ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಹಿತ್ಯಾಸಕ್ತರಿಗೆ ಉತ್ತಮ ಜ್ಞಾನ ದೀವಿಗೆ..

ಸುಮುಖಾನಂದ ಜಲವಳ್ಳಿ ಅವರ ‘ಕಾವ್ಯದ ಅಂತರಂಗ ಬಹಿರಂಗ’ – ಭಾಗ -೧

ಈ ಕೃತಿಯ ಕುರಿತ ಸುಧಾ ಹಡಿನಬಾಳ ಅವರ ಬರಹ ಇಲ್ಲಿದೆ.

-ಸುಧಾ ಹಡಿನಬಾಳ

ಸುಮುಖಾನಂದ ಜಲವಳ್ಳಿಯವರು ನಾಡು ಕಂಡ ಓರ್ವ ಹಿರಿಯ ಸಾಹಿತಿ. ವೃತ್ತಿಯಿಂದ ಶಿಕ್ಷಕರಾಗಿ ಮಕ್ಕಳ ಮನೋವಿಕಾಸವನ್ನು ಚೆನ್ನಾಗಿ ಅರಿತವರು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿದ ಹಿರಿಯ ಸಾಹಿತಿಗಳು. ಜೊತೆಗೆ ಅಧ್ಯಯನ ಮತ್ತು ಅಧ್ಯಾಪನ ಎರಡು ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕನ್ನಡ ತಾಯಿಯ ಸೇವೆಗಿಳಿದವರು.

ಇಂದು ಅವರ ಕಾವ್ಯದ ಅಂತರಂಗ ಬಹಿರಂಗ ಭಾಗ-೧ ಈ ಕೃತಿಯ ಕುರಿತಾಗಿ ನನ್ನ ಓದಿಗೆ ನಿಲುಕುದಷ್ಟನ್ನು ತಮ್ಮ ಮುಂದೆ ಪ್ರಸ್ತುತಪಡಿಸಲು ತುಂಬಾ ಹೆಮ್ಮೆ ಅನಿಸುತ್ತಿದೆ.

ಸುಮುಖಾನಂದ ಜಲವಳ್ಳಿಯವರು ಹೆಸರಿಗೆ ಅನ್ವರ್ಥನಾಮ; ಅತ್ಯಂತ ಸರಳವಾದ ಭಾಷೆಯಲ್ಲಿ ವೈಚಾರಿಕತೆಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದೆ ಹೇಳಬೇಕಾದುದನ್ನು ಮನಮುಟ್ಟುವಂತೆ ಸರಳವಾದ ನಿರೂಪಣೆಯಲ್ಲಿ ನಿರೂಪಿಸಬಲ್ಲ ಬರಹಗಾರರು. ಈ ಕೃತಿ ಅದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತದೆ . ಈ ಕೃತಿಯಲ್ಲಿ ನಾಡಿನ ವಿವಿಧ ಕಾಲಘಟ್ಟದ ನಾಮಾಂಕಿತ ಅರವತ್ತೇಳು ಹಿರಿ ಕಿರಿಯ ಕವಿಗಳ ಆಯ್ದ ಕವಿತೆಗಳ ವಿಶ್ಲೇಷಣೆಯನ್ನು ಸುಮುಖಾನಂದ ಅವರು ಮಾಡಿರುತ್ತಾರೆ. ನನ್ನ ದೃಷ್ಟಿಯಲ್ಲಿ ಇದೊಂದು ಅಪರೂಪದ ಆಕರ ಗ್ರಂಥ, ಯಾಕೆಂದರೆ ಇಲ್ಲಿ ಆಯ್ದುಕೊಂಡ ಎಲ್ಲ ಕವನಗಳು ಸಮಾಜಮುಖಿ, ಜೀವಪರ ನಿಲುವುಳ್ಳ ವೈಚಾರಿಕ ಕವನಗಳೇ ಆಗಿವೆ. ಕುವೆಂಪು ಬೇಂದ್ರೆ, ಸರ್ವಜ್ಞರ ಚುಟುಕುಗಳನ್ನು ಒಳಗೊಂಡು ೨೧ ನೇ ಶತಮಾನದ ಯುವ ಬರಹಗಾರರ ಕವನಗಳು ಕೂಡ ಈ ವಿಶ್ಲೇಷಣೆಗೆ ಒಳಪಟ್ಟಿವೆ. ಹೀಗಾಗಿ ಇದೊಂದು ಅಪರೂಪದ ಕೃತಿ.

ಇಲ್ಲಿ ಆಯ್ದುಕೊಂಡ ಎಲ್ಲ ಕವಿತೆಗಳು ಸಮಾಜದ ಆಯಾ ಕಾಲಘಟ್ಟದ ಸಾಮಾಜಿಕ ವಿಶ್ಲೇಷಣೆಗಳಂತೆ ಕಂಡುಬರುತ್ತವೆ. ಕವನಗಳು ಸಮಾಜದ ಆಗುಹೋಗುಗಳಿಗೆ ಹಿಡಿದ ಕನ್ನಡಿಯಂತೆ; ಅಂತೆಯೇ ಇಲ್ಲಿನ ಬಹುತೇಕ ಕವಿತೆಗಳಲ್ಲಿ ವೈಚಾರಿಕತೆ, ಪ್ರಗತಿಪರ ಧೋರಣೆ, ದಲಿತ ಸಂವೇದನೆ, ಸ್ತ್ರೀ ವಾದಿ ಚಿಂತನೆಗಳು ಎದ್ದು ಕಾಣುತ್ತವೆ. ಕವನಗಳ ವಿಶ್ಲೇಷಣೆಯ ಜೊತೆಗೆ ಕವನ ರಚನೆಯಾದ ಕಾಲಘಟ್ಟ, ಕವಿಯ ಕಿರು ಪರಿಚಯ , ಸಾಹಿತ್ಯ ಕೃಷಿ ಜೊತೆಗೆ ಕವಿಯ ಆಶಯ ಇವುಗಳ ಸಂಕ್ಷಿಪ್ತ ಟಿಪ್ಪಣಿ ಕೂಡ ಈ ಕೃತಿಯಲ್ಲಿ ಮೂಡಿ ಬಂದಿದೆ . ಕವನಗಳ ಜೀವಾಳದಂತಿರುವ ಕವಿತೆಯ ಸಾಲುಗಳನ್ನು ಆಯ್ದು ಅವುಗಳಿಗೆ ವಿಶ್ಲೇಷಣೆಯನ್ನು ಸವಿವರವಾಗಿ ಕೃತಿಕಾರರು ಕಟ್ಟಿಕೊಟ್ಟಿದ್ದಾರೆ ಜೊತೆಗೆ ಕವಿಯ ಧೋರಣೆಗಿಂತ ಭಿನ್ನವಾಗಿ ಕವನದ ಸಾಲುಗಳ ಒಳ ದನಿಯನ್ನು ಕೂಡ ಲೇಖಕರು ಬಿತ್ತರಿಸಿದ್ದಾರೆ .ಹೀಗಾಗಿ ಈ ಕೃತಿ ತುಂಬಾ ವಿಶೇಷದ್ದು ಎಂದು ನನಗನ್ನಿಸುವುದು.

ಈ ಕೃತಿಯ ಮೊದಲ ಕವನ
ಸುಗುಣ ಶಂಕರ ಹಬ್ಬು ಅವರ ‘ದೇವಗುಡಿಯೊಳಗಿಹನೆ ‘

ಅದೊ; ಯೇನಿದಿಹುದು ದೇವನೆಲೆಸಿದ ಗುಡಿಯೆ
ಅಲ್ಲಾ ಸೆರೆಮನೆಯೆ?
ಬವಣೆಯನು ಹರಿಪವಗೆ ಈ ಬಂಧವೇಕೋ

ಈ ಕವಿತೆ ನಿಜವಾಗಿಯೂ ದೇವರಿದ್ದಾನೆಯೇ? ಇದ್ದರೆ ಇಂತಹ ಸೆರೆಮನೆಯೊಳಗೆ? ಎಂದು ಪ್ರಶ್ನಿಸುವ ಮೂಲಕ ಇವೆಲ್ಲ ಪಾಪ ಕೃತ್ಯಕ್ಕೆ ಪ್ರಾಯಶ್ಚಿತ್ತವೆಂದು ಪೌರಾಣಿಕ ಕಥೆಗಳಲ್ಲಿ ಬರುವ ಶಿಷ್ಟ ರಕ್ಷಣೆಯ ನೆಪದಲ್ಲಿ ಕ್ರೌರ್ಯ ಸ್ತ್ರೀ ಶೋಷಣೆ ಇತ್ಯಾದಿ ಕಥಾನಕಗಳ ನಿರೂಪಣೆಯೊಂದಿಗೆ
ಮುಂದುವರಿದು

‘ಬೆದರಬೇಡವೋ ನನ್ನ ಧೈರ್ಯವಿರಲಿ’
ಎಂಬ ಸಾಲುಗಳು ಅನ್ಯಾಯವನ್ನು ಕಂಡು ಪ್ರಶ್ನಿಸುವ ಎದೆಗಾರಿಕೆ ಇರುವಲ್ಲಿ ನ್ಯಾಯ ತಲೆ ಎತ್ತುತ್ತದೆ ಎಂಬ ಆಶಯವನ್ನು ಈ ಕವಿತೆಯಲ್ಲಿ ಮುನ್ನೆಲೆಗೆ ತಂದಿದ್ದಾರೆ.

ಜಿ ಪಿ ರಾಜರತ್ನಂ ಕನ್ನಡದ ನಾಮಾಂಕಿತ ಕವಿಗಳು ಅವರ ‘ಕನ್ನಡ ಪದಗೊಳ್ ‘ ಕವಿತೆ ‘ರತ್ನನ ಪದಗಳು’ ಕವನ ಸಂಕಲನದಿಂದ ಆಯ್ದ ಕನ್ನಡಿಗರೆಲ್ಲರಿಗೆ ಚಿರಪರಿಚಿತವಾದ ಕವಿತೆ. ರಾಜರತ್ನಂ ಅವರ ಕನ್ನಡ ಪ್ರೀತಿ, ಅಭಿಮಾನ ಈ ಕವಿತೆಯಲ್ಲಿ ನೂರ್ಮಡಿಸಿದೆ. ಕವಿತೆಯ ಒಂದು ವಿಶೇಷ ವಿಶ್ಲೇಷಣೆ ಎಂದರೆ ಕೃತಿಕಾರರು ಹೇಳುವಂತೆ ಕವಿಗಳೆಂದರೆ ಹೆಂಡಗುಡುಕರ ಹಾಗೆ; ಕಾವ್ಯ ಪ್ರತಿಭೆ ಜಾಗೃತವಾದಾಗ ಕವಿಗೆ ಅದು ಅಮಲಿನಂತೆ! ಕಾವ್ಯ ಪ್ರತಿಭೆಯನ್ನು ಹೆಂಡಕ್ಕೆ ಹೋಲಿಸಿ ಕಪಟ ಕುತಂತ್ರಗಳು ಭಯೋತ್ಪಾದಕರಿಗಿಂತ ಸಮಾಜದಲ್ಲಿ ಮುಚ್ಚುಮರೆ ಇಲ್ಲದೆ ಕುಡಿದು ಸತ್ಯವನ್ನು ಹೇಳುವ ಕುಡುಕನ ಸಾಚಾತನ ಸಹ್ಯವಾದುದು ಎನ್ನುತ್ತಾರೆ.

ನಾಡಿನ ನಾಮಾಂಕಿತ ಜಾನಪದ ತಜ್ಞ ಕವಿ ವಿಮರ್ಶಕ ಡಾಕ್ಟರ್ ಎನ್ ಆರ್ ನಾಯಕ್ ಅವರ ‘ಹಂಸಪಥ’ ಸಂಕಲನ ಛಂದಸ್ಸಿನ ವಿಶ್ಲೇಷಣೆಯೊಂದಿಗೆ ‘ಹಂಸ’ ಪದದ ವಿಶ್ಲೇಷಣೆ ತುಂಬಾ ಮಾರ್ಮಿಕವಾಗಿ ಮೂಡಿಬಂದಿದೆ. ಹಂಸ ವಾಚ್ಯಾರ್ಥದಲ್ಲಿ ಒಂದು ಪಕ್ಷಿ ಆದರೂ ಈ ಪದ ವಿಶಿಷ್ಟವಾದ ಅರ್ಥ ಹೊಂದಿದ್ದು ಆಧ್ಯಾತ್ಮದ ಅರಿವನ್ನು ಹೊಂದಿದ ಆತ್ಮವೇ ಹಂಸ. ಇದು ಆತ್ಮದ ವೈಶಾಲ್ಯವನ್ನು ಸಾರುತ್ತದೆ. ಉದಾಹರಣೆಗೆ ಪರಮಹಂಸ. ಇಡೀ ಕವನದುದ್ದಕ್ಕೂ ಹಂಸ ಪದದ ವಿಶ್ಲೇಷಣೆ ಸೊಗಸಾಗಿ ಮೂಡಿಬಂದಿದೆ. ಹಂಸಪಥ ಕವನ ಅರಿವಿನಡೆಗೆ ಬೆಳಕ ತೋರಿಸುತ್ತದೆ. ಇಡೀ ಸಂಕಲನ ಸರ್ವರ ಉದ್ಧಾರದ ಆಶಯವನ್ನು ಹೊಂದಿದೆ . ಕವನದ ಆಯ್ದ ಸಾಲುಗಳು ಇಂತಿವೆ

‘ಬೆಲ್ಲ ತಿಂಬ ಬಯಕೆಯನ್ನು ಬದಿಗೆ ಸರಿಸಿ ಬೆಲ್ಲಬಾಗು
ಬದುಕು ಬಾಳಿ ಎಲ್ಲ ಜನರ ಒಲವ ಗಳಿಸು ಜೀವ ಹಂಸವೆ
ಬೇವ ತಿಂದು ಬೆಲ್ಲವಾಗು ನೋವ ನುಂಗಿ ಸಿಂಗವಾಗು
ಹಾವ ಹಿಡಿದು ಹೂವ ಮಾಡು ಕೊರಗ ಬೇಡ ಜೀವ ಹಂಸವೆ’ .

ಕನ್ನಡದ ವರಕವಿ ದ ರಾ ಬೇಂದ್ರೆಯವರ ‘ಕುರುಡು ಕಾಂಚಾಣ’ ತುಂಬಾ ಮಾರ್ಮಿಕವಾದ ಒಂದು ಕವನ. ಮನುಷ್ಯ ಯಾಕೆ ಹೀಗೆ ? ಎಂಬ ಪ್ರಶ್ನೆ , ಆತಂಕ ಕಾಡುತ್ತದೆ. ಮನುಷ್ಯರೊಳಗಣ ಪ್ರಾಣಿ ಸಹಜವಾದ ಅನಾಗರಿಕತೆ, ಸ್ವಾರ್ಥ, ಉಳ್ಳವರ ಧನದಾಹ, ಕ್ರೌರ್ಯ ನಿರ್ದಯೆ ಕವನದುದ್ದಕ್ಕೂ ಹರಳುಗಟ್ಟಿದೆ.
ಕವನದ ಕೊನೆಯ ಸಾಲು

ಹ್ಯಾಂಗರ ಕುಣಿ ಕುಣಿದು
ಮಂಗಾಟ ಮಾಡಿದಾಗ
ಅಂಗಾತ ಬಿತ್ತೊ
ಹೆಗಲಲ್ಲಿ ಹೆಗಲಲಿ ಎತ್ತೊ’

ಎನ್ನುವ ಮುಖೇನ ತುಳಿತಕ್ಕೂ ಒಂದು ಮಿತಿ ಇದೆ; ತುಳಿತಕ್ಕೊಳಗಾದ ಜನ ಒಂದಾಗಬೇಕು ; ಶೋಷಣೆ, ಅನ್ಯಾಯವನ್ನು ಪ್ರತಿಭಟಿಸಬೇಕು. ಆಗ ಹೊಸ ಬದಲಾವಣೆ ನಡೆಯುತ್ತದೆ; ಶೋಷಿತ ಜನ ಅಂತಹ ಗಟ್ಟಿತನವನ್ನು ಬೆಳೆಸಿಕೊಳ್ಳಬೇಕು ಎಂಬುದು ಕವನದ ಆಶಯ.

ಕುವೆಂಪು ಅವರ’ ಅನಿಕೇತನ’ ಇದೊಂದು ವಿಶ್ವಮಾನವ ಗೀತೆ. ನಮ್ಮೊಳಗಿನ ಚೇತನಕ್ಕೆ ಹೇಳುವ ಮಾತಿದು; ಬೆಳಕಾಗು, ಬಂಧನ ಕಳೆದು ನಿತ್ಯ ಮುನ್ನಡೆಯುತ್ತಿರು; ವಿಶ್ವದೊಳಿತಿಗಾಗಿ ಮುನ್ನಡೆಯಬೇಕು ಎಂಬ ಧ್ವನಿ ಪೂರ್ಣ ಭಾವ ಕವಿತೆಯಲ್ಲಿ ಮಡುಗಟ್ಟಿದೆ.
ಕವನದ ಚರಣ ಹೀಗೆ ಮುಂದುವರಿಯುತ್ತಾ
‘ಎಲ್ಲಿಯೂ ನಿಲ್ಲದಿರು
ಮನೆಯನೊಂದ ಕಟ್ಟದಿರು ಕೊನೆಯನೆಂದೂ ಮುಟ್ಟದಿರು
ಓ ನನ್ನ ಚೇತನ
ಆಗೂ ನೀ ಹನಿಕೇತನ ‘

‘ ಎಲ್ಲಿಯೂ ನಿಲ್ಲದಿರು’ ಎಂಬ ಸಾಲುಗಳಲ್ಲಿ ಸಾಧನೆಯ ಮಾರ್ಗದಲ್ಲಿ ಸದಾ ಮುನ್ನಡೆಯುತ್ತಿರು ಎಂಬ ಲೌಕಿಕ ಅಥವಾ ಅಲೌಕಿಕ ಭಾವ ಒಡ ಮೂಡಿದೆ .ಕಾರ್ಯಗತಿಯಲ್ಲಿ ಚಲನಶೀಲತೆ ಇರಲಿ ಎಂಬುದು ಕವಿತೆಯ ಆಶಯ.

ಬಿ ಎ ಸನದಿಯವರ’ ಭಾವ ಯೋಗ’ ಇದೋಂದು ಮಾನವೀಯ ಅಂತ: ಕರಣ ತುಂಬಿದ ಕವಿತೆ . ಇಡೀ ಕವನ ಮಾನವೀಯತೆಯ ಮಿಡಿತ, ಸರ್ವೋದಯ, ವಿಶ್ವಬಂದುತ್ವ, ಅಭಿವೃದ್ಧಿ, ಸ್ವಾವಲಂಬನೆಯ ಚಿಂತನೆಯೊಂದಿಗೆ ಸಶಕ್ತವಾಗಿ ಮೂಡಿಬಂದಿದೆ ..

‘ಬಿಡುಗಡೆಯ ಬೆಳಕಿನಲ್ಲಿ ಬೆಳಗುತಿದೆ ಕಂಡೆಯಾ
ಭರತ ಋಂಡ ‘
ಮುಂದುವರಿಯುತ್ತಾ

‘ನರ -ಕುರಿಯ ಬಲಿ ಬೇಡ
ಹಿಂಸೆಯ ಹೆಸರೆತ್ತದಿರು
ಮರೆತು ಕೂಡ
ಬೆವರ ಬಲಿಯೇ ಸಾಕು’

ಬಿಡುಗಡೆಯನ್ನು ಬೆಳಕು ಎಂದಿರುವುದು ಧ್ವನಿ ಪೂರ್ಣ. ಜೊತೆಗೆ ದುಡಿಮೆಯೇ ನಿಜವಾದ ಯಜ್ಞ ಅದಕ್ಕೆ ಬೇಕಾದುದು ಬೆವರ ಬಲಿ ಎಂಬ ಸಾಲುಗಳು ಹೆಚ್ಚು ಅರ್ಥಪೂರ್ಣವಾಗಿ ಮೂಡಿ ಬಂದಿದೆ.

ಅಮೃತ ಸೋಮೇಶ್ವರರ ‘ಪ್ರೇಮ ಸೇತು’ ಕೇವಲ ಮನೋಲಾಸ ನೀಡುವುದಿಲ್ಲ ಜೊತೆಗೆ ನಿರರ್ಗಳವಾದ ಒಂದು ಮಾನವೀಯ ಕಾಳಜಿ ಪುಡಿಯುತ್ತಿರುತ್ತದೆ .ಆ ಕಾಳಜಿಯಲ್ಲಿ ಮಾನವರೆಲ್ಲ ಎಲ್ಲಾ ಆವರಣಗಳನ್ನು ಮೀರಿ ಆತ್ಮೀಯ ಭಾವದಿಂದ ಒಂದಾಗಿ ಸುಂದರವಾಗಿ ಬಾಳಬೇಕು ಎಂಬ ಕಳಕಳಿ ಮಿಡಿತವನ್ನು ಸೇತುವೆ ಬಲಿಯುವಿಕೆಯನ್ನು ಖಂಡ ಖಂಡವಾಗಿ ಚಿತ್ರಿಸಿದ್ದಾರೆ.

‘ ಭೋರ್ಗರಿವಂಥ ಸಾಗರಕೆ ಸೇತುವನು ಬಲಿಯಬೇಕು
ದೂರವಾಗುವಂಥ ಆ ತೀರ ಈ ತೀರ ಸೇರಿಸುವ ಸಾಹಸವಾಗಬೇಕು ‘
ಎಂಬ ಸಾಲುಗಳು ಸೇತುವೆ ಮಾನವ ನಿರ್ಮಿತವೇ ಆದರೂ ಇವು ಮಾನವ ಸಂಬಂಧಗಳ ಜೀವಂತ ಸಾಕ್ಷಿ ; ಅದರ ಮೌನದಲ್ಲಿ ಸರ್ವರೊಳಿತಿನ ಸ್ಪಂದನವಿದೆ ಎಂಬ ಆಶಯ ವ್ಯಕ್ತವಾಗಿದೆ.

ಎಂ ಗೋವಿಂದ ಪೈ ಅವರ ‘ ಹೊಲೆಯನು ಯಾರು ?’ಈ ಕವನ ಅರಿವಿನ ಸಂವೇದನೆಯ ಆವರಣದಲ್ಲಿ ಮೂಡಿಬಂದಿದೆ .ಗೋವಿಂದ ಪೈಗಳು ನವೋದಯ ಮಾರ್ಗದ ಕವಿಗಳು. ದೋಷ ಅಥವಾ ಅವಗುಣಗಳಿಗೆ ಧ್ವನಿಯಾಗಿ ಬಳಸಿ ಒಂದು ಜಾತಿಗೆ ಸೀಮಿತವಾಗಿಲ್ಲ ಹೊಲೆಯರು ಹೊಲೆಯರಲ್ಲ; ಅವರೂ ಮನುಷ್ಯರು. ಇಲ್ಲಿ ಕವಿ ಯಾವುದೇ ಆಕ್ರೋಶದಿಂದಲ್ಲದೆ ಅರಿವಿನಿಂದ ಶಾಂತವಾಗಿ ಗೆಳೆಯ ಎಂದು ಸಹೃದಯರನ್ನು ಸಂಬೋಧಿಸುತ್ತಾರೆ; ಅರಿವಿನ ಬಾಗಿಲನ್ನು ತೆರೆಯುತ್ತಾರೆ .

‘ಹೊಲೆಯನಾರೂರ ಹೊರಗಿರುವವನೇ ಗೆಳೆಯ? ಜಾತಿಯಿಂದಲ್ಲ ಗುಣದಿಂದಿಹನು ಹೊಲೆಯ’
ಹೊಲೆತನ ಯಾವುದು ಎಂಬುದನ್ನು ಉಲ್ಲೇಖಿಸುತ್ತಾ ಹೀನ ಗುಣವಿಲ್ಲದ ಮನುಷ್ಯರೆಲ್ಲರೂ ಶ್ರೇಷ್ಠರು ಎನ್ನುತ್ತಾರೆ.

ವಿಡಂಬರಿಯವರ ‘ಚುಟುಕುಗಳು ‘
ನೆಲದಾಳದಿಂದ ಮೂಡಿಬಂದು ಬೆಂಕಿಯಲ್ಲಿ ಬೆಂದು ಪುತ್ಥಳಿಯಂತಾದ ವಿಡಂಬಾರಿ ಅಪ್ಪಟ ಪ್ರಗತಿಪರ ಧೋರಣೆಯ ವೈಚಾರಿಕ ಕವಿ. ತನ್ನ ಹುಟ್ಟಿನ ಗುಟ್ಟನ್ನು ಬಿಚ್ಚಿಟ್ಟ ಮನೋಸ್ಥೈರ್ಯವನ್ನು ಮೆಚ್ಚಲೇಬೇಕು.ಮಾನವೀಯ ಕಳಕಳಿ, ದೇವರು ಧರ್ಮದ ಹೆಸರಲ್ಲಿ ನಡೆಯುವ ಸುಲಿಗೆ ಶೋಷಣೆ, ರಾಜಕೀಯ ಮುಖವಾಡ , ಲಿಂಗ ತಾರತಮ್ಯ ಹೀಗೆ ನಮ್ಮ ನಡುವಿನ ವಿಷಯವನ್ನೇ ತಮ್ಮ ಚುಟುಕುಗಳ ವಸ್ತುಗಳನ್ನಾಗಿ ಆಯ್ದುಕೊಳ್ಳುತ್ತಾರೆ. ವೈಚಾರಿಕ ಸೌಂದರ್ಯವೇ ಇವರ ಚುಟುಕುಗಳಿಗೆ ಶೋಭೆ ತಂದಿದೆ ಎಂಬ ಮಾತನ್ನು ಕೃತಿಕಾರರು ಉಲ್ಲೇಖಿಸುತ್ತಾರೆ.

ಸವಿತಾ ನಾಗಭೂಷಣ್ ಇವರ’ ತಂಗಿ ಹುಟ್ಟಿದಳು’
ಪುರುಷನ ಮೆದುಳು ಸ್ತ್ರೀಯ ಮಾಂಸ ಮಚ್ಚೆಯಿಂದಾದರೂ ತಾನೇ ಶ್ರೇಷ್ಠ ಎಂಬ ಮನೋ ಧೋರಣೆಗೆ ಸತ್ವಯುತವಾಗಿ ಪ್ರತಿಕ್ರಿಸಿದ ಕವಿತೆ ಇದು.

‘ಸಂಭ್ರಮವಿಲ್ಲ ಸಡಗರವಿಲ್ಲ
ಮನೆಯೊಳಗೆ ಸೂತಕದ ವಾತಾವರಣ
ಆಶೆಯಂತೆಯೇ
ಬತ್ತಿಹೋಗಿದೆ ಎದೆ ಹಾಲು ‘

ಎಂಬ ಸಾಲುಗಳು ಹಡೆದವ್ವನಿಗೂ ಹೆಣ್ಣು ಮಗು ಬೇಡ; ಬೇಡವೆಂದರೆ ಮನೆಯವರಿಗಲ್ಲ ಬೇಡವಾಗಿರುವುದನ್ನು ಅವಳೂ ಬಯಸುವುದಿಲ್ಲ.
‘ಅಜ್ಜಿಯ ಗಂಟಲು ಕಟ್ಟಿ ಹೋಗಿದೆ’ ಎಂಬಲ್ಲಿ ನಮ್ಮ ಜೋಗುಳ ಹಾಡುಗಳೂ ಸಹ ಗಂಡು ಮಕ್ಕಳ ಪರವಾಗಿಯೇ ಹೊರತು ಹೆಣ್ಣು ಮಕ್ಕಳನ್ನು ಮುಟ್ಟುವುದಿಲ್ಲ ಎಂಬುದನ್ನು ದೃಢೀಕರಿಸುತ್ತವೆ .
ಕೊನೆಯಲ್ಲಿ
‘ಹಿಡಿಯುಷ್ಟಿರುವ ತಂಗಿಯನು ಮುಡಿಯಷ್ಟಿರುವ ಅಕ್ಕ
ಅಪ್ಪುವಳು ಅಭಯ ನೀಡುವಳು’

ಎಂಬ ಪ್ರತಿಮೆ ಹೆಣ್ಣು ಹೆಣ್ಣಿಗೆ
ಶತ್ರುವಲ್ಲ ; ಪರಸ್ಪರ ಪ್ರೀತಿ ಭದ್ರತೆ ನೀಡಬೇಕಾದವಳು, ನೀಡಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತವೆ.

ಮಹಾದೇವ ಮೂಡು ಕೊಣಚೆಯವರ ‘ಎನ್ನ ಕೊಂದವರೆ’
‘ ಧನ್ಯವಾದ ನಿಮಗೆ ಎನ್ನ ಕೊಂದವರೆ
ಸತ್ತ ಮೇಲೂ ಬರಿದೆ ಇರಿದು ನಿಂದವರೆ
ನನ್ನ ಮುಖದಲ್ಲಿ ಮುಖವಾಡ ಹಾಕಿ ನನ್ನೊಳಗೆ ಕಪಟಿಯನು ಹುಡುಕಿ ತಂದವರೆ’
ತುಂಬಾ ಮಾರ್ಮಿಕ ಸಾಲುಗಳು! ಮಾನವನ ಕ್ರೌರ್ಯ ಪರಾಕಾಷ್ಠೆ ತಲುಪಿದೆ .ಇಲ್ಲಿ ಕೊಲ್ಲುವಿಕೆ ನಿರಂತರವಾಗಿ ನಡೆಯುತ್ತಿದೆ ಅಂದು ಇಂದೂ ಸಹ. ಮುಂದುವರಿದು

‘ಪಾಪ ಪುಣ್ಯದ ಲೆಕ್ಕವಿಡಲೊಬ್ಬ ಕುಂತಿಹನು
ಸತ್ಯ ಸುಳ್ಳುಗಳೆಲ್ಲ ಬಯಲಾಗುವುದಲ್ಲಿ’
ಎಂಬಲ್ಲಿ ಯೇಸು ನೆನಪಾಗುತ್ತಾರೆ.ಆದರೆ ಇಲ್ಲಿ ಯಾವುದೂ ಶಾಶ್ವತವಲ್ಲ.ಸತ್ಯ ಸುಳ್ಳು ಬಯಲಾಗುವ ಕಾಲವು ಬಂದಿದೆ ಎಂಬ ನಿಯತಿ ಧರ್ಮವನ್ನು ಕೃತಿಕಾರರು ವಿಶ್ಲೇಷಣೆಯಲ್ಲಿ ಉಸಿರುತ್ತಾರೆ.

ಜಿ ಎಸ್ ಅವಧಾನಿಯವರ ‘ಮನೆ ‘

ಡಾ ಜಿ ಎಸ್ ಅವಧಾನಿಯವರು ನಮ್ಮ ನಡುವಿನ ಸಶಕ್ತ ಕವಿಗಳು. ಪ್ರಾದೇಶಿಕ ನುಡಿಗಳಿಗೆ ಕಾವ್ಯದ ಸೊಬಗನಿತ್ತು ಅರ್ಥ ಮತ್ತು ಧ್ವನಿಯನ್ನು ಹೆಚ್ಚಿಸಿಕೊಂಡವರು .ಈ ಕವಿತೆಯಲ್ಲಿ ಮನೆಯ ಯಜಮಾನ ಮನೆ ಬಾಡಿಗೆಗೆ ಕೊಡುವಾಗ ತೋರುವ ಹಿಕ್ಮತ್ತು ಕಸರತ್ತು ಅನಾವರಣಗೊಂಡಿದೆ. ಬಾಡಿಗೆದಾರರಿಗೆ ಮನೆಯ ಅಸಲಿಯತ್ತನ್ನು ತೆರೆದಿಡುತ್ತ ಪುಕ್ಕಟೆ ಸಲಹೆ ಕೊಡುತ್ತಾ ತಾನು ಬೆತ್ತಲು ಗೊಳ್ಳುತ್ತಾನೆ ! ಉತ್ತರ ಕನ್ನಡದ ಗ್ರಾಮೀಣ ಭಾಷೆಯ ಸೊಗಡು ಸೊಗಸಾಗಿ ಮೂಡಿ ಬಂದಿದೆ.

‘ಪಕ್ಕದ ಬಾವಿ ಅರವತ್ತಡಿ ಆಳ
ಹಗ್ಗವನ್ನು ನೀವೇ ಹಾಕಿಸಿ ಬೇಕಾದರೆ ಕೆಲಸದವರನ್ನು ಇಟ್ಟುಕೊಳ್ಳಬಹುದು
ವ್ಯಾಯಾಮಕ್ಕಾದರೆ ನಿಮಗೂ ಅದು ಸೈ’

ಯಜಮಾನನ ಮಾತಿನ ಧಾಟಿ ಕೇವಲ ಮನೆ ಬಾಡಿಗೆಗೆ ಕೊಡುವುದಷ್ಟೇ ಆಗಿರದೆ ಕವಿ ಈ ಮೂಲಕ ಇನ್ನೇನನ್ನು ಧ್ವನಿಸಿದಂತಿದೆ. ಇಲ್ಲಿ ಭಾರತದ ವಾಸ್ತವಕ್ಕೆ’ ಮನೆ’ ಪ್ರತಿಮೆಯಂತಿದೆ .ಮನೆ ಬಾಡಿಗೆಗೆ ಇಟ್ಟ ಯಜಮಾನ ಇಲ್ಲಿ ಪುರೋಹಿತಶಾಹಿಯ ವ್ಯವಸ್ಥೆಯನ್ನು ಪ್ರತಿನಿಧಿಸುತ್ತಾನೆ ಎಂದು ಪ್ರತಿಕಾರರು ವಿಶ್ಲೇಷಿಸುತ್ತಾರೆ.

‘ ಧಾರ್ಮಿಕ ಮುಖಂಡರಿಗೆ ಧರ್ಮ ಯಾವುದು?’
ಇಲ್ಲಿ ಧಾರ್ಮಿಕ ಮುಖಂಡರೆಂದರೆ ಯಾರು? ಅವರು ಮಾಡುವ ಪೂಜೆ ಪುನಸ್ಕಾರ ಹೋಮ ಹವನ ಇವಿಷ್ಟೇ ಧಾರ್ಮಿಕ ಕಾರ್ಯಗಳೆ? ಹಾಗೆ ಜನ ತಿಳಿದಂತಿದೆ. ಆದರೆ ಧರ್ಮವೆಂದರೆ ಇದಲ್ಲ; ಬದುಕಿನ ಮಾರ್ಗವನ್ನು ನಿರ್ದೇಶಿಸುವ ಮೌಲ್ಯಗಳೇ ಧರ್ಮ ಎನ್ನುತ್ತಾ ಮೌಲ್ಯಗಳ ವಿಶ್ಲೇಷಣೆ ಮಾಡುತ್ತಾರೆ. ಬುದ್ದ, ಬಸವಣ್ಣನವರ ಚಿಂತನೆಗಳಲ್ಲಿ ಮೂಡಿ ಬಂದ ದಯೆ, ಧರ್ಮದ ಮೌಲ್ಯ, ಮಾನವೀಯತೆಯನ್ನು ಎತ್ತಿ ಹಿಡಿಯುತ್ತಾ ಎಗ್ಗಿಲ್ಲದೆ ಸ್ವೇಚ್ಛಾಚಾರ ಮಾಡಿ ಜೈಲು ಸೇರಿದ ಢೋಂಗಿ ಸ್ವಾಮಿಗಳ ಜನ್ಮ ಜಾಲಾಡಿ ಅವರು ರಾಜಕೀಯದ ಮೇಲೂ ಬೀರುತ್ತಿರುವ ಪ್ರಭಾವ , ಇವುಗಳನ್ನು ಯಥಾವತ್ತಾಗಿ ದಾಖಲಿಸುತ್ತಾ; ಧಾರ್ಮಿಕ ಮುಖಂಡರಾಗುವವರಿಗೆ ಕೆಲವು ಮಾನದಂಡಗಳನ್ನು ಕೂಡ ಕೃತಿಕಾರರು ವಿಧಿಸುತ್ತಾರೆ.

ಡಾಕ್ಟರ್ ಬಿ ಸಿ ರಾಮಚಂದ್ರ ಶರ್ಮಾ ಅವರ ‘ಎಂದಿಗೆ ‘
‘ಎಂದಿಗಯ್ಯ ಎಂದಿಗೆ ?
ಎಂದಿಗೊ ಎಂದಿಗೆ ?
ನಮ್ಮ ನಾಡ ಮಂದಿಗೆ
ತಿಳಿವು ಹೊಳೆವುದೆಂದಿಗೆ?

ಸ್ವಾತಂತ್ರ್ಯ ದೊರಕಿದ ಆರಂಭದ ದಿನಗಳಲ್ಲಿ ರಚನೆಗೊಂಡ ಈ ಕವನ ವಿಷಾದ ಮತ್ತು ಆತಂಕದಿಂದಲೇ ರಚನೆಗೊಂಡಿದೆ. ಕವಿ ಈ ಕವನದಲ್ಲಿ ಎರಡು ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ: ಒಂದು ನಾಡ ಮಂದಿಯ ಚಿತ್ತದಾಸ್ಯ ಹರಿಯಬೇಕು ಇನ್ನೊಂದು ಅದು ಹರಿಯಬೇಕಾದರೆ ತಿಳಿವು ಮೂಡಬೇಕು .ಅದು ಎಂದಿಗೆ? ಕವಿಯ ಪ್ರಶ್ನೆ ಜೊತೆಗೆ ಆತಂಕವೂ ಹೌದು.
ಕವನದ ಎರಡನೆ ಚರಣದಲ್ಲಿ
ಗತವೈಭವವನ್ನು ಮೆಲುಕು ಹಾಕುತ್ತಾ ‘ದವಡೆ ದಣಿದಿದೆ ‘
ಎಂಬಲ್ಲಿ ನಮ್ಮ ಜನರ ಜೀವನ ಶೈಲಿಯ ಇನ್ನೊಂದು ಕಟು ವಾಸ್ತವವನ್ನು ಬಿಚ್ಚಿಡುತ್ತಾರೆ…
ಹೀಗೆ ಕವಿತೆ ಮುಂದಿನ ಚರಣಗಳಲ್ಲಿ ಪರಕೀಯ ದಾಸ್ಯ ತೊಲಗಿದರೂ ‘ಒಡಲುಗಳ್ಳರು ಇನ್ನೂ ಇಲ್ಲೆ ಇಹರೊ: ಎಂದು ಎಚ್ಚರಿಸುವರು.

ದಿನಕರ ದೇಸಾಯಿ ಅವರ ‘ ದೀನಗಿಂತ ದೇವ ಬಡವ’
ಶುದ್ಧ ವೈಚಾರಿಕತೆಯಿಂದ ಕೂಡಿದೆ. ಬಡಜನರ ಮುಗ್ಧ ಭಕ್ತಿ ನೋಡಿ ಕೊಂಚ ನಿಷ್ಠುರರಾಗುತ್ತಾರೆ. ಜನಸಾಮಾನ್ಯರ ಬಗೆಗೆ ಅಪಾರ ಕಳಕಳಿ ಉಳ್ಳ ದಿನಕರರಿಗೆ ಗುಡಿಗಿಂತ ಗುಡಿಸಲು ಬಹಳ ಮುಖ್ಯವೆನಿಸುತ್ತದೆ.

ಕಯ್ಯಾರ ಕಿಞ್ಞಣ್ಣರ ‘ ಕೊರಗ’
ಈ ಕವಿತೆಯಲ್ಲಿ ಲೋಕದಲ್ಲಿ ಬಲವಂತರಿಂದ ಬಲಹೀನರ ತುಳಿಯುವಿಕೆ ; ಈ ತುಳಿಯುವಿಕೆಯನ್ನೆ ಬದುಕಿನ ವಿಧಾನ ಎಂಬಷ್ಟು ಹೊಂದಿಕೊಂಡಿರುವ ನಿರ್ಗತಿಕರ ದಾರೂಣ ಜೀವನ ವ್ಯಥೆಯನ್ನು ಚಿತ್ರಿಸಿದ್ದಾರೆ.
‘ ಕರಿ ಮಯ್ಯ ಹಿರಿ ಜೀವ…
ಇಲ್ಲವೆಂಬುದೆ ಇವನ ಬದುಕು ಭಾಗ್ಯಗಳೆಲ್ಲ’
ಎಂಬ ಸಾಲುಗಳ ಮೂಲಕ ಅವನ ದಾರೂಣತೆಯನ್ನು ತೆರೆದಿಡುವರು. ಅವನ ಉದ್ಧಾರಕೆಂದು ಶಕಪುರುಷರೆಲ್ಲ ಟೊಂಕ ಕಟ್ಟಿ ನಿಂತರೂ ಅವ ನಿರಂತರ ‘ ಕೊರಗ’ ಎಂಬಲ್ಲಿ ಗೀತೆಯ ನೆನಪಾಗುವುದು ಅವರ ಉದ್ಧಾರವಿಲ್ಲದೆ ದೇಶೋದ್ಧಾರ ಹುಸಿ ಭ್ರಮೆ ಎನ್ನುವ ಎಚ್ಚರಿಕೆ ಇದೆ.

ವಿಷ್ಣು ನಾಯ್ಕರ’ ಪೋಖ್ರಾನ್ ಪೋಖ್ರಾನ್ ‘
ಇತಿಹಾಸದ ಪುಟದಲ್ಲಿ ಜರುಗಿದ ಒಂದು ಘಟನೆಯನ್ನು ಕಾವ್ಯಕ್ಕೆ ವಸ್ತುವಾಗಿ ಬಳಕೆ ಮಾಡಿ ಕಥನ ಕವನ ಶೈಲಿಯಲ್ಲಿ ಮುಂದುವರಿದು ಗಂಭೀರವಾಗುತ್ತ ಕವನ ಸಾಗುತ್ತದೆ
‘
ಪೋಖ್ರಾನ್ ಪೋಖ್ರಾನ್
ಕೋಟಿ ತೂಕದ ಫೋಕ್ರಾಂ
ದೊಗಳೆ ಪ್ಯಾಂಟಿನ ಹುಡುಗ
ಕುಂಡಿತನ ಕಾಲೆತ್ತಿ ‘

ಈಸಾಲುಗಳಲ್ಲಿನ ಚೋದ್ಯ, ವ್ಯಂಗ್ಯ ಅಡಗಿದ್ದರೆ ಮುಂದೆ
‘ ಕುಂಟಜ್ಜಿ ಕೇಳಿದಳು
ಮತ್ತೆ ಬಂತಾ ಓಟು?
ಏಳು ಹೆಣ್ಣು ಹೆತ್ತ
ಮಂಕಾಳಕ್ಕ ಬೇಲಿಗಂಡೀಲಿ
ತೂರಿ ಕಾದ ತಲೆ ಗೊಣಗಿದಳು’

ಇವೆಲ್ಲಾ ಮುಗ್ಧ ಬಡ ಜನರ ಬವಣೆ ಗೋಳು ತೆರೆದಿಟ್ಟರೆ ಕೊನೆಯಲ್ಲಿ ಬಡಜನರ ಬಾಳು ಸುಡುವ
‘ ಸುಡು ಬಾಂಬು ಪೋಖ್ರಾನ್’ ಎಂಬ ಸಾಲುಗಳಲ್ಲಿ ಬಡವರ ಆಕ್ರೋಶ ಕಟ್ಟೆ ಒಡೆದಿದೆ. ಇಂತವರ ಹೊಟ್ಟೆ ತುಂಬಿಸದ ವಿಜ್ಞಾನ ತಂತ್ರಜ್ಞಾನದ ಮುಂದುವರಿಕೆಗೆ ಯಾವ ಅರ್ಥವೂ ಇಲ್ಲ; ಜೀವ ಪರವಾಗಿರುವ ಈ ಕವನ ಜೀವ ವಿರೋಧಿ ಕೃತ್ಯದ ವಿರುದ್ಧದ ಪ್ರತಿಭಟನೆಯಂತಿದೆ.

ಡಾ ಜಿ ಎಸ್ ಶಿವರುದ್ರಪ್ಪ ಅವರ ‘ಸ್ತ್ರೀ ‘
ಚಿರಪರಿಚಿತ ಈ ಕವನದಲ್ಲಿ ಮಾತೃ ಶಕ್ತಿಗಿಂತ ಮಿಗಿಲಾದ ಶಕ್ತಿ ಇನ್ನೊಂದಿಲ್ಲ; ಅಂತಹ ಮಾತೃ ಶಕ್ತಿಯ ವಿರಾಟ್ ರೂಪವನ್ನು, ವಿಸ್ಮಯವನ್ನು ಕವಿತೆ ಹಿಡಿದಿಟ್ಟಿದೆ. ವಿಶ್ಲೇಷಣೆಯ ಉದ್ದಕ್ಕೂ ಕೃತಿಕಾರರು ಸ್ತ್ರೀಯ ನಿರ್ಮಾಣ ಶಕ್ತಿ, ಸಂರಕ್ಷಣಾ ಶಕ್ತಿ , ವಿಶ್ವ ಮಾತೆ, ಭೂಮಾತೆಯಾಗಿ ಅವಳ ಅಸದೃಶ ಶಕ್ತಿ ಸವಿಸ್ತಾರವಾಗಿ ಮೂಡಿ ಬಂದಿದೆ. ನಮ್ಮ ಅಂಧ ಪರಂಪರೆ ಸ್ತ್ರೀಯನ್ನು ಸದಾ ಪುರುಷನ ಆಶ್ರಯದಲ್ಲಿ ಇರಬೇಕು ಎಂದು ಬಯಸುತ್ತದೆ; ಆದರೆ ವಾಸ್ತವ ಬೇರೆಯೇ ಆಗಿದ್ದು ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ಪುರುಷನನ್ನು ಸಲಹುವ ಮಹಾ ಶಕ್ತಿ ಸ್ತ್ರೀಯೇ ಆಗಿದ್ದಾಳೆ .ಇಂಥವರಿಗೆ ಈ ಕವನ ಸವಾಲಿನಂತಿದೆ. ಕವಿತೆ ಮತ್ತು ವಿಶ್ಲೇಷಣೆ ಸ್ತ್ರೀಯನ್ನು ಕಂಡ ಪರಿ ಅನನ್ಯ.

ದೇ.ಜವರೆ ಗೌಡರ ‘ಚೌಪದಿಗಳು ‘
ಛಂದಸ್ಸಿನ ಗುಣಗಳ ವಿಶ್ಲೇಷಣೆಯೊಂದಿಗೆ ಕೃಷಿಯ ಪ್ರಾಧಾನ್ಯತೆ ರೈತರ ಹಿರಿಮೆಯನ್ನು ಸಾರುತ್ತವೆ ಚುಟುಕುಗಳು.

‘ ರೈತರಾ ನಿಟ್ಟುಸಿರೆ ಜಗಕೆ ಕಾಳ್ಗಿಚ್ಚಹುದು
ರೈತನಿಂ ಇಹಪರವು
ಕೇಳು ಮಗಳೆ’
ಎಂಬ ಸಾಲುಗಳು ಕೃಷಿಯನ್ನು, ರೈತಾಪಿ ವರ್ಗವನ್ನು ಕಡೆಗಣಿಸಿದರೆ ವಿನಾಶ ನಿಶ್ಚಿತ ಎಂಬ ಎಚ್ಚರಿಕೆಯ ಧ್ವನಿಯಾಗಿದೆ.

ಎಚ್ ಎಲ್ ನಾಗೇಗೌಡರ ‘ಹೆಂಗಸು ಹೆಂಗಸೆಂದು ಹಂಗಿಸಬೇಡಲೆ ಗಂಡೆ!’

೧೯೩೮ರಲ್ಲಿ ರಚಿತವಾದ ಈ ಕವನ ನಾಗೇಗೌಡರು ತಮ್ಮ ೨೩ನೇ ವಯಸ್ಸಿನಲ್ಲಿ ರಚಿಸಿದ ಕವನ . ಹೆಣ್ಣಿನ ಬದುಕಿನ ಧಾವಂತಗಳು ಯುವ ಮನಸ್ಸನ್ನು ಆವಾಗಲೇ ತಲ್ಲಣ ಗೊಳಿಸಿದ್ದು ಕವಿ ಪ್ರತಿಭೆಯ ಕನ್ನಡಿಯಲ್ಲಿ ಗಂಡಿನ ಕ್ರೌರ್ಯ; ಆ ಕ್ರೌರ್ಯಗಳಿಗೆ ಬಲಿಯಾದ ಹೆಣ್ಣಿನ ಬಾಳು ;ಆ ಬಾಳಲ್ಲಿ ತುಂಬಿರುವ ಗೋಳು ಇವೆಲ್ಲವೂ ಪ್ರತಿಬಿಂಬಿಸಿವೆ. ಕವಿ ಸಂವೇದನೆಯ ಸೂಕ್ಷ್ಮ ಎಳೆಗಳು ಇಲ್ಲಿ ಹುರಿಗಟ್ಟಿವೆ.

ಶಾಂತರಾಮ್ ನಾಯಕ್ ಹಿಚ್ಕಡ ಅವರ ‘ದುರುಪಯೋಗ ‘
ಇದೊಂದು ಸುಲಭ ಗ್ರಾಹ್ಯವಾದ ಕವನ. ‘ಗಾಂಧಿ’ ಎಂಬ ಹೆಸರು ಅಧಿಕಾರಕ್ಕೆ ಸ್ವಾರ್ಥಕ್ಕೆ ಹೀಗೆ ಬೇರೆ ಬೇರೆ ಉದ್ದೇಶಗಳಿಗೆ ಹೇಗೆ ದುರುಪಯೋಗವಾಗುತ್ತಿದೆ ಎಂಬ ವಿಷಾದ ಛಾಯೆ ಇಲ್ಲಿದೆ.
‘ತುಂಡು ಬಟ್ಟೆ ಹೊದೆದು
ಅರೆ ಬೆತ್ತಲೆಯಾಗಿ
ದೇಶ ಸುತ್ತಿದ ನಮಗಾಗಿ
ಕೊನೆಗೆ ಗುಂಡಿಕ್ಕಿ ಕೊಲ್ಲಿಸಿಕೊಂಡಿದ್ದು ನಮಗಾಗಿ ನಮ್ಮ ಮಕ್ಕಳಿಗಾಗಿ’
ಈ ಸಾಲುಗಳು ಮಾರ್ಮಿಕವಾಗಿದ್ದು ಗಾಂಧೀಜಿಯವರನ್ನು ಕೊಂದದ್ದು ನಾವೇ ಆದರೂ ಕೊಲ್ಲಿಸಿಕೊಳ್ಳುವ ವಾತಾವರಣ ಸೃಷ್ಟಿಸಿಕೊಂಡವರು ಗಾಂಧೀಜಿಯವರೇ ಎಂಬ ಹೊಸ ವಿಶ್ಲೇಷಣೆಯನ್ನು ಕೃತಿಕಾರರು ಕಟ್ಟಿಕೊಡುತ್ತಾರೆ. ಗಾಂಧೀಜಿಯವರ ಮಾನವತಾವಾದ , ಸರ್ವೋದಯ, ಹರಿಜನೋದ್ಧಾರದಂತ ಆದರ್ಶಗಳು ಯಾರಿಗೂ ಬೇಕಿರಲಿಲ್ಲ. ದೇಶ ವಿಭಜನೆ, ಹರಿಜನ ಉದ್ಧಾರ ಇವೆರಡರಲ್ಲೂ ಗಾಂಧೀಜಿಯವರನ್ನು ವಿರೋಧಿಸುವವರು ಹೆಚ್ಚಾದರು. ಗಾಂಧಿ ಹೆಸರಿನಿಂದ ರಾಜಕೀಯ ಲಾಭ ಪಡೆಯುವವರು, ಮುಗ್ಧ ಜನರನ್ನು ದಾರಿ ತಪ್ಪಿಸಿ ಹೇಗೆಲ್ಲ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂಬ ವಿಷಾದ ಕವಿತೆಯುದ್ಧಕ್ಕೂ ಹರಳುಗಟ್ಟಿದೆ.

ವಿಠ್ಠಲ ಗಾಂವ್ಕರ್ ಅವರ ‘ಬೋಳು ಮರದ ಗೋಳು ‘
ಈ ಕವನದಲ್ಲಿ ಅತ್ಯಂತ ಸಾಮಾನ್ಯ ನಿರೂಪಣೆಯಲ್ಲಿ ಮರಗಳು ತಮ್ಮ ಆತ್ಮಕಥನದ ಮಾದರಿಯಲ್ಲಿ ತಮ್ಮ ಗೋಳನ್ನು ಹೇಳಿಕೊಳ್ಳುವ ಪರಿ ಮನಮುಟ್ಟುತ್ತದೆ .
‘ಪ್ರಕೃತಿ ಮಾತೆಯ ಜೀವ ಹಿಂಡುವ ಗಾವಿಲರು
ವೃಕ್ಷಗಳನ್ನು ಆರಾಧಿಸುತ್ತಾ ಬಂದವರು ಭಾರತೀಯರು’
ಹೌದು ನಮ್ಮ ಪೂರ್ವಜರು ಪ್ರಕೃತಿ ಪೂಜೆ ಮಾಡಿದವರು. ಆದರೆ ಇಂದು ಅದರ ಜೀವ ತಿನ್ನುತ್ತಿರುವವರು ಕಟುಕರು.
‘ ಮಾನವ ಸತ್ತರೂ ನನಗುಂಟು ಬೆಲೆ
ಸತ್ತರೆ ನಿನಗಿಲ್ಲ ಯಾವ ಬೆಲೆ ‘

ಪ್ರಕೃತಿಯ ಮುಂದೆ ಮನುಜ ಕುಬ್ಜ; ಅವಕ್ಕಿರುವ ಬೆಲೆ ನಮಗಿಲ್ಲ. ಅರಿತು ನಡೆದರೆ ಸರ್ವರಿಗೂ ಹಿತ ಎಂಬ ಹಿತಾಶಯವಿದೆ.

ಕೃಷ್ಣಮೂರ್ತಿ ಹೆಬ್ಬಾರರ ‘ನಾವು ಚಪ್ಪಲಿಗಳು ‘
ಈ ಕವನದಲ್ಲಿ ಚಪ್ಪಲಿಗಳು ಮಾತನಾಡುತ್ತವೆ‌ ಚಪ್ಪಲಿಗಳ ಆತ್ಮಕಥನದ ರೂಪದಲ್ಲಿರುವ ಈ ಕವನ ದಲಿತ ಸಂವೇದನೆಯಿಂದ ಕೂಡಿದೆ ;ಸ್ವಾಭಿಮಾನದಿಂದ ತಮ್ಮ ಇರುವಿಕೆಯನ್ನು ಬಿಂಬಿಸುತ್ತೇವೆ. ಇಲ್ಲಿ ಬಳಸಿಕೊಂಡ ಉಪಮೆಗಳು

‘ಮುದಿ ಸೂಳೆಯಂತೆ
ಒಂದು ದಿನ ಮೂಲೆ ಗುಂಪಾಗಿ
ಬೀದಿ ನಾಯಿಯ ಬಾಯಿಗೆ ಆಹಾರವಾಗುವರು’
ಎನ್ನುತ್ತಲೆ
‘ನಮಗೆ ರಾಮನಂತೆ
ಕೃಷ್ಣನಂತೆ ಸೀತೆಯಂತೆ
ಹೋಲಿಕೆ ಶಬ್ದಕೋಶದಲ್ಲಿಲ್ಲ
ನಮಗೆ ನಾವೇ ಹೋಲಿಕೆಗಳು ನೀವಲ್ಲ
ಕಾರಣ ಚಪ್ಪಲಿಗಳಂತೆ ನಾವು ಚಪ್ಪಲಿಗಳು ‘
ಚಪ್ಪಲಿಗಳ ಮೂಲಕ ದಲಿತ ಸಂವೇದನೆ ಮೂಡಿ ಬಂದಿದೆ.
‘ ಸದ್ಯದಲ್ಲೇ ನಿಮ್ಮ ಮೆತ್ತನೆಯ ಮೈಯೇರಿ
ಮನುಷ್ಯರಾಗಬೇಕೆಂದಿರುವ ನಾವು
ಚಪ್ಪಲಿಗಳು ‘
ಎಂಬಲ್ಲಿಗೆ ಇದುವರೆಗೆ ‘ನಿಮ್ಮ ಸೇವೆ ಮಾಡಿದ್ದು ಸಾಕು ; ನಿಮ್ಮ ಶೋಷಣೆಗೆ ಬದಲಾಗಿ ನಾವು ನಿಮ್ಮಂತಾಗುತ್ತೇವೆ’ ಎಂಬಲ್ಲಿ ಶೋಷಿತರ ಮೇಲಿನ ದೌರ್ಜನ್ಯ ಕೊನೆಯಾಗಲಿ ಎಂಬ ಆಶಯವಿದೆ.

ಶ್ರೀಧರ್ ಶೇಟ್ ಶಿರಾಲಿ ಅವರ’ ನನ್ನ ಬೀದಿಯ ಸಾವು ‘
ಸಾಮಾಜಿಕ ಕಾಳಜಿ ಉಳ್ಳ ಶ್ರೀಧರ್ ಶೇಟ್ ಅವರು ಬಳಸುವ ರೂಪಕಗಳು, ಪ್ರತಿಮೆಗಳು ಕಾವ್ಯದ ಧ್ವನಿಗೆ ಹೆಚ್ಚು ನ್ಯಾಯ ಒದಗಿಸುತ್ತವೆ.
‘ಚಂದಿರನ ಹೆಣ ಸಾಗಿಸಿ
ಮೋಡಗಳ ಹೆಗಲು
ವಿಶ್ರಮಿಸುತ್ತಿದ್ದ ರಾತ್ರಿ ‘
ಈ ಸಾಲುಗಳು ಕಗ್ಗತ್ತಲ ರಾತ್ರಿಯಲ್ಲಿ ನಡೆಯುವ ಕ್ರೌರ್ಯಕ್ಕೆ ಸಾಕ್ಷಿ ಹೇಳುವ ಚಂದಿರನೇ ಈಗ ಹೆಣವಾಗಿದ್ದಾನೆ! ಕ್ರೌರ್ಯದ ಭೀಕರತೆಯನ್ನು ಸಾರುವ ಹಲವು ರೂಪಗಳು ಹೆಚ್ಚು ಅರ್ಥಗರ್ಭಿತವಾಗಿ ವಿಶ್ಲೇಷಿಸಲ್ಪಟ್ಟಿವೆ .
‘ಹದ್ದುಗಳ ಮೆರವಣಿಗೆಗೆ
ಬೀದಿ ತುಂಬ
ರಕ್ತದ ರಂಗೋಲಿ
ರುಂಡ ಪುಷ್ಪಾಲಂಕೃತ’
ಹೀಗೆ ಕವನ ಸಾಗುತ್ತದೆ.

ಪ್ರಕಾಶ್ ಕಡಿಮೆಯವರ ‘ಆ ಹುಡುಗಿ’
ಶೀರ್ಷಿಕೆ ನೋಡಿದರೆ ಏನೊ ರೋಮ್ಯಾಂಟಿಕ್ ಕವನ ಎನ್ನಿಸಿದರೂ ಇದೊಂದು ದಲಿತ ಸಂವೇದನೆಯ ಕವಿತೆ .ಕನ್ನಡ ಸಾಹಿತ್ಯದಲ್ಲಿ ಬಂಡಾಯ ಸಂದರ್ಭದಲ್ಲಿ ಮೂಡಿಬಂದವರು ಕಡಿಮೆ ಅವರು. ಲೋಕದ ಅನ್ಯಾಯ ಅನಾಹುತಗಳ ವಿರುದ್ಧ ಬಂಡಾಯದ ಶಿಫಾರಸ್ಸು ಹರಿಯುತ್ತದೆ‌ ಇಲ್ಲಿಯ ಕವನದ ವಸ್ತು ಓರ್ವ ದಲಿತ ಹುಡುಗಿ .
‘ಕಣ್ಣಂಚಿನಲಿ ನೂರಾರು ಆಸೆಗಳ ಸೂಸುವ
ಶೌಚಾಲಯದ ಗಬ್ಬು ವಾಸನೆ ಅನಿವಾರ್ಯತೆಗೆ ಮೂಸುವ
ಆ ಹುಡುಗಿ ಬೇಡವೆಂದರೂ
ಬೇಡ ಬೇಡವೆಂದರೂ
ನನ್ನ ಮನ ಕಾಡುತ್ತಾಳೆ’
ಕಾರ್ಪೊರೇಟ್ ವಲಯದ ಬಿನ್ನಾಣಗಿತ್ತಿಯರನ್ನು ಹೊಗಳುವ ನಿರೂಪಕರುಗಳಿಗೆ ಇಂತಹ ಹುಡುಗಿಯರು ಏಕೆ ಕಾಣುವುದಿಲ್ಲ??’ ಎಂಬುದು ಕವಿಯ ಪ್ರಶ್ನೆ!

ಪಂಪ ಪ್ರಶಸ್ತಿಗೆ ಭಾಜನರಾದ ಬಿ ಎ ಸನದಿ
ಸನದಿಯವರ ವ್ಯಕ್ತಿತ್ವದ ಅನಾವರಣ ಇಲ್ಲಿ ಆಗಿದೆ. ಮಾನವ್ಯದ ಕವಿ ,ನೆಲದ ಕವಿ, ಜೀವಂತಿಕೆಯ ಕವಿ ಸನದಿಯವರೇ ಒಂದು ಜೀವಂತ ಕಾವ್ಯ ..ಇಂತಹ ಜೀವಪರ ಕವಿಗೆ ವಿಶ್ವಮಾನವ ಸಂದೇಶ , ನಾಡ ಪ್ರೇಮವನ್ನು ಇನ್ನಿಲ್ಲದಂತೆ ಮೆರೆದು ಮಾನವತ್ವವನ್ನು ಪ್ರತಿಪಾದಿಸಿದ ಮಹಾಕವಿ ಪಂಪನ ಹೆಸರಲ್ಲಿ ನೀಡುವ ಪ್ರಶಸ್ತಿ ಬಂದದ್ದು ಕಾವ್ಯ ಪ್ರಿಯರಿಗೆಲ್ಲಾ ಮಹದಾನಂದ ಎನ್ನುತ್ತಾರೆ.

ಇಸ್ಮಾಯಿಲ್ ತಲಕಣಿಯವರ ‘ನಾವು ಅಲ್ಪಸಂಖ್ಯಾತರು’
ಸರಳ ಸಜ್ಜನ ಕವಿ ಹೃದಯಿ ಡಾ. ಕುಲಕರ್ಣಿ ಅವರ ಈ ಕವನದಲ್ಲಿ ಜಾತಿ ಧರ್ಮದ ಹೆಸರಲ್ಲಿ ಹಿಂಸೆ, ಕ್ರೌರ್ಯ ಸಲ್ಲದು ಎಂಬ ಆಶಯವಿದೆ.

ಸು ರಂ ಎಕ್ಕುಂಡಿ ಅವರ ‘ಯೋಧ ಮತ್ತು ನಾನು’
ಕನ್ನಡದ ಕಥನ ಕಾವ್ಯ ಪರಂಪರೆಯಲ್ಲಿ ಇತಿಹಾಸ ಸೃಷ್ಟಿಸಿದ ಸು ರಂ ಅವರ ಕವನಗಳು ಕಥೆ ಹೇಳುವುದರ ಜೊತೆಗೆ ಜೀವನ ದರ್ಶನ ಮಾಡಿಸುತ್ತವೆ. ಕುದುರೆಯಿಂದಿಳಿದ ಯೋಧ ಮತ್ತು ಹೆಂಗಸಿನ ನಡುವಿನ ಆತ್ಮೀಯ ಮಾತುಕತೆ ಮುಂದುವರಿದು …ಕೊನೆಯಲ್ಲಿ ಯೋಧ ಹೇಳುವ ಮಾತು ಈ ಕೆಳಗಿನಂತಿವೆ .

‘ಬಿರಿದ ಮಲ್ಲಿಗೆ ಕಂಡು ಕೋಗಿಲೆಯ ದನಿ ಕೇಳಿ
ತುಂಬಿ ಬಂದಿತ್ತೇಕೆ ಕಣ್ಣು ಕೊರಳು?’
ಎಂಬ ಹೆಂಗಸಿನ ಪ್ರಶ್ನೆಗೆ
‘ ತಾಯಿ ಮತ್ತೆ ನೆನಪಿಗೆ ಬಂತು ನನ್ನೂರು ಬನವಾಸಿ ನನಗೆ ಇಂದು
ಯೋಧ ನಡೆಯುವ ದಾರಿ
ಕವಿಯು ದಾರಿಯು ಕೂಡ
ನನ್ನನ್ನು ಕರೆಯುವುದು ಪಂಪನೆಂದು’
ಎಂಬಲ್ಲಿ ಕವಿಯ ನಡಿಗೆ ಮತ್ತು ಯೋಧನ ನಡಿಗೆ ಎರಡು ಒಂದೇ. ‘ಖಡ್ಗ ಹಿಡಿದರೆ ಯುದ್ಧ ;ಲೇಖನಿ ಹಿಡಿದರೆ ಕಾವ್ಯ’ ಇದು ಪಂಪನ ಜಾಯಮಾನ‌. ಒಬ್ಬ ಮಹಾ ಕವಿಯ ಮನಸ್ಸು ಹೇಗಿರುತ್ತದೆ ಎಂಬುದರ ಬಗ್ಗೆ
ಈ ಕವನದ ಮೂಲಕ ಬೆಳಕು ಹಾಯಿಸುತ್ತಾರೆ.

ಎಲ್ ಎನ್ ಶಾಸ್ತ್ರಿ ಅವರ ‘ಹನಿಗವನಗಳು ‘
ಪತ್ರಕರ್ತರಾಗಿ, ಸಾಹಿತಿಯಾಗಿ ಕವನ , ಹನಿಗವನಗಳ ಮೂಲಕ ಜೀವನ ಮೌಲ್ಯವನ್ನು ಎತ್ತಿ ಹಿಡಿದವರು ಶಾಸ್ತ್ರೀಯವರು. ಸರಳವಾದ ತಮ್ಮ ಜೀವನ ಅನುಭವಗಳನ್ನು ಜೀವನದ ಸತ್ಯಕ್ಕೆ ಪ್ರತಿಮೆಯಾಗಿ ಬಳಸಿಕೊಂಡಿದ್ದಾರೆ .
‘ ಫ್ರೂಪು ತಿದ್ದುಪಡಿ, ಲೊಚಗುಡುವಿಕೆ, ಬಡ್ಡಿ ಮಕ್ಕಳು ಎಂಬ ಪದಪುಂಜಗಳನ್ನು ವ್ಯಂಗ್ಯವಾಗಿ ಪ್ರತಿಮೆಯಾಗಿ ಬಳಸಿಕೊಂಡಿದ್ದು ಸಶಕ್ತವಾಗಿವೆ.

ಡಾಕ್ಟರ್ ಶ್ರೀಪಾದ್ ಶೆಟ್ಟಿ ಅವರ ‘ ಹೊಲವ ಮೇಯುವ ಬೇಲಿ’
ಕೃತಿಯಲ್ಲಿ ಶ್ರೀಪಾದ ಶೆಟ್ಟಿ ಅವರ ವ್ಯಕ್ತಿತ್ವದ ಅನಾವರಣದ ಜೊತೆಗೆ ಅವರ ಕಾವ್ಯದ ಕಸುವನ್ನು ಕೃತಿಕಾರರು ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ಡಾಕ್ಟರ್ ಶೆಟ್ಟಿಯವರು ಜನ ಸಮೂಹದ ನಡುವೆ ಬದುಕಿದ ಜನಪರ ಧೋರಣೆಯ ಕವಿ; ಇವರು ಜನಪದ ಸತ್ವ ಮತ್ತು ಉತ್ತರ ಕನ್ನಡದ ಪ್ರಾದೇಶಿಕತೆಯ ವಿಶೇಷತೆಗಳನ್ನು ತಮ್ಮ ಕಾವ್ಯದ ಮೂಲಕ ಅಭಿವ್ಯಕ್ತಿಸುತ್ತಾ ಕಾವ್ಯಕ್ಕೆ ಶಕ್ತಿ ತುಂಬಿದ್ದಾರೆ.
‘ಎಲ್ಲಕ್ಕೂ ಬೇಲಿ ಕಟ್ಟಿದವರೂ ಸುರಕ್ಷತೆಯ ಕಂಡವರು
ಶಿಕಾರಿಯ ಸ್ವಭಾವದ ಸಜ್ಜನರು
ಇಲ್ಲಿ ಬೇಲಿ ಹಾಕುವವರು ಶಿಕಾರಿಯ ಸ್ವಭಾವದ ಸಜ್ಜನರು
ಎಂಬವು ಪರಸ್ಪರ ವಿರೋಧಾಬಾಸ! ಆದರೆ ಕ್ರೌರ್ಯದ ಹಿಂದಿನ ಸಜ್ಜನಿಕೆಯ ಮುಖವಾಡ ಎಂಬ ಸೂಚ್ಯಾರ್ಥ.
‘ ಯತೇಷ್ಠ ಬೆಳೆ ಅದನ್ನು ಮುಚ್ಚುವ ಕಳೆ ‘
ತುಂಬಾ ಮಾರ್ಮಿಕ ಸಾಲು. ಬೇಲಿಯ ಒಳಗೆ ಜ್ಞಾನ , ಸಂಪತ್ತು ಸಂಸ್ಕೃತಿ ಇರುವುದು ನಿಜವಾದರೂ ಅಜ್ಞಾನ, ಅಮಾನವೀಯತೆಯ ಕಳೆ ಬೆಳೆಯ ಇರುವಿಕೆಯನ್ನೇ ನಾಶ ಮಾಡಿದೆ ಎನ್ನುವರು. ಒಟ್ಟಾರೆ ಕವಿ ವ್ಯವಸ್ಥೆಯೊಳಗಿನ ವೈಪರಿತ್ಯ, ವಂಚನೆ ಅಮಾನವೀಯತೆಯನ್ನು ಪರಿಣಾಮಕಾರಿಯಾಗಿ ಅನಾವರಣ ಮಾಡಿದ್ದಾರೆ.

ವಿ ವೆ ತೊರ್ಕೆ ಅವರ ‘ಭಂಗಿ ‘
ಈ ಕವನ ವಿಶಿಷ್ಟವಾದ ಭೋಗ ಷಟ್ಪದಿಯಲ್ಲಿ ರಚನೆಗೊಂಡಿರುವ ಕವನ. ವರ್ಗಿಕೃತ ವ್ಯವಸ್ಥೆಯಲ್ಲಿ ದಲಿತರನ್ನು ಅತ್ಯಂತ ಕಟ್ಟ ಕಡೆಗಿಟ್ಟು ಎಲ್ಲ ಬಗೆಯ ಕೀಳು ಮಟ್ಟದ ಕೆಲಸವನ್ನು ಅವರಿಂದ ಮಾಡಿಸಿ ಅವರನ್ನು ‘ಭಂಗಿ ‘ಎಂದು ಅಸಹ್ಯ ಪಡುವ ಜನರ ಮುಖಾಮುಖಿಯಾಗಿ
‘ ನೀವು ಮಾಳ್ಪ ಭಂಗಿ ಕೃತ್ಯ
ನಮ್ಮ ಭಂಗಿ ಮಾಡೆ ನಿತ್ಯ
ಸುತ್ತಿಗೆ ಪಾತ್ರವವನು ಮೇಲೊ?
ಕೀಳೋ ?’
ಹೀಗೆ ಪ್ರಶ್ನಿಸುತ್ತಾರೆ

ಡಾಕ್ಟರ್ ಆರ್ ವಿ ಭಂಡಾರಿ ಅವರ ‘ ಹದ್ದುಗಳು ‘….
ಬಂಡಾಯದ ಗಟ್ಟಿ ಧ್ವನಿಯಾಗಿ ಶೋಷಿತ ಸಮುದಾಯಕ್ಕೆ ಶಿಕ್ಷಣದ ಮೂಲಕ ಆತ್ಮಸ್ಥೈರ್ಯ ತುಂಬಿ ಪ್ರೀತಿ ಸಮತೆಯ ಬದುಕನ್ನು ಸಾಧಿಸುವತ್ತ ಭರವಸೆ ಮೂಡಿಸುವ ಹೊಂಗನಸು ಕಂಡವರು .ಆರ್ ವಿ ಯವರು ಎಲ್ಲ ಬಗೆಯ ಅನ್ಯಾಯಗಳಿಗೆ ಮುಖಾಮುಖಿಯಾಗುವ ‘ಹದ್ದುಗಳು’ ಅಂತಹ ಒಂದು ನಿದರ್ಶನ.
‘ಮಿಕ್ಕವಷ್ಟು ಖಾದಿ ಹೊಲಿಸಿ
ಕುಂಕುಮ ಬೊಟ್ಟ ಮೆರೆಸಿ ಮುಗುಳು ನಗೆಯ ತುಟಿಗೆ ಒರಸಿ ಜನಸೇವೆಗೆ ನಡೆದವು’
ಇಲ್ಲಿ ಖಾದಿ, ಕುಂಕುಮ ಬೊಟ್ಟು, ಮುಗುಳು ನಗೆ ಇವೆಲ್ಲ ಜನರನ್ನು ಮರುಳು ಮಾಡುವ ತಂತ್ರಕ್ಕೆ ವಸ್ತುವಾಗಿವೆ.

ಮುಂದುವರಿದು
‘ಇದನರಿಯದ ನಮ್ಮ ಬೋರಾ
ಆಫೀಸಿಗೆ ನಡೆದನು
ಒಳಗೆ ಹೆಜ್ಜೆ ಇಟ್ಟನು’
ಆದರೆ ಒಳಗಿರುವವರು ರಣಹದ್ದುಗಳು
‘ ಮೊಳೆ ಜಡಿದ ಗಾಂಧಿ ಮೇಲೆ
ಕೊಕ್ಕು ಮಸೆದ ಹದ್ದು ಕೆಳಗೆ
ಭಾರತ್ ಮಾತಾ ಕಿ ಜೈ
ಎಂದು ಎಲ್ಲಾ ಎದ್ದು ನಿಂತವು ಹದ್ದುಗಳು ರಣ ಹದ್ದುಗಳು’
ಎಂಬಲ್ಲಿ ಗಾಂಧೀಜಿಯವರ ಆದರ್ಶಗಳಿಗೆ ಮೊಳೆ ಜಡಿದು ಬೋರನಂತ ಮುಗ್ಧರ ಮೇಲೆ ದೇಶ ಸೇವೆಯ ಮುಖವಾಡ ತೊಟ್ಟ ಪ್ರಭುತ್ವದಿಂದ ಶೋಷಣೆಯ ಸವಾರಿ ನಡೆದಿದೆ ಎಂಬ ಧ್ವನಿ
ಹೊರಹೊಮ್ಮುತ್ತದೆ.

ಶ್ರೀಲತಾ ಅರಮನೆಯವರ ‘ನಗುವ ಕಾವ್ಯ ‘
ಪ್ರಸ್ತುತ ಕವನದ ಶೀರ್ಷಿಕೆ ರೂಪಕ ದನಿಯಿಂದ ಕೂಡಿದ್ದು ಸ್ತ್ರೀಯರ ಬದುಕು ನಗುವ ಕಾವ್ಯವಾಗಬೇಕು ಎಂಬ ಸ್ತ್ರೀ ಸಂವೇದನೆ, ಕನಸು ಹಂಬಲ ಎದ್ದು ಕಾಣುತ್ತದೆ.

ಮೋಹನ್ ಹಬ್ಬು ಅವರ ‘ಕುಸುರಿಯೊಳಗಣ ಕಸರು ‘
ಜನಪರ ಕವಿ ಕಥೆಗಾರರಾಗಿರುವ ಹಬ್ಬು ಅವರ ಕವನಗಳು ಭಾವನಾತ್ಮಕತೆಗಿಂತ ವೈಚಾರಿಕತೆಗೆ ಹೆಚ್ಚು ಮಹತ್ವ ನೀಡುತ್ತವೆ. ಸಮಾಜದಲ್ಲಿ ದಿನದಿಂದ ದಿನಕ್ಕೆ ಹೆಚ್ಚುವ ಕೋಮು ದಳ್ಳುರಿ, ಧರ್ಮಾಂಧರ ನಡೆನುಡಿಗಳು ಸಮಾಜವನ್ನು ವಿಘಟಿಸಿದರೆ ಜನಸಾಮಾನ್ಯರು ತಮ್ಮ ನಡೆ ನುಡಿಯಿಂದ ಸಾಮರಸ್ಯವನ್ನು ಸಾಧಿಸುತ್ತಾರೆ ಎಂಬುದನ್ನು ತಮ್ಮ ಕವನದ ಮೂಲಕ ಅರುಹುತ್ತಾರೆ.

‘ಕನಕಗಿರಿಯ ಹುಸೇನದಾಸರು ಕಟ್ಟುತ್ತಾರೆ
ಶ್ರೀ ವಿಜಯ ವಿಠಲ ಮಂದಿರ
ನಮ್ಮೂರ ಜಟ್ಟುಮಾಣಿ ಗೋವಿಂದ ಹರಕೆ ಒಪ್ಪಿಸುತ್ತಾರೆ ಹಜರತ್ ದರ್ಗಾಕ್ಕೆ’
ಹೌದಲ್ಲ ಇಂತಹ ಒಂದು ಸತ್ಯ ಸಾಕು ಒಂದುಗೂಡಿ ಬಾಳಲು ಎಂಬ ಧ್ವನಿ ದಟ್ಟವಾಗಿದೆ.. ಆದರೆ ಮಂದಿರ ಮಸಜಿದ್ ಗಳ ಜಿದ್ದಿನ ಗುದ್ದಾಟದ ನಡುವೆ ರಾಮ ರಹೀಮರು ಮೌನ ತಾಳಿದ್ದಾರೆ ಎಂಬ ಸಾಲುಗಳು ಎಷ್ಟೊಂದು ಮಾರ್ಮಿಕವಾಗಿವೆ ಮತ್ತು ಸಕಾಲಿಕವಾಗಿವೆ ಅಲ್ಲವೆ?

ಕೆ ಎಸ್ ನಿಸಾರ್ ಅಹಮದ್ ಅವರ ‘ ಅಮ್ಮ ಆಚಾರ ನಾನು ‘
ಈ ಕವನ ನಮ್ಮ ಹಿರಿಯ ತಲೆಮಾರಿನ ಸಂಪ್ರದಾಯ ರೂಢಿ ನಿಯಮಗಳು ಮತ್ತು ಹೊಸ ತಲೆಮಾರಿನ ಧೋರಣೆಗಳ ನಡುವಿನ ಸಂಘರ್ಷ ವಿವಾಹ ಸಂದರ್ಭದಲ್ಲಿ ತಾರಕಕ್ಕೇರುವ ಸಂಘರ್ಷವನ್ನು ಕೊನೆಗೆ ಕವನ ಪಡೆದುಕೊಳ್ಳುವ ತಿರುವು ಹೇಳುವ ಧ್ವನಿ ಆಧುನಿಕತೆ ಸುಧಾರಣೆ ಏನೇ ತಂದರೂ ಸಂಪ್ರದಾಯ ಅದನ್ನು ನುಂಗಿ ಹಾಕುತ್ತದೆ ಎಂಬುದನ್ನು ಅರುಹುತ್ತವೆ ಜೊತೆಗೆ ಈ ಸಂಪ್ರದಾಯ ಮೌಲ್ಯಗಳಲ್ಲಿ ಪುರುಷರಿಗಿಂತ ಸ್ತ್ರೀಯರೇ ಹೆಚ್ಚು ಆಸ್ತೆ ವಹಿಸಿ ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ಗಂಭೀರ ಚಿಂತನೆಗೆ ತೆರೆದುಕೊಳ್ಳುತ್ತವೆ

ಈಶ್ವರ ಸಣಕಲ್ ಅವರ :ಕೋರಿಕೆ ‘
ಬದುಕಿನ ಜಂಜಾಟದಲ್ಲಿ ನೊಂದು ಬೆಂದ ಕವಿ ಈಶ್ವರ್ ಸಣಕಲ ಅವರು ಲೋಕ ಹಿತವನ್ನೇ ಬಯಸುತ್ತಾರೆ.
‘ಪೊಡವಿಯೈ ಸಿರಿವಡೆದು ಬಡತನವು ನನಗಿರಲಿ’
ಇಲ್ಲಿಯ ಭಾವ ಸೌಂದರ್ಯ ಅನುಪಮವಾದದ್ದು.

ಸರ್ವಜ್ಞನ’ ನಾಲ್ಕು ವಚನಗಳು’ ತಾನು ಲೋಕದ ಕೂಸು ಎನ್ನುತ್ತಲೇ ಸರ್ವರ ಅನುಭವಗಳನ್ನು ತನ್ನದಾಗಿಸಿ ಅರಗಿಸಿಕೊಂಡವನು ಸರ್ವಜ್ಞ. ಅವನ ಒಂದೊಂದು ತ್ರಿಪದಿಯೂ ಅರಿವಿನ ಹಣತೆಗಳು. ಲೋಕದ ಅನ್ಯಾಯ ಅನಾಚಾರಗಳನ್ನು ತಮ್ಮ ತ್ರಿಪದಿಗಳ ಮೂಲಕ ಖಂಡಿಸಿ ಮುಕ್ಕೋಟಿ ಕಾಲ್ಪನಿಕ ದೇವರುಗಳನ್ನು ಧಿಕ್ಕರಿಸಿ ಅನ್ನ ದೇವರನ್ನು ಒಪ್ಪಿಕೊಂಡಿದ್ದಾನೆ.

ಲಂಕೇಶ್ ಅವರ ‘ಅವ್ವ ‘
ಬಡತನದ ಬೇಗೆಯಲ್ಲಿ ಬೆಂದು ಮಾಗಿ ಕಣ್ಮುಚ್ಚಿದ ಅವ್ವನ ಹಿರಿಮೆ ನೆಲದಿಂದ ಆಕಾಶದೆತ್ತರಕ್ಕೆ ಬಲಿತುಕೊಂಡಿದ್ದನ್ನು ಇಲ್ಲಿ ಕಾಣಬಹುದು.
‘ನನ್ನವ್ವ ಫಲವತ್ತಾದ ಕಪ್ಪು ನೆಲ ಸುಟ್ಟಷ್ಟು ಕಸವು ನೊಂದಷ್ಟು ಹೂ ಹಣ್ಣು’
ಮುಂದುವರಿದು
‘ಸತಿ ಸಾವಿತ್ರಿ ಜಾನಕಿ ಊರ್ಮಿಳೆಯಲ್ಲ
ಚರಿತ್ರೆ ಪುಸ್ತಕದ ಶಾಂತ
ಶ್ವೇತ ಗಂಭೀರೆಯಲ್ಲ
ಬನದ ಕರಡಿಯ ಹಾಗೆ’ …
ಈ ಸಾಲುಗಳೆಲ್ಲವೂ ತುಂಬಾ ಸಶಕ್ತವಾಗಿದ್ದು ಬಡಜನರ ಪ್ರತಿನಿಧಿಯಾಗಿ ಮೇಲ್ತರದಲ್ಲಿ ನಿಲ್ಲುವ ಅವ್ವನ ಚಿತ್ರಣ ಅಪರೂಪದ್ದಾಗಿದೆ.

ಪಂಜೆ ಮಂಗೇಶರಾಯರ ‘ತೆಂಕಣ ಗಾಳಿಯಾಟ’
ಶಾಲಾ ಶಿಕ್ಷಕರಾಗಿ ಮಕ್ಕಳ ಮನೋಭಾವ ಅರಿತವರಾಗಿ ಪಂಜೆಯವರು ಮಕ್ಕಳ ಸಾಹಿತ್ಯದ ಆದ್ಯ ಪ್ರವರ್ತಕರಾಗಿದ್ದಾರೆ .ಪಂಜೆ ಅವರ ಜೀವಿತಾವಧಿ ಸ್ವಾತಂತ್ರ್ಯ ಸಂಗ್ರಾಮದ ಪರ್ವಕಾಲ. ಅವರಿಗೆ ಸ್ವಾತಂತ್ರ್ಯ ಹೋರಾಟಗಾರರ ಪರವಾಗಿ ನೇರವಾಗಿ ಸ್ಪೂರ್ತಿದಾಯಕವಾಗಿ ಧ್ವನಿ ಎತ್ತಲು ತೊಡಕುಗಳಿದ್ದರೂ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದವರೇ. ಅವರ ಪ್ರಸ್ತುತ ಕವನ ಬರೀ ತೆಂಕಣಗಾಳಿ ಆಗಿರದೆ ಸ್ವಾತಂತ್ರ್ಯ ಹೋರಾಟದ ಗಾಳಿಯಾಗಿ ಧ್ವನಿ ಪಡೆದು ದಬ್ಬಾಳಿಕೆ ಶೋಷಣೆಯನ್ನು ಕೊನೆಗಾಣಿಸುವ ತೆಂಕಣ ಗಾಳಿಯಾಗಿ ಅವಿರ್ಭಟಿಸಿ ಆರ್ಭಟಿಸಿದಂತೆ ಕಾಣುತ್ತದೆ ಎಂದು ಕೃತಿಕಾರರು ವಿಶ್ಲೇಷಿಸುತ್ತಾರೆ.
‘ಬರಲಿದೆ ಅಹಹಾ ದೂರದಿ ಬರಲಿದೆ ಬುಸುಗುಟ್ಟುವ ಪಾತಾಳದ ಹಾವೋ’!?
ಮುಂದಿನ ಸಾಲುಗಳಲ್ಲಿ

‘ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ ಅಬ್ಬರದಲ್ಲಿ ಭೋರ್ ಭೋರನೆ ಗುಮ್ಮಿಸಿ ‘
ಇಂತಹ ಸಾಲುಗಳು ಪ್ರಕೃತಿ ಮನುಷ್ಯನ ಸರ್ವಾಧಿಕಾರಿ ಧೋರಣೆಗೆ ಒಡ್ಡುವ ಸವಾಲುಗಳಂತೆಯೂ ,ಬರಲಿರುವ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯವನ್ನು, ಅಬ್ಬರವನ್ನು ತುಂಬುವಂತೆಯೂ ಭಾಸವಾಗುತ್ತದೆ.

ರೋಹಿದಾಸ್ ನಾಯ್ಕರ ‘ಪ್ರೇಮದಲೇಗಳು ‘
ಕವನದ ಭಾವ ಮಾಧುರ್ಯದ ಸೊಗಸನ್ನು ಇಲ್ಲಿ ಕಾಣಬಹುದು. ಈ ಅನುಭವ ವಿಶಿಷ್ಟವಾಗಿದ್ದು ಪ್ರೇಮದಲೆಗಳನ್ನು ಕಡಲ ಅಲೆಗಳಿಗೆ ಹೋಲಿಸಿದ್ದಾರೆ.
‘ಪ್ರೇಮಕ್ಕೂ ಅಲೆಯುಂಟು ತೆರೆಯುಂಟು ನೂರೆಂಟು ‘
ಮುಂದುವರಿದು…
‘
ಆದರೆ! ನೆನಪು
ಅಲೆಯಾಗಿ ಅಲೆಯ ಮರೆಯಾಗಿ ನೆನಪಿನ ಕಡಲಲ್ಲಿ ಲೀನವಾಗುವುದುಂಟು’
ಎಂಬ ಸಾಲುಗಳು ಪ್ರೇಮ ಎಂದೂ ಮರೆಯಾಗದು ಎಂಬುದನ್ನು ದ್ವನಿಸುತ್ತದೆ.

ಸೇಡಿಯಾಪು ಕೃಷ್ಣ ಭಟ್ಟರ ‘ಎಣ್ಣೆ ಹೊಯ್ಯಮ್ಮ ದೀಪಕ್ಕೆ’
ವಾಚ್ಯಿರ್ಥದಲ್ಲಿ ಆರುತ್ತಿರುವ ದೀಪಕ್ಕೆ ಎಣ್ಣೆ ಹೊಯ್ದು ಬೆಳಗಿಸು ಎಂದೆನಿಸಿದರರೂ ನೈತಿಕ ಮೌಲ್ಯಗಳೆಲ್ಲ ಕುಸಿಯುತ್ತ ಜೀವನ ಸಂಸ್ಕೃತಿ ಬಡವಾಗುತ್ತಿರುವ ಹೊತ್ತಲ್ಲಿ ನಮ್ಮ ನಡೆ-ನುಡಿಯ ಮೂಲಕ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ತಾಯಿಯನ್ನು ಎಚ್ಚರಿಸುತ್ತಾರೆ.

ನಾಗರಾಜ ಹೆಗಡೆ ಅವರ ‘ಸಣ್ಣ ಬೆಂಕಿ ‘
ಕವನದ ಶೀರ್ಷಿಕೆಯೇ ಹೊಸತನದಿಂದ ಕೂಡಿದೆ, ಇತರರಿಗೆ ಸಣ್ಣದು ಸಾಮಾನ್ಯವಾದುದು ಎಂದು ತೋರುವಲ್ಲೇ ತಮ್ಮ ಕಾವ್ಯದ ವಸ್ತುವನ್ನು ನಿಗದಿ ಮಾಡಿ ಹೊಸ ನೋಟ ಬೀರುತ್ತಾರೆ
ಬೆಂಕಿ ಬೆಂಕಿಯೇ ಆದರೂ ಸಣ್ಣ ಬೆಂಕಿಯಲ್ಲಿ ಬದುಕಿದೆ ;ಸಣ್ಣ ಬೆಂಕಿಯಿಂದ ಆಗಬಹುದಾದುದು ದೊಡ್ಡ ಬೆಂಕಿಯಿಂದ ಆಗುವದಿಲ್ಲ. ಸಣ್ಣ ಬೆಂಕಿಯೇ ಹಿತಕರವಾದುದು ಎಂಬುದನ್ನು ಕವಿತೆ ಧ್ವನಿಸುತ್ತದೆ.
‘ಉಕ್ಕಿ ಚೆಲ್ಲುವುದಿಲ್ಲ
ಬತ್ತಿ ಇವಿಯಾಗುವುದಿಲ್ಲ ‘
ಮುಂದುವರಿದು..
‘ ಹೊಗೆಯು ಇಲ್ಲ
ಧಗೆಯು ಇಲ್ಲ

ಅವಸರ -ಅನಾಹುತವೂ ಇಲ್ಲ. ಹಾಗಂತ ಕಣ್ಮುಚ್ಚಿ ಕೈ
ಇಕ್ಕುವುದಂತೂ ಸಲ್ಲ’
ಎಂದು ಎಚ್ಚರಿಸುತ್ತಾರೆ. ಕವಿತೆ ದೊಡ್ಡ ಬೆಂಕಿಯ ಬಗೆಗೂ ಮಾತನಾಡುತ್ತದೆ‌ ಸಣ್ಣ ಬೆಂಕಿ ಜನಸಾಮಾನ್ಯರ ಪ್ರತಿಮೆ ಆದರೆ ದೊಡ್ಡ ಬೆಂಕಿ ಬಲಾಢ್ಯರ ಪ್ರತಿಮೆ ಅಂತಿದೆ.

ಡಾ ಎಚ್ ಎಸ್ ಅನುಪಮಾ ಅವರ ಗೋಧರೆಯ ನೆಲದಲ್ಲಿ
ಜನಪರ ಕಾಳಜಿ ಉಳ್ಳ ಅಪರೂಪದ ವೈದ್ಯ ಸಾಹಿತಿ ಅನುಪಮಾ ಅವರ ಬರೆಹೆಗಳು ಅಪ್ಪಟ ವೈಚಾರಿಕತೆಯಿಂದ ಕೂಡಿದ್ದು ಅನುಭವದ ಸತ್ಯದಿಂದಲೇ ಒಡಗೂಡಿದ್ದು. ಮಾನವ ಪ್ರೇಮ ಅಂತಃಕರಣಕ್ಕೆ ಸಾಕ್ಷಿಯಾಗುತ್ತವೆ.
ಪ್ರಸ್ತುತ ಕವಿತೆ ಗೋದ್ರಾ ಹತ್ಯಾಕಾಂಡದ ನಂತರದಲ್ಲಿ ಅಲ್ಲಿನ ನೆಲ, ಜನರನ್ನು ಕಂಡು ಸಂಪರ್ಕಿಸಿ ಪ್ರತಿಕ್ರಿಯಾತ್ಮಕವಾಗಿ ರೂಪ ಪಡೆದಿದೆ
ಅಂತಿಂಥ ನೆಲವಲ್ಲ ಗೋಧರೆಯ ಗುಜರಾತು
ಶಬರಮತಿ ಸಹನಮತಿ ನಮ್ಮ ಅಹಮದಾಬಾದು!’
ಇಂತಹ ನೆಲದಲ್ಲಿ ನಡೆದ ಘೋರ ಹತ್ಯಾಕಾಂಡವನ್ನು ಧರ್ಮಾಂಧರ ಕ್ರೌರ್ಯವನ್ನು ಕವಿತೆ ಬಿತ್ತರಿಸುತ್ತ ಭಾವಸಂವೇದನೆಯನ್ನು ಹುಟ್ಟು ಹಾಕುತ್ತವೆ ‌
ಹಸಿದ ನೊಂದ ಜೀವಗಳಿಗೆ ಧರ್ಮದ ಅಫೀಂ ಕುಡಿಸಿ ಹೊತ್ತಿಸಿದ ಬೆಂಕಿಯ ಅಲೆಯ ಭೀಕರತೆಯನ್ನು ಮುಂದಿನ ಸಾಲುಗಳು ಸಾರುತ್ತವೆ.
‘ಭೀತಿಯೇ ಅನ್ನವಾಗಿ ಶಂಕೆಯೇ ತಟ್ಟೆಯಾಗಿ
ವಾದ ಜಗಳ ಗಲಭೆಯಲ್ಲಿ ಹಾದಿ ಬೀದಿ ನರಳಿತು
ರಗುತದ ಹೊಳೆ ಹರಿಯುತು
ವಿಶ್ವ ಹೃದಯ ಭೂಮಿಗೆ ಮಾಯದಂತ ರಣ ಗಾಯ’

ಉದಯಕುಮಾರ್ ಹಬ್ಬು ಅವರ ‘ಕೊರಗರ ಹಾಡು ‘
ಪ್ರಗತಿಪರ ಚಿಂತಕರಾದ ಉದಯ ಕುಮಾರ್ ಹಬ್ಬು ಅವರು ಪ್ರಸ್ತುತ ಕವಿತೆಯಲ್ಲಿ ಉತ್ತರ ಕನ್ನಡದ ಆದಿವಾಸಿಗಳಾದ ಕೊರಗರ ಅಂತರಾಳದ ನೋವನ್ನು ಅವರ ಬಾಯಿಂದಲೇ ಹೇಳಿಸುವ ಮುಖೇನ ಕವಿತೆ ದಲಿತ ಸಂವೇದನೆಯಿಂದ ಕೂಡಿದೆ. ಕೊನೆಯ ಚರಣಗಳಲ್ಲಿ ಇಷ್ಟೆಲ್ಲಾ ಅನ್ಯಾಯ ಅಮಾನವೀಯತೆಗಳು ಮೇರೆ ಮೀರಿ ನಡೆದರೂ ಕಣ್ಣುಮುಚ್ಚಿ ಕುಳಿತ ದೇವರ ಅಸ್ತಿತ್ವವನೇ ಪ್ರಶ್ನೆ ಮಾಡುವ ವ್ಯಂಗ್ಯವು ಮಾರ್ಮಿಕವಾಗಿದೆ.
‘ಪತಿತ ಪಾವನನೆಂದು ಕುಳಿತ ದೇವರೇ ನೀನು?
ಕಣ್ಣು ಕಿವಿ ಬಾಯ್ಮುಚ್ಚಿ ಕುಳಿತೆಯೇನು?’
ತಮ್ಮನ್ನು ವಂಚಿಸುವ ಜನರು ಸೃಷ್ಟಿಸಿದ ದೇವರನ್ನೇ ಪ್ರಶ್ನಿಸುವ ಮೂಲಕ ತಾವು ಜಾಗೃತರಾಗಿದ್ದೇವೆ ಎಂಬ ಪ್ರಜ್ಞೆಯನ್ನು ದಲಿತರಲ್ಲಿ ಮೂಡಿಸುತ್ತದೆ.

ಅರವಿಂದ ನಾಡಕರ್ಣಿ ಅವರ ‘ಬೀದಿ ಸಂಸಾರಿಗಳು ‘
ಸಮಾಜದಲ್ಲಿ ಶಿಷ್ಟ ಜನರಿಂದ ಪರಿತ್ಯಕ್ತರಾದ ಜನರ ಆರ್ತನಾದಕ್ಕೆ ಧ್ವನಿ ಕೊಡುವ ಈ ಕವಿತೆ ತುಂಬಾ ಅಪರೂಪವಾದದ್ದು .ಈ ಕವನದಲ್ಲಿ ಕವಿ ಸಮಕಾಲೀನ ಸಮಾಜದ ಬದುಕಿನಲ್ಲಿ ಕಂಡುಬರುವ ತುಳಿತವನ್ನು ಕಟು ಸತ್ಯವನ್ನು ತೆರೆದು ತೋರಿಸಿದ್ದಾರೆ. ಆವೇಶಕ್ಕೊಳಗಾಗದೆ ಕವಿ ತಮ್ಮ ಸಹಜ ಸೌಮ್ಯ ಪ್ರತಿಕ್ರಿಯೆ ಮೂಲಕ ದಲಿತರ ನೋವಿಗೆ ಮಿಡಿವ ಸಂವೇದನೆಯಾಗಿದೆ.
‘ಯಾರು ನೋಡುವರು ನಮ್ಮನ್ನು
ಬೇರು ಸಮೇತ ಕಿತ್ತೊಗೆದ ಈ ಗಿಡಗಂಟಿಗಳನ್ನು?’
ಮುಂದಿನ ಸಾಲುಗಳಲ್ಲಿ
‘ಸಾಕು
ನಿಮ್ಮ ದಲಿತೋದ್ಧಾರಕ ಘೋಷಣೆ
ಗಂಟಲು ಬಿರಿದ ಕವನದ ಗಂಟು ಸಾಕಿವೆಲ್ಲ
ಸಾಕೆಮಗೆ ಪುಟ್ಪಾತಿನಮರಾವತಿಯ ಪಟ್ಟ’
ಹೀಗೆ ಜನರ ಉದ್ಧಾರದ ಉದ್ದುದ್ದ ಭಾಷಣ ಬಿಗಿಯುವ ನಾಯಕರಿಗೆ ನೊಂದವರು ಹತಾಶೆಯಿಂದ ಹೇಳುವ ಮಾತಿದು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಉತ್ತರಿಸಬೇಕು; ಕವಿಯ ಆಶಯವೂ ಅದೇ ಆಗಿದೆ.

ಶಿವೇಶ್ವರ ದೊಡ್ಡಮನಿ ಅವರ ‘ಉತ್ತರ ಕೊಡ್ಬಾ ಗೆಳೆಯಾ ‘
ಜನಪರ ನಿಲುವು, ಸಹಜ ಕವಿತ್ವದೊಂದಿಗೆ ಜನರ ನೋವಿಗೆ ಮಿಡಿವ ಕವನಗಳು ನೆಲ ಬಿಟ್ಟು ಹಾರುವುದಿಲ್ಲ. ಇಲ್ಲಿನ ಮ್ಮಣ್ಣಿನ ಕಣಗಳೊಂದಿಗೆ ಒಂದಾಗುತ್ತವೆ. ಗಾಂಜಾ ಸೇವಿಸಿ ಸತ್ಯವನ್ನು ತೆರೆದಿಡುವ, ದೇವರನ್ನೇ ತೆರಾಟೆಗೆ ತೆಗೆದುಕೊಳ್ಳುವ ,ದೊಡ್ಡವರ ಮುಖವಾಡ ಕಳಚುವ ಸಾಲುಗಳು ರಾಜರತ್ನಂ ಅವರ ರತ್ನನ ಪದಗಳನ್ನು ನೆನಪಿಸುತ್ತವೆ, ತತ್ವ ಪೂರ್ಣವಾಗಿವೆ.

ಕೃಷ್ಣ ನಾಯಕ್ ಹಿಚ್ಕಡ ಅವರ ‘ ದೋಣಿ ಮತ್ತು ಹಡಗು’
ಸಹಜ ಅನುಭವವನ್ನು ಹಿಡಿದು ಕವನ ಕಟ್ಟುವ ಕೃಷ್ಣನಾಯಕರು ವಿಶಿಷ್ಟವಾಗಿ ಗಮನ ಸೆಳೆಯುವ ಕವಿ. ನೆಲದ ಕಣಕಣದೊಂದಿಗೆ ಸಂಚರಿಸಿದ ಅವರ ಕವನಗಳಲ್ಲಿ ಮಾನವೀಯ ಅಂತ:ಕರಣವೇ ಜೀವಾಳ. ವೈಚಾರಿಕತೆಗೆ ಒಡ್ಡಿಕೊಳ್ಳುವ ಅವರ ಕಾವ್ಯ ವಾಹಿನಿಯಲ್ಲಿ ಭಾವನೆಯನ್ನು ಹಿಡಿದಿಡುವ ಸೊಬಗು, ಕಾವ್ಯದ ವಸ್ತುವನ್ನು ಪ್ರತಿಮೆಯನ್ನಾಗಿಸಿ ಹೊರಡಿಸುವ ಧ್ವನಿ ಸಾಂದ್ರತೆ ಸೊಗಸಾಗಿದೆ.
‘ ತೇಲಿ ಬಂದಂತೆ ನಗರಿಯೊಂದು
ಇಳಿ ಬಿಟ್ಟ ಲಂಗರು ತೊನೆದಾಡುತ್ತಿತ್ತು ಹಡಗು
ಹೊಸಬನ ಕಂಡ ಹದಿನಾರರ ಲಲನೆಯ ಹಾಗೆ ‘
ಕಾವ್ಯದ ಉದ್ದಕ್ಕೂ ಇಂತಹ ಪ್ರತಿಮೆಗಳು ಕಾವ್ಯದ ಸೊಬಗನ್ನು ಸಮೃದ್ಧಗೊಳಿಸುತ್ತವೆ.

ಹೀಗೆ ಸುದೀರ್ಘ ಕಾಲಘಟ್ಟದಲ್ಲಿ ಮೂಡಿ ಬಂದ ಆಯ್ದ ಅರವತ್ತೇಳು ಕವನಗಳು ಆಯಾ ಕಾಲಘಟ್ಟದ ಸಮಾಜದ ಪ್ರತಿಬಿಂಬವಾಗಿ, ಘಟಿಸಿದ ಘಟನೆಗಳಿಗೆ ಪ್ರತಿಕ್ರಿಯಾತ್ಮಕವಾಗಿ ಮೂಡಿಬಂದಿವೆ. ಅನ್ಯಾಯ ಶೋಷಣೆಯ ವಿರುದ್ಧ ಧ್ವನಿಯೆತ್ತಿದ ಜೀವಪರ ನಿಲುವುಳ್ಳ ಪ್ರಗತಿಪರ ಧೋರಣೆಯ ಕವನಗಳ ಸಂಗ್ರಹ ಮತ್ತು ವಿಶ್ಲೇಷಣೆ ನಿಜಕ್ಕೂ ಒಂದು ಅಪರೂಪದ ಕಾರ್ಯ. ಸರಳ ಭಾಷೆಯಲ್ಲಿ ಮೂಡಿ ಬಂದ ವಿಶ್ಲೇಷಣೆ ಸಾಹಿತ್ಯಾಸಕ್ತ ಕಲಿಕಾರ್ಥಿಗಳಿಗೆ ಉತ್ತಮ ಜ್ಞಾನ ದೀವಿಗೆಯಂತಿದೆ.

‍ಲೇಖಕರು Admin

1 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading