ಸಚಿನ್ ನಾಯಕ್ ಅವರ ಕಾದಂಬರಿ ‘ಪುನರ್ನವ’
ಸಾಹಿತ್ಯಲೋಕ ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಆಶ್ರಿತಾ ಕಿರಣ್ ಅವರ ಬರಹ ಇಲ್ಲಿದೆ.
-ಆಶ್ರಿತಾ ಕಿರಣ್
ರಾಜಕುಮಾರಿಯಾಗಿ ಹುಟ್ಟಿ ಧೀರತನದಿ ಬೆಳೆದು ಸಾಮ್ರಾಜ್ಯವೊಂದಕ್ಕೆ ಸೊಸೆಯಾಗಿ ಹೋಗುವವಳ ಜೀವನ ಈ ಕಾದಂಬರಿಯಲ್ಲಿದೆ. ಸಾಮಾನ್ಯ ರಾಜಕುಮಾರಿಯೂ ಅಲ್ಲ, ಸೇರಿದ್ದು ಸಾಮಾನ್ಯ ವಂಶಕ್ಕೂ ಅಲ್ಲ. ಸುಪ್ಪತ್ತಿಗೆಯಲ್ಲಿ ಬೆಳೆದರೂ ಅವಳು ನೆಮ್ಮದಿ ಕಂಡವಳಲ್ಲ. ಸಾವು ನೋವುಗಳನ್ನು ಕಂಡರೂ ಕುಗ್ಗಿ ಕುಳಿತವಳಲ್ಲ. ಭರವಸೆಯ ಜೊತೆಗೆ ಬದುಕನ್ನು ನಡೆಸಿದವಳ ಮನದ ವೇದನೆ ಈ ಕಾದಂಬರಿಯಲ್ಲಿದೆ.
ಬಾಳಿನ ಮುಸ್ಸಂಜೆಯಲ್ಲಿ ಬದುಕಿನ ಪಯಣ ಕಾಡುತ್ತದಂತೆ. ಇಲ್ಲಿನ ಕಥಾ ನಾಯಕಿ ಅದೆಷ್ಟೇ ದಿಟ್ಟತನದಿಂದ ಬದುಕನ್ನು ಬಂದಂತೆ ಸ್ವೀಕರಿಸಿ ಮುಂದೆ ನಡೆದರೂ ಅವಳ ಮನ ನೆನಪುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಎಲ್ಲವನ್ನು ನೆನೆಯುತ್ತಾ ಅವಳ ಕಥೆಯನ್ನು, ಅವಳ ಪರಿಚಯವನ್ನು ಅವಳೇ ಹೇಳಿಕೊಳ್ಳುತ್ತಾ ಕುರುವಂಶದ ಏಳುಬೀಳುಗಳನ್ನು ಮುಂದಿಡುತ್ತಾಳೆ. ಕುರುವಂಶಕ್ಕೂ ಇವಳಿಗೂ ನಂಟಿದೆ. ಇವಳ ಕಥೆ ಆರಂಭವಾಗುವುದು ಕಾಶಿಯ ಗಂಗಾ ನದಿಯ ತಟದಿಂದ. ಕಾಶಿಯ ವರ್ಣನೆಯನ್ನು ಉಲ್ಲೇಖಿಸಲು ಮರೆತಿಲ್ಲ.
ಹೆಣ್ಣೊಬ್ಬಳ ಸ್ನೇಹ, ಪ್ರೇಮ, ಪ್ರೀತಿ, ಕರುಣೆ, ಮಮತೆ, ಕೋಪ, ಅಸಮಾಧಾನ ಎಲ್ಲವನ್ನೂ ಇಲ್ಲಿ ನೋಡಬಹುದು. ಅವಳು ಅಸಾಮಾನ್ಯನನ್ನು ಕೈ ಹಿಡಿದರೂ ಬವಣೆ ತಪ್ಪಲಿಲ್ಲ. ಕುಟುಂಬಕ್ಕಾಗಿ ತನ್ನ ಜೀವನವನ್ನು ಸಮರ್ಪಿಸುವ ಪತಿ ದೊರಕಿದ್ದರೂ ಆ ಕುಟುಂಬದ ಭಾಗವಾಗಿ ಅಲ್ಪ ಸಮಯ ಮಾತ್ರ ಬದುಕುವ ಅವಕಾಶ ದೊರೆತ ನತದೃಷ್ಟೆ ಇವಳು ಎಂದರೂ ತಪ್ಪಾಗಲಾರದು.
ಇದು ಮಹಾಭಾರತವನ್ನು ನೆನಪಿಸುವ ಕಾದಂಬರಿ. ಯುಧಿಷ್ಠಿರ, ಭೀಷ್ಮ ದುರ್ಯೋಧನರ ನಿಲುವುಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ. “ಕೌಂತೇಯ”ನೊಬ್ಬನ ಮಡದಿಯ ಮನಮಿಡಿಯುವ ದೃಷ್ಟಿಕೋನ ಇಲ್ಲಿದೆ. ಬಲಾಢ್ಯನ ಕೈ ಹಿಡಿದವಳ ಒಡಲಾಳದ ಮಾತುಗಳಿಗೆ ಕಿವಿಯಾಗಿಸುವ ಪ್ರಯತ್ನವಿಲ್ಲಿದೆ. ಹೆಣ್ಮನದ ಭಾವನೆಗಳು ಸುಂದರವಾಗಿ ನಿರೂಪಿತವಾಗಿದೆ.
ಪತಿಯ ಮೇಲಿನ ಪ್ರೇಮವನ್ನು, ಮಗನ ಹೊಣೆ ಹೊತ್ತು ನಿಭಾಯಿಸಿದ ಸಂದರ್ಭವನ್ನು, ರಾಜ್ಯದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಆಳ್ವಿಕೆ ಮಾಡಿದವಳ ಬದುಕಿನ ಏಳುಬೀಳಿನ, ಸುಖದುಃಖವನ್ನು ಎಳೆಎಳೆಯಾಗಿ ತೆರೆದಿಡಲಾಗಿದೆ. ಕಥಾವಸ್ತು ಅದನ್ನು ಪ್ರಸ್ತುತಪಡಿಸಿರುವ ರೀತಿ ಮನೋಜ್ಞವಾಗಿದ್ದು ಲೇಖಕರ ಜಾಣ್ಮೆಯನ್ನು, ಸಾಹಿತ್ಯದ ಮೇಲಿನ ಹಿಡಿತವನ್ನು,ತಮ್ಮ ಮೇಲೆ ಪರಿಣಾಮ ಬೀರಿರುವ ಕರಾವಳಿಯ ಕಲೆ “ಯಕ್ಷಗಾನದ” ಛಾಪನ್ನು, ಕಥೆಯೊಳಗೆ ಎಳೆದುಕೊಳ್ಳುವಂತಹ ನಿರೂಪಣಾ ಶೈಲಿಯ ಚಮತ್ಕಾರವನ್ನು ಗಮನಿಸಬಹುದು.
ಈ ಕಥೆಯ ಕೇಂದ್ರಬಿಂದು ಭೀಮನ ಪತ್ನಿ.. ಆದರೆ ಇವಳು ದ್ರೌಪದಿಯೂ ಅಲ್ಲ, ಹಿಡಿಂಬಳೂ ಅಲ್ಲ. ಸ್ವಯಂವರದಲ್ಲಿ ಭೀಮಸೇನನ್ನು ವರಿಸಿ, ಮನಸಾರೆ ಪ್ರೀತಿಸಿ
ಅವನೊಂದಿಗೆ ಹೆಚ್ಚು ಕಾಲ ಜೊತೆಯಾಗಿ ಬಾಳಲಾಗದ ಕಾಶಿಯ ರಾಜಕುಮಾರಿ, ಸರ್ವಗನ ತಾಯಿಯ ಕಥೆ ಇದಾಗಿದೆ. ಅವಳ್ಯಾರು..? ಓದಿ ತಿಳಿದರೆ ಸೊಗಸು.
ಸಿಕ್ಕರೆ ಇಂತಹ ಸ್ನೇಹಿತರು ಸಿಗಬೇಕು ಎನ್ನುವಂತಹ ಸ್ನೇಹ ಇಲ್ಲಿದೆ. ನಂಬಿಕೆ ಎಂದರೆ ಏನು ಎನ್ನುವುದಕ್ಕೆ ಸಾರಥಿ ವಿಶೋಕ ಉತ್ತರವಾಗಿ ನಿಲ್ಲುತ್ತಾನೆ. ಎಲ್ಲವನ್ನು ಕಳೆದುಕೊಂಡರೂ ಭರವಸೆಯನ್ನು ಕಳೆದುಕೊಳ್ಳದೆ ನಮ್ಮವರಿಗಾಗಿ ಬದುಕು ನಡೆಸಲು ಸ್ಪೂರ್ತಿ ಇಲ್ಲಿದೆ.






0 Comments