ರಿಲ್ಕ್ ಎಂಬ ಭಾವ ತೀವ್ರತೆಯ, ಮಿಂಚಿನ ಹೊಳಪಿನ ಕವಿ

 ಎಚ್. ಆರ್. ರಮೇಶ

ರೈನರ್ ಮಾರಿಯ ರಿಲ್ಕ್ ಎಂದರೆ ಥಟ್ಟನೆ ನೆನಪಾಗುವುದು ಪ್ರೀತಿ, ಪ್ರೇಮ, ಪ್ರಣಯ, ಗುಲಾಬಿ ಹೂವುಗಳು, ಗ್ರೀಕ್ ದೇವತೆಗಳು. ಜಾಗತಿಕ ಕಾವ್ಯದಲ್ಲಿ  ನೆರುಡನಷ್ಟೇ ಸ್ಥಾನ ಇವನಿಗೂ ಇದೆ.

ಇವನು ಬರೆಯುವ ಸಂದರ್ಭದಲ್ಲಿ ಯುರೋಪ್ ಮೊದಲ ಮಹಾಯುದ್ಧವನ್ನು ಕಂಡು, ಜರ್ಝರಿತ ಗೊಂಡಿತ್ತು. ಎಲಿಯೆಟ್ ತನ್ನ ವೇಸ್ಟ್ ಲ್ಯಾಂಡ್ ಮತ್ತಿತರೆ ಕವಿತೆಗಳಲ್ಲಿ ಆಧುನಿಕ ನಾಗರೀಕತೆಯ ಕ್ರೌರ್ಯ, ಹತಾಶೆ ಮತ್ತು ರಕ್ತಪಿಪಾಸು, ಭ್ರಮನಿರಸಗಳನ್ನು ಮತ್ತು ಬದುಕಿನ ನಿರರ್ಥಕತೆಗಳನ್ನು ಚಿತ್ರಿಸಿ ಬಹುದೊಡ್ಡ ಹೆಸರು ಮಾಡಿದ್ದ. ಮತ್ತು, ಸಂವೇದನೆ ಮತ್ತು ಕವಿತೆಗಳ ರಚನೆಗಳ ದೃಷ್ಟಿಯಿಂದ ತುಂಬಾ ಭಿನ್ನವಾಗಿಯೇ ಸಾಂಸ್ಕೃತಿಕ ವಲಯವನ್ನು ಸೆಳೆದಿದ್ದ. ಅದೇ ಸಮಯದಲ್ಲಿ ಯೇಟ್ಸ್ ತನ್ನ ‘ಲಿರಿಕಲ್’ ಗುಣವನ್ನು ಇಟ್ಟುಕೊಂಡು ಆಧುನಿಕ ಬದುಕನ್ನು ಮತ್ತು ಪುರಾಣವನ್ನು  ಬೆಸೆದುಕೊಂಡು ತನ್ನ ಕಾವ್ಯಕ್ಕೆ ಹೊಸ ಲಯವನ್ನು ಆಗಲೇ ಕಟ್ಟಿದ್ದ. ಇಂತಹ ಸಂದರ್ಭದಲ್ಲಿಯೇ ಝೆಕಸ್ಲೊವಾಕಿಯಾದಲ್ಲಿ ಹುಟ್ಟಿ ಜರ್ಮನ್‍ ಭಾಷೆಯ ಮಹತ್ವದ ಕವಿಯಾಗಿ ರೂಪುಗೊಂಡವನು ರೈನರ್ ಮಾರಿಯ ರಿಲ್ಕ್.

ಜರ್ಮನ್ ಮತ್ತು ಫ್ರೆಂಚ್ ಎರಡೂ ಭಾಷೆಗಳಲ್ಲಿ ಬರೆದು ಯುವ ಮನಸ್ಸುಗಳಿಗೆ ಹುಚ್ಚೆಬ್ಬಿಸುತ್ತಿದ್ದ. ರಿಲ್ಕ್ ಭಾವ ತೀವ್ರತೆ ಮತ್ತು ಉತ್ಕಟವಾದ ಅನುಭವಗಳ ಮೂಲಕ ದಿವ್ಯ ಪ್ರೇಮದ ವಿರಾಟ್ ಸ್ವರೂಪವನ್ನು ಭಾಷೆಯಲ್ಲಿನ ಶ್ರೇಷ್ಟ ಮಟ್ಟದ ಲಿರಿಕಲ್ ಸೊಗಡನ್ನು ತುಂಬಿ ಯುವ ಮನಸ್ಸುಗಳ ಹೃದಯಗಳಿಗೆ ಲಗ್ಗೆ ಇಟ್ಟು ತನ್ನ ಸರೀಕರನ್ನು ಹುಬ್ಬೇರಿಸುವಂತೆ ಮಾಡಿದ್ದ. ಯೇಟ್ಸ್‍ನಂತೆ ಇವನೂ ಸಹ ಆಧುನಿಕ ಸಂವೇದನೆಯಿರುವ ಪುರಾಣ ಪ್ರಿಯ. ಬದುಕಿನ ನಿರರ್ಥಕತೆ, ನೋವು, ಹತಾಶೆ ಹಾಗೂ ಪ್ರೇಮ, ವಿರಹಗಳು ಇವನ ಕಾವ್ಯದ ಮೂಲ ಭಿತ್ತಿಗಳು. ಲೌಕಿಕ ಮತ್ತು ಅಲೌಕಿಕ ಎರಡನ್ನೂ ಹದವಾಗಿ ಬೆರೆಸಿ ಬದುಕಿನ ಸತ್ಯಗಳಿಗೆ ಮತ್ತು ವಾಸ್ತವದ ಸಂಗತಿಗಳಿಗೆ ಎದುರಾಗುವ ಇವನ ಕವಿತೆಗಳು ಮನಸೂರೆಗೊಳ್ಳುವ ಚೈತನ್ಯವ ತುಂಬಿಕೊಂಡಿವೆ. ತನ್ನ ಕವಿತೆಗಳ ಚುಂಬಕ ಶಕ್ತಿಯ ಮೂಲಕ ಯುವ ಮನಸ್ಸುಗಳನ್ನಷ್ಟೇ ಅಲ್ಲ ತನ್ನ ಕಾಲದ ಕವಿಗಳನ್ನೂ ಸೆಳೆದಿದ್ದಾನೆ. ಇವನ ಕವಿತೆಗಳ ಮೂಲಕ ಜರ್ಮನ್ ಭಾಷೆ ಸೃಜನಶೀಲತೆಯ ಉನ್ನತ ಮಟ್ಟವನ್ನು ತಲುಪಿದೆ ಎನ್ನುವುದು ಅನೇಕ ವಿಮರ್ಶಕರ ಅಭಿಪ್ರಾಯ. ಇವನು ತಾನು ಕಂಡು ಉಂಡ ಅನುಭವವನ್ನು ‘ಅನುಭಾವ’ದ ನೆಲೆಯಲ್ಲಿ ಕಟ್ಟಿಕೊಡುವುದರ ಮೂಲಕ ಧರ್ಮದ ಸೋಂಕಿಲ್ಲದ ‘ದೈವತ್ವ’ಕ್ಕೆ ಕೊಂಡೊಯ್ಯುತ್ತಾನೆ. ಅಲ್ಲಿ ವ್ಯಕ್ತಗೊಳ್ಳುವುದು ಕೇವಲ ಪರಿಶುದ್ಧ ಪ್ರೇಮ.

ಇವನನ್ನು ಜಗತ್ತಿನ ಅನೇಕ ಭಾಷೆಗಳು ಪ್ರೀತಿಯಿಂದ ಆಲಂಗಿಸಿಕೊಂಡಿವೆ. ಇವನು ಅಲ್ಲಿಗೆ ಹೋಗಿ ಅಲ್ಲಿಯವನೇ ಆಗಿ ‘ಕಲೆ’ಗೆ ಮತ್ತು ಮನುಷ್ಯನ ಕೆಲವು ಸಾರ್ವತ್ರಿಕವೆನ್ನಬಹುದಾದ ‘ಭಾವನೆ’ಗಳಿಗೆ ಯಾವ ಕಾಲಾದೇಶದ ಹಂಗಿಲ್ಲದಿರುವುದನ್ನು ತೋರಿಸಿಕೊಟ್ಟಿದ್ದಾನೆ. ಕನ್ನಡಕ್ಕೆ ಕನ್ನಡದ ಸೂಕ್ಷ್ಮ ಸಂವೇದನೆಯ ಕವಿ ಮನಸ್ಸಿನ ವಿಮರ್ಶಕ ಎಚ್.ಎಸ್.ರಾಘವೇಂದ್ರ ರಾವ್ ಅವರು ‘ಮಂಜಿನ ಶಿವಾಲಯಕ್ಕೆ’ ಎನ್ನುವ ಶೀರ್ಷಿಕೆಯಡಿ ಇವನ ಕವಿತೆಗಳನ್ನು ತಂದಿದ್ದಾರೆ. ಈಗಾಗಲೇ ಅನೇಕರು ಇವನನ್ನು ಕನ್ನಡಕ್ಕೆ ಪರಿಚಯಿಸಿದ್ದರೂ ಇಷ್ಟೊಂದು ಸಮಗ್ರವಾಗಿ ಕನ್ನಡಕ್ಕೆ ತಂದಿರಲಿಲ್ಲ.

‘ಮಂಜಿನ ಶಿವಾಲಯಕ್ಕೆ’ ಎನ್ನುವ ಈ ಹೆಸರಿಗೆ ಈ ಮಣ್ಣಿನ ಗಂಧವಿದೆ. ಜೊತೆಗೆ, ಇಲ್ಲಿಯ ಭಾಷೆಯ ಮತ್ತು ಅಲೌಕಿಕತೆ ಹಾಗು ಅನುಭಾವಗಳ ಸ್ಪರ್ಶ ಸಿಕ್ಕಿದೆ. ಇದು ಇಲ್ಲಿಯದೇ ಆಗಿದೆ. ಜೆಕ್‍ಸ್ಲೋವಾಕಿಯದಲ್ಲಿ ಹುಟ್ಟಿ, ಜರ್ಮನ್ ಹಾಗು ಫ್ರೆಂಚ್ ಭಾಷೆಗಳಲ್ಲಿ ರಚಿತಗೊಂಡ ರಿಲ್ಕ್ ನ ಕವಿತೆಗಳು ಇಲ್ಲಿಯವೇ ಆಗಿವೆ. ‘ಆಗು’ವುದರಲ್ಲೇ ‘ಮಾಗು’ವುದು. ಇಲ್ಲಿಯ ಅನುವಾದಗಳು ಅನುವಾದ ‘ಆಗಿ’ ಇಲ್ಲಿ ‘ಮಾಗಿ’ವೆ. ಇವು ಪರಿಪಕ್ವವಾದಂತಹ ಮತ್ತು ಸಾಲಿಡ್ ಆದಂತಹ ಅನುವಾದಗಳು. ಒಂದು ಭಾಷೆ ಇನ್ನೊಂದು ಭಾಷೆಗೆ ಈ ರೀತಿ ಹೋಗಿ ಬೆರೆತರೆ ಭಾಷೆಗೂ ಸಾರ್ಥಕ. ಅನುವಾದಕ್ಕೂ ಹೆಗ್ಗಳಿಕೆ. ಎಚ್.ಎಸ್.ಆರ್ ಇಂತಹ ಒಂದು ಬೆರಗು ಹುಟ್ಟಿಸುವ ಪ್ರಯತ್ನವನ್ನು ಪರಿಶುದ್ಧ ಪ್ರೀತಿಯಿಂದ ಮಾಡಿದ್ದಾರೆ. ಅವರು ರಿಲ್ಕ್ ನನ್ನು ‘ಅಲ್ಲಿಂದ’ ಎಳೆದು ತಂದಿಲ್ಲ; ಬದಲಿಗೆ, ‘ಅಲ್ಲಿ’ ಮುಳುಗಿ, ‘ಇಲ್ಲಿ’ ತೇಲಿದ್ದಾರೆ. ಕನ್ನಡ ಭಾಷೆಯ ದಡವನ್ನು ನಿರಾಯಾಸವಾಗಿ ಮುಟ್ಟಿದ್ದಾರೆ. ಇದರ ಹಿಂದೆ ಅವಿರತ ಶ್ರಮ, ಬದ್ಧತೆ, ಭಾಷೆಯ ಜೊತೆಗಿನ ಸೆಣೆಸಾಟವಿದ್ದರೂ ಅವು ಯಾವುವು ಇಲ್ಲಿ ಗೊತ್ತಾಗದ ರೀತಿಯಲ್ಲಿ ರೂಪುಗೊಂಡಿದೆ.

ಅನುವಾದ ಲೋಕ ಲೋಕಗಳ ನಡುವೆ ಘಟಿಸುವ ಒಂದು ಸಂಪರ್ಕ ಸೇತುವೆ. ಅಷ್ಟೇ ಅಲ್ಲ, ಬೇರೆಯದನ್ನು ‘ತನ್ನ’ದನ್ನಾಗಿ ಮಾಡಿಕೊಂಡು ಮತ್ತೆ ಹೊಸ ರೀತಿಯಲ್ಲಿ ಸೃಷ್ಟಿಮಾಡುವ ಸೃಜನಶೀಲತೆ. ಹಾಗೂ ಅನುವಾದವೂ ಒಂದು ಓದು, ಒಂದು ವಿಶ್ಲೇಷಣೆ, ಒಂದು ದೃಷ್ಟಿಕೋನ. ಹಾಗಾಗಿ ಅನುವಾದಕ್ಕೆ ಮೂಲ ಕೃತಿಯನ್ನು ಇನ್ನಷ್ಟು ಹಿಗ್ಗಿಸುವ , ಚಿಂತನೆಗೆ ಹಚ್ಚುವ ಒಂದು ಶಕ್ತಿ ಇರುತ್ತದೆ. ಅನುವಾದದ ಕ್ರಿಯೆಯಲ್ಲಿಯೇ ವಿಮರ್ಶೆಯೂ ಅಂತರ್ಗತವಾಗಿ ಸೇರಿಕೊಂಡು ಲೋಕಕ್ಕೆ, ಓದುಗರಿಗೆ ಒಂದು ರೀತಿಯ ಸಹಾಯಮಾಡುತ್ತದೆ. ಅನುವಾದಕ್ಕೆ ಇರುವ ಮತ್ತೊಂದು ವಿಶಿಷ್ಟವಾದಂತಹ ಗುಣವೆಂದರೆ ಅನುವಾದದ ಮೂಲಕ ಇನ್ನೊಂದು ಅನುಭವದೊಳಗೆ ಪಯಣವ ಬೆಳೆಸುವು ಸುಯೋಗ. ಒಂದು ಜೀವ ಮತ್ತೊಂದು ಜೀವದೊಳಗೆ ಮಿಳಿತಗೊಳ್ಳುವುದು. ‘ಅನ್ಯ’ದನ್ನು ‘ತನ್ನ’ದನ್ನಾಗಿ ಮಾಡಿಕೊಳ್ಳುವುದು. ರಿಲ್ಕ್ ತಾನು ಸಂಚರಿಸಿದ ಜರ್ಮನ್, ಫ್ರಾನ್ಸ್, ಆಸ್ಟ್ರಿಯಾ, ರಷ್ಯಾ ಮುಂತಾದ ಯುರೋಪಿನ ದೇಶಗಳ ‘ಸ್ನೋ’, ‘ಫಾಗ್’ ಮತ್ತು ಧ್ಯಾನಿಸಿದ ‘ದಿವ್ಯ ಪ್ರೇಮ’ ಕನ್ನಡಕ್ಕೆ ಎಚ್.ಎಸ್. ಆರ್ ಅವರ ಮಾಂತ್ರಿಕ ಸ್ಪರ್ಶದಲ್ಲಿ  ‘ಮಂಜಿನ ಶಿವಾಲಯ’ವಾಗಿ ರೂಪತಾಳಿವೆ. ಪುರಾಣದಲ್ಲಿ ಕಂಡಂತೆ ಶಿವ-ಪಾರ್ವತಿಯರ ಸಾಂಗತ್ಯ ದಿವ್ಯ ಪ್ರೇಮಕ್ಕೆ ಇರುವ ಅತ್ಯುತ್ತಮ ಉದಾಹರಣೆ. ಅವರಿಬ್ಬರೂ ಪ್ರೀತಿಯನ್ನು ಅನುಭವಿಸಿದಷ್ಟೇ ವಿರಹವನ್ನೂ ಅನುಭವಿಸಿದ್ದಾರೆ. ಅದು ಮತ್ರ್ಯದ ಮಣ್ಣಿನಲ್ಲಿ ಹುಟ್ಟಿ ಸಾಮಾನ್ಯರು ಪಡುವ ಪಾಡಂತೆ ಅನುಭವಿಸಿದ್ದಾರೆ. ಈ ಶೀರ್ಷಿಕೆಗೆ ದೇಸಿ ಸೊಗಡಿನ ಶಕ್ತಿಯೂ ಅದೃಷ್ಟದಂತೆ ದಕ್ಕಿದೆ, ಸಿಕ್ಕಿದೆ.

ರಿಲ್ಕ್ ತನ್ನ ತೀವ್ರವಾದಂತಹ ಕವಿತೆಗಳ ಮೂಲಕ ದೇಶಕಾಲವನ್ನು ಮೀರಿ ಆವರಿಸಿಕೊಂಡಿದ್ದಾನೆ. ಅವನಿಗೆ ಭಾಷೆ ಎನ್ನುವುದು ನಿಮಿತ್ತ ಮಾತ್ರ. ಅದರೊಳಗಿನ ಭಾವ, ಅಭಿವ್ಯಕ್ತಿ ಇಡೀ ಜಗತ್ತಿನದು. ಹಾಗಾಗಿಯೇ ಶೇಕ್ಸಿಪಿಯರ್‍ನಂತೆ ರಿಲ್ಕ್ ನಮ್ಮವನಾಗಿ ಬಿಡುತ್ತಾನೆ. ಎಚ್. ಎಸ್.ಆರ್ ಅವರು ತಮ್ಮ ಕನ್ನಡವನ್ನು ಪಾಕಗೊಳಿಸಿ, ಹದವಾಗಿ ಅದನ್ನು ರಿಲ್ಕನ ಪದ್ಯಗಳ ಮೇಲೆ ಹೊಯ್ದಿದ್ದಾರೆ. ಅದರ ಮೂಲಕ ಅವನನ್ನು ಕನ್ನಡದ ಮನಸುಗಳೊಳಗೆ ಆವರಿಸುವಂತೆ ಮಾಡಿದ್ದಾರೆ. ಅನುವಾದ ಅನುವಾದದಂತೆ ಕಾಣಬೇಕು ಮತ್ತು ಕಾಣದಂತೆಯೂ ಇರಬೇಕು. ಇದು ‘ಆಗಿ’ದೆ ‘ಇಲ್ಲಿ’. ಇಲ್ಲಿ ಕವಿ ಕೀಟ್ಸ್ ನಂತೆ ಕ್ರಿಸ್ಪಿಯಾಗಿ, ಸರಿಯಾಗಿ ಹೊಂದುವಂತಹ ಪದಗಳನ್ನು ಬಳಸಿರುವುದನ್ನು ಇಡೀ ಸಂಕಲನದ ಉದ್ದಕ್ಕೂ ಕಾಣಬಹುದು. ಮೊದಲನೇ ಕವಿತೆಯೇ ಅದನ್ನು ನಮಗೆ ಮನಗಾಣಿಸುತ್ತದೆ:

 

‘ಕಿತ್ತುಬಿಡು ಕಣ್ಣುಗಳನು: ಆಗಲೂ ನಿನ್ನನ್ನು ನೋಡಬಲ್ಲೆ
ಕಳಚಿಹೋಗಲಿ ಶಬ್ದಸುಖ ಕಿವಿಯಿಂದ: ನಿನ್ನ ದನಿ ಕೇಳಬಲ್ಲೆ
ಅತ್ತಲಿತ್ತ ಹೋಗದಂಥ ಹೆಳವನಾದರು ಕೂಡ..

ಈ ಕವಿತೆಯಲ್ಲಿ ಅಭಿವ್ಯಕ್ತಗೊಂಡಿರುವ ದಿವ್ಯಪ್ರೇಮದ ಹಂಬಲಕ್ಕೆ ‘ಮಿಸ್ಟಿಕಲ್’ ಎನ್ನಬಹುದಾದ ಗುಣ ಸ್ವಾಭವಿಕವಾಗಿ ದಕ್ಕಿದೆ. ಅದನ್ನು ಎಚ್.ಎಸ್.ಆರ್ ಹನ್ನೆರಡನೇ ಶತಮಾನದ ವಚನಗಳನ್ನು ನೆನಪಿಸಿ ಅಲ್ಲಿಯ ಭಾಷೆಯ ಸ್ಪರ್ಶವನ್ನು ರಿಲ್ಕ್‍ಗೆ ಕೊಟ್ಟಿದ್ದಾರೆ. ಹನ್ನೆರಡನೇ ಶತಮಾನದ ವಚನಗಳಲ್ಲಿ ‘ಅರಿವು’ತುಂಬಿದ ಭಕ್ತಿಯ ಪರಾಕಾಷ್ಠೆಯನ್ನು ಕಂಡಂತೆ ರಿಲ್ಕ್ ನಲ್ಲಿ ಪ್ರೇಮ ಉತ್ಕಟತೆಯನ್ನು ಕಾಣಬಹುದು. ಈ ಕವಿತೆ ರಿಲ್ಕ್ ನ ‘ಸಿಗ್ನೇಚರ್’ಕವಿತೆಯಂತಿದೆ. ಮುಂದೆ ಇರುವ ಕವಿತೆಗಳಿಗೆ ಇದು ‘ಬೀಜಾಕ್ಷರ’ವಾಗಿದೆ. ರಿಲ್ಕ್ ಇಲ್ಲಿ  ತಾನು ಹೇಳುತ್ತಿರುವುದು ತಾನು ಕಂಡ, ಅನುಭವಿಸಿದ ಹಾಗು ತನ್ನ ಹಂಬಲವಾದ ಲೋಕದ ಎಲ್ಲ ವಿಕರ್ಷಣೆಗಳನ್ನು ಮೀರಿದ ‘ಡಿವೈನ್‍ಲವ್’. ಕೇವಲ ಪರಿಶುದ್ಧ ಪ್ರೀತಿ. ಅಲ್ಲಿ ಮನುಷ್ಯನಿಗೆ ಕರುಣೆ, ಮನುಷ್ಯತ್ವ  ತುಂಬಿರುವ ಜೀವರಸ ಜಿನುಗುವುದು ಎನ್ನುವುದನ್ನು. ಜೊತೆಗೆ ‘ನಾನು ಹೇಳುತ್ತಿರುವುದು ಇದನ್ನು ಮಾತ್ರ. ನನಗೆ ಗೊತ್ತಿರುವುದು ಇದು ಮಾತ್ರ. ಲ್ಯಾಟಿನ್ ಅಮೇರಿಕದ ಪ್ರಸಿದ್ಧ ಪಾಪ್ ಗಾಯಕಿ ಶಕೀರಾ ತನ್ನ ಹಾಡೊಂದರಲ್ಲಿ ‘ಹಿಪ್ಸ್ ಡೋಂಟ್ ಲೈ’ ಎಂದು ಹೇಳುತ್ತಾಳಲ್ಲ ಹಾಗೆ. ರಿಲ್ಕ್ ಗೆ ಕವಿತೆ.  ಅವಳಿಗೆ ಹಾಡು, ಕುಣಿತ! ಮುಂದಿನ ಕವಿತೆ ‘ಅತಿಥಿ’ಯಲ್ಲಿನ ಮಿಂಚಿನಂತಿನ ಸಾಲುಗಳು ಬದುಕಿನ ಸತ್ಯಗಳನ್ನು ಹೀಗೆ ಹೇಳುತ್ತವೆ:

‘ತನ್ನ ಗುಟ್ಟುಗಳನ್ನು ಹೊರಗಿಟ್ಟು ಹಾಗೆಲ್ಲ
ನೀನು ಇನ್ನಷ್ಟು ಮತ್ತಷ್ಟು ಅವಳ ಒಳಗೊಳ್ಳುವೆ
ಮತ್ತು ಅವಳು, ತನ್ನನ್ನು ಕಟ್ಟಿಹಿಡಿದಿರುವ
ಮೇರೆಗಳನ್ನು ಮೀರಿ ಹರಡಿಕೊಳ್ಳುತ್ತಾಳೆ’

ಎರಡುವರೆ ಸಾವಿರ ವರ್ಷಗಳು ಕಳೆದರೂ ಬುದ್ಧ ಇಂದಿಗೂ ತನ್ನ ಪ್ರೀತಿಯ ತತ್ವದ ಮೂಲಕ ಜಗವನ್ನು ಸೆಳೆಯುತ್ತಲೇ ಇದ್ದಾನೆ. ರಿಲ್ಕ್ ಬುದ್ಧನನ್ನು ಹೀಗೆ ಕಾಣುತ್ತಾನೆ:

‘ಕಾಣದ ಲೋಕದ ಯಾವುದೋ ಬೆಳಕು
ನೆರವಾಗಿದೆ ಅದಕೆ’

ತನ್ನ ಗೆಳತಿ ಪೌಲಾ ಬೆಕರ್ ಳ ಕುರಿತು ಇರುವ ಕವಿತೆ ಮರಳಿ ಬಂದ ಗೆಳತಿಗೆ: ವಿದಾಯ ಕೇವಲ ಒಂದು ವ್ಯಕ್ತಿ ಚಿತ್ರಣದಂತೆ ಇರದೆ ಬದುಕನ್ನೇ ಕುರಿತು ಮತ್ತು ಕಲೆಯನ್ನು ಕುರಿತು ತನ್ನ ಕಾವ್ಯ ಶಕ್ತಿಯನ್ನೆಲ್ಲ ಬಸಿದು ಚಿತ್ರಿಸಿದಂತಿದೆ. ಇಲ್ಲಿ ಅನೇಕ ಒರಿಜಿನಲ್ ಎನ್ನಬಹುದಾದ ಇಮೇಜ್‍ಗಳನ್ನು ಕಾಣಬಹುದು. ಪೌಲಾ ಬೆಕರ್ ಳನ್ನು ಒಂದು ಹೆಣ್ಣಾಗಿ ನೋಡುತ್ತ ಅವಳ ಒಳ ತುಮುಲಗಳನ್ನು ಮನಮುಟ್ಟುವಂತೆ ರಿಲ್ಕ್ ಅಭಿವ್ಯಕ್ತಿಸಿದ್ದಾನೆ. ಜೊತೆಗೆ ಹೆಣ್ಣಿನ ಸ್ವಾತಂತ್ರ್ಯಕ್ಕೆ ಪಿತೃಪ್ರಧಾನ ಸಮಾಜವು ಹೇಗೆಲ್ಲ ಅಡ್ಡಿಯುಂಟು ಮಾಡುತ್ತದೆ ಎನ್ನವುದನ್ನು ಮನಮುಟ್ಟುವಂತೆ ಕವಿತೆಯಲ್ಲಿ ತೋರಿಸಿದ್ದಾನೆ. ಅವಳು ಅವನಿಗ ಗೆಳತಿಯೂ ಹೌದು. ಮತ್ತು ಅವನ ಮನಸ್ಸಿನ ಮೂಲೆಯಲ್ಲಿ ಬೆಳ್ಳಿಗೆರೆಯಂತೆ ಇರುವ ಸ್ಫೂರ್ತಿಯ ಚಿಲುಮೆಯೂ ಹೌದು. ಯಾಕೆಂದರೆ ಮೊದಮೊದಲಿಗೆ ಅವಳನ್ನು ತುಂಬ ಇಷ್ಟಪಟ್ಟಿದ್ದನು ಎನ್ನುವ ಮಾತೂ ಇದೆ. ಇಲ್ಲಿ ಪೌಲಾ ಬೆಕರ್ ನಿಮಿತ್ತ ಮಾತ್ರ. ಅವಳ ಮೂಲಕ ಪರಿಶುದ್ಧವಾದ ಪ್ರೀತಿ, ಬಾಂಧವ್ಯ, ಸ್ನೇಹ, ಸಾಂಗತ್ಯಗಳನ್ನು ಕುರಿತು ಮೆಲುದನಿಯಲ್ಲಿ ಹೇಳುತ್ತ ಅವಳನ್ನು ಅಪರೂಪವೆನ್ನುವ ಇಮೇಜ್‍ಗಳಲ್ಲಿ ಕೊಲಾಜ್ ಮಾಡುತ್ತಾನೆ. ಅವಳೂ ಸಹ ಸುಪ್ರಸಿದ್ಧ ಚಿತ್ರಕಲಾವಿದೆ. ಅವಳಿಗೆ ಒಂದು ಕಡೆ ಕಲೆಯ ಮೂಲಕ ಬದುಕಿನ ಸಾರ್ಥಕತೆಯನ್ನು ಕಾಣುವ ಹಂಬಲ ಮತ್ತು ಇನ್ನೊಂದು ಕಡೆ ಸಂಸಾರದ ಜಂಜಡಗಳು. ಅವಳ ಬದುಕಿನ ಸ್ಥಿತಿಯನ್ನು ರಿಲ್ಕ್ ಹೀಗೆ ಹೇಳುತ್ತಾನೆ:

..ನಿನ್ನೆಲ್ಲ ಜೀವಿತವ ಬಯಸಿ ಕಾಡಿತು ಅದು,/ಸರಿ, ಹೋದೆ ನೀನು, ಚೂರಾದೆ ನೀನು ಮತ್ತೆ ಹೊರಬಂದೆ ಉಡಹಿಡಿತದಿಂದ..

ಆದರೆ ಅವಳ ಅಕಾಲಿಕ ಮರಣ ರಿಲ್ಕ್ ನನ್ನು ಬಹುವಾಗಿ ಕಾಡುತ್ತದೆ. ಅವಳ ಅಗಲಿಕೆ ಅವನಿಗೆ ಒಂಟಿತನ, ಖಾಲಿತನಗಳನ್ನು ಉಂಟುಮಾಡುತ್ತದೆ. ಆದರೆ ಅವನು ಮುಂದೆ ಹೇಳುತ್ತಾನೆ ಬದುಕಿನ ನರಕಕ್ಕೆ ಮತ್ತೆ ಬರಬೇಡ ಸಾಧ್ಯವಾದರೆ ತನಗೆ ನೆರವಾಗಲಿ ಎಂದು ಬಯಸುತ್ತಾನೆ. ನೆರವಾಗಲಿ ಎಂದರೆ ಒಂದು ನೈತಿಕ ಶಕ್ತಿಯಾಗಿ, ಸ್ಫೂರ್ತಿಯಾಗಿ.

ಈ ಸಂಕಲನದ ಮೊದಲ ನಲವತ್ತೆರಡು ಕವಿತೆಗಳಲ್ಲಿ ಕವಿಯ ಧ್ಯಾನಸ್ಥ ಮನಸ್ಥಿತಿಯನ್ನು ಕಾಣಬಹುದು. ಒಂಟಿತನ, ಪ್ರೇಮ ಮತ್ತು ಅನೇಕ ಸಂಗತಿಗಳು ಕವಿತೆಗೆ ಸಿಕ್ಕು ಅಲೌಕಿಕದ ಮೆರಗನ್ನು ಪಡೆದಿರುವುದನ್ನು ಕಾಣಬಹುದು. ರಿಲ್ಕ್‍ನಿಗೆ ಕವಿತೆ ಕೇವಲ ಕಲೆಗಾಗಿ ಅಲ್ಲ, ಬದಲಿಗೆ, ಅದು ಲೋಕವನ್ನು ಅರಿಯುವ ಹಾದಿ. ಮಲಗುವ ಮೊದಲು ಕವಿತೆಯಲ್ಲಿ ರಿಲ್ಕ್ ಹೇಳುತ್ತಾನೆ:

ನಾನು,/ಯಾರನ್ನಾದರೂ ಹಾಡಿ ಮಲಗಿಸಬೇಕು/ಒಡನೆ ಕುಳಿತಿರಬೇಕು, ಹೃದಯ ಹಂಚಿರಬೇಕು/ನಿನ್ನ ತೊಟ್ಟಿಲೊಳಿಟ್ಟು ತೂಗಬೇಕು,/ಮೆಲುದನಿಯ ಹಾಡಿನಲಿ ಮೈಮರೆಸಬೇಕು. ಮತ್ತೆ ಮುಂದುವರೆದು ಕವಿತೆಯ ಕೊನೆಯಲ್ಲಿ

ನನ್ನ ಕಣ್ಣುಗಳು ವಿರಮಿಸುತ್ತವೆ ನಿನ್ನ ಬಿಡುಗಣ್ಣ ಮುಖದ ಮೇಲೆ ಎನ್ನುತ್ತಾನೆ.

ಪ್ರೀತಿ ತುಂಬಿದ ಮನಸ್ಸು ಎಂಥಹ ನೋವನ್ನಾದರೂ ಸಹಿಸುತ್ತದೆ. ಕೊನೆಗೆ ಹಿಂಸೆ/ಕ್ರೌರ್ಯಗಳನ್ನು ಕರಗಿಸಿ ಮನುಷ್ಯತ್ವದ ಸಿಂಚನವನ್ನು ಚಿಮ್ಮಿಸುತ್ತದೆ. ಅಳಲು ಎನ್ನುವ ಕವಿತೆಯಲ್ಲಿ ಕವಿ ಎಲ್ಲವನ್ನೂ ಕಳಕೊಂಡರೂ ಬದುಕುವ ಹುಮ್ಮಸ್ಸನ್ನು ಕಳೆದುಕೊಳ್ಳದೆ ಬದುಕುವ ವ್ಯಾಮೋಹದ ಕುರಿತು ಬರೆಯುತ್ತಾನೆ:

ನಾಶವಾದ ನಕ್ಷತ್ರಗಳಲ್ಲಿ/ಒಂದಾದರೂ/ಬದುಕಿರಬಹುದು ಇನ್ನೂ,/ಅದು ಯಾವುದೆಂದು,ನನಗೆ ಗೊತ್ತೆಂದು/ಅನಿಸುತ್ತಿದೆ ನನಗೆ

ಮಾಗಿ ಕಾಲದ ಒಂದು ಚಿತ್ರಣವನ್ನು ಕವಿ ಹೀಗೆ ವರ್ಣಿಸುತ್ತಾನೆ:

ಎಲೆಗಳು ಬೀಳುತ್ತಿವೆ/ಯಾವುದೋ ಎತ್ತರದಿಂದ ಉದುರಿತ್ತಿವೆಯೆನ್ನುವಂತೆ/ಸ್ವರ್ಗದ ನಂದನಗಳು ಒಣಗಿವೆಯೆನ್ನುವಂತೆ

ಲಾಸ್ಟ್ ಸಪ್ಪರ್‍ನ್ನು ಮುಗಿಸಿಕೊಂಡು ಹೊರಡುವ ಜೇಸಸ್ ಕವಿಯ ಕಣ್ಣಲ್ಲಿ ಕಾಣುವುದು ಈ ಬಗೆಯಲ್ಲಿ:

ಎಲ್ಲೆಲ್ಲೂ ಹರಡಿರುವ ಎಲ್ಲರೊಳಗೂ ಇರುವ/ಮಬ್ಬಿನಲಿ ಮುಳುಗಿರುವ ಬೆಳಕಂತೆ ಅವನು

 

ರಿಲ್ಕ್‍ನ ಎಲಿಜಿಗಳು ತುಂಬ ಪ್ರಸಿದ್ಧಿಯನ್ನು ಪಡೆದಿವೆ. ಸಾಮಾನ್ಯವಾಗಿ ಎಲಿಜಿಗಳಲ್ಲಿ ಸಾವು ಮತ್ತು ಸಾವಿಗೂ ಮುಂಚಿನ ಬದುಕು ಮತ್ತು ಭವಿಷ್ಯದಲ್ಲಿ ಸತ್ತವರು ಹೇಗೆಲ್ಲ ನೆನಪುಗಳಲ್ಲಿ ಕಾಡುತ್ತಾರೆ ಎನ್ನವುದನ್ನು ಚಿತ್ರಿಸಲಾಗುತ್ತದೆ. ಆದರೆ ಇಲ್ಲಿಯ ಕವಿತೆಗಳು ತೀರಾ ಭಿನ್ನ. ಬದುಕಿನ ನೋವೇ ಇಲ್ಲಿಯ ಎಲಿಜಿಗಳ ಮುಖ್ಯ ಸ್ಥಾಯಿಭಾವ. ಅಷ್ಟರಮಟ್ಟಿಗೆ ಬದುಕನ್ನೇ ಪರ್ಸಾನಿಫೈಮಾಡಿ ಇಡಲಾಗಿದೆ. ಇಡೀ ಮನುಕುಲದ ನೋವನ್ನು ಸಾಂದ್ರೀಕರಿಸಿ ಕವಿ ತನ್ನಪಾಡಿಗೆ ತಾನು ಮಾತಾಡಿಕೊಂಡು, ಹಾಡಿಕೊಂಡು ಹೋಗಿದ್ದಾನೆ. ಇಲ್ಲಿ ರಿಲ್ಕ್ ನ ಸೃಜನಶೀಲತೆ ಉತ್ಕೃಷ್ಟತೆಯನ್ನು ಕಾಣಬಹುದು. ಎಚ್.ಎಸ್.ಆರ್ ಅವರು ಈ ಎಲಿಜಿಗಳನ್ನು ಕುರಿತು ಹೀಗೆ ಹೇಳಿದ್ದಾರೆ: ‘ಹತ್ತು ಸುದೀರ್ಘ ಕವಿತೆಗಳ ಈ ಗೊಂಚಲು ರಿಲ್ಕ್ ತನ್ನೊಳಗೆ ಮತ್ತು ಲೋಕದೊಳಗೆ ಹಾಗೂ ಸಂಬಂಧಗಳ ಹುಸಿ-ದಿಟಗಳೊಳಗೆ ನಡೆಸಿರುವ ತೀವ್ರ ಹುಡುಕಾಟಗಳ ಕಲಾತ್ಮಕ ದಾಖಲೆ’. ಬ್ಲೇಕ್ ನಂತೆ ರಿಲ್ಕ್ ಈ ಎಲಿಜಿಗಳನ್ನು ಅತೀಂದ್ರೀಯ ಶಕ್ತಿಯೊಂದು ‘ಹೊಳೆಯಿಸಿ’ ಬರೆಸಿದೆ ಎಂದು ನಂಬುತ್ತಾನೆ. ಇಂತಹ ಧೋರಣೆಯನ್ನು ಕಟು ಮಾರ್ಕ್ಸವಾದಿ -ಮಟೀರಿಯಲಿಸ್ಟಿಕ್ ದೃಷ್ಟಿಕೋನದಿಂದ ಜರಿದರೂ ಕಾವ್ಯದ ಧ್ಯಾನದ ತೀವ್ರತೆಯಲ್ಲಿ  ಹೀಗಾಗುವುದು ಸಹಜ. ಕವಿತೆಯೆನ್ನುವುದು ಕೇವಲ ಭೌತಿಕ ಸಂಗತಿಗಳಿಗಷ್ಟೇ ಸೀಮಿತವಾಗಿರುವಂತಹದ್ದಲ್ಲವಲ್ಲ!

ತಾಂತ್ರಕವಾಗಿ ಇಲ್ಲಿಯ ಎಲಿಜಿಗಳನ್ನು ಹತ್ತು ವಿಭಾಗಗಳಾಗಿ ಕವಿಯೇ ಸ್ವತಃ ವಿಂಗಡಿಸಿದ್ದರೂ ಅನಿತ್ಯದ ಬದುಕಿಲ್ಲಿನ ನೋವು, ಹತಾಶೆ, ನಿರಾಸೆಗಳು ಎಲ್ಲ ಕವಿತೆಗಳ ಮುಖ್ಯ ಧಾರೆ. ಅಲ್ಲಿ ಕಳೆದುಕೊಂಡಿರುವ ಮುಗ್ಧತೆ ಇದೆ, ಕೈ ತಪ್ಪಿ ಹೋದ ಪ್ರೇಮ ಇದೆ, ಕಾಡುವ ವಿರಹ, ನಿತ್ಯ ಬದುಕಿನ ಜಂಜಡ ಹಾಗು ಏಕತಾನತೆಗಳು ಎಲ್ಲ ಕವಿತೆಗಳಲ್ಲೂ ಹರಿಯುತ್ತವೆ. ಜೊತೆಗೆ ಅನಿಶ್ಚಿತವಾದಂತಹ ಭವಿಷ್ಯದ ಚಿಂತನೆಯೂ ಇದೆ. ಎಚ್.ಎಸ್.ಆರ್ ಟಿಪ್ಪಣಿಯಲ್ಲಿ ಹೇಳಿರುವಂತೆ ಎಲಿಜಿಗಳ ನಾಯಕ ಅತಿಯಾದ ಮಹತ್ವಾಕಾಂಕ್ಷೆಯಿರುವ ತರುಣ. ಅವನಿಗೆ ತನ್ನ ಗುರಿ ಯಾವುದೆಂದು ಸರಿಯಾಗಿ ಗೊತ್ತಿಲ್ಲ. ಅದು ಯಾವುದೆಂದು ಕಂಡುಕೊಳ್ಳವ ಶಕ್ತಿಯಾಗಲೀ ಸಹನೆಯಾಗಲೀ ಅವನಿಗೆ ಇಲ್ಲ. ಆದರೆ ಅಂಥ ಪಯಣದಲ್ಲಿ ಮುನ್ನುಗ್ಗುವ ರಭಸ ಅವನಿಗೆ ಇದೆ.

ಕೆಲವು ಸಾಲುಗಳು:
ಕೂಗಿ ಕರೆದರೆ ನಾನು, ಯಾರಿದ್ದಾರೆ ಕೇಳುವವರು?
ಸುಮ್ಮನಾಗುತ್ತೇನೆ ಬಿಕ್ಕುಗಳ ತಡೆಹಿಡಿದು ನನ್ನ ಕಂಬನಿಹಾಡು/ನಾನೆ ಕುಡಿದು.
ದನಿಗಳು, ದನಿಗಳು. ನನ್ನ ಹೃದಯವೇ, ಕೇಳು ಸಂತರಾದವರಷ್ಟೆ ಕೇಳಿರುವ ಹಾಗೆ
ಇಲ್ಲ. ನಾನು ನಿನ್ನನ್ನು ಓಲೈಸುತ್ತಿಲ್ಲ/ ಹಾಗೆ ಯೋಚಿಸಬೇಡ. ಓಲೈಸಿದರು ಕೂಡ ನೀ ಬರುವುದಿಲ್ಲ. ಏಕೆಂದರೆ, ನನ್ನ/ ಕರೆಯಲ್ಲಿಯೇ ತುಂಬಿದೆ, “ಬೇಡ, ಬರಬೇಡ”ವೆಂಬ ಅಹವಾಲು. ಬರಲಾರೆ ನೀನು/ ಆ ಪ್ರಬಲ ನೆರೆಯೆದುರು ಈಜಿ.

ಆರ್ಫಿಯಸ್‍ಗೆ ಅರ್ಪಿಸಿ ಬರೆದಿರುವ ಸಾನೆಟ್‍ಗಳಲ್ಲಿ ರಿಲ್ಕ್ ತನ್ನ ಭಾಷೆಯ ಮೂಲಕ ಮುಟ್ಟಿದ ಎತ್ತರಗಳನ್ನು ಕಾಣಬಹುದು. ಆರ್ಫಿಯಸ್ ಕವಿ ರಿಲ್ಕ್ ಗೆ ತುಂಬಾ ಇಷ್ಟವಾದ ಗ್ರೀಕ್ ದೇವತೆ. ಸಂಗೀತ ಮತ್ತು ಕವಿತೆಗಳ ಆಧಿದೇವತೆಯಾದ ಅವನು ಮನುಷ್ಯ ಸಹಜವಾದ ಕಾಮನೆ, ಭಯ, ತಲ್ಲಣಗಳನ್ನು ಅನುಭವಿಸಿದನು ಎಂದು ವಿಮರ್ಶಕರು ಗುರುತಿಸಿದ್ದಾರೆ. ಎಚ್.ಎಸ್.ಆರ್ ಸಹ ಈ ಸಾನೆಟ್‍ಗಳಿಗೆ ಬರೆದಿರುವ ಪುಟ್ಟ ಟಿಪ್ಪಣಿಯಲ್ಲಿ ಅದನ್ನು ಹೇಳುತ್ತಾರೆ.

ಪುರಾಣವನ್ನು ವಾಸ್ತವ ಜಗತ್ತಿನ ಜೊತೆಗೆ ಕವಿ ರಿಲ್ಕ್ ಬೆರೆಸಿ ತನ್ನ ಶ್ರೇಷ್ಟ ಮಟ್ಟದ ‘ಲಿರಿಕಲ್ ಕ್ವಾಲಿಟಿ’ಯನ್ನು ಧಾರೆಯೆರೆದು ಸುಂದರವಾದ ಸಾನೆಟ್‍ಗಳನ್ನು ರಚಿಸಿದ್ದಾನೆ. ಆರ್ಫಿಯಸ್‍ನ ಹಾಡಿನಲ್ಲಿ ಜಗತ್ತಿನ ಚರಾಚರಗಳನ್ನು ಕಾಣುತ್ತಾನೆ:

‘ಅಗೋ ಮರವು ಚಿಮ್ಮಿತು ಮೇಲೆ, ತನ್ನ ಮೀರುವ ಲೋಕ ಮೀರುವ ಎಂಥ ಪರಿಪೂರ್ಣ ಬಗೆ/ ಆಹ! ಕೇಳು, ಆರ್ಫಿಯಸ್ ಹಾಡುತ್ತಿದ್ದಾನೆ. ಓ, ಮುಗಿಲಿನ ಮರ ಈಗ ಕಿವಿಯೊಳಗೆ!/ಜೀವಿಗಳಲ್ಲಿ, ವಸ್ತುಗಳಲ್ಲಿ ಸದ್ದಡಗಿದ ಮೌನ. ಆದರೂ ಆ ಮೌನದಲ್ಲಿಯೂ/ ಹೊಸದೊಂದು ಮೊದಲಾಗುತ್ತಿದೆ, ಹೊಸ ಸೃಷ್ಟಿ ಕರೆಯುತ್ತಿದೆ, ಏನೊ ಬದಲಾಗಿದೆ’. ಮುಂದಿನ ಮತ್ತೊಂದು ಸಾನೆಟ್‍ನಲ್ಲಿ ಪ್ರತಿಮಾ ಸಂಸ್ಕೃತಿಯನ್ನು ಹೀಗೆ ಖಂಡಿಸುತ್ತಾನೆ:

‘ಅವನ ನೆನಪಿಗಾಗಿ ಗೋರಿಕಲ್ಲುಗಳನ್ನು ನಿಲ್ಲಿಸದಿರಿ;/ಅವನಿಗಾಗಿ ಪ್ರತಿವರ್ಷ ಗುಲಾಬಿಗಳನ್ನು ಅರಳಬಿಡಿ ಸಾಕು./ ಏಕೆಂದರೆ ಅವನು ಆರ್ಫಿಯಸ್.’

ಇದೊಂಥರ ಹೇಗೆಂದರೆ ವಚನಕಾರರು ‘ಭಕ್ತಿಯನ್ನು ಮಾಡಿದರೆ ಹೋಯಿತು’ ಹೇಳುತ್ತಾರಲ್ಲ ಹಾಗೆ. ಗುಡಿಗೋಪುರಗಳನ್ನು ಕಟ್ಟಿ ‘ದೇವರ’ನ್ನು ಬಂಧಿಸಿ ಇಡುವುದು ಮನುಷ್ಯನ ಧಾಷ್ಟ್ರ್ಯವಲ್ಲದೆ ಮತ್ತೇನು? ಆರ್ಫಿಯಸ್ ಮೂಲತಃ ಕಾವ್ಯ ಮತ್ತು ಸಂಗೀತದ ಆದಿದೇವತೆ. ಹಾಗಾಗಿ ರಿಲ್ಕ್ ಹೇಳುತ್ತಾನೆ: ‘ಹುಡುಕದಿರಿ ಹೆಸರುಗಳನು ಕವಿತೆಯಿರುವಲ್ಲೆಲ್ಲ ಆರ್ಫಿಯಸ್/ ಅದು ಅವನದೇ ಹಾಡು’.

ಪುರಾಣಗಳನ್ನು ತಮ್ಮ ಬರಹಗಳಲ್ಲಿ ಬಳಸಿಕೊಂಡು ಸಮಾಕಾಲೀನ ಬದುಕಿಗೆ ಸ್ಪಂದಿಸಿದ ಯೇಟ್ಸ್, ಶೇಕ್ಸ್‍ಪಿಯರ್ ಅಥವಾ ಕೀಟ್ಸ್‍ರಂತೆ ರಿಲ್ಕ್ ಸಹ ಗ್ರೀಕ್‍ನ ಮಿಥ್‍ಗಳನ್ನು ತನ್ನ ಕಾವ್ಯಕ್ಕೆ ತಂದು ‘ಪ್ಯಾನ್ ಯುರೋಪಿಯನ್’ ಆಯಾಮವನ್ನು ಕೊಟ್ಟಿದ್ದಾನೆ. ಇದು ಯುರೋಪಿನ ‘ಸಾಂಸ್ಕೃತಿಕ ಅಸ್ಮಿತೆ’ ಪ್ರಾಚೀನ ಗ್ರೀಕ್ ಮತ್ತು ರೋಮನ್ ನಾಗರೀಕತೆಗಳಿಗೆ ಅಂಟಿಕೊಂಡಿರುವುದನ್ನು ತೋರಿಸುತ್ತದೆ. ತನ್ನ ಇಡೀ ಕಾವ್ಯದ ಪಯಣದ ಉದ್ದಕ್ಕೂ ತನ್ನ ಆಧುನಿಕ ಸಂವೇದನೆಯ ಹೊಳಪನ್ನು ಮಿಥ್‍ಗಳ ಬಲದಿಂದಾಗಿ ಇನ್ನಷ್ಟು ಪ್ರಜ್ವಲಿಸುವಂತೆ ರಿಲ್ಕ್ ಮಾಡಿರುವುದನ್ನು ನಿಚ್ಚಳವಾಗಿ ಕಾಣಬಹುದು. ಗ್ರೀಕ್ ಪುರಾಣದ ಒಂದು ಮಹತ್ತರವಾದ ಪಾತ್ರವಾದ ‘ಆರ್ಫಿಯಸ್’ನು ರಿಲ್ಕ್‍ನ ಸಾನೆಟ್‍ಗಳಲ್ಲಿ ಒಂದು ಬಹುದೊಡ್ಡ ‘ಇಮೇಜ್’ ಆಗಿ ಬೆಳೆಯುತ್ತ ಹೋಗಿದ್ದಾನೆ.

ಪ್ರೇಯಸಿಯ ಮುಖದಲ್ಲಿ ಲೋಕ ಇತ್ತು ಎನ್ನುವ ಕವಿತೆ ಎಂತಹವರನ್ನೂ ಸಹ ಸೂಜಿಗಲ್ಲಿನಂತೆ ಸೆಳೆಯುವ ಕವಿತೆ. ಇಲ್ಲಿ ತನ್ನ ಪ್ರೇಯಸಿಯ ಮುಖದಲ್ಲಿ ಲೋಕವನ್ನೇ ಕಾಣುತ್ತಾನೆ, ಅಂದರೆ ಬದುಕನ್ನು. ಮತ್ತು ಅಷ್ಟೇ ಅಲ್ಲ ಇಡೀ ಸೃಷ್ಟಿಯನ್ನು. ದಕ್ಕಿದಾಗ ಸಂಪೂರ್ಣವಾಗಿ ಅನುಭವಿಸದ, ಹಾಗೂ ಕೈ ತಪ್ಪಿದಾಗ ಪರಿತಪಿಸುವ ಹತಾಶೆ ಹೀಗೆ ಅಭಿವ್ಯಕ್ತಗೊಳಿಸುತ್ತಾನೆ ರಿಲ್ಕ್:

ಪ್ರೇಯಸಿಯ ಮುಖದಲ್ಲಿ ಲೋಕ ಇತ್ತು/ಇದ್ದಕ್ಕಿದ್ದಂಥೆ ಅದು ಹೊರಹರಿಯಿತು, ಕಾಣದಾಯಿತು/..
ಏಕೆ ನಾನು ಕುಡಿಯಲಿಲ್ಲ/ಒಲವು ತುಂಬಿದ ಆ ತುಂಬು ಮುಖದಿಂದ/ತುಟಿಯ ತನಕ ತಂದಾಗಲೂ ಕೂಡ.
ಆಹಾ ಸುಳ್ಳು, ನಾನು ಕುಡಿದೆ/ತೀರದ ದಾಹದಿಂದ ಹೀರಿ ಹೀರಿ ಕುಡಿದೆ
ಆದರೆ, ನನ್ನೊಳಗು ಆಗಲೇ ತುಂಬಿಹೋಗಿತ್ತು/ಅಲ್ಲಿ ಆಗಲೇ ರಾಶಿ ಲೋಕ ಇತ್ತು/ಮತ್ತು ಕುಡಿಯುತ್ತ, ಮತ್ತೆ ಕುಡಿಯುತ್ತ/ತುಂಬಿಹೋದೆ, ಚೆಲ್ಲಿಹೋದೆ

ಕವಿಯ ತುಂಟತನ ಕೊನೆಯಲ್ಲಿ ಕಾಣಬಹುದು. ಅಂದರೆ ಡನ್ನ ತನ್ನೊಂದು ಕವಿತೆಯಲ್ಲಿ ಹೇಳುತ್ತಾನಲ್ಲ ಹಿಂದಿನ ಎಲ್ಲ ಸೌಂದರ್ಯಗಳಲ್ಲಿ (ಹೆಣ್ಣು) ನಿನ್ನನ್ನೇ (ಪ್ರೇಯಸಿ) ಹುಡುಕಿರುವೆ. ಅಂದರೆ ಅದನ್ನೆಲ್ಲ ಅನುಭವಿಸಿ ಕೊನೆಗೆ ಸಿಕ್ಕಿದ್ದು ನೀನು. ಪರಿಶುದ್ಧವಾದ, ಮತ್ತು ದಿವ್ಯಪ್ರೇಮದ ಹಂಬಲ.

ಪ್ರೀತಿಯನ್ನು ಕುರಿತು ಬರೆಯದ ಯಾವ ಕವಿಗಳಿದ್ದಾರೆ? ಪ್ರೀತಿಯ ಮೋಹಕ ಬೆಳಕಲ್ಲಿ ಮೀಯುವವರೆ! ರಿಲ್ಕ್ ನ ಕವಿತೆಗಳ ಮೂಲ ಜೀವವೇ ಪ್ರೀತಿ. ಅಂತಹ ಒಂದು ಝಲಕ್ ಪರವಾಗಿಲ್ಲ,ನಮಗೆ ತಿಳಿದಿದೆ ಒಲವಿನ ಭೂಗೋಳ ಎನ್ನುವ ಕವಿತೆ. ಪ್ರೀತಿಯನ್ನು ಪಡೆಯುವ ಹಾದಿ ಅಷ್ಟೊಂದು ಸುಲಭದ್ದಲ್ಲ. ಅದಕ್ಕೆ ಲೋಕದ ಸಂಗತಿಗಳ ಕಾಟ. ಜಾತಿ, ಬಣ್ಣ, ವರ್ಗ, ಅಂತಸ್ತು ಮತ್ತು ಅಹಂಗಳನ್ನು ಮೀರಿ ಹೋಗಬೇಕಿದೆ. ಪ್ರೀತಿಯನ್ನು ತುಂಬಿಕೊಂಡಿರುವ ಹೃದಯ, ಮನಸುಗಳಿಗೆ ಬದುಕು ಹೂ ಭಾರ. ಅದು ಬದುಕಿನ ತತ್ವ. ಅದರ ಮೂಲಕ ಮಾತ್ರ ಮನುಷ್ಯ ಪರಿಶುದ್ಧವಾಗುವುದು. ಹೆಸರಿಸುವ, ನೈತಿಕ ಬಲವ ಕುಗ್ಗಿಸುವ ಜಗತ್ತಿಗೆ ರಿಲ್ಕ್ ಈ ಕವಿತೆಯಲ್ಲಿ ಎಷ್ಟೊಂದು ನಯವಾಗಿ ಉತ್ತಿರಿಸುತ್ತಾನೆ:

ಪರವಾಗಿಲ್ಲ, ನಮಗೆ ತಿಳಿದಿದೆ ಒಲವಿನ ಭೂಗೋಳ
ಪ್ರೇಮದ ಹಾದಿಯಲ್ಲಿ ಓರೆಕೋರೆಗಳು ನಮಗೆ ತಿಳಿದಿದ್ದರೂ
ಅದಕ್ಕೆ ಬಲಿಯಾದವರ ದುಃಖಲೀನ ಹೆಸರುಗಳ ಸುಡುಗಾಡಿನ  ಅರಿವಿದ್ದರೂ
ಇತರರು  ಕುಸಿದಿರುವ ಭಯಾನಕ ನೀರವ ಪ್ರಪಾತದ ಅರಿವಿದ್ದರೂ
ಮತ್ತೆ ಮತ್ತೆ ನಾವಿಬ್ಬರು ಜೊತೆಜೊತೆಯಾಗಿ ನಡೆದಿದ್ದೇವೆ
..
ಒಂದಾಗಿ ಹೆಜ್ಜೆಯಿಡುತ್ತೇವೆ. ಮತ್ತೆ ಮತ್ತೆ ಮಲಗುತ್ತೇವೆ
ಆ ಹೂಗಳ ನಡುವೆ, ಅದು ನಮ್ಮ ಮತ್ತು ಮುಗಿಲಿನ ಮುಖಾಮುಖಿ.

ರಿಲ್ಕ್ ಬದುಕಿನ ಸಂಕೀರ್ಣತೆಗಳ ನಡುವೆಯೇ ಸುಮಧುರವಾದ ಭಾವನೆ ಪ್ರೀತಿಯನ್ನು ಧ್ಯಾನಿಸಿ ಬರೆದ ಈ ರಚನೆಗಳು ಶತಮಾನಗಳು ಕಳೆದರೂ ಮನುಷ್ಯ ಜೀವನದಲ್ಲಿ ಹೊಸತನವನ್ನು, ಉಕ್ಕುವ ಸ್ಫೂರ್ತಿಯನ್ನು ಕೊಡುತ್ತಲೇ ಇರುತ್ತವೆ. ಬದುಕಿನ ವ್ಯಾಮೋಹಿಗಳ, ಪ್ರೀತಿ ತುಂಬಿದ ಹೃದಯಗಳಿಗೆ ಲಗ್ಗೆ ಇಡುತ್ತಲೇ ಇರುತ್ತಾನೆ ಕವಿ ರಿಲ್ಕ್. ಪುರಾಣದ ಅಪ್ಸರೆಯರು, ದೇವತೆಗಳು, ಧೀರೋದಾತ್ತ ನಾಯಕರು ರಿಲ್ಕ್ ಕವಿತೆಯಲ್ಲಿ ಸ್ಥಾನ ಪಡೆದು ಕಾಲದ ಗೆರೆಗಳನ್ನು ಅಳಿಸಿ ಹಾಕುತ್ತ ವಾಸ್ತವ ಬದುಕಿನಲ್ಲಿ ಹೂವುಗಳಾಗಿ ಅರಳುತ್ತಲೇ ಇರುತ್ತಾರೆ. ರಿಲ್ಕ್ ಹರಿಸಿದ ಪ್ರೀತಿಯ ನದಿಯಲ್ಲಿ ಕನ್ನಡದ ಮನಸುಗಳು ಮೀಯಲಿ. ಇದನ್ನು ಸಾಧ್ಯವಾಗುವಂತೆ ಮಾಡಿದ ಎಚ್.ಎಸ್.ಆರ್ ಗೆ ಮತ್ತೊಂದು ಸಲ ಪ್ರೀತಿಯ ಸಲಾಂ!

‍ಲೇಖಕರು nalike

August 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. A N Mukunda

    ತುಂಬಾ ಚೆನ್ನಾಗಿದೆ, ಸರಿಯಾಗಿದೆ ಮತ್ತು ವಸ್ತುನಿಷ್ಠವಾಗಿದೆ. ಎಸ್ ಆರ್ ರಮೇಶ್ ಹಾಗು ಎಚ್ ಎಸ್ ಆರ್ ಅವರಿಗೆ ಅಭಿನಂದನೆಗಳು.
    ಅವಧಿ ಗೆ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: