ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಕ್ಷರ ಸಂಗಾತ’ಕ್ಕೆ ವಿದಾಯ

–ಡಾ.ಟಿ.ಎಸ್.ಗೊರವರ

ʼಅಕ್ಷರ ಸಂಗಾತ’ ಒಂಬತ್ತು ವರ್ಷ ಪೂರೈಸಿ ಹತ್ತನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಇಂಥ ಹೊತ್ತಿನಲ್ಲಿ ತನ್ನ ಸುದೀರ್ಘ ಪಯಣವನ್ನು ಡಿಸೆಂಬರ್ ವಿಶೇಷ ಸಂಚಿಕೆಯೊಂದಿಗೆ ನಿಲ್ಲಿಸುತ್ತಿದೆ.

ಏಕಾಏಕಿ ಹೀಗೆ ಪ್ರಕಟಣೆಯನ್ನು ನಿಲ್ಲಿಸುತ್ತಿರುವುದಕ್ಕೆ ಸ್ವತಃ ನನಗೇ ಬೇಸರವಿದೆ. ಈ ಟಿಪ್ಪಣಿಯನ್ನು ಬರೆಯುತ್ತಿರುವ ಈ ಹೊತ್ತಿನಲ್ಲಿ ಮನಸು ಭಾರವಾಗಿ ದುಗುಡಗೊಂಡಿದೆ. ಕಣ್ಣಾಲಿಗಳ ತುಂಬಾ ತೆಳ್ಳಗೆ ನೀರು ಸುಳಿದಿರುಗುತ್ತಿದೆ. ವಿದಾಯದ ಸಹಜ ಭಾವುಕತೆ ಬಳ್ಳಿಯಂತೆ ಮೈಮನವನ್ನು ಬಾಚಿ ತಬ್ಬಿಕೊಂಡಿದೆ.

ದಶಕಗಳ ಕಾಲ ಸತತ ಪ್ರಕಟಗೊಳ್ಳುವುದೆಂದರೆ ಸಾಹಿತ್ಯ ಪತ್ರಿಕೆಗೆ ದೀರ್ಘಾಯುಷ್ಯವಿದ್ದಂತೆ. ಅಂಥದೊಂದು ಆಯುಷ್ಯವನ್ನು ಈಗ ಪತ್ರಿಕೆ ಪೂರೈಸಿದೆ. ಅಷ್ಟೊಂದು ದಿನ ಪತ್ರಿಕೆಯನ್ನು ತಪಸ್ಸಿನಂತೆ ಕಟ್ಟಿ ಬೆಳೆಸಿ, ನಾಡಿನುದ್ದಕ್ಕೂ ಓದುಗರಿಗೆ ತಲುಪುವ ಹಾಗೆ ದಣಿವರಿಯದೆ ಶ್ರಮಿಸಿರುವೆ. ಇದು ನನ್ನ ಬದುಕಿನ ಉಜ್ವಲ ಗಳಿಗೆಗಳಲ್ಲಿ ಒಂದಾಗಿದೆ.

ಮುಖ್ಯವಾಹಿನಿಯ ಪತ್ರಿಕೋದ್ಯಮವೇ ಕಾಗದ, ಮತ್ತಿತರ ಖರ್ಚುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವಾಗ ‘ಅಕ್ಷರ ಸಂಗಾತ’ ಜಿದ್ದಿಗೆ ಬಿದ್ದಂತೆ ಅಷ್ಟೂ ವರ್ಷಗಳ ಕಾಲ ಒಂದು ಸಂಚಿಕೆಯನ್ನೂ ತಪ್ಪಿಸದಂತೆ ಪ್ರಕಟಗೊಂಡು ಬದ್ಧತೆ ಮೆರೆದಿದೆ. ನಿಗದಿತ ಸಮಯಕ್ಕೆ ಚಂದಾದಾರರಿಗೆ ತಲುಪಿದೆ. ಸಂಚಿಕೆಯಿಂದ ಸಂಚಿಕೆಗೆ ಪ್ರಬುದ್ಧಗೊಳ್ಳುತ್ತ, ಹೊಸದಾಗಿ ರೂಪಗೊಳ್ಳುತ್ತ, ವಿಶಿಷ್ಟವಾದ ಬರಹ, ಅಲಕ್ಷಿತ ಧ್ವನಿಗಳಿಗೆ ಸ್ಥಳಾವಕಾಶ ಕಲ್ಪಿಸುತ್ತ ತನ್ನ ಸೃಜನಶೀಲತೆಯನ್ನೂ, ನಿಷ್ಟುರತೆಯನ್ನೂ ಕಾಪಿಟ್ಟುಕೊಳ್ಳುತ್ತ ತನ್ನದೇ ಹಾದಿಯನ್ನು ನಿರ್ಮಿಸಿಕೊಳ್ಳುತ್ತ ಬಂದಿದೆ.

ಪ್ರಕಟಗೊಂಡ ಹತ್ತಾರು ಸಾವಿರ ಪುಟಗಳು ವೈವಿಧ್ಯತೆಯಿಂದ ಕೂಡಿದ್ದವು. ಕನ್ನಡದ ಚೆಲುವನ್ನೂ, ಸೊಗಸನ್ನು ಬೆಳಗುವಂತಿದ್ದವು. ಹೊಸ ತಲೆಮಾರನ್ನು ಕೈ ಹಿಡಿದು ನಡೆಸುತ್ತ, ಹಿರಿಯ ತಲೆಮಾರಿನ ಕ್ರಿಯಾಶೀಲತೆಗೆ ಬೆರಗುಗೊಳ್ಳುತ್ತ, ಜಾಗತಿಕ ಸಾಹಿತ್ಯದ ಸವಿಯನ್ನು ಉಣಬಡಿಸುತ್ತ, ಸಾಹಿತ್ಯಕ ವಾಗ್ವಾದ, ಚರ್ಚೆಗಳನ್ನು ಬೆಳೆಸುತ್ತ ‘ಅಕ್ಷರ ಸಂಗಾತ’ ಎಲ್ಲರೊಡಗೂಡಿ ಕನ್ನಡದ ತೇರು ಎಳೆಯಲು ಕೈಗೂಡಿಸಿದ ವಿದ್ಯಮಾನ ಸಾರ್ಥಕತೆಯನ್ನು ತಂದಿದೆ.

ಎಲ್ಲಕ್ಕಿಂತ ಮಿಗಿಲಾಗಿ ಅಕ್ಷರ ವಂಚಿತ, ಕೂಲಿ ದುಡಿಮೆಯನ್ನೇ ನೆಚ್ಚಿಕೊಂಡ ಬರಿಗೈ ಕುಟುಂಬದಿಂದ ಬಂದ ನಾನು ನಮ್ಮ ಮನೆಯಲ್ಲೇ ಮೊದಲ ಸಾಕ್ಷರ. ಬರವಣಿಗೆಯನ್ನು ಜೀವನ್ಮರಣದ ಪ್ರಶ್ನೆಯಾಗಿಸಿಕೊಂಡು ಓದುತ್ತ, ಬರೆಯುತ್ತ, ಅಪಮಾನಕ್ಕೆ ಒಳಗಾಗುತ್ತ, ಕನಸಿನಂಥ ‘ಅಕ್ಷರ ಸಂಗಾತ’ವನ್ನು ಕಟ್ಟಿ ಮುನ್ನಡೆಸಿದ್ದು ನನಗೇ ರೋಚಕವಾಗಿ ತೋರುತ್ತಿದೆ.

ಇಂಥ ರೋಚಕ ನಡಿಗೆಯನ್ನು ನಿಲ್ಲಿಸುತ್ತಿರುವುದಕ್ಕೆ ಬಲವಾದ ಕಾರಣಗಳೇನೂ ಇಲ್ಲ. ಪತ್ರಿಕೆಯೆಂದರೆ ಅದರೊಂದಿಗೆ ಪ್ರತಿ ಕ್ಷಣವೂ, ದಿನವೂ ಜೀವಿಸಲೇಬೇಕು. ಜಗತ್ತಿನಲ್ಲಿ ಹಿತವೋ, ಅಹಿತವೋ ಏನಾದರೂ ಸಂಭವಿಸಲಿ, ಪತ್ರಿಕೆ ಮಾತ್ರ ಡೆಡ್ಲೈನ್ನೊಳಗೆ ರೂಪಗೊಂಡು ಪ್ರಕಟಗೊಳ್ಳಬೇಕು. ಅದಕ್ಕೆ ಯಾವ ವಿನಾಯತಿಯೂ ಇರುವದಿಲ್ಲ. ಅದೊಂದು ಓಟವಿದ್ದಂತೆ. ದಣಿವರಿಯದೆ ಓಡುತ್ತಲೇ ಇರಬೇಕು. ಯಾಕೋ ಈಗ ತುಸು ದಣಿವು ಅನ್ನಿಸುತ್ತಿದೆ. ಹೀಗೆ ಅನ್ನಿಸುತ್ತಿರುವಾಗ ದಣಿವು ಆರಿಸಿಕೊಳ್ಳಲೇಬೇಕು. ಇಂಥ ದಣಿವು ಆವರಿಸಿದಾಗಲೇ ಈ ಹಿಂದೆ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ‘ವಿಜಯ ಕರ್ನಾಟಕ’ಕ್ಕೆ ವಿದಾಯ ಹೇಳಿ ‘ಅಕ್ಷರ ಸಂಗಾತ’ ಆರಂಭಿಸಿದ್ದೆ. ಈಗ ಅಂಥದೇ ವಿದಾಯವನ್ನು ಈ ಪತ್ರಿಕೆಗೂ ಹೇಳುತ್ತಿರುವೆ.
ವೈಯಕ್ತಿಕ ಜವಾಬ್ದಾರಿಗಳೂ ಸಮಯ ಕೇಳುತ್ತಿವೆ. ಪತ್ರಿಕೆಗಷ್ಟೇ ಬರೆಯುತ್ತ ಉಳಿದಂತೆ ಬಹುತೇಕ ನಿಂತೇ ಹೋಗಿರುವ ಸ್ವಂತದ ಬರವಣಿಗೆಯೂ ಪುರಸೊತ್ತು ಬೇಡುತ್ತಿದೆ. ಮುಂದೆ ಯಾವತ್ತಾದರೂ ಮತ್ತೆ ಪತ್ರಿಕೆ ಆರಂಭಿಸಬೇಕು ಅನ್ನಿಸಿದರೆ ಖಂಡಿತ ಆರಂಭಿಸುವೆ.

ಮುಖತಃ ಎಂದೂ ಭೇಟಿಯಾಗದ ಸಾವಿರಾರು ಓದುಗರಿದ್ದಾರೆ. ಅವರ ನಿಶ್ವಾರ್ಥ ಪ್ರೀತಿ, ಕಾಳಜಿಗೆ ಬೆಲೆ ಕಟ್ಟಲಾಗದು. ಅವರೆಲ್ಲ ಇಷ್ಟು ಕಾಲ ಒಟ್ಟಿಗಿದ್ದು, ಪ್ರೀತಿಯಿಂದ ‘ಅಕ್ಷರ ಸಂಗಾತ’ವನ್ನು ಓದಿದ್ದಾರೆ. ಬೆಳೆಸಿದ್ದಾರೆ. ಕನ್ನಡದ ಲೇಖಕರು ಅಭಿಮಾನದಿಂದ ಬರೆದಿದ್ದಾರೆ. ಇವರೆಲ್ಲರ ಕಾರಣದಿಂದಲೇ ಪತ್ರಿಕೆ ಇಷ್ಟೊಂದು ಸೊಗಸುಗೊಂಡು ಪ್ರಕಟಗೊಂಡಿದೆ. ನುಡಿ ಸೇವೆ ಮಾಡಲು ಸಾಧ್ಯವಾಗಿದೆ. ಅವರೆಲ್ಲರ ಋಣಭಾರ ನನ್ನ ಮೇಲಿದೆ. ನಿಮ್ಮನ್ನು ಯಾವತ್ತೂ ನೆನಪಿಸಿಕೊಳ್ಳುವೆ.

ಪತ್ರಿಕೆ ಚೆಂದವಾಗಿ ರೂಪಗೊಳ್ಳಲು ಅನೇಕ ಪುಟ ವಿನ್ಯಾಸಕಾರರು ಕೆಲಸ ಮಾಡಿದ್ದಾರೆ. ಅವರಿಗೂ, ಮುಖಪುಟಕ್ಕೆ ತಮ್ಮ ಕಲಾಕೃತಿಗಳನ್ನು ನೀಡಿದ ಕಲಾವಿದರಿಗೂ, ವಿಶೇಷಾಂಕಗಳಿಗೆ ಜಾಹೀರಾತು ನೀಡುತ್ತಿದ್ದ ಹಿತೈಸಿಗಳಿಗೂ, ಮುದ್ರಕರಿಗೂ, ಸರಿಯಾದ ಸಮಯಕ್ಕೆ ಓದುಗರಿಗೆ ತಲುಪಿಸಿದ ಅಂಚೆಯವರ ಶ್ರಮಕ್ಕೆ ಬರೀ ಧನ್ಯವಾದಗಳು ಎಂದರೆ ಕೃತಕ ಅನ್ನಿಸುವುದು.

ತನ್ನ ಅನುದಿನದ ನೌಕರಿಯ ಬಿಡುವಿಲ್ಲದ ವೇಳೆಯಲ್ಲೂ ಕೆಲಸದ ಹುಡುಗರಿಂದ ಪತ್ರಿಕೆಗೆ ಅಂಚೆ ಚೀಟಿ, ವಿಳಾಸ ಅಂಟಿಸಿ ಪೋಸ್ಟಿಗೆ ರವಾನಿಸುವ ಜವಾಬ್ದಾರಿ ಪೂರೈಸುತ್ತಿದ್ದ ದುರ್ಗಶ್ರೀಗೂ, ತನ್ನವ್ವನಿಗೆ ನೆರವಾಗುತ್ತ ‘ಹಿರೇತನ’ ಮಾಡುತ್ತಿದ್ದ ಪುಟ್ಟ ಮಗಳು ಸ್ವರಳಿಗೂ ಪ್ರೀತಿಯ ಮುತ್ತುಗಳು..

ಮತ್ತಿನ್ನೇನು ಬರೆಯಲಿ? ಇಷ್ಟು ಸಾಕೆನಿಸುತ್ತಿದೆ. ಮತ್ತೆ ನನ್ನ ಹೊಸ ಕೃತಿಗಳು, ಹೊಸ ಕೆಲಸ, ಕನಸುಗಳ ಮೂಲಕ ನಿಮ್ಮನ್ನು ಭೇಟಿ ಮಾಡುವೆ. ಅಕ್ಕರೆ ತೋರಿದ ಕನ್ನಡದ ಓದುಗರಿಗೆ, ಲೇಖಕರಿಗೆ, ಮತ್ತೆ ಎಲ್ಲರಿಗೂ ಮತ್ತೊಮ್ಮೆ ನಮಿಸುವೆ.


ಈ ಡಿಸೆಂಬರ್ ಸಂಚಿಕೆಗೆ ಬಹುತೇಕರ ಚಂದಾ ಮುಗಿಯಲಿದೆ. ಆದರೆ, ಇನ್ನು ಕೆಲವರು ಎರಡು, ಮೂರು ವರ್ಷ ಚಂದಾ ಮಾಡಿಸಿದವರು ಇದ್ದಾರೆ. ಮತ್ತೆ ಕೆಲವರು ಆಜೀವ ಚಂದಾ ಮಾಡಿಸಿದ್ದಾರೆ. ಇವರೆಲ್ಲರಿಗೂ ಅಷ್ಟು ಹಣಕ್ಕೆ ಸರಿ ಹೊಂದುವಂತೆ ಇನ್ನು ಮುಂದೆ ಪ್ರಕಟಗೊಳ್ಳಲಿರುವ ‘ಸಂಗಾತ ಪುಸ್ತಕ’ ಪ್ರಕಾಶನದ ಹೊಸ ಪುಸ್ತಕಗಳನ್ನು ಕಳಿಸಿ ಕೊಡುವೆವು.
ಎಂದಿನಂತೆ ತಮ್ಮ ಪ್ರೀತಿ, ಕಾಳಜಿ ಸದಾ ಇರಲಿ !

‍ಲೇಖಕರು Admin

23 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading