ಪುಟ್ಟಾರಾಧ್ಯ ಹೊಸ ಕಥೆ- ರೂಫಸ್ ಟ್ರೀಪೈ ಕೇಸ್

 ಪುಟ್ಟಾರಾಧ್ಯ ಎಸ್

ಸರ್ವೊತ್ತಾಗಿರಬೇಕು, ಬಸಪ್ಪನಿಗೆ ನಿದ್ರೆಯಿಂದ ಎಚ್ಚರವಾಯಿತು. ಕಿಟಕಿಯಿಂದ ಹೊರಗಡೆ ಇಣುಕಿದ. ಪೇಟೆಯ ಕತ್ತಲಿಗೂ, ತೋಟದ ಕತ್ತಲಿಗೂ ವ್ಯತ್ಯಾಸವಿದೆ. ಪೇಟೆಗಳಲ್ಲಿ ಅಲ್ಲಲ್ಲಿ ಬಿದ್ದ ಬೆಳಕು ಪ್ರತಿಬಿಂಬಿಸಿ ರಾತ್ರಿ ರಾತ್ರಿಯಾಗಿರುವುದಿಲ್ಲ ಆದರೆ ತೋಟದಲ್ಲಿ ಹಾಗಲ್ಲ, ರಾತ್ರಿಯಾದೊಡನೆ ಅಸಂಖ್ಯ ಕೀಟಗಳು ವಿಚಿತ್ರವಾಗಿ ಕಿರುಚುತ್ತಾ, ದುರ್ಬಲ ಹೃದಯದವರಿಗೆ ನಡುಕ ಹುಟ್ಟಿಸಿಬಿಡುವ ಕಡು ಕತ್ತಲು, ಎಂತವರನ್ನೂ ಜಾಗೃತಗೊಳಿಸಿ ಬಿಡುತ್ತದೆ. ಮಂಚದಿಂದ ಎದ್ದ ಬಸಪ್ಪ ಕಂಬಳಿ ತೆಗೆದು ಚಾರ್ಜಿಗೆ ಹಾಕಿದ್ದ ಬ್ಯಾಟರಿಯನ್ನೆತ್ತಿಕೊಂಡು ಗದ್ದೆಯ ಹಾದಿಗುಂಟ ನಡೆಯತೊಡಗಿದ.

ಹೋದ ವರ್ಷ ಪೇಟೆಯಿಂದ ತನ್ನಣ್ಣ ತಂದುಕೊಟ್ಟಿದ್ದ ಬ್ಯಾಟರಿಯ ಗಾಜೊಡೆದು ಬಲ್ಬಿನ ಮೇಲೆ ಅಸಾಧ್ಯ ಧೂಳು ಕುಂತಿದ್ದರಿಂದ ಬ್ಯಾಟರಿಯಿಂದ ಬಂದ ಬೆಳಕು ಅಷ್ಟು ಪ್ರಕರಮಾನವಾಗಿರಲಿಲ್ಲ. ಮನೆಯಿಂದ ಎರಡು ಮಾರು ದೂರ ನಡೆದಿರಬೇಕು ದೊಪ್ಪನೆ ಹೆಣ ಬಿದ್ದಂತೆ ಸದ್ದಾಯಿತು. ಬಸಪ್ಪನಿಗೊಮ್ಮೆ ಎದೆ ಝಲ್ ಎಂದಿತು, ಆದರೆ ಬಸಪ್ಪ ಗಟ್ಟಿಗ ಜೊತೆಗೆ ಹುಟ್ಟಿನಿಂದಲೂ ಇದೇ ತೋಟದಲ್ಲಿ ಬದುಕಿ ಬಾಳಿದ್ದವ ಆದ್ದರಿಂದ ಸಾವರಿಸಿಕೊಂಡು ಟಾರ್ಚಿನ ಬೆಳಕಾಯಿಸಿದ, ತೆಂಗಿನ ಮರದಿಂದ ಗರಿಯೊಂದು ಬದಿಯ ಮೇಲೆ ಬಿದ್ದಿತ್ತು. ಬೆಳಕನ್ನು ಬಿಟ್ಟು ನೋಡಿದವನಿಗೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದು ಕಂಡು ಹಣ್ಣಾಗಿದೆ ಎಂದು ಪಕ್ಕಕ್ಕೆ ಸರಿಸಿ ಮುನ್ನಡೆಯತೊಡಗಿದ. ಮತ್ತೊಂದು ಮಾರು ದೂರ ನಡೆದು ತಲುಪಿದ್ದು ಚೆಟ್ಟಿನ ಬಾವಿಯನ್ನು.

ನೀರು ಪೈಪಿನಿಂದ ಬಾವಿಗೆ ಸುರಿಯುತ್ತಿತ್ತು, ಸುತ್ತಲೂ ಒಮ್ಮೆ ಕಣ್ಣಾಯಿಸಿ ಎಲ್ಲವು ಸರಿಯಿದೆ ಎಂದನಿಸಿ ವಾಪಸಾಗಿ ಮನೆ ತಲುಪಿ ಮತ್ತೊಂದು ನಿದ್ರೆ ತೆಗೆದು ಎಚ್ಚರವಾದಾಗ ಬೆಳಗಿನ ಜಾವ ಸುಮಾರು ಐದು ಘಂಟೆಯಾಗಿರಬೇಕು. ಹಾಸಿಗೆಯಿಂದ ಎದ್ದವನೇ ಮತ್ತೊಮ್ಮೆ ಗದ್ದೆಯ ಹಾದಿಗುಂಟ ನಡೆಯತೊಡಗಿದ. ಸುಮಾರು ಎರಡು ಮಾರು ದೂರ ಬಂದಿರಬೇಕಷ್ಟೆ ಮತ್ತೊಂದು ತೆಂಗಿನ ಗರಿ ಮರದಿಂದ ಉದುರಿತು. ತಲೆ ಮೇಲೆ ಬೀಳಬೇಕಿದ್ದನ್ನು ತಪ್ಪಿಸಿಕೊಂಡೆ ಎಂಬುದನ್ನು ಯೋಚಿಸುತ್ತಾ ಗರಿಯನ್ನು ಎತ್ತಿಹಾಕುವಾಗ ಮತ್ತೊಮ್ಮೆ ಗಮನಿಸಿದ, ಈ ಎಲೆ ಕೂಡ ಪೂರ್ಣ ಹಳದಿ ಬಣ್ಣಕ್ಕೆ ತಿರುಗಿತ್ತು. ಬಾವಿ ತಲುಪಿ ಬಾವಿ ತುಂಬಿರುವುದು ಗಮನಿಸಿ ಗೇಟ್ ವಾಲ್ ಬೇರೆಡೆ ತಿರುಗಿಸಿ ಮತ್ತೆ ಮನೆಗೆ ವಾಪಸಾದ.

ಮನೆಯ ಮುಂದೆ ಬಂದಾಗ ಬಲಗಡೆಯ ಕಂಬದಲ್ಲಿ ರಾತ್ರಿಯೆಲ್ಲ ಉರಿಯದೆ ಇದ್ದ ಬಲ್ಬು ಹತ್ತಿಕೊಂಡಿರುವುದನ್ನು ಗಮನಿಸಿದ, ಇದು ಮಾಮೂಲಿ-ಲೂಸ್ ಕನೆಕ್ಷನ್. ಸವೆದ ಮೆಟ್ಟನ್ನು ಹೊರಗಡೆ ಬಿಟ್ಟು ಕಾಲೊರೆಸಿಕೊಂಡು ಒಳ ಬಂದು ಮಂಚದ ಮೇಲೆ ಕುಳಿತ ಆದರೆ ಜೇನು ಹುಳುವೊಂದು ಇವನ ತಲೆಯನ್ನೇ ಗಿರ ಗಿರ ಸುತ್ತುತ್ತಲೇ ಇತ್ತು. ಇದನ್ನು ಗಮನಿಸಿ ಬಾಗಿಲಿಗೆ ಮುಖ ಮಾಡಿ ಕೈನಲ್ಲಿ ಇನ್ನೂ ಹತ್ತಿ ಉರಿಯುತ್ತಿದ್ದ ಟಾರ್ಚನ್ನ ಶೆಲ್ಫಿನ ಮೇಲಿಟ್ಟ. ಬಾಗಿಲಿನಿಂದ ಹೊರಟ ಬೆಳಕು ಮನೆಯ ಮಾರು ದೂರದಲ್ಲಿದ್ದ ಮರವೊಂದಕ್ಕೆ ಬೀಳುತ್ತಿತ್ತು . ಜೇನು ಹುಳು ಬೆಳಕಿನ ದಾರಿ ಹಿಡಿದು ಹೊರಗೆ ಹೊರಟಿತು. ಇನ್ನೇನು ಬಾಗಿಲ ದಾಟಿ ಹೊರ ಹೋಗಬೇಕು ಮತ್ತೊಮ್ಮೆ ಒಳ ಬಂದು ಎರಡು ನಿಮಿಷ ಗಿರ ಗಿರ ಸುತ್ತಿ ಹೊರ ಹೋಯಿತು.

ಬಸಪ್ಪನಿಗೆ ಕುಟುಂಬವೆಂದರೆ ಬರೀ ಮನುಷ್ಯರಷ್ಟೇ ಅಲ್ಲ, ತನ್ನ ತೋಟದಲ್ಲಿರುವ ಸಕಲ ಜೀವಿಯೂ ತನ್ನ ಕುಟುಂಬ ಎಂದೇ ಭಾವಿಸಿ ಕಂಡ ಪಕ್ಷಿ ಪ್ರಾಣಿಗಳನ್ನು ಮಾತಾನಾಡಿಸುತ್ತ ಅನ್ಯೋನ್ಯ ಬದುಕು ನಡೆಸಿದ್ದ. ಸಾಮಾನ್ಯವಾಗಿ ಇವು ಏಕ ಮೂಲದ ಮಾತುಕತೆಗಳಾಗಿರುತ್ತಿದ್ದವು. ಎಲ್ಲವೂ ಇವನ ಮಾತುಗಳಿಗೆ ಪ್ರತಿಕ್ರಿಯಿಸದೆ ಹೋದರೂ ಇವನನ್ನು ಕಂಡರೆ ತಮ್ಮವನೇ ಒಬ್ಬ ಎಂದು ಪರಿಗಣಿಸಿದ್ದವು. ಆದ ಕಾರಣ ಆ ಜೇನುಹುಳು ಕರೆದಂತಾಗಿ ಬಾಗಿಲಿನಲ್ಲಿ ನಿಂತು ಹೊರ ಇಣುಕಿದ. ನೂರಾರು ಜೇನು ಹುಳುಗಳು ಪಕ್ಕದಲ್ಲೇ ಅರಳಿದ್ದ ದುಂಡು ಮಲ್ಲಿಗೆ ಹೂವುಗಳಲ್ಲಿ ಮಕರಂಧ ಹೀರುತ್ತಿದ್ದವು. ಅದರ ಪಕ್ಕದಲ್ಲೇ ಇದ್ದ ಹೊಂಗೆ ಮರದಲ್ಲಿ ಹೊಸ ಜೇನು ಗೂಡು ಕಾಣಿಸಿತು. ಅಂದರೆ ತನ್ನ ತೋಟದಲ್ಲೊಂದು ಹೊಸ ಕುಟುಂಬ ಸಂಸಾರ ಹೂಡುತ್ತಿದ್ದು ಅದರಲ್ಲೊಬ್ಬ ತನಗೆ ತಿಳಿಸಲು ಬಂದಿದ್ದನೇನೋ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತ ಅಲ್ಲಿಯೇ ಇದ್ದ ನಿಂಬೆ ಮರದಲ್ಲೊಂದು ನಿಂಬೆಹಣ್ಣು ಕಿತ್ತು ನಿಂಬೆಹಣ್ಣಿನ ಚಹಾ (Lemon Tea) ತಯಾರಿಸಲು ಅಡುಗೆ ಕೋಣೆಗೆ ನಡೆದ.

***

ಸಮಯ ರಾತ್ರಿ ಒಂಬತ್ತು ಘಂಟೆ, ಕೈನಲ್ಲೊಂದು ವಿಸ್ಕಿ ಗ್ಲಾಸಿಡಿದು ರಾಮ್ ರಾವ್ ತನ್ನ ನೋಕಿಯಾ ಮೊಬೈಲಿನಲ್ಲಿ ಬೆಳಗಿನಿಂದ ಬಂದಿರುವ ಅಷ್ಟೂ ಮೆಸೇಜುಗಳನ್ನು ಓದುತ್ತಾ ಇರುವಂತೆ ಒಂದು ಮೆಸೇಜು ಅವರ ಗಮನ ಸೆಳೆಯಿತು ”STOP RESEARCH ON TREEPIE”. ಮುಂದಿನ ತಿಂಗಳು ಅಬುಧಾಬಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸಮಾವೇಶವೊಂದರಲ್ಲಿ ರಾಮ್ ರಾವ್ ಹಲವು ರಾಷ್ಟ್ರಗಳಿಗೆ ಬೇಕಾದ ಅತೀ ಮಹತ್ತರ ವಿಷಯವೊಂದರ ಘೋಷಣೆ ತಯಾರಿ ನಡೆಸಿರುವ ಹೊತ್ತಿನಲ್ಲೇ ಯಾರೋ ಈ ಮೆಸೇಜನ್ನು ಕಳಿಸಿದ್ದು ನೋಡಿ ಇವರಿಗೆ ಆಶ್ಚರ್ಯವಾಗತೊಡಗಿತು. ಕೂಡಲೇ ಮೆಸೇಜನ್ನು ದೆಹಲಿಯಲ್ಲಿರುವ ಇಂಟಲಿಜೆನ್ಸ್ ಬ್ಯುರೋದ ಮಿತ್ರ ಅಶುತೋಷ್ ಅವರಿಗೆ ಕಳಿಸಿ ಬೇರೆ ಮೆಸೇಜುಗಳನ್ನು ಓದತೊಡಗಿದರು. ರಾಮ್ ರಾವ್ ಸರ್ಕಾರಿ ಕಾಲೇಜಿನಲ್ಲಿ ಸೀನಿಯರ್ ಎಂಟಮಾಲಜಿ (ಕೀಟಶಾಸ್ತ್ರ) ಪ್ರೊಫೆಸರ್‌ ಜೊತೆಗೆ ಹಲವು ಅಂತರರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಭಾಗವಹಿಸಿದ್ದರಿಂದ ಈ ಬಾರಿ ಕೂಡ ಭಾರತವನ್ನು ಪ್ರತಿನಿಧಿಸಿ ಅಬುಧಾಬಿ ಕಾರ್ಯಕ್ರಮಕ್ಕೆ ಹೋಗುವುದಿತ್ತು. ಇನ್ನೇನು ಎಲ್ಲವೂ ಮುಗಿಸಿ ಫೋನನ್ನು ಕೆಳಗಿರಿಸಿ ಕುರ್ಚಿಯಿಂದ ಏಳಬೇಕು ಅಷ್ಟರಲ್ಲಿ ಮನೆಯಲ್ಲಿನ ಲ್ಯಾಂಡ್ ಲೈನು ರಿಂಗಣಿಸಿತು. ಸಾಮನ್ಯವಾಗಿ ಇಷ್ಟು ಹೊತ್ತಿನಲ್ಲಿ ಮನೆಯ ಲ್ಯಾಂಡ್ ಲೈನಿಗೆ ಫೋನಾಯಿಸುವವರು ಕಡಿಮೆ ಜೊತೆಗೆ ಆ ಮೆಸೇಜನ್ನು ನೋಡಿ ಸ್ವಲ್ಪ ಗಾಬರಿಯಾದ್ದರಿಂದ ಯೋಚಿಸಿತ್ತಲೇ ಫೋನೆತ್ತಿದರು.

ಒಂದೆರಡು ನಿಮಿಷವಾದ ಮೇಲೆ ಆ ಕಡೆಯಿಂದ ಗಡುಸಾದ ಧ್ವನಿಯೊಂದು ಉತ್ತರಿಸಿತು ”STOP RESEARCH ON TREEPIE”. ಧ್ವನಿ ಕೇಳಿ ರಾಮರಾವ್ ಅವರಿಗೆ ನಡುಕ ಉಂಟಾದರೂ ಧೈರ್ಯ ತೆಗೆದುಕೊಂಡು ಉತ್ತರಿಸಿದರು “ನೀವು ಯಾರು?”. ಅಷ್ಟರಲ್ಲಿ ಆ ಕಡೆಯಿಂದ ಫೋನಿಟ್ಟಾಗಿತ್ತು. ಹೆಂಡತಿಗೆ ತನ್ನಲ್ಲಾದ ಬದಲಾವಣೆಗಳನ್ನು ತೋರ್ಪಡಿಸದೆ ಚಡಪಡಿಸುತ್ತಾ ಊಟ ಮುಗಿಸಿ ಅಂದಿನ ದಿನ ಪತ್ರಿಕೆಯನ್ನು ತೋರ್ಪಡಿಕೆಗೆ ತಿರುಗಿಸುತ್ತಾ ಕುಳಿತಿದ್ದರು. ಅಷ್ಟರಲ್ಲಾಗಲೇ ಸಮಯ ಹನ್ನೊಂದಾಗಿತ್ತು ಆದ್ದರಿಂದ ಮಲಗಲು ಇನ್ನೇನು ಹೊರಡಬೇಕು ಮತ್ತೊಮ್ಮೆ ಲ್ಯಾಂಡ್ ಲೈನು ರಿಂಗಣಿಸಿತು. ಆ ಕ್ಷಣ ರಾಮ್ ರಾವ್ ಅವರಿಗೆ ಮೈ ನಡುಗಿದಂತಾಯಿತು. ಫೋನೆತ್ತಿದ ರಾಮ್ ರಾವ್ ಅವರಿಗೆ ಆ ಕಡೆಯಿಂದ ಅಶುತೋಷ್ ಅವರ ಆತುರದ ಧ್ವನಿ ಕೇಳಿ ಜೀವ ಬಂದಂತಾಯಿತು. ಅಶುತೋಷ್ ಮಾತಾಡಿದರು “ತಡ ಮಾಡದೆ ನಾಳೆ ಬೆಳಗ್ಗೆಯೇ ಹೊರಟು ದೆಹಲಿಗೆ ಬಂದು ಬಿಡಿ. ಈಗ ಹೋಗಿ ಬಾಗಿಲನ್ನು ತೆರೆದರೆ ನಿಮ್ಮ ಟಿಕೇಟುಗಳನ್ನು ಮತ್ತು ವಿವರಗಳನ್ನು ನಮ್ಮ ಆಫೀಸರ್ ಒಬ್ಬರು ಹಿಡಿದು ನಿಂತಿರುತ್ತಾರೆ. ಪ್ರಶ್ನೆ ಕೇಳದೆ ಹೆಚ್ಚು ಹೊತ್ತು ನಿಲ್ಲದೆ ತೆಗೆದುಕೊಂಡು ಬಂದು ಬಿಡಿ. ಮನೆಯ ಸುತ್ತ ಮುತ್ತ ಐದು ಜನರು ಕಾವಲು ಕಾಯುತ್ತಾರೆ ಬೆಳಗಿನವರೆಗೂ, ಹೆದರುವುದು ಬೇಡ – ನಿಮ್ಮ ಸುರಕ್ಷತೆಗಾಗಿ” ಎಂದು ಫೋನಿಟ್ಟರು. ಹದಿನೈದು ಸೆಕೆಂಡುಗಳಿಗಿಂತ ಹೆಚ್ಚು ಮಾತನಾಡಿರಲಿಲ್ಲ. ಈಗ ರಾಮರಾವ್ ಅವರಿಗೆ ಹುಚ್ಚು ಹಿಡಿದಂತಾಯ್ತು ಆದರೆ ದಾರಿಯಿರದೆ ಮನೆ ಬಾಗಿಲು ತೆಗೆದು ನೋಡಿದರೆ ಪೊಲೀಸ್ ಯೂನಿಫಾರ್ಮ್ ಅಲ್ಲಿ ಒಬ್ಬ ಮಹಿಳಾ ಅಧಿಕಾರಿ ನಿಂತಿದ್ದರು. ಮರು ಮಾತನಾಡದೆ ಅವರು ಕೊಟ್ಟ ವಸ್ತುಗಳನ್ನು ಪಡೆದು ಬಾಗಿಲು ಮುಚ್ಚಿಕೊಂಡಾಗ ಆ ಮಹಿಳಾ ಅಧಿಕಾರಿಯ ತೇಜಸ್ಸು ಆ ದಿಟ್ಟ ನೋಟ ರಾಮ್ ರಾವ್ ಅವರ ಎದೆಯಲ್ಲಿ ಧೈರ್ಯ ತುಂಬಿತ್ತು. ಬೆಳಗ್ಗೆ ಎದ್ದು ತಯಾರಾಗಿ ಹೆಂಡತಿಗೆ ಸರ್ಕಾರದ ಕೆಲಸಕ್ಕಾಗಿ ಅಚಾನಕ್ ಆಗಿ ಕರೆ ಬಂದ ಕಾರಣ ಹೊರಡುತ್ತಿದ್ದೇನೆ ಎಂದು ತಿಳಿಸಿ ಹೊರಗಡೆ ಹೋದಾಗ ಕಾರು ತಯಾರಾಗಿ ನಿಂತಿತ್ತು. ಇವರು ಬಂದೊಡನೆ ಬಾಗಿಲು ತೆರೆದದ್ದು ಮತ್ತದೇ ಮಹಿಳಾ ಅಧಿಕಾರಿ. ಎದೆಯ ಮೇಲಿನ ನೇಮ್ ಪ್ಲೇಟಿನಲ್ಲಿದ್ದ ಹೆಸರು ಓದಿ “ಗುಡ್ ಮಾರ್ನಿಂಗ್ ಮಿಸ್. ರಾಯ್ಕರ್ ” ಎಂದೊಡನೆ ಅಧಿಕಾರಿ ಮತ್ತೊಮ್ಮೆ ನಕ್ಕು ವಾಪಸಾಗಿ ವಿಶ್ ಮಾಡಿ ಮುಂದಿನ ಸೀಟಿನಲ್ಲಿ ಕುಳಿತರು. ರಾಮ್ ರಾವ್ ಕಾರಿನಲ್ಲಿ ಕುಳಿತೊಡನೆ ಕಾರು ಚಲಿಸತೊಡಗಿತು.

ಮಿಸ್ ರಾಯ್ಕರ್ ಮಾತನಾಡತೊಡಗಿದರು, “ಸರ್ ಯಾವುದೇ ಅಪರಿಚಿತರು ನಿಮ್ಮೊಡನೆ ಮಾತನಾಡಿದರೂ ನೀವು ದೆಹಲಿ ತಲುಪುವವರೆಗೂ ನಿಮ್ಮ ಮಾತುಗಳ ಮೇಲೆ ಎಚ್ಚರವಿರಲಿ, ಜೊತೆಗೆ ವಿಮಾನ ಹತ್ತುವ ಮೊದಲೇ ನಿಮಗೆ ತೊಂದರೆ ಕಂಡು ಬಂದಲ್ಲಿ ಈ ಸಂಖ್ಯೆಗೆ ಕರೆ ನೀಡಿ” ಎಂದು ಕಾರ್ಡು ನೀಡಿದಳು. ಆದರೆ ರಾಮ್ ರಾವ್ ಅವರಿಗೆ ಕಾಡುತ್ತಿದ್ದ ಪ್ರಶ್ನೆ ಬೇರೆಯೇ ಆಗಿತ್ತು. ತನ್ನ ಜೇಬಿನಿಂದ ರಾತ್ರಿ ನೀಡಿದ್ದ ಪತ್ರವೊಂದನ್ನು ತೆಗೆದು ರಾಯ್ಕರ್ ಮುಂದಿರಿಸಿದಾಗ ತಟ್ಟನೆ ರಾಯ್ಕರ್ ಚೀಟಿಯನ್ನು ವಾಪಸ್ ನೀಡಿ “ಸರ್ ನಿಮಗೆ ಹೆಚ್ಚಿನ ಮಾಹಿತಿ ದೆಹಲಿಯಲ್ಲಿ ಸಿಗುತ್ತದೆ. ದಯಮಾಡಿ ನಿಮ್ಮ ಕುತೂಹಲ ನಿಮ್ಮಲ್ಲಿಯೇ ಇರಲಿ” ಎಂದೊಡನೆ ರಾಮ್ ರಾವ್ ಅವರಿಗೆ ದಾರಿಯಿಲ್ಲದೆ ಸುಮ್ಮನಿರಬೇಕಾಯಿತು. ಘಂಟೆಯ ನಂತರ ವಿಮಾನ ನಿಲ್ದಾಣ ತಲುಪಿ, ರಾಯ್ಕರ್ ಅವರಿಗೆ ಧನ್ಯವಾದ ಹೇಳಿ ಇನ್ನೇನು ವಿಮಾನ ಏರಬೇಕು ತನ್ನನ್ನೇ ಬಹಳ ಹೊತ್ತಿನಿಂದಲೂ ಎರಡು ಕಣ್ಣುಗಳು ಗಮನಿಸುತ್ತಿದುದು ರಾಮ್ ರಾವ್ ಅವರ ಕಣ್ಣಿಗೆ ಬಿದ್ದಿತ್ತು. ರಾಮ್ ರಾವ್ ಅವರು ಮಿಸ್ ರಾಯ್ಕರ್ ಅವರು ನೀಡಿದ ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ತಲೆಕೆಡಿಸಿಕೊಳ್ಳದೆ ವಿಮಾನ ಏರಿ ಕುಳಿತಾಗ ಅದೇ ವ್ಯಕ್ತಿ ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದು ಕಂಡು ಕಾಣದಂತೆ ನಟಿಸುತ್ತಾ ಮ್ಯಾಗ್ ಝೀನ್ ಓದುವತ್ತಾ ಗಮನ ಹರಿಸುತ್ತಿದ್ದರೆ ವಿಮಾನ ಸದ್ದು  ಮಾಡುತ್ತಾ ಮೇಲೇರತೊಡಗಿತು.

***

ಒಲೆಯ ಮೇಲಿಟ್ಟಿದ್ದ ನೀರಿನಲ್ಲಿ ಬೆಲ್ಲ ಕರಗಿ, ಚಹಾ ಸೊಪ್ಪು ತನ್ನ ಕಂಪನ್ನು ನೀರಿಗಿಳಿಸಿ ಚಹಾದ ಸುವಾಸನೆ ಘಮ್ಮ್ಯೆಂದು ಅಡುಗೆ ಕೋಣೆಯಲ್ಲಿ ಅರಳಿತ್ತು. ಸಗಣಿ ಬಾಚಿ ತಿಪ್ಪೆಗೆ ಎಸೆದು ಮುಖ ತೊಳೆದು ಒಳ ಬಂದವನೇ ನೀರನ್ನು ಇಳಿಸಿ ಅರ್ಧ ನಿಂಬೆ ರಸ ಹಿಂಡಿ ಮೂರು ಸ್ಟೀಲ್ ಕಪ್ಪಿನೊಳಗೆ ಸೋಸಿದ. ಅಷ್ಟರಲ್ಲಿ ಹಿಂದಿನಿಂದ ಮಾತು ಕೇಳಿತು “ಅಪ್ಪಾಜಿ, ನಾನು ಎಲ್ರಿಗೂ ತಕ್ಕೊಂಡು ಬರ್ತೀನಿ ನೀವು ನಡೀರಿ.” ಬಸಪ್ಪ ಹಿಂದೆ ತಿರುಗಿದ. ತನ್ನ ಮಗಳು ಪೂಜಾ ಬಂದು ನಿಂತಿದ್ದಳು. ಪೂಜ ಬಸಪ್ಪನ ಒಬ್ಬಳೇ ಮಗಳು, ಬಸಪ್ಪನ ಪತ್ನಿ ಅಂದರೆ ಪೂಜಾಳ ತಾಯಿ ಇವಳು ಹುಟ್ಟುತ್ತಲೇ ತೀರಿಕೊಂಡಿದ್ದರಿಂದ ಬಸಪ್ಪನ ತಾಯಿಯೇ ಪೂಜಾಳಿಗೆ ತಾಯಿ ಆರೈಕೆ ಮಾಡಿದ್ದಳು. ಅಜ್ಜಿ ಆರೈಕೆಯಲ್ಲಿ ಸುಂದರವಾಗಿ ಬೆಳೆದು ನಿಂತು ಅಪ್ಪನ ಆಸೆಯಂತೆ ಚೆನ್ನಾಗಿ ಓದಿದ್ದ ಪೂಜಾಳಿಗೆ ಬೆಂಗಳೂರಿನ ಪ್ರತಿಷ್ಠಿತ ಕೃಷಿ ಕಂಪನಿಯಲ್ಲಿ ಉದ್ಯೋಗ ದೊರಕಿತ್ತು. ಪೂಜಾ ಕೃಷಿ ಕೀಟ ನಿಯಂತ್ರಣದಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಗಳಿಸಿದ್ದರಿಂದ ಸುಲಭವಾಗಿ ಕೆಲಸ ಸಿಕ್ಕಿ, ಕೈಗೆ ಒಳ್ಳೆ ಸಂಬಳವೂ ದೊರಕಿತ್ತು. ಇಂದು ಅವಳು ಬೆಂಗಳೂರಿಗೆ ಹೊರಟು ಕಂಪನಿಗೆ ಸೇರಬೇಕಾಗಿದ್ದ ದಿನವಾದ್ದರಿಂದ ಅಜ್ಜಿಯ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು ಆದರೆ ಬಸಪ್ಪನಿಗೆ ರೈತನ ಮಗಳಾಗಿ ಪೂಜ ಓದಿ ಇಡೀ ಊರಿಗೆ ಕೀರ್ತಿ ತಂದಿದ್ದಾಳೆಂಬ ಹೆಮ್ಮೆ ಮೂಡಿದ್ದರಿಂದ ಖುಷಿಯಿಂದ ಕಳುಹಿಸಿಕೊಟ್ಟಿದ್ದ.

ಕಂಪನಿಗೆ ಸೇರಿದ ಮೊದಲ ದಿನದಿಂದಲೇ ಪೂಜಾಳಿಗೆ ಬುದ್ದಿವಂತೆ ಎಂಬ ಮನ್ನಣೆ ದೊರಕಿದ್ದುದುರಿಂದ ಕಂಪನಿಯ ನಿರ್ದೇಶಕರಾದ ದೊರೈ ಲಿಂಗರಾಜುರವರು ಕರೆಸಿ ಶ್ಲಾಘನೆ ನೀಡಿ ಕಂಪನಿಯ ಮಹೋನ್ನತ ಪ್ರೊಜೆಕ್ಟ್ ಒಂದಕ್ಕೆ ನಿಯಮಿಸಿದ್ದರು. ಮುಂದೆ ಮೂರು ವರ್ಷದಲ್ಲಿ ಮಾರುಕಟ್ಟೆಯಲ್ಲಿ ಇವಳ ಮಾರ್ಗದರ್ಶನದಲ್ಲಿ ಹೊರ ಬಂದ ಪ್ರೊಡಕ್ಟ್ ಗಳು ಕಂಪನಿಗೆ ಬಹಳ ಹಣ ಮಾಡಿ ಕೊಟ್ಟಿದ್ದವು. ಕಂಪನಿ ಮತ್ತು ಕಂಪನಿಯ ಬೋರ್ಡ್ ಈ ವಿಚಾರವಾಗಿ ಪೂಜಾಳನ್ನು ಗೌರವಿಸಿ ಚೀಫ್ ರಿಸರ್ಚ್ ಆಫೀಸರ್ ಆಗಿ ನೇಮಕ ಮಾಡಿತ್ತು. ಅದೊಂದಿನ ಭಾನುವಾರ ಪೂಜಾ ಊರಲ್ಲಿದ್ದಳು, ಬಸಪ್ಪ ಕರೆದ “ಮಗಳೇ ಬಾವ್ವಾ, ತೋಟಕ್ಕೆ ಹೋಗಿ ಬರೋಣ.” ಪೂಜಾ ಬದಿಯ ಮೇಲೆ ನಡೆಯುತ್ತಾ ಇನ್ನೇನು ಬಾವಿ ತಲುಪಬೇಕು ಅಲ್ಲಿ ಸತ್ತು ಬಿದ್ದಿದ್ದ ಹತ್ತಾರು ಹುಳುಗಳನ್ನು ಕಂಡು ಪರೀಕ್ಷಿಸಿತೊಡಗಿದಳು. ಬಸಪ್ಪ ಮುಂದೆ ನಡೆಯುತ್ತಿದ್ದವನು ಅಲ್ಲಿಯೇ ನಿಂತ. ಪೂಜಾಳು ನಿಂತಿದ್ದನ್ನು ಕಂಡು ಕೇಳಿದ “ಯಾಕವ್ವಾ, ಅದೇನ್ ನೋಡ್ತಿದ್ದೀ.”. ಪೂಜಾ ಅವುಗಳನ್ನು ಪರೀಕ್ಷಿಸುತ್ತಲೇ ಕೇಳಿದಳು “ಅಪ್ಪಾ, ಇದೇನ್ ಹುಳು, ಇದು ಹೇಗೆ ಇಷ್ಟೊಂದು ಸತ್ತು ಬಿದ್ದಿದೆ ಇಲ್ಲಿ”. ಬಸಪ್ಪ ಮಗಳನ್ನು ಕಿಚಾಯಿಸಿದ “ಅಲ್ಲ ಮಗಳೇ ನೀನು ಕೃಷಿ ಕೀಟ ತಜ್ಞೆಯಲ್ಲವೇ?”. ಪೂಜಾ ನಗುತ್ತಲೇ ಬೇಡಿದಳು “ನೀ ಹೇಳಪ್ಪಾ ಪ್ಲೀಸ್”.

ಬಸಪ್ಪನ ಕೃಷಿ ಪೂರ್ತಿ ಕಲಿತದ್ದು ತನ್ನ ತಂದೆಯಿಂದ, ಅತೀ ಕಡಿಮೆ ಉಳುಮೆ ವ್ಯವಸಾಯ. ಎಂದಿಗೂ ಕೀಟನಾಶಕ ಬಳಸಿದವನಲ್ಲ, ಅವನಿಗೆ ದೇವರೆಂದರೆ ಮಣ್ಣು, ಭೂಮಿಯಲ್ಲಿ ಬೆಳೆದದ್ದು ಯಾವುದೂ ಕಳೆ ಅಲ್ಲ. ತೋಟದಲ್ಲಿ ಎಲ್ಲವೂ ಸಮತೋಲನದೊಂದಿಗೆ ಕೂಡಿದೆ. ಆದರೆ ಇತ್ತೀಚಿಗೆ ಪಕ್ಕದ ತೋಟಗಳಲ್ಲಿ ಕೀಟ ನಾಶಕಗಳ ಬಳಕೆ ಬಹಳ ಹೆಚ್ಚಾಗಿದೆ ಎಂದು ಕೇಳುತ್ತಿರುತ್ತಾನೆ. ಇವನ ಭೂಮಿ ಹತ್ತೆಕರೆ ಇದ್ದು ಬಲಕ್ಕೆ ಒಂದು ಹಳ್ಳ ಹರಿಯುತ್ತದೆ ಬಿಟ್ಟರೆ ಬಲದ ಭಾಗದಲ್ಲಿ ಮತ್ತ್ಯಾವುದೇ ತೋಟಗಳಿಲ್ಲ ಆದರೆ ಎಡಕ್ಕೆ ಹಲವಾರು ತೋಟಗಳಿವೆ ಅಲ್ಲಿ ಬಳಸುವ ಕೀಟನಾಶಕಗಳ ಪರಿಣಾಮ ಸುತ್ತಮುತ್ತಲಿನ ಪರಿಸರಕ್ಕೂ ಆಗದೆ ಇರುತ್ತದೆಯೇ.

ಮಗಳಿಗೆ ಕೇಳಿದ “ಮಗಳೇ ನೀನು ಎಷ್ಟೆಲ್ಲಾ ಓದ್ಕೊಂಡಿದ್ದೀ, ಕಂಪನಿಯಲ್ಲಿ ಒಳ್ಳೆ ಸಂಬಳ ತಗೊಂತಿದ್ದೀ, ಆದ್ರೆ ನೀವು ಕೊಡೋ ಔಷಧಿ ಹುಳನೇನೋ ಸಾಯ್ಸ್ತಾಐತೆ ಆದ್ರೆ ಸೈಡ್ ಎಫೆಕ್ಟು ಇರ್ತವೆ ಅನ್ನೋದು ನೋಡ್ತೀರೇನವ್ವ”. ಪೂಜಾ ತಾನೇನೋ ಕೇಳಿದರೆ ಅಪ್ಪ ಬೇರೇನನ್ನೋ ಹೇಳುತ್ತಿದ್ದನಲ್ಲ ಎಂಬುದು ಅರಿವಾಗದೇ “ಸಣ್ಣ ಪುಟ್ಟ ಸೈಡ್ ಎಫೆಕ್ಟ್ಸ್ ಇದ್ದೇ ಇರುತ್ತೆ ಅಪ್ಪ ಆದ್ರೆ ಕಂಪನಿಯವರು ಅದನ್ನು ಲೇಬಲ್ ಮೇಲೆ ಹಾಕಿ ನಿರ್ಲಕ್ಷಿಸುತ್ತಾರೆ”ಎಂದಳು. ಬಸಪ್ಪ ಹೇಳಿದ “ಮಗಳೇ, ಒಂದು ಹೇಳ್ತೀನಿ ಕೇಳವ್ವಾ, ಈ ಮಣ್ಣು ನಮ್ಮ ಜೀವ ಕಣವ್ವ. ಅದಿಕ್ಕೆ ಸಗಣಿ ಗೊಬ್ಬರ ನಮ್ಮನೇಲಿರೋ ಸೀಪ್ರ ಇದ್ದಂಗೆ ಅದೇ ನೀವ್ ಕೊಡೋ ಔಷಧಿ ಇಸ ಕಣವ್ವ. ಮಣ್ಣಿಗೆ ಇಸ ಕೊಡ್ತಿದ್ದೀರಿ ನೀವು”.  ತನ್ನ ಇಷ್ಟೆಲ್ಲಾ ಪ್ರೀತಿ ಮಾಡೋ ಅಪ್ಪ, ತಾನು ಓದಿ ಒಳ್ಳೆ ಕೆಲಸ ಗಿಟ್ಟಿಸಿಕೊಂಡಿದ್ದಕ್ಕೆ ಹೆಮ್ಮೆಯಿಂದ ಬೀಗಿದ್ದ ಅಪ್ಪ ಇಂದು ಈತರಹದ ಆಪಾದನೆ ಹೊರಿಸಿದ್ದು ಕೇಳಿ ಪೂಜಾಳಿಗೆ ಆಘಾತವಾಗಿತ್ತು. ಅಂದ ಹಾಗೆ ಅಪ್ಪ ಎಂದಿಗೂ ದೇವರ ಕೋಣೆಯಲ್ಲಿ ಕೂತು ತನಗೆ ಬೇಕಾದ್ದನ್ನು ಗಿಟ್ಟಿಸಿಕೊಳ್ಳಲು ಅತ್ತವನಲ್ಲ, ಮಣ್ಣನ್ನೇ ದೇವರು ಎಂದುಕೊಂಡು ಬೇಕಾದ್ದನ್ನು ಬೆಳೆದು ದುಡಿದು ಗಳಿಸಿಕೊಂಡಿದ್ದು ಮಣ್ಣಿನಿಂದಲೇ, ಕಾಯಕವೇ ಕೈಲಾಸ ಎಂಬುದನ್ನು ನಿಜ ಅರ್ಥದಲ್ಲಿ ಕಂಡ ಅಪ್ಪ ಎಂಬುದು ಅವಳಿಗೂ ತಿಳಿದಿದೆ. ಬಸಪ್ಪ ಮುಂದುವರಿಸಿದ “ಮಗಳೇ, ಈಗ ನೀನು ಕೇಳಿದೆ ನೋಡು ಹುಳ ಯಾವ್ದು ಅಂತ. ನಂಗೆ ಅದ್ರ ಹೆಸ್ರು ಅಷ್ಟಾಗಿ ಗೊತ್ತಿಲ್ಲ ಕಣವ್ವ. ಆದ್ರ ಅದು ಮೂತಿ ಹುಳ ಅಂತೀನಿ ನಾನು. ಇದೆಲ್ಲ ಮೊದ್ಲು ಕಾಣಿಸ್ತಾನೆ ಇರ್ಲಿಲ್ಲ ಕಣವ್ವ ಇತ್ತೀಚಿಗೆ ಇವು ಸುತ್ತ ಮುತ್ತ ತೋಟಗಳಲ್ಲಿ ಭಾಳ ಜಾಸ್ತಿ ಆಗಿದೆ ಕಣವ್ವ.

ಮೊದಲು ಗರಿಗಳು ಅರಿಶಿಣ ಬಣ್ಣಕ್ಕೆ ತಿರುಗಿ, ಮರದ ಕಾಂಡದಲ್ಲಿ ಕಂದು ರಸ ತೊಟ್ಟಿಕ್ಕುತ್ತೆ, ಹತ್ರ ಹೋದ್ರೆ ಹೆಂಡದ ವಾಸ್ನೆ ಬತ್ತದೆ ಕವ್ವ. ಹಂಗಾದ್ಮೇಕೆ ಸುಳೀನೇ ಮುರ್ದು ಬಿದ್ದೋಗಿ ಮರ ಸಾಯ್ತದ.  ಬ್ಯಾರೆ ತೋಟದ್ ಜನ ಬಲೇ ದುಡ್ಡಿಕ್ಕಿ ಅದ್ಯಾವ್ದೋ ಔಷಧಿ ತಂದು ಹೊಡೀತಾ ಅವ್ರೆ. ಅವ್ರು ಹೊಡೆದ ದಿನ ತೋಟಕ್ಕೆ ಕಾಲಿಡೋಕೆ ಆಗಲ್ಲ ಅಂತ ವಾಸ್ನೆ ಕವ್ವ. ಅದೇನ್ ಹುಳ ಕಡಿಮೆ ಆದ್ವು ಅಂತಾರೆ ಅದೇನೋ ನಾ ಕಾಣೆ”. ಪೂಜಾ ಆಲಿಸುತ್ತ ಕೇಳಿದಳು “ನೀನು ಏನ್ ಮಾಡಿದ್ದೀಯಪ್ಪ.” ಬಸಪ್ಪ ಉತ್ತರಿಸಿದ “ನಾನೇನು ಮಾಡಿಲ್ಲ ಕಣವ್ವ. ಮೊನ್ನೆ ಒಂದು ತೆಂಗಿನ ಮರ ಸತ್ತೋಯ್ತು, ಅದ್ರ ಒಳಗೆ ಇಷ್ಟು ಹುಳು ಇದ್ದಿದ್ದು ಕಂಡು ತಕ್ಕೊಬಂದು ಇಲ್ಲಿ ಮಡಕೆ ನೀರೊಳಕೆ ಹಾಕೀವ್ನಿ, ನಿಂಗೂ ತೋರ್ಸಕೆ”. ಪೂಜಾ ಅವುಗಳನ್ನೇ ಪರೀಕ್ಷಿಸುತ್ತಾ ನೋಡಿದಳು. ಬಸಪ್ಪ ಮತ್ತೆ ಹೇಳಿದ “ಅಲ್ಲ ಕಣವ್ವ, ಇಷ್ಟು ವರ್ಷದಾಗೆ ನಾನೆಂದು ಹುಳ ಹಿಡಿಯೋಕೆ, ಸಾಯ್ಸೋಕೆ ಎಂತದು ಮಾಡಿರ್ಲಿಲ್ಲ. ನನ್ನ ಮುಕ್ಕಾಲು ಕೆಲಸ ಹಕ್ಕಿಗುಳೆ ಮಾಡ್ತಾವೆ. ಈಗ ನಿಂಗೆ ತೊರ್ಸಕೊಡ್ತೀನಿ ನೋಡವ್ವ. ಔಷಧಿ ಅಂತೂ ಹಾಕೋದೇ ಇಲ್ಲ. ಯಾವ ಹುಳನೂ ಸಮಸ್ಯೆ ಕೊಟ್ಟಿರ್ಲಿಲ್ಲ. ಈ ಸಾತಿ ಈ ಕೆಂಪು ಮೂತಿ ಹುಳ ಸೇರ್ಕೊಂಡು ಐದು ಬೆಳೆದ ತೆಂಗಿನ್ ಮರ ಒಣಗಿದ್ವು ಕಣವ್ವ. ಎಲ್ಲೋ ಏನೋ ತಪ್ಪಾಗೈತೆ ಕಣವ್ವ . ಅರ್ಥ ಆಗ್ತಿಲ್ಲ ನೋಡು”.

ಪೂಜಾ ಕೆಲವು ಹುಳುಗಳನ್ನು ಎತ್ತಿಕೊಂಡು ಅಲ್ಲಿಯೇ ಬಿದ್ದಿದ್ದ ಕವರ್ ಒಂದಕ್ಕೆ ಹಾಕಿಕೊಂಡು ಬೆಂಗಳೂರಿಗೆ ಅಧೀಕೃತ ಪರೀಕ್ಷೆಗೆ ತೆಗೆದುಕೊಂಡು ಹೋಗುವ ಯೋಚನೆ ಮಾಡಿದ್ದಳು. ಬಸಪ್ಪ ಮಗಳನ್ನು ಕರ್ಕೊಂಡು ಬಾವಿಯ ಹತ್ತಿರ ಹೋದಾಗ ಹಸಿರು ಕಳ್ಳಿಪೀರವೊಂದು ನೊಣಗಳನ್ನು ಹಿಡಿಯುತ್ತಾ ಸಮಯ ಕಳೆಯುತ್ತಿತ್ತು. ಮಗಳನ್ನು ಅಲ್ಲಿಯೆ ಕುಳಿತಿದ್ದು ಹಕ್ಕಿಗಳನ್ನು ಗಮನಿಸಲು ಹೇಳಿ ತೋಟ ಸುತ್ತಾಡಿಕೊಂಡು ಬರಲು ಹೊರಟು ಹೋದ. ಅಲ್ಲಿ ಕುಳಿತು ಗಮನಿಸುತ್ತಿದ್ದವಳಿಗೆ ಕುಟಿಗವೊಂದು ಅಲ್ಲಿಯೇ ಬಿದ್ದಿದ್ದ ಮರದ ಕೊರಡಿನೊಳಗಿಂದ ಮರಿಹುಳು ಎತ್ತಿಕೊಂಡು ಹೋದದ್ದು ಕಂಡಿತು. ಪಿಕಳಾರ ಮತ್ತು ಕೋಗಿಲೆಗಳು ಮರದಿಂದ ಮರಕ್ಕೆ ಹಾರುತ್ತಾ ಹಣ್ಣು ತಿನ್ನುತ್ತಾ ಬೀಜ ಉಗುಳುತ್ತಿದ್ದವು. ಬೇಲಿ ಚಟಕಗಳು ಬಿಳಿ ನೊಣಗಳನ್ನು ಹಿಡಿಯುವಲ್ಲಿ ನಿರತವಾಗಿದ್ದವು. ಸೂರ್ಯನಕುದುರೆಯೊಂದು(Preying Mantis) ಮಿಡತೆಯೊಂದನ್ನು ಹಿಡಿದು ಜೀವಂತ ಭಕ್ಷಿಸಿತು. ಅರ್ಧ ಘಂಟೆಯಲ್ಲಿ ಇಷ್ಟೆಲ್ಲ ಕಂಡವಳಿಗೆ ಅನಿಸಿದ್ದು ಅಪ್ಪನ ಜೊತೆಯಲ್ಲಿ ಹಲವು ಜೀವಿಗಳೂ ಕೂಡ ಕೃಷಿ ಮಾಡುತ್ತಿವೆ ಎಂದು ಇನ್ಮುಂದೆ ನೈಸರ್ಗಿಕ ಕೀಟ ನಿಯಂತ್ರಣದ ಬಗ್ಗೆ ಹೆಚ್ಚು ಗಮನ ನೀಡಬೇಕೆಂದು ಮನಸ್ಸಿನಲ್ಲೇ ನಿಶ್ಚಯ ಮಾಡಿಕೊಳ್ಳುತ್ತಿರುವಾಗ ಅಪ್ಪನ ಕೂಗು ಕೇಳಿತು.

ರಾಮ್ ರಾವ್ ವಿಮಾನ ನಿಲ್ದಾಣದಿಂದ ಅಶುತೋಷ್ ರವರ ಹೆಡ್ ಕ್ವಾರ್ಟರ್ಸಿನ ಬಳಿ ಬಂದಾಗ ಸಮಯ ಹನ್ನೆರಡಾಗಿತ್ತು. ಒಳ ನಡೆದೊಡನೆ ರಾಮ್ ರಾವ್  ಭೇಟಿ ಮಾಡಿದ್ದು ಅಶುತೋಷ್ ಅವರನ್ನು. ಅಶುತೋಷ್ ಅವರ ಮುಖ ಗಂಭೀರವಾಗಿದೆ, ರಾಮ ರಾವ್ ಅವರಿಗೆ ಏಕೆಂದು ತಿಳಿಯಲಿಲ್ಲ. ರಾತ್ರಿಯಿಂದ ರಾಯ್ಕರ್ ನೀಡಿದ್ದ ಧೈರ್ಯ ಅಶುತೋಷ್ ಅವರ ಮುಖ ನೋಡಿದ ಕ್ಷಣವೇ ಎಗರಿಹೋಗಿತ್ತು. ಇಬ್ಬರೂ ಹೋಗಿ ಕೊಠಡಿಯಲ್ಲಿ ಕುಳಿತಾಗ ಪ್ರೊಜೆಕ್ಟರ್ ಸ್ಕ್ರೀನ್ ಹೊತ್ತಿಸಿದವರೇ ಇಪ್ಪತ್ತೈದರ ಆಸುಪಾಸಿನ ಹುಡುಗಿಯ ಚಿತ್ರವೊಂದನ್ನು ಸ್ಕ್ರೀನ್  ಮೇಲೆ ತಂದಾಗ, ರಾಮ ರಾವ್ “ಪೂಜಾ” ಎಂದು ಉದ್ಗರಿಸಿದರು. ಅಶುತೋಷ್ ಅದೇ ಗಂಭೀರತೆಯನ್ನು ಉಳಿಸಿಕೊಂಡು ಮಾತು ಶುರು ಮಾಡಿದರು “ರಾಮ್, ಇಲ್ನೋಡಿ ನೀವು ನೋಡುತ್ತಿರುವ ಹುಡುಗಿಯ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಆದರೆ ಅವಳು ಕಿಡ್ನಾಪ್ ಆಗಿ ಹದಿನೈದು ದಿನಗಳಾಗಿವೆ, ಈ ಮುಂಚೆ ನಿಮಗೇನಾದರೂ ಈಕೆಯಿಂದ ಫೋನ್ ಕರೆಗಳೇನಾದರೂ ಬಂದಿವೆಯೇ?”. ರಾಮ್ ರಾವ್ ಹೌದೆಂದು ತಲೆಯಾಡಿಸಿದರು.

“ಪೂಜಾ  ಕಾಲೇಜಿನಲ್ಲಿದ್ದಾಗಿನಿಂದಲೂ ಬಹಳ ಬುದ್ದಿವಂತೆ ಜೊತೆಗೆ ಕೀಟ ಶಾಸ್ತ್ರದ ಹಲವು ವಿಷಯಗಳಿಗೆ ಇವಳು ನನ್ನ ವಿದ್ಯಾರ್ಥಿನಿಯು ಕೂಡ. ಹದಿನೈದು ದಿನದಿಂದೆ ನನಗೆ ಫೋನಾಯಿಸಿದ್ದಳು. ಮುಂದಿನ ತಿಂಗಳು ಅಬುಧಾಬಿಯಲ್ಲಿ ನಡೆಯಲಿರುವ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ನಲ್ಲಿ ನಾನು ಮಾತಾಡುವುದಿತ್ತು ಎಂಬುದು ನಿನಗೂ ತಿಳಿದಿದೆ. ಆ ವಿಚಾರವಾಗಿ ಒಂದು ಸೂಕ್ಷ್ಮ ವಿಚಾರ ತಿಳಿಸಬೇಕೆಂದು ಹೇಳಿ ಮಾತನಾಡುತ್ತಲೇ ದೂರವಾಣಿ ಕರೆ ಕಡಿತಗೊಂಡಿತ್ತು. ಆ ನಂತರ ಅವಳು ವಾಪಸ್ ನನಗೆ ಕರೆ ಮಾಡಲಿಲ್ಲ ಹಾಗಾಗಿ ನಾನೂ ಕೂಡ ಆ ವಿಚಾರವನ್ನು ಅಲ್ಲಿಗೆ ಬಿಟ್ಟು ಬಿಟ್ಟಿದ್ದೆ” ಅಶುತೋಷ್ ಅಲ್ಲಿಯೇ ಇದ್ದ ಬೀರುವಿನಿಂದ ಮೂರ್ನಾಲ್ಕು ಹಳೆಯ ವರದಿಯೊಂದನ್ನು ತೆಗೆದು ರಾಮ್ ರಾವ್ ಮುಂದಿರಿಸಿದರು. ನೀವು ಓದುತ್ತಿರಿ, ನಾ ವಾಪಸ್ ಬರುವೆ ಎಂದು ಆ ಕೊಠಡಿಯಿಂದ ಎದ್ದು ಹೊರ ನಡೆದರು. ಆ ವರದಿಯಲ್ಲಿ ಹೀಗೆ ಬರೆದಿತ್ತು.

“ನಮಸ್ಕಾರ,

ಈ ರಾದ್ದಾಂತವೆಲ್ಲ ಶುರುವಾದದ್ದು ಕೆಂಪು ಮೂತಿ ಹುಳುವಿನಿಂದ(Red Palm Weevil-Rhynchophorus ferrugineus). ಇದು ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ತೆಂಗಿನ ಬೆಳೆಗಳಲ್ಲಿ ಕಂಡು ಬರುವ ಅತ್ಯಂತ ಭಯಾನಕ ಕೀಟಗಳಲ್ಲೊಂದು. ಏಷಿಯಾದ ಉಷ್ಣವಲಯದಲ್ಲಿ ಮೊದಲಿಗೆ ಕಂಡಿದ್ದ ಈ ಕೆಂಪು ಮೂತಿ ಹುಳು ಭಾರತ ಸೇರಿ ಆಫ್ರಿಕಾದಿಂದ ಹಿಡಿದು ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳಿಗೆ ಹರಡಿದೆ. ವಿಶ್ವದಾದ್ಯಂತ ಖರ್ಜೂರ ತೋಟಗಳಲ್ಲಿ, ತೆಂಗಿನ ತೋಟಗಳಲ್ಲಿ, ಮಿಲಿಯನ್ ಡಾಲರ್ ಗಳಷ್ಟು ಕೃಷಿ ನಷ್ಟಕ್ಕೆ ಈ ಕೆಂಪು ಮೂತಿ ಹುಳು ಕಾರಣಕರ್ತ ಎಂದರೆ ನಂಬುವಿರಾ?. ನಮ್ಮಲ್ಲೂ ಅನೇಕ ರೈತರು ತೆಂಗಿನ ಮರಗಳು ಒಣಗಿ ಹೋದ ಬಗ್ಗೆ ಬಹಳಷ್ಟು ಸಮಸ್ಯೆ ಅನುಭವಿಸಿದ್ದಾರೆ ಎಂದು ಕೂಡ ವರದಿಗಳು ನಮಗೆ ಬರುತ್ತಿದ್ದವು. ಈ ಕಾರಣವಾಗಿ ನಮ್ಮ ಡಿಪಾರ್ಟ್ಮೆಂಟ್ ನವರಿಗೆ ಈ ಹುಳುವಿಗೆ ಔಷಧಿ ತಯಾರಿಸಲು ಕೆಲಸ ಒದಗಿ ಬಂದಿತ್ತು. ಈ ಕೆಂಪು ಮೂತಿ ಹುಳುಗಳು ತೆಂಗಿನ ಮರದ ಒಳಗಡೆ ಮೀಟರ್ಗಳಷ್ಟು ಒಳಗಿನವರೆಗು ರಂಧ್ರ ಕೊರೆದು ಮೊಟ್ಟೆ ಮರಿ ಮಾಡಿಕೊಂಡು ಇದರಿಂದ ಮರಕ್ಕೆ ಹಾನಿಯಾಗಿ ಕಾಂಡದಿಂದ ರಸ ಸೋರಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸುಳಿ ಹಾಳಾಗಿ ಕೊನೆಗೆ ಮರ ಸಾಯುತ್ತವೆ. ನಮ್ಮ ತೋಟದಲ್ಲಿ ಅಪ್ಪ ಹೇಳಿದಂತೆ ಈ ಹುಳುಗಳು ಸೇರಿ ಐದು ಮರವನ್ನು ಕೊಂದು ಹಾಕಿದ್ದವು ಕೂಡ.

ಇಲ್ಲಿ ಹಲವು ಅಧ್ಯಯನಗಳ ಪ್ರಕಾರ ತೆಂಗಿನ ತೋಟಗಳಿಗೆ ಇವುಗಳ ಸಮಸ್ಯೆ ಶುರುವಾದರೆ ಇಳುವರಿ ಕಡಿಮೆಯಾಗುವುದನ್ನು ಗಮನಿಸಲಾಗಿದೆ ಎಂದು ಕಂಡುಕೊಂಡೆ. ಆನಂತರ ಅಪ್ಪನ ಮಾತಿನಂತೆ ಈ ಬಾರಿ ಯಾವುದಾದರೂ ಜೈವಿಕ ಕೀಟನಾಶಕ ಕಂಡು ಹಿಡಿಯೋಣ ಎಂದು ತವಕಿಸುತ್ತಿದ್ದೆ ಕಾರಣ ರಾಸಾಯನಿಕ ಕೀಟನಾಶಕಗಳ ಪರಿಣಾಮಗಳ ಬಗ್ಗೆ ಅಪ್ಪನ ಜೊತೆ ಸೇರಿದ ಮೇಲೆ ಅರಿವಾಗಿತ್ತು. ನಾನು ಕಂಡು ಹಿಡಿಯುವ ಜೈವಿಕ ಕೀಟನಾಶಕ ಪರಿಸರಕ್ಕೆ ಹಾನಿಯಾಗಬಾರದು ಜೊತೆಗೆ ಈ  ಕೆಂಪು ಮೂತಿ ಹುಳುಗಳನ್ನು ಕೊಲ್ಲಬೇಕು ಎಂಬುವುದಾಗಿತ್ತು. ಅದಾಗಲೇ  ಫೆರೊಮೋನ್ ಟ್ರ್ಯಾಪ್ ಗಳ ಮೇಲೆ ಅಧ್ಯಯನ ಕೂಡ ನಡೆಸುತ್ತಿದ್ದೆ, ಅರಳು ಬೀಜ, ಪೈನಾಪಲ್, ಕಬ್ಬು ಜೊತೆಗೆ ಅಂಟುಗಳನ್ನು ಸೇರಿಸಿ ಟ್ರ್ಯಾಪ್ ತಯಾರಿ ಮಾಡಲು ಯತ್ನಿಸಿದ್ದೆ. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೀಟ ತಜ್ಞೆಯಾದ ನಾನು ರಾಸಾಯಾನಿಕ ಕೀಟ ತಯಾರಿಯನ್ನು ಬಿಟ್ಟು ಅಪ್ಪನ ಜೊತೆ ಸೇರಿದ ಮೇಲೆ ನೈಸರ್ಗಿಕ ಕೃಷಿ ಕೀಟ ನಿಯಂತ್ರಣದತ್ತ ಮನಸ್ಸು ಹೊರಳಿತ್ತು. ಆದ್ದರಿಂದ ಇಂಟಿಗ್ರೇಟೆಡ್ ಪೆಸ್ಟ್ ಮ್ಯಾನೇಜ್ ಮೆಂಟ್ ಬಗ್ಗೆ ಹೆಚ್ಚು ಓದತೊಡಗಿದೆ ಜೊತೆಗೆ ಅಪ್ಪನ ಜೊತೆಗೂಡಿ ವಾರಾಂತ್ಯವಾದರೆ ಸಾಕು ತೋಟದಲ್ಲಿ ಬಂದು ಪ್ರಯೋಗಗಳನ್ನು ಮಾಡತೊಡಗಿದೆ. ಇದನ್ನು ನಮ್ಮ ಕಂಪನಿಯ ನಿರ್ದೇಶಕರಾದ ದೊರೈ ಲಿಂಗರಾಜುರವರು ಗಮನಿಸದೆ ಹೋಗಿರಲಿಲ್ಲ, ಇದೇ ಮುಂದೊಂದಿನ ನನಗೆ ಸಮಸ್ಯೆಯಾಗಿ ತಲೆದೋರುವುದು ಎಂದು ಅಂದಾಜು ಮಾಡಿರಲಿಲ್ಲ.

ಅಪ್ಪನ ಜೊತೆ ಸೇರಿ ಮೂತಿ ಹುಳು ನಿಯಂತ್ರಣದಲ್ಲಿ ಬಹಳ ಪ್ರಯೋಗಗಳನ್ನು ಮಾಡಿ ಸೋತು ಸುಖ ಉಂಡು ಇಲ್ಲಿ ಕೆಲವು ಮಹತ್ತರ ವಿಷಯಗಳನ್ನು ಕಂಡುಕೊಳ್ಳುವಂತಾಯಿತು. ಹೀಗೆ ಒಂದಿನ ಊರಿನಲ್ಲಿದ್ದಾಗ ಒಂದು ಘಟನೆ ನಡೆಯಿತು. ತೋಟದಲ್ಲಿ ಎಂದಿಗೂ ಕಾಣದ ಪಕ್ಷಿಯೊಂದು ಹಾರಿ ಬಂದು ಸ್ವಲ್ಪ ದೂರದಲ್ಲಿ ಕುಳಿತಿತು. ಅಯ್ಯೋ ಇದೆಂತಾ ಇಷ್ಟುದ್ದ ಬಾಲ ಇದೆ ಎಂದು ಎಲ್ಲರೂ ಹೌಹಾರಿದರು. ಆಗ ಅದು ಮಟಪಕ್ಷಿ (Rufous Treepie) ಎಂದು ಅರಿವಾಗಿ ಮತ್ತಷ್ಟು ಗಮನಿಸಿದೆ. ತೆಂಗಿನ ಮರದ ಗರಿಯ ತುದಿಯಲ್ಲಿ ನೇತುಹಾಕಿಕೊಂಡು ಹುಳುಗಳನ್ನು ಹಿಡಿಯತೊಡಗಿತು. ಹೀಗೆ ತುದಿಯವರೆಗೂ ಹೋಗಿ ಹುಳುಗಳನ್ನು ಹೆಕ್ಕಿ ತಿಂದದ್ದು ಕಂಡಿದ್ದು ಇದೆ ಮೊದಲು . ಜೊತೆಗೆ ನನ್ನ ಅಧ್ಯಯನಕ್ಕೆ ಬೇಕಾದ ಅದರ ಮಲ ಮಾದರಿ ಎತ್ತಿಕೊಂಡು ಹೋಗಿದ್ದೆ. ಬೆಂಗಳೂರಿಗೆ ತಲುಪಿ ಮಲ ಪರೀಕ್ಷೆ ನಡೆಸಿದ ನನಗೆ ಅದರ ಊಟದಲ್ಲಿ ಮಿಡತೆ (grasshopper ), ಹಲವು ತರದ ಮರಿಹುಳುಗಳು (Insect Larvae ), ಕುಂಬಾರ್ ಹುಳ  (earwig ) ಕೆಂಪು ಮೂತಿ ಹುಳು (Red Palm Weevil ), ಜಿರಲೆ (cockroach ), ಬಸವನಹುಳು (Snail ), ಅಳಿಲುಗಳು (Squirrel ) ಇಂದ ಹಿಡಿದು ಹಲವು ತೆಂಗಿನ ಮರಗಳಲ್ಲಿ ಕಂಡು ಬರುವ ಕೀಟಗಳ ಅಂಶ ಸಿಕ್ಕಿತ್ತು . ಅಂದರೆ ತೆಂಗಿನ ಮರಗಳಲ್ಲಿ ಕಂಡು ಬರುವ ಅತೀ ಮುಖ್ಯವಾದ ನೈಸರ್ಗಿಕ ಕೀಟಭಕ್ಷಕ ಎಂದರೆ ಮಟ ಪಕ್ಷಿ ಎಂಬ ತೀರ್ಮಾನಕ್ಕೆ ಬಂದಂತಾಗಿತ್ತು. ಜೊತೆಗೆ ಪ್ರಪಂಚಾದ್ಯಂತ ರಾದ್ಧಾಂತವನ್ನೇ ಸೃಷ್ಟಿಸಿರುವ ಈ ಕೆಂಪು ಮೂತಿ ಹುಳುವಿಗೆ ಶತ್ರುಗಳು ಬಹಳಷ್ಟು ಕಡಿಮೆ ಅದರಲ್ಲಿ ಈ ಮಟಪಕ್ಷಿಗಳು ಒಂದು ಎಂಬುದು ನೆನಪಿನಲ್ಲಿಡಬೇಕು.

ಇಡೀ ಪ್ರಪಂಚವೇ ಅಲ್ಲಾಡಿ ಹೋಗಿರುವಾಗ ನೈಸರ್ಗಿಕವಾಗಿ ಈ ಕೆಂಪು ಮೂತಿಹುಳುಗಳನ್ನು ನಿಯಂತ್ರಣದಲ್ಲಿಡಲು ಪ್ರಕೃತಿ ಆಗಲೇ ಈ ಪಕ್ಷಿಗಳನ್ನು ಸೃಷ್ಟಿಸಿದೆ. ಮುಂದೊಂದಿನ ಇದೆ ರೀತಿ ಮಟಪಕ್ಷಿ ಗರಿಗಳನ್ನು ಅಳ್ಳಾಡಿಸಿ ಅದರಲ್ಲಿರುವ ಮೂತಿ ಹುಳು ಬಿದ್ದಾಗ ಹಿಡಿಯುತ್ತಾ ತಿನ್ನುತ್ತಿದ್ದನ್ನು ಕಂಡೆ. ಹೀಗಿದ್ದಾಗ ರಾಸಾಯನಿಕಗಳು ಅಷ್ಟೆತ್ತರಕ್ಕೆ ತಲುಪಿ ಕೀಟಗಳನ್ನು ಕೊಲ್ಲದಿದ್ದಾಗ ಇವುಗಳು ಮೂಲೆ ಮೂಲೆಗೂ ತಲುಪಿ ಹಲವು ಕೀಟಗಳನ್ನು ಕೊಲ್ಲುತ್ತಿದ್ದುದು ಕಂಡೆ. ಎರಡು ವರ್ಷದ ನಿರಂತರ ಪ್ರಯೋಗ ಮತ್ತು ಅಧ್ಯಯನದ ಫಲವಾಗಿ ನಮ್ಮ ತೋಟದಲ್ಲಿ ಬಹುತೇಕ ಕೀಟಗಳನ್ನು (Including Red Palm Weevil)  ಕೀಟ ನಾಶಕ ಬಳಸದೆ ಕಡಿಮೆ ಮಾಡಿದ್ದು ನನ್ನ ಮತ್ತು ಅಪ್ಪನ ಸಾಧನೆಯಾಗಿತ್ತು. ನನ್ನ ಅಧ್ಯಯನದ ಪ್ರಕಾರ ಸದ್ಯದಲ್ಲಿ ಮಟಪಕ್ಷಿ (Rufous treepie) ಬಹುಮುಖ್ಯ ನೈಸರ್ಗಿಕ ಕೀಟನಾಶಕ ಎಂದು ಹೇಳಿದ್ದೆ. ರಾಸಾಯನಿಕ ಕೀಟನಾಶಕದ ಬದಲು ಕಂಪನಿಯು ಪರಿಸರ ಕಾಳಜಿಯುಳ್ಳ ಫೆರೊಮೋನ್  ಟ್ರ್ಯಾಪ್ (Pheromene trap) ತಯಾರು ಮಾಡಬೇಕೆಂದು ಜೊತೆಗೆ ರೈತರಿಗೆ ಮಟಪಕ್ಷಿಗಳ ಉಪಯೋಗವನ್ನು ತಿಳಿಸುವ ಕಾರ್ಯಗಾರಗಳನ್ನು ಹಮ್ಮಿಕೊಂಡು ಕಂಪನಿಯ ಹೆಸರು ಹೆಚ್ಚಿಸಿಕೊಳ್ಳಬಹುದು ಎಂದು ಸೂಚಿಸಿದ್ದೆ.

ತೆಂಗಿನ ತೋಟಗಳಲ್ಲಿ ಕೆಂಪು ಮೂತಿ ಹುಳುಗಳ ಸಂಯೋಜಿತ ಕೀಟ ನಿರ್ವಹಣೆ (Integrated Pest Management ) ಬಲು ಸೂಕ್ತ ಎಂಬುದನ್ನು ಒತ್ತಿ ಹೇಳಿದ್ದೆ. ಮುಂದಿನ ದಿನಗಳಲ್ಲಿ ಜೈವಿಕ ಕೀಟ ಅಭಿವೃದ್ಧಿ (Biological Pest) ಬಗ್ಗೆ ಹೆಚ್ಚಿನ ಆದ್ಯತೆ ನೀಡುವುದು ನನ್ನ ಯೋಜನೆಗಳಲ್ಲಿ ಒಂದು ಎಂಬುದನ್ನು ತಿಳಿಸಿದೆ. ಕೆಲವೊಮ್ಮೆ ಸಂಯೋಜಿತ ಕೀಟ ನಿರ್ವಹಣೆಯಲ್ಲಿ ರಾಸಾಯನಿಕಗಳನ್ನು ಬಳಸುತ್ತಾರೆ ಆದರೆ ಮಟಪಕ್ಷಿಗಳು ಇಲ್ಲಿ ಇದ್ದುದರಿಂದ ಅವುಗಳು ಕೀಟನಾಶಕಗಳಿಂದ ದೂರವಾಗಿ ಬಿಟ್ಟರೆ ಎಂಬ ಭಯದಿಂದ ಯಾವುದೇ ಕಾರಣಕ್ಕೆ ರಾಸಾಯನಿಕ ಬಳಸಬಾರದು ಎಂದು ಹೇಳಿದ್ದೆ. ನಾ ಒಮ್ಮೆ ಜೈವಿಕ ಕೀಟ ಕಂಡು ಹಿಡಿದರೆ ಹೇಗೂ ಕಂಪನಿಯ ರೆವಿನ್ಯುಗೆ ಸಹಾಯ ಆಗುತ್ತದೆ ಎಂದು ಯೋಚಿಸಿದ್ದೆ ಆದರೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಕೂಡ ವಿವರಿಸಿದ್ದೆ.

ನಾನು ಈ ವರದಿಯನ್ನು ಅಂತಿಮಗೊಳಿಸಿ ದೊರೈ ಲಿಂಗರಾಜು ಅವರಿಗೆ ತಲುಪಿಸಿದ ದಿನವೇ ಒಂದು ಆಘಾತದ ವಿಷಯ ತಿಳಿದು ಬಂದಿತ್ತು. ನನ್ನ ಪ್ರಯೋಗಗಳು ಸಮಯ ಹಿಡಿಯುತ್ತಿದ್ದುದರಿಂದ  ಮತ್ತು ನಾನು ರಾಸಾಯನಿಕ ಔಷಧಿ ತಯಾರಿ ಮಾಡುತ್ತಿಲ್ಲ ಎಂದು ತಿಳಿದ ದೊರೈ ಲಿಂಗರಾಜುರವರು ನನ್ನ ಜೂನಿಯರ್ ಸಹೋದ್ಯಗಿಗೆ ರಾಸಾಯನಿಕ ಪ್ರೊಡಕ್ಟ್ ತಯಾರಿಗೆ ಅನುಮತಿ ನೀಡಿದ್ದು ಅದು ಈಗ ಕೊನೆಯ ಹಂತ ತಲುಪಿ ಅದನ್ನು ಡಿಪಾರ್ಟ್ಮೆಂಟ್ ಹೆಡ್ ಆದ ನಾನು ಅಪ್ರೂವ್ ಮಾಡಬೇಕಾಗಿತ್ತು. ಜೊತೆಗೆ ಮಾರುಕಟ್ಟೆಯಲ್ಲಿ ನನ್ನ ಹೆಸರು ಪ್ರಸಿದ್ದಿ ಇದ್ದುದುರಿಂದ ನಾನು‌ ಆ ರಾಸಾಯನಿಕ ಪ್ರೋಡಕ್ಟ ಅಪ್ರೂವ್ ಮಾಡಿದರೆ ನನ್ನ ಹೆಸರು ಬಳಸಿಕೊಂಡು ಹೆಚ್ಚಿನ ಲಾಭ ಪಡೆಯುವ ಅವರ ಆಸೆ ಎದ್ದು ಕಾಣುತ್ತಿತ್ತು.

ಆ ರಾಸಾಯನಿಕ ಪ್ರೊಡಕ್ಟ್ನಲ್ಲಿ ಎಂಡೋಸಲ್ಫಾನ್ ಬಳಕೆಯಾಗಿದ್ದು ನನ್ನನು ತೀವ್ರ ಘಾಸಿಗೊಳಿಸಿತ್ತು. ೧೯೫೦ ರಲ್ಲಿ ಮೊದಲಿಗೆ ತಯಾರಾದ ಈ ಎಂಡೋಸಲ್ಫಾನ್ ಇಲ್ಲಿಯವರೆಗೆ ಬಹಳಷ್ಟು ಹಾನಿಗಳನ್ನು ಮಾಡಿದೆ. ವಿಶ್ವದಾದ್ಯಂತ ಈ ಎಂಡೋಸಲ್ಫಾನ್ ವಿಷಯವಾಗಿ ವಿರೋಧಗಳು ಕೇಳಿ ಬರುತ್ತಿದ್ದವು. ಈ ಭಯಾನಕ ರಾಸಾಯನಿಕದ ಅಡ್ಡ ಪರಿಣಾಮಗಳು ತಜ್ಞೆಯಾಗಿದ್ದ ನನಗೆ ಮನದಟ್ಟಾಗಿತ್ತು. ಜೊತೆಗೆ ನಾನು ತಯಾರು ಮಾಡಿದ್ದ ಫೆರೊಮೋನ್ ಟ್ರ್ಯಾಪ್ ಹೆಚ್ಚು ಹಣಕ್ಕೆ ಮಾರಲು ಸಾಧ್ಯವಿಲ್ಲ ಕಾರಣ ಇದರ ಪರಿಣಾಮ ಸ್ವಲ್ಪ ನಿಧಾನ ಆದರೆ ರಾಸಾಯನಿಕ ಬಳಸಿದ್ದಲ್ಲಿ ರೈತರಿಗೆ ಬಹಳ ಬೇಗ ಫಲಿತಾಂಶ ಕಂಡು ಬರುವ ಸಾಧ್ಯತೆ ಇದ್ದುದರಿಂದ ರಾಸಾಯನಿಕ ಪ್ರೊಡಕ್ಟ್ ಗೆ ಹೆಚ್ಚು ಬೆಲೆಯನ್ನು ಇಟ್ಟು ಮಾರುವ ಉದ್ದೇಶ ಕಂಪನಿಗಿತ್ತು. ಇದೆಲ್ಲದಕ್ಕೂ ತೀವ್ರ ವಿರೋಧ ಎಬ್ಬಿಸಿದ ನನಗೆ ದೊರೈ ಲಿಂಗರಾಜುರವರಿಂದ ತೀವ್ರ ಎಚ್ಚರಿಕೆ ಕೇಳಬೇಕಾಗಿ ಬಂದಿತ್ತು. ಜೊತೆಗೆ ನನ್ನ ವರದಿಯನ್ನು ಈ ಕೂಡಲೇ ಕೈ ಬಿಡಲು ಆದೇಶ ಬಂದಿರುವುದರಿಂದ ನನಗೆ ಮುಂದಿನ ದಾರಿ ಹೊಳೆಯದೆ ನನ್ನ ವರದಿಯ ಎಲ್ಲ ವಿವರಗಳನ್ನು ಈ ಪತ್ರದ ಜೊತೆಗೆ ಕಳಿಸಿರುತ್ತೇನೆ. ನೀವಾದರೂ ಅಬುಧಾಬಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಪಂಚಕ್ಕೆ ಈ ಅಧ್ಯಯನದ ಬಗ್ಗೆ ತಿಳಿಸಿಕೊಡಿ.

ಇಂತಿ
ಪೂಜ, ಕೀಟ ಶಾಸ್ತ್ರ ತಜ್ಞೆ- ಬೆಂಗಳೂರು

ರಾಮ್ ರಾವ್ ಈ ವರದಿಯ ಜೊತೆ ಲಗತ್ತಿಸಲಾಗಿದ್ದ ಮತ್ತಷ್ಟು ವಿವರಗಳನ್ನು ಪರೀಕ್ಷಿಸುತ್ತಿದ್ದಾಗ ಅಶುತೋಷ್ ಹೊರಗಿನಿಂದ ಕಾಫಿ ಕಪ್ ಹಿಡಿದು ಮತ್ತೊಮ್ಮೆ ಒಳ ಬಂದರು. ಕಾಫಿ ಹಿಡಿದು ಬಂದ ಅಶುತೋಷ್ ಅವರನ್ನು ಕಂಡು ಬೆವರು ಒರೆಸಿಕೊಂಡು ನಗುವಂತೆ ನಟಿಸಿ ರಾಮ್ ರಾವ್ ಕಾಫಿ ಹೀರತೊಡಗಿದರು. ಅಶುತೋಷ್ “ಸೋ, ಎಸಿಯಲ್ಲೂ ಬೆವರುತ್ತಿದೀರಿ. ಬೇಗ ಹೇಳಿ. ಪೂಜಾ ಎಲ್ಲಿದ್ದಾಳೆ. ನನಗೆ ಮತ್ತಷ್ಟು ಕೆಲಸ ಬಾಕಿ ಇದೆ”. ರಾಮ ರಾವ್ ಗೆ ಎದೆ ಹೊಡೆದು ಹೋದಂತಾಯ್ತು. “ಏನ್ ಮಾತಾಡ್ತಾ ಇದ್ದೀಯ ಅಶುತೋಷ್”. ಅಶುತೋಷ್ ರಾಮ್ ರಾವ್ ಮುಂದಿದ್ದ ಕಾಫಿ ಕಪ್ಪನ್ನು ಜೋರಾಗಿ ಗೋಡೆಗೆ ತಳ್ಳಿ ಕಿರುಚಿದರು “ಮರ್ಯಾದೆ ಇಂದ ಮಾತಾಡೋ ಲೋಫರ್. ನಿನ್ನ ನಾನು ಒಳ್ಳೆ ಸ್ನೇಹಿತ ಅಂತ ಎಣಿಸಿದ್ದೆ ಆದ್ರೆ ನೀನು ಇಂತ ಕ್ರಿಮಿನಲ್ ಅಂತ ಗೊತ್ತಾಗಿದ್ದು ಈಗಲೇ”. ರಾಮ್ ರಾವ್ ಮರು ಮಾತನಾಡಿದ “ನನಗೆ ಏನು ಅರ್ಥ ಆಗ್ತಿಲ್ಲ”. ಅಶುತೋಷ್ ಮುಂದುವರಿಸಿದರು “ರಾಮ್ ರಾವ್, ನೀನು ಒಂದು ತಪ್ಪು ಮಾಡಿದೆ. ಈ ವಿಷಯವನ್ನು ನಿನ್ನೆ ನನಗೆ ನೇರ ತಿಳಿಸಿದ್ದು. ಕೆಲವು ಕಾರಣಗಳಿಂದ ನಿನ್ನ ಲ್ಯಾಂಡ್ ಲೈನಿಗೆ ಕದ್ದಾಲಿಸುವ ಯಂತ್ರ ಅಳವಡಿಸಲು ರಾಯ್ಕರ್ ಮತ್ತು ತಂಡಕ್ಕೆ ವಹಿಸಿದ್ದೆ. ನಿನಗೆ ನೆನಪಿದ್ದರೆ ನನ್ನ ಕರೆಯ ನಂತರ ನೀನು ಇನ್ನೊಂದು ಕರೆ ಮಾಡಿ ಮಾತನಾಡಿದ್ದೆ ಅದು ದೊರೈ ಲಿಂಗರಾಜುರವರಿಗೆ. ರಾಮ್ ರಾವನಿಗೆ ಜೀವ ಬಾಯಿಗೆ ಬಂದಂತಾಯಿತು. ಅಶುತೋಷ್ ಮುಂದುವರಿಸಿದರು “ಇದೆಲ್ಲ ಯಾಕೆ ಮಾಡಿದೆ ಎಂದು ಯೋಚಿಸುತ್ತಿದ್ದೀಯ? ಈ ಮಟಪಕ್ಷಿ ವಿಚಾರವಾಗಿ ಸಂಶೋಧನೆ ನಿಲ್ಲಿಸಲು ಪೂಜಾಳಿಗೆ ದುಬೈ ಮೂಲದ ವ್ಯಕ್ತಿಗಳ ಮೂಲಕ ಬೆದರಿಕೆ ಕರೆಗಳು ಬಂದಿದ್ದವು ಎಂದು ರಾಯ್ಕರ್ ಮೂಲಕ ತಿಳಿಯಿತು.

ಪೂಜಾ ಮತ್ತು ರಾಯ್ಕರ್ ಶಾಲಾ ದಿನಗಳಲ್ಲಿ ಸಹಪಾಠಿಗಳು. ಈ ವಿಚಾರವಾಗಿ ಪೂಜಾ ರಾಯ್ಕರ್ ಬಳಿ ಸಹಾಯ ಕೇಳಿ ಎರಡು ದಿನಗಳಲ್ಲಿ ಮಾಯವಾದಳು ಎಂದು ನನಗೆ ವರದಿ ಬಂತು. ರಾಯ್ಕರ್ ಬಳಿ ಪೂಜಾ ಹೆಸರಿಸಿದ್ದ ಎಲ್ಲ ವ್ಯಕ್ತಿಗಳ ಮೇಲೆ ನನ್ನ ತನಿಖೆ ಮುಂದುವರಿಸಿದ್ದೆ ಅದರ ವಿಚಾರವಾಗಿ ನಾನೇ ನಿನಗೆ ಕಳಿಸಿದ್ದ ಮೆಸೇಜು “STOP RESEARCH ON TREEPIE”. ನನ್ನ ಮೆಸೇಜು ನೋಡಿ ಹೆದರಿ ನೀನು ಯಾವಾಗ ದೊರೈ ಲಿಂಗರಾಜುಗೆ ಕರೆ ಮಾಡಿ ಮಾತಾಡಿದಿಯೋ ನಿನಗೂ ಆ ಕಂಪನಿಗೂ ಇರುವ  ಸಂಬಂಧ ನಮಗೆ ಅರಿವಾಯಿತು. ಆ ಕಂಪನಿಯ ಅತೀ ಹೆಚ್ಚಿನ ಷೇರುಗಳು ನಿನ್ನ ಹೆಸರಿನಲ್ಲಿರುವುದು ಕೂಡ ನಮಗೆ ತಿಳಿಯಿತು. ನೀನು ಅಬುಧಾಬಿಗೆ ಹೋಗುತ್ತಿರುವುದೇ ಪೂಜಾ ವಿರೋಧಿಸಿದ್ದ ರಾಸಾಯನಿಕ ಪ್ರೊಡಕ್ಟ್ ಘೋಷಿಸಲು ಎಂಬುದು ದೊರೈ ಲಿಂಗರಾಜುನನ್ನು ವಿಚಾರಿಸಿದಾಗ ತಿಳಿಯಿತು. ಅದಕ್ಕೂ ಮುಂಚೆ ಈ ವರದಿ ನಿನಗೆ ತಲುಪಿಸಲು ಪೂಜಾ ಫೋನ್ ಮಾಡಿದ್ದಳು ಆದರೆ ಅಂದು ಕರೆಯನ್ನು ಸಂಪೂರ್ಣ ಮುಗಿಸಿರಲಿಲ್ಲ. ಅವಳು ನಿನಗೆ ಫೋನ್ ಮಾಡಿದ್ದ ಕಾರಣ ನೀನು ಭಾರತವನ್ನು ಪ್ರತಿನಿಧಿಸುವಾಗ ಅವಳ ವರದಿಯನ್ನು ಪ್ರಪಂಚಕ್ಕೆ ತಿಳಿಸಲು ಸಾಧ್ಯವೇ ಎಂಬುದನ್ನು ಕೇಳಲು ಕಾರಣ ನೀನು ಒಬ್ಬ ಜೆಂಟಲ್ ಮ್ಯಾನ್‌ ಎಂದೆನಿಸಿರಬೇಕು ಜೊತೆಗೆ ನಿನ್ನ ಮತ್ತು ಲಿಂಗರಾಜು ಸ್ನೇಹ ಅವಳಿಗೆ ಹೇಗೆ ತಿಳಿಯಲು ಸಾಧ್ಯ. ಆದರೆ ನೀನು ದೊರೈ ಲಿಂಗರಾಜು ಇಬ್ಬರೂ ಸೇರಿ ಅವಳನ್ನು ಎಲ್ಲಿ ಇಟ್ಟಿದ್ದೀರಿ ಎಂಬುದು ತಿಳಿಯದು.

ಇಂದು ಬೆಳಿಗ್ಗೆಯೆ ದೊರೈ ಲಿಂಗರಾಜನನ್ನು ಅರೆಸ್ಟ್‌ ಮಾಡಿದ್ದೆವು, ಪಕ್ಕದ ಕೊಣೆಯಲ್ಲಿ ವಿಚಾರಣೆ ಮುಂದುವರಿದಿದೆ. ಆದರೆ ನಿನ್ನ ಪಾತ್ರ ಎಷ್ಟಿದೆ ಎಂದು ಹೆಚ್ಚಿನ ಮಾಹಿತಿ ಇರಲಿಲ್ಲ ಆದ್ದರಿಂದ ನಿನ್ನನ್ನು ನಾವೇ ಹೆದರಿಸಿ ನಾವೇ ರಕ್ಷಿಸುವಂತೆ ನಾಟಕ ಆಡಿದೆವು. ನೀನು ಇಷ್ಟು ಸುಲಭವಾಗಿ ನಮ್ಮ ಬಲೆಗೆ ಬೀಳುತ್ತೀಯ ಎಂದೆಣಿಸಿರಲಿಲ್ಲ” ರಾಮ್ ರಾವನಿಗೆ ಅಶುತೋಷ್‌ ಹೆಣೆದ ಬಲೆಗೆ ತಾನೇ ಓಡೋಡಿ ಬಂದು ಸಿಕ್ಕಿಹಾಕಿಕೊಂಡಂತಾಗಿತ್ತು. ವಿಧಿಯಿರಲಿಲ್ಲ ಆದ್ದರಿಂದ ಮಾತನಾಡಿದ “ಲಿಂಗರಾಜು ಎಷ್ಟೇ ಹೇಳಿದರೂ ಆ ಹುಡುಗಿ ಒಪ್ಪಲೇ ಇಲ್ಲವಂತೆ ಜೊತೆಗೆ ಪತ್ರಿಕೆಗಳಲ್ಲಿ ಈ ವಿಷಯವನ್ನು ವಿಸ್ತಾರವಾಗಿ ಬರೆಯುತ್ತೇನೆಂದು ಹೇಳಿದ್ದಳಂತೆ. ದುಬೈ ಸ್ನೇಹಿತರ ಮೂಲಕ ಎಚ್ಚರಿಕೆ ನೀಡಿಸಿದರೂ ಬಗ್ಗಲಿಲ್ಲ ಹಾಗಾಗಿ ಮುಂದಿನ ತಿಂಗಳು ನಡೆಯುವ ಕಾಫರೆನ್ಸ್ ಗೆ ಅಡ್ಡಿಯಾಗಬಾರದೆಂದು” ಎಂದೇಳಿ ನಿಲ್ಲಿಸಿದ. ತಡಮಾಡದೆ ಮುಂದೆ ಪೂಜಾಳ ಇರುವಿಕೆಯನ್ನು ತಿಳಿದು ದೊರೈ ಲಿಂಗರಾಜು ಮತ್ತು ರಾಮ್ ರಾವ್ ಅವರನ್ನು ಆಫೀಸಿನ ಸೆಲ್ ನಲ್ಲಿ ಉಳಿಸಿ ರಾಯ್ಕರ್ ಅವರಿಗೆ ಫೋನಾಯಿಸಿ ಕೂಡಲೇ ಎಲ್ಲ ವಿಷಯ ತಿಳಿಸಿದರು. ಪೂಜಾಳನ್ನು ಬೆಂಗಳೂರಿನ ಹೊರವಲಯದಲ್ಲಿರುವ ಅವಳ ಕಂಪನಿಯ ಮತ್ತೊಂದು ಜಾಗದಲ್ಲಿ ಉಳಿಸಿ ಅವಳನ್ನು ಗೃಹಬಂಧನದಲ್ಲಿರಿಸಿ ಅವಳನ್ನು ಒಪ್ಪಿಸಲು ಪ್ರಯತ್ನ ಮುಂದುವರಿದಿತ್ತು. ಪೂಜಾ ಇರುವ ಜಾಗ ತಿಳಿದೊಡನೆ ಮೂರ್ನಾಲ್ಕು ಘಂಟೆಯೊಳಗೆ ಪೂಜಾಳನ್ನು ಬಿಡಿಸಿಕೊಂಡು ಬಂದು ರಾಯ್ಕರ್ ಅಶುತೋಷ್ ಅವರಿಗೆ ತಿಳಿಸಿದ್ದಳು.

ಇದಾದ ನಂತರ ಒಬ್ಬ ಸರ್ಕಾರಿ ಪ್ರತಿನಿಧಿಯಾಗಿ ರಾಮ್ ರಾವ್ ಮಾಡಲು ಹೊರಟಿದ್ದ ಹೀನ ಕೆಲಸ ಇಡೀ ದೇಶದ ಪತ್ರಿಕೆಗಳಲ್ಲಿ ಹೊರಬಂದು ದೇಶದ ಜನತೆ ಇವನಿಗೆ ಛೀಮಾರಿ ಹಾಕಿತ್ತು. ಇಬ್ಬರು ಮಹಿಳೆಯರು ಸೇರಿ ಸಮಸ್ಯೆಗಳನ್ನು ದಿಟ್ಟವಾಗಿ ಹೆದರಿಸಿ ಗೆದ್ದು ಹೊರ ಬಂದಿದ್ದರೆ ಅತ್ತ ದೊರೈ ಲಿಂಗರಾಜು ಮತ್ತು ರಾಮ್ ರಾವ್ ಇಬ್ಬರ ಮೇಲೆ ಕೇಸ್ ಜಡಿದು ಜೈಲು ಶಿಕ್ಷೆ ವಿಧಿಸಲಾಗಿತ್ತು. ಕೆಲವು ದಿನಗಳ ನಂತರ ಸರ್ಕಾರದ ಪ್ರತಿನಿಧಿಗಳು ಬಂದು ಪೂಜಾಳ ತೋಟದಲ್ಲಿ ಅವಳನ್ನು ಭೇಟಿ ಮಾಡಿ ಅಬುಧಾಬಿಯಲ್ಲಿ ನಡೆಯಲಿರುವ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಗೆ ಭಾರತದ ಪ್ರತಿನಿಧಿಯಾಗಿ ಹೋಗಬೇಕೆಂದು ತಿಳಿಸಿದಾಗ ಬಸಪ್ಪನ ಕಣ್ಣಲ್ಲಿ ನೀರು ಬಂದಿತ್ತು. ಪೂಜಾ ಕೊನೆಗೂ ತನ್ನ ಪ್ರಯತ್ನದಲ್ಲಿ ಗೆದ್ದಿದ್ದಳು ಅದಕ್ಕಿಂತ ದೊಡ್ಡ ಗೆಲುವು ಬಸಪ್ಪನದಾಗಿತ್ತು. ಮುಂದೆ ಅಬುಧಾಬಿಯಲ್ಲಿ ನಡೆದ ಸಮಾವೇಶದ ನಂತರ ಮಟಪಕ್ಷಿ ಎಲ್ಲರ ಗಮನ ಸೆಳೆದಿತ್ತು. ಕೆಂಪು ಮೂತಿಹುಳು ನಿರ್ವಹಣೆಯಲ್ಲಿ ಬರೀ ರಾಸಾಯನಿಕಗಳ ನಿರ್ವಹಣೆಗಿಂತ ಸಂಯೋಜಿತ ಕೀಟ ನಿರ್ವಹಣೆ ಪ್ರಾಮುಖ್ಯತೆ ಪಡೆಯತೊಡಗಿತು . ಇದನ್ನೆಲ್ಲಾ ಕಂಡು ಇತ್ತ ದೆಹಲಿಯಲ್ಲಿ ಅಶುತೋಷ್ ಅವರು ರೂಫಸ್ ಟ್ರೀಪೈ ಕೇಸಿಗೆ ಅಂತ್ಯ ನೀಡಿ ಅದಕ್ಕೆ ಬಳಸಲಾಗಿದ್ದ ಎಲ್ಲ ಕಡತಗಳನ್ನು ಲಾಕರಿನಲ್ಲಿ ಬಿಗಿಯಾಗಿ ಭದ್ರಪಡಿಸಿದ್ದರು.

ಮುಕ್ತಾಯ

ಗಮನಿಸಿ: ಹಕ್ಕಿ ಪಕ್ಷಿಗಳ ಬಗ್ಗೆ ತಿಳಿದುಕೊಂಡಷ್ಟು ಕುತೂಹಲ ಹೆಚ್ಚಾಗುತ್ತಿದೆ. ಇಂದು ಕೀಟ ನಿಯಂತ್ರಣದಲ್ಲಿ ರಾಸಾಯನಿಕ ಬಳಕೆ ಹೆಚ್ಚಾಗಿರುವುದರಿಂದ ಪಕ್ಷಿಗಳು ಅವನತಿಯತ್ತ ಸಾಗುತ್ತಿವೆ. ಒಮ್ಮೆ ಈ ಸಮತೋಲನ ಹಾಳಾಗಿ ಹೋದರೆ ನಾವು ರಾಸಾಯನಿಕಗಳ ಮೇಲೆಯೆ ಸಂಪೂರ್ಣವಾಗಿ ಅವಲಂಬಿತರಾಗಬೇಕಾಗುತ್ತದೆ. ಒಮ್ಮೆ ಹಾಗಾದರೆ ಒಂದು ಮೂಟೆ ಅಕ್ಕಿ ಬೆಳೆಯಲು ಟನ್ನುಗಟ್ಟಲೆ ರಾಸಾಯಾನಿಕ ಸುರಿಯಬೇಕಾಗುತ್ತದೆ ಎಂಬುದು ಅಘಾತಕಾರಿ ವಿಷಯವೇ ಸರಿ. ಇದನ್ನು ಕಥೆಯೆಂದೆ ಓದಿಕೊಳ್ಳಬೇಕೆ ಹೊರತು ಕೀಟ ನಿಯಂತ್ರಣ ದಾಖಲೆ ಎಂದಲ್ಲ. ಈ ಕಥೆಯ ಉದ್ದೇಶ ಕೀಟ ನಿಯಂತ್ರಣದಲ್ಲಿ ಪಕ್ಷಿಗಳ ಪಾಲನ್ನು ಎತ್ತಿ ತೊರಿಸುವುದಷ್ಟೇ ಆಗಿರುತ್ತದೆ. ಜೊತೆಗೆ ಈಗಾಗಲೇ ತಿಳಿದಿರುವಂತೆ ಎಂಡೋಸಲ್ಫಾನ್‌ ೨೦೧೧ ರಲ್ಲಿ ಭಾರತದಲ್ಲಿ ಸಂಪೂರ್ಣವಾಗಿ ನಿಷೇದಗೊಂಡಿದೆ ಆದರೂ ಇಂದಿಗೂ ಎಂಡೋಸಲ್ಫಾನ್‌ನಂತಹ ಹಲವು ವಿಷಕಾರಿ ಕೀಟನಾಶಕಗಳು, ಕಳೆನಾಶಕಗಳು ಇಂದಿಗೂ ಬಳಕೆಯಾಗುತ್ತಿವೆ.

ಹಲವು ಕಡೆ ೨೦೧೧ ರವರೆಗೂ ಕೆಂಪುಮೂತಿಹುಳು ನಿಯಂತ್ರಣಕ್ಕೆ ಎಂಡೋಸಲ್ಫಾನ್‌ ಬಳಕೆ ಮಾಡಿದ್ದರು. ಎಂಡೋಸಲ್ಫಾನ್‌ ಬಳಕೆಯಿಂದ ಆದ ಅನಾಹುತಗಳ ಪಟ್ಟಿ ದೊಡ್ಡದಿದೆ. ಪಕ್ಷಿಗಳು ಕೃಷಿ ಕೀಟ ನಿಯಂತ್ರಣದಲ್ಲಿ ಬಹು ಮುಖ್ಯ ಪಾಲು ಹೊಂದಿವೆ ಅದರಲ್ಲಿ ಮಟಪಕ್ಷಿ ಒಂದು ಅಷ್ಟೇ. ಸುಸ್ಥಿರ ತೋಟ ಎಂದರೆ ತೋಟದಲ್ಲಿ ಸಿಗುವ ಎಲ್ಲ ಪಾಲು ಮಾನವನದಷ್ಟೇ ಅಲ್ಲ. ತೋಟದಲ್ಲಿ ಬದುಕುವ ಪ್ರತಿಯೊಂದು ಜೀವಿಗೂ ಅಲ್ಲಿನ ಬೆಳೆಯ ಮೇಲೆ ಹಕ್ಕಿದೆ ಎಂದು ಮಾನವರು ಅರ್ಥ ಮಾಡಿಕೊಂಡು ಹಕ್ಕಿಗಳ ಆವಾಸಸ್ಥಾನ ಹಾಳು ಮಾಡದೆ ತೋಟದಲ್ಲಿ ಬರುವ ಎಲ್ಲ ಹಕ್ಕಿಗಳನ್ನು, ಹುಳುಗಳನ್ನು, ಪ್ರಾಣಿಗಳನ್ನು ಗಮನಿಸುತ್ತಾ ಅವುಗಳ ಜೊತೆ ಸಮಬಾಳ್ವೆ ಹೊಂದುತ್ತಾ ಈ ಕಥೆಯಲ್ಲಿ ಬರುವ ಬಸಪ್ಪನಂತೆ ಕೀಟನಾಶಕ ಬಳಸದೆ ಮಣ್ಣೇ ದೇವರೆಂದು ಭಾವಿಸಿ ಬದುಕಿದರೆ ಬದುಕು ಬಂಗಾರವಾಗುತ್ತದೆ.

‍ಲೇಖಕರು nalike

July 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Prajna Mattihalli

    Good Job Puttaradhya. It is the best way of sensitization about the nature and creatures

    ಪ್ರತಿಕ್ರಿಯೆ
  2. Veda

    Ganeshaiah avara kathegalante chaka chakane odisikondu hoguva lekhana. Idara hindiruva kalaji arthaporrna

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: