ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧೀಜಿಯವರ ಮೊದಲ ಹೆಜ್ಜೆಗಳು

–ಪಾಲಹಳ್ಳಿ ವಿಶ್ವನಾಥ್

(ಎರಡು ಐತಿಹಾಸಿಕ ವಿಚಾರಣೆಗಳು)
೧೯೧೭ರ ಚಂಪಾರಣ್ ಸತ್ಯಾಗ್ರಹ ಮತ್ತು 1922 ರ್ ರಾಜದ್ರೋಹದ ಆಪಾದನೆ ಗಾಂಧೀಜಿಯವರ ಜೀವನದ ಎರಡು ಮುಖ್ಯ ವಿಚಾರಣೆಗಳು. ಅವರು ಆ ಪರಿಸ್ಥಿತಿ ಗಳನ್ನು ಹೇಗೆ ಎದುರಿಸಿದರು ಎನ್ನುವುದು ಅವರ ಅನನ್ಯತೆಗೆ ಮತ್ತು ಶ್ರೇಷ್ಠತೆಗೆ ಸಾಕ್ಷಿ. ಗಾಂಧೀಜಿಯವರ ಜೀವನದಲ್ಲಿ ಕ್ವಿಟ್ ಇಂಡಿಯಾ ಮತ್ತು ಉಪ್ಪು ಸತ್ಯಾಗ್ರಹದಂತಹ ನಂತರದ ಖ್ಯಾತ ಘಟನೆಗಳಿದ್ದರೂ ಭಾರತಕ್ಕೆ ವಾಪಸ್ಸು ಬಂದ ನಂತರದ ಅವರ ಮೊದಲ ಕೆಲವು ವರ್ಷಗಳು ಅವರನ್ನು ಹೇಗೆ ರೂಪಿಸಿದವು ಎಂಬುದನ್ನು ಈ ವಿಚಾರಣೆಗಳಲ್ಲಿ ನೋಡಬಹುದು. ಅವರ ಧೈರ್ಯ ಮತ್ತು ಸ್ಥೈರ್ಯ ಗಳಿಗೆ ಅವರೇ ಸಾಟಿ.

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 1915 ರಲ್ಲಿ ಮರಳಿದ ನಂತರದ ದಶಕದಲ್ಲಿ ಗಾಂಧೀಜಿಯವರು ನಾಲ್ಕು ಮಹತ್ವಪೂರ್ಣ ಐತಿಹಾಸಿಕ ಘಟನೆಗಳಲ್ಲಿ ಭಾಗವಹಿದ್ದರು: ೧) ೧೯೧೭ ರಲ್ಲಿ ಬಿಹಾರದ ರೈತರು ಅನುಭವಿಸುತ್ತಿದ್ದ ನೀಲಿ ಬೆಳೆ ಪದ್ಧತಿಯ ವಿರುದ್ಧ ಹೋರಾಟ – ಚಂಪಾರಣ ಸತ್ಯಾಗ್ರಹ ೨) ೧೯೧೮ ರ ವೇತನ ಹೆಚ್ಚಳಕ್ಕಾಗಿ ಹೋರಾಡುತ್ತಿದ್ದ ಕಾರ್ಮಿಕರ ಪರ ಅಹಮದಾಬಾದಿನ ಗಿರಣಿ ಮುಷ್ಕರ ಮತ್ತು ರೈತರ ಪರ ಖೇಡಾ ಸತ್ಯಾಗ್ರಹ ೩) ದೇಶವ್ಯಾಪಿ ಸತ್ಯಾಗ್ರಹ ನಡೆಸಿ, ನಂತರ ಅಸಹಕಾರ ಚಳವಳಿಯ ಮೂಲಕ ಬ್ರಿಟಿಷ್ ಆಡಳಿತದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಜನರ ಸಂಘಟನೆ .(೧೯೧೯-೧೯೨೨) ೪) ೧೯೨೨ ರ ಅಹಮಾದಾಬಾದಿನಲ್ಲಿ ನಡೆದ ರಾಜದ್ರೋಹದ ಆಪಾದನೆ. ಇಲ್ಲಿ ಮುಖ್ಯವಾಗಿ ಅವರು ಎದುರಿಸಿದ ಎರಡು ವಿಚಾರಣೆಗಳ ಬಗ್ಗೆ ನೋಡೋಣ

1 ಚಂಪಾರಣ್

ಗಾಂಧೀಜಿಯವರು ಕೈಗೊಂಡ ಮೊದಲ ಕಾರ್ಯಾತ್ಮಕ ಸತ್ಯಾಗ್ರಹ ಮತ್ತು ಶಾಸನೋಲ್ಲಂಘನೆ (Civil Disobedience) ಚಳವಳಿ ೧೯೧೭ರ ಚಂಪಾರಣ್ ಸತ್ಯಾಗ್ರಹವು. ಆದ್ದರಿಂದ ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ. ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ ಬ್ರಿಟಿಷ್ ಜಮೀನ್ದಾರರು ಮತ್ತು ಪ್ಲಾಂಟರ್‌ಗಳು ಸ್ಥಳೀಯ ರೈತರ ಮೇಲೆ ತೀವ್ರ ಶೋಷಣೆ ನಡೆಸುತ್ತಿದ್ದರು. ತೀನ್‌ಕಥಿಯಾ (Tinkathia) ಪದ್ಧತಿ ಆ ಶೋಷಣೆಯ ಪ್ರತೀಕ : ಈ ನಿಯಮದಂತೆ ಪ್ರತಿಯೊಬ್ಬ ರೈತನೂ ತನ್ನ ಜಮೀನಿನ ಪ್ರತಿ ೨೦ ಭಾಗಗಳಲ್ಲಿ (ಬಿಘಾ) ಕನಿಷ್ಠ ೩ ಭಾಗಗಳಲ್ಲಿ ಕಡ್ಡಾಯವಾಗಿ ನೀಲಿ (Indigo) ಬೆಳೆಯನ್ನು ಬೆಳೆಯಬೇಕಿತ್ತು, ಬ್ರಿಟಿಷರು ರೈತರಿಂದ ಅತಿಯಾದ ತೆರಿಗೆ ಮತ್ತು ದಂಡವನ್ನು ವಸೂಲಿ ಮಾಡುತ್ತಿದ್ದಲ್ಲದೆ . ರೈತರಿಗೆ ಅತ್ಯಂತ ಕಡಿಮೆ ಬೆಲೆ ನೀಡುತ್ತಿದ್ದರು. ಈ ಶೋಷಣೆಯಿಂದ ಬೇಸತ್ತ ಚಂಪಾರಣ್‌ನ ರೈತ ರಾಜ್‌ಕುಮಾರ್ ಶುಕ್ಲ ಎಂಬುವವರು ೧೯೧೬ರ ಲಕ್ನೋ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರನ್ನು ಭೇಟಿಯಾಗಿ ಚಂಪಾರಣ್‌ಗೆ ಬಂದು ರೈತರ ಪರಿಸ್ಥಿತಿಯನ್ನು ವೀಕ್ಷಿಸುವಂತೆ ವಿನಂತಿಸಿಕೊಂಡರು.

೧೯೧೭ರ ಏಪ್ರಿಲ್ ೧೫ರಂದು ಗಾಂಧೀಜಿಯವರು ಬಾಬು ರಾಜೇಂದ್ರ ಪ್ರಸಾದ್, ಜೆ. ಬಿ. ಕೃಪಲಾನಿ, ಮಹಾದೇವ ದೇಸಾಯಿ ಮುಂತಾದ ನಾಯಕರೊಂದಿಗೆ ಚಂಪಾರಣ್‌ಗೆ ಆಗಮಿಸಿದರು. ಅವರು ರೈತರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಲು ಮುಂದಾದಾಗ, ಸ್ಥಳೀಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಾಂಧೀಜಿಯವರಿಗೆ “ತಕ್ಷಣವೇ ಚಂಪಾರಣ್ ಬಿಟ್ಟು ತೊಲಗಬೇಕು” ಎಂದು ಆಜ್ಞೆ ಮಾಡಿದರು ಆದರೆ, ಗಾಂಧೀಜಿಯವರು ಈ ಆದೇಶಕ್ಕೆ ಸೌಮ್ಯವಾಗಿ ಉತ್ತರಿಸುತ್ತಾ: “ನಾನು ಸಂಕಷ್ಟದಲ್ಲಿರುವ ನನ್ನ ದೇಶವಾಸಿಗಳ ಸೇವೆಗಾಗಿ ಇಲ್ಲಿದ್ದೇನೆ. ಸರ್ಕಾರ ವಿಧಿಸುವ ಯಾವುದೇ ಶಿಕ್ಷೆಯನ್ನು ಅನುಭವಿಸಲು ಸಿದ್ಧನಿದ್ದೇನೆ, ಆದರೆ ಜಿಲ್ಲೆಯನ್ನು ಬಿಟ್ಟು ಹೋಗುವುದಿಲ್ಲ” ಎಂದು ಆಜ್ಞೆಯನ್ನು ಉಲ್ಲಂಘಿಸಿದರು. ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ೧೯೧೭ರ ಏಪ್ರಿಲ್ ೧೮ರಂದು ಗಾಂಧೀಜಿಯವರನ್ನು ಮೊತಿಹಾರಿ ನ್ಯಾಯಾಲಯಕ್ಕೆ ಕರೆತರಲಾಯಿತು.

ಗಾಂಧೀಜಿಯವರ ವಿಚಾರಣೆಯ ಸುದ್ದಿ ತಿಳಿಯುತ್ತಿದ್ದಂತೆಯೇ ನ್ಯಾಯಾಲಯದ ಹೊರಗೆ ಸುಮಾರು ೨,೦೦೦ಕ್ಕೂ ಹೆಚ್ಚು ಬಡ ರೈತರು ಮತ್ತು ಸಾರ್ವಜನಿಕರು ಯಾವುದೇ ಹಿಂಸೆಯಿಲ್ಲದೆ ಶಾಂತಿಯುತವಾಗಿ ನೆರೆದರು. ಜನರ ಬೃಹತ್ ಬೆಂಬಲ ಮತ್ತು ತಿಯುತ ವಾತಾವರಣವನ್ನು ಕಂಡು ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸರು ಗಾಬರಿಗೊಂಡರು. ವಿಚಾರಣೆಯನ್ನು ಮುಂದೂಡಲು ಮ್ಯಾಜಿಸ್ಟ್ರೇಟ್ ಬಯಸಿದರು. ಗಾಂಧೀಜಿಯವರು ನ್ಯಾಯಾಲಯದಲ್ಲಿ ಯಾವುದೇ ವಕೀಲರನ್ನು ಇಟ್ಟುಕೊಳ್ಳಲಿಲ್ಲ. ಬದಲಿಗೆ ತಮ್ಮ ಪ್ರಕಟಣೆಯನ್ನು ಓದುತ್ತಾ, “ಕಾನೂನುಬದ್ಧ ಪ್ರಜೆಯಾಗಿ ಆಜ್ಞೆಯನ್ನು ಪಾಲಿಸುವುದು ನನ್ನ ಇಷ್ಟವಾಗಿತ್ತು. ಆದರೆ ಸಂಕಷ್ಟದಲ್ಲಿರುವ ಜನರ ಕಡೆಗಿನ ಕರ್ತವ್ಯದ ಮುಂದೆ ನನಗೆ ಕಾನೂನು ಮೀರುವುದು ಅನಿವಾರ್ಯವಾಯಿತು. ನಾನು ನನ್ನ ಅಪರಾಧವನ್ನು ಒಪ್ಪಿಕೊಳ್ಳುತ್ತೇನೆ, ನನಗೆ ವಿಧಿಸುವ ಶಿಕ್ಷೆಯನ್ನು ಅನುಭವಿಸಲು ಸಿದ್ಧ” ಎಂದು ಮುಕ್ತವಾಗಿ ಹೇಳಿದರು.

ಗಾಂಧೀಜಿಯವರ ಈ ನೈತಿಕ ನಿಲುವು ಮತ್ತು ಜನರ ಅಭೂತಪೂರ್ವ ಬೆಂಬಲಕ್ಕೆ ಬ್ರಿಟಿಷ್ ಸರ್ಕಾರ ಸ್ವಲ್ಪ ತಬ್ಬಿಬ್ಬಾಗಿ , ಗಾಂಧೀಜಿಯವರ ಮೇಲಿದ್ದ ಪ್ರಕರಣವನ್ನು ತಕ್ಷಣವೇ ವಾಪಸ್ ಪಡೆಯಲು ಮತ್ತು ಅವರಿಗೆ ತನಿಖೆ ಮುಂದುವರಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿತು. . ಗಾಂಧೀಜಿಯವರು ಅನೇಕ ರೈತರ ಸಾಕ್ಷ್ಯಗಳನ್ನು ದಾಖಲಿಸಿದರು. ಸರ್ಕಾರವು ಗಾಂಧೀಜಿಯವರನ್ನೂ ಒಳಗೊಂಡ ‘ಚಂಪಾರಣ್ ಕೃಷಿ ತನಿಖಾ ಸಮಿತಿ’ಯನ್ನು (Champaran Agrarian Committee) ರಚಿಸಿತು. ೧೯೧೮ರಲ್ಲಿ ‘ಚಂಪಾರಣ್ ಕೃಷಿ ಕಾಯ್ದೆ’ ಜಾರಿಗೆ ಬಂದು, ಶತಮಾನಗಳಿಂದ ನಡೆದು ಬಂದಿದ್ದ ತೀನ್‌ಕಥಿಯಾ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು. ರೈತರಿಂದ ಅಕ್ರಮವಾಗಿ ವಸೂಲಿ ಮಾಡಿದ್ದ ಹಣದಲ್ಲಿ ಭಾಗಶಃ ಭಾಗವನ್ನು ಬ್ರಿಟಿಷರು ಹಿಂತಿರುಗಿದರು.

ಇದು ಭಾರತದಲ್ಲಿ ಸತ್ಯಾಗ್ರಹದ ಮೊದಲ ಪ್ರಯೋಗವಾಗಿದ್ದು , ಇಲ್ಲೂ ‘ಅಹಿಂಸೆ’ ಮತ್ತು ‘ಸತ್ಯಾಗ್ರಹ’ ಎಂಬ ಅಸ್ತ್ರಗಳು ಯಶಸ್ವಿಯಾಗಿ ಕೆಲಸ ಮಾಡುತ್ತವೆ ಎಂಬುದನ್ನು ಚಂಪಾರಣ್ ಚಳವಳಿ ಸಾಬೀತುಪಡಿಸಿತು. ಬ್ರಿಟಿಷ್ ಆಡಳಿತಕ್ಕೆ ಸವಾಲು ಹಾಕಿ, ಅವರ ಆಜ್ಞೆಯನ್ನು ಸೌಮ್ಯವಾಗಿ ಉಲ್ಲಂಘಿಸುವ ಮೂಲಕ ಭಾರತದ ಪ್ರಥಮ ಶಾಸನೋಲ್ಲಂಘನೆ ಯಶಸ್ವಿಯಾಯಿತು. ಬಡ ರೈತರನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುಖ್ಯವಾಹಿನಿಗೆ ತರಲಾಯಿತು. ಈ ಸತ್ಯಾಗ್ರಹದ ನಂತರ ಮೋಹನ್‌ದಾಸ್ ಕರಮ್‌ಚಂದ್ ಗಾಂಧೀಜಿಯವರು ದೇಶಾದ್ಯಂತ ‘ಮಹಾತ್ಮ’ ಎಂದೇ ಜನಪ್ರಿಯರಾದರು.

(2) 1922 ರ ಮಹಾ ವಿಚಾರಣೆ

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ೧೯೨೨ರ ಮಾರ್ಚ್ ೧೮ ರಂದು ಅಹಮದಾಬಾದ್‌ನ ಶಾಹಿ ಬಾಗ್‌ನ ನ್ಯಾಯಾಲಯದಲ್ಲಿ ನಡೆದ ಮಹಾತ್ಮ ಗಾಂಧೀಜಿಯವರ ವಿಚಾರಣೆಯು (The Great Trial of 1922) ಬಹಳ ಮುಖ್ಯ 1೯೨೦ರಲ್ಲಿ ಗಾಂಧೀಜಿಯವರು ಆರಂಭಿಸಿದ ಅಸಹಕಾರ ಚಳವಳಿಯು ದೇಶಾದ್ಯಂತ ಕ್ರಾಂತಿಕಾರಿ ಬದಲಾವಣೆಯನ್ನು ತಂದಿತ್ತು. ಆದರೆ, ಫೆಬ್ರವರಿ ೧೯೨೨ರಲ್ಲಿ ಉತ್ತರ ಪ್ರದೇಶದ ಚೌರಿ ಚೌರಾ ಎಂಬಲ್ಲಿ ನಡೆದ ಹಿಂಸಾತ್ಮಕ ಘಟನೆಯಿಂದಾಗಿ ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ತಕ್ಷಣವೇ ಹಿಂಪಡೆದರು. ಆದಾಗ್ಯೂ, ಬ್ರಿಟಿಷ್ ಸರ್ಕಾರವು ಗಾಂಧೀಜಿಯವರ ಪ್ರಭಾವವನ್ನು ಕುಗ್ಗಿಸಲು ನಿರ್ಧರಿಸಿತು. ಗಾಂಧೀಜಿಯವರು ತಮ್ಮ ‘ಯಂಗ್ ಇಂಡಿಯಾ’ (Young India) ವಾರಪತ್ರಿಕೆಯಲ್ಲಿ ಬರೆದ ಮೂರು ಲೇಖನಗಳನ್ನು ಆಧಾರವಾಗಿಟ್ಟುಕೊಂಡು, ಅವರ ಮೇಲೆ ರಾಜದ್ರೋಹದ (Sedition) ಆರೋಪ ಹೊರಿಸಿ ೧೯೨೨ ಮಾರ್ಚ್ ೧೦ ರಂದು ಗಾಂಧೀಜಿಯವರನ್ನು ಹಾಗೂ ‘ಯಂಗ್ ಇಂಡಿಯಾ’ ಪತ್ರಿಕೆಯ ಪ್ರಕಾಶಕರಾದ ಶಂಕರಲಾಲ್ ಬ್ಯಾಂಕರ್ ಅವರನ್ನು ಬಂಧಿಸಲಾಯಿತು.

