ವಸಿಷ್ಠ ಆದರ್ಶ ಭಾಸ್ಕರ ಅವರ ಕವಿತೆ ಜಾನಕಿ

ವಸಿಷ್ಠ ಆದರ್ಶ ಭಾಸ್ಕರ

ಮಣ್ಣುಟ್ಟು ಹುಟ್ಟು
ಕರಡಿಗೆಯಲ್ಲಿ ಪಿಳಿಪಿಳಿ ಕಣ್ಬಿಟ್ಟ ಕಂದ
ಎತ್ತರೆತ್ತರದ ಮರಗಳ ನಡುವಿನ ಪುಟ್ಟ ಬಿಳಿಯ ಹೂವು ಜಾನಕಿ

ಅಳುವಂತೆಯೂ ಇಲ್ಲ, ಅತ್ತರೆ ಕೇಳುವವರೂ ಇಲ್ಲ,
ಮಣ್ಣಲ್ಲಿ ಹೂತ ಬಂಗಾರದ ಡಬ್ಬಿಯಲ್ಲಿ
ಕೈಗಿವುಚಿ, ಉಸಿರ ಏರಿಳಿತ ಬಿಗಿಹಿಡಿದು
ಮೊಂಡು ಬಿದ್ದ ನೇಗಿಲ ತುದಿ ಒಡಲ ಗರ್ಭ
ಸೀಳುವ ಸದ್ದನ್ನು ಕಾದು, ಕಿವಿ ನಿಮಿರಿಸಿ
ಹೊರಬಿದ್ದು, ಉಸಿರು ಹುಯ್ದು
ಕಣ್ಣಾಲಿಗಳನ್ನು ತುಂಬಿಕೊಂಡು ಅತ್ತಾಗ
ಜನಕನ ಕಣ್ಣೂ ಒದ್ದೆ ಆಗಿದ್ದವು

ವಾಸ ಸಾಗರದಾಚೆಯ ಮರದ ಪಂಜರದಲ್ಲಿ
ಸುಟ್ಟಿಯೂ ಮುಟ್ಟದ ಪತಿಯ ಪ್ರತಿಷ್ಠೆ
ಕಾಡಲ್ಲಿ ಅಲೆದು, ಹೊಟ್ಟೆಯಲ್ಲಿ
ಹೆಪ್ಪುಗಟ್ಟಿದ ಕೂಸುಗಳ ಹೊರದಬ್ಬಿ
ನಿಗಿ ನಿಗಿ ಹೊಳೆವ ಬದುಕ ಬಿಚ್ಚಿಟ್ಟು
ದಣಪೆಯಾಚೆ ಚಿಗುರು ಹಸಿರ ಕಚ್ಚಿ ಎಳೆವ
ಇಲ್ಲದ ಹೊಳಪಿನ ಸೆಳೆತ ಹೊದ್ದು ನಿಂತಳು

ಒಗ್ಗರಣೆಯ ಕಮಟು ಮನೆಯಲ್ಲಾ ಹರಡಿ
ಸಾಸಿವೆಯ ಚಿಟ-ಪಟ ಸದ್ದಿನ ನಡುವೆ
ಕಾರು, ರೈಲು, ಬಸ್ಸುಗಳ ಹ್ಞೂಕಾರ ಅಡಗಿ
ಒಂದೊಂದು ಕೋಣೆಯ ಮೂಲೆಯಿಂದಲೂ
ಒಂದೊಂದು ಕೂದಲು ಬಿಳಿಯಾಗಿ, ಬೆನ್ನು ಬಾಗಿ
ಮತ್ತೆ ಮಣ್ಣುಟ್ಟಳು ಸೀತೆ

ಮಳೆಹನಿ ಬಿದ್ದು, ಮೊಳೆತು ಗಿಡವಾಗಿ
ಮರವಾಗಿ ಎಲೆಯಾಗಿ ಹಣ್ಣಾಗಿ

ರೆಂಬೆ ಕೊಂಬೆ ಚಾಚಿ ಬೆಳೆದು
ತಿದ್ದಿ ತೀಡಿದ ಬೈತಲೆಗಟ್ಟಿ
ನಾಲ್ಕಾರು ಹನಿ ನೀರು
ಕೂದಲ ತುದಿಯಿಂದ ಇಳಿದು
ಮುಂಬಾಗಿಲ ಹೊಸ್ತಿಲ ದಾಟಿ
ರೆಕ್ಕಿ ಬಿಚ್ಚಿ ಹಾರುವ ದಿನಕ್ಕೆ
ಎದೆಯ ಮೇಲೆ ಕೈ ಇಟ್ಟು

ಕಾದಿಹಳು ಸೀತೆ

‍ಲೇಖಕರು nalike

August 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ನೂತನ

    ತಟ್ಟುವ ಸಾಲುಗಳು.
    ಸೀತೆ , ಅಕ್ಕ…ಬಿಡದೆ ಕಾಡುವ ನಿರಂತರತೆ ಗಳು.
    ಅವರಲ್ಲಿ ಕಾಣದ ತಣ್ಣಗಿನ ಕೆಚ್ಚಿನ ಬಗ್ಗೆ ಹೆಚ್ಚು ಮಾತುಗಳು ಈಗ ಎಲ್ಲೆಡೆ ಆಗಬೇಕಿದೆ. ನೋವಿನ ಬಗ್ಗೆ ಹೇಳಿ ಹೇಳಿದ್ದೇವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: