ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪರಾಗ್ ಉತ್ಸವ್ 2026

-ಶ್ಯಾಮಲಾ ಮಾಧವ

ಮುಂಬೈ NCPA – National Centre For Performing Arts – ಇಲ್ಲಿ ಆಯೋಜಿಸಲಾದ ಭಾರತೀಯ ಮಕ್ಕಳ ಸಾಹಿತ್ಯೋತ್ಸವ ಮನವನ್ನು ಸಂಪೂರ್ಣ ಸೂರೆಗೊಂಡಿತು. TATA TRUST ನಿಂದ ಆಯೋಜಿತವಾದ ಈ ಮಹತ್ವಪೂರ್ಣ ಸಾಹಿತ್ಯಿಕ ಸಮ್ಮಿಲನಕ್ಕೆ ಕರೆಯಿತ್ತವರು ಬೆಂಗಳೂರಿನ TATA ಸಂಸ್ಥೆಯ ವಿವೇಕ್ ಬಿ ಜಿ. ಜಿ.ಎನ್.ಮೋಹನ್ ಸರ್ ಮುಖಾಂತರ ಪರಿಚಿತರಾದ ವಿವೇಕ್ ಮೇರು ಉತ್ಸಾಹದ, ಚಟುವಟಿಕೆಯ ಬುಗ್ಗೆ.

ಉತ್ಸವಕ್ಕೆ ಅವರು ಕರೆಯಿತ್ತಾಗ ಆ ಬಗ್ಗೆ ಹೆಚ್ಚೇನೂ ಅರಿಯದೆ ಪ್ರಯತ್ನಿಸುವೆ, ಎಂದಿದ್ದೆ. ಇಲ್ಲ, ಬರಲೇ ಬೇಕು, ಎಂದು ಆಗ್ರಹಿಸಿದ ವಿವೇಕ್ ಅವರಿಗೆ ಆಭಾರಿ ಆಗಿರುವೆ.

NCPA – Godrej Dance Theatre ನ ಪ್ರಶಾಂತ, ಸುಂದರ ಹೊರಾಂಗಣ, ಅಲ್ಲಿ ವ್ಯವಸ್ಥಿತವಾಗಿ ಅಲಂಕೃತವಾಗಿದ್ದ ಆಸನಗಳು, ಮಕ್ಕಳ ಪುಸ್ತಕ, ಪತ್ರಿಕೆ ಸ್ಟ್ಯಾಂಡ್ ಗಳು ಮನಸೆಳೆದುವು.

ನಿನ್ನೆ ತಾನೇ ಮುಂಬೈ ಯೂನಿವರ್ಸಿಟಿ ಕ್ಯಾಂಪಸ್ ಮೈದಾನದಲ್ಲಿ ನ್ಯಾಶನಲ್ ಬುಕ್ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಲ್ಪಟ್ಟಿರುವ ಪುಸ್ತಕ ಮೇಳದಲ್ಲಿ ಭಾಗವಹಿಸಿ, ಲಕ್ಷಗಟ್ಟಲೆ ವಿದ್ಯಾರ್ಥಿಗಳು ಮುಗಿಬಿದ್ದಿದ್ದನ್ನು ಕಂಡು ಗರಿಗೆದರಿದ ಉತ್ಸಾಹ ಇಂದಿನ ಪರಾಗ್ ಉತ್ಸವದಲ್ಲಿ ಸಾರ್ಥಕ್ಯವನ್ನು ಕಂಡಿತು.

ಭಾರತೀಯ ಮಕ್ಕಳ ಸಾಹಿತ್ಯದ ಪ್ರಚಾರ ಮತ್ತು ಪೋಷಣೆಗಾಗಿ ಕಟಿಬಧ್ಧವಾಗಿರುವ ಸಂಸ್ಥೆ, ಪರಾಗ್. ಪ್ರತಿಯೊಬ್ಬ ಮಗು ಮತ್ತು ಆ ಮಗುವಿನ ಬಾಲ್ಯವು ಓದಿನ ಸಂತಸದಿಂದ ವಿಕಸಿಸುವುದನ್ನೇ ತಮ್ಮ ಗುರಿಯಾಗಿಸಿ ಕೊಂಡಿರುವುದಾಗಿ ಪರಾಗ್ ಸಾರಿದೆ.

ನಾವು ಕನ್ನಡಿಗರಿಗೆ ಹೆಮ್ಮೆಯ ಗರಿ ಮೂಡುವಂತೆ ಈ ಬಾರಿಯ Parag Author Prize – ಪರಾಗ್ ಲೇಖಕ ಬಹುಮಾನ – 2026- ಕನ್ನಡ ಲೇಖಕ ಬಳ್ಳಾರಿಯ ಕೆ.ಶಿವಲಿಂಗಪ್ಪ ಹಂದೀಹಾಳ ಅವರಿಗೆ ಲಭಿಸಿದೆ.
ಹಾಗೂ ಪರಾಗ್ ಚಿತ್ರಕಲಾ ಬಹುಮಾನ –
Parag Illustration Prize – ಶಿವಂ ಚೌಧುರಿ ಅವರಿಗೆ ಸಂದಿದೆ.

ಓದುವ ಮಕ್ಕಳ ಆಯ್ಕೆಯ ಪುಸ್ತಕ ಬಹುಮಾನಗಳೂ ಪ್ರೇಕ್ಷಕರನ್ನು ಸೆಳೆದುವು.
ಸ್ಪರ್ಧಾ ಕಣಕ್ಕೆ ಬಂದ ಪುಸ್ತಕಗಳು, ಮಕ್ಕಳು ಅವರ ತರಗತಿಗಳು, ಆಯ್ಕೆಗಳು ವಿವೇಕ್ ಅವರ ವೀಡಿಯೋ ಡಿಸ್ಪ್ಲೇ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದುವು.

ಚಲೀ ಕಹಾನಿ ನಾಟಕ ಪ್ರದರ್ಶನ ಸಭಿಕರನ್ನೂ ಒಳಗೊಂಡು ಸಭೆಯನ್ನು ನಗೆಗಡಲಲ್ಲಿ ತೇಲಿಸಿತು. ಮತ್ತೆ ನಡೆದ ಗುಫ್ತಗೂ ಮಾತಿನ ಮಂಟಪಕ್ಕೆ ಬರಲಿದ್ದ ಖ್ಯಾತ ಕವಿ,ಲೇಖಕ ಗುಲ್ಜಾರ್ ಅವರು ಅನಾರೋಗ್ಯದ ಕಾರಣ ಬರಲಾಗದೆ ಹೋದ ನಷ್ಟ ನಮ್ಮದು. ಕವಿ ಸುಶೀಲ್ ಶುಕ್ಲಾ ಹಾಗೂ ಸ್ಟಾರ್ಟ್ ಅಪ್ ಕಾಮೆಡಿ ಕವಿ ವರುಣ್ ಗ್ರೋವರ್ ಅವರೊಡನೆ ಸಂಸ್ಥೆಯ ಪ್ರಾಚಿ ಕಾಲ್ರಾ ನಡೆಸಿದ ಸಂವಾದ ಚೇತೋಹಾರಿಯಾಗಿತ್ತು.

ತಾನು ಸಾಹಿತಿಯಲ್ಲ ಎನ್ನುತ್ತಲೇ ಕೊನೆಯಲ್ಲಿ ಬಹಳ ಮೌಲಿಕವಾಗಿ ಮಾತನಾಡಿದವರು, ಹಿಮೋತ್ಥಾನ್ ಸಂಸ್ಥೆಯ ಚೇರ್ ಮಾನ್ ರಾಜೇಶ್ ತದಾನಿ ಅವರು.

ಮಕ್ಕಳ ಸಾಹಿತ್ಯ ಲೋಕವನ್ನು ಇನ್ನೂ ಪ್ರಿಯವಾಗಿಸಿದ , ನಮ್ಮೆಲ್ಲರನ್ನು ಪುನಃ ಮಕ್ಕಳಾಗಿಸಿದ ಪರಾಗ್ ಸಂಸ್ಥೆ ಸಾಹಿತ್ಯದ ಕಂಪನ್ನು ಬೀರುತ್ತಾ ಉತ್ತರೋತ್ತರ ಯಶಸ್ಸು ಕಾಣುತ್ತಾ ಬೆಳಗುತಿರಲಿ.

‍ಲೇಖಕರು Admin

28 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading