-ಆನಂದತೀರ್ಥ ಪ್ಯಾಟಿ
ಇಳಿಸಂಜೆ. ಸೂರ್ಯಾಸ್ತದ ತುಸು ಹೊತ್ತಿನಲ್ಲೇ ಪೂರ್ವದಲ್ಲಿ ಚಂದ್ರ ಮೇಲೇಳುತ್ತಿದ್ದ. ಇಲಕಲ್ಲಿನಲ್ಲಿ ಎರಡು ಕಾರ್ಯಕ್ರಮ ನೀಡಿದ ಬಳಿಕ ನನ್ನ ಮಿತ್ರರೂ ಗಾಯಕರೂ ಆಗಿರುವ ನಾದ ಮಣಿನಾಲ್ಕೂರು ಅವರು ರೈತಮಿತ್ರ ಶ್ರೀಪಾದ ಮುರಡಿ ಅವರ ‘ಶ್ರೀ ಫಾರ್ಮ್’ಗೆ (ರಾಷ್ಟ್ರೀಯ ಹೆದ್ದಾರಿಯ ಮ್ಯಾದನೇರಿ ಕ್ರಾಸ್) ಸಂಜೆ ಬಂದಿಳಿದು, ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅರ್ಧ ತಾಸಿನ ಬಳಿಕ ನಿದ್ದೆಯಿಂದೆದ್ದ ಅವರು, ಫ್ರೆಶ್ ಆಗಿ, ಏಕತಾರಿ ಹಿಡಿದು ಹೊರಬಂದರು. ಅದು ಅಕ್ಷರಶಃ ‘ಕತ್ತಲ ಹಾಡುಗಳು’ ಕಾರ್ಯಕ್ರಮಕ್ಕೆ ಸೂಕ್ತವಾದ ಸಮಯ.
ನಿಸರ್ಗದ ಮಧ್ಯೆ ವೇದಿಕೆಯೂ ಸಿದ್ಧವಾಗಿತ್ತು.
ಬೃಹತ್ ಬಂಡೆಯ ಮೇಲೆ ಇನ್ನೊಂದಷ್ಟು ಮಣ್ಣು ಪೇರಿಸಿ, ವೃತ್ತಾಕಾರದ ಕಟ್ಟೆಯೊಂದನ್ನು ಶ್ರೀಪಾದ್ ರೂಪಿಸಿದ್ದಾರೆ. ಇದಕ್ಕೆ ‘ಚಹಾ ಕಟ್ಟೆ’ ಅಂತ ನಾಮಕರಣ ಮಾಡಲಾಗಿದೆ! ಮೆತ್ತನೆಯ ಗಾದಿ ಹಾಸಿ, ದಿಂಬುಗಳನ್ನಿಷ್ಟು ಆಸಕ್ತರಿಗೆ ಗಾಯನ ಆಲಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಅತ್ತ ಕತ್ತಲು ಅಲ್ಲ; ಇತ್ತ ಪ್ರಖರ ಬೆಳಕಿಲ್ಲ. ಸಾಲದ್ದಕ್ಕೆ ಮೈಕು, ಸ್ಪೀಕರುಗಳ ಹಂಗು ಸಹ ಇಲ್ಲ!!! ಸುತ್ತಮುತ್ತಲೂ ಮರಗಳು, ದೂರದಿಂದ ನೂರಾರು ಹಕ್ಕಿಪಕ್ಷಿಗಳ ಕಲರವ. ಹೆಚ್ಚಿನ ಸದ್ದು ಕೇಳುತ್ತಿದ್ದುದು ನವಿಲಿನ ಕೂಗು.
ಏಕತಾರಿ ಶ್ರುತಿ ಸರಿಪಡಿಸಿಕೊಂಡ ನಾದ, ಹಾಡಲು ಶುರು ಮಾಡಿಯೇ ಬಿಟ್ಟರು. ಅವರ ಗಾಯನ ಕಾರ್ಯಕ್ರಮ ಹೀಗೆಯೇ! ಯಾವುದೇ ಔಪಚಾರಿಕ ಮಾತು, ನೀರಸ ಭಾಷಣ ಅಲ್ಲಿರುವುದಿಲ್ಲ. ಹಾಗೆಂದು ಮಾತುಗಳೇ ಇಲ್ಲವೆಂದಲ್ಲ. ಹಾಡುಗಳ ಮಧ್ಯೆ ಚಿಂತನೆಯ ಮಾತುಗಳು ಆಗಾಗ್ಗೆ ಹೊರಬರುವುದೂ ನಡೆದೇ ಇರುತ್ತದೆ. ಕತ್ತಲಿನಲ್ಲಿ ಯಾವುದೋ ಮೂಲೆಯಿಂದ ಅದೃಶ್ಯವಾಣಿಯಂತೆ ಕೇಳಿಸುತ್ತಿದ್ದ ನಾದ ಮಾತುಗಳು ಚಿಂತನೆಯ ಅಲೆ ಹೊಮ್ಮಿಸಿದವು.

“ಕತ್ತಲಿನ ಬಗ್ಗೆ ನಮ್ಮಲ್ಲಿ ತಪ್ಪು ಗ್ರಹಿಕೆ ಬೇರೂರಿದೆ. ಬೆಳಕು ಶ್ರೇಷ್ಠ ಎಂಬ ನಂಬಿಕೆ. ಆದರೆ ಕತ್ತಲಿನಲ್ಲಿ ಮನುಷ್ಯ ಅಂತರ್ಮುಖಿ ಆಗುತ್ತಾನೆ. ತನ್ನೊಳಗೆ ತಾನೇ ಯೋಚಿಸಲು ಕತ್ತಲು ಒಂದೊಳ್ಳೆ ಸಾಧನ” ಎಂದರು ನಾದ.
ಏಕತಾರಿ ಜತೆ ಮಿಳಿತಗೊಂಡು ಹಾಡು ಹೊರಹೊಮ್ಮುವಾಗ ತನ್ಮಯಚಿತ್ತರಾಗಿ ಕೇಳುವಂತೆಯೇ, ಅಡ್ಡಡ್ಡ ಶರೀರ ಒಗೆದು ಹಾಡು ಕೇಳುತ್ತ ಕೇಳುತ್ತ ನಿದ್ದೆಗೆ ಜಾರಿದವರೂ ಇದ್ದರು! ಇದಕ್ಕೆ ನಾದ ಅವರ ತಕರಾರು ಇಲ್ಲ! “ನಿದ್ದೆಗೆಡಿಸುವ ಸಂಗತಿಗಳೇ ನಮ್ಮ ಸುತ್ತಮುತ್ತಲ ಸಾಮ್ರಾಜ್ಯವನ್ನು ಆಳುತ್ತಿರುವಾಗ, ನಾನು ಹಾಡುವ ಹಾಡುಗಳು ನಿದ್ದೆಗೆ ಜಾರಿಸಿದರೆ ಅದಕ್ಕಿಂತ ಖುಷಿ ಏನಿದೆ? ಹಲವು ಬಗೆಯು ಅಶಾಂತಿಯಿಂದ ಕಂಗೆಟ್ಟಿರುವ ಮನಸ್ಸುಗಳನ್ನು ತುಸು ಹೊತ್ತಾದರೂ ನಿದ್ದೆ ಮಾಡಿಸಿ, ಮನಸ್ಸಿಗೆ ವಿಶ್ರಾಂತಿ ಕೊಡಿಸುವುದು ಇಂದಿನ ತುರ್ತು” ಎಂಬುದು ಅವರ ನುಡಿ.
ಮಧುರವಾದ ಹಾಡುಗಳ ಮಧ್ಯೆ ಬಸವರಾಜ ಸವಡಿ, ದೇವೇಂದ್ರ ಜಿರ್ಲಿ ಇತರರ ಮಾತುಗಳಿಗೆ ನಾದ ಪ್ರತಿಕ್ರಿಯಿಸಿದರು. ಜತೆಜತೆಗೆ, ತಾವು ಆಯೋಜಿಸುವ ನಿಸರ್ಗ ಶಿಬಿರ, ಹಾಡುಗಳ ಕಾರ್ಯಾಗಾರದ ಬಗ್ಗೆಯೂ ಮಾಹಿತಿ ಹಂಚಿಕೊಂಡರು.

ಹಾಡುಗಳ ಗುಂಗಿನಲ್ಲಿ ಇದ್ದವರು ಕುಳಿರ್ಗಾಳಿಗೆ ಹೆದರಲಿಲ್ಲ! ಬದಲಾಗಿ, ಚಂದಿರನ ಮಂದ ಬೆಳಕಿನಲ್ಲಿ ಸುಮಾರು ಎರಡೂವರೆ ತಾಸು ಗಾಯನ ಲೋಕದಲ್ಲಿ ಅವರು ಕಳೆದುಹೋಗಿದ್ದೇ ಒಂದು ವಿಶಿಷ್ಟ ಅನುಭವ. ಏಕತಾರಿ ಗುಂಗು, ಇರುಳಿನಲ್ಲೂ ಕೇಳಿಬರುವ ಪಕ್ಷಿಗಳ ಸದ್ದು, ಕಪ್ಪೆಗಳ ಕೂಗು ಹಾಡುಗಳ ಆಲಾಪಕ್ಕೆ ಸಾಥ್ ನೀಡಿದಂತಿತ್ತು. ಪಕ್ಕಾ ಪ್ರಕೃತಿಯ ಮಡಿಲಿನಲ್ಲಿ ಬೇರೆಯದೇ ಲೋಕಕ್ಕೆ ಕರೆದೊಯ್ದ ನಾದ ಅವರು, ‘ಎಲುಬಿನ ಹಂದರದೊಳಗೊಂದು’ ಹಾಡಿನೊಂದಿಗೆ ಕತ್ತಲ ಹಾಡುಗಳ ಲೋಕಕ್ಕೆ ತೆರೆ ಎಳೆದರು.
ಕಟ್ಟ ಕಡೆಗೆ, ಶ್ರೀಪಾದರಾಜ ಮುರಡಿ ಅವರ ಮಿತ್ರರ ತಂಡ ಬಂಗಾರ ಕಡ್ಡಿ ಅಕ್ಕಿಯ ಅನ್ನ, ನಾಟಿ ತೊಗರಿಬೇಳೆಯ ಸಾಂಬರ್, ಹಪ್ಪಳ, ಸಂಡಿಗೆ, ಮಜ್ಜಿಗೆ ಮೆಣಸು, ಗಟ್ಟಿಮೊಸರು ಹಾಗೂ ಚಟ್ನಿಪುಡಿ ಒಳಗೊಂಡ ಸರಳ ಊಟದ ವ್ಯವಸ್ಥೆ ಮಾಡಿತ್ತು. ಬಳಿಕ ಮತ್ತೊಂದಷ್ಟು ಮಾತು-ಕತೆ. ಚೇತೋಹಾರಿ ಅನುಭವ ನೀಡಿದ ‘ಕತ್ತಲ ಹಾಡುಗಳು’ ಕಾರ್ಯಕ್ರಮದ ಗುಂಗಿನಲ್ಲೇ ಎಲ್ಲರೂ ಎದ್ದು ನಿದ್ದೆ ಮಾಡಲು ಹೊರಟಾಗ ಗಂಟೆ ಹನ್ನೆರಡು ದಾಟಿತ್ತು. ಎಲ್ಲರ ಮನದಲ್ಲೂ ನಾದ ಅವರ ಹಾಡುಗಳೇ ಅನುರಣಿಸುತ್ತಿದ್ದವು ಎಂಬುದಂತೂ ಸತ್ಯ!
ಪಟ, ವಿಡಿಯೋ ಕೃಪೆ – ದೇವೇಂದ್ರ ಜಿರ್ಲಿ






0 Comments