ಇಬ್ಬರಲ್ಲಿ ಒಬ್ಬರಾದ್ರೂ ಮಾತನಾಡಬೇಕಿತ್ತು!!

ಮಾಲಾ ಮ ಅಕ್ಕಿಶೆಟ್ಟಿ, ಬೆಳಗಾವಿ

ಮರೆಯಲಿ ಹೇಗೆ ಆ ದಿನವನ್ನ? ಸಾಧ್ಯವಿಲ್ಲ. ಆ ದಿನವೇ ಮೊದಲು ಮತ್ತೆ ಕೊನೆ ಎನ್ನಬಹುದು. ಮುಂದೆ ಜೀವನದಲ್ಲಿ ಹಾಗೆ ಎಂದೂ ಆಗಲಿಲ್ಲ. ಹೀಗಾದದ್ದು ವಿಚಿತ್ರ ಅಂದ್ರೂ ನಿಜ. ಯಾರ್ಯಾರ ಜೀವನದಲ್ಲಿ ಘಟನೆಗಳು ಹೇಗೆ ಘಟಿಸುತ್ತವೆ ಅನ್ನುವುದು ತುಂಬಾ ಕಷ್ಟ. ಅಂದು ನೀ ವಾರ್ಷಿಕ ಪರೀಕ್ಷೆಯ ನಂತರ ನಮ್ಮನೆಗೆ ಬಂದಿದ್ದೆ. ಮೇಲಿಂದ ಮೇಲೆ ಬರೋದು ನಿನಗೆ ರೂಢಿ. ಬೆಳ್ಳಂಬೆಳಗ್ಗೆ ದುಂಡು ಮಲ್ಲಿಗೆಯ ಮೊಗ್ಗಿನ ಮಾಲೆಯನ್ನು ಮನೆಯವರಿಗೆಲ್ಲ ಸಾಲುವಂತೆ, ಮಾರಗಟ್ಟಲೆ ತಂದು ಕೊಟ್ಟಿದ್ದೆ. ಮನೆಯವರೆಲ್ಲರೂ ಪರಿಚಯ ನಿನಗೆ. ಅವರ ಕಣ್ಣಲ್ಲಿ ಒಳ್ಳೆಯ ಹುಡುಗ ಎಂಬ ಮುದ್ರೆ ಆಗಲೇ ಬಿದ್ದಾಗಿತ್ತು. ಅಭ್ಯಾಸದ ವಿಷಯಕ್ಕೆ ಸಂಬಂಧಿಸಿದ ಬುಕ್ಸ್, ನೋಟ್ಸ್ ಅಂದು ನಾ ಕೇಳದಿದ್ದರೂ ತಂದು ಕೊಟ್ಟು ಓದು, ಚೆನ್ನಾಗಿ ಬರೆ ಎಂದು ಹೇಳೋದು ಸಾಮಾನ್ಯವಾಗಿತ್ತು. ಮನೆಯವರ ಒತ್ತಾಯಕ್ಕೆ ಒಂದು ಕಪ್ ಹಾಲು ಕುಡಿದಿದ್ದೆ.

ಹಾಗೆಯೇ ತುಸು ನಿನ್ನ ಜೊತೆ ನಡೆದರಾಯ್ತು ಎಂದು ನೀ ತಂದ ದುಂಡು ಮಲ್ಲಿಗೆಯ ಮೊಗ್ಗಿನ ಮಾಲೆಯನ್ನು ಧರಿಸಿ, ಮನೆಯಿಂದ ಹೊರಬಂದ ಕಾಲುಗಳು ಹಾಗೆಯೇ ಅಲ್ಲೇ ಸಮೀಪದಲ್ಲಿದ್ದ ರಾಘವೇಂದ್ರರ ದೇವಾಲಯವನ್ನು ಹೊಕ್ಕಿದ್ದವು. ಮುಂಜಾನೆಯ ಪೂಜೆ ಆಗ ತಾನೇ ಪೂರ್ಣಗೊಂಡಿತ್ತು. ಗಂಟೆ ಬಾರಿಸಿ, ಕೈಮುಗಿದು, ತೀರ್ಥ ಸ್ವೀಕರಿಸಿ, ಎರಡು ಸುತ್ತು ಪ್ರದಕ್ಷಿಣೆ ಹಾಕಿ ಕುಂತಾಗ ಅಲ್ಲೇ ಗಿಡದಲ್ಲಿ ಆಟವಾಡುತ್ತಿದ್ದ ಗುಬ್ಬಚ್ಚಿಗಳ ಕಲರವ ಮನಸೂರೆಗೊಂಡಿತ್ತು. ನಾ ಮುಡಿದ ಮಾಲೆಯ ಸುವಾಸನೆ ದೇವಾಲಯವನ್ನೆಲ್ಲ ಸೇರಿಕೊಂಡಿದೆ ಅನ್ನುವ ಗಾಢ ಸುವಾಸನೆ ಮಲ್ಲಿಗೆಯದು. ಯಾಕೋ ಏನೋ ಆ ದಿನ ತುಂಬಾ ಖುಷಿ ಕೊಟ್ಟಿತ್ತು. ಕಾರಣವಿಲ್ಲದೆ ಸಂತೋಷ ಎನ್ನುವಂತಿತ್ತು ನನ್ನ ಅನುಭವ.ಪ್ರತಿದಿನದಂತೆ ಆ ದಿನವೂ ಇದ್ದರೂ, ಹೇಳಲಾಗದ ಏನೋ ವೈಶಿಷ್ಟ್ಯ ಇತ್ತು. ಆ ಗಿಡಗಳು, ಅವುಗಳ ಮೇಲೆ ಕುಣಿತಿರುವ ಎಲೆಗಳು ನೆನಪಿನ ಅಂಗಳಕ್ಕೆ ಮುನ್ನುಡಿ ಬರೆದು, ಹಂದರ ಹಾಕುತ್ತಿರುವ ಭಾವ.

ಎಳೆ ಬಿಸಿಲಿನಲ್ಲಿ ಜನಜಂಗುಳಿ ಇಲ್ಲದ ರಸ್ತೆಗಳು ಕೂಡ ಚಂದ ಕಂಡವು. ಮುಂಬರುವ ಪರೀಕ್ಷೆಯ ಫಲಿತಾಂಶದ ಬಗ್ಗೆ ಮಾತನಾಡಿದವೇ ಹೊರತು ಬೇರೇನೂ ಇಲ್ಲ. ಕ್ಲಾಸ್ ನಲ್ಲಿ ಸಹಪಾಠಿಯಾದ ನಿನ್ನ ಜೊತೆ, ಹೆಸರಿಸಲಾಗದ ಬಂಧ. ಮುಂದಿನ ವಿದ್ಯಾಭ್ಯಾಸ ಮತ್ತು ಕೆಲಸಕ್ಕೆ ನೀನು ಬೆಂಗಳೂರಿಗೆ ಹೋಗುವುದು ಪಕ್ಕಾ ಆಗಿತ್ತು. ದೂರದ ಊರಿನಿಂದ ಹಾಸ್ಟೆಲ್ ನಲ್ಲಿ ಇದ್ದ ನಿನಗೆ ನಮ್ಮನೆಯ ಊಟ ರುಚಿಸಿದ್ದು, ಆ ಊಟವೇ ನಿನ್ನನ್ನು ಎಲ್ಲರೊಂದಿಗೆ ಪರಿಚಯಿಸಿತ್ತು. ಕ್ಷಣಕಾಲ ದೇವಾಲಯದಲ್ಲಿ ಕಳೆದು ಮತ್ತೆ ಮನೆಗೆ ಬರುವಾಗ ಮತ್ತೆ ಮೌನ. ಕಾಲ ಹೆಜ್ಜೆಗಳಿಗೆ ಗಿಡಮರಗಳೇ ಸಾಥ್ ನೀಡಿದ್ದವು. ನಿನ್ನಲ್ಲಿರುವ ಎಲ್ಲಾ ಭಾವನೆಗಳಿಗೆ ನಾನು ಸಾಕ್ಷಿಯಾಗಿದ್ದೆ. ನಿನ್ನೆಲ್ಲ ಲಕ್ಷಣಗಳು ನನಗೆ ಇಷ್ಟ; ದೋಷಗಳನ್ನು ಎಂದೂ ಹುಡುಕಲೇ ಇಲ್ಲ. ಆದರೆ ಈ ಬಂಧಕ್ಕೆ ಯಾವ ಹೆಸರಿಡುವುದು ಗೊತ್ತಿಲ್ಲ. ನನ್ನನ್ನು ಮನೆಗೆ ಬಿಟ್ಟು, ಎಲ್ಲರಿಗೂ ನಮಸ್ಕರಿಸಿ, ಹಾಸ್ಟೆಲ್ ಬಿಡುವುದಾಗಿ ಹೇಳಿದ್ದೆ. ನಿನ್ನೂರಿಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು.

ಇಬ್ಬರೂ ಮುಂದಿನ ಅಭ್ಯಾಸ, ವೃತ್ತಿ ಎಂದು ಬಿಜಿಯಾಗಿ, ನಮ್ಮ ನಮ್ಮ ಲೋಕದಲ್ಲಿ ವ್ಯಸ್ತವಾಗಿ, WhatsApp Facebookಗಳ ಕಾಲವಲ್ಲದ ವೇಳೆಯಲ್ಲಿ, ಆಗೊಮ್ಮೆ ಈಗೊಮ್ಮೆ ಉಭಯ ಕುಶಲೋಪರಿಯ ಪತ್ರಗಳು ಸಂದಾಯವಾಗುತ್ತಿದ್ದವು. ಕಾಲಚಕ್ರದ ಉರುಳುವಿಕೆಯಲ್ಲಿ, ಮುಂದಿನ ದಿನಗಳಲ್ಲಿ ಆಶ್ಚರ್ಯ ಎನ್ನುವಂತೆ ಪತ್ರಗಳು ಇಬ್ಬರಲ್ಲಿ ನಿಂತು ಹೋದವು. ಯಾವ ಸಮಾಚಾರವೂ ಇಲ್ಲ. ದೀರ್ಘ ವೇಳೆಯ ಬೇರ್ಪಡಿಸುವಿಕೆ ಡಿಟ್ಯಾಚ್ಮೆಂಟ್ ನ್ನು ಹುಟ್ಟಿಸಿತ್ತು. ಜೀವನದಲ್ಲಿ ಏನು ನಡೀತಾ ಇದೆ ಎಂದು ಕೇಳುವ ಉತ್ಸುಕತೆಯೂ ಆಗ ಇರಲಿಲ್ಲ. ದಿನಗಳು ಹಂಗೆ ಉರುಳುತ್ತಾ ಹೋದವು. ನಾನು ವೃತ್ತಿ, ಮದುವೆ ಮಕ್ಕಳೆಂದು ನಿರತಳಾದರೆ, ನಿನ್ನದು ಏನೂ ಗೊತ್ತಾಗಲಿಲ್ಲ. ಆ ದಿನ ನಾನು ನನ್ನ ಮನೆಗೆ, ನೀನು ನಿನ್ನೂರಿಗೆ ಹೋದದ್ದು ಈ ರೀತಿ ದೀರ್ಘ ಬೇರ್ಪಡಿಸುವಿಕೆಗೆ ನಾಂದಿ ಹಾಡುತ್ತದೆ ಅಂತ ಗೊತ್ತೇ ಆಗಲಿಲ್ಲ. ಮಾತುಗಳು ಎಷ್ಟೊಂದು ಆಡದೇ ಉಳಿದವು. ಭಾವನೆಗಳು ಒಳಗೇನೇ ಖುದ್ದು, ನಂದಿ ಹೋದವು.


ಉಸಿರಾಡಲೂ ಪುರಸೊತ್ತಿಲ್ಲ ಎನ್ನುವ ಘಳಿಗೆ ಸ್ವಲ್ಪ ವೇಳೆ ಕೊಟ್ಟಾಗ ನಿನ್ನ ನೆನಪು. ಈಗ ಅನಿಸ್ತಿದೆ ಕಣೋ ಅಂದು ನೀನಾದರೂ ಮಾತನಾಡಬೇಕಿತ್ತು. ಇಬ್ಬರಲ್ಲಿಯೂ ವೈರುಧ್ಯಕ್ಕಿಂತ ಸಾಮ್ಯತೆಯೇ ಹೆಚ್ಚಾಗಿತ್ತು. ಪ್ರೀತಿ ಅಂತಾ ಹೆಸರಿಸಲಾಗದಿದ್ದರೂ, ಆತ್ಮೀಯತೆ ಇತ್ತು. ಈ ಆತ್ಮೀಯತೆಯಿಂದ, ನಮ್ಮಿಬ್ಬರದು ಸಕತ್ ಜೋಡಿ ಆಗತ್ತಿತ್ತೆನೋ? ಇದು ಬರೀ ನನ್ನ ಕಲ್ಪನೆ ಆಗಿರಬಹುದು ಅಥವಾ ನಿನಗೂ ಈಗ ಹಾಗೇ ಅನಿಸುತ್ತಾ? ಗೊತ್ತಿಲ್ಲ ಕಣೋ. ಯಾವುದಕ್ಕೂ ನೀನು ಒಂದ ಸಲ ಮಾತನಾಡಬೇಕಿತ್ತು. ಯಾಕೆ ನೀನು ಮಾತನಾಡಲಿಲ್ಲ? ಆ ದಿನ ದಾರಿಗಳು ಬದಲಾದ ಹಾಗೆ ಜೀವನದ ಗತಿಯೇ ಬದಲಾಗಿ ಬಿಡ್ತು. ಅಂದು ದೇವರು ನನ್ನಲ್ಲಾದರೂ ಮಾತುಗಳನ್ನು ಹೊರಡಿಸಬೇಕಿತ್ತು.ಒಂದು ಮಾತು ಕೇಳಿ, ಹೆಸರಿಲ್ಲದ ಬಂಧಕ್ಕೆ ಹೆಸರಿಡಬೇಕಿತ್ತು ನೋಡು.

ಇಷ್ಟು ದಿನದ ನಂತರ WhatsApp Facebookಗಳ ಮುಖಾಂತರ ನಿನ್ನನ್ನು ಹುಡುಕುವುದು ಕಷ್ಟವಲ್ಲ. ಆದರೆ ಹುಡುಕೋದು ಬೇಡ ನನಗೆ. ಹೇಗಿರುವೆ? ಏನೇನಾಗಿದೆ? ಜೀವನ ಹೇಗಿದೆ? ಎಂದು ಕೇಳೋದು ಬೇಡಾಗಿದೆ. ಈ ನನ್ನ ಪ್ರಶ್ನೆಗಳನ್ನು, ನೀ ಕೇಳಿದರೂ ಇಬ್ಬರ ಉತ್ತರಗಳು ಯಾರ ಬದುಕನ್ನು ಬದಲಾಯಿಸಲು ಸಾಧ್ಯವಿಲ್ಲ. ಕಷ್ಟ ಸುಖಗಳು ಈ ವಯಸ್ಸಿಗೆ ಗೊತ್ತೇ ಆಗಿರುತ್ತದೆ. ಅನುಭವಗಳು ಪಕ್ವವಾಗುವ ಕೊನೆಯ ಹಂತವನ್ನು ತಲುಪಿಯಾಗಿದೆ. ಈಗಿದ್ದ ವಾಸ್ತವದಲ್ಲಿ ಬದುಕುವುದೊಂದೇ ಸತ್ಯ ಮತ್ತು ಅನಿವಾರ್ಯ. ಮಾಡಿದ ತಪ್ಪಿಗೆ ಪಶ್ಚಾತಾಪವಾದ್ರೆ ಸಮಾಧಾನ ಆಗುತ್ತಂತೆ, ಆದರೆ ಕೆಲವು ಪಶ್ಚಾತ್ತಾಪಗಳು ಎಂದೂ ಸಮಾಧಾನ ಕೊಡಲ್ಲ. ಆ ದಿನದ ನಮ್ಮಿಬ್ಬರ ಭೇಟಿ ಜೀವನದ  ಕೊನೆಯ ಭೇಟಿ ಆಗಿರುತ್ತದೆಂದು ಅನಿಸಿರಲಿಲ್ಲ. ಸುಂದರ ಜೀವನ ನಿನ್ನದಾಗಿರಬಹುದು ಎಂಬ ಕಲ್ಪನೆಯೊಂದಿಗೆ ಶುಭವನ್ನು ಹಾರೈಸುತ್ತೇನೆ ಕಣೋ.

‍ಲೇಖಕರು nalike

August 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: