ಅನಿತಾ ತಾಕೊಡೆಯ ‘ಮೋಹನ ತರಂಗ’ ಎಂಬ ಅಂತರಂಗದ ಅವಲೋಕನ

 ಗುರುರಾಜ್ ಸನಿಲ್

‘ಅತ್ಯಂತ ತೀವ್ರವಾದ ಭಾವನೆಯ ಚಾಲನೆಗೆ ಸಿಕ್ಕಿದವನು, ಅತ್ಯಂತ ಕಷ್ಟಕರವಾದ ಅನುಭವವನ್ನು ದಾಟಿ ಬಂದವನು, ಅಪೂರ್ವ ಶಾಂತಿಪೂರ್ಣ ಸಂತೋಷವನ್ನು ಸವಿದು ನಿಂತವನು, ತನ್ನ ಅನೇಕ ವಿಚಿತ್ರ ವಿಕಟ ಅನುಭವದ ತುಣುಕುಗಳಲ್ಲಿ ಹಠತ್ತಾನೇ ಸಮಗ್ರತೆಯ ದರ್ಶನ ಪಡೆದವನು ಮಾತಾಡತೊಡಗಿದರೆ ಅದರಲ್ಲಿ ಅವನ ಅಂತರಂಗದ ಶಕ್ತಿಗಳಾದ ಭಾವ, ಬುದ್ಧಿ, ಸ್ಮೃತಿ, ನೈತಿಕಪ್ರಜ್ಞೆ, ಕನಸುಗಾರಿಕೆ ಎಲ್ಲವೂ ಅಡಕವಾಗಿರುತ್ತವೆ. ಆಗ ಅವನ ಭಾಷೆ ಕೇವಲ ‘ಗದ್ಯ’ ಅಥವಾ ‘ವಾಚ್ಯ’ವಾಗಿ ಉಳಿಯುವುದಿಲ್ಲ. ಒಂದು ಮಾತು ಹತ್ತು ಮಾತುಗಳನ್ನು ಧ್ವನಿಸುತ್ತದೆ. ಮಾತಿನಲ್ಲಿ ಬಿಗಿಯೂ ನಾಟ್ಯ ಗತಿಯೂ ಸಿದ್ಧಿಸಿ ಅದನ್ನು ಕೇಳುವಾಗ ಹೃದಯ ಪುಳಕಗೊಳ್ಳುತ್ತದೆ’ ಎಂಬುದು ಎಂ. ಗೋಪಾಲಕೃಷ್ಣ ಅಡಿಗರು ತಮ್ಮ ಲೇಖನವೊಂದರಲ್ಲಿ ಆಡಿರುವ ಮಾತುಗಳು.

ಈ ವಿಚಾರವು ಬಹುಶಃ ಮುಂಬೈ ತುಳು, ಕನ್ನಡ ಸಾಹಿತ್ಯಲೋಕದಲ್ಲಿ, ಅನೇಕ ಹಿರಿಯ ಸಾಹಿತಿಗಳ ಸ್ಫೂರ್ತಿ, ಪ್ರೋತ್ಸಾಹದೊಂದಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಶ್ರೀಮತಿ ಅನಿತಾ ಪಿ. ತಾಕೋಡೆ ಅವರ ‘ಮೋಹನ ತರಂಗ’ ಕೃತಿಗೂ ಅನ್ವಯಿಸುತ್ತವೆ. ಅನಿತಾ ಅವರು ಈಗಾಗಲೇ ತುಳು, ಕನ್ನಡ ಭಾಷೆಯಲ್ಲಿ ಮೂರು ಕವನ ಸಂಕಲನ, ಸಾಹಿತಿ, ಡಾ. ಬಿ. ಜನಾರ್ದನ ಭಟ್ ಅವರ ಕುರಿತಾದ ‘ಸವ್ಯಸಾಚಿ’ (ಎಂ.ಎ. ಸಂಪ್ರಬಂಧ) ವ್ಯಕ್ತಿಚಿತ್ರ ಹಾಗು ಕಥೆ, ಪ್ರವಾಸ ಕಥನ, ಅಂಕಣ ಮತ್ತು ಲೇಖನಗಳ ಮೂಲಕ ಸಾರಸ್ವತಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ‘ಮೋಹನ ತರಂಗ’ ಅವರ ಐದನೆಯ ಕೃತಿಯಾಗಿ ಬೆಳಕು ಕಂಡಿದೆ. ಮುಂಬೈ ಬದುಕು ಆರ್ಥಿಕತೆ ಮತ್ತು ಅಭಿವೃದ್ಧಿಗೆ ಮಾತ್ರವೇ ಹೆಚ್ಚು ಮಹತ್ವ ನೀಡುವಂಥದ್ದು.

ಆದರೆ ಈ ಕೃತಿಯೊಳಗಿನ ಸಾಧಕ ಮೋಹನ ಮಾರ್ನಾಡರು ಕೇವಲ ಅವೆರಡಕ್ಕೇ ಜೋತು ಬಿದ್ದು ಜೀವನ ಸೌಂದರ್ಯವನ್ನು ವಿರೂಪಗೊಳಿಸಲಿಚ್ಛಿಸದೆ, ಸ್ವತಂತ್ರ ಆತ್ಮಾನಂದವನ್ನು ಅನುಭವಿಸಲು ಸಾಹಿತ್ಯಕ, ಸಾಂಸ್ಕೃತಿಕ ಮಜಲುಗಳಿಗೂ ಪ್ರವೇಶಿಸಿ ಅಲ್ಲಿಯೂ ತನ್ಮಯತೆಯಿಂದ ತೊಡಗಿಕೊಂಡವರು. ಆ ಮೂಲಕ ಮೇರೆತ್ತರಕ್ಕೆ ಬೆಳೆದು ಕನ್ನಡ, ತುಳು ರಂಗಭೂಮಿ, ಸಾಹಿತ್ಯ ಮತ್ತು ಸಿನೇಮಾರಂಗಕ್ಕೂ ತಮ್ಮದೇ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತ ಬಂದಿರುವ ಅವರ ಪ್ರಬುದ್ಧ ಪ್ರತಿಭೆಯ ಕಥನವೇ ಈ ಮೋಹನ ತರಂಗ. ಲೇಖಕಿಯು ಮಾರ್ನಾಡರ ಮನೋಲೋಕಕ್ಕೆ ಪರಕಾಯ ಪ್ರವೇಶ ಎಂಬಷ್ಟು ಆಳವಾಗಿ ಹೊಕ್ಕು ಸಂಕ್ಷಿಪ್ತ ಆತ್ಮಕಥಾ ಶೈಲಿಯಲ್ಲಿ ಅನಾವರಣಗೊಳಿಸಿರುವ ಆಪ್ತ ಬರಹ ಈ ಕೃತಿಯದ್ದು. ಡಾ. ಜಿ. ಎನ್. ಉಪಾಧ್ಯರ ಮಾರ್ಗದರ್ಶನದಲ್ಲಿ ಎಂ. ಎ. ಪದವಿಗೆ ಸಂಪ್ರಬಂಧವಾಗಿ ಬರೆದಿರುವ ಕೃತಿಯಿದು ಎನ್ನುವುದು ನಿಜವಾದರೂ, ಲೇಖಕಿಯು ಅಂಥ ಸೀಮಿತ ಚೌಕಟ್ಟನ್ನು ಮೀರಿ ತನ್ನ ಬರಹದ ಸೃಜನಾತ್ಮಕತೆಯನ್ನು ದುಡಿಸಿಕೊಂಡ ರೀತಿ ಇಲ್ಲಿ ಮಹತ್ವ ಪಡೆಯುತ್ತದೆ.
ಸಾಹಿತಿ, ಜಯಂತ್ ಕಾಯ್ಕಿಣಿಯವರು ಈ ಕೃತಿಗೆ ಸೂಚಿಸಿರುವ ಶೀರ್ಷಿಕೆ, ಬರಹದ ಹಂದರಕ್ಕೆ ಚಂದವಾಗಿ ಒಪ್ಪುವಂಥದ್ದು. ಕೃತಿಯೊಳಗೆ ಪ್ರವೇಶಿಸುವ ಮುನ್ನ, ಡಾ. ಭರತ್ ಕುಮಾರ್ ಪೊಲಿಪು ಅವರ ಮುನ್ನುಡಿಯಲ್ಲಿ, ‘ಉತ್ತಮ ನಟ, ಉತ್ತಮ ಮನುಷ್ಯನೂ ಆಗಿರುತ್ತಾನೆ ಎನ್ನುವುದಕ್ಕೆ ಮೋಹನ ಮಾರ್ನಾಡರೇ ಉದಾಹರಣೆ!’ ಎಂಬ ಮಾತು, ಮಾರ್ನಾಡರು ಸಮಾಜದ ಅನೇಕ ಕಲಾರಂಗ ಪ್ರಕಾರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರೂ ತಮ್ಮ ಉಜ್ವಲ ವ್ಯಕ್ತಿತ್ವವನ್ನು ಹೇಗೆ ಕಾಪಾಡಿಕೊಂಡಿದ್ದಾರೆ ಎಂಬುದಕ್ಕೆ ಪುಷ್ಟಿ ನೀಡುತ್ತದೆ. ಕಲಾಪ್ರಿಯರು ಕಂಡಂತೆ, ಮೋಹನರು ಒಬ್ಬ ಅದ್ಭುತ ರಂಗನಟ, ನಿರ್ದೇಶಕ ಮಾತ್ರವೇ ಆಗಿರದೆ ಅವರೊಳಗೊಬ್ಬ ಕಥೆಗಾರನೂ ಪ್ರಶಸ್ತಿ ಪುರಸ್ಕೃತ ಕಾಂದಂಬರಿಕಾರನೂ ಅಡಗಿರುವುದು ಬಹುತೇಕರಿಗೆ ತಿಳಿಯದ ಸಂಗತಿ ಎಂಬುದರ ಬಗ್ಗೆಯೂ ಈ ಕೃತಿ ಬೆಳಕು ಚೆಲ್ಲುತ್ತದೆ. ಮಾರ್ನಾಡರ ಜೀವನ ಪ್ರವಾಹದ ಅನೇಕ ವಿಸ್ಮಯ ವಿಚಾರ, ಘಟನೆಗಳು, ‘ಸಾಧಕನೊಬ್ಬನ ಬದುಕು ಹೀಗೆಲ್ಲ ಇರಲು ಸಾಧ್ಯವೇ!?’ ಎಂದು ಹುಬ್ಬೇರಿಸಿ, ಮೈನವಿರೇಳಿಸುತ್ತವೆ. ಮುಂಬೈ ಜಗತ್ತಿನ ಸುಮಾರು ನೂರು ವರ್ಷಗಳ ನಾಟಕ ಮತ್ತು ರಂಗಭೂಮಿಯ ಸಂಕ್ಷಿಪ್ತ ಚರಿತ್ರೆಯೂ ಈ ಕೃತಿಯಲ್ಲಿ ಪಡಿಮೂಡಿದೆ.

ಮೋಹನರು ಬಾಲಕನಾಗಿದ್ದಾಗ, ಅವರ ಊರಿಗೆ ಮೊದಲ ಬಾರಿ ಕರ್ನಾಟಕ ಮೇಳದ ಯಕ್ಷಗಾನ ಮಂಡಳಿ ಬಂದುದು. ಅದನ್ನು ವೀಕ್ಷಿಸುವ ಉತ್ಕಟೇಚ್ಛೆಯಿಂದ ಅವರು ಹೊರಟಾಗ ಮನೆಮಂದಿಯಿಂದಾಗುವ ಆಶಾಭಂಗವು ಮನಮಿಡಿಸುತ್ತದೆ. ಆದರೆ ಎಳವೆಯಲ್ಲಿಯೇ ಅವರೊಳಗೊಬ್ಬ ಕಲಾವಿದ ರೂಪಗೊಳ್ಳುತ್ತಿದ್ದ ಎಂಬುದರ ಸೂಕ್ಷ್ಮವನ್ನೂ ಲೇಖಕಿಯು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಮಾರ್ನಾಡರ ಜೀವನದೊಂದಿಗೆ ತಳುಕು ಹಾಕಿಕೊಳ್ಳುವ ಮೂಡುಬಿದಿರೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ ಲೇಖಕಿಯು ಸಾಕಷ್ಟು ವಿವರವಾಗಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಸಾವಿರ ಕಂಬದ ಬಸದಿಯ ನಾಡು ಮೋಹನರನ್ನು ಕಲೆ ಮತ್ತು ಸಾಂಸ್ಕೃತಿಕವಾಗಿ ಬೆಳೆಸಿದ್ದನ್ನೂ, ಆ ನಾಡಿನಲ್ಲಿ ಜನಿಸಿ, ಪ್ರಪಂಚದಾದ್ಯಂತ ತಮ್ಮ ಕಂಪು ಬೀರಿದ ಇನ್ನೂ ಅನೇಕ ಸಾಧಕರನ್ನೂ ನೆನೆಪಿಸಿಕೊಳ್ಳಲು ಅವರು ಮರೆತಿಲ್ಲ ಎನ್ನುವುದು ಗಮನಾರ್ಹ.

‘ನನಗೆ ಮೂವರು ದೇವರು. ಒಬ್ಬಳು ಅಮ್ಮ, ಇನ್ನೊಬ್ಬಳೂ ಅಮ್ಮ. ಮೂರನೆಯವಳೂ ಅವಳೇ..!’ ಎಂದು ಒಂದು ಕಡೆ ಮಾರ್ನಾಡರು ನುಡಿದು, ಅಮ್ಮನ ಮೇಲೆ ತಮಗಿರುವ ಅಗಾಧ ಪ್ರೀತಿಯನ್ನು ವಿಷದಪಡಿಸುವ ರೀತಿಯೂ, ಅಪ್ಪನ ಪ್ರೀತಿಯನ್ನು ಕಾಣುವ ಭಾಗ್ಯ ದೊರಕದಿದ್ದರೂ ಅವರ ಮುಖ್ಯ ಆಸೆಯೊಂದನ್ನು ಅಮ್ಮನ ಮೂಲಕ ನೆರವೇರಿಸುವುದೂ ಈ ಸಾಧಕನ ಪಿತೃಪ್ರೇಮಕ್ಕೆ ಸಾಕ್ಷಿಯಾಗುತ್ತದೆ. ಹಿಂದಿ, ಕನ್ನಡ ಚಿತ್ರರಂಗ ಹಾಗು ಆ ಕ್ಷೇತ್ರಗಳ ನಟನಟಿಯರ ಒಳಹೊರಗಿನ ವ್ಯಕ್ತಿತ್ವಗಳನ್ನೂ ಅವರ ವಿಚಿತ್ರ ಗುಣ ಸ್ವಭಾವಗಳನ್ನೂ ಓದುತ್ತ ಹೋದಂತೆ ಕೆಲವು ರಹಸ್ಯಗಳು ಅಚ್ಚರಿ ಮೂಡಿಸುತ್ತವೆ. ಮಾರ್ನಾಡರು ಮಾರಾಠಿ ಮಾತೆಯ ಮಡಿಲಲ್ಲಿದ್ದುಕೊಂಡೇ ತಮ್ಮ ಮಾತೃಭಾಷೆ ತುಳುವಿಗೂ, ತೌಳವ ಸಂಸ್ಕೃತಿಗೂ ಅಪಾರ ಮನ್ನಣೆ ತಂದುಕೊಟ್ಟಂಥ ‘ಸುದ್ದ’ ತುಳು ಚಲನಚಿತ್ರದ ಕುರಿತು ಈ ಕೃತಿಯಲ್ಲಿ ದೊರಕುವ ವಿವರವು ತೌಳವ ಸಮಾಜಕ್ಕೆ ಮಾರ್ನಾಡರ ಮೇಲೆ ಹೆಮ್ಮೆ, ಗೌರವಾದರಗಳು ಮೂಡುವಂತೆ ಮಾಡುತ್ತದೆ.

ನೈಜ ಕಲಾವಿದನೊರ್ವನು ಸಮಾಜದ ಸರ್ವ ಸರಹದ್ದುಗಳನ್ನೂ ಮೀರಿ ವಿಶ್ವಮಾನವ ಪಥದಲ್ಲಿ ನಡೆಯಲಿಚ್ಛಿಸುತ್ತಾನೆಯೇ ಹೊರತು ಯಾವುದೇ ಜಾತಿ, ಮತ, ಪಂಥಗಳ ಚೌಕಟ್ಟಿನೊಳಗೆ ತನ್ನನ್ನು ದುಡಿಸಿಕೊಂಡು ಆತ್ಮವಂಚಿತನಾಗಲು ಬಯಸುವುದಿಲ್ಲ ಎಂಬ ಸತ್ಯಕ್ಕೆ ಸಮೀಪವಾಗಿರುವ ಮಾರ್ನಾಡರ ವ್ಯಕ್ತಿತ್ವವನ್ನು ಅವರ ಸಮುದಾಯವು ಇನ್ನೂ ಸೂಕ್ತ ರೀತಿಯಲ್ಲಿ ಗುರುತಿಸಬೇಕಿತ್ತೇನೋ ಎಂದೆನಿಸುತ್ತದೆ. ಲೇಖಕಿಯು ಅನೇಕ ಕಡೆ ಸಂಭಾಷಣೆಯ ಮೂಲಕ ಮೋಹನರ ಆಡುಭಾಷೆಯಲ್ಲಿಯೇ ಅನುಭವಗಳನ್ನು ಕಟ್ಟಿಕೊಟ್ಟಿರುವುದು ಓದಿಗೆ ಉತ್ಸಾಹ ತುಂಬುತ್ತದೆ. ಮೋಹನರಿಗೆ ತಮ್ಮ ಕಾಯಕದೆಡೆಗಿನ ಅಪಾರ ಶ್ರದ್ಧೆ ಮತ್ತು ಪ್ರಾಮಾಣಿಕತೆಗಳೇ ಅವರು ತಾವು ಇಚ್ಛಿಸಿದ ಮಟ್ಟಕ್ಕೆ ಬೆಳೆಯಲು ಕಾರಣವಾದುವು ಎಂಬುದನ್ನು ಕೃತಿಯು ಸಾದರಪಡಿಸುತ್ತದೆ.

ತನ್ನ ಜೀವನ ಪಯಣದಲ್ಲಿ, ಸಾಧನೆಯ ಹಾದಿಯಲ್ಲಿ ತನ್ಮಯತೆಯಿಂದ ಸಾಗುವ ಸಾಧಕನಿಗೆ ಎದುರಾಗುವ ವಿವಿಧ ರೀತಿಯ ಅನುಭವಗಳು, ಆತನ ಹಿರಿಮೆ, ಗರಿಮೆಗಳಿಗೆ ಪ್ರತಿಫಲವಾಗಿ ಸಮಾಜದಿಂದ ಸಂದಾಯವಾಗುವ ತಿರಸ್ಕಾರ ಪುರಸ್ಕಾರಗಳಂಥ ವಿಷಯ ಮಾಹಿತಿಗಳನ್ನೂ ಆತ ಜತನದಿಂದ ದಾಖಲಿಸಿಟ್ಟುಕೊಳ್ಳುತ್ತ ಸಾಗುವುದು ಕಷ್ಟಕರವಾದ, ಮನಸ್ಸಿಗೂ ಒಪ್ಪದಂಥ ಸಂಗತಿ ಎನ್ನುವುದು ನಿಜವೇ. ಆದರೂ ಆತ ಸಾಧ್ಯವಾದಷ್ಟು ತನ್ನ ನೆನಪಿನ ಬುತ್ತಿಯನ್ನು ತನಗಲ್ಲದಿದ್ದರೂ ಭವಿಷ್ಯತ್ತಿನಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಬಹುದಾದ ಸಂಗತಿ, ಘಟನೆಗಳನ್ನಾದರೂ ಜೋಕೆಯಿಂದ ಕಾಪಿಟ್ಟುಕೊಳ್ಳುವುದು ಅವನ ಜವಾಬ್ದಾರಿಯೂ ಹೌದು! ಆದರೆ ‘ಮಾರ್ನಾಡರು ಈ ವಿಷಯಕ್ಕೆ ಸಂಪೂರ್ಣ ಹೊರತಾದವರು!’ ಎನ್ನುವ ಲೇಖಕಿ, ಇಂಥ ಸಾಧಕನ ಒಳ ಬಿರುಸನ್ನು ಪ್ರಯತ್ನಪೂರ್ವಕ ಭೇದಿಸಿ ಗರಿಷ್ಠ ಫಲ ಪಡೆಯುವಲ್ಲಿಯ ಅವರ ಪರಿಶ್ರಮ ಮತ್ತು ಬಳಲಿಕೆಯೂ ಹಾಗು ಆ ಕುರಿತ ಸಣ್ಣದೊಂದು ಸೋಲಿನೆಳೆಯೂ ಈ ಕೃತಿಯ ಕೆಲವೆಡೆ ಸೂಕ್ಷ್ಮವಾಗಿ ಗೋಚರಿಸುತ್ತದೆ. ಆದರೆ ಕೃತಿಯ ವೈಫಲ್ಯತೆಯ ಭಾಗವಾಗಿ ಅಲ್ಲ.

ಅನಿತಾ ಅವರು ತಮ್ಮ ಬರಹದ ‘ಭಾಷೆ’ ಯಲ್ಲಿ ಹಿಡಿತವನ್ನು ಸಾಧಿಸಿದ್ದಾರೆ. ಆ ನಿಟ್ಟಿನಲ್ಲಿ ಗಮನಿಸುವಾಗ ಈ ಕೃತಿಗೆ ಸಾಧಕನ ಸಹಕಾರವು ಬಹುಶಃ ಇನ್ನಷ್ಟು ದೊರಕುತ್ತಿದ್ದರೆ, ಬೆಣ್ಣೆಯು ತುಪ್ಪವಾದಾಗ ಯಾವ ಮಹತ್ವವೋ ಅಂತೆಯೇ ಈ ಕೃತಿಯೂ ನಿಷ್ಪನ್ನವಾಗುತ್ತಿತ್ತು ಎಂದೆನ್ನಿಸುತ್ತದೆ. ಆದರೂ ಮಾರ್ನಾಡ ನಿಸರ್ಗದತ್ತವಾದ ಕಠಿಣ ಬಾಲ್ಯ, ಪ್ರಾಥಮಿಕ ವಿದ್ಯಾಭ್ಯಾಸ, ಬಾಲ್ಯದಲ್ಲಿಯೇ ಮುಂಬೈ ಜಗತ್ತಿಗೆ ಪ್ರಯಾಣ, ನಂತರ ಅವರ ಬದುಕಿನಲ್ಲಾಗುವ ವಿವಿಧ ಪಲ್ಲಟಗಳು, ಸಮಾಜಕಂಟಕ ಮನಸ್ಸುಗಳಿಂದ ಅವರ ಮೇಲಾಗುವ ವಿಲಕ್ಷಣ ದೌರ್ಜನ್ಯಗಳು, ಆಗಾಗ ಸಂಭವಿಸುತ್ತಿದ್ದ ಕಷ್ಟಕೋಟಲೆಗಳು, ಇವೆಲ್ಲವನ್ನೂ ಮೀರಿ ನಿಂತು, ತಮ್ಮ ಹುಟ್ಟೂರು ಮತ್ತು ಜೀವನ ನೀಡಿದ ಮರಾಠಿ ಮಣ್ಣಿನಲ್ಲೂ ಏಕಪ್ರಕಾರವಾಗಿ ಬೆಳೆದು ಶೋಭಿಸುವ ಅವರ ವ್ಯಕ್ತಿತ್ವದ ಸಮಗ್ರ ಚಿತ್ರಣವನ್ನು ಲೇಖಕಿಯು ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿರುವುದು ‘ಉತ್ತಮ ಕೃತಿ ರಚನಾಕಲೆಯು ಯಾರೊಬ್ಬನ ಸೊತ್ತೂ ಅಲ್ಲ!’ ಎಂಬುದನ್ನು ಸಾಬೀತು ಪಡಿಸುತ್ತದೆ. ಒಂದಲ್ಲಾ ಒಂದು ತೆರೆನಾದ ಸಾಧನೆಯ ಹಾದಿಯಲ್ಲಿರುವ ಎಲ್ಲರೂ ಮೇಲಾಗಿ ಸಾಧಕರೂ, ಆತ್ಮಕಥಾ ಪ್ರಿಯರೂ ಓದಬೇಕಾದ, ಓದಬಹುದಾದ ಒಂದು ಒಳ್ಳೆಯ ಪುಸ್ತಕವಿದು ಎಂದರೆ ತಪ್ಪಾಗಲಾರದು. ಆದ್ದರಿಂದ ಅನಿತಾ ಅವರಿಂದ ಇನ್ನಷ್ಟು ಉತ್ತಮ ಸಾಹಿತ್ಯ ರಚನೆಯಾಗಲಿ ಎಂಬುದು ಎಲ್ಲರ ಆಶಯ.

‍ಲೇಖಕರು nalike

August 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: