ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರವಣಿಗೆ ಎನ್ನುವುದು ಬಿಡುಗಡೆಯ ಸುಖ

ಕಂ.ಕ.ಮೂರ್ತಿ ಅವರ ‘ನೀಲಿ ಬಣ್ಣದ ಆಗಸ’

‘ಸಾಹಿತ್ಯಲೋಕ ಪಬ್ಲಿಕೇಶನ್ಸ್’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಲೇಖಕರ ಮಾತು ಇಲ್ಲಿದೆ.

-ಕಂ.ಕ.ಮೂರ್ತಿ

ನೋವುಂಡು ಛಿದ್ರಗೊಂಡ‌ ಮನಸ್ಸಿಗೆ ಕಲೆಯಲ್ಲಿ ಹೂವಂತೆ ಅರಳುವ ಶಕ್ತಿಯಿದೆ. ಕಲಾಕಾರನ ಉಳಿಯ ಏಟು ತಡೆದ ಶಿಲೆ, ಶಿಲ್ಪವಾಗಿ ಅರಳುವುದನ್ನು‌ ನಾವು ಬಲ್ಲೆವು. ನೋವಿನಲ್ಲಿ ಸಹನೆ ಎನ್ನುವುದು ಕಾರುಣ್ಯದ ರೂಪಾಂತರ ಆಗಿ ಬಿಡುವುದು ವಿಸ್ಮಯ. ಇದು ಕಲೆ, ಸಾಹಿತ್ಯಕ್ಕೆ ಇರುವ ಶಕ್ತಿ. ಇಂತಹ ರೂಪಾಂತರವೊಂದು ಇಲ್ಲದೇ ಹೋಗಿದ್ದರೆ, ಕಡು ಕಷ್ಟ ಉಂಡವರ ಬದುಕು ನರಕದ ಮಟ್ಟದಲ್ಲಿಯೇ ಉಳಿದು ಬಿಡುತಿತ್ತು.

ಬರೀ ಕಲೆ, ಸಂಗೀತ, ಸಾಹಿತ್ಯ ಮಾತ್ರವಲ್ಲ, ಜನಸಾಮಾನ್ಯರು ನಿತ್ಯ ನಡೆಸುವ ಹರಟೆಯಲ್ಲಿಯೂ ತಮ್ಮ ಗಾಯಕ್ಕೆ ಮದ್ದು ಅರೆಯುತ್ತ ಬೇರೆಯವರ ಗಾಯವನ್ನೂ ಸಂತೈಸುವುದು ಸಮಾಜದ ಸಹಬಾಳ್ವೆಯ ಒಂದು ರೂಪಕವಾಗಿ ಕಾಣುತ್ತದೆ. ಹೀಗೆ ಪರಸ್ಪರ ಸಂತೈಸಿಕೊಳ್ಳುತ್ತ ಬದುಕುವುದೂ ಒಂದು ಕಲೆಯೆ, ಜೀವನ ಕಲೆ.

ನಮ್ಮ ಭಾವನೆಗಳನ್ನು ಮಾತಿಗೂ ಮೀರಿ ಬರವಣಿಗೆಗೆ ಪರಿವರ್ತಿಸಿದಾಗ ಸಿಗುವ ಸುಖವೇ ಬೇರೆ. ಅದು ಬರವಣಿಗೆಯ ಸುಖ. ಒಂದು ರೀತಿಯ ಬಿಡುಗಡೆಯ ಸುಖ. ಎಲ್ಲರ ಮನಸ್ಸು ಇಂತಹ‌ ಬಿಡುಗಡೆಯನ್ನು ಬಯಸ್ತ ಇರುತ್ತೆ. ಸಂಗೀತ, ಕಲೆ, ಸಾಹಿತ್ಯ ಮುಂತಾದ ಸೃಜನಶೀಲ ಅಭಿವ್ಯಕ್ತಿಯ ಮೂಲಕ ಮನುಷ್ಯ ಬಯಸೋದು ಬಿಡುಗಡೆಯನ್ನು, ಒಂದು ರೀತಿಯ ಮೋಕ್ಷವನ್ನು.

ಸಂಗೀತಗಾರನೊಬ್ಬ ಮೈಮರೆತು ಹಾಡುತ್ತ ಕೇಳುಗನನ್ನು ಬಿಡುಗಡೆಗೊಳಿಸುತ್ತ ತನ್ನೊಳಗಿಂದ ತನ್ನನ್ನು ಬಿಡುಗಡೆಗೊಳಿಸಿಕೊಳ್ಳುವುದು ಸೋಜಿಗ. ಅದು ಕಲೆಯ ವಿಸ್ಮಯ.

ಪಾರಿಜಾತದ ಮರ ನಿನ್ನೆ ಮುಡಿದ ಹೊವನ್ನೆಲ್ಲ ಇಂದು ಉಗುಚಿ ನಾಳೆ ಹೊಸ ಹೂ ಮುಡಿಯುವ ಹಾಗೆ ಈ ಬಿಡುಗಡೆ. ಹೂವು ಕ್ರಮೇಣ ತನ್ನ ತಾಜಾತನ, ಸುಗಂಧ ಕಳೆದುಕೊಂಡು ತ್ಯಾಜ್ಯವಾಗಿ ಬಿಡುವುದರಿಂದ ಗಿಡ ಹೊಸ ಹುಟ್ಟನ್ನು ಬಯಸುತ್ತದೆ. ಅದು‌ ನಿಸರ್ಗದ ಗುಣ. ಪ್ರಕೃತಿಯಲ್ಲಿ ನಡೆಯುವ ಇದು ನಮ್ಮಲ್ಲಿ ನಿರಂತರವಾಗಿ ನಡೆಯದೇ ಇದ್ದರೆ ನಾವು ಜಡರಾಗಿ ಬಿಡುತ್ತೇವೆ. ಮನುಷ್ಯ ಪ್ರಕೃತಿಗೆ ಸಹಜವಾದ ಇಂತಹ ಬಿಡುಗಡೆಯನ್ನು ಧರಿಸುವುದು ನೆಮ್ಮದಿಯ ಜೀವನಕ್ಕೆ ಅನಿವಾರ್ಯ.

ಬಾಲ್ಯದಿಂದಲೇ ಕಡುಕಷ್ಟಗಳ ಹಾದಿಯಲ್ಲಿ ನಡೆದ ನನ್ನಂತವನಿಗೆ ಇಂತಹ ಬಿಡುಗಡೆ ಬರವಣಿಗೆ ಮೂಲಕ ಗೋಚರಿಸುತ್ತದೆ. ಹಾಗೆ ನೋಡಿದರೆ ನಾನು ಕಳೆದ ನಲವತ್ತು ವರ್ಷಗಳಿಂದ ಬರೆಯುತ್ತಿದ್ದೇನೆ. ಅದು ಪತ್ರಿಕಾ ವ್ಯವಸಾಯ. ಅಂದಂದಿನ ಜರೂರತ್ತಿನ ಬರವಣಿಗೆ. ಅಂತಹ ಬರವಣಿಗೆ ಮೂಲಕ ಸಮಾಜವನ್ನು ನೋಡಿದ್ದೇನೆ. ನೋಡಿದ್ದನ್ನು ಬರೆದಿದ್ದೇನೆ.

ಆದರೆ ತೀವ್ರ ಒಳನೋಟದಿಂದ ಬರೆಯಲು ಸಾಧ್ಯವಾಗದ ಅಂತಹ ಜರೂರತ್ತಿನ ಬರವಣಿಗೆಯಲ್ಲಿ ನಮ್ಮಂತರಗದ ಮುಖ ಕಾಣುವುದು ದುರ್ಲಭ. ಆಗ ಅದು ಬಿಡುಗಡೆಯ ಹಾದಿ ಆಗದೇ ಹೊಟ್ಟೆಪಾಡಿನ ಕರ್ಮ ಆಗಿ ಬಿಡುವುದೇ ಹೆಚ್ಚು. ಸೃಜನಶೀಲ ಬರವಣಿಗೆಯೆ ಬಿಡುಗಡೆಯ ಹಾದಿ. ಅಂತಹ ಬಿಡುಗಡೆಯ ಹಾದಿಯಲ್ಲಿ ನಮ್ಮ ಅರಿವಿನ ಬೆಳಕಿದೆ.

ಇದುವರೆಗೆ ನನ್ನ ಐದು ಪುಸ್ತಕಗಳು ಪ್ರಕಟವಾಗಿದೆ. ಇದು ಮೊದಲ ಕಾದಂಬರಿ. ಸಮಾಜದ ಮುನ್ನೆಡೆಗೆ ಸದ್ಭಾವನೆಯ ಬೆಳಕು ಬೇಕು. ಒಳಿತು ಮತ್ತು ಕೆಡುಕಿನ ನಡುವಿನ ಸಂಘರ್ಘದಲ್ಲಿ ಅಂತಿಮವಾಗಿ ಒಳಿತು ಗೆಲ್ಲಬೇಕು ಎನ್ನುವುದು ಕೃತಿಯ ಆಶಯ.

‍ಲೇಖಕರು Admin

11 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading