-ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ರಾಜರೂ ಅಂದರೆ ಈ ಸಮಸ್ತ ಪ್ರದೇಶವನ್ನಾಳುವ ಒಡೆಯರು.ಇಂತಿಷ್ಟೇ ಜಮೀನು ಇಂತಿಷ್ಟೆ ಪ್ರದೇಶ ಅಂತ ಲೆಕ್ಕ ಇರುತ್ತಿದ್ದಿಲ್ಲ, ಕಾರಣ ಅವರ ಆಡಳಿತಕ್ಕೆ ಒಳಪಟ್ಟ ಸರಹದ್ದುಗಳೆಲ್ಲವೂ ಅವರ ಅಧಿಪತ್ಯದಲ್ಲಿರುತ್ತಿದ್ದವು.ವಿಜಾಪುರದ ಆದಿಲ್ ಶಾಹಿಗಳು ಈಗೀನ ಕಿತ್ತೂರು ಕರ್ನಾಟಕ ಕಲ್ಯಾಣ ಕಲಬುರ್ಗಿ ಭಾಗದ ಸಾವಿರಾರು ಎಕರೇ ಭೂಮಿಯನ್ನು ಸಾಗುವಳಿ ಮಾಡಲು ದೇಖರೇಕಿ ಮಾಡಲು ದೇಸಗತಿ ದೇಸಾಯಿಯವರಿಗೆ, ಕುಲಕರ್ಣಿ, ಶಾನುಭೋಗ ,ಗೌಡಕಿ ಮಾಡವರಿಗೆ ಉಂಬಳಿಯಾಗಿ ಕೊಡತಿದ್ರು..ಹೀಗೆ ಕೊಡುವಾಗ ಕರಾರುಪತ್ರ ಕೂಡಾ ಮಾಡತಿದ್ರು. ವರ್ಷಕ್ಕೆ ಇಂತಿಷ್ಟು ಕಂದಾಯ ಕೊಡಬೇಕು. ಹಣ, ಬಂಗಾರ ಅಥವಾ ಅಕ್ಕಡಿಕಾಳು ಯಾವ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಿದ್ದವೊ ಅವುಗಳನ್ನು ಶಾಹಿಗಳಿಗೆ, ಸುಲ್ತಾನರಿಗೆ, ಒಡೆಯರಿಗೆ ಸಲ್ಲಿಸುವ ಪದ್ದತಿಯಿತ್ತು. ಭೂಕಂದಾಯದ ಬೇರೆಬೇರೆ ನಿಯಮಗಳು ಇದ್ವು..ಬಂದ ಫಸಲುಗಳ ಮೇಲೆ ಇಂತಿಷ್ಟು ಕಂದಾಯ ನಿಗದಿಪಡಿಸ್ತಿದ್ರು. ಆಗಾಗ ದಬ್ಬಾಳಿಕೆ ಮುಖಾಂತರ ಪುಂಡಗ೦ದಾಯ ಕೂಡಾ ವಸೂಲಿ ಮಾಡತಿದ್ರು.
೧೯೫೦ರಲ್ಲಿ ಭಾರತ ಸರಕಾರ ಮತ್ತು ಮೈಸೂರು ಒಡೆಯರ ನಡುವೆ ನಡೆದ ಒಪ್ಪಂದದ೦ತೆ ಸಿದ್ಧಾಪೂರದ ಜಮೀನು ಖಾಸಗಿ ಸೊತ್ತು ಎಂದಾಗಿತ್ತು. ಈಗ ಏಕಾಏಕಿ ರಾಜ ಮನೆತವರು ಐದು ಸಾವಿರ ಎಕರೇ ಜಮೀನು ತಮಗ ವಾಪಸ ಕೊಡಸಬೇಕು ಅಂತ ಸರಕಾರಕ್ಕ ಮನವಿ ಮಾಡಿದ ಸುದ್ದಿ ಸಿದ್ಧಾಪೂರದ ಜನರ ನೆಮ್ಮದಿ ಕೆಡಸಿತ್ತು. ಊರ ಮುಖಂಡರು ಆಲದ ಮರದ ಕಟ್ಟಿಗೆ ಜನ ಸೇರಬೇಕು ಅಂತ ಡಂಗರಾ ಸಾರಿದ್ರು.
ಮಧ್ಯಾನ್ಹ ಏರು ಬೀಸಿಲು ಪಂಚೇತಿ ಕಟ್ಟಿಗೆ ಬಂದ ರಾಚಪ್ಪ ತನ್ನ ಮಾತು ಚಾಲು ಮಾಡಿದ. “ ನಮ್ಮ ಮುತ್ಯಾನ ಕಾಲಕ್ಕ ಕೊಟ್ಟ ಈ ಶೇತಕಿ ಜಮೀನು ಏನಿಲ್ಲಂದ್ರು ಮುಕ್ಕಾಲು ಶತಮಾನದ್ದು.ನಮ್ಮಪ್ಪನ ಹೀಸ್ಸೆಗ ಬಂದ ಎರಡು ಕೂರಿಗಿ ಭೂಮಿನ ಇಷ್ಟು ದಿನ ಉಳಿಮಿ ಮಾಡಿಕೊಂಡು ಬದಕಿವಿ.ನಮ್ಮ ಮುತ್ಯಾ ಬಿಳಿಯರ ಕಾಲಕ್ಕನ ಇನಾಮು ಪಡೆದ ಜಮೀನು ಇದು.ಅದೇನೋ ದೇಸಕ್ಕ ಬಿಡುಗಡೆ ಸಿಕ್ಕು ರಾಜರ ಆಳಿಕಿ ಮುಗಿದ ಮ್ಯಾಲು ನಮ್ಮ ಮನೆತನಕ ಬಂದ ಈ ಉಂಬಳಿ ಭೂಮಿನ ನಾವ ಉಪಭೋಗಸ್ತಿದಿವಿ ನಮ್ಮಪ್ಪ ಒಮ್ಮೆ ಊರ ಅಗಸಿ ಬಾಗಲ ಮುಂದ ಸೇರಿದ ಪಂಚೇತಿ ಜನದ ಮುಂದ ಹೇಳಿದ ನೆನಪು ನಾ ಆವಾಗ ನಾಲ್ಕಾರು ವರ್ಷದ ಹುಡುಗ ಇದ್ದೆ, ಮುಗಿನ್ಯಾಗ ಗೊಣ್ಣಿ ಸೋರಸ್ಕೋತ ಅಪ್ಪನ ಹೆಗಲ ಮ್ಯಾಕ ಕುಂತ ಪಂಚೇತಿ ನೋಡಿದ ನೆಪ್ಪು” ಅಂತ ರಾಚಪ್ಪ ಹೇಳತಾ ತನ್ನ ಜಬಲಾದಿಂದ ಒಂದು ತಾಮ್ರದ ತಗಡು ತೋರಿಸಿದಾಗ ಪಂಚಾಯತಿಯವರು, ಇದು ಹಿರಿಯಾರ ಕಾಲದಿಂದ ಇನಾಮು-ಉಂಬಳಿ ಬಂದ ಜಮೀನು,ಇದನ್ನ ರಾಚಪ್ಪನ ಮನೆತನದವ ಉಪಭೋಗಸ್ಲಿ ಅಂತ ತಿರ್ಮಾನಿಸಿದ್ರು.
ರಾಚಪ್ಪ ಮಾತು ಮುಂದುವರೆಸಿದ, “ಈಗ ನಂಗ ವಯಸ್ಸು ಅರವತ್ತರ ಸಮೀಪದಾವು ಇಲ್ಲಿವರೆಗೂ ಜಮೀನಿನ ಪಟ್ಟಾ ನಾವ ತುಂಬಿವಿ.ಅದರ ಉಳಿಮಿ ನಂಬಿ ಮಕ್ಕಳು ಮರಿ ಬದಕಿವಿ.ಈಗ ಒಮ್ಮೆಲೇ ಈ ಜಮೀನು ರಾಜರ ಒಡೆತನದ್ದು ಅಂದ್ರ ನಮ್ಮ ಬಾಳೆವು ಬೀದಿಗೆ ಬಿದ್ರ ಹೆಂಗ ಮಾಡೊದು.ನಮ್ಮಪ್ಪ ಮಾದೇಶಪ್ಪಗ ರಾಜರು ಕೊಟ್ಟ ಇನಾಮಪತ್ರನೋ,ತಾಮ್ರದ ತಗಡೋ ಮತ್ತೊಂದೊ ಉಂಬಳಿ ದಾನಪತ್ರನೋ ಎಲ್ಲದಾವು ಗೊತ್ತಿಲ್ಲ” ಎಂದು ಪಂಚೇತಿ ಸೇರಿದ ಹಿರಿಯರ ಮುಂದ ದೀನತೆಯಿಂದ ರಾಚಪ್ಪ ತನ್ನ ಅಳಲು ತೋಡಿಕೊಂಡ. “ಇತ್ತೀಚೆಗೆ ಹತ್ತಾರು ವರ್ಷಗಳಿಂದ ಪಟ್ಟಾ ಪುಸ್ತಕದಲ್ಲಿ ನಮ್ಮ ಹೆಸರು ಕುಂತೈತಿ..ಈಗ ರಾತ್ರೋ ರಾತ್ರಿ ಈ ಭೂಮಿ ಮಾಲಕ್ರು ನಾವು ಅಂತ ಸಾಬೀತು ಪಡಸಾಕ ಉಂಬಳಿ ಪತ್ರನೋ ಇನಾಮ ಪತ್ರನೋ ಎಲ್ಲಿಂದ ತರೋದು.ಈ ದಾನ ದತ್ತಿ ಮತ್ತೊಂದು ವಗೈರೆ ನಮ್ಮಪ್ಪಗ ಗೊತ್ತು.ಅಗೋ ನೋಡ್ರಿ ಸಾಹೇಬ್ರ ಇದೆ ಹೊಲದಾಗ ನಮ್ಮಪ್ಪನ ಹೂತೆವು ಅವನ್ನ ಎಬ್ಬಿಸಿ ಕೇಳ್ರಿ ಅಂದಾ ರಾಚಪ್ಪಯ್ಯ”
ಇನ್ನೊಬ್ಬ ಮುಖಂಡ ಕೃಷ್ಣಪ್ಪ ಮುಂದು ಬಂದು ದೊಡ್ಡ ದನಿಲೇ ತನ್ನ ಅಹವಾಲು ಹೇಳಲು ಪ್ರಾರಂಭಿಸಿದಾ. “ಸಾಗುವಳಿ ಚೀಟಿ ಅಧಿಕೃತವಾಗಿ ಸರಕಾರದಿಂದ ಕೊಟ್ಟಿದಾರೆ.. ನಮ್ಮ ಮನೆತನದವರು ಸುಮಾರು ಎಪ್ಪತ್ತು ವರ್ಷಗಳಿಂದಲೂ ಇಲ್ಲಿ ವಾಸವಾಗಿದಿವಿ.ಈ ಊರಿನ್ಯಾಗ ಐದಾರು ಸಾವಿರಕ್ಕಿಂತಲೂ ಹೆಚ್ಚಿನ ಜನ ಇಲ್ಲಿದಿವಿ. ಇದೇ ನೆಲದಾಗ ಬದುಕು ಬಾಳೆ ನಡಿಸಿಕೊಂಡು ಬಂದಿವಿ” ಅಂತ ಕೃಷ್ಣಪ್ಪ ಹೇಳಿದ.
ಇಮಾಮ್ ಹುಸೇನ ಮಾತು ಮುಂದವರೆಸಿದ “ ನಮ್ಮ ಹತ್ರಾಕ ಜಮೀನಿಗೆ ಸಂಬ೦ಧಿಸಿದ೦ತೆ ಎಲ್ಲಾ ದಾಖಲೆಗಳಿವೆ. ಸುವರ್ಣವತಿ ಜಲಾಶಯದ ಹಾಗೂ ಚಿಕ್ಕವತಿ ಜಲಾಶಯ ನೀರು ನಮಗೆ ಅಧಾರ.ಇಗೆಲ್ಲಾ ಗ್ರಾಮ ಸಂಪೂರ್ಣವಾಗಿ ಸುಧಾರಿಸೇದ. ಕಂದಾಯ ಗ್ರಾಮ ಅಂತ ಪರಿವರ್ತನೆ ಮಾಡಿ ಸಾರ್ವಜನಿಕ ಗೊಳಿಸಿದ್ರೆ ನಾವು ಭೂ ಕಂದಾಯ ಸರಕಾರಕ್ಕೆ ಸಲ್ಲಸ್ತಿವಿ” ಅಂತ ತನ್ನ ವಾದ ಮಂಡಿಸಿದ. ೧೯೭೮ರಲ್ಲಯೇ ಅಂದಿನ ಪರದಾನಿ ಇಂದಿರಮ್ಮ ಉಳುವವನೇ ಒಡೆಯ ಅಂದಳು ಈ ವರೆಗೂ ಜಮೀನಿನ ವಾರ್ಷಿಕ ಪಹಣಿ ನಾವ ತುಂಬಿವಿ.ದಾನ ಪತ್ರ ಬೇಕೆ ಬೇಕೆಂಬ ಹಠ ರಾಜಮನೆತನದವರದು.ಈಗ ಏನ ಮಾಡೋದ್ರಿ ಸಾಹೇಬ್ರ ಅಂತ ಗೋಗೆರದ
**********************
ಊರಿನ ಪ್ರಮುಖ ಮುಖಂಡ ಶೇತಸನದಿ ಚನ್ನಪ್ಪ ಮೈಸೂರಿನ ಹಿಂದಿನ ಅರಸರನ್ನು ನೆನೆದು ಕಣ್ಣಿರಾದ. ಅವನ ಕಣ್ಣ ಮುಂದ ಇತಿಹಾಸ ಹಾದು ಹೋದಂಗಾತು ರಾಜರನ್ನು ನೆನೆದು ಕಥೆ ಹೇಳಾಕ ಮುಂದಾದ. “ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು ಅಂದರ ಸಾಕ್ಷಾತ್ ದೈವ ಸ್ವರೂಪರೇ ಇದ್ದಂಗ ಇದ್ರು. ಮೈಸೂರು ರಾಜ ಮನೆತನದ ಹತ್ತನೇ ಚಾಮರಾಜ ಒಡೆಯರ ಅವರ ನಿಧನದ ನಂತರ ಮೈಸೂರು ಸಂಸ್ಥಾನ ಪ್ರಪಂಚದ ಭೂಪಟದಲ್ಲಿ ತನ್ನ ವಿಶಿಷ್ಟತೆಯಿಂದ ಜನಮುಖಿ ಸೇವೆಗಾಗಿ ಸೈ ಎನಿಸಿಕೊಳ್ಳಲು ಕಾರಣಕರ್ತರಾದವರೇ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು.
ಗಾಂಧೀಜಿ ಅವರಿಂದ “ರಾಜರ್ಷಿ” ಅಂತ ಬಿರದು ಪಡೆದವರು. ಇದಲ್ಲದೆ ತನ್ನ ನೆಲದ ಜನಸಾಮಾನ್ಯರಿಂದ ‘ನಾಲ್ವಡಿ ಭೂಪ-ಮನೆ ಮನೆ ದೀಪ’ ಅಂತ ಜನ ಸಾಮಾನ್ಯರ ಒಡಲಾಳದ ಬಿರುದನ್ನು ಪಡೆದ ನಾಲ್ವಡಿ ಕೃಷ್ಣರಾಜ ಒಡೆಯರು ಅವರು. ಭಾರತದ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ಸಂಸ್ಥಾನವನ್ನು ಮುನ್ನಡೆಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಅವರಿಗೆ ಸಲ್ಲತದ.” ಅಂತ ಶೇತಸನದಿ ಚನ್ನಪ್ಪ ಗುಣಗಾನ ಮಾಡಿದ.
ನಾಲ್ವಡಿ ಕೃಷ್ಣರಾಜ ಒಡೆಯರು ಅವರ ತಂದೆ ಹತ್ತನೇ ಚಾಮರಾಜ ಒಡೆಯರು ಆ ಕಾಲದಲ್ಲಿ ಜಾರಿಗೊಳಿಸಿದ ಸಾಮಾಜಿಕ-ಶೈಕ್ಷಣಿಕ-ಆಡಳಿತಾತ್ಮಕ ಪ್ರಗತಿಪರ ಚಿಂತನೆಗಳನ್ನು ತಮ್ಮ ಆಳ್ವಿಕೆಯ ಕಾಲದಲ್ಲಿ ಗಟ್ಟಿಗೊಳಿಸಲು ದೃಢನಿರ್ಧಾರ ತೆಗೆದುಕೊಂಡ್ರು. ಈ ನಿರ್ಧಾರದ ಹಿನ್ನೆಲೆಯಲ್ಲಿ ಪಂಚಮರ ಶಾಲೆಗಳು ಯಥೇಚ್ಛವಾಗಿ ಆರಂಭಗೊ೦ಡದ್ದು, ಅವರ ಶಿಕ್ಷಣದ ಈ ಅಭಿವೃದ್ಧಿಗೆ ಸರ್ಕಾರ ಕೂಡಾ ಆರ್ಥಿಕ ಇಲಾಖೆಯಿಂದ ಪ್ರತ್ಯೇಕವಾಗಿ ಅನುದಾನವನ್ನು ಮಂಜೂರಾತಿ ಮಾಡಿತ್ತು, ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್ ನೀಡಿತ್ತು. ವಿದ್ಯಾರ್ಥಿಗಳಿಗೆ ಉಚಿತ ವಸತಿಶಾಲೆ ಆರಂಭಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ ಅಂದು ಕೈಗೊಂಡ ಈ ಶಿಕ್ಷಣಮುಖಿ ಕೆಲಸಗಳು ರಾಜರ್ಷಿಯವರು ಮಾಡಿದ ಪ್ರಮುಖ ಸಾಧನೆಯೇ ಸರಿ. ಅಂತ ಚನ್ನಪ್ಪ ಹೇಳಿದ.
ಇದೆಲ್ಲವನ್ನು ಕೇಳತಾ ನಿಂತಿದ್ದ ಹಿರಿಯನಾದ ಪ್ರಭಯ್ಯ ತನ್ನ ಮಾತು ಮುಂದುವರೆಸುತ್ತ, “ನಾಲ್ವಡಿ ಕೃಷ್ಣರಾಜ ಒಡೆಯರು ಇದಲ್ಲದೆ ಗ್ರಾಮಗಳ ಏಳಿಗೆಗೆ ಕೃಷಿ ಪತ್ತಿನ ಸಂಘಗಳ ಸ್ಥಾಪನೆ ಮಾಡಿದ್ರು, ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಸ್ವಸಹಾಯ ಸಂಘಗಳ ಸ್ಥಾಪನೆ, ಹತ್ತಾರು ಹೊಸ ಕೆರೆಗಳ ನಿರ್ಮಾಣದ ಜೊತೆಗೆ ನೂರಾರು ಪ್ರಾಚೀನ, ಮಧ್ಯಕಾಲೀನ ಹಾಗೂ ಇವರ ಹಿರಿಯರು ನಿರ್ಮಿಸಿದ ಕೆರೆಗಳ ಜೀರ್ಣೋದ್ದಾರ ಕಾರ್ಯವನ್ನು ಅಂತಃಕರಣದಿ೦ದ ಮಾಡಿದ ಕೀರ್ತಿ ನಾಲ್ವಡಿ ಭೂಪರಿಗೆ ಸಲ್ಲತದ” ಅಂತ ಪ್ರಭಯ್ಯ ಗುಣಗಾನ ಮಾಡಿದ.
ಹಿರಿಕನಾದ ವೀರಪ್ಪಜ್ಜ ಮಾತು ಮುಂದುವರೆಸಿದ “ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಆಳ್ವಿಕೆಯಲ್ಲಿ ಕೃಷಿಪದ್ಧತಿಯು ಹಲವಾರು ವಿಭಾಗಗಳಾಗಿ ವಿಂಗಡಣೆಗೊ೦ಡು ಆ ಮೂಲಕ ಕಂದಾಯವನ್ನು ಸಂಗ್ರಹಿಸಿ ಮೈಸೂರು ಸಂಸ್ಥಾನವನ್ನು ಆರ್ಥಿಕವಾಗಿ ಸಬಲೀಕರಣ ಮಾಡಲಾಯಿತು, ನಗರದಲ್ಲಿ ಸುಸಜ್ಜಿತ ಕಟ್ಟಡಗಳು ನಿರ್ಮಾಣಗೊಂಡವು. ಆಧುನಿಕ ಮಾದರಿಯ ಅಂದರೆ ಆಂಗ್ಲರ ಮಾಂಟೇಸರಿ ತರಹದ ಸ್ಕೂಲ್ ತೆಗೆದು ಶತಶತಮಾನಗಳಿಂದಲೂ ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದರು. ಅಂದಿನ ರಾಜರು ತಮ್ಮ ಅಭರಣ, ಹಣ, ಸಂಪತ್ತು ನಾಡಿಗಾಗಿ ಸದ್ವಿನಿಯೋಗಿಸಿದ ಇತಿಹಾಸ ಐತಿ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಜೀವನವನ್ನೇ ಈ ನಾಡಿಗಾಗಿ ಮುಡಿಪಾಗಿಟ್ಟಿದ್ರು. ಅಂತ ವೀರಪ್ಪಜ್ಜನೂ ತನ್ನ ನಾಕ ಮಾತು ಹೇಳಿತ ಭಾವುಕನಾದ. ಚಾಮರಾಜನಗರ ಗಡಿಜಿಲ್ಲೆಯ ಸಿದ್ದಯ್ಯನಪುರ, ಅಟ್ಟಗೋಳಿಪುರಗಳು, ರಾಜಪ್ರಭುತ್ವದ ದಿನಗಳಲ್ಲಿ ಒಡೆಯರ ಆಳ್ವಿಕೆಯಲ್ಲಿತ್ತು. ಸ್ವಾತಂತ್ರ್ಯ ಬಂದು ಎಂಭತ್ತು ವರ್ಷ ಆಗಲಿಕ್ಕೆ ಬಂತು, ಈಗ ಊರೊಗೆ ಊರೇ ಹೊರ ಬೀಳುವ ಭೀತಿ ಎದುರಾಗಿದೆ. ಈ ಹೊಲ, ಮನೆ, ಗದ್ದೆಗಳಲ್ಲಿ ಲಕ್ಷಾಂತರ ಜನರ ಬದುಕಿದೆ ಅಂತ ನೋವಿನಿಂದ ನಿಟ್ಟುಸಿರು ಬಿಟ್ಟ ನಂತರ ಮಾತು ಮುಂದುವರಿಸಿದ ಮತ್ತೋರ್ವ ಮುಖಂಡ ಶಿವಣ್ಣ “ಅಂದಿನ ರಾಜರಾದ ಜಯಚಾಮರಾಜೇಂದ್ರ ಒಡೆಯರು ಆಪ್ತರಿಗೆ ಜನ ಸಾಮಾನ್ಯರಿಗೆ ಭೂಮಿ ದಾನ ಕೊಟ್ಟಿದ್ರು ಹೀಗಾಗಿ ಸಿದ್ದರಾಮಪೂರವನ್ನು “ಜಯಚಾಮರಾಜೇಂದ್ರಪೂರ” ಎಂದು ಕರಿತಿದ್ರು.” ಅಂತ ಆ ಕಾಲದ ಒಡೆಯರು ಮಾಡಿದ ಹಿರಿಮೆಯನ್ನು ಸ್ಮರಿಸಿದ. ಹಳೇ ಮೈಸೂರು ಭಾಗದ ಸಾವಿರಾರು ಕುಟುಂಬಗಳು ಈಗಲೂ ಮೈಸೂರು ರಾಜರನ್ನು ದೇವರಂತೆ ಪೂಜಿಸ್ತಾರೆ. ನೂರಾರು ವರ್ಷಗಳ ಹಿಂದೆ ಜನರಿಗೆ ದಾನವಾಗಿ ಕೊಟ್ಟಿರುವ ಜಮೀನು.ಕಂದಾಯ ಭೂಮಿಯನ್ನಾಗಿ ಪರಿವರ್ತನೆ ಮಾಡಿ ನಮಗ ಸಹಕರಸ್ರಿ ಎಂದು ಆಗ್ರಹಿಸಿದ.
**************************
ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮೈಸೂರು ಒಡೆಯರು ಮಾಡಿದ ಸೇವೆ ಅವೀಸ್ಮರಣೀಯ. ಬ್ರಿಟಿಷ್ರು ಮತ್ತು ಸಂಸ್ಥಾನಿಕರ ಒಪ್ಪಂದದ೦ತೆ ಇವರು ಸ್ವತಂತ್ರ್ಯವಾಗಿ ಇರಬಹುದು ಅಥವಾ ದೇಶಕ್ಕೂ ( ಆಡಳಿತ) ಸೇರಬಹುದು ಎಂಬ ಘೋಷಣೆ ಮಾಡಿದ್ರು. ಮುಂದೆ ದೇಶ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಮೈಸೂರು ಸಂಸ್ಥಾನಿಕರಾದ ಒಡೆಯರ ಆಧೀನದಲ್ಲಿದ್ದ ಅಪಾರ ಪ್ರಮಾಣದ ಚರಾಸ್ತಿ ,ಸ್ಥಿರಾಸ್ತಿಯನ್ನು ಅವರ ವಯಕ್ತಿಕ ಆಸ್ತಿಯನ್ನಾಗಿ ಘೋಷಿಸಿದರು. ಅಲ್ಲದೆ ಅದರ ವಹಿವಾಟಿಗಾಗಿ ಇಂತಿಷ್ಟು ಹಣವನ್ನು ಅರಕಾರದವರೇ ಕೊಡತಿದ್ರು. ಆದರೆ ೧೯೭೧ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು, ಸರಕಾರ ಮತ್ತು ಸಂವಿಧಾನಕ್ಕೆ ೨೬ ನೇ ತಿದ್ದುಪಡಿಗಳನ್ನು ಮಾಡಿ, ಈ ಮಾಜಿ ಸಂಸ್ಥಾನಿಕರಿಗೆ ಇರುವ ಕೆಲ ಸೌಲಭ್ಯ ನಿಲ್ಲಿಸಿದರು.ಪ್ರಜಾಪ್ರಭುತ್ವದ ಈ ತರಹ ಹಳೆಯ ಸಂಸ್ಥಾನಿಕರಿಗೆ ವಿಶೇಷ ಭತ್ಯೆ ಕೊಡುವುದು ಸೂಕ್ತವಲ್ಲ ಎಂದು ಪ್ರಧಾನಿ ಇಂದಿರಾ ಗಾಂಧಿಯವರು ಕೆಲ ಆರ್ಥಿಕ ಸೌಲಭ್ಯಗಳನ್ನು ನಿಲ್ಲಿಸಿದರು. ನಂತರ ನಡೆದ ಬೆಳಚಣಿಗೆಯಲ್ಲಿ ಮೈಸೂರು ಒಡೆಯರು ತಮ್ಮ ಖಾಸಗಿ ಆಸ್ತಿ, ಸಾವಿರಾರು ಎಕರೇ ಭೂಮಿಯನ್ನು ಸರಕಾರಕ್ಕೆ ಹಿಂದುರಿಗಿಸಲು ಒಪ್ಪದೇ ನ್ಯಾಯಾಲಯಕ್ಕೆ ಹೋದ್ರು. ನ್ಯಾಯಾಲಯದಲ್ಲಿ ಕೆಲವೊಂದು ವ್ಯಾಜ್ಯಗಳು ರಾಜಮನೆತನದ ಪರವಾಗಿ ನಿರ್ಣಯಗಳಾದರೆ, ಕೆಲವೊಂದು ವ್ಯಾಜ್ಯಗಳು ಸರಕಾರದ ಪರವಾಗಿ ನಿರ್ಣಯಗಳಾದವು. ಇದೆಲ್ಲಾ ರಾಷ್ಟ್ರವ್ಯಾಪಿ ನಡೆದ ಚಳುವಳಿ ಹೋರಾಟವಾಗಿತ್ತು. ಇಂದಿಗೂ ಪ್ರಮುಖ ದೇಗುಲಗಳು, ಮಂದಿರಗಳು ಕೂಡಾ ಸಂಸ್ಥಾನಿಕರ ಸೊತ್ತು ಎಂಬ ಹೋರಾಟವಿದೆ. ೧೯೭೮ರಲ್ಲಿ “ಉಳುವವನೇ ಒಡೆಯ” ಕಾಯಿದೆ ಬಂದ ನಂತರ ಪ್ರಧಾನಿ ಇಂದಿರಾ ಗಾಂಧಿಯವರನ್ನು ರೈತ ಜನ ಹೊಗಳತಿದ್ರು.
*********************************
ಅಂದಿನ ಇನ್ನೊಂದು ಪ್ರಮುಖ ಕರ ನಿರಾಕರಣೆ ಚಳುವಳಿ ಕುರಿತಾಗಿ ಹಿರಿಯ ನಾಯಕನಾದ ಬೋಜಪ್ಪ ತನ್ನ ಮಾತು ಪ್ರಾರಂಭಿಸಿದ ಈ ನಮ್ಮ ಸಿದ್ಧಾಪೂರ ತಾಲೂಕಿನಲ್ಲಿ ಆ ವರ್ಷ ಸರಾಸರಿ ಹದಿನಾಲ್ಕು ಇಂಚು ಮಳೆಯಾಗಿತ್ತು ಮಳೆ ಆಧಾರಿತ ಕೃಷಿಗೆ ಕನಿಷ್ಟ ವರ್ಷಕ್ಕೆ ಇಪ್ಪತ್ಮೂರು ಇಂಚಾದರೂ ಮಳೆ ಬೇಕಿತ್ತು. ಹಂಗಾಮಿಗೆ ಸರಿಯಾಗಿ ಬಿತ್ತನೆ ಆಗಿರಲಿಲ್ಲ. ಮುಖ್ಯ ಪೈರು ಭತ್ತ ಚೆನ್ನಾಗಿ ಬೆಳೆದಿದೆಯೆಂದರೇ ವರ್ಷಪೂರ್ತಿಗಾಗುತ್ತಿರಲಿಲ್ಲ. ಇಂಥ ದುರ್ಧರ ಪ್ರಸಂಗದಲ್ಲಿ ಅದು ಬೆಳಗೀಡಾಗಿ ಬಡವರ ಹೊಟ್ಟಿಗೆ ತಣ್ಣೀರು ಬಟ್ಟೆಯೇ ಗತಿಯಾಗಿತ್ತು. ಕುಡಿಯುವ ನೀರಿನ ಪರಿಸ್ಥಿತಿ ಕೇಳುವದೇ ಬೇಡ. ಕೆರೆ ಕಟ್ಟೆ ಒಣಗಿದ್ವು. ಇದ್ದು ಬಿದ್ದ ನೀರೂ ಹುಳುಬಿದ್ದು ಕುಡಿಯಲು ಬಾರದಂಥ ಕೊಚ್ಚೆ ನೀರಾಗಿದ್ವು. ಹಳ್ಳಿಗಳೆಲ್ಲ ಇಲ್ಲದ ರೋಗರುಜಿನಗಳ ತವರಾಗಿದ್ವು. ನೀರಾವರಿ ಸೌಕರ್ಯವೇ ಆಗ ಇರಲಿಲ್ಲ.ಇದನ್ನೆಲ್ಲ ನಾಲ್ವಡಿ ಕೃಷ್ಣರಾಜ ಒಡೆಯರು ಊರೆಲ್ಲಾ ಸಂಚರಿಸಿ ಕಣ್ಣಾರೆ ಕಂಡರು. ಇಂಥ ಪರಿಸ್ಥಿತಿಯಲ್ಲಿ ರೈತರು ಕಂದಾಯ ಕಟ್ಟುವುದು ಹೇಗೆ ಎಂದು ಕಂಗಾಲಾಗಿದ್ದರು. ಕೃಷಿ ಕೆಲಸ ಸ್ತ್ರೀ-ಪುರುಷರು ಸಮಾನವಾಗಿ ಭುಜಕ್ಕೆ ಭುಜ ಹಚ್ಚಿ ದುಡಿದು ಸಾಗಿಸುವಂಥದು. ರೈತಾಪಿ ಜನರನ್ನು ಊರೂರಿಗೆ ಸಂದರ್ಶಿಸಿ ತಿಳುವಳಿಕೆ ನೀಡಿದರು. ಸಂಘಟಣೆ ಮಾಡಿದರು. ಇಡೀ ತಾಲೂಕನ್ನು ಹದಿನಾರು ಕೇಂದ್ರಗಳಲ್ಲಿ ವಿಂಗಡಿಸಿದರು. ಇದಕ್ಕೆ ಏಕೈಕ ಪರಿಹಾರ ಮಾರ್ಗವಾಗಿ ಕರನಿರಾಕರಣೆಯ ಚಳುವಳಿಯ ಮುಖಂಡತ್ವ ವಹಿಸಿಕೊಳ್ಳಲು ರೈತ ಮುಖಂಡರಾದ ವೀರನಗೌಡರನ್ನು ಕೇಳಿಕೊಂಡರು. ಜನವರಿ ೬, ೧೯೩೦ ರಲ್ಲಿ ಹೋರಾಟದ ರೂಪು ರೇಷೆ ಹಾಕಿ ಸಿದ್ದಾಪೂರವನ್ನು ಕೇಂದ್ರ ಸ್ಥಾನವಾಗಿಟ್ಟು ಕೊಂಡು ಚಳುವಳಿ ಆರಂಭಿಸಿದರು.
೧೯೩೦-೩೧ ರಲ್ಲಿ ಈ ಭಾಗದಲ್ಲಿ ಮಳೆ ಬಾರದೆ ಬರಗಾಲದಿಂದ ಜನರಿಗೆ ತೊಂದರೆ ಉಂಟಾಗಿತ್ತು ಆಗ ಎಲ್ಲರೂ ಕೂಡಿ ರೈತರನ್ನು ಬದುಕಿಸುವ ಉಪಾಯ ಹುಡುಕಿದರು. ಅದುವೇ ಆಣೇವಾರಿಯನ್ನು ಕೈಗೆತ್ತಿಕೊಂಡದ್ದು, ಕಾಯಿದೇಸೀರ ಆಣೆವಾರಿ ಮಾಡಿದರೆ ಎಲ್ಲ ಹಳ್ಳಿಗಳಲ್ಲಿ ನಾಲ್ಕು ಆಣೆಗಿಂತ ಕಡಿಮೆ ಆಗುವುದೆಂದು ಕಂಡುಕೊ೦ಡರು. ಇದನ್ನು ಸರಕಾರಿ ಅಧಿಕಾರಿಗಳಿಗೆ ಆಹ್ವಾನ ಕೊಟ್ಟು ಹೇಳಿದರು. ಮುಖ್ಯ ಅಧಿಕಾರಿಗಳು ಸ್ವತಃ ಕೆಲ ಹಳ್ಳಿಗಳಿಗೆ ಹೋಗಿ ಕೆಲವು ಬೆಳೆದು ನಿಂತ ಜಮೀನಿನಲ್ಲಿಯ ಬೆಳೆಗಳನ್ನು ಕಟಾವು ಮಾಡಿಸಿ, ಬಡಿಸಿ, ತೂರಿ, ತೂಗಿ ನೋಡಲು ಆಣೆವಾರಿ ನಾಲ್ಕು ಆಣೆಗಿಂತ ಕಡಿಮೆ ಬಂದಿತು. ಇನ್ನು ಕೊಯ್ದು ಒಟ್ಟಿದ ಬಣವಿಗಳನ್ನು ಕಿತ್ತು ಹುಲ್ಲನ್ನು ಪರೀಕ್ಷೆ ಮಾಡಿ ನೋಡಿದರು. ಅದರಲ್ಲಿ ಯಾವ ಬೆಳೆಯು ಸರಿಯಾಗಿ ಇಲ್ಲದ್ದು ಕಂಡು ಬಂದಿತು. ಈ ಪ್ರಕಾರ ಎಂಟೆತ್ತು ಹಳ್ಳಿಗಳಲ್ಲಿ ಪರೀಕ್ಷೆ ಮಾಡಿ ನೋಡಿದ ಮೇಲೆ ನೂರಾರು ಹಳ್ಳಿಗಳ ಅಣೆವಾರಿಯನ್ನು ಬರೆದು ಬಿಟ್ಟರು. ಅಂತ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ರೈತಪರ ಬೆಂಬಲ ಮತ್ತು ವೀರನಗೌಡರ ನೇತೃತ್ವದಲ್ಲಿ ನಡೆದ ರೈತ ಚಳುವಳಿಯ ಹೋರಾಟವನ್ನು ಬೋಜಪ್ಪ ತೆರೆದಿಟ್ಟ.
*******************************
ಈ ಇತಿಹಾಸ ಕೆಳತಾ ಇದ್ದ ರಾಚಪ್ಪಗ ಪಕ್ಕನೇ ನೆನಪಾತು. ಗುದ್ದಯ್ಯನ ಕೇರಿ ಜನ ಆಗಲೇ ದಿಗಲು ತಪ್ಪಿದ್ರು. ೧೮೯೦ರ ಸುಮಾರಿಗೆ ರಾಚಪ್ಪಯ್ಯನ ಅಜ್ಜ ಅಸ್ಪೃಶ್ಯರ ಸಾಲೆಯಲ್ಲಿ ಮಾಸ್ತರಕಿ ಮಾಡಿದ್ದ ಸಲುವಾಗಿ ಅವನಿಗೆ ಉಂಬಳಿಯಾಗಿ ಕೊಟ್ಟ ಜಮೀನಿದು.ಪಂಚಮರ ಸಾಲಿ ಹೆಡ್ಡಮಾಸ್ತರಕಿ ಮಾಡಿದ ನನ್ನಜ್ಜ ಜುಂಜಪ್ಪಗ ಅರಸರು ನೀಡಿದ ಭೂಮಿ ಇದು ಅನ್ನೊ ವಿಷಯ ನೆನಪಾತು.
ರಾಚಪ್ಪಜ್ಜ ಡಿಸಿ ಕಚೇರಿಗೆ, ಪೊಲೀಸ್ ಕಚೇರಿಗೆ, ಮಹಾರಾಣಿ ನಿರ್ಮಿಸಿದ ಜಮೀನು ಪತ್ರಗಳ ನೈಜತೆಯನ್ನು ಪರೀಕ್ಷೆ ಮಾಡುವ ಕಚೇರಿಗೆ ಅಡ್ಡಾಡಿ ಸುಸ್ತಾಗಿದ್ದಾ.ನಾಳೆ ಮುಂಜಾನೆ ನಡೆಯುವ ಪಂಚಾಯತಿಯಲ್ಲಿ ದಾಖಲೆಗಳನ್ನು ತೋರಸ್ತ ಇದ್ರ ಈ ಭೂಮಿ ಒಡೆಯರ ಪಾಲು ಅಂಬೋ ಸುದ್ದಿ ರಾಚಪ್ಪನ ಕಿವಿ ಮ್ಯಾಕ ಬಿತ್ತು.
ಮನಿಗ ಬಂದು ಹೆಂಡತಿ ಲಚ್ಚಮ್ಮಣ್ಣಿಗೆ ನಡೆದ ಎಲ್ಲಾ ವಿಷಯ ಹೇಳಿದ. ಮಗಾ ಶ್ರೀಕಂಠೆ ಗೌಡ ಭಾರತೀಯ ಸೇನಾದಾಗ ಭರ್ತಿ ಆಗಿದ್ದಾ.ಈಗ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡಿಬಹುದು ಅಂಬೋ ಸುದ್ದಿ ಗೊತ್ತಾಗಿ ರಾಚಪ್ಪಯ್ಯ ಮತ್ತಟು ಚಿಂತಿಗ ಬಿದ್ದಿದ್ದಾ. ಪಾಪ ತನ್ನ ಮಗಾ ಸಾಲಿ ಕಲಿತು ದೇಶಸೇವೆ ಮಾಡಾಕ ಹೋಗ್ಯಾನ ಆ ಹುಡುಗರಿಗೆ ಏನ ಗೊತ್ತು ಈ ದಾನ ಪತ್ರ, ಉಂಬಳಿ ಪತ್ರ ಅಂದರ, ಅಂತ ಹೆಂಡತಿ ಮುಂದ ಗೊಣಗಿದ. ರಾತ್ರಿ ಪೂರಾ ರಾಚಪ್ಪಜ್ಜನ ಕಣ್ಣಿಗೆ ಕಣ್ಣು ಹತ್ತಲಿಲ್ಲ.
ಮುಂಜಾನೆ ಚುಮು ಚುಮು ಬೆಳಕಿನಲ್ಲಿ ಹೊರ ನಡೆದ ರಾಚಪ್ಪನಿಗೆ ದನಾ ಕಟ್ಟೊ ಹಿತ್ತಲಿನ ಕಲ್ಲು ಪಡಕಿಯಲ್ಲಿ ಇದ್ದ ಸಂದೂಕ ನೆನಪಾತು ಇದರಲ್ಲಿ ಏನ ಇರಬಹುದು ಅಂತ ಸಂದೂಕಾ ತೆಗೆದ. ಅದರಲ್ಲಿ ಕೆಂಪು ವಸ್ತ್ರದಲ್ಲಿ ಸುತ್ತಿದ ರಾಜ ಮನೆತನದ ಮೊಹರ ಹಾಕಿದ ರೇಷ್ಮೆ ಕೆಂಪು ಅರಿವೆ ಸಿಕ್ತು.ಬೋ ಖುಷಿ ಯಿಂದ ಅದನ್ನೇ ಕೈಯಲ್ಲಿ ಹಿಡಿದು ರಾಚಪ್ಪಜ್ಜ ಸಂಭ್ರಮಿಸಿದ.
ಸಂದೂಕದಲ್ಲಿದ್ದ ಕೆಂಪು ಅರಿವಿಯ ಸುರಳಿಯೊಂದು ರಾಚಪ್ಪನ ಕೈಗೆ ಸಿಕ್ತು.ಬೋ ಸಂತೋಷ ಪಟ್ಟ. ಬಹುತೇಕ ಇದೇ ಇರಬಹುದು ನಮ್ಮ ಜಮೀನು ಉಂಬಳಿ ಪತ್ರ ಎಂಬೊ ತರ್ಕ ಅವನಿಗೆ. ಅವಸರದಿಂದ ಪಂಚಾಯತಿ ಕಟ್ಟೆಗೆ ಹೋಗಲು ಬಗಲಲ್ಲಿ ಚೀಲ ಇಟಗೊಂಡು ಮುಂಬಾಗಿಲ ಬಳಿ ಹೆಜ್ಜೆ ಹಾಕಿದ.
**************************************
ಟಿವಿಯಲ್ಲಿ ಭಾರತ ಪಾಕಿಸ್ತಾನದ ಯುದ್ಧ ಪ್ರಾರಂಭದ ಕುರಿತಾಗಿ ಸುದ್ದಿ ಬರುತ್ತಿತ್ತು.ಇನ್ನೇನು ಪಡಸಾಲೆ ದಾಟಿ ಹೊರಗೆ ಕಾಲು ಹಾಕುತ್ತಿರುವಾಗಲೇ ಟಿವಿಯಲ್ಲಿ ಭಾರತೀಯ ಸೇನೆಯ ಕೆಲ ವೀರಯೋಧರು ಹುತಾತ್ಮರಾದ ಸುದ್ದಿ ಬರುತ್ತಿತ್ತು. ಚಣಕಾಲ ರಾಚಪ್ಪ ನಿಲ್ಲಬೇಕಿನಿಸಿ ಮುಂದೆ ಹಾಕಿದ ಹೆಜ್ಜೆ ಹಿಂದೆ ಸರಿಸಿದ. ಚಾಮರಾಜನಗರದ ಸಿದ್ದಾಪೂರದ ವೀರಯೋಧ ಶ್ರೀಕಂಠೆ ಗೌಡ ಪಾಕ್ ಸೈನಿಕರೊಂದಿಗೆ ಹೋರಾಡುವಾಗ ವೀರಮರಣವನ್ನಪ್ಪಿದ ಎಂದು ಸುದ್ದಿ ಹೇಳುವ ಹೆಣ್ಣುಮಗಳ ಧ್ವನಿ ಕೇಳಿದ ಕೂಡಲೇ ಎದೆಯಲ್ಲಿ ತಣ್ಣಿರು ಸುರಿವಿದಂಗಾತು.
ಟಿವಿಯಲ್ಲಿ ಬರುತ್ತಿದ್ದ ತನ್ನ ಮಗನ ಪೋಟೊ ನೋಡಿ ರಾಚಪ್ಪಯ್ಯನ ಕಣ್ಣಿಗೆ ಕತ್ತಲು ಕವಿದಂತಾತು.ಎದೆ ಬಡಿತ ಜೋರಾಗಿ ದೊಪ್ಪನೆ ಕುಸಿದು ಬಿದ್ದ. ತಲೆಯಿಂದ ಹರಿದ ರಕ್ತವು ರಾಚಪ್ಪನ ಬಗಲಾಗಿನ ಚೀಲ ತಪ್ಪನೇ ತೊಯಿಸಿತ್ತು. ಹರಿದ ರಕ್ತ ಹೊಸ್ತಿಲು ದಾಟಿ ಮುಂಗಟ್ಟೆಯಲ್ಲಿ ಮಡುಗಟ್ಟಿತ್ತು. ಬ್ಯಾಕ್ ಔಟನೊಂದಿಗೆ ಸೈರನ್ ಕೂಗೂ ಹಳ್ಳಿತುಂಬ ಕೇಳುತ್ತಿತ್ತು .






0 Comments