-ನಾ.ದಾಮೋದರ ಶೆಟ್ಟಿ
ನಾಗತಿಹಳ್ಳಿಯವರ ಹೊಚ್ಚಹೊಸ ‘ಅಮೆರಿಕಾ ಅಮೆರಿಕಾ-2’ ಚಲನಚಿತ್ರ 9.9 2025ರಂದು ಫಾರಂ ಮಾಲಲ್ಲಿ ವಿಶೇಷ ಪ್ರದರ್ಶನ ಕಂಡಾಗ ತುಂಬಿದ ಸಭಾಂಗಣ ತದೇಕ ಚಿತ್ತದಿಂದ ಅದನ್ನು ಕಣ್ತುಂಬಿಕೊಂಡಿತು.
ಕನ್ನಡ ಚಿತ್ರರಂಗವನ್ನು ಹೊಡಿ ಬಡಿಯ ದೃಶ್ಯಗಳೇ ಆವರಿಸಿ ನಿಂತಿರುವಾಗ ಇಂತಹ ಆಧುನಿಕ ಚಿಂತನೆಯ, ಗಂಭೀರ ಸಮಸ್ಯೆಗೆ ಹೊಸದಾರಿ ಹುಡುಕಿ ತೋರುವ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ರಂಗಕ್ಕೆ ತಂದುದು ಶ್ಲಾಘನೀಯ. ಡಿವೋರ್ಸ್ ಬದುಕಿನ ಕಣ್ಣುತೆರೆಯಿಸುವ ಚಿತ್ರವಾಗಿಯೂ ಇದನ್ನು ಪರಿಭಾವಿಸಬಹುದು.
ತ್ರಿಕೋಣ ಪ್ರಣಯವನ್ನು ನಾಗತಿಹಳ್ಳಿಯವರಂತೆ ಹೊಸೆಯುವ ವಿದ್ಯೆ ಅನ್ಯರಿಗೆ ಸಿದ್ಧಸಿಲ್ಲವೇನೋ ಎಂಬಷ್ಟು ರೋಚಕತೆಯಿಂದ ‘ಅಮೇರಿಕಾ ಅಮೇರಿಕಾ- 2’ನ್ನು ಅವರು ನಿರ್ದೇಶಿಸಿದ್ದರು. ಸಹನಾ ವಿಜಯಕುಮಾರ್ ಅವರ ‘ಕ್ಷಮೆ’ ಕಾದಂಬರಿಯ ಹೂರಣವನ್ನು ಬಳಸಿ, ಅಚ್ಚುಕಟ್ಟಾಗಿ ಹಾಗೂ ಅರ್ಥಗರ್ಭಿತವಾಗಿ ನಮ್ಮೆದುರು ತೆರೆದಿರಿಸಿದ್ದಾರೆ. ವಿವಾಹಿತ ಹೆಣ್ಣುಮಗಳು ಗಂಡನ ಪ್ರಣಯೌದಾಸೀನ್ಯದ ನಡುವೆ ಬಾಲ್ಯದ ಗೆಳೆಯನ ಸಾಮೀಪ್ಯ ಒದಗಿ ‘ಅತ್ತ ಪುಲಿ ಇತ್ತ ದರಿ’ಯಾದ ಪ್ರಸಂಗವಿದು. ಪ್ರಣಯ ಅಮೆರಿಕದಲ್ಲಿ; ಸಂಸಾರ ಭಾರತದಲ್ಲಿ! ಕೊನೆಗೂ ಕಥಾನಾಯಕಿ ತೆಗೆದುಕೊಳ್ಳುವ ತೀರ್ಮಾನವೇ ಪ್ರೇಕ್ಷಕರನ್ನು ನ್ಯಾಯದ ಹಾದಿಯಲ್ಲಿ ಮುನ್ನಡೆಸುವುದು.
ಸಿನಿಮಾದೊಳಗಿನ ಓಲಾಟವೇ ಅದರ ಪ್ರಾಣವಾಯು. ಆ ಪ್ರಾಣವಾಯು ಒಮ್ಮೆ ಅತ್ತ; ಒಮ್ಮೆ ಇತ್ತ ಸಂಚರಿಸಿ ಅಂತಿಮ ಸತ್ಯದತ್ತ ತಲುಪಬೇಕಿದ್ದರೆ ನೋಡುಗ ಸರಿ ತಪ್ಪುಗಳ ನಡುವೆ ಹೈರಾಣನಾಗುತ್ತಾನೆ. ಅದು ಚಲನಚಿತ್ರದ ತಾಕತ್ತು.

ಪೃಥ್ವಿ ಅಂಬಾರ್, ಶಾನ್ವಿ ಶ್ರೀವಾಸ್ತವ್, ನಿರೂಪ್ ಭಂಡಾರಿ – ಮೂವರೂ ಪೈಪೋಟಿಯೊಂದಿಗೆ ಅಭಿನಯಿಸಿದ್ದು, ಅಮೇರಿಕಾದ ಸಮೃದ್ಧ ಪ್ರಕೃತಿಯನ್ನು ಮೋಹಕವಾಗಿ ಬಂಧಿಸಲಾಗಿದೆ. ‘ಅಮೆರಿಕಾ ಅಮೆರಿಕಾ-1’ಕ್ಕೆ ಚೂರೂ ಬಿಟ್ಟುಕೊಡಲಿಲ್ಲ ಎಂಬುದು 2ನ್ನು ನೋಡಿದಾಗ ಅರಿವಿಗೆ ಬರುತ್ತದೆ. ಮನೋಮೂರ್ತಿ ಮತ್ತೊಮ್ಮೆ ನಾಗತಿಹಳ್ಳಿಯವರ ಜೊತೆ ಸೇರಿದ್ದು ಚಿತ್ರಕ್ಕೆ ಮನೋಮಯ ಮನ್ನಣೆಯನ್ನು ತಂದುಕೊಟ್ಟಿದೆ. ಒಟ್ಟಿನಲ್ಲಿ ಶಕ್ತ ಸಂಭಾಷಣೆ, ಸಮರ್ಥ ನಿರ್ದೇಶನ, ಅಪೂರ್ವ ದೃಶ್ಯ ಜೋಡಣೆ, ಸ್ಪರ್ಧಾತ್ಮಕ ಅಭಿನಯಗಳ ನಿಮಿತ್ತವಾಗಿ ‘ಅಮೆರಿಕಾ ಅಮೆರಿಕಾ -2’ವನ್ನು ಮತ್ತೆಯೂ ನೋಡಬೇಕೆನಿಸಿದ್ದು ಸುಳ್ಳಲ್ಲ.






0 Comments