪದ ಸಮುದ್ರದಲ್ಲಿರುವ ಲೈಟ್ ಹೌಸ್‌ಗೆ ನಾಳೆ ಬೆಳಿಗ್ಗೆ ಕರೆದುಕೊಂಡು ಹೋಗಬೇಕೆನ್ನುವ ಇಚ್ಛೆಯೊಂದಿಗೆ ಕಥೆ ಆರಂಭವಾಗುತ್ತದೆ. ಆದರೆ ಸುಮಾರು 200 ಪುಟಗಳಷ್ಟು ಸಾಗಿದಾಗಲೂ ಲೈಟ್ ಹೌಸ್ ಗೆ ಹೋಗಬೇಕೆನ್ನುವ ಆ ನಾಳೆ ಬಂದಿರುವುದಿಲ್ಲ.
ಅಂದರೆ ಒಂದಿಡೀ ದಿನದಲ್ಲಿ ನಡೆಯುವ ಘಟನಾವಳಿಗಳೇ ಅಲ್ಲಿವರೆಗೂ ಮುಂದುವರಿಯುತ್ತವೆ.
ವರ್ಜೀನಿಯಾ ವೂಲ್ಫ್ ಅವರಿಗೆ ಇಲ್ಲಿ ಯಾವುದೇ ಧಾವಂತವಿಲ್ಲ,ಕಥೆಯನ್ನು ಬೇಗ ಮುಗಿಸಬೇಕೆನ್ನುವ ಗಡಿಬಿಡಿ ಕಾಣುವುದಿಲ್ಲ.ಹೀಗಾಗಿ ಕಥೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬರೀ ಪಾತ್ರಗಳ ವರ್ತನೆಯ ಬಗ್ಗೆ ಬೆಳಕು ಚೆಲ್ಲುತ್ತಾರೆ.
ಹೀಗಾಗಿ ಪ್ರಜ್ಞಾಪ್ರವಾಹ ತಂತ್ರದಲ್ಲಿ ಸಾಗುವ ಈ ಕಥೆಯ ಬಹಳಷ್ಟು ಭಾಗ ಪಾತ್ರಗಳ ಅದರಲ್ಲೂ ಹೆಚ್ಚಾಗಿ ಮೇಡಂಳ ಸ್ವಗತದಲ್ಲಿಯೇ,ಮುಂದುವರಿಯುತ್ತದೆ.
ಅತಿಥಿಗಳಿಗೆ ಏರ್ಪಡಿಸಿದ ಔತಣಕೂಟದ ಸಂಜೆಯ ವಿವರಣಯೇ ಸುಮಾರು 70 ಪುಟಗಳಷ್ಟು ದೀರ್ಘವಾಗಿದೆ. ಊಟದ ಮೇಜಿನ ಮುಂದೆ ಕುಳಿತುಕೊಂಡೇ ಪಾತ್ರಗಳ ಬಗ್ಗೆ ಮನೋವಿಶ್ಲೇಷಣೆ ತೆರೆದುಕೊಳ್ಳುತ್ತದೆ.
‘ಸಮಯ ಸರಿಯುತ್ತದೆ’ ಎಂಬ ಎರಡನೇ ಅಧ್ಯಾಯ ಆರಂಭವಾಗುವಷ್ಟರಲ್ಲಿ ಆಗಲೇ ಕಾಲ ಎಷ್ಟೋ ಮುಂದೆ ಹೋಗಿಬಿಟ್ಟಿದೆ. ತನ್ನ ಪಾಡಿಗೆ ತಾನು ಆರಾಮಾಗಿದ್ದ ಕುಟುಂಬವೊಂದು ಯುದ್ಧದ ಭೀಕರ ಪರಿಣಾಮಗಳಿಗೆ ಈಗಾಗಲೇ ಸಾಕ್ಷಿಯಾಗಿಬಿಟ್ಟಿದೆ.
ಜಗತ್ತು ಯಾವಾಗಲೂ ಹೀಗೆಯೇ ಇರಬೇಕು ಎಂದು ಬಯಸುತ್ತಿದ್ದ ಮೇಡಂ ರಾಮ್‌ಸೆ ಪಾಲಿಗೆ ಜಗತ್ತು ಮೊದಲಿನ ಜಗತ್ತು ಆಗುಳಿದಿಲ್ಲ.ಆಕೆಯ ಸುಂದರ ಕನಸುಗಳು ನಿರ್ನಾಮವಾಗಿವೆ.
ಲೈಟ್‌ಹೌಸ್ ನೋಡಬೇಕೆಂದಿದ್ದ ಪುಟ್ಟ ಜೇಮ್ಸ್‌ನ ಕನಸು ಹತ್ತು ವರ್ಷಗಳ ನಂತರವೂ ಕನಸಾಗಿಯೇ ಉಳಿದಿದೆ.
ಲೇಖಕಿ ವೂಲ್ಫ್ ಇಲ್ಲಿ ಅಸಂಖ್ಯಾತ ರೂಪಕಗಳನ್ನು ಬಳಸಿದ್ದಾರೆ. ಮನೆಯಲ್ಲಿ ಆವರಿಸಿದ್ದ ಕತ್ತಲೆ, ಕಿಟಕಿಯಿಂದ ತೂರಿಬಂದ ಬೆಳಕು, ಮೇಲಕ್ಕೆದ್ದ ಧೂಳಿನ ಕಣ ಎಲ್ಲವೂ ಇಲ್ಲಿ ರೂಪಕಗಳೇ.
ಪ್ರತಿ ನಿರ್ಜೀವ ವಸ್ತುಗಳು ಸಹ ವೂಲ್ಫ್‌ಳ ಮೂಸೆಯಲ್ಲಿ ಜೀವಂತ ಪಾತ್ರಗಳಂತೆ ತೋರುತ್ತವೆ.
ಇನ್ನು ಇಲ್ಲಿ ಬರುವ ಲೈಟ್‌ಹೌಸ್ ಕೂಡ ಒಂದು ದೊಡ್ಡ ರೂಪಕ.ಓದುತ್ತಾ ಹೋದಂತೆ ಕೊನೆಗೆ ಅದು ಕೂಡ ಇವರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಒಂದು ಪಾತ್ರವೇ ಎನಿಸಿಬಿಡುತ್ತದೆ.
ಮನೋವೈಜ್ಞಾನಿಕ ಶೈಲಿಯ ಕಾದಂಬರಿಗಳನ್ನು ಓದುವವರಿಗೆ ಇದು ತುಂಬ ಹಿಡಿಸುತ್ತದೆ.
ಕೊನೆಯದಾಗಿ ಅನುವಾದದ ಬಗ್ಗೆ ಹೇಳಲೇಬೇಕು.ಡಾ.ಬಸು ಬೇವಿನಗಿಡದ ಅವರು ತುಂಬಾ ಚೆನ್ನಾಗಿ ಕನ್ನಡಕ್ಕೆ ಇದನ್ನು ಅನುವಾದಿಸಿದ್ದಾರೆ.
ಬೇರೆ ಭಾಷೆಯ ಕಾದಂಬರಿಗಳ ಯಶಸ್ಸು ಇರುವುದು ಅದರ ಸಮರ್ಥ ಅನುವಾದದಲ್ಲೇ ಎಂದು ಹೇಳಬಹುದು. ಆ ನಿಟ್ಟಿನಲ್ಲಿ ಇದು ಮೂಲಕ್ಕೆ 100% ರಷ್ಟು ನ್ಯಾಯ ಒದಗಿಸಿದೆ.






0 Comments