ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನನ್ನು ಕೊಂಡಾಡದಿದ್ದರೆ ಹೇಗೆ?

-ಭಾರತಿ ರಾವ್

ನನ್ನ ನಲ್ಲ ನನ್ನನ್ನು ಚಪ್ಪರಿಸಿ ತಿನ್ನುವ
ಹಿಪ್ಪಿ ಹಿಂಡಿ ಮಾಡಿ ಹಿಗ್ಗುವವ

ಅವನನ್ನು ಕೊಂಡಾಡದಿದ್ದರೆ ಹೇಗೆ?

ಅವನು ಅಂತಿಂಥವನಲ್ಲವಲ್ಲ
ತನ್ನನ್ನು ಬಿಟ್ಟರಿಲ್ಲ ಎಂದು
ಕುಣಿದಾಡುವ
ಜೊಲ್ಲು ಸುರಿಸಿ
ತಿಂದು ತೇಗುವ ಮುನ್ನ ನನ್ನನ್ನು
ಕಬಳಿಸುವವನ ಮುಖಕ್ಕೆ ಮಂಗಳಾರತಿ
ಎತ್ತದಿದ್ದರೆ ಹೇಗೆ?

ನೋಡಲು ರಸಗುಲ್ಲ
ಕೆಲಸದಲಿ ಮೈಗಳ್ಳ

ಕೈಯಲ್ಲಿದೆ ಚಾವಟಿ
ಬಾಯಲ್ಲಿ ಬೈಗುಳಗಳ ಮಹಾ ಪೂರ

ಕಾಯಿಸುವ ನೀರು ಉಕ್ಕಿ ಸುರಿಯದು
ಎಂಬುದನ್ನು ಅರಿಯದ ದಡ್ಡನಿಗೆ

ನೀ ಮಾಡಿದ ಅಡಿಗೆ ನಾಯಿನೂ ತಿನ್ನಲ್ಲ
ಎಂದಂದು ಅವಹೇಳನ ಮಾಡುವುದು
ನೀರು ಕಾಯಿಸುವಷ್ಟೇ ಸರಾಗ

ಮಹಾ ಪ್ರಚಂಡ
ಗಂಡ ಸತ್ತ ಹೆಂಡಂದಿಯರ
ಹಿಂದೆ ಅಂಡಲೆಯುವ
ಗುಂಡಾಡಿ ಗುಂಡ

ಈಚೆಗೆ
ಯಾರೂ ಸಿಕ್ಕದೆ ದಿಕ್ಕಿಲ್ಲದೆ
ಪರದಾಡುತ್ತಿದ್ದಾನೆ ಪಾಪ

ಹಾ ತಡೆದುಕೊಳ್ಳಿ
ಅಗೋ
ಕಸ ಮುಸುರೆ ತೊಳೆದು ಬಳಿದು
ತನ್ನ ಹೆಂಡ ಕುಡುಕ ಗಂಡನ ಹೊಡೆತ ಬಡಿತಕ್ಕೆ
ಮೈ ಒಡ್ಡಿ ಕಾಸು ಕಾಸಿಗೆ ಗಂಟು ಹಾಕಿ
ಮೈ ಮುರಿದುಕೊಂಡು ಸಾಲದ ಬಡ್ಡಿ ಕಟ್ಟುತ್ತಿರುವ
ಗಿರವಿ ಇಟ್ಟಿರುವ ಒಡವೆ ಬಿಡಿಸಿಕೊಳ್ಳಲು
ಚೀಟಿ ದುಡ್ಡಿಗೆ ಕಾದು ಕೆಂಪಾಗಿರುವ
ಫ್ಯಾಷನ್ ಮಾಡೆಲ್ ಕೆಲಸಗಿತ್ತಿ
ತೀಟೆ ಕಳೆದುಕೊಳ್ಳಲು ಸಾಲದೆ?

ಬೇಕಾದಷ್ಟೇ ಆಯಿತು

ಕಬ್ಬನ್ನು ಜಗ್ಗಿ ಅದರ ಗೊರಟೆ ಎಸೆಯದಿರುವುದು
ಉಂಟೆ?

ಈ ಕೊಬ್ಬಿದ ಗಜಕ್ಕೆ ಹಾಕದಿದ್ದರೆ
ಸೊಪ್ಪು
ಅಂತಾನೆ – – ಕೊಬ್ಬು , ಹೂ ಮೇಡಂ

ಕಂಡ ಕಂಡ ಹೆಣ್ಣುಗಳ ಕಂಡೊಡನೆ
ಸುಳ್ಳೇ ಬೊಗಳಿ ಅವರ ಗಮನ ಸೆಳೆಯುತ್ತಾ
ಸಿಗರೇಟು ಹೊಗೆ ಹೊರಗೆ ಹಾಕುವ
ಸೆಂಟಿನ ಘಮಲಿಗೆ ಊದುಬತ್ತಿ
ಸಾಟಿ ಎನಿಸದೆ?

ಕಳ್ಳ ಸಿಳ್ಳೆ ಕ್ಯಾತ
ಬರಿಯ ದಾರದಲ್ಲೇ ಬುಗುರಿಯಾಡಿಸುವ
ಗುಳ್ಳೆ ನರಿ
ಹೆಣ್ಣಿಗೆ ಸ್ವಾತಂತ್ರ್ಯ ಬೇಕು ದುಡಿಯಲು
ಅಧಿಕಾರ ಇರಬೇಕು
ಒಳ್ಳೆಯದೇ ಆಯಿತು ಬಿಡಿ
ಇವನಿಗಾರಾಮ

ಮಾಡೇ ಬಿಡುವ ಇವನಿಗಿಷ್ಟು
ಪಂಚಾಮೃತ ಅಭಿಷೇಕ
ಹೇಗಿದ್ದರೂ
ನೈವೇದ್ಯಕ್ಕೆ ಇದೆಯಲ್ಲ
ನನ್ನ ಇಡೀ ಮೈ

‍ಲೇಖಕರು Admin

2 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading