ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೋಕಲ್ ಟ್ರೇನ್

-ಶಿವರಾಜ ಅರಳಿ

ಈಗ ಊರಲ್ಲಿ ಮಳೆ ಇಲ್ಲವೇ ಇಲ್ಲ. ಬಹುತೇಕ ಬರಗಾಲದ ಛಾಯೆ ಕಣ್ಮುಂದೆ ಕಟ್ಟಿದೆ. ರೈತ ಆಯಾಸವಾಗುವ ದಿನ ದೂರಿಲ್ಲ. ದಿನ ಕಳೆದಂತೆ ಹೊಲದಲ್ಲಿ ಇದ್ದ ಅಲ್ಪ-ಸ್ವಲ್ಪ ಕೆಲಸಗಳು ಮುಗಿಯುತ್ತಾ ಬರುತ್ತಿವೆ. ಈ ತಿಂಗಳು ಕಳೆದರೆ ರೈತ ಮತ್ತು ಕೂಲಿಕಾರ ಖಾಲಿ-ಖಾಲಿ. ಹಬ್ಬ ಬೇರೆ ಮುಂದೆ ಇದೆ. ಮಕ್ಕಳ ಶಾಲೆಗೆ ಎರಡು-ಮೂರು ದಿನ ರಜೆಯಿದೆ. ಹಾಗಾಗಿ ಕೊಲ್ಲಾಪುರದಲ್ಲಿರುವ ತಂಗಿ ರೂಪಾಳ ಮನೆಗೆ ಹೋಗಬೇಕೆಂದು ಸುರೇಶ ನಿಧ೯ರಿಸಿದ. ಹೆಂಡತಿ ರೇಖಾ, ಮಗ ಕುಮಾರ ಮತ್ತು ಮಗಳು ಕಾವ್ಯಾಳಿಗೂ ತಿಳಿಸಿದ. ಮಕ್ಕಳು ರೆಕ್ಕೆ ಬಿಚ್ಚಿದ ಹಕ್ಕಿಗಳಂತೆ ನಲಿದಾಡಿದರು. ನೆರೆಹೊರೆಯ ಗೆಳೆಯ-ಗೆಳತಿಯರಿಗೂ ಹೇಳಿದರು. ಕಾವ್ಯಾ, ‘ಅವ್ವ ಮೊನ್ನೆ ಅಜ್ಜ ಹಬ್ಬಕ್ಕ ತಂದಿದ್ದ ಡ್ರೆಸ್ ಇಟ್ಕೊ ನಂಗ’ ಎಂದಳು. ಕುಮಾರ ‘ಅಪ್ಪ ನಾನು ಟ್ರೇನಿನಲ್ಲಿ ಕಿಟಕಿ ಹತ್ರ ಕುಂಡ್ರಾವ. ನೀನು ಅತ್ತಾಗ ಸರಿ, ಇತ್ತಾಗ ಸರಿ ಅನ್ನದಿಲ್ಲ ನೋಡ್ ಮತ್ತ’. ಎಂದು ಗದರಿಸಿದಂತೆ ಹೇಳಿದನು. ಈಗ ಸುರೇಶನ ಕುಟುಂಬ ಬಸ್ಸ್ ಮೂಲಕ ಹುಬ್ಬಳ್ಳಿ ತಲುಪಿ ಅಲ್ಲಿಂದ ಲೋಕಲ್ ಟ್ರೇನ್ ಹಿಡಿದುಕೊಂಡು ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಿತು. 

                                              **           

ಚುಕು-ಬುಕು, ಚುಕು-ಬುಕು ಶಬ್ಧ ಮಾಡುತ್ತಾ ಟ್ರೇನು ಹೊರಟಿತು. ಸುರೇಶ, ರೇಖಾ, ಕುಮಾರ ಮತ್ತು ಕಾವ್ಯಾ ಹರಟೆ ಹೊಡೆಯುತ್ತಾ, ಒಬ್ಬರಿಗೊಬ್ಬರು ಹಾಸ್ಯ ಮಾಡುತ್ತಾ ಸಮಯ ದೂಡುತ್ತಿದ್ದರು. ಟ್ರೇನಿನಲ್ಲಿ ಇಡ್ಲಿ, ವಡಾ, ಚಿಪ್ಸ್ ಹಾಗೂ ಚಹಾ ಹೀಗೆ ತರ-ತರಹ ತಿನಿಸುಗಳನ್ನು ಮಾರುತ್ತಾ ಬರುತ್ತಿದ್ದರು. ಕಾವ್ಯಾ ‘ಅಪ್ಪ ನಂಗ ಒಂದ್ ಚಿಪ್ಸ್ ಪಾಕಿಟ್ ಕೊಡಿಸು’ ಎಂದಳು. ಕುಮಾರ ‘ನಂಗೂ ಒಂದ್ ಚಿಪ್ಸ್’ ಎಂದನು. ಹೆಂಡತಿ ರೇಖಾ ‘ರೀ ಚಹಾ ಅಷ್ಟ ತಗೋರ್ರಿ, ಮುಂಜಾನೆ ಮಾಡಿದ್ದ  ನಾಷ್ಟಾ ಇನ್ನೂ ಕರಗಿಲ್ಲ’ ಎಂದಳು. ಹೀಗೆ ತಿಂಡಿ-ತಿನಿಸುಗಳ ರುಚಿ ಸವಿಯುತ್ತಾ, ಟ್ರೇನಿನ ಕಿಟಕಿಯಲ್ಲಿ ಬೇರೆ-ಬೇರೆ ಪ್ರದೇಶಗಳನ್ನು, ನದಿಗಳನ್ನು, ಗಗನಚುಂಬಿ ಕಟ್ಟಡಗಳನ್ನು ಹಾಗೂ ಹೊಲದಲ್ಲಿ ಕಾಣುವ ವಿವಿಧ ಬೆಳೆಗಳನ್ನು ನೋಡುತ್ತಾ ಸಂಜೆ ೬ ಗಂಟೆಗೆ ಕೊಲ್ಲಾಪುರ ತಲುಪಿದರು. 

                                                  **

ಅಣ್ಣನ ಕುಟುಂಬ ಬಂದಿರುವುದನ್ನು ಕಂಡು ರೂಪಾಳಿಗೆ ಖುಷಿಯೋ-ಖುಷಿ. ಅದರಲ್ಲೂ ಮುದ್ದಿನ ಅಳಿಯ ಕುಮಾರ ಹಾಗೂ ಜೀವದ ಸೊಸೆ ಕಾವ್ಯಾಳನ್ನು ಕಂಡರೆ ರೂಪಾಳಿಗೆ ಎಲ್ಲಿಲ್ಲದ ಪ್ರೀತಿ. ಸದ್ಯ, ಕೊಲ್ಲಾಪುರದಲ್ಲಿ ದೇವಿಯ ಜಾತ್ರೆ. ಜಾತ್ರೆಯೆಂದರೆ ಗೊತ್ತಲ್ಲ. ಚೋಕಾಲಿ, ಜಾರುಬಂಡಿ, ಆಟದ ಸಾಮಾನುಗಳು, ಬಗೆ-ಬಗೆಯ ಸ್ನಾಕ್ಸಗಳು ಒಂದೇ, ಎರಡೇ. ಹಾಗಾಗಿ ರೂಪಾ ಸಂಜೆ ಎಲ್ಲರನ್ನು ಜಾತ್ರೆಗೆ ಕರೆದುಕೊಂಡು ಹೋಗಲು ನಿಧ೯ರಿಸಿದಳು. ಕುಮಾರ ಮತ್ತು ಕಾವ್ಯಾ ಇಬ್ಬರಿಗೂ ಸಂಗತಿಯ ವಿವರಿಸಿದಳು. ಅವರಂತೂ ನೆಲದ ಮೇಲೆ ನಿಲ್ಲಲ್ಲೊಲ್ಲರು. ಅಷ್ಟು ಕುತೂಹಲ ಮತ್ತು ಆತುರ. ಈಗ ಕಾರಲ್ಲಿ ಎಲ್ಲರೂ ಜಾತ್ರೆ ನಡೆದ ಸ್ಥಳ ತಲುಪಿದರು. ರೂಪಾ, ಕುಮಾರ ಮತ್ತು ಕಾವ್ಯಾಳನ್ನು ಕರೆದುಕೊಂಡು ಮುಂದೆ-ಮುಂದೆ ಸಾಗಿದಳು. ಕಾವ್ಯಾ ‘ಅತ್ತಿ ಇವರು ಮಾತಾಡೋದು ನಂಗ  ತಿಳಿವಲ್ದು’ ಎಂದಳು. ರೂಪಾ ‘ಇದು ಮರಾಠಿ ಭಾಷೆ. ಇಲ್ಲಿ ಇದನ್ನೇ ಜಾಸ್ತಿ ಮಾತಾಡ್ತಾರ. ಯಾಕ ಇಂದ್ರ ನಮ್ಮಲ್ಲಿ ಕನ್ನಡ ಹೆಂಗೋ, ಹಂಗ ಇಲ್ಲಿ ಮರಾಠಿ ಮಾತೃಭಾಷೆ ಈ ಜನಕ್ಕ’ ಎಂದಳು. ಕಾವ್ಯಾ ‘ಓಹೋ ಹಾಗೇನಾ ಅತ್ತಿ. ಬೇರೆ-ಬೇರೆ ಕಡೆಗೆ ಹೋದ್ರೆ, ಬೇರೆ-ಬೇರೆ ಭಾಷೆ ಮಾತಾಡ್ತಾರಾ’ ಎಂದಳು. ‘ಹೌದ್ ಕಾವ್ಯಾ, ಆಯಾ ರಾಜ್ಯಕ್ಕೆ ಒಂದೊಂದು ಭಾಷೆ ಇತೆ೯ತಿ. ಅಲ್ಲಿ ಎಲ್ಲಾ ಜನ ಅದ್ನ ಮಾತಾಡ್ತಾರ’ ಎಂದಳು ರೂಪಾ. 

                                                       **

‘ಏ ಕುಮಾರ ಅಲ್ಲೇನ್ ನೋಡ್ತಿಯೋ’ ಎಂದಳು ರೂಪಾ. ‘ಅತ್ತಿ ಅದೇನು, ಬ್ರೆಡ್ಡಿನಲ್ಲಿ ಬಜ್ಜಿ ಹಾಕಿ ಕೊಡ್ತಾರಲ್ಲ. ನಮ್ಮ ಕಡೆ ಈ ಬ್ರೆಡ್ನ ಚಾದಾಗ ಎದ್ದಿ ತಿಂತವಿ’ ಎಂದನು ಕುಮಾರ. ‘ಇದಕ್ಕ ವಡಾಪಾವ್ ಅಂತಾರ. ಇಲ್ಲಿ ಬಾಳ ಫೇಮಸ್ ಸ್ನಾಕ್ಸ ಇದು. ನೀನ್ ತಿಂತಿಯಾ’ ಎಂದಳು ರೂಪಾ. ‘ಯೆವ್ವಾ ಬ್ಯಾಡ್ವಾ. ಹೊಟ್ಟಿ-ಗಿಟ್ಟಿ ಕೆಟ್ರ ಶಿವಾಯ ನಮಃ’ ನಗುತ್ತಾ ಮೆಲುದನಿಯಲ್ಲಿ ಹೇಳಿದ ಕುಮಾರ. ಅಷ್ಟರಲ್ಲಿ ಕಾವ್ಯಾ ‘ಅತ್ತಿ, ಅಲ್ಲಿ ಸಾರಿನ್ಯಾಗ ಎರಡು ಬ್ರೇಡ್ ಇಟ್ಟ ಕೊಡ್ತಾರಲ್ಲ ಎನ್ ಅದು’ ಎಂದಳು. ರೂಪಾ ‘ಕಾವ್ಯಾ, ಅದು ಮಿಸಳ್. ಈ ಭಾಗದಲ್ಲಿ ಹೆಚ್ಚ್ ಜನ್ರ್ ಇಷ್ಟ ಪಡೋ ದಿನದ ಉಪಹಾರ ಇದ್ದಂಗ. ನೀನು ಒಮ್ಮೆ ಟೇಸ್ಟ್ ಮಾಡಿ ನೋಡ್’ ಎಂದಳು. ಹೀಗೆ ಚಚೆ೯ ಸಾಗುತ್ತಾ ಸಮಯ ಹೋದದ್ದೇ ಗೊತ್ತಾಗಲಿಲ್ಲ ಎಂದು ಹೊರಗಡೆ ಊಟ ಮಾಡಿ ಎಲ್ಲರೂ ಮನೆ ಕಡೆಗೆ ಹೋದರು. ಎರಡು ದಿನ ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಸಂತಸದಿಂದ ಕಾಲ ಕಳೆದರು. ಇನ್ನೇನು ಊರಿಗೆ ಹೋಗುವ ಸಮಯ. ಸುರೇಶ ‘ನಾಳೆ ಮೊದಲನೇ ಟ್ರೇನಿಗೆ ಹೋಗನ್ರಿ. ಅಂದ್ರ ಕತ್ತಲ ಆಗದ್ರಾಗ ಮನಿ ಸೆತ೯ವಿ. ಈಗ ದೌಡ್ ಮಲ್ಕೋರ್ರಿ’ ಎಂದನು. ಇದನ್ನು ಕೇಳಿಸಿಕೊಂಡ ಕುಮಾರ ಮತ್ತು ಕಾವ್ಯಾ ಇಬ್ಬರ ಮುಖಗಳಲ್ಲೂ ಮೌನ ಆವರಿಸಿತು. ದುಃಖಿಸುತ್ತಾ ರೂಪಾಳ ತೊಡೆಯ ಮೇಲೆ ಮಲಗಿ  ‘ಅತ್ತಿ, ಇನ್ನ್ ಎರಡ ದಿನ ಬಿಟ್ಟ ಹೋಗ್ರಿ ಅಂತ ಅಪ್ಪಗ ಹೇಳು’ ಅಂದರು. ರೂಪಾ ಇಬ್ಬರ ತಲೆ ಸವರಿ ‘ಪರೀಕ್ಷೆ ಹತ್ರ ಬಂತು. ಊರಿಗೆ ಹೋಗಿ ತಯಾರಿ ಮಾಡ್ರಿ. ಪರೀಕ್ಷೆ ಮುಗದ ಮೇಲೆ ಬತಿ೯ರಲ್ಲ ಅವಾಗ ಹೊರಗ ಸುತ್ತಾಡಕ ಹೋಗನ್ರಿ, ಈಗ ಬ್ಯಾಡ’ ಎಂದು ಸಮಾಧಾನ ಮಾಡಿದಳು. ಮಾರನೇಯ ದಿನ ಕುಮಾರ ಮತ್ತು ಕಾವ್ಯಾ ಸಪ್ಪೆ ಮುಖ ಹೊತ್ತು ಒಲ್ಲದ ಮನಸ್ಸಿನಿಂದ ತಂದೆ-ತಾಯಿಯ ಜೊತೆಗೆ ಊರಿಗೆ ಹೊರಟರು.

‍ಲೇಖಕರು Admin

3 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading