ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪಿನ ಓಣಿಯ ಬೆಳಗುವ ದೀಪಗಳು ..

ಎಲ್. ಸಿ. ಸುಮಿತ್ರಾ ರವರ ಹೊಸ ಕೃತಿ ‘ಮರಳಿ ಬಾರದ ಕಾಲ’

ಅಭಿರುಚಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಕೆ.ಆರ್.ಉಮಾದೇವಿ ಉರಾಳ ಅವರ ಬರಹ ಇಲ್ಲಿದೆ

-ಕೆ.ಆರ್.ಉಮಾದೇವಿ ಉರಾಳ

ಎಲ್. ಸಿ. ಸುಮಿತ್ರಾರವರು ಸಾಹಿತ್ಯ ಲೋಕದಲ್ಲಿ ವಿಮರ್ಶಕಿ, ಕಥೆಗಾರ್ತಿ ಹಾಗೂ ಕವಯಿತ್ರಿಯಾಗಿ ಗಮನಾರ್ಹರಾಗಿರುವವರು. ಅವರ ಇತ್ತೀಚಿನ ಹೊಸ ಪ್ರಕಟಿತ ಕೃತಿ “ಮರಳಿ ಬಾರದ ಕಾಲ”.  “ನೆನಪಿನ ಓಣಿಯ ಬೆಳಗುವ ದೀಪಗಳು” ಎಂಬುದು ಇದರ ಅಡಿಸಾಲು. ಇದರಲ್ಲಿ 27  ವ್ಯಕ್ತಿ ಚಿತ್ರಗಳಿವೆ. ಈ ಕೃತಿ ಅಭಿರುಚಿ ಪ್ರಕಾಶನದ ಪ್ರಕಟಣೆ.  ವ್ಯಕ್ತಿಚಿತ್ರ ಬರಹ ಸಾಹಿತ್ಯದ ಒಂದು ಪ್ರಕಾರವಾಗಿಯೇ ಪರಿಗಣಿಸಲ್ಪಡುವಷ್ಟು ಸಮೃದ್ಧವಾಗಿ ಇಂದು ರೂಪುಗೊಂಡಿರುವಾಗ ಸುಮಿತ್ರಾರವರ  ಈ  ಕೃತಿ ಸಾಹಿತ್ಯದ ಆ ಪ್ರಕಾರಕ್ಕೆ ಒಂದು ಉತ್ತಮ ಕೊಡುಗೆಯಾಗಿದೆ. ಕಾರಣ ಈ ಕೃತಿಯಲ್ಲಿ ಲೇಖಕಿ ತಮ್ಮ ಬದುಕಿನಲ್ಲಿ ತಮ್ಮ ಮೇಲೆ ಪ್ರಭಾವ ಬೀರಿದ ಉನ್ನತ ಚೇತನರ ಕುರಿತು ಬರೆದಿದ್ದಾರೆ. ಅಂತಹ ವ್ಯಕ್ತಿಗಳೊಂದಿಗೆ ತಾವು ಹೊಂದಿದ್ದ ನಿಕಟ ಬಾಂಧವ್ಯ ಹಾಗೂ ಅದರ ಫಲಿತವಾದ ಅವರ ವ್ಯಕ್ತಿತ್ವ ವಿಶೇಷತೆಗಳ ಗ್ರಹಿಕೆಯನ್ನು ಸಹೃದಯತೆಯಿಂದಲೂ ಉತ್ಪ್ರೇಕ್ಷೆಗೆಡೆಯಿಲ್ಲದ  ವಸ್ತುನಿಷ್ಠತೆಯಿಂದಲೂ  ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ಅಂತಹವರಲ್ಲಿ ಸಾಹಿತ್ಯ ಲೋಕದ ಪ್ರಖ್ಯಾತರಿದ್ದಾರೆ.  ಸುಮಿತ್ರಾರವರ ತಂದೆ ತಾಯಿ ಅತ್ತೆ ಅಜ್ಜಿಯಂತಹ ಕುಟುಂಬ ವರ್ಗದವರಿದ್ದಾರೆ.  ತಮ್ಮನ್ನು ಅಪಾರವಾಗಿ ಪ್ರಭಾವಿಸಿದ ಹಲವರು ಗುರುಗಳ ಕುರಿತು ನುಡಿನಮನ ಸಲ್ಲಿಸಿದ ಲೇಖನಗಳಿವೆ.  ಗೆಳೆತನದ ಬಂಧ ಬೀರಿದ ಪ್ರಭಾವದ ಚಿತ್ರಣಗಳಿವೆ.  ಸಹಜ ಸರಳ ಶೈಲಿಯ ನಿರೂಪಣೆಯಿಂದಾಗಿ ಈ ಲೇಖನಗಳಿಗೆ ಪ್ರಾಪ್ತವಾದ ಪ್ರಾಮಾಣಿಕ ಅಭಿವ್ಯಕ್ತಿಯು ಸಹಜವಾಗಿಯೇ ಓದುಗರ ಮನದ ಮೇಲೆ ಸಂವೇದನೆಯ ಪರಿಣಾಮ ಬೀರುತ್ತದೆ.

 ಮೊದಲ ಚಿತ್ರಣ “ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ ರಾಜೇಶ್ವರಿ ಅವರು”.  ಇದು ರಾಜೇಶ್ವರಿ ಇನ್ನಿಲ್ಲ ವಾದ ಸಂದರ್ಭದಲ್ಲಿ  ಬರೆದದ್ದು.  ರಾಜೇಶ್ವರಿ ತೇಜಸ್ವಿಯವರ ಜೀವನೋತ್ಸಾಹ, ಆತ್ಮಪ್ರತ್ಯಯದ ವ್ಯಕ್ತಿತ್ವ, ಅವರ ಸಾಹಿತ್ಯ ಪ್ರೀತಿ, ತಮ್ಮ ತಾಯಿಗಿಂತ ಹಿರಿಯವರಾದರೂ ತಮ್ಮೊಂದಿಗೆ ಸ್ನೇಹಪೂರ್ಣ  ನಡವಳಿಕೆ ತೋರುತ್ತಿದ್ದುದು ಇಂತಹ ವ್ಯಕ್ತಿತ್ವ ವೈಶಿಷ್ಟ್ಯಗಳನ್ನು ಸೋದಾಹರಣವಾಗಿ ಮುಂದಿಟ್ಟಿದ್ದಾರೆ. ಅವರ ಅಡುಗೆ ಪ್ರೀತಿ, ತೋಟದ ಕೆಲಸ, ಸಂಗೀತ ಆಲಿಸುವುದು, ಬರವಣಿಗೆ , ಎಲ್ಲವನ್ನೂ ಸಮಾನ ಆಸಕ್ತಿಯಿಂದ ನಿರ್ವಹಿಸುತ್ತಿದ್ದ ಅವರ ಕ್ರಿಯಾಶೀಲತೆಯನ್ನು ಬಣ್ಣಿಸಿದ್ದಾರೆ.  ಅವರೊಂದಿಗೆ ತಮಗೆ ಲಭಿಸಿದ ಆತ್ಮೀಯ ಒಡನಾಟಗಳನ್ನು,  ತಾವು ಮಾಡಿದ ಅವರ ಸಂದರ್ಶನ, ಅವರು ಲೇಖಕಿಯಾಗಿ ರೂಪುಗೊಂಡ ಬಗೆ ಇವೆಲ್ಲವನ್ನೂ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ.

“ವೈದೇಹಿ ಒಡನಾಟ” ಅಧ್ಯಾಯದಲ್ಲಿ ಕನ್ನಡ ಸಾಹಿತ್ಯಕ್ಕೆ ಕರಾವಳಿ ಕರ್ನಾಟಕದ ಪ್ರಾದೇಶಿಕ ಭಾಷಾ ಸೊಗಡಿನಿಂದಲೇ ಚೈತನ್ಯಪೂರ್ಣ ಸೃಜನಶೀಲತೆಯಿಂದ ಅನನ್ಯ ಸಾಹಿತ್ಯ ಕೃತಿಗಳನ್ನು ರಚಿಸಿರುವ ವೈದೇಹಿಯವರೊಂದಿಗೆ ತಮಗೆ ಲಭಿಸಿದ್ದ ವಿವಿಧ ಒಡನಾಟಗಳ ಸಂದರ್ಭಗಳ ಕುರಿತು ವಿವರಿಸಿದ್ದಾರೆ. ಈ ಒಡನಾಟಗಳಲ್ಲಿ ಮತ್ತು ಅವರ ಕೃತಿಗಳಲ್ಲಿ ವೈದೇಹಿ ಅವರು ಸ್ತ್ರೀ ವಾದಿ ದೃಷ್ಟಿಕೋನವನ್ನು ಕಥೆಗಳಲ್ಲಿ ಪ್ರತಿಪಾದಿಸಿರುವುದು, ಅವರ ಸೃಜನಶೀಲತೆಯ ಒಂದು ಭಾಗವೇ ಆಗಿ ಅವರೊಳಗಿರುವ ಮಗುತನ,  ದಿನನಿತ್ಯದ ಬದುಕನ್ನು ಸಣ್ಣಪುಟ್ಟ ಸಂತೋಷಗಳ ಮೂಲಕ ಸಂಭ್ರಮಿಸುವುದು, ಸಮಾಜದ ತಾರತಮ್ಯಗಳಿಗೆ ಮರುಗುವ  ಅವರ ಸ್ವಭಾವ ಮುಂತಾದ  ಗುಣಗಳ ಈ ಅದ್ಭುತ ಕಥೆಗಾರ್ತಿಯನ್ನು ಆತ್ಮೀಯವಾಗಿ ಚಿತ್ರಿಸಿದ್ದಾರೆ. “ಸಾರಾ ಅಬೂಬಕರ್ ಒಂದು ನೆನಪು”  ಅಧ್ಯಾಯ ಅವರು ಸಾಮಾಜಿಕ ಸಮಸ್ಯೆಗಳ ಚಿತ್ರಣಕ್ಕೆ ಒತ್ತು ನೀಡುತ್ತಿದ್ದುದು, ಸಂಪ್ರದಾಯದ ನಂಬಿಕೆ ಧಾರ್ಮಿಕ ನಂಬಿಕೆಗಳಿಂದ ನಿರಂತರ ನೋವು ಅನುಭವಿಸುತ್ತಿರುವ ಸ್ತ್ರೀ ಸಮುದಾಯದ ಕುರಿತು ಬರೆದುದನ್ನು ದಾಖಲಿಸಿದ್ದಾರೆ. ಉಷಾ ರೈ ಅವರ ವಿಧಿಗೆ ಸವಾಲು ಎಸೆದು ಕಷ್ಟಗಳನ್ನೆದುರಿಸಿದ ಜೀವನ್ಮುಖಿ ನಿಲುವು ಅವರ ಕುರಿತ ಲೇಖನದಲ್ಲಿದೆ. 

 ಶೀರ್ಷಿಕೆ ಲೇಖನ “ಮರಳಿ ಬಾರದ ಕಾಲ”ದಲ್ಲಿ ಸುಮಿತ್ರಾ ತಮ್ಮ ಬದುಕಿನ ಮೇಲೆ ವಿಶೇಷವಾಗಿ ಪ್ರಭಾವ ಬೀರಿದ್ದ ತಮ್ಮ ತಂದೆಯನ್ನು ಹಾಗೂ ತಾಯಿಯನ್ನು ನೆನೆದಿದ್ದಾರೆ. ಮನೆಯಲ್ಲಿರುತ್ತಿದ್ದ  ಕನ್ನಡದ ಪ್ರಮುಖ ಸಾಹಿತಿಗಳ ಪುಸ್ತಕಗಳು,  ಮನೆಗೆ ಬರುತ್ತಿದ್ದ ಪತ್ರಿಕೆಗಳು,  ಪ್ರೀತಿಯ ಮಗಳ ಬಯಕೆಯ ಸಾಹಿತ್ಯ ಕೃತಿಗಳನ್ನು ಶಿವಮೊಗ್ಗದಿಂದ ತಂದು ಕೊಡುತ್ತಿದ್ದುದು   ಹೀಗೆ ಲೇಖಕಿಯಲ್ಲಿ ಸಾಹಿತ್ಯ ದೊಲುಮೆಯ ಬೀಜ ಬಿತ್ತಿದವರು ತಂದೆ.  ಶ್ರಧ್ಧಾವಂತ ಕೃಷಿಕರಾಗಿದ್ದವರು. ಆಧುನಿಕ ವಿಚಾರಧಾರೆಯಿಂದಾಗಿ ಮಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿದವರು. ತಾಯಿಯ ಕರಕುಶಲತೆ ಪ್ರಸ್ತಾಪಿಸುತ್ತಾ ಅವರ ಹಠದ ಸ್ವಭಾವವನ್ನೂ ಹೇಳುವಲ್ಲಿ ಸುಮಿತ್ರಾ ವ್ಯಕ್ತಿ ಚಿತ್ರಣದಲ್ಲಿ ವಸ್ತುನಿಷ್ಠತೆಗೆ ಒತ್ತು ಕೊಟ್ಟಿರುವುದು ವ್ಯಕ್ತವಾಗುತ್ತದೆ. ಹಾಗೂ ಇದರಿಂದಾಗಿ ಇಲ್ಲಿನ ವ್ಯಕ್ತಿ ಚಿತ್ರಗಳು  ಓದುಗರ ಮನದಲ್ಲಿ ಪ್ರತಿಬಿಂಬಿಸಲು ಕಾರಣವಾಗಿದೆ. ಹಾಗೆಯೇ ತಾಯಿಯ ಕುರಿತು “ಅಮ್ಮ ನೆನಪಿನಲ್ಲಿ ಮಾತ್ರ ಅಲ್ಲ” ಎಂಬ ಪ್ರತ್ಯೇಕ ಅಧ್ಯಾಯವೂ ಇದೆ.  “ನನ್ನ ಅಜ್ಜಿಗೆ ಮನೆಯೇ ಜಗತ್ತು” ಅಧ್ಯಾಯದಲ್ಲಿ ಮೊಮ್ಮಗಳೆಡೆಗಿನ ಆ ಮಮತಾಮಯಿ ಅಜ್ಜಿಯ ಹಚ್ಚಗಿನ ಬೆಚ್ಚಗಿನ ಪ್ರೀತಿಯ ಹೊನಲು ಓದುಗರೆದೆಯನ್ನೂ ಆರ್ದ್ರವಾಗಿಸುತ್ತದೆ. ಸುಮಿತ್ರಾ ರವರು “ನನ್ನ ಅತ್ತೆ ನಾಗರತ್ನಮ್ಮ” ಅಧ್ಯಾಯದಲ್ಲಿ ತಮ್ಮ ಅತ್ತೆಯ ಕ್ರಿಯಾಶೀಲ ವ್ಯಕ್ತಿತ್ವ, ಮಾನವಿಯ ಗುಣಗಳು, ಅವರು ತೋರಿದ ಪ್ರೀತಿಯ ಕುರಿತು ಬರೆದಿದ್ದಾರೆ.

 ತಮ್ಮ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಗುರು ವೃಂದದ ಹಲವರ ಕುರಿತ ಲೇಖನಗಳಲ್ಲಿ “ವಿಜಯಾದಬ್ಬೆ ನಮ್ಮ ಮೇಡಂ”  ಲೇಖನ ತಮ್ಮ ಸೌಮ್ಯ ಸ್ವಭಾವ ಮೆದು ಮಾತು ನಗು ಮುಖದೊಂದಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದ ಅವರ ಒಡನಾಟದ ಹಲವಾರು ಸಂದರ್ಭಗಳು, ಸಂಪ್ರದಾಯವನ್ನು ಮೆಟ್ಟಿ ನಿಂತು ಅಂತರ್ಧರ್ಮೀಯ ವಿವಾಹವನ್ನು ರಿಜಿಸ್ಟರ್ಡ್ ಮದುವೆಯಾಗಿದ್ದ ಅವರ ದಿಟ್ಟ ನಿಲುವು ಹೀಗೆ ಅವರ ವ್ಯಕ್ತಿತ್ವ ವಿಶೇಷತೆಗಳನ್ನು ಹೇಳುತ್ತಾ ಕೊನೆಯಲ್ಲಿ ಅಪಘಾತದಿಂದಾಗಿ ಅವರಿಗೆ ಒದಗಿದ ಕಷ್ಟ ಪರಂಪರೆಗಳನ್ನು ನೋವಿನಿಂದ ಮಿಡಿವ ಹೃದಯದಿಂದಲೇ ನಿರೂಪಿಸಿದ್ದಾರೆ.  ಕವಿತೆಯೊಂದರ ಹೃದಯ ಪ್ರವೇಶಿಸುವುದು ಹೇಗೆ ಎಂದು ಬೋಧನೆಯಿಂದ ತೋರಿಸಿಕೊಟ್ಟ ಜಿ.ಎಚ್. ನಾಯಕರ ನೆನೆಕೆಯ ಲೇಖನವಿದೆ. ಲೇಖಕಿಯ ಅಪಾರ ಗೌರವಕ್ಕೆ ಪಾತ್ರರಾದ ಶ್ರೀನಿವಾಸ ಉಡುಪರ ಕೃತಿ  “ಆಸ್ವಾದ” ಹೇಗೆ ಕಾವ್ಯಾಸ್ವಾದನದ ಒಂದು ಮಾದರಿಯಾಗಿದೆ ಎಂಬುದರ ವಿಶ್ಲೇಷಣಾ ಪ್ರಬಂಧವಿದೆ. ತಮ್ಮ ಕನ್ನಡ ಪ್ರಾಧ್ಯಾಪಕರಾದ ಕಲ್ಲಹಳ್ಳ ಗಂಗಾಧರ್ ರವರ ಕೃಷಿ ಪ್ರೀತಿ, ಪರಿಸರ ಕಾಳಜಿ, ಮುದ್ರಣಾಲಯ ನಡೆಸುವುದು, ಬರಹಕ್ಕಿಂತ ಬದುಕು ಮುಖ್ಯ ಎಂಬಂತೆ ಅವರು ಬದುಕಿದು ದರ ಚಿತ್ರಣ ಇದೆ. ಶ್ರೀಕಂಠ ಕೂಡಿಗೆಯವರ ಪ್ರತಿಭೆ, ವಿದ್ವತ್ತು,  ಸುಂದರ ಹಸ್ತಾಕ್ಷರ, ಅವರ ವಿಚಾರವಂತಿಕೆಯನ್ನು ಚಿತ್ರಿಸಿದ್ದಾರೆ.   “ಮನದಲ್ಲಿ ನಿಂತು ಮಾರ್ಗ ತೋರಿದವರು”  ಲೇಖನದಲ್ಲಿ ತಮ್ಮ ಹಲವರು ಗುರುಗಳ ಕುರಿತ ಗುರುನಮನವಿದೆ. 

 ತೀರ್ಥಹಳ್ಳಿಯ ಹಿರಿಮೆಯ ಹಿರಿಯರಾದ ಡಾಕ್ಟರ್ ರಂಗಪ್ಪನವರು, ರಾಘವ ಜವಳಿಯವರು, ಜಸ್ಟಿಸ್ ಎಂ. ಡಿ. ವೆಂಕಟೇಶ್, ಕಡಿದಾಳು ರಾಮಪ್ಪಗೌಡರು, ಡಾಕ್ಟರ್ ಎ. ಎನ್. ನಾಗರಾಜ್, ಬಿ. ಎಸ್. ವಿಶ್ವನಾಥ್,  ಕಡಿದಾಳು ದಯಾನಂದ್ ಇವರೆಲ್ಲರ ಕುರಿತ ಪ್ರತ್ಯೇಕ ಅಧ್ಯಾಯಗಳು ಅವರ ವಿಶಿಷ್ಟ ವ್ಯಕ್ತಿತ್ವ ಸಾರವನ್ನು ಅನಾವರಣಗೊಳಿಸಿವೆ.

 “ಪೂರ್ಣಿಮಾ ನೀನಿಲ್ಲದೆ ವರ್ಷಗಳು” ಹೆಗ್ಗೋಡಿನ ಇಂಗ್ಲಿಷ್ ಪ್ರಾಧ್ಯಾಪಕರು, ಲೇಖಕಿ, ನೀನಾಸಂ ನ ಪೂರ್ಣಿಮಾ ಅಕಾಲ ಮರಣಕ್ಕೆ ಈಡಾದಾಗ ಗೆಳತಿಯ ಅಗಲುವಿಕೆ ಸಹಿಸದ ಲೇಖಕಿ ಮನದಾಳದ ಶೋಕರಸದಲ್ಲಿ ಅದ್ದಿ ತೆಗೆದು ಬರೆದಂತಹ ಪತ್ರರೂಪದ ನುಡಿನಮನ. ಇದು ಪೂರ್ಣಿಮಾರ ಸ್ನೇಹಮಯ ಸತ್ವಪೂರ್ಣ ಪ್ರತಿಭಾವಂತ ವ್ಯಕ್ತಿತ್ವ, ಅವರ ಮಾನವೀಯ ಮುಖವನ್ನು ಕಡೆದಿಟ್ಟಿದೆ. “ಅನಲ ಎಂಬ ಗೆಳತಿ”  ಇಂದು ಪ್ರವ್ರಾಜಿಕಾ ಪರಮಪ್ರಾಣ ಎಂದು ಸನ್ಯಾಸಿ ಆಗಿರುವ ತಮ್ಮ ಓದಿನ ದಿನಗಳ ಗೆಳತಿಯ ಕುರಿತ ಹೃದಯಂಗಮ ಲೇಖನ.

 ಆಯಾ ವ್ಯಕ್ತಿಗಳ ವ್ಯಕ್ತಿತ್ವ ವಿಶೇಷತೆಗಳನ್ನು ಲೇಖಕಿ  ಚಿತ್ರಿಸಿರುವಂತೆಯೇ ಆಯಾ ಕಾಲಮಾನದ ಸಾಮಾಜಿಕ ಚಿತ್ರಣವನ್ನೂ ಅದರೊಂದಿಗೆ ಕೊಟ್ಟಿದ್ದಾರೆ.  ಅಂದಿನ ದಿನಗಳ ಮೌಲ್ಯಗಳಿಗೂ ಇಂದಿನ ಬದಲಾದ ಸಂದರ್ಭದಲ್ಲಿ ಕೆಲವೊಂದು ಮೌಲ್ಯಗಳು ಅವನತಿ ಆಗಿರುವುದನ್ನೂ ತುಲನೆ ಮಾಡಿ ಓದುಗರ ಮುಂದಿಟ್ಟಿದ್ದಾರೆ. ‘ವಿದ್ಯಾವಂತರು ಗ್ರಾಮಗಳಲ್ಲಿ ನೆಲೆಸಬೇಕು ಆಗ ಕೃಷಿಯ ಸ್ಥಿತಿ ಮತ್ತು ಕೃಷಿಕರ ಸ್ಥಿತಿ ಎರಡೂ ಸುಧಾರಿಸುತ್ತದೆ’ ಎಂಬ ಸುಮಿತ್ರಾರವರ ಪರಿಸರ ಪ್ರೀತಿ, ಕೃಷಿಯ  ಕಾಳಜಿಯ ಮಾತುಗಳು ಮನ ತಟ್ಟುತ್ತವೆ. ಕೃತಿಯ ಲೇಖನಗಳು ಮಾದರಿ ವ್ಯಕ್ತಿತ್ವಗಳೊಂದಿಗೆ ಸಾಮಾಜಿಕ ಚಿತ್ರಣವನ್ನು , ಚಿಂತನೆಗಳನ್ನು ಓದುಗರಿಗೆ ದೊರಕಿಸಿಕೊಡುತ್ತವೆ. ಡಾ. ಕೆ. ಪುಟ್ಟಸ್ವಾಮಿ ಬೆನ್ನುಡಿ ಬರೆದಿದ್ದಾರೆ.

‍ಲೇಖಕರು Admin

27 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading