-ನಾ ದಿವಾಕರ
ಆದರ್ಶ ಮಾದರಿಗಳೇ ಕಾಣದ ದೇಶದಲ್ಲಿ ಯುವ ಜನಾಂಗಕ್ಕೆ ದಾರಿ ದೀವಿಗೆ ಯಾವುದು ?
ಸ್ವತಂತ್ರ ಭಾರತ ತನ್ನ ವಾರ್ಷಿಕ ಉತ್ಸವವನ್ನು ಆಚರಿಸುವ ಪ್ರತಿ ಸಂದರ್ಭದಲ್ಲೂ ಸಂಭ್ರಮದ ನಡುವೆ ಸಂವೇದನೆ ಇರುವ ಸಮಾಜವನ್ನು ಕಾಡುವ ಕರಾಳ ಚುಕ್ಕೆ ಒಂದಿದ್ದರೆ ಅದು ಮಹಾತ್ಮಾ ಗಾಂಧಿಯ ಹತ್ಯೆ. 200 ವರ್ಷಗಳ ಬ್ರಿಟೀಷ್ ವಸಾಹತುಶಾಹಿ ದಾಸ್ಯದಿಂದ ವಿಮೋಚನೆ ಪಡೆದ ಆರು ತಿಂಗಳ ಒಳಗೇ, ಈ ವಿಮೋಚನೆಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತ ಧೀಮಂತ ವ್ಯಕ್ತಿಯನ್ನು ನಾವೇ ಹತ್ಯೆ ಮಾಡುವುದು ಚರಿತ್ರೆಯ ವಿಡಂಬನೆಯಷ್ಟೇ ಅಲ್ಲ, ಮನುಜ ಸಂವೇದನೆಯ ವಿರೋಧಾಭಾಸವೂ ಹೌದು. ಗಾಂಧಿಯನ್ನು ಕೊಂದವರು ಯಾರು ಎಂಬ ಪ್ರಶ್ನೆಗಿರುವ ಉತ್ತರ ಒಂದೇ, ಅದು ನಾಥುರಾಮ್ ಗೋಡ್ಸೆ ಎಂಬ ಹಂತಕ. ಆದರೆ ಏಕೆ ಕೊಲೆಯಾದರು ಎಂಬ ಜಟಿಲ ಪ್ರಶ್ನೆಗೆ ಉತ್ತರಗಳು ನೂರಾರು. ವರ್ತಮಾನದ ತಾತ್ವಿಕ ನಿಲುವುಗಳು ಈ ಉತ್ತರಗಳನ್ನು ಭಿನ್ನ ದಿಕ್ಕುಗಳಲ್ಲಿ ಉತ್ಪಾದಿಸುತ್ತಲೇ ಇವೆ.
ಗಾಂಧಿ ಭಾರತದ ರಂಗಭೂಮಿಯ ಮೇಲೆ ನಾನಾ ಆಯಾಮಗಳಲ್ಲಿ ಚಿತ್ರಿಸಲ್ಪಟ್ಟಿದ್ದಾರೆ. ಸಿನೆಮಾ ರಂಗ ಅವರನ್ನು ಕೇವಲ ಆದರ್ಶಪ್ರಾಯ ಸಂಭಾಷಣೆಗಳಿಗೆ ಸೀಮಿತಗೊಳಿಸಿದ್ದರೂ, ಸಾಹಿತ್ಯ ಮತ್ತು ರಂಗಭೂಮಿ ಮಹಾತ್ಮನನ್ನು ಚಾರಿತ್ರಿಕ ಚೌಕಟ್ಟುಗಳಿಂದ ಹೊರತಂದು, ವಿಮರ್ಶಾತ್ಮಕವಾಗಿ ನೋಡಿದೆ. ಮಹಾತ್ಮನೊಳಗಿನ ದ್ವಂದ್ವಗಳನ್ನು ಅವರ ತಾತ್ವಿಕ ವಿರೋಧಾಭಾಸಗಳನ್ನು ಹಾಗೂ ಅವರ ವೈಯುಕ್ತಿಕ ಬದುಕಿನ ಒಳಬಿರುಕುಗಳನ್ನೂ (Fault lines) ಭಾರತದ ರಂಗಭೂಮಿ ಸೃಜನಶೀಲತೆಯಿಂದ ಅಭಿವ್ಯಕ್ತಿಸಿದೆ. ಈ ರಂಗಸೌಂದರ್ಯಕ್ಕೆ ತದ್ವಿರುದ್ಧವಾದ ರಂಗಮಾಲಿನ್ಯದ ಅಲೆ ವರ್ತಮಾನದ ಭಾರತವನ್ನು ಆವರಿಸುತ್ತಿದೆ. ʼ ಗಾಂಧಿ ಹತ್ಯೆಯ ಸತ್ಯʼ ಎಂಬ ನಾಟಕದ ಕೃತಿಯನ್ನು ಮೈಸೂರಿನ ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಯ ಕಣ್ಣೋಟದಲ್ಲೇ ಬಿಡುಗಡೆ ಮಾಡಲಾಗಿದೆ.
ವ್ಯಕ್ತಿ ಹತನಾದರೂ ಉಳಿದ ವ್ಯಕ್ತಿತ್ವ
ʼ ಗಾಂಧಿ ಹತ್ಯೆಯ ಸತ್ಯʼ ಕೃತಿಯನ್ನು ವಿಮರ್ಶಿಸುವ ಅಗತ್ಯವಿಲ್ಲ. ಏಕೆಂದರೆ ಶೀರ್ಷಿಕೆಯಲ್ಲೇ ನಿಗೂಢ ವಿಕೃತಿ ಅಡಗಿದೆ. ಒಂದು ಮಾನವೀಯ ಸಮಾಜದಲ್ಲಿ ಮನುಜ ಸಂವೇದನೆಗಳು ಕೊಂಚ ಉಸಿರಾಡುತ್ತಿದ್ದರೂ ಸಾಕು ʼ ಹತ್ಯೆ ʼ ಎಂಬ ಪಾಶವಿ ಕ್ರಿಯೆಯನ್ನು ಸಾಕ್ಷಿ ಪುರಾವೆಗಳನ್ನಿಟ್ಟು ಸಮರ್ಥಿಸಲಾಗುವುದಿಲ್ಲ. ಆದರೆ ತಮ್ಮ 157ನೆಯ ಜನ್ಮದಿನದಂದು, ರಾಜಘಾಟದಲ್ಲಿ ವಿರಮಿಸಿರುವ ಗಾಂಧಿ ಈ ಅಸೂಕ್ಷ್ಮತೆಯನ್ನು ರಂಗ ಪ್ರಯೋಗವಾಗಿ ಕಾಣಲಿದ್ದಾರೆ. ಮಾನವ ಹತ್ಯೆಯನ್ನು ಸಾಮಾನ್ಯೀಕರಿಸಿ (Generalise) ಅಥವಾ ಸಮರ್ಥನೀಯವಾಗಿಸಿ (Defendable) ಹಂತಕನನ್ನು ಅಥವಾ ಹಂತಕ ಪ್ರವೃತ್ತಿಯನ್ನು ವೈಭವೀಕರಿಸುವ (Glorify) ಕಾಲಘಟ್ಟದಲ್ಲಿ ನಾವು ಮಹಾತ್ಮ ಗಾಂಧಿಯ 157ನೆಯ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಜಗತ್ತಿಗೆ ಒಂದು ಸಾರ್ವಕಾಲಿಕ-ಸಾರ್ವತ್ರಿಕ ವ್ಯಕ್ತಿತ್ವದ (All time Universal Personality) ರೂಪದಲ್ಲಿ ಕಾಣಬೇಕಾದ ಮಹಾತ್ಮನನ್ನು ಇಂದು ಖಳನಾಯಕನಂತೆ ದುಷ್ಟೀಕರಿಸಲಾಗುತ್ತಿರುವುದು (Villanisation )ಚಾರಿತ್ರಿಕ ವಿಡಂಬನೆ.
ಯಾವುದೇ ಮಾನವ ಹತ್ಯೆಯಾದರೂ ಅದರ ಹಿಂದೆ ದ್ವೇಷ ಮಾತ್ರ ಇರಲು ಸಾಧ್ಯ. ಆ ದ್ವೇಷದ ಸತ್ಯಶೋಧನೆಗೆ ಭಾರತ ಮುಂದಾಗಿದೆ. ಆದರೆ ಈ ದೇಶದ ಯುವ ಜನಾಂಗ (ಮಿಲೆನಿಯಲ್, ಜೆನ್‌ಝಿ ಇತ್ಯಾದಿ) ಶೋಧಿಸಬೇಕಿರುವುದು ಮಹಾತ್ಮ ಗಾಂಧಿ ಎಂಬ ಚಾರಿತ್ರಿಕ ವ್ಯಕ್ತಿತ್ವವನ್ನು (ವ್ಯಕ್ತಿಯನ್ನಲ್ಲ). ಈ ವ್ಯಕ್ತಿತ್ವದಲ್ಲಿ ನಮಗೆ ಶಾಂತಿ, ಸಹನೆ, ಸಂಯಮ, ಸಭ್ಯತೆ, ಪ್ರಾಮಾಣಿಕತೆ, ಮನುಜ ಸೂಕ್ಷ್ಮತೆ, ಸಂವೇದನೆ ಮತ್ತು ಸತ್ಯದ ದರ್ಶನವಾಗುತ್ತದೆ. ವಿಪರ್ಯಾಸವೆಂದರೆ ಈ ಉದಾತ್ತ ಲಕ್ಷಣಗಳ ಸಣ್ಣ ಕಣಗಳನ್ನೂ ಗುರುತಿಸಲು ಸಾಧ್ಯವಿಲ್ಲದ ರಾಜಕೀಯ ವ್ಯವಸ್ಥೆಯೊಂದು ಭಾರತವನ್ನು ವಿಕಾಸದ ಹಾದಿಯಲ್ಲಿ ಕರೆದೊಯ್ಯುತ್ತಿದೆ. ಈ ಹಾದಿಯಲ್ಲಿ ʼಸಾವುʼ ಸಂಭ್ರಮಿಸಲ್ಪಡುತ್ತದೆ ʼಹತ್ಯೆʼ ವೈಭವೀಕರಿಸಲ್ಪಡುತ್ತದೆ. ಪಾಪ ! ತಮ್ಮ ಜನ್ಮದಿನದಂದು ಗಾಂಧಿ ಈ ವ್ಯವಸ್ಥೆಯೊಳಗಿಂದಲೇ ಧ್ವನಿಸುವ ʼ ವೈಷ್ಣವ ಜನತೋ,,, ʼ ಭಜನೆಗೆ ಮತ್ತೊಮ್ಮೆ ಕಿವಿಯಾಗಲಿದ್ದಾರೆ.
ಜೆನ್ ಝಿ ಕೂಗು ಮತ್ತು ಗಾಂಧಿ
ಇತ್ತೀಚಿನ ಜೆನ್ ಝಿ ಚಳುವಳಿಗಳು ಜಂತರ್ ಮಂತರ್‌ನಲ್ಲಿ ಧ್ವನಿಸಿದ ಮೇಲೆ ಭಾರತದ ಆಳುವ ವ್ಯವಸ್ಥೆಯಲ್ಲಿ ಸಣ್ಣ ಕಂಪನವಂತೂ ಮೂಡಿದೆ. ಈ ದೇಶದ ಯುವ ಜನತೆಗೆ ಅಲ್ಲಿ ಕಂಡ ಅಹಿಂಸಾತ್ಮಕ ಹೋರಾಟ ಮತ್ತು ಸತ್ಯಾಗ್ರಹದಂತಹ ಪ್ರತಿರೋಧದ ಹಾದಿ ಗಾಂಧಿಯನ್ನು ಪುನಃ ನೆನಪಿಸಿದೆ. ಆದರೆ ಗಾಂಧಿ ಕೇವಲ ಅಹಿಂಸೆ-ಸತ್ಯಾಗ್ರಹಕ್ಕೆ ಸೀಮಿತವಾದ ವ್ಯಕ್ತಿತ್ವವಲ್ಲ. ಯುವ ಜನಾಂಗ ಮಹಾತ್ಮನನ್ನು ಹೇಗೆ ನೋಡಬೇಕು ? ಪ್ರಸ್ತುತ-ಅಪ್ರಸ್ತುತ ಎಂಬ ವಿಶಾಲ ಹಂದರದ ಪ್ರಶ್ನೆಯನ್ನು ಬದಿಗಿಟ್ಟು ನೋಡಿದಾಗ, ಗಾಂಧಿ ಪ್ರತಿರೋಧದ ಪ್ರಖರ ದನಿಯ ರೂಪಕವಾಗಿ, ಗುರಿ ಸಾಧನೆಯ ಜೀವಂತ ಪ್ರತಿಮೆಯಾಗಿ ನಮ್ಮ ನಡುವೆ ನಿಲ್ಲುತ್ತಾರೆ. 1930ರ ಚಾರಿತ್ರಿಕ ದಂಡಿಯಾತ್ರೆಯಲ್ಲಿ ಗಾಂಧಿ ಜಗ್ಗಲಿಲ್ಲ 2026ರ ಜಂತರ್ ಮಂತರ್‌ನಲ್ಲಿ ಈ ದೇಶದ ಯುವಶಕ್ತಿ ಮಣಿಯಲಿಲ್ಲ. ಈ ಸಮಾನ ಎಳೆಯನ್ನು ಯುವ ಜನಾಂಗ ಗಂಭೀರವಾಗಿ ಪರಿಗಣಿಸಬೇಕಿದೆ.
ಕಳೆದ ಶತಮಾನದ ಮಾರ್ಕ್ಸ್‌ವಾದಿ ಚಿಂತಕ ಪಾಲೋ ಫ್ರೇರೀ “ನಾನು ಹೋರಾಡುತ್ತಿರುವವರೆಗೂ ಭರವಸೆ ನನ್ನ ಚಾಲಕಶಕ್ತಿಯಾಗಿರುತ್ತದೆ ; ನಾನು ಭರವಸೆಯೊಂದಿಗೆ ಹೋರಾಡಲು ಸಾಧ್ಯವಾದರೆ, ಆಗ ನಾನು (ಗುರಿ ಸಾಧಿಸಲು) ಕಾಯಬಹುದು ” (Pedagogy of the Oppressed) ಎಂದು ಹೇಳುತ್ತಾರೆ. ಇದನ್ನು ಒಂದೇ ಪದದಲ್ಲಿ ʼ ಸಂಕಲ್ಪ ʼ ಎನ್ನಬಹುದು. ಈ ಸಂಕಲ್ಪ ಮಾಡಲು ಮಾನವ ಸಮಾಜಕ್ಕೆ ಬೇಕಿರುವುದು ಪರಸ್ಪರ ಸಂವಾದಿಸುವ ಸಂಯಮ ಮತ್ತು ತಾಳ್ಮೆ. ಇದೇ ಲೇಖಕರು ಮತ್ತೊಂದೆಡೆ “ ನಾನು ಜಗತ್ತನ್ನು ಪ್ರೀತಿಸದಿದ್ದರೆ, ಜೀವನವನ್ನು ಪ್ರೀತಿಸದಿದ್ದರೆ ಮತ್ತು ಜನರನ್ನು ಪ್ರೀತಿಸದಿದ್ದರೆ, ಸಂವಾದದಲ್ಲಿ ತೊಡಗಲಾರೆ. ” ಎಂದೂ ಹೇಳುತ್ತಾರೆ. ಮಹಾತ್ಮನಲ್ಲಿ ವರ್ತಮಾನದ ಯುವ ಜನಾಂಗ ಗುರುತಿಸಬೇಕಿರುವುದು ಈ ʼ ಮಾನವ ಪ್ರೀತಿಯನ್ನು ʼ ಮತ್ತು ಸಂಯಮವನ್ನು. ನವ ಭಾರತ ಕಳೆದುಕೊಳ್ಳುತ್ತಿರುವುದೂ ಇದನ್ನೇ !!!
ಸಾಹಿತ್ಯಿಕವಾಗಿ ಗಾಂಧಿ ಧ್ವನಿ
ಒಂದು ಕಾಲದಲ್ಲಿ, ಬಹುಶಃ ನವ ಶತಮಾನದ ಆರಂಭದ ದಿನಗಳಲ್ಲೂ ಸಹ ಭಾರತದ ಸಿನೆಮಾಗಳಲ್ಲಿ (ಸುಶ್ರಾವ್ಯ-ಅರ್ಥಪೂರ್ಣ) ʼ ಹಾಡುಗಳು ʼ ಇರುತ್ತಿದ್ದವು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಮತ್ತು ಆರಂಭದ ನಡಿಗೆಯಲ್ಲಿ ಹಿಂದಿ ಚಿತ್ರರಂಗ (ಆಗ ಬಾಲಿವುಡ್ ಎನ್ನುತ್ತಿರಲಿಲ್ಲ) ಮಹಾತ್ಮನನ್ನು ಅಥವಾ ಗಾಂಧಿ ಮಾರ್ಗವನ್ನು ಸ್ಮರಿಸುವ ನೂರಾರು ಹಾಡುಗಳ ಕಣಜವಾಗಿತ್ತು. 1954ರಲ್ಲಿ ತೆರೆಕಂಡ ʼ ಜಾಗೃತಿ ʼ ಚಿತ್ರದಲ್ಲಿ ಕವಿ ಪ್ರದೀಪ್ ಅವರ ಒಂದು ಗೀತೆ “ ದೇ ದೀ ಹಮೆ ಆಝಾದ್ ಬಿನಾ ಖಡ್ಗ್ ಬಿನಾ ಡಾಲ್ ; ಸಾಬರಮತಿ ಕೆ ಸಂತ್ ತೂನೇ ಕರ್ ದಿಯಾ ಕಮಾಲ್ ” ಸಾರ್ವಕಾಲಿಕ ಶ್ರೇಷ್ಠ ಹಾಡು. (ಕತ್ತಿ ಗುರಾಣಿಗಳನ್ನು ಬಳಸದೆ ನಮಗೆ ಸ್ವಾತಂತ್ರ್ಯ ತಂದಿತ್ತೆಯಲ್ಲಾ ಸಾಬರಮತಿಯ ಸಂತನೇ ನೀನು ಅದ್ಭುತವನ್ನೇ ಸಾಧಿಸಿದೆ ಎಂದರ್ಥ). (ಗಾಯಕಿ ಆಶಾಭೋಂಸ್ಲೆ ಸಂಗೀತ ಹೇಮಂತ್ ಕುಮಾರ್) ಈ ಸಾಲುಗಳಲ್ಲಿ ಧ್ವನಿಸುವುದು ಗಾಂಧಿ ಒಬ್ಬರೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂಬ ದಾರ್ಷ್ಟ್ಯವಲ್ಲ ಬದಲಾಗಿ, ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದ ಮಹಾತ್ಮನ ವ್ಯಕ್ತಿತ್ವ. ಇದನ್ನು ಯುವ ಜನಾಂಗ ಅರ್ಥಮಾಡಿಕೊಳ್ಳಬೇಕು.
ಇದೇ ಚಿತ್ರದಲ್ಲಿ ಕವಿ ಪ್ರದೀಪ್ ಮತ್ತೊಂದು ಗೀತೆಯಲ್ಲಿ “ ಹಮ್ ಲಾಯ್ಞೆ ಹೈ ತೂಫಾನ್ ಸೆ ಕಷ್ತೀ ನಿಕಾಲ್ ಕೆ ಇಸ್ ದೇಶ್ ಕೊ ರಖ್ ನಾ ಮೇರೇ ಬಚ್ಚೋ ಸಂಭಾಲ್ ಕೆ ” ಎಂದು ಬರೆಯುತ್ತಾರೆ. ( ನಾವು ತೂಫಾನಿನ ಅಪಾಯದಿಂದ ನಾವೆಯನ್ನು ಹೊರತಂದಿದ್ದೇವೆ, ಮಕ್ಕಳೇ ಈ ದೇಶವನ್ನು ಜಾಗ್ರತೆಯಿಂದ ಸಂಭಾಳಿಸಿ) ಈ ಹಾಡಿನಲ್ಲಿ ಸಾಬರಮತಿಯ ಸಂತ ಕಾಣುವುದಿಲ್ಲ ಆದರೆ ಆ ಮಹಾತ್ಮನ ಅಂತರಾತ್ಮದ ಧ್ವನಿ ಕೇಳುತ್ತದೆ. ನಿರ್ದಿಷ್ಟವಾಗಿ ಈ ಹಾಡು (ಗಾಯಕ ಮೊಹಮ್ಮದ್ ರಫಿ-ಸಂಗೀತ ಹೇಮಂತ್ ಕುಮಾರ್) ವರ್ತಮಾನದ ಯುವ ಜನಾಂಗಕ್ಕೂ ಮುಖ್ಯವಾಗುತ್ತದೆ. ಏಕೆಂದರೆ ವಸಾಹತುಶಾಹಿಯ ತೂಫಾನಿನಿಂದ ಸಾವಿರಾರು ಜೀವಬಲಿಯ ನಂತರ ಹೊರತಂದ ಭಾರತ ಎಂಬ ʼ ನಾವೆ ʼ ಈಗ ಭೌತಿಕವಾಗಿ ಸುರಕ್ಷಿತವಾಗಿದ್ದರೂ, ಮೌಲಿಕವಾಗಿ ಮುಳುಗುತ್ತಿದೆ.
ಈ ಭಾರತ ಎಂಬ ಮೌಲ್ಯವನ್ನು ಯುವ ಜನಾಂಗ ಸಂಭಾಳಿಸುವುದಷ್ಟೇ ಅಲ್ಲ ಸುರಕ್ಷಿತವಾಗಿ ಕಾಪಾಡಬೇಕಿದೆ. ನವ ಭಾರತದ ರಾಜಕೀಯ ವ್ಯವಸ್ಥೆ ಅಕ್ಟೋಬರ್ 2 ರಂದು ರಾಜಘಾಟದಲ್ಲಿ ಮಹಾತ್ಮನ ದಿವ್ಯ ಸಮಾಧಿಯ ಮುಂದೆ ʼ ವೈಷ್ಣವ ಜನತೋ,,,,,, ʼ ಮತ್ತು ʼ ರಘುಪತಿ ರಾಘವ ,,,,ʼ ಭಜಿಸುವ ನೈತಿಕ ಅರ್ಹತೆಯನ್ನು ಕಳೆದುಕೊಂಡಿದೆ. ಯಾಂತ್ರಿಕವಾಗಿ ನಡೆಯುವ ಈ ಭಜನೆ ಮರುದಿನವೇ ಧ್ವನಿಸುವ ಗೋಡ್ಸೆಯ ವೈಭವೀಕರಣದಲ್ಲಿ, ಗಾಂಧಿ ಹತ್ಯೆಯ ಸಮರ್ಥನೆಯಲ್ಲಿ ಕರಗಿಹೋಗುತ್ತದೆ. ಇದನ್ನೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ದಿನವಿಡೀ ನೋಡುವ ಯುವಜನಾಂಗಕ್ಕೆ ಗಾಂಧಿ ಹೇಗೆ ಕಾಣಬೇಕು ? ಕೇವಲ ಭಜನೆಯ ಕೇಂದ್ರವಾಗಿ ಕಾಣಬೇಕೋ ಅಥವಾ ಮೂರ್ತಿ ಪೂಜೆಯ ಬಿಂದುವಾಗಿ ಗೋಚರಿಸಬೇಕೋ ? ಅಥವಾ ದೇಶದ ʼ ವಿಭಜನೆಯ ಕಾರಣಕರ್ತನಾಗಿ ʼ ಕಾಣಬೇಕೋ ?
ವ್ಯಕ್ತಿ-ವ್ಯಕ್ತಿತ್ವ ಮತ್ತು ತಾತ್ವಿಕತೆ
ಸ್ವಾತಂತ್ರ್ಯ ಸಂಗ್ರಾಮಿಗಳ ಪೈಕಿ ಹೇಗಾದರೂ ಹಿಗ್ಗಿಸಬಹುದಾದ (ಅತ್ಯಂತ Elastic) ವ್ಯಕ್ತಿಯಾಗಿ ಬಳಕೆಯಾಗಿರುವ ಒಬ್ಬ ಹೋರಾಟಗಾರರೆಂದರೆ ಅದು ಮಹಾತ್ಮ ಗಾಂಧಿ ಮಾತ್ರ. ರಾಜಕೀಯ ಪಕ್ಷಗಳು ಗಾಂಧಿಯನ್ನು ಚುನಾವಣಾ ಪ್ರಯಾಣದಲ್ಲಿ ಸಾರಥಿಯಂತೆ ಬಳಸಿವೆ. ಗಾಂಧಿ ತತ್ವಗಳನ್ನು ಆಂತರಿಕವಾಗಿ ಅಳವಡಿಸಿಕೊಳ್ಳದಿದ್ದರೂ ಬಾಹ್ಯರೂಪದ ಆಲಂಕಾರಿಕ ವಸ್ತುವಿನಂತೆ ಬಳಸಿವೆ. ಮೂಲತಃ ಗಾಂಧಿ ಯಾವುದೇ ನಿರ್ದಿಷ್ಟ ಸಿದ್ಧಾಂತವನ್ನು ಹುಟ್ಟುಹಾಕಲಿಲ್ಲ. ಗಾಂಧಿವಾದ (Gandhism) ಎನ್ನುವುದು ಸ್ವತಂತ್ರ ಭಾರತದ ರಾಜಕೀಯ-ಸಾಮಾಜಿಕ ಉತ್ಪತ್ತಿ. ಮಹಾತ್ಮರ ಆಲೋಚನಾ ವಿಧಾನಗಳನ್ನು ಅನುಸರಿಸುವುದನ್ನೇ ಗಾಂಧಿವಾದ ಎನ್ನಲಾಯಿತು ಆದರೆ ಅನುಕರಿಸಲು ಯಾವ ಪಕ್ಷದಿಂದಲೂ ಸಾಧ್ಯವಾಗಲಿಲ್ಲ. ಹಾಗಾಗಿ ಯುವ ಜನಾಂಗ ನೋಡುತ್ತಿರುವ ʼ ಗಾಂಧಿವಾದ ʼ ಎಂಬ ವಿಶಾಲ ಚಪ್ಪರದಡಿ, ರಾಜಕೀಯವಾಗಿ ಗಾಂಧಿ ಹಿಂಬಾಲಕರನ್ನು ಗುರುತಿಸಬಹುದೇ ಹೊರತು, ಅನುಯಾಯಿಗಳನ್ನು ಅಲ್ಲ.
ಆದರೆ ಅಧಿಕಾರ ರಾಜಕಾರಣದಿಂದಾಚೆಗೆ ಗಾಂಧಿ ಅನುಯಾಯಿಗಳು ಉತ್ತರದ ರಾಜಸ್ಥಾನದಿಂದ ದಕ್ಷಿಣದ ಕರ್ನಾಟಕದವರೆಗೂ ಹೇರಳ ಸಂಖ್ಯೆಯಲ್ಲಿದ್ದಾರೆ. ಗಾಂಧಿ ಪ್ರಣೀತ ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಪ್ರಗತಿ, ಜೀವನ ಶೈಲಿ ಮತ್ತು ಪ್ರತಿರೋಧದ ವಿಧಾನಗಳನ್ನು ಅನುಸರಿಸುವ ಅಸಂಖ್ಯಾತ ಸಂಸ್ಥೆಗಳು ನಮ್ಮ ನಡುವೆ ಯಶಸ್ವಿಯಾಗಿ ನಿಂತಿವೆ. ಈ ವಾತಾವರಣದಲ್ಲಿ ನಡೆಯುವ ಸಂಕಥನಗಳಲ್ಲಿ ʼ ಅಹಿಂಸೆ-ಸತ್ಯಾಗ್ರಹ ʼ ಹೆಚ್ಚಾಗಿ ಪ್ರಸ್ತಾಪವಾಗುವುದೇ ಇಲ್ಲ. ಬದಲಾಗಿ ಸಮಾಜದಲ್ಲಿ ನಿಕೃಷ್ಟವಾಗಿ ಬದುಕುತ್ತಿರುವ , ಸಾಮಾಜಿಕ ಅನುಕೂಲಗಳಿಂದ ವಂಚಿತರಾಗುತ್ತಿರುವ ಹಾಗೂ ಆಧುನಿಕ ಬಂಡವಾಳಶಾಹಿ ಔದ್ಯೋಗಿಕ ಜಗತ್ತಿನಲ್ಲಿ ಮುಂದಡಿ ಇಡಲಾಗದ ಗ್ರಾಮೀಣ-ಆದಿವಾಸಿ ಸಮುದಾಯಗಳಿಗೆ ತಮ್ಮದೇ ಆದ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ಮಾರ್ಗಗಳನ್ನು ಸೂಚಿಸಲಾಗುತ್ತಿದೆ. ಈ ಸಾಮಾಜಿಕ ವಾತಾವರಣಗಳಲ್ಲಿ (Social Ecosystems) ಗಾಂಧಿ ಉಸಿರಾಡುತ್ತಿದ್ದಾರೆ.
ಬಹು ಆಯಾಮದ ಗಾಂಧಿ ನೋಟ
ವರ್ತಮಾನದ ಯುವ ಜನಾಂಗ ಯಾವ ಗಾಂಧಿಯನ್ನು ನೋಡಬೇಕು ? ಅಥವಾ ಗಾಂಧಿ ಎಂಬ ವ್ಯಕ್ತಿತ್ವವನ್ನು ತಾತ್ವಿಕವಾಗಿ ಹೇಗೆ ನೋಡಬೇಕು ? ಚರಿತ್ರೆಯನ್ನು ಪರಿಶೋಧಿಸಿ, ಭೇದಿಸಿ, ಛೇದಿಸಿ, ಒಳಹೊಕ್ಕು ನೋಡುವ ಮೂಲಕ ಹೊಸ ವಿಚಾರಗಳನ್ನು ಹೆಕ್ಕಿ ತೆಗೆಯುವುದು ವೈಜ್ಞಾನಿಕ ಅಧ್ಯಯನ ವಿಧಾನ. ಆದರೆ ನವಭಾರತ ಈ ವಿಧಾನವನ್ನು ತಲೆಕೆಳಗು ಮಾಡಿದೆ. ಚರಿತ್ರೆಯನ್ನು ತಿರುಚುವ ಮೂಲಕ ವಾಸ್ತವಗಳನ್ನು ಇಲ್ಲವಾಗಿಸಿ ಮಿಥ್ಯೆಗಳಿಗೆ ಜೀವ ತುಂಬುವ ಬೌದ್ಧಿಕ ಪ್ರಕ್ರಿಯೆಗೆ ಹಿಂದುತ್ವ ರಾಜಕಾರಣ 1990ರಿಂದಲೇ ಚಾಲನೆ ನೀಡಿದೆ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಚರಿತ್ರೆಯನ್ನು ಛಿದ್ರಗೊಳಿಸಿ, ಅವಶೇಷಗಳಲ್ಲೂ ದೊರೆಯದ ಕಲ್ಪಿತ ವಾಸ್ತವಗಳನ್ನು ನೈಜ ಇತಿಹಾಸ ಎಂದು ಬಿಂಬಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಚಾರಿತ್ರಿಕ ಘಟನೆಗಳು ಅಳಿಸಿಹಾಕಲ್ಪಟ್ಟರೆ ಪೌರಾಣಿಕ ಮಿಥ್ಯೆಗಳು ಚರಿತ್ರೆಯಾಗಿ ದಾಖಲಾಗುತ್ತಿವೆ.
ಈ ಅವೈಜ್ಞಾನಿಕ-ಅಬೌದ್ಧಿಕ (Unintellectual) ಪ್ರಕ್ರಿಯೆಯ ಒಂದು ಭಾಗವಾಗಿ ಗಾಂಧಿ ಹತ್ಯೆಯ ಹಿಂದೆ ದ್ವೇಷ ಕಾಣುವ ಬದಲು ಸತ್ಯಾನ್ವೇಷಣೆಯ ಹಾದಿ ಕಾಣುತ್ತದೆ. ಗಾಂಧಿ ಹಂತಕ ಹುತಾತ್ಮನಾಗುತ್ತಾನೆ, ಸ್ವತಃ ಗಾಂಧಿ ಹತ್ಯೆಗೆ ಯೋಗ್ಯರಾದ ದುಷ್ಟರಾಗಿ ಬಿಂಬಿಸಲ್ಪಡುತ್ತಾರೆ. ಈ ದ್ವಂದ್ವವನ್ನು ಯುವ ಜನಾಂಗ (ಜೆನ್ ಝಿ) ಗಂಭೀರವಾಗಿ ಗಮನಿಸಬೇಕಿದೆ. ಮಹಾತ್ಮ ಗಾಂಧಿ ಪ್ರಸ್ತುತವೋ ಅಪ್ರಸ್ತುತವೋ ಎಂಬ ಪ್ರಶ್ನೆ ನೂರಾರು ಕವಲುಗಳಲ್ಲಿ ಸಂವಾದಗಳನ್ನು ಸೃಷ್ಟಿಸುತ್ತದೆ. ಆದರೆ ಯುವ ಜನಾಂಗ ಗುರುತಿಸಬೇಕಿರುವುದು ಮಹಾತ್ಮನಲ್ಲಿದ್ದ ಸಂಯಮ ಮತ್ತು ಸ್ವಯಂಶೋಧನೆಯ (ಆತ್ಮಶೋಧನೆ) ಔದಾತ್ಯಗಳನ್ನು. ತಮ್ಮ ನಡಿಗೆಯಲ್ಲಾದ ತಪ್ಪುಗಳನ್ನು ಗುರುತಿಸಿಕೊಂಡು ಕೂಡಲೇ ಸರಿಪಡಿಸಿಕೊಳ್ಳುವ ಮಹಾತ್ಮಾ ಗಾಂಧಿಯ ಗುಣ ಅಪರೂಪವಾದದ್ದು. ತಮ್ಮ ಸ್ವಾತಂತ್ರ್ಯದ ನಡಿಗೆಯಲ್ಲೇ ನಾಲ್ಕು ಬಾರಿ ಹೀಗೆ ಬದಲಾಗುತ್ತಾರೆ. ಅಸ್ಪೃಶ್ಯತೆಯ ವಿರುದ್ಧ ಅವರ ಹೋರಾಟ ಅತ್ಯುತ್ತಮ ನಿದರ್ಶನ.
ಮಾನವೀಯ ಮೌಲ್ಯಗಳ ನಡುವೆ
ವರ್ಣಾಶ್ರಮ ಪದ್ಧತಿ ಮತ್ತು ಸನಾತನ ಧರ್ಮದಲ್ಲಿ ಕೊನೆಯವರೆಗೂ ತಮ್ಮ ನಿಷ್ಠೆಯನ್ನು ಕಾಪಾಡಿಕೊಂಡ ಮಹಾತ್ಮನ ತಾತ್ವಿಕ ನಿಲುವು ಇಂದಿಗೂ ಪ್ರಶ್ನಾರ್ಹವಾಗಿಯೇ ಉಳಿದಿದೆ. ಆದರೆ ಇಂದಿನ ಯುವ ಜನಾಂಗ ಮುಖಾಮುಖಿಯಾಗುತ್ತಿರುವ ಸಮಕಾಲೀನ ಸನಾತನಿಗಳ ದ್ವೇಷ, ಅಸೂಯೆ, ಅಸಹಿಷ್ಣುತೆ ಮತ್ತು ದಮನಕಾರಿ ಪ್ರವೃತ್ತಿಗಳನ್ನು ಶುದ್ಧ ಸನಾತನಿ ಮಹಾತ್ಮನ ವ್ಯಕ್ತಿತ್ವದಲ್ಲಿ ಸೂಕ್ಷ್ಮದರ್ಶಕ ಬಳಸಿದರೂ ಕಾಣಲಾಗುವುದಿಲ್ಲ. ಸೈದ್ದಾಂತಿಕವಾಗಿ ಕಡು ವಿರೋಧಿಯಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಆಗಲೀ, ದೇಶದ ವಿಭಜನೆಯ ವಿಚಾರದಲ್ಲಿ ಶತ್ರುವಾಗಿ ಪರಿಣಮಿಸಿದ ಜಿನ್ನಾ ಆಗಲೀ, ದ್ವೇಷಭಾವದ ಗಾಂಧಿಯನ್ನು ಕಾಣಲಿಲ್ಲ. ಅಥವಾ ಅವರುಗಳಲ್ಲಿ ಗಾಂಧಿ ಧಿಮಾಗಿ ನಕ್ಸಲರನ್ನು ಕಾಣಲಿಲ್ಲ. ಕೌಟುಂಬಿಕ ಸಂಬಂಧಗಳಲ್ಲೂ ತಾತ್ವಿಕ ನಡುಗೋಡೆಗಳನ್ನು ಕಟ್ಟಿರುವ ವರ್ತಮಾನದ ಹಿಂದುತ್ವ ರಾಜಕಾರಣದ ನೆಲೆಯಲ್ಲಿ ಯುವ ಜನಾಂಗ ಮಹಾತ್ಮನ ಈ ಔದಾತ್ಯವನ್ನು ಒಳಹೊಕ್ಕು ಗ್ರಹಿಸಬೇಕಿದೆ.
ಭವಿಷ್ಯದ ಭಾರತಕ್ಕೆ ಅಗತ್ಯವಾಗಿರುವುದು ಬಂಡವಾಳದ ಭದ್ರಕೋಟೆ ಮಾತ್ರವೇ ಅಲ್ಲ. ಅಥವಾ ಸುರಕ್ಷಿತ ಗಡಿಗಳು ಮಾತ್ರ ಅಲ್ಲ. ಆಂತರಿಕವಾಗಿ ಭಾರತ ತನ್ನೊಳಗಿನ ಪ್ರಾಚೀನ ಚಿಂತನೆಯ ಮಾದರಿಗಳನ್ನು ಕಳೆದುಕೊಳ್ಳಬೇಕಿದೆ. ಜಾತಿಭೇದ, ಮತದ್ವೇಷ, ಜಾತಿ ತಾರತಮ್ಯ, ಅಸ್ಪೃಶ್ಯತೆಯಂತಹ ಹೀನ ಪ್ರವೃತ್ತಿ, ಹೆಗಲು ಕೊಟ್ಟವರನ್ನೇ ಹೊರಗಿಡುವ ಸಾಮಾಜಿಕ ಬಹಿಷ್ಕಾರದಂತಹ ಕ್ರೌರ್ಯ, ನೆರೆಯವರನ್ನೇ ಪರಕೀಯರಂತೆ ಅನ್ಯರಂತೆ ಕಾಣುವ ಮನೋಭಾವ, ಹೆಣ್ಣನ್ನು ಅಧೀನಳಂತೆ ಕಾಣುವ ಪಿತೃಪ್ರಧಾನ ಧೋರಣೆ ಇವಾವುದೂ ಆಧುನಿಕ ಅವಿಷ್ಕಾರಗಳಲ್ಲ. ಶತಮಾನಗಳಿಂದ ಬೇರೂರಿರುವ ಸಾಮಾಜಿಕ ನಿಯಮಗಳು (Entrenched Social Norms). ತನ್ನ 80ನೆಯ ವಯಸ್ಸಿನಲ್ಲಾದರೂ ಭಾರತ ಈ ಅವಲಕ್ಷಣಗಳಿಂದ ಮುಕ್ತವಾಗಬೇಕಿತ್ತು. ಇದು ಮಹಾತ್ಮ ಗಾಂಧಿಯ ಕನಸಿನ ಒಂದು ಭಾಗವಾಗಿತ್ತು.
ಆದರೆ ಗಾಂಧಿ ಹಂತಕನನ್ನು ಹುತಾತ್ಮನನ್ನಾಗಿ, ಹುತಾತ್ಮ ರಾಷ್ಟ್ರಪಿತನನ್ನು ದುಷ್ಟನನ್ನಾಗಿಸುವ ರಾಜಕೀಯ- ಸಾಂಸ್ಕೃತಿಕ ವಾತಾವರಣದಲ್ಲಿ (Religio-cultural Ecosystem) ಈ ಕನಸುಗಳು ನುಚ್ಚುನೂರಾಗುತ್ತಿವೆ. ಈ ಚೂರಾದ ಕನಸುಗಳ ಕಣಗಳೂ ಕಾಣಿಸದ ಹಾಗೆ ಅವಶೇಷಗಳನ್ನು ತೊಳೆದುಹಾಕಲಾಗುತ್ತಿದೆ. ಯುವ ಜನಾಂಗ (ಜೆನ್ ಝಿ) ಈ ದುಷ್ಟ ಪ್ರಕ್ರಿಯೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ಸಹಜವಾಗಿಯೇ ಗೊಂದಲದ ಗೂಡಿನಲ್ಲಿ ಬಂಧಿಯಾಗಿದೆ. ಯಾರ ಕಡೆ ನೋಡುವುದು, ಯಾರ ಹಿಂದೆ ನಡೆಯುವುದು, ಯಾವ ದಿಕ್ಕಿನಲ್ಲಿ ಚಲಿಸುವುದು ಎಂಬ ಪ್ರಶ್ನೆಗಳಿಗೆ ಮುಖಾಮುಖಿಯಾದಾಗ ಯುವ ಜನಾಂಗಕ್ಕೆ ಬುದ್ಧ-ಬಸವನಿಂದ ಹಿಡಿದು ವಿವೇಕಾನಂದ, ಅಂಬೇಡ್ಕರ್, ಗಾಂಧಿ, ಮಾರ್ಕ್ಸ್ ಮೊದಲಾದ ಸೈದ್ಧಾಂತಿಕ ದಾರ್ಶನಿಕರು ಎದುರಾಗುತ್ತಾರೆ. ಈ ದಾರ್ಶನಿಕರ ವಾರಸುದಾರರಂತೆ ವರ್ತಿಸುವ ಸಂಘಟನೆಗಳೂ, ಪಕ್ಷಗಳೂ ಎದುರಾಗುತ್ತವೆ.
ಭವಿಷ್ಯದ ಹಾದಿಯಲ್ಲಿ ಗಾಂಧಿ ಹೆಜ್ಜೆ
ಈ ಸಾಂಸ್ಥಿಕ ನೆಲೆಗಳಲ್ಲಿ ಯುವ ಜನಾಂಗವನ್ನು (ಜೆನ್ ಝಿ) ಸರಿದಾರಿಯಲ್ಲಿ ಕರೆದೊಯ್ಯುವ ಉದಾತ್ತ ಗುರಿ ಸಮಾನ ಎಳೆಯಾಗಿ ಕಂಡರೂ , ಆ ಸರಿದಾರಿಯ ಆತ್ಯಂತಿಕ ಗುರಿ (Goal Post) ನಿಷ್ಕರ್ಷೆ ಮಾಡುವಾಗ ಹತ್ತಾರು ಕವಲುಗಳು ಸೃಷ್ಟಿಯಾಗುತ್ತವೆ. ಈ ಕವಲುಗಳನ್ನೇ ಬಳಸುದಾರಿಯಾಗಿ (Short Routs) ಉಪಯೋಗಿಸಿಕೊಂಡು ಹೊರಳುದಾರಿಯನ್ನಾಗಿ ಪರಿವರ್ತಿಸುವ ರಾಜಕೀಯ ವ್ಯವಸ್ಥೆ ಭಾರತವನ್ನು ಆಳುತ್ತಿದೆ. 2047ರ ಶತಮಾನೋತ್ಸವದ ಸಮಯದಲ್ಲಿ ನಿರ್ಣಾಯಕ ಸ್ಥಾನದಲ್ಲಿರಬಹುದಾದ ವರ್ತಮಾನದ ಯುವ ಜನಾಂಗ ಈ ವ್ಯವಸ್ಥೆಯ ತೂಫಾನ್ ಎದುರಿಸಬೇಕಿದೆ. ಕವಿ ಪ್ರದೀಪ್ ಅವರನ್ನೇ ಮತ್ತೆ ನೆನಪಿಸುವುದಾದರೆ ʼ ವಿಕಸಿತ ಭಾರತ ʼ ಎಂಬ ನಾವೆಯನ್ನು ಈ ದ್ವೇಷಾಸೂಯೆಗಳ ತೂಫಾನಿನ ಅಪಾಯದಿಂದ ರಕ್ಷಿಸುವ, ಸಂಭಾಳಿಸುವ ಜವಾಬ್ದಾರಿ ಯುವ ಜನಾಂಗದ ಮೇಲಿರಲಿದೆ. ಇದನ್ನು ಸಾಧಿಸುವ ಹಾದಿಯಲ್ಲಿ ʼಮಹಾತ್ಮ ಗಾಂಧಿʼ ಸದಾ ಪ್ರಸ್ತುತವಾಗಿಯೇ ಉಳಿಯುತ್ತಾರೆ.
ಈ ಗಾಂಧಿಯನ್ನು ನಾವು ಮರುಶೋಧಿಸಬೇಕಿದೆ. ಇವರು ರಾಜಘಾಟದಲ್ಲಿ ಸಿಗುವುದಿಲ್ಲ. ರಾಜಕೀಯ ಅಂಗಳದಲ್ಲಿ ಅದೃಶ್ಯರಾಗಿದ್ದಾರೆ. ಸಾಂಸ್ಕೃತಿಕ ಲೋಕದಲ್ಲಿ ಈಗ ಅಳಿಸಿಹಾಕಲ್ಪಡುತ್ತಿದ್ದಾರೆ. ಆದರೆ ಚರಿತ್ರೆಯ ಪುಟಗಳನ್ನು ಅಳಿಸಿಹಾಕಬಹುದು, ಇತಿಹಾಸವನ್ನು ಅಳಿಸಲಾಗುವುದಿಲ್ಲ. ಗಾಂಧಿ ಕೆಲವೊಮ್ಮೆ ಸಾಂದರ್ಭಿಕವಾಗಿ, ಕೆಲವೊಮ್ಮೆ ತಾತ್ವಿಕವಾಗಿ, ಕೆಲವೊಮ್ಮೆ ಜೀವನದರ್ಶನವಾಗಿ ನಮ್ಮ ನಡುವೆ ನಡೆದಾಡುತ್ತಲೇ ಇರುತ್ತಾರೆ. ಈ ಮಹಾತ್ಮನನ್ನು ಪ್ರತಿಮೆಗಳಲ್ಲಿ ಬಂಧಿಸಿ, ಭಜನೆಗಳ ಸರಳುಗಳ ಹಿಂದೆ ಕೂಡಿಹಾಕುವ ಬದಲು, ಆತನ ವ್ಯಕ್ತಿತ್ವವನ್ನು ಮತ್ತು ಅದರೊಗಳಗಿನ ಔದಾತ್ಯಗಳನ್ನು ಅಂತರಿಕೀಕರಣಗೊಳಿಸಿಕೊಳ್ಳುವುದು (Internalise) ವರ್ತಮಾನದ ಯುವಜನಾಂಗದ (ಜೆನ್ ಝಿ) ಆಯ್ಕೆಯಾಗಬೇಕಿದೆ. ಆರಾಧನೆಯೊಂದೇ ಅಲ್ಲ, ನಿತ್ಯ ಬದುಕಿನಲ್ಲಿ ಅನುಕರಣೆಯೂ ಗೌರವಸೂಚಕವಾಗುತ್ತದೆ. ಚಾರಿತ್ರಿಕ ಹೆಜ್ಜೆ ಗುರುತುಗಳ ಮೇಲೆ ಹೆಜ್ಜೆಯೂರಿ ನಡೆಯುವಾಗ ನಾವು ಕಟ್ಟಿಕೊಂಡ ಸೈದ್ಧಾಂತಿಕ ಚೌಕಟ್ಟುಗಳೇನೂ ಶಿಥಿಲವಾಗಬೇಕಿಲ್ಲ. ಈ ಬೌದ್ಧಿಕ ಎಚ್ಚರ ನಮ್ಮೊಳಗಿದ್ದರೆ ಸಾಕು.
ಪ್ರತಿಮೆ, ಸಭೆ ಸಮಾರಂಭ, ಭಜನೆ ಮತ್ತು ಆರಾಧನೆಯ ಆಡಂಬರಗಳನ್ನೂ ದಾಟಿ ನೋಡಿದಾಗ ಅಲ್ಲಿ ನಮಗೆ ಮಹಾತ್ಮ ಗಾಂಧಿ ಏಕಾಂಗಿಯಾಗಿ ಕಾಣುವುದಿಲ್ಲ. ಅವರ ಅಕ್ಕಪಕ್ಕದಲ್ಲಿ ಬುದ್ಧ, ಬಸವ, ಅಂಬೇಡ್ಕರ್, ವಿವೇಕಾನಂದ, ಠಾಗೋರ್, ಮಾರ್ಕ್ಸ್ ಎಲ್ಲರೂ ಕಾಣುತ್ತಾರೆ. ಈ ದೂರಗಾಮಿ ಕಣ್ಣೋಟ ನಮ್ಮ ಮುನ್ನೋಟವಾದಾಗ ಭವಿಷ್ಯದ ಭಾರತ ಸುಂದರವಾಗಿ ಕಾಣುತ್ತದೆ. ಒಟ್ಟು ಜನಸಂಖ್ಯೆಯ ಶೇಕಡಾ 40ರಷ್ಟಿರುವ ಯುವ ಜನಾಂಗದ ಕಣ್ಣೋಟ ಇಲ್ಲಿ ನಿರ್ಣಾಯಕವಾಗುತ್ತದೆ. ಗಾಂಧಿಯನ್ನು ಭಜಿಸಬೇಡಿ. ಪ್ರಣಾಮಗಳನ್ನು ಸಲ್ಲಿಸಿ ಅವಮಾನಿಸಬೇಡಿ. ಗಾಂಧಿ ಎಂಬ ವ್ಯಕ್ತಿಯನ್ನು ಒಪ್ಪದೆ ಹೋದರೂ, ವ್ಯಕ್ತಿತ್ವದೊಳಗಿನ ಔದಾತ್ಯಗಳನ್ನು ನಿರಾಕರಿಸಬೇಡಿ. ಅಲ್ಲಿ ಜೀವನ ಸೌಂದರ್ಯವಿದೆ. ಭಾರತದ ಭವಿಷ್ಯವೂ ಅಡಗಿದೆ. ಸಾಮಾಜಿಕವಾಗಿ ಅಧಃಪತನದ ಹಾದಿಯಲ್ಲಿ ಸಾಗುತ್ತಿರುವ ಭಾರತಕ್ಕೆ ಈ ಸೌಂದರ್ಯದ ಸ್ಪರ್ಶ ಬೇಕಿದೆ. ಜೆನ್ ಝೀ ಇದನ್ನು ಗಮನಿಸಬೇಕಿದೆ.






0 Comments