ಗಾಳಿ…

 ವಿಜಯಾ ಮೋಹನ  

ಬೆಳಗಿನ ಜಾವ ಐದು ಮೂವತ್ತರ ವೇಳೆ. ಕವ ಕವನೆನ್ನುವ ಕತ್ತಲನ್ನು, ಪೂರ್ಣ ನುಂಗದ ಬೆಳಕು ಬಿಕ್ಕುತ್ತಿತ್ತು. ಅಂಗಳವನ್ನೆಲ್ಲ ಗುಡಿಸಿ ಇಟ್ಟಿದ್ದ ರಂಗೋಲಿ ಎಳೆಗಳನ್ನು ತಳ್ಳುತ್ತಿದ್ದ ಗಾಳಿ, ವಿಪರೀತ ತಂಡಿ ಗಾಳಿ, ಮೈ ಮನಸ್ಸೆಲ್ಲಾ ಕೊರೆಯುತ್ತಿತ್ತು. ನರ ನಾಡಿಗಳೆಲ್ಲಾ ಕುಗ್ಗುತ್ತಿದ್ದವು. ಜೀವ ಸಂಕುಲಕ್ಕೆಲ್ಲ, ಪ್ರಾಣವಾಯುವನ್ನು ತುಂಬಿರುವ ಅದ್ಬುತವಾದ ಶಕ್ತಿ. ಇಂತ ಶಕ್ತಿಯುತವಾದ ಗಾಳಿಯೊಳಗೆ ದೆವ್ವವಿರುತ್ತದೆ. ಆ ದೆವ್ವವೆನ್ನುವುದು ಗಾಳಿ ರೂಪದಲ್ಲಿರುತ್ತದೆ ಎಂದು ಹಜಾರದ ಸುಳಿ ಬಿಸಿಲ ಮದ್ಯೆ ಬೀಸುತ್ತಿದ್ದ ಕುಳಿರ್‌ಗಾಳಿಯೊಳಗೆ, ಎಲೆಯಡಿಕೆ ಕುಟ್ಟುತ್ತಿದ್ದ ಅಪ್ಪನ ಅಮ್ಮ ಹೇಳುತ್ತಲೇ ಇದ್ದಳು. ಆದರೀಗ ಗಾಳಿಯೊಳಗೆ ದೆವ್ವವಿಲ್ಲದಿದ್ದರು. ಮನುಷ್ಯನ ಅಂತರಂಗದೊಳಗೆ, ಲೆಕ್ಕವಿಲ್ಲದಷ್ಡು ದೆವ್ವದ ಗಾಳಿಗಳು ಬೀಸುತ್ತಲೆ ಇವೆ. ಅವು ಯಾವ ಮಂತ್ರವಾದಿಗಳಿಗು ಓಡಿ ಹೋಗುತ್ತಿಲ್ಲ. ಅದರಲ್ಲಿ ಜಾತಿ ದ್ವೇಷದ ಗಾಳಿ, ಕೋಮು ಗಲಬೆಯ ಗಾಳಿ, ಹಣ ಅಂತಸ್ತಿನ ಗಾಳಿ ವರ್ಣ ವಸ್ತ್ರದ ಗಾಳಿ… ಇತ್ಯಾದಿಗಳು. ಇದರಲ್ಲಿ ಮುಖ್ಯವಾಗಿ, ನಿನ್ ಕಂಡ್ರೆ ನನಗಾಗಲ್ಲ, ನನ್ ಕಂಡ್ರೆ ನಿನಗಾಗಲ್ಲ, ಅನ್ನೊ ಬಲವಾದ ದೆವ್ವದಂತ ಗಾಳಿ. ಹೊತ್ತು ಗೊತ್ತಿಲ್ಲದೆ, ಮುಖ ಮೂತಿ ನೋಡದೆ, ಯಾರ‍್ಯಾರ ಎದೇಲಿ ಏನೇನೊ ಆಗಿ, ಅಸಾದ್ಯವಾಗಿ ಬೀಸುತ್ತಾ ಇದೆ.

ಇದು ಆಷಾಡ ಮಾಸದ ಅಸಾದ್ಯವಾದ ಗಾಳಿ. ಈ ಗಾಳಿ ಆಷಾಡಕ್ಕಿಂತ ಮುಂಚೆಯೆ. ದಿಕ್ಕಿಲ್ಲದಂತೆ ಬೀಸಿ ಬೀಸಿ, ಹೊತ್ತಿಗೆ ಸರಿಯಾಗಿ ಸುರಿಯುವ, ಮೋಡವನ್ನೆಲ್ಲ ಮೈದಬ್ಬಿಕೊಂಡು ಹೋಗುತ್ತದೆ. ʼಏನಮ್ಮ ಇದಕ್ಕೆ ಕಣ್ಣಿಲ್ಲ, ಕಾಲಿಲ್ಲ, ಕೈಯಿಲ್ಲ, ಒಣಗಾಕಿರುವ ಬಟ್ಟೆಯನ್ನು ಬೀಳಿಸಿದೆ. ಅದು ಹೇಗೆ ಬೀಳಿಸಿತು?ʼ ಎಲ್ ಕೆ ಜಿ ಬಾಲೆಯ ಸಣ್ಣ ಬಾಯೊಳಗೆ ದೊಡ್ಡ ಪ್ರಶ್ನೆ. ಗಾಳಿಗೆ ಒತ್ತಡವಿದೆ, ಅದು ಬೀಸಿದ ಒತ್ತಡಕ್ಕೆ, ಬಟ್ಟೆ ಹಾರಿ ಹೋಯಿತೆಂದು, ತಿಳಿಸಿ ಹೇಳುವ ಹುನ್ನಾರವಿದ್ದರು, ಅರ್ಥೈಸಿಕೊಳ್ಳಲಾಗದ ಅಪ್ರಾಪ್ತಳು ಅವಳು. ಅರ್ಥ ಅನರ್ಥಗಳಿಗೆ ಅಪ್ರಾಪ್ತಳು. ನಿಜವಾದ ಗಾಳಿಯನ್ನು ಉಸಿರಾಡಿ. ನಿಜವಾದ ಅನ್ನ ತಿಂದು, ನಿತ್ಯ ಸತ್ಯಗಳ ಅರಗಿಸಿ ಕೊಳ್ಳುವ ನಿಜದ ಮನುಜರಿಗಷ್ಟೇ ಅವಳು ಅಪ್ರಾಪ್ತಳು, ಕಣ್ಣಿಲ್ಲದ, ಮನಸ್ಸಿಲ್ಲದ, ಅಂತರಾಳದ ಪ್ರಜ್ಞಯಿಲ್ಲದ, ನಿಯತ್ತಿಲ್ಲದ ನೀಚ ಕಾಮುಕರಿಗೆ ಪ್ರಾಪ್ತಳ್ಯಾರೊ? ಅಪ್ರಾಪ್ತಳ್ಯಾರೊ? ಒಂದನೆ ತರಗತಿ ಮಗುವಾದರು ಸರಿಯೆ. ತೊಂಬತೈದರ ಮುದುಕಿಯಾದರು ಸರಿಯೆ. ಎಂಟು ವರ್ಷದ ಬಾಲಕಿಯನ್ನು, ಐವತ್ತೆಂಟರ ಮಾಜಿ ಸೈನಿಕನೊಬ್ಬ ಅತ್ಯಾಚಾರ ಮಾಡಿದ್ದಾನೆ..

ʼಯಾಕೊ ಕಣಮ್ಮಿ, ಗಾಳಿ ಅಂಬೋದು ಒಂದಿಷ್ಟು ಬೀಸ್‌ತಿಲ್ಲ. ಮೈಯೆಲ್ಲಾ ಕಚ್ಚೋಅಂತ ಸೆಕೆ ಕಣೆ ತಾಯಿ. ಒಂದಿಷ್ಟು ಪ್ಯಾನಾಕ್ರೆ,ʼ ಊರಜ್ಜಿಯ ಅಹವಾಲು. ʼಯವ್ವ, ಯವ್ವ ನನ್ನುನ್ನ ಯಂತಾ ಕಡಿಕ್ ಕರ್ಕಂಬಂದ್ರಿ. ಇಲ್ಲಿ ಆಚೆ ಬರಂಗಿಲ್ಲ, ಅಂಗಳದಾಗ್ ಮನಗಂಗಿಲ್ಲ, ನಮ್ಮಳ್ಳೀಲಾಗಿದ್ರೆ ಹಟ್ಟಿ ಬಯಲಾಗೆ ಆನಂದವಾಗ್ ಮಲಗ್ತಿದ್ವಿ. ಇದು ಪ್ಯಾನ್ ಗಾಳಿ, ಉಷ್ಣದ ಗಾಳಿ ಕಣಮ್ಮಣ್ಣಿ, ಈ ತಬ್ಲಿ ನನ್‌ಮಗುನ್ ಕೆಳಗೆ ಮಲಗ್ ಬ್ಯಾಡ್ರಿ?ʼ ಅಜ್ಜಿಯ ಉವಾಚ. ಇಲ್ಲಿ ಮಲಗೋದೇನ್ ಬಂತು? ಒಬ್ಬೊಬ್ರೆ ತಿರುಗಾಡೋಕು ಭಯ. ಈಗೀಗಿನ ದಿನ ಮಾನಗಳಲ್ಲಿ ಸರಗಳ್ಳರ ಸಂಖ್ಯೆ ಜಾಸ್ತಿಯಾಗಿದೆ. ಪತ್ರಿಕೇಲಿ ಸುದ್ದಿಗೆ ಬರವಿಲ್ಲ. ಆದ್ರೆ ಇದುವರೆವಿಗೂ ಸರ ಬಿಚ್ಚಿಸಿಕೊಂಡ ಕಳ್ಳ ಒಬ್ಬನು ಸಿಗುತ್ತಿಲ್ಲ. ತುಮಕೂರು ನಗರದ ರಸ್ತೆಗಳಲ್ಲಿ ಆಗಾಗ ಸರ ಗಳ್ಳತನಗಳು ಸಲೀಸಾಗಿ ನಡೆಯುತ್ತಿವೆ.

ಗಾಳಿ ನಿಂತಿದ್ದಕ್ಕೋ ಏನೊ? ಬಾವು ಗಟ್ಟಿದ ಮೋಡ, ಒಂದೊಂದೆ ಹನಿಯ ಕಣ್ಣೀರಿನಂತೆ ತೊಟ್ಟಿಕ್ಕುತ್ತದೆ. ಅದು ನೆಟ್ಟಗೆ ತೊಟ್ಟಿಕ್ಕಲಾರದ ಮಳೆ. ಒಂದೊಂದು ಕಡೆ ಉಳುಮೆಯಿಲ್ಲ. ಉಕ್ಕೆಯಿಲ್ಲ, ಬೀಜವಿಲ್ಲ, ಬಿತ್ತನೆಯಿಲ್ಲ, ಬಂಗಕ್ಕೆ ಇಕ್ಕಿರೋ ಬೀಜಗಳನ್ನೆಲ್ಲ ಸೀಮೆ (ಇರುವೆ)ತಿಂದುವು. ದನಾ ಕರೀಗೆ ಮೇವಿಲ್ಲ, ಜನ ಕುಡಿಯಾಕ್ ನೀರಿಲ್ಲ, ಅವರೆಲ್ಲ ಗುಳೇ ಹೋಗಾಕೆ ಜಾಗವಿಲ್ಲ, ಅಜ್ಜಿ ಎಲೆಯಡಿಕೆ ಕುಟ್ಟುತ್ತಲೇ ಇದ್ದಾಳೆ. ಹೊರಗೆ ಹಜಾರದ ಕಲ್ಲು ಬೆಂಚಿನ ಮೇಲೆ ಪುಸ್ತಕ ತೆರೆದು, ವಟ ವಟನೆ ಓದುತ್ತಿರುವ ದೊಡ್ಡ ಮಗ ಪ್ರಶಾಂತನ ಪಾಠ, ಆರನೆ ತರಗತಿಯ ಹುಡುಗನ ಬಾಯಿಂದ. ಗಾಳಿಗೆ ತೂಕವಿದೆ, ಒತ್ತಡವಿದೆ, ಶಬ್ದವಿದೆ, ಗಾಳಿಯಲ್ಲಿ ಕಾರ್ಬನ್ ಡೈ ಅಕ್ಸೈಡ್ ಇದೆ, ಆಮ್ಲಜನಕವಿದೆ, ಸಾರಜನಕವಿದೆ, ಇಂಗಾಲದ ಡ್ಯೆ ಆಕ್ಸ್ಯೆಡ್ ಇದೆ, ಧೂಳಿನ ಕಣಗಳಿವೆ… ಅದಕ್ಕೆ ತೇವಾಂಶವನ್ನು ಇರಿಸಿಕೊಳ್ಳುವ ಗುಣವಿದೆ. ನಗರದ ಕಾರ್ಖಾನೆಗಳಲ್ಲಿನ ದಟ್ಟ ಹೊಗೆ, ಹಾಗೂ ವಾಹನಗಳ ಹೊಗೆ ಸೇರಿಕೊಂಡಂತೆ. ರಾಜಧಾನಿಯ ಗಾಳಿ ವಿಷವಾಗುತ್ತಿದೆ. ಬರಿ ನೀರಿನಿಂದಲೇ ಅಲ್ಲ, ಗಾಳಿಯಿಂದಾನು ಕರೆಂಟ್ ಉತ್ಪತ್ತಿ ಮಾಡ್ತಾ ಅವರೆ. ಯಾರೊ ಮಹಾನುಭಾವರು ಏನೇನೊ ಕಂಡಿಡುದ್ರು. ಸತ್ತವರನ್ನ ಬದುಕ್ಸೊದೊಂದು ಕಂಡಿಡೀಲಿಲ್ಲ. ಅದೊಂದಾಗಿದ್ದಿದ್ರೆ ಮನುಷ್ಯ ಮನುಷ್ಯನಾಗುತ್ತಿರಲಿಲ್ಲ. ಸಾಯೊ ಜೀವಕ್ಕೆ ಏನೇನೊ ಲೂಟಿ ಮಾಡ್ತಾ ಅವ್ನೇ. ಅಜ್ಜಿಯ ಬಾಯಿ ಮತ್ತೆ ಮಾತಾಡ್ತು. ಯಾರ ಬದುಕನ್ನ ಯಾರೊ ಕದಿಯುತ್ತಿದ್ದಾರೆ. ಯಾರ ಸುಖವನ್ನ ಯಾರೊ ಹೊಸಕಾಕುತ್ತಿದ್ದಾರೆ. ಮೂಲ ಸೌಕರ್ಯಕ್ಕಾಗಿ ತಹ ತಹಿಸುತ್ತಿರುವವರ ಬದುಕು, ಬಯಕೆ, ಭಾವನೆಗಳೆಲ್ಲ, ಚಿಂದಿ ಚಿಂದಿಯಾಗಿವೆ. ಕಾಲ ಮಾತ್ರ ಯಾರನ್ನೂ ಕಾಯುತ್ತಿಲ್ಲ. ಅದು ಯಾರ ಅಳುವಿಗೂ ಮರುಗದೆ, ಯಾರ ನಗುವಿಗೂ ಹಿಗ್ಗದೆ. ಮುಂದೆ ಮುಂದೋಡುತ್ತಲೆ ಇದೆ. ಯಾರ ಅಳುವಿಗೆ ಯಾರು ಮರುಗಬೇಕು? ಯಾರ ನಗುವಿಗೆ ಯಾರ ನಗುವು ಸೇರಬೇಕು? ನಗುವ ಮುಖವಾಡದವರೆಲ್ಲ ಕಣ್ಣು ಮುಚ್ಚಿಕೊಂಡು ವಿಜೃಂಭಿಸುತ್ತಿದ್ದಾರೆ.

ನರ ನಾಡಿಗಳನ್ನೆಲ್ಲಾ ಕೊರೆಯುವ ತಂಡಿಗಾಳಿ. ವಿಪರೀತ ಮೈನಡುಗಿಸುವ ಚಳಿ. ಆಹಾಹಹಹ ಬೇಸಿಗೆ ಕಾಲದಲ್ಲಾದ್ರೆ ಹೇಗಾದ್ರು ಇರಬೋದು. ಈ ಆಳಾದ್ ಚಳಿಗಾಲ್‌ದಲ್ಲಿರಕಾಗಲ್ಲ ಕಣ್ರಿ.

ಚಳಿಗಾಲ ಬಂದಾಗ ಎಷ್ಟು ಚಳಿಯೆನ್ನುವರು.
ಬಂತಲ್ಲ ಬೇಸೀಗೆ ಕೆಟ್ಟ ಬಿಸಿಲೆನ್ನುವರು.
ಮಳೆ ಬಿತ್ತೋ ಬಿಡದಲ್ಲ ಶನಿಯೆಂಬ ಟೀಕೆ.

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ. ಕೆ ಎಸ್ ನರಸಿಂಹ ಸ್ವಾಮಿಯವರ ಕವಿವಾಣಿಯೊಂದು ಗಕ್ಕನೆ ತಲೆಗೆ ತೂರಿ. ಬಾಲ್ಯದ ನೆನಪುಗಳು ಮ್ಯೆಯೆಲ್ಲ ಹರಿದಾಡಿದಂತಾಯಿತು. ಎಲ್ಲಿ ಹುಲ್ಲು ಎಲೆಯ ಮೇಲೆ ಸಾಲುಗಟ್ಟುತ್ತಿದ್ದ. ಮುತ್ತು ಮುತ್ತಿನಂತ ಮಂಜು ಹನಿಗಳೆಲ್ಲಿ? ದಟ್ಟ ಹೊಗೆಯಾವೃತದೊಳಗೆ, ಒಬ್ಬರ ಮನೆ ಒಬ್ಬರಿಗೆ ಕಾಣದಂತೆ, ಆವರಿಸುತ್ತಿದ್ದ ಹಿಮಾವೃತವೆಲ್ಲಿ? ಬಾರದ ಮಳೆಗೆ ಬಾಯ್ ಬಿಟ್ಟು, ಇಬ್ಬನಿಯ ತನಿಗೆ ಬೆದೆಗಟ್ಟುತ್ತಿದ್ದ ಬೆಳೆಯೆಲ್ಲಿ? ಇವೆಲ್ಲವನ್ನು ಯಾರು ದೋಚುತ್ತಿದ್ದಾರೆ? ಗಾಳಿ ಬಸಬಸನೆ ಬೀಸುತ್ತಲೇ ಇದೆ. ಎಷ್ಟು ಗುಡಿಸಿದರು ಅಂಗಳದ ತುಂಬೆಲ್ಲ ಕಸ ಕಡ್ಡಿ ಸುತ್ತಿಕೊಳ್ಳುತ್ತಿದೆ. ಥೂ ದರಿದ್ರದ ಗಾಳಿ, ಗುಡಿಸಿ ಗುಡಿಸಿ ಕೈ ಸೋಲುತ್ತಿದೆ, ಎದುರು ಮನೆಯವಳು, ನನ್ನ ಮನೆ ಬಾಗ್ಲಿಗೆ ಬೇಕು ಬೇಕಂತಲೆ ಕಸನೂಕುತ್ತಿದ್ದಾಳೆಂದು. ನಾನು ತಳ್ಳದ ಕಸ, ಅದು ಗಾಳಿಯಿಂದ ಸುತ್ತಿ ಕೊಳ್ಳುತ್ತಿರುವ ಕಸಕ್ಕಾಗಿ. ನೆನ್ನೆ ಮುತುವರ್ಜಿಯಿಂದ ಮಾತನಾಡಿಸುತ್ತಿದ್ದವಳು. ಇವತ್ತು ಯಾವೂರಮ್ಮ? ಎನ್ನದೆ ಮಾತು ಬಿಟ್ಟು ಬಿಂಕವಾಗಿದ್ದಾಳೆ. ಬಿಂಕವಾಗಿದ್ರೆ ಬದುಕು ಗಂಭೀರವಂತೆ, ಆದ್ರೆ ಬದುಕಿನ ಆಗು ಹೋಗುಗಳಲ್ಲಿ, ಬರಿ ಗಂಭೀರವಿದ್ದರೆ ಅದು ರುಚಿಸುವುದಿಲ್ಲ. ಕೆಲವನ್ನು ಹಗುರವಾಗಿ ತೆಗೆದು ಕೊಳ್ಳಬೇಕು. ದುಃಖವನ್ನು, ಕಷ್ಟವನ್ನು, ಸಾವನ್ನು, ನಮ್ಮ ಅರಿವಿಗೆ ಬರದ ನಿಷ್ಟುರವನ್ನು, ಹೀಗೆ ಹಗುರಾದಾಗ, ನಾವು ಗಾಳಿಯಂತೆ ಹಗುರ ಹಗುರವಾಗಿ. ತೇಲುತ್ತ, ಬೀಸುತ್ತ, ನಮ್ಮೊಳಗೆ ನಾವಾಗಿ ಬದುಕಲೆತ್ನಿಸಬೇಕು.

ಯಾಕೊ ನಿರಾಳವೆನ್ನುವುದು ಹಪ ಹಪಿಸುತ್ತಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮುಖಾಂತರ. ಒಡಿಶಾ ಮತ್ತು ಆಂಧ್ರ ಪ್ರದೇಶಕ್ಕೆ. ಚಂಡ ಮಾರುತ ಅಪ್ಪಳಿಸುವ ಹಿನ್ನಲೆಯಲ್ಲಿ. ಆಂಧ್ರ ಪ್ರದೇಶಕ್ಕೆ ಭಾರಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂಬ ಪ್ರಜಾವಾಣಿ ಪತ್ರಿಕೆಯ ಸುದ್ದಿಯೊಂದು. ತಲೆಗೆ ಗಕ್ಕನೆ ತಾಕಿ ಮೈ ಜುಮ್ಮೆನ್ನುತ್ತದೆ, ಹೇಗಿರುತ್ತಾರೆ? ಅಲ್ಲಿನ ಜನರ ಮನಸ್ಥಿತಿ ಹೇಗಾಗಿರ ಬೇಕು? ಏಳನೆ ತರಗತಿ ಅಂತ್ಯದಲ್ಲಿನ ಬೇಸಿಗೆ ರಜೆಯಲ್ಲಿರುವಾಗ ಮುಂಗಾರಿಗೆ ಕಾಲಿಟ್ಟ ಮೊಟ್ಟ ಮೊದಲ, ಮೇ ತಿಂಗಳ ಒಂದು ಸಂಜೆ, ಅಮ್ಮ ಆಗತಾನೆ ಒಲೆಯಚ್ಚಿ ಹಿಟ್ಟಿನೆಸರಿಗಿಟ್ಟ(ಮುದ್ದೆಯನೀರು)ತಪ್ಪಲೆ. ನಿಗಿ ನಿಗಿ ಉರಿಯುತ್ತಿದ್ದ ಬೆಂಕಿಯ ಪುಟ್ಟ ಜ್ವಾಲೆಗಳು. ಊದು ಗೊಳವಿಯಲ್ಲಿ ಒಲೆಯುರಿಸುತ್ತಿದ್ದ ನನ್ನ ದಪ್ಪುಸಿರು. ಬಿಟ್ಟು ಬಿಟ್ಟು ಬೀಸುತ್ತಿದ್ದ ಮಂದ ಗಾಳಿ. ಅಲ್ಲಲ್ಲಿ ಗೂಡು ಕಟ್ಟಿದ ದಟ್ಟ ಮೋಡ, ಇವತ್ತು ಮಳೆಯೇನಾರ ಬರ‍್ಬೋದು. ಅಮ್ಮನ ಲೆಕ್ಕಾಚಾರ ಅಗಾಧವಾಗಿ, ಕೊಪ್ಪಲಲ್ಲಿ ಒಣಗಿದ ಬಟ್ಟೆಗಳು ಒಳ ಸೇರಿದವು. ಹಟ್ಟಿ ಬಯಲಲ್ಲಿ ನಮುಲುತ್ತಿದ್ದ (ಮೆಲುಕು)ಜೀವದನಗಳು ಕೊಟ್ಟಿಗೆ ಸೇರಿದ್ದವು. ಬಸ ಬಸನೆ ಉಕ್ಕಿದ ಹಿಟ್ಟಿನೆಸರಿಗೆ, ಮೂರುಚಿಪ್ಪು ಅಸಿಟ್ಟು ಸುರಿದು, ಕೋಲೂರಿದ ಅವ್ವನ ಕಣ್ಣುಗಳು ಆತಂಕಕ್ಕೆ ತಿರುಗುವ ಮುಂಚೆಯೆ. ಬಂತು ಬಂತು ಗಾಳಿ, ಯವ್ವ ಅದೆಲ್ಲಿತ್ತೊ ಏನೊ? ನುಗ್ಗಿಬಂದ ಬಿರುಗಾಳಿಯ ರಭಸಕ್ಕೆ, ಊರಾದ ಊರೆಲ್ಲರ ಉಸಿರು, ಡವ ಡವನೆಂಬ ಎದೆಗೆ ಬಲಿ ಬಿದ್ದು, ಜನಾದ ಜನವೆಲ್ಲ ಕೀರಾಡಿಬಿಟ್ರು ಆ ಬಿರು ಗಾಳಿಯ ಮಧ್ಯೆ ಬಂದ ಆಲಿಕಲ್ಲಿನ ಹನಿಗಳು. ಮೈಸೀಳಿಕೊಳ್ಳತ್ತಿದ್ದ ಮಿಂಚು ಗುಡುಗಗಳು, ಅಲ್ಲಲ್ಲಿ ಉದುರುತ್ತಿದ್ದ ಹನಿಗಳನ್ನ ರಭಸವಾಗಿ ತಳ್ಳುತ್ತಿದ್ದ ಬಿರುಗಾಳಿ. ಮೂತಿ ಮುಸುಡಿ ನೋಡದೆ ಚಚ್ಚಿದ ಬಿರುಗಾಳಿಗೆ. ಅಲ್ಲಲ್ಲಿ ಉರುಳಿಕೊಂಡ ಹೆಮ್ಮರಗಳು, ನಮ್ಮ ನಡು ಮನೆಯ ಹೆಂಚುಗಳು ಅತ್ತಾರು. ಅಡುಗೆ ಮನೆಯ ನೆತ್ತಿ ಮ್ಯಾಲಿನ ಹೆಂಚುಗಳು. ಟಣ ಟಣನೆ ಉದುರುದುರಿ ಪುಡಿಯಾದವು. ಮನೆಯವರ ಕಿರುಚಾಟ ಮುಗಿಲಿಗೆ ಮುಟ್ಟಲಿಲ್ಲ. ಭಯ, ಆತಂಕ, ಎಲ್ಲರೂ ಎಲ್ಲೆಲ್ಲಿಗೋ ಓಡಲೆತ್ನಿಸಿ, ಮನೆಯಲ್ಲಿ ಪಿ ಯು ಓದುತ್ತಿದ್ದ ಮಾವನ ಮಗ, ಪ್ರಶಾಂತನಿಗೆ ಡಿಕ್ಕಿ ಹೊಡೆದಿದ್ದೆ. ಆಗಿನ್ನೂ ನಿಮಿಷವು ಕಳೆಯದೆ ನನ್ನ ಜಡೆ ಇಡಿದೆಳೆದ. ಅಮ್ಮನ ಕೈಯ್ಯೊಳಗೆ ಪಕ್ಕದಲ್ಲಿದ್ದ ಆಂಜನೇಯನ ಗುಡಿಸೇರಿದ್ದೆವು. ಊರ ಗಿಡ ಮರಗಳನ್ನು, ಎಲ್ಲರ ಮನೆಯ ಹೆಂಚುಗಳನ್ನು, ಹಾರಿಸಿ, ಹೊಡೆಸಿ, ಆಟವಾಡಿಸಿದ ಗಾಳಿ, ಊಟ, ನಿದ್ದೆ, ನೆಮ್ಮದಿ, ಸುಳ್ಳು, ಸತ್ಯ, ಭರವಸೆಗಳನ್ನೆಲ್ಲ ಕಿತ್ತುಕೊಂಡ ಆ ರಾತ್ರಿಯ ಗಾಳಿ ನಿಂತದ್ದು ಯಾವಾಗೆನ್ನುವುದು ಗೊತ್ತಾಗಲಿಲ್ಲ. ಬೆಳಕರಿದು ನಿಚ್ಚಳವಾದಾಗ. ಒಂದು ಹಕ್ಕಿ ಪಕ್ಷಿಯ ಸ್ವರವ ಇಲ್ಲದ ನನ್ನೂರಲ್ಲಿ ಸ್ಮಶಾನ ಮೌನ ಆವರಿಸಿತ್ತು. ಸುನಾಮಿ ದುರಂತ ನಡೆದು ಆಗಿನ್ನೂ ವರ್ಷವಾಗಿರಲಿಲ್ಲ. ಟೀವಿ ಮಾದ್ಯಮಗಳಲ್ಲಿ ನೋಡಿದ ರಾಶಿ ರಾಶಿ ಹೆಣಗಳ ನೆನಪು. ನಮ್ಮೂರಲ್ಲಿ ಎದ್ದ ಬಿರುಗಾಳಿಯ ಹೊಡೆತ. ಎಲ್ಲರೂ ಎಷ್ಟೋದಿನಕ್ಕೆ ಚೇತರಿಸಿ ಕೊಂಡಂತಾಯಿತು.

ನೆನಪುಗಳು ಹೀಗೆ ಒಂದಕ್ಕಿಂತ ಒಂದು. ಹಿತವಾದ ತಂಗಾಳಿಯಂತೆಯು ಬರುತ್ತವೆ. ಗಾಳಿ ಸತ್ತಗಳಿಗೆಯಲ್ಲಿನ ಬುಗ ಬುಗನೆಂಬ ಸೆಕೆಯಂತೆಯು ಕಾಡುತ್ತವೆ. ಆವತ್ತು ಪ್ರಶಾಂತನಿಗೆ ಢಿಕ್ಕಿ ಹೊಡೆದ ಘಳಿಗೆಯೊಂದು. ಅಂತಹ ಭಯಂಕರ ಬಿರುಗಾಳಿಯ ಮಧ್ಯೆಯೂ ನನ್ನ ಅವನ ಪ್ರೀತಿ, ತಣ್ಣನೆಯ ತಂಗಾಳಿಗೆ ತಿರುಗಿ ಓಲೈಸಿಕೊಂಡು ಆರೇಳು ವರ್ಷದ ನಂತರ, ಅವನು ಡಾಕ್ಟ್ರಾದನೆಂಬ ದಿನ ಮಾನದ ಅಂತಸ್ತಿಗನುಗುಣದಲ್ಲಿ. ನನಗು ಅವನಿಗೂ ತಾಳೆಯಾಗದ ಪ್ರಶ್ನೆಗಳ ಬಿರುಗಾಳಿಯೆದ್ದು. ನಮ್ಮಿಬ್ಬರ ನಡುವಿನ ಪ್ರೀತಿ ಖುಲಾಸೆಗೊಂಡಿತ್ತು. ಮತ್ತೆ ಯಾವತ್ತೂ ತಿರುವಿ ನೋಡದ, ಬದುಕಿನ ಆದ್ಯಾಯದ ಪುಟ ಮುಚ್ಚಿ ಹೋಗಿದ್ದರು, ಸುನಾಮಿದುರಂತದ ಹೆಣಗಳ ನೆನಪೊ? ಆಂದ್ರಪ್ರದೇಶಕ್ಕೆ ತಟ್ಟುವ ಅಪಾಯದ ಸೂಚನೆಯೊ? ಎದೆಯ ಇಕ್ಕೆಲಗಳಲ್ಲಿ ಪ್ರಶಾಂತನೆಂಬುವವನ ಪದ ಜಾರಿ ಹೋಗಿದ್ದರಿಂದಲೊ? ಕಣ್ಣೊಳಗೆ ಕಾವುಕ್ಕಿದ ನೀರು, ನನ್ನ ಮುಂದಿದ್ದ ಪ್ರಜಾವಾಣಿ ಪತ್ರಿಕೆಯ ಮೇಲೆ ಗಳ ಗಳನೆ ಜಾರಿದ್ದವು.

ಬಿರುಗಾಳಿ, ಬಿಸಿಗಾಳಿ, ತಂಡಿಗಾಳಿ, ತಂಪುಗಾಳಿ, ಒಟ್ಟಿನಲ್ಲಿ ಮನುಷ್ಯನ ಉಸಿರಾಟಕ್ಕೆ, ಶುದ್ದವಾದ ಗಾಳಿಯನ್ನು ರಕ್ಷಿಸಬೇಕಿದೆ. ಆ ಮೂಲಕ ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳಸಬೇಕಿದೆ. ಸರ್ಕಾರಿ ಶಾಲಾ ಮಕ್ಕಳ ವಿಜ್ಞಾನ ಬೋಧನೆಯಲ್ಲಿ ಎರಡು ನಿಮಿಷವಾಗಿರಲಿಲ್ಲ. ರಸ್ತೆಯ ಮೇಲೆ ಜೋರಾದ ಕರ್ಕಶದ ದ್ವನಿ. ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆ ನಿಯಂತ್ರಿಸಲು. ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ. ವಾಹನಗಳು ಜಕಂ ಗೊಂಡಿದ್ದವು, ಕಾನ್‌ಸ್ಟೇಬಲ್‌ಗಳು ಗಾಯಗೊಂಡಿದ್ದರು, ಗಂಗಮ್ಮನೆಂಬುವಳು ಮೂರ್ಛೆ ಹೋಗಿದ್ದಳು, ಪ್ರಜ್ಞಾವಂತರೆಲ್ಲ ಕಳಾಹೀನರಾಗಿದ್ದರು.

ನಾವು ಬದುಕಲು ಗಾಳಿ ಬೇಕು. ನೀರು ಬೇಕು, ಆಹಾರ ಬೇಕು, ಮೂರನೆ ತರಗತಿಯ ಪರಿಸರ ಅದ್ಯಯನದೊಳಗಿನ. ಕಂದಮ್ಮಗಳ ಅಗಾದ ಚಿಂತನೆ. ಊಟ ತಡವಾದ್ರು ಬದುಕಬಹುದು, ನೀರು ತಡವಾದ್ರು ಬದುಕಬಹುದು, ಗಾಳಿ ತಡವಾದ್ರೆ ಒಂದು ಘಳಿಗೆಯು ಬದುಕಲಾರೆವು. ಮದ್ಯಾನ ಒಂದು ಹತ್ತರ ಊಟದ ವಿರಾಮದ ಬೆಲ್ಲು. ಢಣ ಢಣನೆಂದು ಹೊಡೆಯತೊಡಗಿತು.

‍ಲೇಖಕರು Admin

October 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: