ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಸಿಡಿಗನ ಕನವರಿಕೆ

– ಪಂಪಾರೆಡ್ಡಿ. ಏನ್. ಗಚ್ಚಿನಮನಿ 

ದೂರದ ಕನಕಗಿರಿಯಿಂದ ಬಂದ ನನಗೆ ಧಾರವಾಡದ ಕೆಂಪು ಮಣ್ಣು, ಏರಿಳಿತದ ರಸ್ತೆಗಳು, ಅವುಗಳಲ್ಲಿ ಸಂಚರಿಸುತ್ತಿದ್ದ ಸ್ಕೂಟರ್ ಸುಂದರಿಯರು, ತಣ್ಣನೆಯ ವಾತಾವರಣ, ಸ್ಮಾರಕದಂತೆ ಕಂಗೊಳಿಸುತ್ತಿದ್ದ ಕೆಂಪನೆಯ ಗೋಡೆಗಳ ಆಂಗ್ಲ ಶೈಲಿಯ ಕರ್ನಾಟಕ ಕಾಲೇಜು, ಕೆಸಿಡಿ ಗಣಪನ ಗುಡಿ, ನಾನು ಆಯ್ದುಕೊಂಡ ಆಂಗ್ಲ ಸಾಹಿತ್ಯ, ವಿವಿಧ ಸ್ಥಳಗಳಿಂದ ಬಂದಿದ್ದ ‘ಬುದ್ಧಿವಂತ’ ಸ್ನೇಹಿತರು, ಸದಾಕಾಲ ಬೇಸರವಿಲ್ಲದೆ ಬಿಡುವಿಲ್ಲದೆ ಸುರಿಯುತ್ತಿದ್ದ ಧಾರವಾಡದ ನಂಬಲಸಾಧ್ಯವಾದ ಮಳೆ, ಮೈಸೂರು ಬಜ್ಜಿ, ಅವಲಕ್ಕಿ, ಮಯೂರ್ ಕೆಫೆಯ ಬೈಟು ಚಹಾ, ಸಾಯಂಕಾಲದ ಎಗ್ ರೈಸ್, ಸ್ವತಃ ಸಾಹಿತಿಗಳು, ವಿದ್ವಾಂಸರು ಆಗಿದ್ದ ಕೆಲವು ಆಂಗ್ಲ ಪ್ರಾಧ್ಯಾಪಕರು ಮತ್ತು ಕನ್ನಡವೇ ಬಾರದವರಂತೆ ಆದರೆ ‘ಸಂಭಾಳಿಸಿಕೊಂಡು’ ಇಂಗ್ಲಿಷ್ ನಲ್ಲಿ ಪಾಠ ಮಾಡುತ್ತಿದ್ದ ಕೆಲವು ಪ್ರಾಧ್ಯಾಪಕರು, ಮೈದಾನದಲ್ಲಿ ಮಳೆಯಲ್ಲಿಯೇ ಮೈದಂಡಿಸುತ್ತಿದ್ದ ಹುರಿಯಾಳುಗಳು, ಸದಾಕಾಲ ತುಂಬಿರುತ್ತಿದ್ದ ಪಾವಟೆ ನಗರಕ್ಕೆ ಹೋಗುತ್ತಿದ್ದ ಬಸ್ಸುಗಳು, ಆ ಬಸ್ಸಿನ ಎರಡು ರೂಪಾಯಿ ಚಾರ್ಜ್, ಜಯನಗರದ ಅಡ್ಡ ರಸ್ತೆಗಳು, ಸಪ್ತಾಪುರ ಭಾವಿ ಬಳಿಯ ಖಾನಾವಳಿಗಳ ₹15 ರೂಪಾಯಿ ಊಟ, ಜಿಟಿಜಿಟಿ ಮಳೆಯಲ್ಲಿ ಚಹಾ ಕುಡಿಯುತ್ತಲೇ ಸಿಗರೇಟ್ ಸೇದುತ್ತಿದ್ದ, ಪ್ರತಿಯೊಂದು ವಿಷಯದಲ್ಲೂ ತಮ್ಮದೇ ಆದ ಅಭಿಪ್ರಾಯ ಮಂಡಿಸುತ್ತಿದ್ದ ‘ಬುದ್ಧಿಜೀವಿಗಳು’, ಮುರುಘಾಮಠದ ಬಳಿಯ ಧಾರವಾಡ ಎಂಬ ‘ಹಳ್ಳಿ’, ಕಾಲೇಜುಗಳಿಗಿಂತಲೂ ಬೃಹತ್ತಾಗಿ ಬೆಳೆದಿದ್ದ ಟ್ಯೂಷನ್ ಕೇಂದ್ರಗಳು, ಕಿಟೆಲ್ ಕಾಲೇಜಿನ ಕ್ರಿಶ್ಚಿಯನ್ ಹುಡುಗಿಯರ ಫ್ಯಾಷನ್ ಮತ್ತು ಇಂಗ್ಲಿಷ್, ಆಫ್ರಿಕನ್ ಮತ್ತು ಟಿಬೇಟಿಯನ್ ಮೂಲದ ವಿದ್ಯಾರ್ಥಿಗಳು, ಯಮಹಾ ಬೈಕ್ ನಲ್ಲಿ ಕಾಲೇಜುಗಳಿಗೆ ‘ಭೇಟಿಯಾಗಲು / ಬೇಟೆಯಾಡಲು’ ಬರುತ್ತಿದ್ದ ಸ್ಥಳೀಯ ಯುವಕರು ಮತ್ತು ಅಂಗಡಿಕಾರರು, ಉದಯ ಹಾಸ್ಟೆಲ್ ನ “ವಿಧೇಯ” ವಿದ್ಯಾರ್ಥಿಗಳು, ಕಾಲೇಜಿನಲ್ಲಿ ನಡೆಯುತ್ತಿದ್ದ ಎಂದೆಂದೂ ಮುಗಿಯದ ಸೆಮಿನಾರುಗಳು, ಕಲಾಭವನದ ನಾಟಕಗಳು, ಸುಭಾಷ್ ರಸ್ತೆಬದಿಯ ಅರ್ಧ ಬೆಲೆಯ ಪುಸ್ತಕಗಳು, ಒಬಿರಾಯನ ಕಾಲದ ಹಳೆಯ ಬಸ್ ಸ್ಟ್ಯಾಂಡ್, ಜನಭರಿತ ಸಿಬಿಟಿ, ಸಂಗಮ್ ಥಿಯೇಟರ್ ನ ಹಿಂದಿ ಸಿನಿಮಾಗಳು, ಮೊಟ್ಟಮೊದಲ ಬಾರಿಗೆ 100 ದಿನಗಳ ಪ್ರದರ್ಶನ ಕಂಡ ತೆಲುಗು ಸಿನಿಮಾ ಜಯಂ, ಒಂದು ಕರೆಗೆ ಮೂರುವರೆ ರೂಪಾಯಿ ಕೊಟ್ಟು ಮಾಡುತ್ತಿದ್ದ STD ಕರೆಗಳು ಮತ್ತು STD ಭೂತಗಳು, ಮಿಚಿಗನ್ ಕಾಂಪೌಂಡ್, ಎಮ್ಮಿಕೇರಿ, ಶ್ರೀನಗರ, ಮಾಳಮಡ್ಡಿ, ಸಾಧನಕೇರಿ, ದಾಸನಕೊಪ್ಪ, ನಾನು ವಾಸವಿದ್ದ ಭಾರತೀಯ ನಗರದ ಆನೆ ಕಿವಿ ಬಿಲ್ಡಿಂಗ್, ಹಂಚಿನ ಮನೆಯ ಹಿತ್ತಲಿನ ರೂಮುಗಳನ್ನು ಬಾಡಿಗೆ ನೀಡುತ್ತಿದ್ದ ಧಾರವಾಡದ ಮಧ್ಯಮ ವರ್ಗಗಳು, ಕೆಸಿಡಿ ಮುಂದಿನ ಡಬ್ಬ ಅಂಗಡಿಗಳು ಅವರು ನೀಡುತ್ತಿದ್ದ 2 ಚಮಚ ಪಲಾವ್, ಸಿಂಡಿಕೇಟ್ ಬ್ಯಾಂಕ್ ನೌಕರರ ಇಂಗ್ಲಿಷ್ ಸಂಭಾಷಣೆ ಮತ್ತು ಅವರು ಪದೇಪದೇ ಹಣವನ್ನು ಎಣಿಸುತ್ತಿದ್ದ ರೀತಿ, ಧಾರವಾಡ ಪೇಡ, ಧಾರವಾಡ ಎಮ್ಮೆ, ನಾವ್ಯಾರೂ ಎಂದೂ ಸಹ ಭೇಟಿ ನೀಡದ ಕೆಸಿಡಿ ಕ್ಯಾಂಟೀನ್ ಮತ್ತು ಆಸ್ಪತ್ರೆ, ಜೀವಶಾಸ್ತ್ರ, ಸಸ್ಯಶಾಸ್ತ್ರ ಇತರ ವಿಭಾಗಗಳ ಹಿಂದಿನ ಅತ್ಯಂತ ಅದ್ಭುತವಾದ ಮರಗಳು ಮತ್ತು ಅವುಗಳ ಬುಡದಲ್ಲಿ ನಡೆದ ಅದ್ಭುತ ಕಥೆಗಳು, ದೊಡ್ಡದಾದ ದೊಡ್ಡವರು ಬರೆದ ದೊಡ್ಡ ದೊಡ್ಡ ಪುಸ್ತಕಗಳನ್ನು ಹೊಂದಿದ್ದ ದೊಡ್ಡ ವಿ. ಕೆ. ಗೋಕಾಕ್ ಗ್ರಂಥಾಲಯ, ಇಂಗ್ಲಿಷ್ ವಿಭಾಗದ ವಿಪರೀತ ಶಿಸ್ತಿನ ಕಾರ್ಯಕ್ರಮಗಳು, ಕಣಿವೆಯಲ್ಲಿದ್ದ ಭೂಗೋಳಶಾಸ್ತ್ರ ವಿಭಾಗದ ಪ್ರಾಚೀನ ತರಗತಿ ಕೋಣೆಗಳು, ಹಾವೇರಿಯ ಮತ್ತು ಅಡುಗೆ ಮಾಡಬಲ್ಲ ಸಂಪನ್ನ ವಿದ್ಯಾರ್ಥಿಗಳು, ರಾಯಚೂರಿನ ರಾಯಲ್ ಹುಡುಗರು, ಕಾವೇರಿ ಹಾಸ್ಟೆಲ್ ಮುಂದೆ ಸುಳಿದಾಡುತ್ತಿದ್ದ ಕಲಿಗಳು, ಯಾವಾಗಲೂ ತಮಿಳುನಾಡು ಪಾಲಾಗುತ್ತಿದ್ದ ಕಾವೇರಿಯೂ, ಪಾವಟೆ ನಗರದ ಕರ್ನಾಟಕ ವಿಶ್ವವಿದ್ಯಾಲಯ, ಬಿಳಿ ಮಿಶ್ರಿತ ಗಟ್ಟಿ ಕಲ್ಲಿನ ಅದರ ಅದ್ಭುತವಾದ ಕಟ್ಟಡ, ನಾಡಿನಾದ್ಯಂತ ಹೆಸರು ಮಾಡಿದ್ದ ಪ್ರೊಫೆಸರ್ ಗಳು, ಕವಿಗಳು, ಸಾಹಿತಿಗಳು, ಶ್ರೀನಗರದ ಬೀಳಗಿ ಸರ್ ರವರ ಸೀಡೆಲ್ (C-DEL), ನಾವು ಕಣ್ಣು ಬಿಟ್ಟಾಗಿನಿಂದಲೂ ಕೇಳಿದ ಧಾರವಾಡದ ಆಕಾಶವಾಣಿ ಕೇಂದ್ರ, ಎಲ್ಲವೂ ಇಷ್ಟವಾಗಿದ್ದವು.

ಅದರಲ್ಲಿಯೂ ಸೈಕಲ್ ಸ್ಟ್ಯಾಂಡ್ ಬಳಿಯಿರುವ ಉದ್ದನೆಯ ಕಿರುಗೋಡೆಯ ವಿನ್ಯಾಸದ ಉದ್ದನೆಯ ಕಟ್ಟೆಯದು ಮತ್ತೊಂದು ತೂಕ. ಅಲ್ಲಿ ಕುಳಿತು ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ತಿಳಿದವರಂತೆ ಚರ್ಚಿಸುತ್ತಿದ್ದ ನಾನೂ ಸೇರಿದಂತೆ ನಮ್ಮ ಗೆಳೆಯರ ಗುಂಪು, ನಮ್ಮ ಹುಚ್ಚು ಹಾವಭಾವಗಳು, ಸಂಕಟಗಳು, ತುಡಿತಗಳು, ಕೆಲವೊಮ್ಮೆ ಕಡಿತಗಳು! ನಾವು ಗೆಳೆಯರ ಕವಿತೆಗಳನ್ನು, ವಿಚಾರಗಳನ್ನು, ಉಡುಪುಗಳನ್ನು ವಿಮರ್ಶಿಸುತ್ತಿದ್ದ ರೀತಿ ಆಂಗ್ಲ ಸಾಹಿತ್ಯದ ಮೇರು ಪ್ರತಿಭೆಗಳಾದ ಜಾನ್ ಡ್ರೈಡನ್, ಅಲೆಕ್ಸಾಂಡರ್ ಪೋಪ್, ಟಿ. ಎಸ್. ಎಲಿಯಟ್ ರನ್ನು ಕೂಡ ಮೀರಿಸುವಂತದ್ದು! ಕೆಲ ಸೂಕ್ಷ್ಮ ಮನಸ್ಸಿನ ಮೃದು ಕವಿಗಳು ಈ ಕಟ್ಟೆಗೆ ದೂರದಿಂದಲೇ ವಂದಿಸಿ ಪಾವನರಾಗುತ್ತಿದ್ದರು. ಆ ಮಟ್ಟಿಗೆ ಹವಾ ಮೆಂಟೇನ್ ಮಾಡಲಾಗಿತ್ತು!

“ಹೌದು ಎಂದದ್ದನ್ನು ಅಲ್ಲ ಎಂದು ಸಾಧಿಸುವ, ಅಲ್ಲ ಎಂದಿದ್ದನ್ನು ಹೌದು ಎಂದು ಸಾಧಿಸುವ” ಹುಚ್ಚೀರಪ್ಪ ಅಜ್ಜ (ಈ ಹೆಸರಿನ ಒಬ್ಬ ಸಾಧುವಿನ ಸಮಾಧಿ ರೂಪದ ಸ್ಮಾರಕ ಕನಕಗಿರಿಯ ಪಕ್ಕದ ಗಂಗನಾಳದಲ್ಲಿ ಇದೆ ಎನ್ನಲಾಗಿದೆ) ಕೂಡ ಇಲ್ಲಿಗೆ ಬಂದರೆ ಗೆಲ್ಲುವುದು ಕಷ್ಟವಿತ್ತು, ಹಾಗಿತ್ತು ನಮ್ಮ ಟೀಕಾಚಾರ್ಯರ ಟೀಕೆಗಳು.

ಅಗಾಧ ಪ್ರತಿಭೆಯನ್ನು ಹೊಂದಿದ್ದ ನನ್ನ ಈ ಸ್ನೇಹಿತರು ಈ ವಯಸ್ಸಿಗೆ ಅದ್ಭುತವೇ ಎನ್ನುವಂತಹ ಪಾಂಡಿತ್ಯವನ್ನು ಹೊಂದಿದ್ದರು ಎನ್ನುವುದು ಸೂರ್ಯನಷ್ಟೇ ಸತ್ಯ. ರವಿ ಬೆಳಗೆರೆಯ ಅಭಿಮಾನಿಗಳಾಗಿದ್ದ ಕೆಲವರ ಓದು ಸಹ ಅಪರಿಮಿತ! ಸಾಹಿತ್ಯ, ಸಿನಿಮಾ, ರಾಜಕೀಯ, ಎಡ-ಬಲ ಪಂಥಗಳು, ಧರ್ಮ, ಭಯೋತ್ಪಾದನೆ, ವ್ಯಾಪಾರ ಮತ್ತು ವೈಯಾರ, ವಿಷಯ ಯಾವುದೇ ಇರಲಿ ಮಾತಾಡಿಯೇ ಸಿದ್ಧ! ಕಲಾ ವಿಭಾಗದ ವಿದ್ಯಾರ್ಥಿಗಳಾದ ನಮಗೆ ಸಮಯವೂ ಯಥೇಚ್ಛ!

ಕಾರವಾರ ತೀರಕ್ಕೆ ಒಂದು ದಿನದ ಟ್ರಿಪ್ ಹೋಗಿದ್ದ ನಾವುಗಳೆಲ್ಲಾ ಮುಳುಗುತ್ತಿದ್ದ ಸೂರ್ಯನನ್ನು ಇನ್ನಿಲ್ಲದಂತೆ ದ್ವೇಷಿಸಿದ್ದೆವು, ನಿಜ ಹೇಳಬೇಕೆಂದರೆ ಗಾಡಿಯಲ್ಲಿ ಕೂರುವವರೆಗೂ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವ ಸ್ಪಷ್ಟತೆ ಯಾರಿಗೂ ಇರಲಿಲ್ಲ, ಅಂತಹ ವ್ಯವಸ್ಥಿತ ಟ್ರಿಪ್ ಅದು. ಬೀಳ್ಕೊಡುವ ಕೊನೆಯ ದಿನವಂತೂ ಎಲ್ಲರ ಕಣ್ಣಾಲಿಗಳು ತುಂಬಿದವು. ಗ್ರೂಪ್ ಫೋಟೋದಲ್ಲಿ ನಗು ಮಾಯವಾಗಿತ್ತು, ಆಟೋಗ್ರಾಫ್ ಮತ್ತು ಸ್ಲಾಮ್ ಬುಕ್ ಗಳಲ್ಲಿ ಏನು ಬರೆಯಬೇಕು? “ಮನಸು ಹೇಳ ಬಯಸಿದೆ ನೂರೊಂದು, ತುಟಿಯ ಮೇಲೆ ಬಾರದಿದೆ ಮಾತೊಂದು…” ಚಿತ್ರಗೀತೆಯ ಮೆಲುಕು.

ಮೊಬೈಲ್ ಗಳು ಅಷ್ಟೊಂದು ಸುಲಭವಾಗಿ ಇಲ್ಲದ ಕಾಲವದು, ನಮಗೆ ಬಿಡಿ ಪ್ರೊಫೆಸರ್ ಗಳಿಗೂ ಕೂಡ!

ಕನಸು, ಗುರಿ, ಉದ್ವೇಗ, ಆತಂಕ, ಅಭದ್ರತೆ, ಪ್ರೇಮ ಮತ್ತು ವಿಫಲತೆ ಎಲ್ಲವನ್ನೂ ಒಳಗೊಂಡ ಅದೊಂದು ರಮ್ಯ ಚೈತ್ರ ಕಾಲ, ಎಂತಹ ಅದ್ಭುತವಾದ ಸಮಯ! ನೋಡನೋಡುತ್ತಿದ್ದಂತೆ ಕಳೆದುಹೋಯಿತು. ನೆನಪಾದಾಗಲೆಲ್ಲ ಮನಸ್ಸು ಧಾರವಾಡ ಸುತ್ತಿ ಬರಲು ಹೊರಡುತ್ತದೆ; ಯಾವುದೇ ಖರ್ಚಿಲ್ಲದೆ. ಇತ್ತೀಚಿಗೆ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಬಂದಾಗ ಕೆಸಿಡಿಗೆ ಭೇಟಿ ನೀಡಿದೆ, ನನ್ನ ಪ್ರಿಯಮಿತ್ರ ಚನ್ನಬಸವ ಅಸ್ಪರಿ ಮತ್ತು ರಾಘುವಿನೊಂದಿಗೆ. ನೆನಪುಗಳನ್ನು ಹುಡುಕುತ್ತಾ ಹೊರಡಬೇಕೆನ್ನುವ ಹಂಬಲ… ಸಾಧ್ಯವಿಲ್ಲ, ಎಲ್ಲವೂ ಬದಲಾಗಿದೆ, ಹೆಸರನ್ನು ಹೊರತುಪಡಿಸಿ. ಪುನರ್ಜನ್ಮದ ನೆನಪಿನಂತೆ, ಮೇಲಿನ ಎಲ್ಲವನ್ನೂ ನೀಡಿದ ಧಾರವಾಡ ತಣ್ಣಗೆ ಮಲಗಿದೆ ಆದರೆ ಬದಲಾಗಿದೆ… ಮನಸು ಭಾರವಾಗಿದೆ…

ನನಗೆ ನೆನಪಿನಲ್ಲಿರುವ ಧಾರವಾಡವೇ ಇರಲಿ.

‍ಲೇಖಕರು Admin

16 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading