-ನಭಾ
ನಿಚ್ಚಳವಿದೆ ಈಗಲೂ
ಬಾಪೂ, ನಾ ನಿನ್ನ ಹೆಸರ
ಉದ್ಘರಿಸಿದ ಆ ದಿನ
ಬಾಯಿಪಾಠದ ಮಾತು
ನಡುಗು ತೊಡೆಗಳ ಗುಟ್ಟು
ಆದರೂ ಗೆದ್ದುಕೊಟ್ಟಿದ್ದಿ
ಪುಟ್ಟ ಸ್ಟೀಲಿನ ತಟ್ಟೆ, ಬಹುಮಾನ
ಆಗಲೂ, ನೀನೆಂದರೇನು ಪ್ರೀತಿ ಉಕ್ಕಿರಲಿಲ್ಲ
ಅಸಲಿಗೆ, ನೀನು ತಿಳಿದಿರಲೂ ಇಲ್ಲ
ಬೀಜಗಣಿತಕ್ಕಿಂತ ಕಠಿಣವಾಗಿತ್ತು
ತುಂಡುಪಂಜೆಯವನ ದುಂಡುಮೇಜಿನ ಸಭೆ
ಪಾಪು ಬಾಪುವಾದಾಗಿನ ಕಥೆ ಓದುವಾಗಲೂ ಎದೆಯುರಿ
ಹೊತ್ತಲ್ಲದ ಹೊತ್ತಲ್ಲಿ ಎದುರು ನಿಂತಿರುತ್ತಿದ್ದ
ನಿನ್ನ ಬೋಳುಮಂಡೆಯಿಂದೊಮ್ಮೆ ಬಿಡುಗಡೆ ಬೇಕಿತ್ತು
ಕಾಣೆಯಾಗಬೇಕಿತ್ತು ನಿನ್ನ ನೆರಳಿನ ರೇಕು
ಯಾರಿಗೆ ಬೇಕು ಬಾಪೂ, ನಿನ್ನಂತೆ
ಬೆತ್ತಲಾಗುವುದು ? ತಾನೇ ತನ್ನ ಕುಯ್ದು
ಪಾಲುಹಾಕಿ ಹಂಚುವುದು
ಭರಪೂರ ಯೌವನದ ಭರಾಟೆಯಲ್ಲಿ
ಎಲ್ಲಿ ಪುರುಸೊತ್ತು ಹೇಳು, ಸಪ್ತಪಾತಕಗಳಿಗೆ?
ಆದರೂ ಅದೆಂಥ ಮಾಯಾವಿ ನೀ?
ಸೇರಿಹೋಗಿದ್ದಿ ತೆಗೆದಿರಿಸಲಾಗದಂತೆ
ಹಗೂರಾಗಬೇಕು ಹಾರಬೇಕು – ಎಂದು
ಕನಸಾದಾಗೆಲ್ಲ ನಿನ್ನ ಕೈಕೋಲಿನ ಸಪ್ಪಳ
ಕಂಡುಬಂದಿದ್ದೇನೆ ನಿನ್ನ ಪೋರಬಂದರ್
ಸಾಬರಮತಿ, ದಂಡಿ… ʼಕಾಣಲಾಯಿತೆ
ನಿನ್ನ?ʼ ಎಂಬ ಪ್ರಶ್ನೆ ಹೊತ್ತು.
ನಿನ್ನುಸಿರ ಪರಿಮಳದ ಗುರುತ ಅರಸಿ
ಕಣ್ಣು ಉರಿ, ಎದೆ ಭಾರ, ಜೀವ ಸೋತು
ಇರಬೇಕಿತ್ತು ನಾನು ಆಗ
ನಿನ್ನ ತೋಳ ಚಾಚಿನಲಿ
ಕೈಹಾಕಿ ಉಪ್ಪಿಗೆ
ತಕರಾರುಗಳಿವೆ ನಿನ್ನೊಂದಿಗೆ
ಎಂದು ಕೂಗಲಾದರೂ
ಬಾಬಾಸಾಹೇಬರೊಂದಿಗೆ
ನಡೆದೇ ಇರಬೇಕಿತ್ತು ನಿನ್ನ ಜಗಳ
ಬೆಳಕ ಜಲ ಹಾಡಿದಂತ ರಾಗ
ಈ ಕತ್ತಲ ಕಾವಳದಲಿ
ಏಗುವುದು ತಪ್ಪಿರುತ್ತಿತ್ತು.






0 Comments