ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧೀಜಿ : ಪ್ರಯೋಗಶೀಲತೆಯ ಸಂಚಾರಿ ನಕ್ಷತ್ರ 

-ರಾಜೇಂದ್ರಕುಮಾರ್ ಮುದ್ನಾಳ್

1939 ರಲ್ಲಿ ಗಾಂಧೀಜಿಯವರಿಗೆ 70 ವರ್ಷ ತುಂಬಿದಾಗ ವಿಜ್ಞಾನಿಯ ಮಾತುಗಳನ್ನು ಗಂನಿಸುವುದಾದರೆ,”ರಕ್ತ ಮಾಂಸಗಳಿಂದ ಕೂಡಿದ ಇಂತಹ ವ್ಯಕ್ತಿ ಒಬ್ಬ ಈ ನೆಲದ ಮೇಲೆ ಜೀವಂತವಾಗಿ ನಡೆದಾಡಿದ್ದ ಎನ್ನುವ ಸಂಗತಿಯನ್ನು ಮುಂದಿನ ಪೀಳಿಗೆಯ ಜನರು ಪರಮಾಶ್ಚರ್ಯದಿಂದ ನಂಬುತ್ತಾರೆ” ಎಂದು ಮೋಹನ್ ದಾಸ್ ಕರಂಚಂದ್ ಗಾಂಧಿಯ ಕುರಿತಾಗಿ ಆಲ್ಬರ್ಟ್ ಐನ್ಸ್ಟೈನ್ ಹೇಳಿದ ವಾಕ್ಯ ಇಂದಿಗೂ ಪ್ರಸ್ತುತವಾಗಿದೆ.ಏಕೆಂದರೆ 

ಗಾಂಧೀಜಿ  ಸ್ವಾತಂತ್ರ್ಯ ಹೋರಾಟಗಾರರಾಗಿ ಮಾತ್ರವಲ್ಲ, ತಮ್ಮ ಜೀವಿತದ ಅವಧಿಯಲ್ಲಿ  ಪ್ರಾಯೋಗಿಕಾತ್ಮಕವಾಗಿ ಬದುಕಿದ ಜೀವ. ಕಷ್ಟ ಜೀವಿಯಾಗಿದ್ದ ಅವರು ಬ್ಯಾರಿಸ್ಟರ್, ದರ್ಜಿ, ಅಗಸ, ಕ್ಷೌರಿಕ, ಬಂಗಿ, ಚಮ್ಮಾರ, ಸೇವಕ,ಬಾಣಸಿ, ವೈದ್ಯ, ತಾಯಿ, ಶಿಕ್ಷಕ, ನೇಕಾರ, ವ್ಯಾಪಾರಿ, ರೈತ, ಹರಾಜುಗಾರ, ಸುಲಿಗೆಕೋರ, ಸೆರೆಮನೆಯ ಹಕ್ಕಿ, ಕಾರ್ಯನೀತಿಜ್ಞ, ಲೇಖಕ,ಪತ್ರಕರ್ತ,ಮುದ್ರಕ, ಪ್ರಕಾಶಕ, ಫ್ಯಾಷನ್ ರೂಪಿಸುವವ, ಹಾವಡಿಗ, ಪುರೋಹಿತನಾಗಿ ತಮ್ಮ ಬದುಕನ್ನು  ಸವಿದವರು. ಅವರ ಬಹುಮುಖಿ ವ್ಯಕ್ತಿತ್ವ ನಮಗೆಲ್ಲ ದಾರಿ ದೀಪ. ಶಿಕ್ಷಕರಾಗಿ ಮತ್ತು ರೈತರಾಗಿ ಗಾಂಧೀಜಿಯ ಆಲೋಚನೆಗಳನ್ನು ಈ ಲೇಖನದಲ್ಲಿ ವಿವೇಚಿಸಲಾಗಿದೆ.

ಶಿಕ್ಷಕರಾಗಿ ಗಾಂಧೀಜಿ :

ಗಾಂಧೀಜಿಯ ದೃಷ್ಟಿಯಲ್ಲಿ ಉನ್ನತ ಶಿಕ್ಷಣವೆಂದರೆ “ಅದು ಹಳೆಯ ಸಂಪ್ರದಾಯಗಳ ಆಧಾರ ಹೊಂದಿರುವ ಭಾರತದ ವಿವಿಧ ಸಂಸ್ಕೃತಿಗಳ ಸಂಯೋಗವಾಗಿರಬೇಕು.ಹಾಗೂ ಆಧುನಿಕ ಕಾಲದ ಅನುಭವಗಳಿಂದ ಶ್ರೀಮಂತವಾಗಿರಬೇಕೆಂದು ಗಾಂಧಿ ಬಯಸಿದ್ದರು”. ಇಂದಿನ ದಿನಮಾನಗಳಲ್ಲಿ ಉನ್ನತ ಶಿಕ್ಷಣದ ಪರಿಸ್ಥಿತಿ ಹೇಳಿಕೊಳ್ಳುವಷ್ಟು ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿಲ್ಲ.ಜಿಲ್ಲೆಗೊಂದು ವಿಶ್ವವಿದ್ಯಾಲಯವಾದರೂ ನಿರುದ್ಯೋಗ ನಿವಾರಣೆಯಾಗಿಲ್ಲ. ಉನ್ನತ ಶಿಕ್ಷಣ ಆಧುನಿಕ ತಾಂತ್ರಿಕ ನೈಪುಣ್ಯತೆಯನ್ನು ಪಡೆದುಕೊಳ್ಳುವಲ್ಲಿ ಬಹಳಷ್ಟು ಶ್ರಮವಹಿಸಬೇಕಾಗಿದೆ. ಶಾಲಾ ಕಾಲೇಜುಗಳ ಸಂಖ್ಯೆ ಹೆಚ್ಚಾಗುತ್ತಿದೆ.ಆದರೆ  ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿಸುವ ಬದಲು ಅವರನ್ನು ನೀತಿವಂತರನ್ನಾಗಿಸಬೇಕೆಂಬುದು ಗಾಂಧಿಯ ಆಶಯವ. ಹಾಗಾಗಿ 30 ವರ್ಷಗಳ ಕಾಲ  ಶಿಕ್ಷಣದ ಬಗ್ಗೆ ಆಲೋಚನೆ ಮಾಡಿ, ವೃತ್ತಿ ಕಸಬುಗಳ ಮೂಲ ಶಿಕ್ಷಣವನ್ನು ಒದಗಿಸುವ ವ್ಯವಸ್ಥೆಯನ್ನು ಮನಗೊಂಡರು. ಈ ವಿಚಾರವನ್ನು ಅವರು ವ್ಯಕ್ತಪಡಿಸಿದ್ದು ತಮ್ಮ 63ನೇ ವಯಸ್ಸಿನಲ್ಲಿ ಅದು ಸೆರೆಮನೆಯಲ್ಲಿದ್ದಾಗ. ಅದು ಮುಂದೆ ಮೂಲ ಶಿಕ್ಷಣ ಅಥವಾ ವಾರ್ಧಾ ಶಿಕ್ಷಣ ಯೋಜನೆಯಾಗಿ ರೂಪ ಪಡೆಯಿತು.

ಗಾಂಧೀಜಿ ಅವರು ಫೀನಿಕ್ಸ್ ವಸಾಹತ್ತಿನಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಪುಸ್ತಕಗಳ ಸಹಾಯವನ್ನು ಪಡೆಯುತ್ತಿರಲಿಲ್ಲ.ಏಕೆಂದರೆ ಪುಸ್ತಕಗಳು ಕಲಿಕೆಯ ಭಾರವನ್ನು ವಿದ್ಯಾರ್ಥಿಗಳ ಬುದ್ಧಿ ಮತ್ತೆಯನ್ನು  ದುರ್ಬಲಗೊಳಿಸುತ್ತವೆಂದು ನಂಬಿದ್ದರು. ಏಕೆಂದರೆ ತಾವು ಬಾಲ್ಯದಲ್ಲಿದ್ದಾಗ  ಕಂಠಪಾಠ ಮಾಡುವ  ಒತ್ತಡ ಓದುವುದರ ಆನಂದವನ್ನು ಕೊಂಡುಹಾಕಿತ್ತೆಂದು ನೆನಪಿಸಿಕೊಳ್ಳುತ್ತಿದ್ದರಂತೆ. ಏಕೆಂದರೆ ಗಾಂಧಿಯವರಿಗೆ ಹೃದಯವಂತಿಕೆ ವ್ಯಕ್ತಿತ್ವ ನಿರ್ಮಾಣ  ಅವರ ಬೋಧನೆಯ ಗುರಿಯಾಗಿದ್ದವು.

ಗಾಂಧಿಯವರು ಗುಜರಾತಿ,ಮರಾಠಿ, ಹಿಂದಿ, ಉರ್ದು, ತಮಿಳು, ಇಂಗ್ಲಿಷ್, ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗಳನ್ನು ಬಲ್ಲವರಾಗಿದ್ದರು. ಇಂದಿನ ಶಿಕ್ಷಕರಿಗೂ ಇದು ಅತ್ಯಗತ್ಯ.

ಟಾಲ್ಸ್ಟೈಲ್ ಫಾರಂ ಮತ್ತು ಸಬರಮತಿ ಆಶ್ರಮಗಳೆರಡರಲ್ಲೂ ಗಾಂಧಿ ಬೂಟು ತಯಾರಿಕೆಯನ್ನು ಹೇಳಿಕೊಡುತ್ತಿದ್ದರು. ವಿವಿಧ ಭಾಷೆಗಳ ಸಾಹಿತ್ಯದ ತರಬೇತಿ ಮಾತೃಭಾಷೆಯಲ್ಲಿ ಆಗುತ್ತಿತ್ತು.  ವಿದ್ಯಾರ್ಥಿಗಳನ್ನು  ಧೈರ್ಯಶಾಲಿಯನ್ನಾಗಿ ರೂಪಿಸುವ ಜವಾಬ್ದಾರಿ  ಶಿಕ್ಷಕರದು.ಹಾಗಾಗಿ  ಭಯಭೀತರಾಗಿರಬಾರದು. ಗಾಂಧೀಜಿ ಸ್ವತಃ ಅಭ್ಯಾಸ ಮಾಡಿ ಪಾಠ ಮಾಡುತ್ತಿದ್ದರು. ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಉದಾಹರಣೆ ಆಗಿರಬೇಕು. ವಸ್ತು ಪಾಠವಾಗಿರಬೇಕು ಅವರಿಗೆ ಕಲಿಯುವ ಆಸಕ್ತಿ ತೀವ್ರವಾಗಿತ್ತು ಎಂಬುದಕ್ಕೆ ಅವರು 65ನೇ ವಯಸ್ಸಿನಲ್ಲಿ ತಾರೆಗಳ ಬಗ್ಗೆ ಅಧ್ಯಯನ ನಡೆಸಿದ್ದೆ ಉದಾಹರಣೆ. ಗಾಂಧೀಜಿ ಕಸ್ತೂರಿಬಾಗೆ ಭೂಗೋಳ, ವ್ಯಾಕರಣ,ಸಾಹಿತ್ಯ ರಾಮಾಯಣ ಮಹಾಭಾರತಗಳನ್ನು ಪಾಠ ಹೇಳುತ್ತಿದ್ದರು. ತಮ್ಮ 74ನೇ ವಯಸ್ಸಿನಲ್ಲಿಯೂ ಜಾಮಿತಿಯ ಚಿತ್ರಗಳ ರೇಖೆಯನ್ನು  ನಿರ್ದಿಷ್ಟವಾಗಿ ಎಳೆಯುತ್ತಿದ್ದರು.

 ಒಬ್ಬ ಕೈದಿಯಾಗಿ ಗಾಂಧಿ ಒಬ್ಬ ಚೀನಿಯ ಸಹ ಕೈದಿಗೆ ಇಂಗ್ಲಿಷ್, ಐರಿಸ್ ಜೈಲರನಿಗೆ ಗುಜರಾತಿಯನ್ನು  ಹೇಳಿಕೊಡುತ್ತಿದ್ದರು.

ಪ್ರತಿಯೊಂದು ಗ್ರಾಮದಲ್ಲೂ ಪ್ರಾಥಮಿಕ ಶಾಲೆಗಳಿರಬೇಕೆಂಬ ಗಾಂಧೀಜಿ ಕನಸು ಇಂದು ಮರೀಚಿಕೆಯಾಗುತ್ತಿದೆ. ಪಬ್ಲಿಕ್ ಶಾಲೆಗಳ ಹೆಸರಲ್ಲಿ ಗಾಂಧಿ ಚಿಂತನೆ ಕಡೆಗಣಿಸಲ್ಪಟ್ಟಿದೆ. ಪ್ರಾಥಮಿಕ ಶಾಲೆಯಲ್ಲಿ ಕರ ಕುಶಲ  ಕೌಶಲ ಕಲಿಯಲೇ ಬೇಕೆಂಬ ಮೂಲ ಮಂತ್ರ ಅವರದಾಗಿತ್ತು. ಅವರು ತನ್ನ ಮೊಮ್ಮಗನಿಗೆ ಹತ್ತಿ ಹೇಗೆ ಬೆಳೆಯಲಾಗುತ್ತದೆ,ಚರಕದ ಚಕ್ರ ಹೇಗೆ ಕೆಲಸ ಮಾಡುತ್ತದೆ, ನೂಲಿನಿಂದ ಬಟ್ಟೆ ಹೇಗೆ ನೇಯಲಾಗುತ್ತದೆ ಹಾಗೂ ಎಳೆಗಳ ಸುತ್ತುಗಳು ಎಣಿಸುವುದು ಹೇಗೆ ಎಂದು ವಿವರಿಸುತ್ತಿದ್ದರಂತೆ . ಹೀಗೆ ಭೂಗೋಳ,ಪರಿಸರ, ಗಣಿತ, ಜಾಮಿತಿ ನಾಗರಿಕತೆಯ ಬೆಳವಣಿಗೆಯನ್ನು ಮಕ್ಕಳಿಗೆ ಹೇಳಿಕೊಡಬೇಕೆಂಬ ಅಭಿಲಾಷೆ ಗಾಂಧಿಯದಾಗಿತ್ತು. 

ಏಕೆಂದರೆ ಅವರು ‘ವಿದ್ಯಾರ್ಥಿಗಳು ಒಳ್ಳೆಯ ಹುದ್ದೆ ಮತ್ತು ಉದ್ಯೋಗಗಳನ್ನು ಪಡೆಯಲೆಂದು ಅವರನ್ನು ಶಿಕ್ಷಕರನ್ನಾಗಿ ಮಾಡುತ್ತಿಲ್ಲ ಬದಲಿಗೆ ರಾಷ್ಟ್ರೀಯ ಜೀವನವನ್ನು ಬಲಗೊಳಿಸಲು ಅವರನ್ನು ಸಾಹಸಿ ಸೈನಿಕರನ್ನಾಗಿ ಉಳಿಸಲು ಹಾಗೂ ಪ್ರಾಮಾಣಿಕ ಮನುಷ್ಯರನ್ನಾಗಿಸಲು ಅವರಿಗೆ ಶಿಕ್ಷಣ ನೀಡಲಾಗುತ್ತದೆ’ ಎಂದು ಕಾಶಿ ವಿದ್ಯಾಪೀಠದ ಪದವಿ ಪ್ರಧಾನ ಸಮಾರಂಭದಲ್ಲಿ ನುಡಿದಿದ್ದರು. ಗಾಂಧಿಯನ್ನು ನಾವು ಪ್ರಯೋಗಶೀಲ ಶಿಕ್ಷಕನಾಗಿ ಗ್ರಹಿಸಬೇಕು. 

ರೈತನಾಗಿ ಗಾಂಧೀಜಿ :

“ಉಳುವಾ ಯೋಗಿಯ ನೋಡಲ್ಲಿ” ಎಂಬ ಕುವೆಂಪುರವರ ಸಾಲುಗಳು ರೈತರ ಕುರಿತಾಗಿದೆ. ಈ ತರಹದ ರೈತನ ಕುರಿತಾದ  ‘ರೈತ ವಿಶ್ವದ ತಂದೆ “ಎಂದು ಬಣ್ಣಿಸುವ ಪದ್ಯವನ್ನು ಓದಿ ಗಾಂಧೀಜಿ ರೈತನಾಗಲು ಬಯಸಿದ್ದರು. ಅದು ದಕ್ಷಿಣ ಆಫ್ರಿಕಾದಲ್ಲಿ. ಗಾಂಧೀಜಿಯವರು  ಜಮೀನನ್ನು ಖರೀದಿಸಿ   ಅಲ್ಲಿ ಹಣ್ಣು, ತರಕಾರಿಗಳನ್ನು ಬೆಳೆಯಲು ಮುಂದಾದರು. ತಾವೇ ಉಳುಮೆಯನ್ನು ಮಾಡುತ್ತಿದ್ದರು. ಅಗತ್ಯವಿದ್ದಾಗ ಮಾತ್ರ ಟ್ರ್ಯಾಕ್ಟರ್ ಬಳಕೆ ಮಾಡುತ್ತಿದ್ದರು . ಗಾಂಧೀಜಿ ಮೂಲಕ ರೈತರಲ್ಲ ರೈತರಾಗಲು ಬಹಳಷ್ಟು ಪ್ರಯತ್ನಗಳನ್ನು ತಮ್ಮ 36ನೆಯ ವಯಸ್ಸಿನಲ್ಲಿ  ಕೃಷಿ ಜೀವನ ಆರಂಭಿಸಿದರು. ದೇವರು ಒದಗಿಸುವವನಾದರೆ ರೈತ ಆ ದೇವರ ಕೈಯಂತೆ ಎಂಬ ಮಾತನ್ನು ಗಾಂಧಿ ಹೇಳಿದರು. ರೈತರ ಬಗೆಗಿನ  ಅಭಿಮಾನವನ್ನು ಹೀಗೆ ದಾಖಲಿಸುವರು.

“ಶೇಕಡಾ 75 ಕ್ಕೆ ಹೆಚ್ಚು ಜನತೆ ವ್ಯವಸಾಯ ಮಾಡುವವರು.ರೈತ ಭೂಮಿಯ ಉಪಿದ್ದಂತೆ. ಈ ಭೂಮಿ ಅವನಿಗೆ ಸಲ್ಲಬೇಕು. ಗೈರು ಹಾಜರಾಗಿರುವ ಜಮೀನ್ದಾರನಿಗಲ್ಲ.ಸಭಿ ಭೂಮಿ ಗೋಪಾಲ್ ಕಿ.ಅವರ ಶ್ರಮದ ಹೆಚ್ಚು ಕಡಿಮೆ ಎಲ್ಲಾ ಫಲಗಳನ್ನು ನಾವು ಕಸಿದುಕೊಂಡಲ್ಲಿ ನಮ್ಮ ಬಗ್ಗೆ ನಿಯಂತ್ರಣವೇನು ಅಷ್ಟಾಗಿರದು.ರೈತರ ಮೂಲಕವಷ್ಟೇ ನಮ್ಮ ಉದ್ಧಾರ ಆಗಬಲ್ಲದು.ವಕೀಲರಾಗಲಿ, ವೈದ್ಯರಾಗಲಿ  ಅಥವಾ ಶ್ರೀಮಂತ ಜಮೀನ್ದಾರರಾಗಲಿ ನಮ್ಮನ್ನು ಉದ್ಧಾರ ಮಾಡಲಾರರು”.ಪ್ರತಿಯೊಂದು ಕೆಲಸಗಳಿಗೆ ರೈತರ ಶ್ರಮವಿಲ್ಲದೆ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂಬ ಅರಿವು ನಮ್ಮದಾಗಬೇಕಿದೆ. ಬರಗಾಲದ ಸಮಯದಲ್ಲಿ ರೈತರು  ಆರ್ಥಿಕವಾಗಿ ಸಂಕಷ್ಟ ಕೊಳಗಾಗಬಾರದೆಂದು   ಗುಡಿ ಕೈಗಾರಿಕೆಗಳ ಕಡೆ ಗಮನವಿತ್ತರು. ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಾ ಶಾಲಾ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಗಾಂಧೀಜಿ ತಮ್ಮ ಆಶ್ರಮದಲ್ಲಿ ಅಳವಡಿಸಿ ಕೊಂಡಿದ್ದರು. ಪಠ್ಯ ಪುಸ್ತಕಗಳ ಹೊರತಾಗಿ ಹೊಸ ವಿಷಯಗಳನ್ನು ಕಲಿಯುವುದಕ್ಕೆ ಅವಕಾಶ ಒದಗಿಸಬೇಕೆಂಬ ವಿಚಾರ ಗಾಂಧಿಯದಾಗಿತ್ತು. ಹಾಗಾಗಿ ಗಾಂಧಿ ನೀಲಿ ಬೆಳೆಗಾರರ ಪರವಾಗಿ ಹೋರಾಟ ಮಾಡಿದರು. ಇಂದಿನ ರೈತ ಚಳವಳಿಗೆ ಗಾಂಧೀಜಿ  ಪ್ರೇರಣೆಯಾಗಿರಬಹುದೆನಿಸುತ್ತದೆ. ಇಂದಿನ ರೈತರ ಹೋರಾಟಗಳು ದಿಕ್ಕು ತಪ್ಪುವ ಹಂತದಲ್ಲಿವೆನಿಸುತ್ತದೆ.

ಸಗಣಿ,ಮಲ,ಮೂತ್ರ, ತರಕಾರಿ,ಸಿಪ್ಪೆ, ಮಾರಕ ಜಲ ಸಸ್ಯಗಳಿಂದ ಕಂಪೋಸ್ಟ್ ಗೊಬ್ಬರ ಉಪಯೋಗಿಸ ಬೇಕೆಂದು ಹೇಳಿದರು.ಇದು ಬಂಡವಾಳರಹಿತವಾಗಿದೆ. ರಾಸಾಯನಿಕ ಗೊಬ್ಬರಗಳ ಅಪಾಯವನ್ನು ಗಾಂಧೀಜಿ ಅರಿತಿದ್ದರು. ಗಾಂಧೀಜಿಯವರು ಚಿಕ್ಕ ಚಿಕ್ಕ ಭಾಗಗಳನ್ನಾಗಿ ಜಮೀನು ಉಳುವುದನ್ನು ಒಪ್ಪುತ್ತಿರಲಿಲ್ಲ. ಏಕೆಂದರೆ ” ಭೂಮಿಯನ್ನು ನೂರು ಭಾಗ ಮಾಡುವುದಕ್ಕಿಂತ ನೂರು ಕುಟುಂಬಗಳು ಸೇರಿ ಒಟ್ಟಿಗೆ ವ್ಯವಸಾಯ ಮಾಡಿ ಬಂದ ಆದಾಯವನ್ನು ಭಾಗ ಮಾಡಿಕೊಳ್ಳುವುದು ಒಳ್ಳೆಯದು. ಹಳ್ಳಿಯಲ್ಲಿ ಒಬ್ಬೊಬ್ಬರು ಎತ್ತು ಮತ್ತು ಎತ್ತಿನಗಾಡಿಗೆ ಇಟ್ಟುಕೊಳ್ಳುವುದು ವ್ಯರ್ಥ ಎನ್ನುತ್ತಿದ್ದರು ಏಕೆಂದರೆ ಜಾನುವಾರುಗಳನ್ನು ಸಾಂಗೀಕವಾಗಿ ಬೆಳೆಸಿದಾಗ ಅವುಗಳಿಗೆ ಸಿಗಬೇಕಾದ ಔಷಧೂಪಚಾರ ಸರಿಯಾಗಿ ಸಿಗುತ್ತದೆ ಮತ್ತು ಮೇಯಲು ಒಂದು ಮೈದಾನದ ವ್ಯವಸ್ಥೆ ಮಾಡಬಹುದು.ಒಬ್ಬರೈತ ಇದನ್ನೆಲ್ಲ ಮಾಡುವುದಕ್ಕೆ ಕಷ್ಟವಾಗುತ್ತದೆ ಹಾಗಾಗಿ ಎಲ್ಲರೂ ಒಂದು  ಸೂರಿನಡಿ  ಕೃಷಿಯನ್ನು ಮಾಡಿದಾಗ ಉತ್ತಮ ಫಲವು ಕೂಡ ಸಿಗಬಹುದು ಎಂಬ ಅಭಿಪ್ರಾಯ ಗಾಂಧಿಯದಾಗಿತ್ತು. ಕೃಷಿಯಲ್ಲಿ ಕೂಡ ತಮ್ಮದೇ ಆದ ಆಲೋಚನೆಗಳಿಂದ ಸಂಕೀರ್ಣತೆಯನ್ನು ಎದುರಿಸಬೇಕಾಗಿದ್ದು ಕೂಡ ಅಷ್ಟೇ ನಿಜ.

ರವೀಂದ್ರನಾಥ್ ಟ್ಯಾಗೋರ್ ಅವರು ‘ “ಮಹಾತ್ಮ ಗಾಂಧಿ ತಮ್ಮ ನಿರ್ವಾಜ್ಯ ಪ್ರೇಮದಿಂದ ಭಾರತದ ಹೃದಯವನ್ನು ಗೆದ್ದುಕೊಂಡಿದ್ದಾರೆ. ಅದು ಅವರ ಸಾರ್ವಭೌಮ ಶಕ್ತಿಯಾಗಿ ನಿಂತಿದೆ. ಸತ್ಯದ ಅಪರಿಮಿತ ಸಾಮರ್ಥ್ಯವನ್ನು ಅವರು ದರ್ಶನ ಮಾಡಿಸಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಋಣಿಗಳು ಸಂಸ್ಥೆಗಳನ್ನು ಕಟ್ಟಬಹುದು. ವಿಸರ್ಜಿಸಬಹುದು. ಆದರೆ ರಾಷ್ಟ್ರವನ್ನು ಸತ್ಯ ಪ್ರೇಮಗಳ ಅಖಂಡ ಪ್ರಜ್ಞೆಗೆ ಎಚ್ಚರಿಸುವ ಕಾರ್ಯ ಯಾವ ಕುಶಲಕರ್ಮಿಗೂ ಸಾಧ್ಯವಾಗದು. ಈ ಮಹಾ ಅಸ್ತ್ರವನ್ನು ಪಡೆದಿರುವ ಆ ಮಹಾ ನಾಯಕನಿಗೆ ನಮೋ ಎನ್ನುತ್ತೇನೆ.” ಎಂಬ ಟ್ಯಾಗೋರ್ ಅವರ ಮಾತುಗಳು ಅಕ್ಷರ ಸಹ ನಿಜ.

ಗಾಂಧಿ ಬದುಕಿದ್ದಾಗ ಅವರ ಚಿಂತನೆಗಳನ್ನು ಪ್ರತಿಯೊಬ್ಬರು ಗಮನಿಸುತ್ತಿದ್ದರು.ಹಾಗೆಯೇ ತೀರಿದ ನಂತರ ಅವರ ಚಿಂತನೆಗಳನ್ನು ಮೆಲುಕು  ಹಾಕುತ್ತಲೇ ಇದ್ದೇವೆ.ಅವರ ಆತ್ಮಸ್ಥೈರ್ಯ, ದಿಟ್ಟತನ ಸತ್ಯದ ದರ್ಶನಕ್ಕಾಗಿ ಅವರು ಮಾಡಿದ ಪ್ರಯೋಗಗಳು  ಪ್ರತಿಯೊಬ್ಬರನ್ನು ಕಾಡುತ್ತವೆ. ಅವರೊಬ್ಬ ಸಾಮಾಜಿಕ ಪ್ರಜ್ಞೆಯ ರೂವಾರಿಯಾಗಿದ್ದರು. ನಡೆದಾಡುತ್ತಲೇ ಸ್ವತಂತ್ರವನ್ನು ಕಳಿಸಿಕೊಟ್ಟ ಧೀಮಂತ ವ್ಯಕ್ತಿತ್ವ.

‍ಲೇಖಕರು Admin

2 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading