ಬಸ್ ಪ್ರಯಾಣವೇ ಪ್ರಯಾಣ

 ಕೆ.ಎಂ.ವೀರಮ್ಮ

‘ದಿನವೂ ಬಸ್ಸಿನಲ್ಲಿ ಹೋಗಿ ಬಂದು ತುಂಬಾ ಸುಸ್ತಾಗಬಹುದಲ್ಲವಾ? ಹೇಗೆ ಓಡಾಡ್ತೀಯೋ ಏನೋ ತುಂಬ ಕಷ್ಟ ಅಲ್ಲವಾ?’ ಅಂತ ಬಂಧುಗಳು, ಹಿತೈಷಿಗಳೂ ಕೇಳಿದಾಗ ಹೌದು, ಆಗುತ್ತೆ ಆದರೆ ಏನು ಮಾಡುವುದು ಅನಿವಾರ್ಯ, ಅಭ್ಯಾಸ ಆಗಿಬಿಟ್ಟಿದೆ’ ಎನ್ನುವ ಸಿದ್ಧ ಉತ್ತರ ನನ್ನದು. ಆದರೆ ಮನಸ್ಸಿನಲ್ಲೇ ಬಸ್ ಪ್ರಯಾಣ ನನ್ನ ತಾಳ್ಮೆ, ಸಾಮರ್ಥ್ಯ, ಸಹಿಷ್ಣುತೆ, ಸಮಯಪ್ರಜ್ಞೆಗಳನ್ನು ಒರೆಗೆ ಹಚ್ಚಿಕೊಳ್ಳುವ, ಸಹಪ್ರಯಾಣಿಕರ ಸ್ಥಿತಿಗತಿಗಳನ್ನು, ಪ್ರತಿಕ್ರಿಯೆಗಳನ್ನು ಅವಲೋಕಿಸುತ್ತಾ ಬದುಕನ್ನು ಇನ್ನಷ್ಟು ಸಹ್ಯವಾಗಿಸಿಕೊಳ್ಳುವ, ಕೆಲವೊಮ್ಮೆ ಬಸ್ ಪ್ರಯಾಣದಲ್ಲಿ ನಡೆಯುವ ಹಾಸ್ಯಪ್ರಸಂಗಗಳಿಂದಾಗಿ ಮನಸ್ಸನ್ನು ಮುದಗೊಳಿಸಿಕೊಳ್ಳುವ ಅವಕಾಶ ದೊರಕುತ್ತಿರುವುದಕ್ಕೆ ಬಸ್ ಪ್ರಯಾಣಕ್ಕೆ ಒಂದು ದೊಡ್ಡ ಸಲಾಂ ಕೊಟ್ಟುಕೊಳ್ಳುತ್ತೇನೆ! ಇದಲ್ಲದೆ ಮನಸ್ಸು ಆದ್ರಗೊಂಡು ಯಾರಿಗೂ ಕಾಣದಂತೆ ಕಿಟಕಿಗೆ ಮುಖಮಾಡಿ ಕಣ್ಣೊರೆಸಿಕೊಂಡ ಕ್ಷಣಗಳು ಉಂಟು!

ಪ್ರತಿದಿನ ನಸುಕಿನಲ್ಲೇ ಎದ್ದು ಒಂದು ನಿಮಿಷವೂ ಬಿಡುವಿಲ್ಲದಂತೆ ಅಡುಗೆ ಮನೆಕೆಲಸ ಮುಗಿಸಿ ಅವಸರವಸರವಾಗಿ ಸಿದ್ಧಗೊಂಡು ಬಸ್ಟ್ಯಾಂಡ್ ತಲುಪಿ ಬಸ್ ಹತ್ತುತ್ತಿದ್ದಂತೆ ಕುಳಿತುಕೊಳ್ಳಲು ಕಿಟಕಿ ಪಕ್ಕದ ಆಸನ ಸಿಕ್ಕು ಬಿಟ್ಟರೆ ಲಾಟರಿ ಹೊಡೆದಷ್ಷೇ ಖುಷಿ! ಕಿಟಕಿ ಗ್ಲಾಸ್ ಸರಿಸಿ ಆರಾಮವಾಗಿ ಸೀಟಿಗೊರಗಿ ಕಣ್ಮುಚ್ಚಿದರೆ ಅದೇನೋ ನೆಮ್ಮದಿ. ಆದರೆ ಕೆಲವೊಮ್ಮೆ ಅದರಲ್ಲೂ ಶನಿವಾರ ಶಾಲೆಯಿಂದ ವಾಪಾಸು ಬರುವಾಗ ಜಗಳೂರಿನಿಂದ ಬರುವ ಬಸ್ಸುಗಳು ತುಂಬಿಕೊಂಡೇ ಬರುವುದರಿಂದ ನಮಗೆ ಕಡ್ಡಾಯವಾಗಿ ನಿಂತು ಪ್ರಯಾಣಿಸಬೇಕಾದ ಶಿಕ್ಷೆ. ಇಂಥ ಸ್ಥಿತಿಯಲ್ಲಿ ಬಸ್ಸಿಗೆ ಏನೋ ಅಡ್ಡ ಬಂದು ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದನೆಂದರೆ ನಿಂತವರ ಪಾಡು ಅನುಭವಿಸಿಯೇ ತಿಳಿಯಬೇಕು.

ಆ ಸಮಯದಲ್ಲಿ ಹಿಂದಿನ ಕೊನೆಯ ಸೀಟಿನಲ್ಲಿ ಕುಳಿತವರು ಚಾಲಕನಿಗೆ ಪ್ರಸಾದಿಸುವ ಬೈಗುಳ ಪರಿಯೇ ಮಜಾ! ‘ಮಗನ್ ತಂದು, ನೀನು ಇಲ್ಲಿ ಕೂತ್ಕೊಂಡು ನೋಡ್ ಬಾ, ಹೊಟ್ಟಿಗೇನ್ತಿಂತಿಯಾ…’ ಸದ್ಯ ಶಬ್ದಗಳ ಮೇಳದಲ್ಲಿ ಆ ಬೈಗುಳ ಚಾಲಕನ ಕಿವಿ ತಲುಪದಿರುವುದೊಂದು ಪುಣ್ಯ! ಇನ್ನು ಬಸ್ಸಿನಲ್ಲಿ ದುಪ್ಪಟ್ಟು ಜನರನ್ನು ತುರುಕಿ ಸೀಟ್ಗಳ ಮಧ್ಯದ ಓಡಾಡುವ ಜಾಗದಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡಂತೆ ನಿಲ್ಲಬೇಕಾಗಿ ಬಂದಾಗ, ಅದರಲ್ಲೂ ಬೇಸಿಗೆಯಲ್ಲಿ ಬೇರೆಯವರ ಬೆವರು ಮೈಗೆ ತಾಕದಂತೆ ಹರಸಾಹಸಪಟ್ಟು ಎಚ್ಚರವಹಿಸಿದರೂ ಕೈಗೆ, ತೋಳಿಗೆ ಅದ್ಯಾವ ಘಳಿಗೆಯಲ್ಲೋ ಅಂಟಿಕೊಳ್ಳುವ ಬೆವರ ಪಸೆ ವಾಕರಿಕೆ ತರಿಸಿದಾಗ ಮಾತ್ರ ಬಸ್ ಪ್ರಯಾಣ ಒಂದು ಶಾಪ ಅನ್ನಿಸುವುದು ಸುಳ್ಳಲ್ಲ!

ಒಮ್ಮೊಮ್ಮೆ ಅಕ್ಕಪಕ್ಕದವರು ಮಾತಿಗೆಳೆಯುತ್ತಾರೆ. ಯಾವೂರು? ಎಲ್ಲಿಗೆ ಹೋಗಬೇಕು? ಟೀಚರ್ರಾ? ಮಕ್ಕಳೆಷ್ಟು? ಮನೆಯವರು ಏನ್ಮಾಡ್ತಾರೆ? ಪ್ರಶ್ನಾವಳಿ ಪ್ರಾರಂಭವಾಗುತ್ತದೆ. ಅವರು ಪ್ರಶ್ನೆ ಕೇಳುವ ಧಾಟಿಯಿಂದಲೇ ಅವರನ್ನು ಅಳೆದು ಉತ್ತರಿಸಬಹುದಾದಷ್ಟು ಉತ್ತರಿಸಿ ಮೌನವಾಗುತ್ತೇನೆ. ನನಗೂ ಅವರಲ್ಲಿ ಆಸಕ್ತಿ ಹುಟ್ಟಿದರೆ ಮಾತ್ರ ಅವರನ್ನು ಮರು ಪ್ರಶ್ನಿಸುತ್ತೇನೆ. ಹೀಗೆ ಒಮ್ಮೆ ನನ್ನ ಪಕ್ಕ ಸುಮಾರು ಎಪ್ಪತ್ತೈದರ ಆಸುಪಾಸಿನ ನೋಡಲು ತುಂಬಾ ಲಕ್ಷಣವಾಗಿದ್ದ ವೃದ್ಧೆಯೊಬ್ಬರು ಕುಳಿತಿದ್ದರು. ಅವರು ಫೋನಿನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದ ಧಾಟಿ ಅವರ ವೇಷಭೂಷಣ ಗಮನಿಸಿದಾಗ ಅವರ ವಯಸ್ಸನ್ನು ಮರೆಮಾಚುವಂತಹ ಲವಲವಿಕೆ, ಜೀವನೋತ್ಸಾಹ ಅಚ್ಚುಕಟ್ಟುತನ ಒಂದೊಂದಾಗಿ ನನ್ನಲ್ಲಿ ಕುತೂಹಲ ಮೂಡಿ ಮೆಲ್ಲಗೆ ಅವರನ್ನು ಮಾತಿಗೆಳೆಯಲು ಮನ ಬಯಸಿತ್ತು. ನೋಡಲು ನನ್ನ ಅಜ್ಜಿಯನ್ನು ಹೋಲುತ್ತಿದ್ದುದೂ ಅವರ ಬಗ್ಗೆ ನನಗೆ ಆಸಕ್ತಿ ಮೂಡಲು ಕಾರಣವಿರಬಹುದು. ಸಂಭಾಷಣೆಯಲ್ಲಿ ತಿಳಿದು ಬಂದಿದ್ದಿಷ್ಟು -ಅವರು ಬಳ್ಳಾರಿಯ ಗಡಿಯಂಚಿನ ಒಂದು ಹಳ್ಳಿಯ ದೊಡ್ಡ ಜಮೀನ್ದಾರಿ ಮನೆತನದವರು. ಪತಿ ತೀರಿ ಹೋಗಿದ್ದರು. ಮೂರು ಜನ ಗಂಡುಮಕ್ಕಳು ಒಳ್ಳೆಯ ವೃತ್ತಿಗಳಲ್ಲಿದ್ದು ಬೇರೆ ಬೇರೆ ಊರುಗಳಲ್ಲಿ ನೆಲಸಿದ್ದರು. ಇವರು ಮಾತ್ರ ಹಳ್ಳಿಯಲ್ಲಿ ದೊಡ್ಡಮನೆಯಲ್ಲಿ ಸುಮಾರು ನೂರು ಎಕರೆ ಜಮೀನಿನ ಕಾರ್ಯಭಾರ ನೋಡಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸುತ್ತಿರುವುದಾಗಿ ತಿಳಿಸಿ ಅಚ್ಚರಿ ಮೂಡಿಸಿದರು.

ಈ ವಯಸ್ಸಿನಲ್ಲಿ ನೀವು ಆರಾಮವಾಗಿ ಮಕ್ಕಳೊಂದಿಗೆ ಇರಬಹುದಿತ್ತಲ್ಲವಾ? ಎನ್ನುವ ನನ್ನ ಪ್ರಶ್ನೆಗೆ “ಹಾಗಲ್ಲಮ್ಮ, ನಾನೂ ಊರು ಬಿಟ್ಟು ಬಂದರೆ ಹೊಲ-ಮನೆಯ ಗತಿ ಏನು?! ಈಗಲೂ ಊರಿನಲ್ಲಿ ನಾನು ಹಿರಿಯಳು ಎಂದು ಜನ ತುಂಬಾ ಗೌರವ, ಪ್ರೀತಿ  ತೋರಿಸುತ್ತಾರೆ. ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾ ಸ್ವತಂತ್ರವಾಗಿ ಯಾರ ಹಂಗು ಇಲ್ಲದೆ ಯಾರಿಗೂ ಹೊರೆಯಾಗದೆ ಸುಖವಾಗಿದ್ದೇನೆ. ಹಾಗಂತ ಮಕ್ಕಳ ಹತ್ತಿರ ಹೋಗಬಾರದಂತಲ್ಲ. ಸಮಯ ಬಂದಾಗ ಹೋಗೇ ಹೋಗುತ್ತೇನೆ. ಈಗ ನಾನು ಮಗನ ಮನೆಯಲ್ಲಿ ಮಗ, ಸೊಸೆ, ಮೊಮ್ಮಕ್ಕಳ ಜೊತೆ ಖುಷಿಯಾಗಿ ನಾಲ್ಕು ದಿನ ಕಳೆದು ಊರಿಗೆ ವಾಪಾಸಾಗುತ್ತಿದ್ದೇನೆ. ಮೂವರು ಮಕ್ಕಳು ಮತ್ತು ಸೊಸೆಯಂದಿರೊಂದಿಗೂ ನಾನು ಚೆನ್ನಾಗಿದ್ದೇನೆ. ನಾನಿನ್ನೂ ಗಟ್ಟಿಯಾಗಿದ್ದೇನೆ. ಈಗಲೂ ಬೆಳಗ್ಗೆಯೆದ್ದು ಜಮೀನಿಗೆ ಹೋಗಿ ಕೈಲಾಗುವವರೆಗೂ ಕೆಲಸ ಮಾಡುತ್ತಾ ಆಳುಗಳೊಂದಿಗೂ ಮಾಡಿಸುತ್ತಾ ನಂತರ ಮನೆಗೆ ಬಂದು ಬಿಸಿಮುದ್ದೆ ಮಾಡಿಕೊಂಡು ಉಂಡು ಗಡದ್ದಾಗಿ ನಿದ್ದೆ ಮಾಡುತ್ತೇನೆ. ನಾಲ್ಕು ಜನರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ, ನೆಮ್ಮದಿಯಾಗಿದ್ದೇನೆ. ನಮ್ಮ ಮನೆಯವರು ಸತ್ತ ನಂತರ ಎಲ್ಲ ಆಸ್ತಿ ನನ್ನ ಹೆಸರಿನಲ್ಲಿತ್ತು, ನಾನು ಸತ್ತ ನಂತರ ಮಕ್ಕಳು ಕಾದಾಡಬಾರದು ಅಂತ ಈಗಲೇ ವಿಲ್ ಮಾಡಿ ಬಿಟ್ಟಿದ್ದೇನೆ” ಎಂದರು. ಅವರ ದೂರದೃಷ್ಟಿ, ಚುರುಕುತನ ಕಂಡು ಅಚ್ಚರಿಗೊಳ್ಳುತ್ತಾ ಮೈಮರೆತವಳಿಗೆ ಕಂಡಕ್ಟರ್ ಧ್ವನಿ ಕೇಳಿ ನಾನಿಳಿಯುವ ಸ್ಥಳ ಬಂದಿದ್ದು ತಿಳಿದು ಅಜ್ಜಿಗೆ ಮನಃಪೂರ್ವಕವಾಗಿ ನಮಸ್ಕಾರ ತಿಳಿಸಿ ಬಸ್ ಇಳಿದೆ.

ನನ್ನ ದಿನನಿತ್ಯದ ಬಸ್ ಪ್ರಯಾಣ ಶುರುವಾದ ಮೊದಮೊದಲ ದಿನಗಳಲ್ಲಿ ಖಾಸಗಿ ಒಡೆತನದ ಬಸ್ಗಳಲ್ಲಿ (ಆ ಮಾರ್ಗದಲ್ಲಿ ಅವುಗಳದ್ದೇ ಕಾರುಬಾರು!) ಕುಳಿತುಕೊಳ್ಳುತ್ತಿದ್ದಂತೆ ಅವುಗಳಲ್ಲಿ ಅಬ್ಬರಿಸುವ ಕ್ಯಾಸೆಟ್ ಸಂಗೀತಕ್ಕೆ ಕಡ್ಡಾಯವಾಗಿ ಕೇಳುಗಳಾಗಬೇಕಾದ ಅನಿವಾರ್ಯತೆ! ಆದರೆ ಕೆಲವೊಮ್ಮೆ 70ರಿಂದ 80-90ರ ದಶಕದ ಮೆಚ್ಚಿನ ಹಾಡುಗಳನ್ನು ಪ್ರೀತಿಯಿಂದ ಕೇಳುತ್ತಾ ಪ್ರಯಾಣದ ಪರಿವೇ ಆಗುತ್ತಿರಲಿಲ್ಲವೆನ್ನಿ! ‘ಮನೆದೇವ್ರು’ ಚಿತ್ರದ ‘ಅಪರಂಜಿ ಚಿನ್ನವೋ ನನ್ನಾ ಮನೆಯ ದೇವರು’ ಹಾಡು ಕೇಳಿದಾಗ ಮಾತ್ರ ಅಪಘಾತದಲ್ಲಿ ಪತಿಯ ಕಳೆದುಕೊಂಡ ನನಗೆ ಕಣ್ಣಲ್ಲಿ ನೀರುತುಂಬಿ ಯಾರಿಗೂ ಕಾಣಿಸದಿರಲೆಂದು ಕಿಟಕಿಗೆ ಮುಖಮಾಡಿ ಒರೆಸಿಕೊಂಡು ಭಾರವಾದ ಮನಸ್ಸಿನಿಂದ ಬಸ್ ಇಳಿದು ನಡೆದಿದ್ದಿದೆ.

ಒಮ್ಮೆಯಂತೂ ಬಳ್ಳಾರಿಯಿಂದ ದಾವಣಗೆರೆಗೆ ಪ್ರಯಾಣಿಸುವಾಗ ಚಳ್ಳಕೆರೆಯ ನಂತರ ಒಂದು ನಿಲುಗಡೆಯಲ್ಲಿ 6-8 ವರ್ಷದ ಮೊಮ್ಮಗನೊಂದಿಗೆ ಬಸ್ ಹತ್ತಿದ ಒಬ್ಬ ಅಜ್ಜಿ ಫೋನಿನಲ್ಲಿ ಯಾರೊಂದಿಗೋ ಹೇಳುತ್ತಿದ್ದುದು ಕಿವಿಗೆ ಬಿತ್ತು, “ಬಸ್ ಹತ್ವಾಗ ಪ್ರಶಾಂತನ ಒಂದು ಚಪ್ಲಿ ಕೆಳಗ ಬಿತ್ತು, ನೀನು ಜಲ್ದಿ ಗಾಡ್ಯಾಗ ಬಂದು ಅದನ್ನು ತಗೊಂಡು ಹೋಗಿ ತಗದಿಡು, ನಾನು ವಾಪಾಸ್ ಬಂದಾಗ ಇಸಗಂತೀನಿ” ಅಂತ! ಆ ಮಾತು ಕೇಳಿ ಕೆಲವೇ ತಿಂಗಳ ಹಿಂದೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ನಾನು ದೇವರನ್ನು ಮನಸ್ಸಿನಲ್ಲಿ ಬೇಡಿಕೊಳ್ಳುತ್ತಾ ‘ನನ್ನ ಗಂಡನ ಜೀವವೂ ಹೀಗೇ ರಸ್ತೆಯಲ್ಲಿ ಕಳೆದುಹೋಗಿದೆ, ನೀನೇ ಅಲ್ಲವೇ ಎತ್ತಿಟ್ಟುಕೊಂಡಿರುವುದು, ಹೇಗಾದರೂ ಸರಿ ನನಗೆ ವಾಪಾಸು ಕೊಟ್ಟುಬಿಡು’ ಎಂದು ಮೂಕವಾಗಿ ಕಣ್ಣುಮುಚ್ಚಿ ರೋದಿಸಿದ್ದೆ. ಬಸ್ ಆನಗೋಡಿನ ಹೊರವಲಯದಲ್ಲಿ ನನ್ನ ಪತಿಯ ಅಪಘಾತದ ಸ್ಥಳವನ್ನು ಹಾದು ಹೋಗುವಾಗ ಹೇಳಿಕೊಳ್ಳುಲಾಗದ ವಿಚಿತ್ರ ಸಂಕಟವಾಗಿ ಮೌನವಾಗಿ ಕಣ್ಣೀರು ಸುರಿಸಿದ್ದೆ. ಆ ದಿನದ ಬಸ್ ಪ್ರಯಾಣವನ್ನಂತೂ ಜೀವನದಲ್ಲಿ ಮರೆಯಲಾರೆ.

ಇತ್ತೀಚೆಗೆ ಒಂದು ದಿನ ಒಬ್ಬ ಗಂಡಸು ಎರಡು ಚಿಕ್ಕ ಮಕ್ಕಳನ್ನು (ಸುಮಾರು ಮೂರು ವರ್ಷದ ಹೆಣ್ಣು ಮತ್ತು ಒಂದೂವರೆ ವರ್ಷದ ಗಂಡು ಮಗು) ಇಬ್ಬರನ್ನು ಕೈಹಿಡಿದು ಬಸ್ ಹತ್ತಿಸಿ ತಾನು ಮೆಟ್ಟಿಲ ಮೇಲೆ ನಿಂತು ಹೊರಗೆ ಕೈಚಾಚಿದ. ನಾನು ಕುತೂಹಲದಿಂದ ನೋಡುತ್ತಿರುವಂತೆಯೇ ಆತನ ಹೆಂಡತಿಯಿರಬೇಕು ಇನ್ನೂ ವಾರವೂ ತುಂಬಿರದ, ಬಟ್ಟೆಯಲ್ಲಿ ಸುತ್ತಿದ ಎಳೆಗೂಸನ್ನು ಆತನ ಕೈಗಿಟ್ಟು ಬಸ್ ಹತ್ತಿದಳು. ಇಬ್ಬರೂ ಬಾಗಿಲು ಪಕ್ಕದ ಡ್ರೈವರ್ ನ ಎಡಭಾಗದ ಸೀಟಿನಲ್ಲಿ ಕುಳಿತು ಉಳಿದಿಬ್ಬರು ಮಕ್ಕಳನ್ನು ಬಾನೆಟ್ ಮೇಲೆ ಕೂಡಿಸಿದರು. ನೋಡಲು ಶ್ರಮಿಕ ವರ್ಗದವರಂತೆ ಕಾಣುತ್ತಿದ್ದರು. ಹಸುಗೂಸಂತೂ ಮತ್ತೆ ಮತ್ತೆ ನೋಡುವಂತಿತ್ತು. ಕುರ್ ಕುರೇ, ಚಿಪ್ಸ್ ಮಾರುವ ಹುಡುಗರು ಬಸ್ ಹತ್ತಿದ್ದೇ ತಡ ಆ ಗಂಡಸು ಎರೆಡೆರಡು ಪ್ಯಾಕೆಟ್ ಖರೀದಿಸಿ ಒಂದನ್ನು ಮಕ್ಕಳ ಕೈಗೆ ಮತ್ತೊಂದನ್ನು ಹೆಂಡತಿಯ ಕೈಗಿತ್ತ. ಮೆಲ್ಲಗೆ ಕುಸು ಕುಸು ಅಳಲು ಶುರು ಮಾಡಿದ್ದ ಹಸುಗೂಸಿನ ಬಾಯಿಗೆ ಮೊಲೆ ಇರಿಸಿದ್ದೇ ಆ ಹೆಣ್ಣುಮಗಳು ಆರಾಮವಾಗಿ ಚಿಪ್ಸ್, ಕುರ್ ಕುರೇ ಮೆಲ್ಲಲು ಶುರು ಮಾಡಿದಳು, ವಾರವೂ ಕಳೆದಿರದ ಬಾಣಂತಿ! ಅಚ್ಚರಿಯಿಂದ ಅವರನ್ನೇ ಗಮನಿಸುತ್ತಿದ್ದ ನನಗೆ 2-3 ತಿಂಗಳವರೆಗೆ ತಣ್ಣೀರು ಮೈಸೋಕಿಸಲೂ ಆಸ್ಪದ ನೀಡದೆ ಮೂರು ಹೊತ್ತೂ ಹಬೆಯಾಡುವ ಅಡುಗೆ ತಿನ್ನಿಸಿ, ಬಾಣಂತಿಯರಿಗೆ ಬೆಂಕಿ-ಬಿಸಿನೀರು ಬಹಳ ಮುಖ್ಯ ಅಂತ ಕೈಲಾಗದಿದ್ದರೂ ಒದ್ದಾಡಿಕೊಂಡು ನನ್ನ ಬಾಣಂತನ ಮಾಡಿದ ಅಮ್ಮನ ನೆನೆಯದಿರಲಾಗಲಿಲ್ಲ.

ಇಂತಹ ಎದೆ ಭಾರವಾಗಿಸುವ ಪ್ರಸಂಗಗಳೊಂದಿಗೆ ಮುಜುಗರಕ್ಕೊಳಗಾದ ಸನ್ನಿವೇಶಗಳೂ ಉಂಟು! ಒಮ್ಮೆ ಹಿಂದಿನ ಆಸನಗಳಲ್ಲಿ ಅನಿವಾರ್ಯವಾಗಿ ಕುಳಿತುಕೊಂಡು ಮುಂದೆ ಯಾವುದಾದರೂ ಸ್ಟಾಪಿನಲ್ಲಿ ಮುಂದಿನ ಸೀಟ್ ಖಾಲಿ ಆಗುವುದನ್ನೇ ಕಾಯುತ್ತಿರುವಾಗ ಹಾಗೆ ಸೀಟ್ ಖಾಲಿಯಾಯಿತೆಂದು ಮುಂದೆ ಧಾವಿಸಿ ಬರುವುದರೊಳಗೆ ಮುಂದಿನ ಬಾಗಿಲಿನಿಂದ ಬಂದವರೊಬ್ಬರು ನನಗಿಂತ ಮುಂಚೆ ಕ್ಷಣಾರ್ಧದಲ್ಲಿ ಆ ಆಸನವನ್ನು ಆಕ್ರಮಿಸಿಕೊಂಡು ನಾನು ಪೆಚ್ಚಾಗಿ ಹಿಂದಿರುಗಿ ಮೊದಲ ಸೀಟಿಗೇ ವಾಪಾಸು ಬರಲು ತಿರುಗಿದಾಗ ಹಿಂದಿನ ಬಾಗಿಲಿನಿಂದ ಬಂದವರು ಯಾರೋ ಅದನ್ನು ಆಕ್ರಮಿಸಿ ಕುಳಿತುಕೊಂಡಾಗ ನನ್ನ ಪರಿಸ್ಥಿತಿ ‘ನಗಲಾರೆ-ಅಳಲಾರೆ’ ಎಂಬಂತಾಗಿತ್ತು!

ಒಮ್ಮೊಮ್ಮೆ ಪ್ರಯಾಣಿಸುವಾಗ ಅಕ್ಕ-ಪಕ್ಕ, ಹಿಂದೆ-ಮುಂದೆ ಕುಳಿತವರ ಕುತೂಹಲಕಾರಿ ಸಂಭಾಷಣೆಗಳು ತಾವಾಗೇ ನನ್ನ ಕಿವಿಯಲ್ಲಿ ತೂರಿ ಬಗೆ ಬಗೆಯ ಜೀವನದರ್ಶನ ಮಾಡಿಸಿದ್ದು ಇದೆ. ಒಮ್ಮೆ ಕಿಕ್ಕಿರಿದು ತುಂಬಿದ ಬಸ್ಸಿನಲ್ಲಿ ಒಬ್ಬ ಯುವಕ ಫೋನಿನಲ್ಲಿ ಮಾತಾಡುತ್ತಲೇ ಬಸ್ ಏರಿದವನೇ ಒಬ್ಬ ಅಜ್ಜಿಯ ಕಾಲು ತುಳಿದಿರಬೇಕು. ಆಗ ಆ ಅಜ್ಜಿ ಆ ಹುಡುಗನ ಗ್ರಹಚಾರ ಬಿಟ್ಟು ಹೋಗುವಂತೆ ಒಂದೇ ಸಮನೆ ಬಯ್ಯುತ್ತಿದ್ದಾಗ ಸುಮಾರು ಅಜ್ಜಿಯಷ್ಟೇ ವಯಸ್ಸಿನ ಅಜ್ಜ ‘ಇರಲಿ ಬಿಡಮ್ಮ ಏನೋ ಹುಡುಗ ನೋಡದೆ ತುಳಿದಿದ್ದಾನೆ ಸುಧಾರಿಸಿಕೋ, ನಾವು ಹಿರಿಯರೇ ಹೀಗೆ ತಾಳ್ಮೆ ಕಳೆದುಕೊಂಡು ಮಾತನಾಡಿದರೆ ಹೇಗೆ? ಇಲ್ಲಿ ಯಾರೂ ಶಾಶ್ವತವಾಗಿ ಇರುವಂತಿಲ್ಲ, ಅವರವರ ಸ್ಥಳ ಬಂದಾಗ ಎಲ್ಲರೂ ಇಳಿಯಲೇಬೇಕಲ್ಲವಾ… ಹೀಗೆ ಅಜ್ಜನ ಅನುಭವಾಮೃತ ಮೊಳಗುತ್ತಲೇ ಇತ್ತು.

ದಾವಣಗೆರೆಗೆ ಡೆಪ್ಯುಟೇಷನ್ಗಾದರೂ ಪ್ರಯತ್ನಿಸಬಹುದಿತ್ತಲ್ಲವಾ ಎನ್ನುವ ಸಲಹೆಯನ್ನು ಮೇಲಿಂದ ಮೇಲೆ ಕೇಳಿಸಿಕೊಂಡ ನನಗೆ ಒಮ್ಮೆ ದಾವಣಗೆರೆಯಲ್ಲಿ ಒಂದು ಶಾಲೆಗೆ ಮೂರು ತಿಂಗಳ ಅವಧಿಗೆ ನಿಯೋಜನೆ ದೊರಕಿ ಪ್ರತಿದಿನದ ಪ್ರಯಾಣ ತಾತ್ಕಾಲಿಕವಾಗಿ ತಪ್ಪಿತು. ಆದರೆ ನಿಯೋಜನೆಯಿಂದ ಹಿಂತಿರುಗಿದ ನಂತರ ಮತ್ತದೇ ಬಸ್ ಪ್ರಯಾಣ ಶುರುವಾದಾಗ ಬಹಳಷ್ಟು ಪ್ರತಿದಿನದ  ಸಹ ಪ್ರಯಾಣಿಕರು “ಯಾಕೆ ನೀವು ಇಷ್ಟು ದಿನ ಕಾಣಿಸಲಿಲ್ಲ? ನಿಮಗೆ ವರ್ಗ ಆಗಿರಬೇಕೆಂದುಕೊಂಡಿದ್ದೆವು. ಹಳ್ಳಿಗಳಲ್ಲಿ ಕೆಲಸ ಮಾಡೋದು ನಿಜಕ್ಕೂ ಕೆಲವು ಕಾರಣಗಳಿಂದ ಒಳ್ಳೆಯದು ಮೇಡಂ, ಇಲ್ಲಿನ ಮಾಲಿನ್ಯರಹಿತ ಪರಿಸರದೊಂದಿಗೆ ಹಳ್ಳಿಜನರು ತೋರಿಸುವ ಪ್ರೀತಿ, ಗೌರವಗಳನ್ನು ನಾವು ನಗರಗಳಲ್ಲಿ ಪಡೆಯುವುದು ಕಡಿಮೆ. ನೀವು ಇಲ್ಲಿಯೇ ಚೆನ್ನಾಗಿದ್ದಿರಿ ಅಲ್ಲಿಗೆ ಹೋಗಬಾರದಿತ್ತು” ಎಂದಾಗ ಅವರ ಮಾತು ಸತ್ಯ ಅನಿಸದಿರಲಿಲ್ಲ ನನಗೆ.

ಪ್ರತಿದಿನದ ಪ್ರಯಾಣದಲ್ಲಿ ಬೇರೆ ಬೇರೆ ಇಲಾಖೆಯ ಉದ್ಯೋಗಿಗಳು ಪರಿಚಯವಾಗಿ ಒಬ್ಬರಿಗೊಬ್ಬರು ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾ ಪ್ರಯಾಣದ ಆಯಾಸ ಗಮನಕ್ಕೇ ಬಾರದಂತಾಗುವುದು ಸುಳ್ಳಲ್ಲ. ಈ ಒಂಭತ್ತು ವರ್ಷಗಳ ನನ್ನ ಪ್ರತಿದಿನದ ಬಸ್ ಪ್ರಯಣ ನನಗೆ ವೈವಿಧ್ಯಮಯ ಜೀವನದರ್ಶನ ಮಾಡಿಸಿದೆ. ಅದಕ್ಕೊಂದು ಹೃತ್ಪೂರ್ವಕ ಸಲಾಂ ಕೊಟ್ಟುಕೊಳ್ಳದಿರಲಾದೀತೇ??!

‍ಲೇಖಕರು nalike

July 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Vasundhara k m

    ಬಹಳ ಚೆನ್ನಾಗಿದೆ. ನೀವು ಹೇಳಿದ ಕೆಲವು ಅನುಭವಗಳು ಬಸ್ ಪ್ರಯಾಣಿಕರಿಗೆ ಆಗಿರುನುದು ಸಹಜವೇ…

    ಪ್ರತಿಕ್ರಿಯೆ
  2. Priyadarshini Shettar

    Wonderful write up madam. As I was reading, I could remember some of my mother’s experiences while she was commuting to college by bus. I can understand how difficult it is to be a working mom. Keep writing madam, keep inspiring…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: