–ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಉದಯಕುಮಾರ್ ಹಬ್ಬು ಅವರ ಮೊದಲ ಕವನ ಸಂಕಲನ “ಅನ್ವೇಷಣೆ” ಗೂ ಮತ್ತು “ನನ್ನದೇ ಆಕಾಶ ನನ್ನದೇ ರೆಕ್ಕೆ” ಅನ್ನುವ ಅವರ ಇನ್ನೊಂದು ಕವನ ಸಂಕಲನಕ್ಕೂ ನಡುವೆ ಇಪ್ಪತ್ತು ವರ್ಷಗಳ ಸುಧೀರ್ಘ ಅಂತರವಿದೆ. ಈ ಎರಡೂ ಕವನ ಸಂಕಲನಗಳೂ ಒಂದೊಂದು ಕಾವ್ಯಕಾಲವನ್ನು ಪ್ರತಿನಿಧಿಸುತ್ತಿರುವ ಹಾಗೆ ನನಗೆ ಕಾಣಿಸಿದವು. ಇಪ್ಪತ್ತು ವರ್ಷಗಳಲ್ಲಿ ಕವಿಯ ಮನಸ್ಥಿತಿಯಲ್ಲಾದ ಬದಲಾವಣೆಗಳು, ಪರಿಸ್ಥಿತಿಗಳಿಗೆ ಕಾವ್ಯದ ಮೂಲಕ ಮುಖಾಮುಖಿಯಾಗುವಾಗ ಪಡೆದುಕೊಂಡ ಸಂಯಮಗಳು ಮತ್ತು ಭಾಷೆಯ ಬಳಕೆಯಲ್ಲಿ ಆದ ಪಲ್ಲಟಗಳು ಸ್ಪಷ್ಟವಾಗಿ ಅನುಭವಕ್ಕೆ ಬಂದವು. ಇದು ನಿಜಕ್ಕೂ ಕವಿಯ ಗೆಲುವು ಅಂತ ಎರಡು ಸಂಕಲನದ ಕವಿತೆಗಳನ್ನು ತುಲನಾತ್ಮಕವಾಗಿ ನೋಡಿದಾಗ ನನಗೆ ಅನ್ನಿಸಿತು.
ಇವರು ಕಾಲಕಾಲಕ್ಕೆ ತನ್ನ ಅಭಿವ್ಯಕ್ತಿ ಮಾಧ್ಯಮವನ್ನು ಬದಲಾಯಿಸತ್ತಾ ಬಂದಿದ್ದಾರೆ. ಅದು ಆಯಾ ಕಾಲದ ಓದುಗರ ಆಸಕ್ತಿಯನ್ನು ಗಮನಿಸಿ ಹಾಗೆ ಮಾಡಿದರೋ ಅಥವಾ ಆ ಬದಲಾವಣೆಯ ಒತ್ತಡ ಅವರ ಒಳಗಿನಿಂದಲೇ ಬಂದಿತೋ ಗೊತ್ತಿಲ್ಲ. ಆದರೆ ಹಾಗೆ ಮಾಡಿದ್ದರಿಂದ ಲಾಭ ಆದದ್ದು ಮಾತ್ರ ಕನ್ನಡ ಸಾಹಿತ್ಯಕ್ಕೆ. ಎಲ್ಲಾ ಪ್ರಕಾರದ ನದಿಗಳು ಸ್ವಲ್ಪ ಮಟ್ಟಿಗಾದರೂ ಹೊಸ ಹರಿವನ್ನು ಇವರ ಕೃತಿಗಳಿಂದ ಕಾಣುವಂತಾಗಿವೆ. ಉದಯಕುಮಾರ ಹಬ್ಬು ಅವರು ಅತೀ ಹೆಚ್ಚು ಕೃಷಿ ಮಾಡಿದ್ದು ಗದ್ಯ ಸಾಹಿತ್ಯದಲ್ಲಿಯಾದರೂ ಅವರು ಮೂಲತಃ ಒಬ್ಬ ಕವಿ. ಅವರೇ ಹೇಳುವ ಪ್ರಕಾರ ಅವರು ಅತೀ ಹೆಚ್ಚು ನಿರಾಳತೆಯನ್ನು ಅನುಭವಿಸುವುದು ಒಂದು ಕವಿತೆ ಬರೆದಾದ ನಂತರ. ಹಾಗಾಗಿ ಅವರ ಪ್ರಮುಖ ಅಭಿವ್ಯಕ್ತಿಯ ಮಾಧ್ಯಮ ಕಾವ್ಯ. ಎಂಬತ್ತರ ದಶಕದಲ್ಲಿ ತನ್ನ ಮೊದಲ ಕವನ ಸಂಕಲನ ಅನ್ವೇಷಣೆಯನ್ನು ಪ್ರಕಟಿಸುತ್ತಾರೆ. ಅದು ನವ್ಯ ಕಾವ್ಯ ತನ್ನ ಉತ್ತುಂಗದಲ್ಲಿದ್ದ ಕಾಲ. ಆರಂಭಿಕ ಹಂತದ ಹಬ್ಬುರವರ ಕವಿತೆಗಳನ್ನು ನೋಡಿದರೆ ಅವರು ಅಡಿಗರ ಕಾವ್ಯದಿಂದ ಪ್ರಭಾವಿತರಾದದ್ದು ಗೊತ್ತಾಗುತ್ತದೆ.
“ನೀವು ಕೊಟ್ಟ ಕೋಟಿನಲ್ಲಿ ಮೈತೂರಲಾರೆ”
“ನನಗೆ ನನ್ನದೇ ಮಾರ್ಗ ಹುಡುಕಬೇಕು”
“ಬಂದಳಿಕೆಯ ಜೀವನ ಮುಗಿಸಬೇಕು”
“ಗಂಡುಸಾದರೆ ನೀ ಬಲಿ ಕೊಡುವಿಯೇನೂ”
“ಅರ್ಥವಾಗುವ ಹಾಗೆ ಬರೆಯಬೇಕು”
ಈ ಸಾಲುಗಳು ಇವರ ಆರಂಭಿಕ ಕಾವ್ಯದ ಮೇಲೆ ಅಡಿಗರ ಪ್ರಭಾವ ಇರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದರೂ ಒಬ್ಬ ಸೃಜನಶೀಲ ಕವಿಗೆ ತನ್ನದೇ ಮಾರ್ಗ ಹುಡುಕಬೇಕು ಅನ್ನುವ ತುರ್ತು ಇದ್ದೇ ಇರುತ್ತದೆ. ಅದು ಹಬ್ಬು ಅವರಲ್ಲಿ ಮೊದಲ ಕೃತಿಯಲ್ಲಿಯೇ ಕಂಡುಬರುತ್ತದೆ. ಹಾಗಾಗಿ ಯಾವುದೋ ಮರದ ಮೇಲೆ ಪರಕೀಯವಾಗಿ ಬೆಳೆದು, ತನ್ನ ಬೇರುಗಳನ್ನು ಸ್ವಂತವಾಗಿ ಮಣ್ಣಿನಲ್ಲಿ ಇಳಿಸಲಾಗದ ಬಂದಳಿಕೆಯ ಬದುಕನ್ನು ಬಾಳುವುದು ಇಷ್ಟವಿಲ್ಲ ಈ ಕವಿಗೆ. “ನೀವು ಕೊಟ್ಟ ಕೋಟಿನಲ್ಲಿ ಮೈ ತೂರಲಾರೆ” ಅನ್ನುವ ಸಾಲು ಕವಿಯ ಸ್ವಂತಿಕೆಯ ಬಯಕೆಯನ್ನು ಧ್ವನಿಪೂರ್ಣವಾಗಿ ಸೂಚಿಸುತ್ತದೆ. ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದು ಭಿನ್ನಗಾಗಿದೆ ಮನವು ಅನ್ನುವ ಅಡಿಗರ ಮನದ ತಳಮಳ ಬಹುಶಃ ಒಂದಲ್ಲ ಒಂದು ಹಂತದಲ್ಲಿ ಎಲ್ಲಾ ಕವಿಗಳನ್ನೂ ಕಾಡುತ್ತದೆ. ಬಂದಳಿಕೆಯ ಪ್ರತಿಮೆ ತನ್ನತನದ ಹುಡುಕಾಟದ ತೀವ್ರತೆಯನ್ನು ಒಂದು ಚಿತ್ರವಾಗಿ ಕಟ್ಟಿಕೊಡುತ್ತದೆ.
ಪುರಾಣದ ಪ್ರತಿಮೆಗಳನ್ನು ಸಶಕ್ತವಾಗಿ ಕಾವ್ಯದಲ್ಲಿ ಬಳಸುತ್ತಾ ವರ್ತಮಾನದ ತಲ್ಲಣಗಳಿಗೆ, ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತಾರೆ. ಪುರುಷಪ್ರಧಾನ ಸಮಾಜದ ಎಲ್ಲಾ ರೀತಿನೀತಿಗಳು ಹೆಣ್ಣನ್ನು ನಿರ್ಬಂಧಿಸಲು ಎಳೆದ ಲಕ್ಷ್ಮಣರೇಖೆಗಳು ಅನ್ನುವ ಸ್ಪಷ್ಟವಾದ ನಿಲುವು ಈ ಕವಿಗಿದೆ. ಇದು ನಾನು ತಲತಲಾಂತರಗಳಿಂದ ತುಳಿಯುತ್ತಿರುವ ಮಣ್ಣು. ಇದು ಎಷ್ಟೆಂದರೂ ನನ್ನ ಕಾಲ ಬುಡದಲ್ಲಿಯೇ ಇರಬೇಕು. ಇದಕ್ಕೆ ಬೇರೆ ಅಸ್ತಿತ್ವ ಇಲ್ಲ ಮತ್ತು ಇರಕೂಡದು ಅಂದುಕೊಂಡು ಬದುಕಿದ ಮನಸ್ಸು ಮಣ್ಣಿನ ಯಾವ ಪ್ರತಿರೋಧವನ್ನೂ ಸಹಿಸಲಾರದು.
ನಾ ತುಳಿದ ಮಣ್ಣಿಗೂ ಇಷ್ಟು ಸೊಕ್ಕೆಂದರೆ
ಊರ್ವಶಿ ನಕ್ಕು ನುಡಿಯುತ್ತಾಳೆ
ನೀನೊಬ್ಬನೆ ತುಳಿದ ದಾರಿ ನಾನಲ್ಲ!
ನೀನು ನನಗೆ ತಾಯಿಗೆ ಸಮಾನ ಅಂತ ಬಯಸಿ ಬಂದ ಊರ್ವಶಿಯನ್ನು ಅರ್ಜುನ ತಿರಸ್ಕರಿಸಿದಾಗ ಊರ್ವಶಿ ಸಿಟ್ಟಾಗುತ್ತಾಳೆ. ನೀನು ನನ್ನನ್ನು, ನೀನೇ ವಿಧಿಸಿಕೊಂಡ ಸಂಬಂಧಗಳ ಬಂಧನದಲ್ಲಿ ಸಿಲುಕಿಸುವುದು ಬೇಡ. ನಾನು ಹೆಣ್ಣು ನಾನು ಸ್ವತಂತ್ರಳು. ದೇವಲೋಕದ ನನ್ನ ಸಂಬಂಧಗಳ ವ್ಯಾಖ್ಯೆ ನಿನ್ನ ಮಣ್ಣಿನ ಕಣ್ಣಿಗೆ ದಕ್ಕುವುದಿಲ್ಲ. ನನ್ನ ಸೊಕ್ಕಿನ ಬಗ್ಗೆ ಮಾತನಾಡಬೇಡ. ನೀನೊಬ್ಬನೇ ತುಳಿದ ದಾರಿ ನಾನಲ್ಲ ಅಂತ ಅವನ ಪುರುಷಾಹಂಕಾವನ್ನು ಕೆಣಕುತ್ತಾಳೆ. ಬಹಳ ಸೊಗಸಾಗಿ ಪುರಾಣದ ಈ ರೂಪಕದ ಮೂಲಕ ಪುರುಷಾಹಂಕಾರವನ್ನು ಹೆಣ್ಣಿನ ಮೂಲಕ ಪ್ರಶ್ನಿಸುತ್ತಾರೆ ಕವಿ. ಈ ಮೂಲಕ ಸಮಾಜದ ಒಂದು ಮುಖಕ್ಕೆ ಕನ್ನಡಿ ಹಿಡಿಯುತ್ತಾರೆ.
ರಾಜಕೀಯ ಬಹಳಷ್ಟು ಕವಿಗಳಿಗೆ ವರ್ಜ್ಯ. ಅವರೇನಿದ್ದರೂ ಪ್ರಕೃತಿ, ಹೆಣ್ಣು, ಪ್ರೇಮದ ಸುತ್ತ ಸುತ್ತುವುದನ್ನೇ ಕವಿತ್ವ ಅಂದುಕೊಂಡು ಅದಕ್ಕೇ ನಿಷ್ಠರಾಗಿ ಬರೆಯುವವರು. ಆದರೆ ಈ ಕವಿ ಅಂತಹ ಕವಿಗಳ ಗುಂಪಿಗೆ ಸೇರುವುದಿಲ್ಲ. ಹಾಗೆ ನೋಡಿದರೆ ಬರೆಯುವ ಯಾವ ಕವಿಯೂ ನಾನು ಕವಿ ಅಂತ ಇಪ್ಪತ್ನಾಲ್ಕು ತಾಸು ಬೋರ್ಡ್ ಹಾಕ್ಕೊಂಡು ಓಡಾಡಬೇಕಾಗಿಲ್ಲ. ಅವನು ಕೂಡಾ ಸಮಾಜದ ಎಲ್ಲರ ಹಾಗೆ ಒಬ್ಬ ಸಾಮಾನ್ಯ ಮನುಷ್ಯ. ರಾಜಕೀಯ ಧಾರ್ಮಿಕ ಸ್ಥಿತ್ಯಂತರಗಳಿಗೆ ಎಲ್ಲರೂ ಒಳಗಾದವರೇ. ಈ ವಿಷಯದಲ್ಲಿ ಹಬ್ಬು ಅವರು ಖಂಡಿತಾ ಸಿನಿಕರಲ್ಲ. ತನ್ನ ಕಾಲದ ರಾಜಕೀಯ ಪಲ್ಲಟಗಳಿಗೆ ಸ್ಪಷ್ಟವಾದ ವಿಚಾರಗಳಿಂದ ಎದುರಾಗುತ್ತಾರೆ. ಒಂದು ಪಕ್ಷದ ಪರ ವಹಿಸಲು ಯಾವುದೇ ಹಿಂಜರಿಕೆಯನ್ನೂ ತೋರಿಸುವುದಿಲ್ಲ. ಈ ನೆಲದ ಸಾಕ್ಷಿಪ್ರಜ್ಞೆಯಾದ ಗಾಂಧಿಯ ಕೊಲೆ ಮನುಕುಲದ ಮೇಲಾದ ಅತೀ ದೊಡ್ಡ ಗಾಯ ಅನ್ನುವುದನ್ನು ಒಪ್ಪುತ್ತಾರೆ. ಆದರೆ ಒಬ್ಬ ಗೋಡ್ಸೆಯಿಂದ ಗಾಂಧಿಯನ್ನು ಕೊಲ್ಲುವುದು ಸಾಧ್ಯವಿಲ್ಲ, ಗಾಂಧಿ ಸಾಯುವುದಿಲ್ಲ. ಅವನ ವಿಚಾರಧಾರೆಗಳಿಗೆ ಸಾವಿಲ್ಲ. ಈ ಕವಿತೆಯಲ್ಲಿ ಗಾಂಧಿ ಮತ್ತು ಜೆ.ಪಿ. ಇಬ್ಬರನ್ನೂ ಒಂದೇ ಸೂತ್ರದಡಿಯಲ್ಲಿ ಸಮೀಕರಿಸಿದ್ದಾರೆ. ಇಬ್ಬರೂ ಬೇರೆ ಬೇರೆ ವಿಷಯಗಳಿಗೆ ತಮ್ಮ ತಮ್ಮ ಹೋರಾಟವನ್ನು ನಡೆಸಿದರೂ ವ್ಯವಸ್ಥೆಯ ಬದಲಾವಣೆ ಅವರಿಬ್ಬರ ಗುರಿಯೂ ಆಗಿತ್ತು. ಭಿನ್ನ ವಿಚಾರಧಾರೆಗಳನ್ನು ಕೇಳುವಂತಹ, ಅದನ್ನು ಸಹಿಸುವಂತಹ ಮನೋಭಾವ ಯಾವತ್ತೂ ಆರೋಗ್ಯಕರ ಸಮಾಜದ ಸಂಕೇತಗಳಾಗುತ್ತವೆ. ಅದನ್ನು ಹತ್ತಿಕ್ಕುವ, ಕೊಲ್ಲುವ ಯಾವ ಕೆಲಸವೂ ಸರ್ವಾಧಿಕಾರಿ ಮನಸ್ಥಿತಿಯ ಧ್ಯೋತಕ ಅನ್ನುವುದು ಕವಿಯ ಸ್ಪಷ್ಟವಾದ ನಿಲುವು. ನೀವು ಪ್ರೀತಿಸಿ ಇಲ್ಲವೇ ದ್ವೇಷಿಸಿ ಆದರೆ ನಿರಾಕರಿಸಲಾರಿರಿ ಅನ್ನುವುದನ್ನು ಅತ್ಯಂತ ಧ್ವನಿಪೂರ್ಣವಾಗಿ ಧ್ವನಿಸುತ್ತಿದೆ ಈ ಕವಿತೆಯ ಸಾಲುಗಳು.
ಗಾಂಧಿಯನ್ನು ಗೋಡ್ಸೆ ಕೊಂದರೂ
ಗಾಂಧಿ ಸಾಯಲಿಲ್ಲ
ಜೆ ಪಿ ಸಾಯುವುದಿಲ್ಲ
ಸತ್ತರೂ ಅವನ ನೆರಳು ಸಾಯುವುದಿಲ್ಲ
ಮನಸಾಕ್ಷಿಗೆ ಸರಿಯಾಗಿ ಬದುಕುವುದು ಬಹಳ ಕಷ್ಟ. ನಾವೇನಿದ್ದರೂ ನಾಲ್ಕು ಜನ ಸರಿ ಅಂತ ಮೆಚ್ಚಿಕೊಳ್ಳುವ ಹಾಗೆ ಬದುಕುವವರು. ಅವರ ಮರೆಯಲ್ಲಿ ನಾವು ಮಾಡುವ ಎಲ್ಲಾ ಕೆಲಸಗಳು ನಮಗಷ್ಟೇ ಗೊತ್ತಿರುವಂಥದ್ದು. ಎಷ್ಟೇ ತಪ್ಪು ಮಾಡಿರಲಿ ಸಿಕ್ಕಿಹಾಕಿಕೊಂಡರಷ್ಟೇ ಅವನು ಕಳ್ಳ. ಅಲ್ಲಿಂದ ತಪ್ಪಿಸಿಕೊಳ್ಳಬೇಕು ಮತ್ತು ಲೋಕದ ಎದುರಿನಲ್ಲಿ ಹೇಗಿರಬೇಕು ಅನ್ನುವುದನ್ನು ಹೆಜ್ಜೆ ಹೆಜ್ಜೆಗೂ ಸಮಾಜ ಕಲಿಸಿಕೊಡುತ್ತದೆ. ಸತ್ಯ ಈಗ ಯಾರಿಗೂ ಬೇಡದ ವಸ್ತು. ಅಪ್ರಿಯವಾದ ಸತ್ಯವನ್ನು ನುಡಿಯಬೇಡ ಅಂತ ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಮಾತನ್ನು ತಿರುವಿ ಪ್ರಿಯವಾದ ಸುಳ್ಳುನ್ನೇ ನುಡಿಯಬೇಕು ಅಂತ ಜನ ತಮ್ಮಷ್ಟಕ್ಕೆ ತಾವು ಅಂದುಕೊಂಡು ಅದನ್ನೇ ಆಚರಣೆಗೆ ತಂದಿದ್ದಾರೆ. ಹೀಗೆ ಪ್ರತಿಸಲವೂ ತಪ್ಪಿಸಿಕೊಳ್ಳುತ್ತಾ ಎದೆಯಲ್ಲಿ ತಪ್ಪಿದಸ್ಥ ಭಾವವನ್ನು ಇಟ್ಟುಕೊಂಡಿದ್ದಾರೆ. ಅದನ್ನು ಕವಿಯ ಮಾತುಗಳಲ್ಲೇ ಕೇಳಿ,
ನಾನಿವನ ಕೈಗೆ ತುಂಬಾ ಸಲ ಸಿಗುವ ಕಳ್ಳ
ತಪ್ಪಿಸಿಕೊಂಡಿರುವುದೇ ನನ್ನ ಕರ್ಮ
ಸಿಕ್ಕಿಹಾಕಿಕೊಳ್ಳುವವರೆಗೆ ನಾನು ಸಾಚ
ಸಿಕ್ಕಿಹಾಕಿಕೊಂಡರಷ್ಟೇ ಕಳ್ಳ
ಕಲ್ಲಿನಲಿ ಕೆತ್ತಿದನು ಶಿಲ್ಪಿಯವ ಶಿವನ ದೇಗುಲದಿ ಕೂಡಿದನು ವೈದಿಕನು ಅವನ; ಕರುಣಾಳು ಶಿವನವನು ಕಲ್ಲಾದನೇಕೆ? ಅನ್ನುವ ಕುವೆಂಪು ಅವರ ಕವಿತೆಯೊಂದಿದೆ. ಪುರೋಹಿತಶಾಹಿ ಮನಸ್ಥಿತಿಯ ವಿರುದ್ಧ ಬರೆದ ಕವಿತೆ, ಆ ದಿನಗಳಲ್ಲಿ ದೇಗುಲ ಪ್ರವೇಶ ಕೂಡಾ ಕೆಲವು ಜಾತಿಯವರಿಗೆ ಇರಲಿಲ್ಲ ಅನ್ನುವ ಸಾಮಾಜಿಕ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ. ಆ ಅಸಮಾನತೆ ಅಪ್ಪಟ ಮಾನವೀಯ ಕವಿಯಾಗಿರುವ ಹಬ್ಬು ಅವರನ್ನೂ ಕಲಕಿದೆ. ಅವರ ಮನಸ್ಸು ಬಂಡಾಯ ಎದ್ದಿದೆ. ದೇವರನ್ನೇ ಪ್ರಶ್ನಿಸುವಷ್ಟು ದೇವರನ್ನೇ ದೂಷಿಸುವಷ್ಟು. ನಿನ್ನನ್ನು ಜನಿವಾರ ಕಟ್ಟಿಹಾಕಿದೆ, ಶಿಖಾಮಣಿಗಳಿಂದ ಮಾತ್ರ ಮುಟ್ಟಿಸಿಕೊಳ್ಳುವ ನೀನು ನಿಜವಾದ ಅಸ್ಪೃಶ್ಯ! ಹೀಗೆ ಹೇಳಬೇಕಾದರೆ ಕವಿಯ ಮನಸ್ಸು ಈ ಅಸಮಾನತೆಯ ವಿರುದ್ದ ಅದೆಷ್ಟು ರೋಸಿಹೋಗಿರಬೇಡ?
ನೀ ಬರೀ ಅಲಂಕಾರ ಮೂರ್ತಿ!
ಶಿಖಾಮಣಿಗಳಿಂದ ಮಾತ್ರ ಮುಟ್ಟಿಸಿಕೊಳ್ಳುವ
ಅಸ್ಪ್ರಶ್ಯ ನೀನು
ಜನಿವಾರ ನಿನ್ನ ಕಟ್ಟಿ ಹಾಕಿದೆ.
ಅಮುಕಿ ಅದುಮಿಡಲು, ತಲೆ ಮೊಟಕಿ ತಗ್ಗಿಸಲು, ತಬ್ಬಲಿ ಬಾಯ್ಗೆ ತಂಗಳನ್ನದ ಬುತ್ತಿ ಕಟ್ಟಿ ಕುಗ್ಗಿಸಲು ಬರುವ ತಂದೆ ತಾಯಿಗಳ ವಿರುದ್ಧ, ಮೇಷ್ಟರ ವಿರುದ್ಧ, ಸಮಾಜದ ಬಿಗಿದ ಮುಷ್ಟಿಯ ವಿರುದ್ಧ ದಂಗೆಯೇಳಬೇಕಾಗುತ್ತಲೇ ಇರಬೆಕಾಗುತ್ತದೆ ಅನ್ನುವ ಅಡಿಗರ ಬಂಡಾಯದ ಸಾಲು ಉದಯಕುಮರ ಹಬ್ಬು ಅವರಲ್ಲಿ ನಿಜವಾಗುತ್ತದೆ. ಸಮಾಜವನ್ನು ತನ್ನದೇ ದೃಷ್ಠಿಕೋನದಿಂದ ನೋಡುತ್ತಲೇ ಇಲ್ಲಿ ಯಾರೂ ಪ್ರಶ್ನಾತೀತರಲ್ಲ ಅನ್ನುವುದನ್ನು ಕಂಡುಕೊಂಡವರು. ಅಸಮಾನತೆ ಕಂಡಾಗೆಲ್ಲಾ ದಂಗೆಯೆದ್ದಿದ್ದಾರೆ. ಪ್ರಶ್ನಿಸಿದ್ದಾರೆ. ಕವಿ ಮಾನವತೆಯ ಪ್ರವಾದಿ. ಈ ಬದುಕನ್ನು ಸಹ್ಯಗೊಳಿಸಲು ಇನ್ನಷ್ಟು ಚಂದಗೊಳಿಸಲು ನಿರಂತರವಾಗಿ ಪ್ರಯತ್ನಿಸುವವನು. ತಪ್ಪುಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಾರೆ. ಒಮ್ಮೆ ದಾರಿ ತಪ್ಪಬಹುದು. ನಾವು ಮೊಸಹೋಗಬಹುದು. ಪದೇ ಪದೇ ಮೋಸಹೋಗುವುದೆಂದರೆ ನಮ್ಮೊಳಗೆ ನಾವೇ ಹೇರಿಕೊಂಡ ಗುಲಾಮಗಿರಿ ಮನಸ್ಥಿತಿಯ ಸಂಕೇತ. ಅದರಿಂದ ಯಾಕೆ ಹೊರಬರುವ ಧೈರ್ಯವನ್ನು ತೋರಿಸುವುದಿಲ್ಲ ಅನ್ನುವ ಸಾತ್ವಿಕ ಸಿಟ್ಟನ್ನು ತೋರಿಸುತ್ತಾರೆ. ರಾವಣನ ನಾಟಕ ಅಂತ ತಿಳಿಯದೆ ಬಣ್ಣದ ಜಿಂಕೆಗೆ ಮೋಸಹೋಗುತ್ತಾಳೆ ಸೀತೆ. ನಿಮಗೋ ಇದು ರಾವಣನ ನಾಟಕ ಅಂತ ಗೊತ್ತು. ಮತ್ಯಾಕೆ ನೀವು ಸೀತೆಯಾಗುತ್ತೀರಿ?
ರಾವಣ ನಾಟಕ ಆಡಿದ್ದು ಗೊತ್ತಿದ್ದೂ
ನೀವು ಸೀತೆಯಾಗುತ್ತೀರಿ
ಅದೆಷ್ಟು ಶಕ್ತಿಶಾಲಿಯಾದ ರೂಪಕ ಇದು. ಪದೇ ಪದೇ ಮೋಸಕ್ಕೊಳಗಾಗಿ ಪ್ರತಿಭಟಿಸುವ ಶಕ್ತಿಯನ್ನೇ ಕಳೆದುಕೊಂಡಿರುವ ದಮನಿತರ ಒಳಗಿರುವ ನಿಜದ ಶಕ್ತಿಯನ್ನು ಬಡಿದೆಬ್ಬಿಸುವ ಕವಿತೆ ಇದು. ದಂಗೆಯೇಳಬೇಕಾಗುತ್ತಲೇ ಇರಬೇಕಾಗುತ್ತದೆ ತನ್ನೊಳಗೆ ತನ್ನ ನಿಜದ ಸೆಲೆ ಪುಟಿವನಕ. ತನ್ನ ವ್ಯಕ್ತಿತ್ವಕ್ಕೆ ಚಹರೆಯ ಪಟ್ಟಿ ಸಿದ್ಧವಾಗುವವರೆಗೆ ಅಂತ ಅಡಿಗರು ಹೇಳಿದ್ದೂ ಇದನ್ನೇ. ಕವಿತೆ ಬರೆಯುತ್ತಿರುವ ಯುವಕವಿಗಳು ಹೇಗೆ ಒಂದು ರೂಪಕವನ್ನು ಸಮರ್ಥವಾಗಿ ಬಳಸಬಹುದೆನ್ನುವುದನ್ನು ಇಂತಹ ಕವಿತೆಗಳನ್ನು ಓದುವುದರಿಂದ ಅರಿತುಕೊಳ್ಳಬಹುದು. ತನ್ನ ಮೊದಲ ಸಂಕಲನದಲ್ಲಿಯೇ ಈ ಕವಿ ತನಗೆ ಸರಿ ಅನ್ನಿಸದ ಯಾರನ್ನೂ ಪ್ರಶ್ನಿಸದೇ ಬಿಟ್ಟಿಲ್ಲ. ರಾಮ, ಸೀತೆ ಅಥವಾ ಬುದ್ಧನೇ ಇರಬಹುದು. ಯಾರೂ ಇವರಿಗೆ ಪ್ರಶ್ನಾತೀತರಾಗಿ ಉಳಿದಿಲ್ಲ. ಬುದ್ಧ ತನ್ನ ಹೆಂಡತಿ ಯಶೋಧರೆಯನ್ನು ತೊರೆದು ರಾತ್ರೋ ರಾತ್ರಿ ಅರಮನೆಯನ್ನು ಬಿಟ್ಟು ಹೋದುದನ್ನು ಕವಿ ಪ್ರಶ್ನಿಸುತ್ತಾರೆ. ಹೀಗೆ ಸಂಸಾರವನ್ನು ನಂಬಿ ಬಂದ ಹೆಣ್ಣನ್ನು ನಡು ನೀರಿನಲ್ಲಿ ಬಿಟ್ಟು ಸಾಧಿಸುವಂತಹ ಸಾಧನೆಯಾದರೂ ಯಾವುದು? ಒಟ್ಟಿಗೆ ಇದ್ದು ಅವಳನ್ನೂ ಆ ಮುಕ್ತಿ ಮಾರ್ಗದಲ್ಲಿ ನಡೆಸಲು ಅಗದೆ ಲೋಕಕ್ಕೆಲ್ಲಾ ಹೇಗೆ ಬೋಧನೆ ಮಾಡುತ್ತಿಯಾ ಅಂತ ಕವಿ ಪ್ರಶ್ನಿಸುತ್ತಾರೆ. ನಾನೇನಾದರೂ ಆ ಕಾಲದಲ್ಲಿ ಇರುತ್ತಿದ್ದರೆ ಇದನ್ನೆಲ್ಲಾ ಕೇಳದೆ ಬಿಡುತ್ತಿರಲಿಲ್ಲ. ನೊಗಕ್ಕೆ ಕಟ್ಟಿ ಊಳುವ ರೂಪಕ ಶ್ರಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈಸಬೇಕು ಇದ್ದು ಜೈಸಬೇಕು, ಅದನ್ನು ಬಿಟ್ಟು ಎಲ್ಲೋ ದೂರದಲ್ಲಿ ಕುಳಿತು ಅಹಿಂಸೆ ಮತ್ತು ಪ್ರೇಮವನ್ನು ಭೋಧಿಸುವುದಲ್ಲ. ನೀನು ತೊರೆದು ಹೋದದ್ದೇ ಅತೀ ದೊಡ್ಡ ಹಿಂಸೆ ಅನ್ನುವ ಧ್ವನಿ ಕವಿತೆಯಲ್ಲಿದೆ.
ನಾನು ನೀನಿದ್ದಾಗ ಇದ್ದರೆ ನಿನ್ನ
ಹಿಡಿದೆಳೆದು ಕನ್ನಡಿ ಹಿಡಿಯುತ್ತಿದ್ದೆ
ನಿನ್ನ ನೊಗಕ್ಕೆ ಕಟ್ಟಿ ಊಳುತ್ತಿದ್ದೆ
ಬೇಕೆಂದಾಗ ಹಿಡಿದು ಬೇಡೆಂದಾಗ
ನಿರ್ವೀರ್ಯತೆಯ ಅಡಗಿಸಲು
ದೂರದಲ್ಲಿಯೇ ಕುಳಿತು ಅಹಿಂಸೆ ಪ್ರೇಮ ಬೋಧಿಸಿದೆ?
ಹಬ್ಬು ಅವರ ಸಾಹಿತ್ಯವನ್ನು ಇಡಿಯಾಗಿ ಓದಿದಾಗ ಬುದ್ಧನ ಕುರಿತಾದ ಈ ಆರಂಭಿಕ ನಿಲುವು ಮುಂದೆ ಬದಲಾದದ್ದು ತಿಳಿಯುತ್ತದೆ. ಇದು ಬುದ್ಧನನ್ನು ಓದಿಕೊಂಡ ಮೇಲೆ ಆದ ಬದಲಾವಣೆಯೋ ಅಥವಾ ಸ್ವಧರ್ಮದಲ್ಲಿ ಉಂಟಾದ ಭ್ರಮಾನಿರಸನದಿಂದ ಬೌದ್ಧ ಧರ್ಮದ ಕಡೆ ಹೆಚ್ಚು ಹೆಚ್ಚು ವಾಲಿದರೋ ಅನ್ನುವುದು ಗೊತ್ತಿಲ್ಲ. ಆದರೆ ಅವರು ಬೌದ್ಧ ಧರ್ಮದ ಕುರಿತು ಮುಂದೆ ಕೆಲವು ಪುಸ್ತಕಗಳನ್ನು ಬರೆದು ತನ್ನ ಅಧ್ಯಯನವನ್ನು ಮುಂದುವರೆಸಿದ್ದಾರೆ. ಹಾಗಾಗಿ ಆರಂಭದ ನಿಲುವನ್ನೇ ಕೊನೆಯ ತನಕ ಸಮರ್ಥಿಸದೇ ಬದಲಾವಣೆಗಳಿಗೆ ಈ ಕವಿ ಸದಾ ತೆರೆದುಕೊಂಡಿದ್ದಾರೆ ಅನ್ನುವುದೂ ಬಹಳ ಮಹತ್ವದ ಸಂಗತಿ.
ನನ್ನದೇ ಆಕಾಶ ನನ್ನದೇ ರೆಕ್ಕೆ:
ಉದಯಕುಮಾರ ಹಬ್ಬು ಅವರು ಕನ್ನಡ ಸಾರಸ್ವತ ಲೋಕದ ಬಹುಶ್ರುತ ಕಥನಕಾರ. ಅವರ ಅಧ್ಯಯನ ಮತ್ತು ಬರಹದ ಆಸಕ್ತಿ ಹತ್ತು ಹಲವು ಆಯಾಮಗಳದ್ದು. ಇತಿಹಾಸ ಪುರಾಣ ತತ್ವ ಸಿದ್ಧಾಂತ ಮತ್ತು ವಿಜ್ಞಾನವನ್ನು ಕುರಿತು ಆಲೋಚಿಸಿ ಬರೆಯುವ ಅವರ ಕ್ರತುಶಕ್ತಿಯ ಕ್ಯಾನ್ವಾಸ್ ಬಹಳ ದೊಡ್ಡದು. ಎಂಬತ್ತರ ದಶಕದಲ್ಲಿ ಪ್ರಕಟಿಸಿದ ಮೊದಲ ಕವನ ಸಂಕಲನದ ನಂತರ ಅವರು ಬರೆದದ್ದು ಗದ್ಯ ಸಾಹಿತ್ಯವನ್ನು. ಕತೆ ಕಾದಂಬರಿ ಅನುವಾದ ವಿಮರ್ಶೆ ಅಂತ ಬರೆಯುತ್ತಾ ಸುಮಾರು ಎಪ್ಪತ್ತು ಪುಸ್ತಕಗಳನ್ನು ಪ್ರಕಟಿಸಿದರು. ಇಪ್ಪತ್ತೊಂದು ವರ್ಷಗಳ ಬಳಿಕ ೨೦೨೧ರಲ್ಲಿ ಎರಡನೆಯ ಕವನ ಸಂಕಲನ ನನ್ನದೇ ಆಕಾಶ ನನ್ನದೇ ರೆಕ್ಕೆ ಪ್ರಕಟಿಸಿದರು. ಮೊದಲ ಕವನಸಂಕಲನ ಅನ್ವೇಷಣೆ ಪ್ರಕಟವಾದಾಗ ಹಬ್ಬು ಇನ್ನೂ ಬಿಸಿರಕ್ತದ ತರುಣರು. ಎಲ್ಲವನ್ನೂ ಪ್ರಶ್ನಿಸುವ, ವ್ಯವಸ್ಥೆಯನ್ನು ಬದಲಾಯಿಸುವ ಹುಮ್ಮಸ್ಸು. ಹಾಗಾಗಿ ಮನಸ್ಸಿನ ಈ ಬಂಡಾಯ ಕವಿತೆಗಳ ರೂಪದಲ್ಲಿ ಅಭಿವ್ಯಕ್ತಿಯನ್ನು ಪಡೆಯಿತು. ಮತ್ತು ಬಂಡಾಯ ದಲಿತ ತನ್ನ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಾಲ ಅದು. ಅದರಿಂದ ಪ್ರಭಾವಿತರಾದದ್ದೂ ಒಂದು ಕಾರಣ ಇದ್ದಿರಬಹುದು. ಆದರೆ ಬದುಕನ್ನು ಸಂಜೆಗಣ್ಣಿನ ಶಾಂತ ನೋಟದಲ್ಲಿ ನೋಡುವಾಗ ಅವರಿಗೆ ಯಾವ ಹಂಗೂ ಕಾಡುವುದಿಲ್ಲ. ತನ್ನದೇ ಕನಸಿನ ಅನುಭವದ ರೆಕ್ಕೆ ಬೀಸುತ್ತಾ ತನ್ನದೇ ಆಕಾಶದಲ್ಲಿ ಸ್ವಚ್ಛಂದ ವಿಹರಿಸುತ್ತಾ ಕಂಡ ಪಕ್ಷಿನೋಟದಲ್ಲಿ ಅವರೊಳಗಿನ ಕವಿ ಬದುಕಿಗೆ ಮುಖಾಮುಖಿಯಾಗಿದ್ದಾರೆ. ಆದರೆ ಇಲ್ಲಿ ಬದುಕಿನಿಂದ ವಿಮುಖರಾಗುವ ಸಿನಿಕತನವಿಲ್ಲ. ವಯಸ್ಸಿಗೆ ಸಹಜ ಅಂತ ಅನ್ನಿಸುವ ಹುಸಿ ಆಧ್ಯಾತ್ಮವಿಲ್ಲ.
ಹೊಸತನವನ್ನು ನಿರಾಕರಿಸುವ ಪಟ್ಟಭದ್ರ ಮನಸ್ಥಿತಿ ಎಲ್ಲಾ ಕಾಲದಲ್ಲಿಯೂ ಎಲ್ಲಾ ಕ್ಷೇತ್ರದಲ್ಲಿಯೂ ಇದ್ದೇ ಇರುತ್ತದೆ. ಅದೆಷ್ಟೇ ಪ್ರತಿಭೆ ಇದ್ದರೂ ಈಗಾಗಲೇ ಸ್ಥಾಪಿತವಾದ ಒಂದು ವರ್ಗ ತಮ್ಮವರಲ್ಲದವರನ್ನು ಮುನ್ನಲೆಗೆ ಬರಲು ಬಿಡುವುದೇ ಇಲ್ಲ. ʼಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ʼ ನಿನ್ನ ಸರದಿಯೂ ಬರುತ್ತದೆ ಅಲ್ಲಿವರೆಗೂ ಕಾಯಲೇಬೇಕು ಅಂತ ಕುಲದ, ಕಿರಿತನದ ಕಾರಣ ಕೊಟ್ಟು ಮುಖ್ಯವಾಹಿನಿಯಿಂದ ದೂರವೇ ಉಳಿಸುವ ಒಂದು ವ್ಯವಸ್ಥಿತ ಹುನ್ನಾರ ಮಹಾಭಾರತದ ಕಾಲದಿಂದಲೂ ಇತ್ತೆನ್ನುವುದನ್ನು ಪಂಪ ತನ್ನ ಕೃತಿಯಲ್ಲಿ ವಿಶ್ಲೇಷಿಸಿದ್ದಾನೆ. ತನ್ನದು ಕೇವಲ ಪುಸ್ತಕಗಳಿಂದ ಪಡೆದ ತೆಳುವಾದ ಅನುಭವವಲ್ಲ. ಪ್ರತಿಭೆ ಯಾರೊಬ್ಬರ ಸೊತ್ತಲ್ಲ. ಒಂದು ಸಣ್ಣ ಬೀಜದಲ್ಲಿ ಮಹಾವೃಕ್ಷವೇ ಅಡಗಿರುತ್ತದೆ. ಎಷ್ಟು ದಿನ ನೀವು ಬೆಳಗುವ ಸೂರ್ಯನನ್ನು ಅಡಗಿಸಲು ಸಾಧ್ಯ? ಮೋಡ ಕರಗಲೇ ಬೇಕು ಅನ್ನುವುದು ಕವಿಯ ಸ್ಪಷ್ಟ ನಿಲುವು.
ಇಂದು ಚಿಕ್ಕವನಿದ್ದವನು ನಾಳೆ
ವಾಮನನಾಗುತ್ತಾನೆ
ಯಾಕೆಂದರೆ ನಾನು ಪುಸ್ತಕಗಳನ್ನು
ಓದುವುದಿಲ್ಲ; ಮನುಷ್ಯರನ್ನು
ಮಾತ್ರ ಓದುತ್ತೇನೆ.
ಉತ್ತರದ ಉತ್ತರೋತ್ತರ ಕೆಲಸ ನಮಗೆ ಬಿಡಿ; ದೊಡ್ಡವರು ನೀವು. ನಾವೇನು ಕುಬ್ಜರಲ್ಲ ಅಂತ ಅಡಿಗರು ಬಿ ಎಂ ಶ್ರೀ ಅವರಿಗೆ ಕವಿತೆಯಲ್ಲಿ ಬರೆಯುತ್ತಾರೆ. ಅಂದರೆ ಈ ಕಡೆಗಣಿಸುವಿಕೆ ನಾವು ದೊಡ್ಡವರು ಅಂತ ಅಂದುಕೊಂಡವರನ್ನೂ ಒಂದು ಹಂತದಲ್ಲಿ ಬಿಟ್ಟಿಲ್ಲ ಎಂದ ಮೇಲೆ ಸಾಮಾನ್ಯರ ಪಾಡೇನು? ಇಂದು ಚಿಕ್ಕವನಿದ್ದವನು ನಾಳೆ ವಾಮನನಾಗುತ್ತಾನೆ ಅನ್ನುವ ಕವಿತೆಯ ಸಾಲು ಅಡಿಗರ ನಾವೇನೂ ಕುಬ್ಜರಲ್ಲ ಅನ್ನುವ ಸಾಲಿಗೆ ಸಂವಾದಿಯಾಗಿ ಕೇಳಿಸುತ್ತದೆ. ಹಾಗೆ ಹೇಳುವುದು ಖಂಡಿತಾ ನಿಮ್ಮನ್ನು ಮೆಟ್ಟಿ ಮುಂದೆ ಹೋಗುತ್ತೇನೆ ಅನ್ನುವ ಅಹಂಕಾರವಲ್ಲ. ನಾನೂ ರೆಕ್ಕೆ ಕಟ್ಟಿಕೊಂಡು ಹಾರಬಲ್ಲೆ. ನನ್ನದೇ ಆಕಾಶವನ್ನು ಸೃಷ್ಠಿಸಬಲ್ಲೆ ಅನ್ನುವ ಅಗಾಧ ಆತ್ಮವಿಶ್ವಾಸ. ಆದರೆ ಇದು ಕೇವಲ ಪುಸ್ತಕದ ಓದಿನಿಂದ ಹುಟ್ಟಿಕೊಂಡ ಜ್ಞಾನವಲ್ಲ. ನನ್ನ ಅನುಭವ ತೆಳುವಲ್ಲ. ಇದು ಬದುಕಿನಿಂದ ದೊರೆತದ್ದು. ಮನುಷ್ಯರನ್ನು ಓದಿ ಪಡೆದ ಅರಿವು ಅನ್ನುವುದು ಕವಿಗೆ ತಿಳಿದಿದೆ. ವಾಮನ ತ್ರಿವಿಕ್ರಮನಾಗುವ ವಿಕಾಸದ ನಿರಂತರವಾದ ಪ್ರಜ್ಞೆಯನ್ನು ಈ ಕವಿತೆಯ ಸಾಲು ಬಹಳ ಅರ್ಥಪೂರ್ಣವಾಗಿ ಧ್ವನಿಸುತ್ತದೆ.
ಭಿನ್ನ ದಾರಿಯನು ಹಿಡಿಯದಿರು ಮರುಳೆ ಈ ಸಂಕಲನದಲ್ಲಿ ನನ್ನನ್ನು ಅತೀ ಹೆಚ್ಚು ಕಲಕಿದ ಕಾಡಿದ ಕವಿತೆ. ಸಮಾಜಕ್ಕೊಂದು ಸಿದ್ಧ ಮಾದರಿ ಇದೆ. ಅದನ್ನು ಅನುಸರಿಸದೇ ತನ್ನದೇ ಗುಂಗಿನಲ್ಲಿ ನಡೆಯುವವರನ್ನು ಲೋಕ ಒಂದೇ ಬೆರಗಿನ ಕಣ್ಣಿನಿಂದ ನೋಡುತ್ತದೆ ಇಲ್ಲವೇ ಅರಗಿನ ಅರಮನೆಯಲ್ಲಿ ಸುಟ್ಟುಹಾಕುತ್ತದೆ. ಸಮಾಜದ ರೀತಿನೀತಿಗಳ ತಿಳುವಳಿಕೆ ಇಲ್ಲದ ಹುಚ್ಚ ಎಂದು ಕರೆದು ದೂರವಿರಿಸುತ್ತದೆ. ಎಷ್ಟೋ ವರ್ಷಗಳಿಂದ ಕಟ್ಟಿದ ಕಟ್ಟಡದ ಇಟ್ಟಿಗೆಗಳನ್ನು ಒಡೆದು ಹೊಸತನ್ನು ಕಟ್ಟುವವರನ್ನು ಸಂಶಯದ ಕಣ್ಣಿನಿಂದ ನೋಡುತ್ತಾ ತೀವ್ರ ಪ್ರತಿರೋಧ ಒಡ್ಡುತ್ತದೆ. ಈ ಕವಿತೆಯಲ್ಲಿ ಕವಿ ಕನಸನ್ನು ಬೆನ್ನಟ್ಟಿ ಸಮಾಜದ ಕಣ್ಣಿಗೆ ಗುರಿಯಾಗದಿರು ಅನ್ನುವ ನಿರುತ್ಸಾಹದ ಯಾವ ಮಾತುಗಳನ್ನು ಹೇಳುತ್ತಿಲ್ಲ. ಆದರೆ ಅಂತಹ ದಾರಿ ತುಳಿಯುವವರನ್ನು ಹೇಗೆ ಸಮಾಜ ನಿರ್ದಾಕ್ಷಿಣ್ಯವಾಗಿ ತುಳಿಯುತ್ತದೆ ಅನ್ನುವುದನ್ನು ಧ್ವನಿಪೂರ್ಣವಾಗಿ ಹೇಳುತ್ತಿದ್ದಾರೆ. ಸಮಾಜಕ್ಕೆ ಯಾವತ್ತೂ ತನ್ನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಉತ್ತರಾಧಿಕಾರಿ ಬೇಕು. ಸ್ಥಾಪಿತ ಮೌಲ್ಯಗಳನ್ನು ಧಿಕ್ಕರಿಸುವ ಮತ್ತು ಹೊಸ ಸತ್ಯಗಳನ್ನು ಹೇಳುವವರನ್ನು ಯಾವತ್ತೂ ಪುರಸ್ಕರಿಸುವುದಿಲ್ಲ ಅನ್ನುವುದನ್ನು ಕವಿ ಈಗಾಗಲೇ ನಮ್ಮೆದುರಿಗಿರುವ ದೃಷ್ಟಾಂತಗಳ ಮೂಲಕ ಹೇಳುತ್ತಾ ಹೋಗುತ್ತಾರೆ. ಭಿನ್ನ ದಾರಿಯನು ಹಿಡಿದ ಬುದ್ಧನನ್ನು ಜನ ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳಲಿಲ್ಲ. ತನ್ನ ದಾರಿಯನ್ನು ಕಂಡುಕೊಳ್ಳುವ ಮಾರ್ಗದಲ್ಲಿ ತನ್ನ ಮುದ್ದಿನ ಹೆಂಡತಿ ಮಗುವನ್ನು ಬಿಟ್ಟು ಉಟ್ಟ ಬಟ್ಟೆಯಲ್ಲಿಯೇ ಅರ್ಧ ರಾತ್ರಿಯಲ್ಲಿಯೇ ಹೊರಡಬೇಕಾಯ್ತು. ತಾನು ಕಂಡುಕೊಂಡ ಸತ್ಯ ಜನರ ನೋವುಗಳನ್ನು ನಿವಾರಿಸುವುದೆಂದು ಗೊತ್ತಿದ್ದರೂ ಅದನ್ನು ಜನರಿಗೆ ತಲುಪಿಸಲು ತನ್ನ ಬಗ್ಗೆ ಅವರಿಗೆ ನಂಬಿಕೆ ಬರುವವರೆಗೆ ಕಾಯಬೇಕಾಯ್ತು. ಅಷ್ಟು ಕಷ್ಟಸಹಿಷ್ಣು ಆಗಿದ್ದರೆ ಮಾತ್ರ ಭಿನ್ನ ದಾರಿಯನು ಹಿಡಿ, ಇಲ್ಲವಾದರೆ ಜನ ನಿನ್ನನ್ನು ಅನ್ಯನೆಂದೆನಿಸುವರು. ಖಿನ್ನನಾಗುವೆ ಈ ಜಗದಲ್ಲಿ ಅಂತ ಎಚ್ಚರಿಸುತ್ತಾರೆ. ಅಂತಹುದೇ ದಾರಿಯಲ್ಲಿ ನಡೆದವರು ಏಸು, ಸಾಕ್ರೆಟಿಸ್, ಗೆಲಿಲಿಯೋ. ಆದರೆ ಯಾರನ್ನೂ ಈ ಸಮಾಜ ಬದುಕಲು ಬಿಡಲಿಲ್ಲ. ಹಾಗಾಗಿ ಸಾಧನೆಯ ಹಾದಿಯಲ್ಲಿ ನಡೆದವರು ಸದಾ ಏಕಾಂಗಿಯೇ ಅನ್ನುವ ವಾಸ್ತವದ ಚಿತ್ರಣವನ್ನು ಈ ಕವಿತೆ ಕಟ್ಟಿಕೊಡುತ್ತದೆ.
ಭಿನ್ನ ದಾರಿಯನು ಹಿಡಿಯದಿರು ಮರುಳೆ
ಖಿನ್ನನಾಗುವೆ ಈ ಜಗದಿ
ಅನ್ಯನೆಂದೆನಿಸುವರು ನಿನ್ನ
ಮನ್ನಣೆಯೆ ನಿನಗಿರದು
ಭಿನ್ನ ದಾರಿಯ ಹಿಡಿದ ಬುದ್ಧ ಹೊರಗಾದನು
ಭಿನ್ನ ದಾರಿಯ ಹಿಡಿದ ಏಸು ಶಿಲುಬೆಗೇರಿದನು
ಸಾಕ್ರೆಟಿಸ್ ಗೆ ವಿಷ ಕುಡಿಸಿದರು
ಗೆಲಿಲಿಯೋಗೆ ಮರಣದಂಡನೆ ವಿಧಿಸಿದರು
ಬಸವಣ್ಣನನು ಕಲ್ಯಾಣದಲ್ಲಿ ಐಕ್ಯನಾಗಿಸಿದರು
ಬೆಳಗೊಳದಲ್ಲಿ ಅನ್ನುವ ಎಚ್ಚೆಸ್ವಿ ಬರೆದ ಕವಿತೆಯೊಂದಿದೆ. “ಪಾದದಿಂದಲೆ ಎಲ್ಲ ಪ್ರಾರಂಭ. ಗೊಮ್ಮಟನ ಪಾದವೆಂದರೆ ಸಾಮಾನ್ಯವಲ್ಲ. ಪ್ರತ್ಯಕ್ಷಗೊಳಿಸಬೇಕಲ್ಲ ಕಲ್ಲನು ಕಡಿದು ನೋಯಿಸದ ಹಾಗೆ ಕಾಲಡಿಯ ಹುಲ್ಲ. ನೆಲವ ಬಿಟ್ಟವನವನು ಮುಟ್ಟಿಯೂ ಮುಟ್ಟದಂತಿರಬೇಕು ತಿರೆಯಲಸ್ಥಿರವಾಗದೆ” ಅನ್ನುವ ಆ ಕವಿತೆಯ ಸಾಲುಗಳು ಪಾದದಿಂದ ಪ್ರಾರಂಭವಾಗುವ ಗೊಮ್ಮಟ ಬೆಳೆದು ಬಯಲಾಗುವ ವ್ಯಕ್ತಿತ್ವದಲ್ಲಿ ಪಾದದಡಿಯ ಹುಲ್ಲನ್ನೂ ನೋಯಿಸದೆ ತಿರೆಯಲಸ್ಥಿರವಾಗದೆ ನಿಂತಿರುವ ಪರಿಗೆ ಅಚ್ಚರಿ ಸೂಚಿಸುತ್ತದೆ. ಅಧಿಕಾರ ಅಂತಸ್ತು ಎಂತೆಂತವರನ್ನೇ ನೆಲ ಮರೆಯುವ ಹಾಗೆ ಮಾಡಿಬಿಡುತ್ತದೆ. ತಲೆಯನ್ನು ಹೆಗಲ ಮೇಲೆ ಸ್ಥಿರವಾಗಿ ಇಟ್ಟುಕೊಳ್ಳುವುದು ಸುಲಭವಲ್ಲ. ಎಲ್ಲರಿಗೂ ಗೊಮ್ಮಟನಿಗೆ ಒಲಿದ ವಿನಯ ನಿರಾಳತೆ ದಕ್ಕುವುದಿಲ್ಲ. “ಮುಖ ಮೂಡಬಹುದು. ಮೂಡಿಲ್ಲ ಮೂಡುವುದಿಲ್ಲ ಮನವಿಲ್ಲದಿರುವಾಗ ಮಂದಹಾಸ” ಅನ್ನುವ ಕವಿತೆಯ ಸಾಲುಗಳು ಅಂತರಂಗ ಬಹಿರಂಗ ಶುದ್ಧಿಯಾಗದೇ ಒಂದಾಗದೇ, ಮೂಡುವುದಿಲ್ಲಿ ಇಂತಹ ಮಂದಹಾಸ ಅನ್ನುವುದನ್ನು ಧ್ವನಿಸುತ್ತದೆ.
ಹಬ್ಬು ಅವರು ಬರೆದ ಈ ಕವಿತೆಯೂ ಎತ್ತರ ಏರಿಯೂ ತಾನು ಏರಿದ ಏಣಿಯನ್ನು ಮರೆಯದ, ತಾನು ಸ್ಥಿರವಾಗಿ ನಿಲ್ಲುವ ಪ್ರಕ್ರಿಯೆಯಲ್ಲಿ ಪಾದದಡಿಯಲ್ಲಿ ನಲುಗುವ ಹುಲ್ಲು ಗರಿಕೆಯನ್ನೂ ಕೃತಜ್ಞತೆಯಿಂದ ನೆನೆಯುವ, ಆಲಯದಲ್ಲಿದ್ದೂ ಬಯಲಾದ ಎಲ್ಲಾ ವ್ಯಕ್ತಿತ್ವಗಳನ್ನು ಗೊಮ್ಮಟನ ಪ್ರತಿಮೆಯ ಮೂಲಕ ಅತ್ಯಂತ ಆಪ್ತವಾಗಿ ನೆನೆಯುತ್ತದೆ.
ಎತ್ತರದ ಗೊಮ್ಮಟ
ಪಾದದಡಿಯ ಗರಿಕೆಯನೂ
ಕೃತಜ್ಞತೆಯಿಂದ ನೆನೆಯುತ
ಭಗವದ್ಗೀತೆಯಲ್ಲಿ ಕೃಷ್ಣ ನ “ಬ್ರೂಯಾತ್ ಸತ್ಯಮಪ್ರಿಯಮ್” ಅನ್ನುವ ಮಾತನ್ನು ಹೇಳುತ್ತಾನೆ. ಅಪ್ರಿಯವಾದ ಸತ್ಯವನ್ನು ಹೇಳಬೇಡ ಅನ್ನುತ್ತದೆ ಈ ಶ್ಲೋಕ. ಆದರೆ ಜನ ಇದರ ಅರ್ಥವನ್ನು ತಮಗೆ ಬೇಕಾದ ಹಾಗೆ ವಿಸ್ತರಿಸಿ ಪ್ರಿಯವಾದ ಸುಳ್ಳನ್ನು ಹೇಳಿ ಹೇಗೆ ಒಳ್ಳೆಯವರೆಂದೆನಿಸಿಕೊಳ್ಳಬಹುದು ಅನ್ನುವುದನ್ನು ಕಂಡುಕೊಂಡಿದ್ದಾರೆ. ತನಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವವರು ಯಾರಿಗೂ ಬೇಡ. ಅವರನ್ನು ಕೆಟ್ಟವರು ಅಂತ ದೂರವಿರಿಸುತ್ತಾರೆ. ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಯಾರೂ ಅವಳ ಪರ ಧ್ವನಿಯೆತ್ತದಿದ್ದಾಗ, ತಾನು ಸೋತು ಗುಲಾಮ ಅಂತ ಅನ್ನಿಸಿಕೊಂಡಿದ್ದರೂ ಆ ಎಲ್ಲಾ ಶಿಷ್ಟಾಚಾರವನ್ನು ಧಿಕ್ಕರಿಸಿ ದ್ರೌಪದಿಯ ಸ್ಥಿತಿಗೆ ಮರುಗಿ ಉರಿದು ಭೀಮ ಕೌರವರನ್ನು ಕೊಲ್ಲುವ ಪ್ರತಿಜ್ಞೆಯ ಅಬ್ಬರದ ಮಾತುಗಳನ್ನು ನುಡಿಯುತ್ತಾನೆ. ಆ ಮೂಲಕ ಕೌರವರ ಮೊದಲ ಶತ್ರು ಎನಿಸಿಕೊಳ್ಳುತ್ತಾನೆ. ಅವರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಒಳ್ಳೆಯವನೆನಿಸಿಕೊಳ್ಳಬೇಕಿದ್ದರೆ ಈ ನಡೆ ಸಮಾಜಕ್ಕೆ ಎಂದೂ ಒಪ್ಪಿತವಾದುದಲ್ಲ. ಎದುರಿನಿಂದ ಬೆಣ್ಣೆ ಮಾತಾಡುತ್ತಾ ಹಿಂದಿನಿಂದ ಇರಿಯುವವರೆ ಎಂದಿಗೂ ಇಲ್ಲಿ ಒಳ್ಳೆಯವರು. ಹಿಂದಿನಿಂದ ಮರೆಯಾಗಿ ಬಿಟ್ಟು ವಾಲಿಯ ವಧಿಸಿದ ಬಾಣದಂತಹ ಮಾತು ಒಳ್ಳೆಯತನದ ಲಕ್ಷಣ! ಎಂತಹ ಅದ್ಭುತವಾದ ರೂಪಕವನ್ನು ರಾಮಾಯಣದಿಂದ ಎತ್ತಿಕೊಳ್ಳುತ್ತಾರೆ ಕವಿ. ಒಬ್ಬ ಸೂಕ್ಷ್ಮ ಸಂವೇದಿಯಾದ ಕವಿಯಿಂದ ಮಾತ್ರ ಇಂತಹ ಸಾಲು ಮೂಡಲು ಸಾಧ್ಯ. ಅಂತಹ ಕುಸುರಿ ಕೆಲಸವನ್ನು ಕವಿ ಈ ಕವಿತೆಯಲ್ಲಿ ಮಾಡಿದ್ದಾರೆ. ಮಹಾಭಾರತ ಮತ್ತು ರಾಮಾಯಣದ ಘಟನೆಗಳನ್ನು ಹೀಗೆ ತನ್ನ ಕಾವ್ಯಸಂಕಲನದುದ್ದಕ್ಕೂ ಕವಿ ಸಶಕ್ತವಾಗಿ ಬಳಸಿದ್ದಾರೆ.
ದ್ರೌಪದಿಯ ವಸ್ತ್ರಾಪಹರಣದ ಭೀಮ
ಉರಿದು ನುಡಿದ ಅಬ್ಬರದ
ಮಾತು ಸರಿಯಲ್ಲ
ಒಳ್ಳೆಯವನೆನೆಸಿಕೊಳ್ಳಬೇಕಿದ್ದರೆ
ಹಿಂದಿನಿಂದ ಮರೆಯಾಗಿ
ಬಿಟ್ಟು ವಾಲಿಯ ವಧಿಸಿದ ಬಾಣದಂತಹ
ಮಾತು ಒಳ್ಳೆಯತನದ ಲಕ್ಷಣ
ಇಪ್ಪತ್ತು ವರ್ಷಗಳ ಧೀರ್ಘ ಅಂತರದ ಈ ಎರಡು ಸಂಕಲನದ ಕವಿತೆಗಳೂ ರೂಪಕಗಳಿಗಾಗಿ ರಾಮಾಯಣ ಮತ್ತು ಮಹಾಭಾರತದ ಪಾತ್ರಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿವೆ. ಅವವೇ ಪಾತ್ರಗಳು ಈ ಎರಡು ಕಾಲದ ಪರಿಸ್ಥಿತಿಗಳಿಗೆ ಭಿನ್ನವಾಗಿ ದಕ್ಕಿವೆ. ಈ ಎರಡು ಕಾಲದ ನಡುವೆ ಕವಿ ವಯಸ್ಸಿನಲ್ಲಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಭೌದ್ಧಿಕವಾಗಿಯೂ ಬೆಳೆದಿದ್ದಾರೆ. ಬದುಕನ್ನು ಒಂದು ಆರೋಗ್ಯಕರ ಅಂತರದಲ್ಲಿ ನಿಂತು ನೋಡುವ ಸಮಾಧಾನ ದಕ್ಕಿರುವುದು ಮತ್ತು ಯಾವುದೇ ಉದ್ವೇಗಗಳಿಲ್ಲದೇ ಪ್ರತಿಕ್ರಿಯಿಸುವುದು ಸಾಧ್ಯವಾಗಿರುವುದು ಎರಡು ಸಂಕಲನದ ಕವಿತೆಗಳನ್ನು ಓದುವಾಗ ನಮ್ಮ ಅನುಭವಕ್ಕೆ ಬರುತ್ತದೆ.
ಈ ಸಂಕಲನದ ನಂತರ ಬೆಳಕು ಮಾರುವ ಹುಡುಗ ಅನ್ನುವ ಇನ್ನೊಂದು ಸಂಕಲನವನ್ನೂ ಪ್ರಕಟಿಸಿದ್ದಾರೆ. ಖಂಡಿತವಾಗಿಯೂ ಮತ್ತಷ್ಟು ಮಾಗಿದ ಅರ್ಥಪೂರ್ಣವಾದ ಕವಿತೆಗಳು ಆ ಸಂಕಲನದಲ್ಲಿವೆ. ಇಲ್ಲಿನ ಕವಿತೆಗಳು ಮನುಷ್ಯ ವರ್ತನೆಯಲ್ಲಿ ಎದ್ದು ಕಾಣುವ ವಿತಂಡವಾದ, ನನ್ನದೇ ಸರಿಯೆಂಬ ಅಹಂಕಾರ, ಮತ್ತೊಬ್ಬರ ವಿಚಾರವನ್ನಾಲಿಸದ ಸಂಕುಚಿತತೆ ಮುಂತಾದವನ್ನು ಪರೋಕ್ಷವಾಗಿ ಕಾಣಿಸುತ್ತಲೇ ಕವಿ ತನ್ನ ಸುತ್ತಲ ಜಗತ್ತಿನಿಂದ ಬಯಸುವುದು ಇದಲ್ಲವೆಂಬುದನ್ನು ನಿರೂಪಿಸುತ್ತಲೇ, ಸ್ವಾಸ್ಥ್ಯ ಸಮಾಜದ ಆಶಯಗಳನ್ನು ಮುನ್ನಲೆಗೆ ತರುತ್ತವೆ. ಸಾಮಾನ್ಯವೆನಿಸುವ ಸಂಗತಿಗಳಿಗೆ ಸ್ವೋಪಜ್ಞ ಚಿಂತನೆಯ ಮೆರುಗನ್ನು ಮಿಳಿತಗೊಳಿಸಿ ಅವನ್ನು ಓದುಗರೆದೆಗೆ ಪರಿಣಾಮಕಾರಿಯಾಗಿ ಇಳಿಸುವ ಕಲೆಗಾರಿಕೆ ಹಬ್ಬು ಅವರಿಗೆ ಸುಲಭವಾಗಿ ಸಿದ್ಧಿಸಿದೆ. ಹಾಗಾಗಿ ಇಲ್ಲಿನ ಅನೇಕ ರಚನೆಗಳು ಓದಿಯಾದ ನಂತರವೂ ತಮ್ಮನ್ನು ಕುರಿತು ಚಿಂತಿಸಲು, ಜಿಜ್ಞಾಸೆ ನಡೆಸಲು ಒತ್ತಾಯಿಸುವಷ್ಟು ಶಕ್ತಿಶಾಲಿಯಾಗಿವೆ. ಉತ್ತಮ ಕವಿತೆಯೊಂದರ ಗುಣವೇ ಇದಲ್ಲವೆ? ಅಂತ ಕನ್ನಡದ ಖ್ಯಾತ ವಿಮರ್ಶಕರಾದ ಡಾ. ಎಚ್. ಸತ್ಯನಾರಾಯಣ ಅವರು ಕವಿ ಹಬ್ಬುರವರ ಕುರಿತು ಹೇಳಿರುವುದು ಸರಿಯಾಗಿದೆ.






0 Comments