೧೯೨೨ ಮಾರ್ಚ್ ೧೮, ಶನಿವಾರ ಮಧ್ಯಾಹ್ನ ೧೨:೦೦ ಗಂಟೆಗೆ ಅಹಮದಾಬಾದ್‌ನ ಶಾಹಿ ಬಾಗ್‌ನಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಣ್ಣ ಸಭಾಂಗಣದಲ್ಲಿ ವಿಚಾರಣೆ ಪ್ರಾರಂಭವಾಯಿತು. . ಗಾಂಧೀಜಿಯವರು ನ್ಯಾಯಾಲಯವನ್ನು ಪ್ರವೇಶಿಸುತ್ತಿದ್ದಹಾಗೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಎಲ್ಲರೂ ಸ್ವಯಂಪ್ರೇರಿತರಾಗಿ ಎದ್ದು ನಿಂತು ಗೌರವ ಸೂಚಿಸಿದರು. ನಂತರ ನ್ಯಾಯಾಧೀಶರಾದ ಸಿ. ಎನ್. ಬ್ರೂಮ್‌ಫೀಲ್ಡ್ ಅವರು ಕೊಠಡಿಯನ್ನು ಪ್ರವೇಶಿಸಿ ತಮ್ಮ ಆಸನದಲ್ಲಿ ಕುಳಿತುಕೊಳ್ಳುವ ಮೊದಲು, ಆರೋಪಿಗಳ ಕಟಕಟೆಯಲ್ಲಿದ್ದ ಗಾಂಧೀಜಿಯವರ ಕಡೆಗೆ ಗೌರವಪೂರ್ವಕವಾಗಿ ತಲೆಬಾಗಿ ನಮಸ್ಕರಿಸಿದರು. ನ್ಯಾಯಾಲಯದಲ್ಲಿ ತಮ್ಮ ಹೆಸರು ಮತ್ತು ವೃತ್ತಿಯನ್ನು ಕೇಳಿದಾಗ, ಗಾಂಧೀಜಿಯವರು ಹೆಮ್ಮೆಯಿಂದ “ನಾನೊಬ್ಬ ರೈತ ಮತ್ತು ನೇಗೆಯವ” ಎಂದು ದಾಖಲಿಸಿದರು.

ತಮ್ಮ ಮೇಲಿನ ರಾಜದ್ರೋಹದ ಆರೋಪವನ್ನು ನಿರಾಕರಿಸುವ ಬದಲು, ಗಾಂಧೀಜಿಯವರು ಅದನ್ನು ಮುಕ್ತವಾಗಿ ಒಪ್ಪಿಕೊಂಡು ಈ ಅಪೂರ್ವ ಹೇಳಿಕೆಯನ್ನು ಕೊಟ್ಟರು : “ಈ ಸರ್ಕಾರಕ್ಕೆ ವಿರುದ್ಧವಾಗಿ ಅಸಮಾಧಾನ ಅಥವಾ ಅತೃಪ್ತಿಯನ್ನು ಹರಡುವುದು ನನ್ನ ಧರ್ಮವಾಗಿದೆ. ಬ್ರಿಟಿಷ್ ಆಡಳಿತವು ಭಾರತೀಯರನ್ನು ನೈತಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಂಪೂರ್ಣವಾಗಿ ಕುಗ್ಗಿಸಿದೆ ಎಂದು ನಾನು ನಂಬಿದ್ದೇನೆ. ಕಾನೂನಿನ ಪ್ರಕಾರ ಅಪರಾಧವೆಂದು ಪರಿಗಣಿತವಾಗಿರುವ, ಆದರೆ ಒಬ್ಬ ಪ್ರಜೆಯಾಗಿ ನನ್ನ ಅತ್ಯುನ್ನತ ಕರ್ತವ್ಯವೆಂದು ನನಗೆ ತೋರುವ ಕಾರ್ಯಕ್ಕಾಗಿ ನನಗೆ ವಿಧಿಸಬಹುದಾದ ಗರಿಷ್ಠ ಶಿಕ್ಷೆಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಲು ನಾನು ಇಲ್ಲಿದ್ದೇನೆ.ನನ್ನ ದೇಶವಾಸಿಗಳು ಕೆಲವೊಮ್ಮೆ ಹಿಂಸಾಚಾರಕ್ಕಿಳಿದಿದ್ದಾರೆ ಎಂಬುದು ನಿಜ, ಅದಕ್ಕಾಗಿ ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ. ಅಹಿಂಸೆಯೇ ನನ್ನ ಮೊದಲ ಮತ್ತು ಕೊನೆಯ ಸಿದ್ಧಾಂತ. ಆದರೆ, ಅನ್ಯಾಯಕಾರಿ ಮತ್ತು ಮಾನವೀಯತೆಯಿಲ್ಲದ ಆಡಳಿತಕ್ಕೆ ಶರಣಾಗುವುದಕ್ಕಿಂತ ದೇಶದ ಜನರಲ್ಲಿ ಜಾಗೃತಿ ಮೂಡಿಸಿ ಅದರ ಅಪಾಯವನ್ನು ಎದುರಿಸುವುದೇ ನನಗೆ ಸೂಕ್ತವೆನಿಸಿತು.” “ಗೌರವಾನ್ವಿತ ನ್ಯಾಯಾಧೀಶರೇ, ನಿಮಗಿರುವುದು ಎರಡೇ ದಾರಿ. ನೀವು ನಿರ್ವಹಿಸುತ್ತಿರುವ ಕಾನೂನು ಮತ್ತು ವ್ಯವಸ್ಥೆಯು ಒಳ್ಳೆಯದೆಂದು ನಿಮಗನಿಸಿದರೆ ನನಗೆ ಕಾನೂನಿನ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಿ; ಅಥವಾ ಆ ವ್ಯವಸ್ಥೆಯು ಕೆಟ್ಟದ್ದೆಂದು ಮತ್ತು ನಾನು ಮಾಡುತ್ತಿರುವುದು ಸರಿಯೆಂದು ನಿಮಗನಿಸಿದರೆ ನಿಮ್ಮ ಹುದ್ದೆಗೆ ರಾಜೀನಾಮೆ ನೀಡುವುದು.”

ಜಡ್ಜ್ ಬ್ರೂಮ್‌ಫೀಲ್ಡ್ ಗಾಂಧೀಜಿಯವರ ಬಗ್ಗೆ ಅಪಾರ ಗೌರವವಿಟ್ಟುಕೊಂಡು ಮಾತನಾಡಿದರು:”ಶ್ರೀಮಾನ್ ಗಾಂಧಿ, ನಿಮ್ಮ ವಿಚಾರಣೆಯನ್ನು ನಡೆಸಿ ತೀರ್ಪು ನೀಡುವುದು ಅತ್ಯಂತ ಕಷ್ಟಕರವಾದ ಕರ್ತವ್ಯವಾಗಿದೆ. ನೀವು ನಾನು ವಿಚಾರಣೆ ನಡೆಸಿದ ಅಥವಾ ಇನ್ಮುಂದೆ ವಿಚಾರಣೆ ನಡೆಸಬಹುದಾದ ಯಾವುದೇ ವ್ಯಕ್ತಿಗಿಂತ ತೀರಾ ಭಿನ್ನವಾದ ವರ್ಗಕ್ಕೆ ಸೇರಿದವರಾಗಿದ್ದೀರಿ. ನಿಮ್ಮ ದೇಶದ ಲಕ್ಷಾಂತರ ಜನರ ಕಣ್ಣಿನಲ್ಲಿ ನೀವು ಮಹಾನ್ ದೇಶಪ್ರೇಮಿ ಮತ್ತು ಅತ್ಯುನ್ನತ ನಾಯಕ. ರಾಜಕೀಯವಾಗಿ ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವವರೂ ಸಹ ನಿಮ್ಮನ್ನು ಉನ್ನತ ಆದರ್ಶಗಳ ಹಾಗೂ ಪವಿತ್ರ ಜೀವನದ ವ್ಯಕ್ತಿಯೆಂದು ಗೌರವಿಸುತ್ತಾರೆ.””ಆದರೆ, ಕಾನೂನಿಗೆ ಪ್ರತಿಯೊಬ್ಬರೂ ಬದ್ಧರಾಗಿರಬೇಕು. ನಾನು ನೀಡುವ ತೀರ್ಪು ನಿಮ್ಮನ್ನು ಮಾತ್ರವಲ್ಲ, ನಿಮ್ಮನ್ನು ಅನುಸರಿಸುವ ಲಕ್ಷಾಂತರ ಜನರ ಮೇಲೆಯೂ ಪರಿಣಾಮ ಬೀರುತ್ತದೆ. ಈ ಹಿಂದೆ ಲೋಕಮಾನ್ಯ ಬಾಲಗಂಗಾಧರ ತಿಲಕರ ಮೇಲೆ ಇಂಥದ್ದೇ ಪ್ರಕರಣ ದಾಖಲಾದಾಗ ಅವರಿಗೆ ೬ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಾನು ನಿಮಗೂ ಸಹ ೬ ವರ್ಷಗಳ ಸಾಧಾರಣ ಜೈಲು ಶಿಕ್ಷೆಯನ್ನು ವಿಧಿಸುತ್ತೇನೆ. ಮುಂದೆ ಪರಿಸ್ಥಿತಿ ಬದಲಾಗಿ, ಬ್ರಿಟಿಷ್ ಸರ್ಕಾರವು ಈ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿ ನಿಮ್ಮನ್ನು ಬಿಡುಗಡೆಗೊಳಿಸಿದರೆ, ನನಗಿಂತ ಹೆಚ್ಚು ಸಂತೋಷಪಡುವವರು ಯಾರೂ ಇರುವುದಿಲ್ಲ.” ಈ ಇಬ್ಬರು ಸಜ್ಜನರ ಮುಖಾಮುಖಿಯಿಂದ ಆ ವಿಚಾರಣೆ ಅನನ್ಯ ವಾಯಿತು.
೧೯೨೨ರ ಈ ವಿಚಾರಣೆಯು ಬ್ರಿಟಿಷ್ ಆಡಳಿತದ ಕಾನೂನು ವ್ಯವಸ್ಥೆಯ ನೈತಿಕ ಸೋಲನ್ನು ಜಗತ್ತಿಗೆ ಸಾರಿತು. ಗಾಂಧೀಜಿಯವರು ನ್ಯಾಯಾಲಯದ ಅಂಗಳವನ್ನೇ ಅಹಿಂಸಾತ್ಮಕ ಸತ್ಯಾಗ್ರಹದ ಪರಮೋಚ್ಛ ವೇದಿಕೆಯನ್ನಾಗಿ ಬಳಸಿಕೊಂಡರು. ಈ ಘಟನೆಯು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿತಲ್ಲದೆ, ಮಹಾತ್ಮ ಗಾಂಧೀಜಿಯವರನ್ನು ಭಾರತದ ಮುಖಂಡರನ್ನಾಗಿ ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಾಪಿಸಿತು

ಗಾಂಧಿಯವರ ಸತ್ಯ

ಮನೋವಿಜ್ಞಾನಿ ಎರಿಕ್ ಎಚ್. ಎರಿಕ್ಸನ್(1902–1994) ಅವರ ‘ಗಾಂಧಿಯವರ ಸತ್ಯ (ಗಾಂಧೀಸ್ ಟ್ರೂತ್) ‘ 1969ರಲ್ಲಿ ಪ್ರಕಟವಾದ ವಿಶಿಷ್ಟ ಕೃತಿ. ಅವರು ಮನೋವಿಶ್ಲೇಷಣೆ (psychoanalysis), ಮನೋವಿಜ್ಞಾನ ಮತ್ತು ಇತಿಹಾಸವನ್ನು ಸೇರಿಸಿ, ಗಾಂಧೀಜಿಯವರ ಅಹಿಂಸಾತ್ಮಕ ಪ್ರತಿರೋಧ ಹೇಗೆ ರೂಪುಗೊಂಡಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ( ಪುಸ್ತಕಕ್ಕೆ ಆ ವರ್ಷದ ಅಮೆರಿಕದ ಪ್ರತಿಷ್ಟಿತ ಪೊಲೀಟಜರ ಪ್ರಶಸ್ತಿ ಕೂಡ ಬಂದಿತು) . ಅವರ ಬಾಲ್ಯ : ಅವರ ತಂದೆಯಿಂದ “ ತಪ್ಪನ್ನು ಮುಚ್ಚಿಡುವುದಕ್ಕಿಂತ ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದು ಹೆಚ್ಚು ಶಕ್ತಿಶಾಲಿ. ಸತ್ಯವನ್ನು ಒಪ್ಪಿಕೋ. ಪರಿಣಾಮವನ್ನು ಸ್ವೀಕರಿಸು “ ( 1917ರ ಚಂಪಾರಣ ನ್ಯಾಯಾಲಯದಲ್ಲಿ :“ನಾನು ತಪ್ಪು ಮಾಡಿದ್ದೇನೆ… ಹೌದು, ನಾನು ನಿಮ್ಮ ಆದೇಶವನ್ನು ಉಲ್ಲಂಘಿಸಿದ್ದೇನೆ.”) ತಾಯಿಯಿಂದ – ಉಪವಾಸ, ವ್ರತ, ಆಹಾರ ನಿಯಮ, ಸ್ವನಿಯಂತ್ರಣ, ಧಾರ್ಮಿಕ ಪ್ರತಿಜ್ಞೆ — ಇವೆಲ್ಲ ಅವರ ಬಾಲ್ಯದ ವಾತಾವರಣದ ಭಾಗ ! ತನ್ನ ಆಸೆಗಳನ್ನು , ಆಹಾರವನ್ನು , ಕೋಪವನ್ನು ಲೈಂಗಿಕ ಆಸೆಗಳನ್ನು , ದೇಹವನ್ನು ನಿಯಂತ್ರಿಸುವುದು: ಅಂತಿಮವಾಗಿ ಭಯವನ್ನೂ ನಿಯಂತ್ರಿಸುವುದು.ಇದು ಕೇವಲ ವೈಯಕ್ತಿಕ ಗುಣವಾಗಿ ಉಳಿಯುವುದಿಲ್ಲ. ರಾಜಕೀಯ ಶಕ್ತಿಯಾಗಿ ಪರಿವರ್ತಿತವಾಗುತ್ತದೆ .ತನ್ನನ್ನು ತಾನು ಆಳಬಲ್ಲವನು ಮಾತ್ರ ಅನ್ಯಾಯದ ಅಧಿಕಾರದ ಎದುರು ನಿಲ್ಲಬಲ್ಲನು.

ಗಾಂಧೀಜಿಯವರ ಸತ್ಯವೆಂದರೆ ಕೇವಲ ಹೊರಗಿನ ವಾಸ್ತವವನ್ನು ಹೇಳುವುದು ಅಲ್ಲ. ತನ್ನ ಅಂತರಂಗದ ಸತ್ಯವನ್ನು ಕಂಡುಕೊಳ್ಳುವುದು , ಅದನ್ನು ಜೀವನದಲ್ಲಿ ಅನುಸರಿಸುವುದು, ಸತ್ಯದ ಪ್ರಕಾರ ಬದುಕುವುದು ! .ಆದ್ದರಿಂದ ಗಾಂಧೀಜಿಯವರ ಸತ್ಯವನ್ನು ಅವರ ವ್ಯಕ್ತಿತ್ವದಿಂದ ಬೇರ್ಪಡಿಸಲಾಗದು. ಸತ್ಯಾಗ್ರಹದಲ್ಲಿ ಎದುರಾಳಿ ಶತ್ರು ಅಲ್ಲ.ಆದ್ದರಿಂದ ಗಾಂಧೀಜಿ ಪೊಲೀಸರನ್ನು ದ್ವೇಷಿಸುವುದಿಲ್ಲ.ಮ್ಯಾಜಿಸ್ಟ್ರೇಟ್‌ನನ್ನು ದ್ವೇಷಿಸುವುದಿಲ್ಲ. ಬ್ರಿಟಿಷರನ್ನು ವೈಯಕ್ತಿಕವಾಗಿ ದ್ವೇಷಿಸುವುದಿಲ್ಲ.ಆದರೆ ಅನ್ಯಾಯವನ್ನು ಒಪ್ಪುವುದಿಲ್ಲ.ಇದರಿಂದ ಸತ್ಯಾಗ್ರಹ ಒಂದು ರೀತಿಯ ನೈತಿಕ ಸಂವಾದವಾಗುತ್ತದೆ:“ನಾನು ನಿಮ್ಮ ವಿರುದ್ಧವಲ್ಲ; ನೀವು ಮಾಡುತ್ತಿರುವ ಅನ್ಯಾಯದ ವಿರುದ್ಧ.”

ಅಹಮದಾಬಾದ್ ಮುಷ್ಕರದಲ್ಲಿ ಗಾಂಧೀಜಿಯವರ ಸ್ಥಾನ ವಿಶಿಷ್ಟವಾಗಿತ್ತು. ಅವರು ಗಿರಣಿ ಮಾಲೀಕರಾದ ಅಂಬಾಲಾಲ್ ಸಾರಾಭಾಯ್ ಅವರ ಕುಟುಂಬಕ್ಕೆ ನಿಕಟ ಮಿತ್ರರಾಗಿದ್ದರು (ಮಾಲೀಕರ ಪರ), ಅದೇ ಸಮಯದಲ್ಲಿ ಬಡ ಗಿರಣಿ ಕಾರ್ಮಿಕರ ನಾಯಕರಾಗಿದ್ದರು.. ಮುಷ್ಕರ ಸುದೀರ್ಘವಾಗಿ ನಡೆದು, ಕಾರ್ಮಿಕರ ಸೈರ್ಯ ಕುಗ್ಗ ತೊಡಗಿದಾಗ ಗಾಂಧೀಜಿ ತಾವೇ ಸ್ವತಃ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಗಾಂಧೀಜಿಯವರ ಉಪವಾಸ ಮಾಲೀಕರಿಗೆ ನೈತಿಕ ಸವಾಲಾಗಿ ಪರಿಣಮಿಸಿತು. ಇದು ಅವರನ್ನು ನೈತಿಕವಾಗಿ ಇಕ್ಕಟ್ಟಿಗೆ ಸಿಲುಕಿಸಿ, ಕಾರ್ಮಿಕರ ನ್ಯಾಯಯುತ ಶೇ. 35ರಷ್ಟು ವೇತನ ಹೆಚ್ಚಳಕ್ಕೆ ಒಪ್ಪುವಂತೆ ಮಾಡಿತು.

ಗಾಂಧೀಜಿಯವರ ಸತ್ಯಾಗ್ರಹದಲ್ಲಿ ಎದುರಾಳಿಯನ್ನು ಸೋಲಿಸುವುದಕ್ಕಿಂತ ಎದುರಾಳಿಯ ಮನಸ್ಸನ್ನು ಬದಲಿಸುವುದು ಮುಖ್ಯವಾಗುತ್ತದೆ. ಸರ್ಕಾರಕ್ಕೆ ಗಾಂಧೀಜಿಯನ್ನು ಬಲದಿಂದ ಸೋಲಿಸುವ ಸಾಮರ್ಥ್ಯವಿದೆ.ಆದರೆ ಗಾಂಧೀಜಿ ತನ್ನ ಮೇಲೆ ಶಿಕ್ಷೆಯನ್ನು ಸ್ವೀಕರಿಸಲು ಸಿದ್ಧರಾಗಿರುವುದರಿಂದ, ಸರ್ಕಾರದ ನೈತಿಕ ಅಧಿಕಾರವನ್ನೇ ಪ್ರಶ್ನಿಸುತ್ತಾರೆ.ಇಲ್ಲಿ ಸತ್ಯಾಗ್ರಹದ ಒಂದು ಮೂಲಭೂತ ತತ್ವ ಕಾಣುತ್ತದೆ: ಎದುರಾಳಿಗೆ ನೋವು ಕೊಡುವ ಬದಲು ತಾನೇ ನೋವನ್ನು ಸ್ವೀಕರಿಸುವುದು. ಅದು ಎದುರಾಳಿಯ ಮನಸ್ಸಾಕ್ಷಿಯನ್ನು ಜಾಗೃತಗೊಳಿಸಿ, ಇಬ್ಬರನ್ನೂ ನೈತಿಕ ಸತ್ಯಕ್ಕೆ ಮುಖಾಮುಖಿಯಾಗುವಂತೆ ಮಾಡುತ್ತದೆ.

‍ಲೇಖಕರು Admin

3 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading