ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಮಾಜಿಕ ಕಾಳಜಿಯ ಪ್ರೊ.ಜಿ.ಕೆ. ಗೋವಿಂದರಾವ್ ನೆನಪು

-ಆರ್ ಜಿ ಹಳ್ಳಿ ನಾಗರಾಜ

ಸೈದ್ಧಾಂತಿಕ ಹೋರಾಟ, ಜನಪರ ನಿಲುವು, ಜಾತ್ಯತೀತ ಮನೋಭಾವ, ವೈಚಾರಿಕತೆಯಿಂದ ಸದಾ ಜನ ಜಾಗೃತಿ ಹೋರಾಟದಲ್ಲಿ ಭಾಗಿ ಆಗುತ್ತಿದ್ದ ಗುರುಗಳು, ಮಾರ್ಗದರ್ಶಕರು ಆದ ಪ್ರೊ. ಜಿ.ಕೆ. ಗೋವಿಂದರಾವ್ (ಜಿಕೆಜಿ) ಧಾರವಾಡದ ತಮ್ಮ ಮಗಳ ಮನೆಯಲ್ಲಿದ್ದಾಗಲೆ ನಿಧನರಾಗಿ ಐದು ವರ್ಷಗಳಾಯಿತು. ಎಸ್ಐಆರ್ ಮೂಲಕ ಚುನಾವಣಾ ಆಯೋಗ ಇವತ್ತು ಸೃಷ್ಟಿಸಿರುವ ಗೊಂದಲ, ಅರಾಜಕತೆಯ ಹೋರಾಟದಲ್ಲಿ ಅವರೀಗ ನಮ್ಮ ಜೊತೆ ಇರಬೇಕಿತ್ತು.

ಬದುಕಿನಲ್ಲಿ ಬದ್ಧತೆ, ಶಿಸ್ತುಬದ್ಧ ಜೀವನ, ಪ್ರಾಮಾಣಿಕತೆ, ಕರಾರುವಾಕ್ಕು ಮಾತು. ಗಟ್ಟಿ ನಿರ್ಧಾರಗಳಿಂದ ವ್ಯವಸ್ಥೆಯನ್ನು ತೀಡುತ್ತ, ತಿದ್ದುತ್ತ, ಖಡಕ್ ಮಾತುಗಳಿಂದ ಎಚ್ಚರಿಕೆ ಕೊಡುತ್ತಿದ್ದ ಮೇಷ್ಟು ಅವರು. ಅಪಾರ ಓದಿನ ಜ್ಞಾನಿ. ಕೊನೆಯ ದಿನಗಳಲ್ಲೂ ಹೊಸ ಹೊಸ ಓದನ್ನು ಅವರು ಬಯಸುತ್ತಿದ್ದರು. ಬೇಕಾದ ಪುಸ್ತಕಗಳನ್ನು ಅಂಚೆ ಕೊರಿಯರ್ ಮೂಲಕ ತರಿಸಿಕೊಂಡು ಇತರರಿಗೂ ಓದಲು ಹೇಳುತ್ತಿದ್ದರು. ಅವರ ಒಡನಾಟದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಚರ್ಚೆ ಮಾಡಿದ್ದೇನೆ. ನೂರಾರು ಕಿ.ಮೀ. ಜತೆಗೆ ಪಯಣ ಮಾಡಿದ್ದೇನೆ. ಅನೇಕ ಜನಪರ ಚಳವಳಿಗೆ ಕರೆದೊಯ್ದುದ್ದೇನೆ. ಜಯನಗರದ ಮಹಡಿ ಮನೆಯಲ್ಲಿ ಕೂತು ಅವರ ಶ್ರೀಮತಿ ನಿಘಂಟುತಜ್ಞೆ ಕಲಾವಿದೆ ಮಂಜುಳಾರಾವ್ ಕೊಟ್ಟ ಕಾಫಿ ಹೀರಿದ್ದೇನೆ. 2021 ಕರೋನಾ ಮಹಾಮಾರಿ ಅಲೆ ತಗ್ಗಿದ್ದ ಸಂದರ್ಭ ಮಹಡಿ ಏರಿ ಹೋಗಿದ್ದಾಗ, ಲವಲವಿಕೆಯಿಂದ ಮಾತಾಡಿದ್ದರು. ಅನೇಕ ಪುಸ್ತಕಗಳ ಓದಿನ ತಿರುಳನ್ನು ಉಣಬಡಿಸಿ, “ಸದಾ ಓದಬೇಕು ಕಣ್ರಿ, ಓದಿಲ್ಲದಿದ್ದರೆ ಏನು ಚರ್ಚೆ ಮಾಡಲು ಸಾಧ್ಯ? ಏನು ನಿಮ್ಮ ಬೆಳವಣಿಗೆ? ಪುಸ್ತಕವೇ ನಮ್ಮ ಬೌದ್ಧಿಕ ಆಸ್ತಿ” ಎಂದೇಳಿ, ಅಲ್ಲೇ ಹರಡಿಕೊಂಡಿದ್ದ ಪುಸ್ತಕಗಳ ಪುಟಗಳಲ್ಲಿನ ಮಾರ್ಕ್ ಮಾಡಿದ್ದ ತೋರಿಸಿ, ಆ ಪುಸ್ತಕಗಳ ಮಹತ್ವ ವಿವರಿಸಿದ್ದರು. ಜಿ.ಕೆ.ಜಿ ಒಬ್ಬ ನಿಜ ಮನುಷ್ಯ, ನಿಜ ಸಾಹಿತ್ಯಾಸಕ್ತ, ವೈಚಾರಿಕ ಬರಹಗಾರ, ಇಂಥ ಮಾನವೀಯ ಹೋರಾಟಗಾರನ ಕಣ್ಮರೆ ಸಾಂಸ್ಕೃತಿಕ ಲೋಕಕ್ಕಾದ ನಷ್ಟ.

ಪ್ರೊ. ಜಿ.ಕೆ.ಜಿ ಅವರು ಅಗಲುವ ಎರಡು ವರ್ಷದ ಹಿಂದೆ ಅವರ ಒಡನಾಟದಲ್ಲಿ ಬರೆದ ಟಿಪ್ಪಣಿ ಸಿಕ್ಕಿತು. ಅದರಲ್ಲಿ ಬರೆದಿದ್ದೆ:

ಅವರ ಮಹಡಿ ಮನೆ ಪ್ರವೇಶ ಮಾಡುತ್ತಿದ್ದಂತೆ ಕುರ್ಚಿಯಲ್ಲಿ ಆರಾಮವಾಗಿ ಕೂತಿದ್ದ ಅವರ ಮುಖದಲ್ಲಿ ಉಲ್ಲಾಸಿತ ಕಾಂತಿಯಿತ್ತು. “ಏನ್ಸಾರ್ ಇಷ್ಟು “ಸ್ಮಾರ್ಟ್ ಬಾಯ್” ಆಗಿದ್ದೀರಿ?’ ಎಂದು ರೇಗಿಸಿದ್ದೆ.

ಅವರು ಇಂಗ್ಲಿಷ್ ಪ್ರೊಫೆಸರ್, ಪಾಠ ಪಠ್ಯ, ಸಾಹಿತ್ಯ – ನಟನೆ ನಂಟು, ಅಂಟಿಯೂ ಅಂಟಿಕೊಳ್ಳದ ರಾಜಕೀಯ, ಯಾವುದೇ ಕುರ್ಚಿಯ ಹಪಹಪಿಕೆ ಇಲ್ಲದ ಸ್ವಾಭಿಮಾನದ ಪುಸ್ತಕ ಪ್ರೇಮಿ, ವಯಸ್ಸು ಎಂಬತ್ತು ದಾಟಿದ್ದರೂ ಅವರ ಹೊಸಹೊಸ ಓದು, ಚರ್ಚೆ, ವಿಶ್ಲೇಷಣೆ ಮನತಟ್ಟುತ್ತೆ, ನಮಗೆ ಮತ್ತಷ್ಟು ಪುಸ್ತಕಗಳ ನೆಂಟಸ್ತನ ಹೆಚ್ಚುವಂತ ಮಾಡುತ್ತೆ. ಕೆಲವು ಪುಸ್ತಕ ಹೆಸರಿಸಿ, ಅದನ್ನು ಓದಿದ್ದೀರಾ? ಎಂದು ಕೇಳುತ್ತಲೇ ಮತ್ತೆರಡು ಪುಸ್ತಕ ಎದುರಿಡುತ್ತಾರೆ. ಅಷ್ಟೇ ಏಕೆ. ಆ ಕೃತಿಗಳ ಮಹತ್ವ, ಅವುಗಳೊಳಗಣ ತಿರುಳನ್ನೂ ಕಿವಿಗೂ ತಾಕಿಸಿಬಿಡ್ತಾರೆ. ನೀವೊಬ್ಬ ನಿಜದ ಓದುಗ ಮತ್ತು ಪುಸ್ತಕ ಪ್ರೇಮಿ ಆಗಿದ್ದರೆ ಮನದೊಳಗೇ ‘ಅಯ್ಯೋ, ಇಂಥ ಪುಸ್ತಕಗಳನ್ನು ನಾನಿನ್ನು ಓದಲಿಲ್ವಲ್ಲ!’ ಎಂಬ ಉದ್ಧಾರ ಬರುವುದು ಸಹಜ. ಅವರು ನಾನು ಕಂಡ ನಿಜವಾದ ಪುಸ್ತಕ ಹುಳು. ಕನ್ನಡದ್ದಷ್ಟೇ ಅಲ್ಲ, ಅದಕ್ಕಿಂತ ಹೆಚ್ಚೇ ಇಂಗ್ಲಿಷ್ ಕೃತಿಗಳ ಅಧ್ಯಯನ ಇದೆ. ಅವರೊಬ್ಬ ಪ್ರಖರ ವಿಚಾರವಾದಿ. ಸುಳ್ಳು, ಮೋಸ, ವಂಚನೆ, ಲಂಪಟತನದ ಸುಳಿವೇ ಇಲ್ಲ. ವ್ಯಕ್ತಿ. ವಿಚಾರಗಳ ತಾತ್ವಿಕ ಭಿನ್ನಾಭಿಪ್ರಾಯ ಇದ್ದರೂ ದ್ವೇಷ ರಾಜಕಾರಣ ಮಾಡಲು ಅವರೇನು ರಾಜಕಾರಣಿ ಅಲ್ಲ. ಆದರೆ ಸುಳ್ಳಿನ ಅರಮನೆ ಕಟ್ಟುವ ರಾಜಕಾರಣವನ್ನು ನೇರವಾಗಿ ಖಂಡಿಸುತ್ತಿದ್ದರು. ಕೋಮುಭಾವನೆಗಳ ವಿರೋಧದ ಕೆಂಡ ಅವರು. ವ್ಯವಸ್ಥೆಯ ವಿರುದ್ಧ ಖಂಡತುಂಡ ಮಾತು. ತಮ್ಮದೇ ಜಾತಿಯ ಪೇಜಾವರ ಸ್ವಾಮಿಗಳ ಹಿಂದುತ್ವದ ನಡೆ ಪ್ರಶ್ನಿಸಿ 40 ಪುಟಗಳ ಸುಧೀರ್ಘ ಪತ್ರ ಬರೆದು, ಅದನ್ನು ಪುಸ್ತಕ ರೂಪದಲ್ಲಿ ಹೊರತಂದು ಸಾರ್ವಜನಿಕರ ಕೈಗೆ ಸಿಲುಕುವಂತೆ ಮಾಡಿ ಬೆಚ್ಚಿಬೀಳಿಸಿದವರು. ‘ಮನು V/s ಅಂಬೇಡ್ಕರ್’ ಎಂಬ ಹೆಸರಿನ ಪುಸ್ತಕವೇ ಆ ದೀರ್ಘ ಪತ್ರ’ ‘ಸ್ವಾತಂತ್ರೋತ್ತರ ಭಾರತದಲ್ಲಿ ತಾವು ಯಾರ ಪರ’ ಎಂಬ ಅಡಿ ಬರಹ ಅಲ್ಲಿತ್ತು. ಮನುಷ್ಯ ಸಮಾನತೆ ಸಾಧಿಸಬೇಕೆಂಬ ಇಚ್ಛೆ, ಹಂಬಲ ಇಡೀ ಪತ್ರದ ತಿರುಳು. ‘ಬಹುಶಃ ಕಲೆಯೊಂದೇ ಮನುಷ್ಯನಿಗೆ ಒಂದಷ್ಟು ಸಮಾಧಾನ, ನೆಮ್ಮದಿ, ಭವಿಷ್ಯದ ಕುರಿತಾದ ವಿಶ್ವಾಸ, ಸಂಬಂಧಗಳ ಕುರಿತಾದ ನಂಬಿಕೆ ಇವುಗಳನ್ನು ನೀಡಬಲ್ಲದಾಗಿದೆ’ ಎಂಬ ಅರ್ಥಪೂರ್ಣ ಮಾತನ್ನು ಶ್ರೀ ಪೇಜಾವರರಿಗೆ ತಾಕಿಸಿದ್ದರು. ಶೂದ್ರ ಶ್ರೀನಿವಾಸ ತಪ್ಪು ಮಾಹಿತಿ ನೀಡಿ ಕವಿ ಎಚ್.ಎಸ್. ಶಿವಪ್ರಕಾಶ ವಿರುದ್ಧ ಲೇಖನವೊಂದನ್ನು ಬರೆದಾಗ ಝಾಡಿಸಿ ಹತ್ತು ಪುಟ ಬರೆದು ಸಾಂಸ್ಕೃತಿಕ ದಿವಾಳಿತನ ಪ್ರಶ್ನಿಸಿದವರು. ಪ್ರಗತಿಪರ, ದಲಿತಪರ ಎಂದು ಬೀಗಿದ ನಿಡುಮಾಮಿಡಿ ಶ್ರೀ ವೀರಭದ್ರ ಚೆನ್ನಮಲ್ಲಸ್ವಾಮಿಯ ಬೆವರು ಇಳಿಸಿ, ಅವರ ದ್ವಂದ್ವ, ಕೋಮುವಾದಿಗಳ ಓಲೈಕೆ ಪ್ರಶ್ನಿಸಿ ಬರೆದವರು… ಎಷ್ಟೋ ಸಿನಿಮಾಗಳಲ್ಲಿ ಗಮನಾರ್ಹ ಪೋಷಕ ಪಾತ್ರ ಮಾಡಿದವರು, ರಂಗಭೂಮಿಯಲ್ಲಿ ಕಾಣಿಸಿಕೊಂಡವರು… ಕನ್ನಡವಲ್ಲದೆ ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸಿ ಸೈ ಅನ್ನಿಸಿಕೊಂಡವರು. ಹಾದಿಬೀದಿ, ಊರುಗಳಲ್ಲಿ ಜನ ಸಾಮಾನ್ಯರಂತೆ ಅಡ್ಡಾಡುತ್ತ ತಿಂಡಿ, ಕಾಫಿ ಸೇವಿಸುವ ಇವರನ್ನು ಸಿನಿಮ ನಟರೆಂದು ಗುರ್ತಿಸಿ ಜನ ಮಾತಾಡಿಸಿದರೆ ನಿರುತ್ಸಾಹ ತೋರುವ, ಕೆಲವೊಮ್ಮೆ “ಹೌದಾ?” ಎಂದಷ್ಟೇ ಹೇಳಿ, ಅವರೆಡೆಗೆ ಕಣ್ಣರಳಿಸಿ ನೋಡಿ ಮುಂದೆ ಸಾಗುವ, ತಾನೊಬ್ಬ ನಟ ಎಂದು ಎಂದೂ ಅಂದುಕೊಂಡಿಲ್ಲದ, ಬೀಗದ ಸಾಮಾನ್ಯರು. ಜಾತ್ಯತೀತ ನಿಲುವಿನ ಜನಪರ ಚಳವಳಿಯ ಮುಂಚೂಣಿಯ ಹಿರಿಯರಾದ ಇವರೇ ನಮ್ಮ ಪ್ರೊ. ಜಿ.ಕೆ. ಗೋವಿಂದರಾವ್.

ಒಮ್ಮೆ ಜಯನಗರದ ಮನೆಗೆ ಹೋದಾಗ ಅವರನ್ನು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಪ್ರತಿಭಟನೆಗೆ ಕರೆದೊಯ್ದಿದ್ದೆವು. ಮಹಡಿಯ ಮೆಟ್ಟಿಲು ಇಳಿಯಲು, ಹತ್ತಲು ಬೇರೆಯವರ ಸಹಾಯ ಬೇಕಿತ್ತು. ದೈಹಿಕ ಬಳಲಿಕೆ ಇದ್ದರೂ ಮಾನಸಿಕವಾಗಿ ಸದೃಢರಾಗಿದ್ದರು. ಆದಿನ ಒಬ್ಬ ಪತ್ರಕರ್ತೆಯ ಭಾರತ – ಪಾಕಿಸ್ತಾನದ ಸ್ವಾತಂತ್ರ್ಯ ಸಂಗ್ರಾಮ, ನರಮೇಧ, ಎರಡೂ ದೇಶಗಳ ದ್ವೇಷ ರಾಜಕಾರಣ ಹಾಗೂ ವಿವಾದಗಳ ಬಗೆಗಿನ ಇಂಗ್ಲಿಷ್ ಪುಸ್ತಕದ ಬಗ್ಗೆ ಹತ್ತು ನಿಮಿಷ ಮಾತಾಡಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಊಟ, ಉಸಿರಾಟದಷ್ಟೇ ಮುಖ್ಯವಾಗಿದ್ದ ಆ ಹೊಸ ಪುಸ್ತಕವನ್ನು ಕೊರಿಯರ್ ಮೂಲಕ ತರಿಸಿಕೊಂಡಿದ್ದರು. “ಓದುವ ಪುಸ್ತಕ ಹುಳು” ಅವರು. ಎದುರು ಟೇಬಲ್ ಮೇಲೆ ಅಂಥ ಹಲವು ಪುಸ್ತಕ ಹರಡಿಕೊಂಡಿದ್ದರು.

ಜಿಕೆಜಿ ಅವರ ಪತ್ನಿ ಮಂಜುಳಾರಾವ್, ಅವರು ಮಹಾ ಪ್ರತಿಭಾನ್ವಿತೆ. ಪ್ರಚಾರ ಬಯಸದ ಗೃಹಿಣಿ, ಕಲಾವಿದೆ, ಕನ್ನಡ ನಿಘಂಟುತಜ್ಞೆ, ಬಹಳ ಜನಕ್ಕೆ ಅವರು ಕಸಾಪದಲ್ಲಿ 25 ವರ್ಷಕ್ಕು ಹೆಚ್ಚು ದುಡಿದವರು ಎಂಬ ಮಾಹಿತಿ ಇಲ್ಲ. ನಿಘಂಟುತಜ್ಞ ಎಂದು ಕರೆಯಿಸಿಕೊಂಡ ಶತಾಯುಷಿ ಪ್ರೊ.ಜಿ.ವಿ. ಅವರ ಅಸೂಯಪರತೆ ಹಾಗೂ ಕಠಿಣ ನಿಲುವಿನಿಂದ, ನಿವೃತ್ತಿ ವೇತನ ಇಲ್ಲದೆ ನೊಂದವರಲ್ಲಿ ಇವರೂ ಒಬ್ಬರು. ಎಪ್ಪತ್ತರ ದಶಕದ ಹಲವು ಹೊಸ ಬಗೆಯ ಸಿನಿಮಾಗಳಲ್ಲಿ ಇವರು ಪಾತ್ರ ವಹಿಸಿದ ಉತ್ತಮ ಕಲಾವಿದೆಯೂ ಹೌದು. ಇವರ ಕರಾರುವಾಕ್ಕು ಕನ್ನಡ ಬರವಣಿಗೆ. ಜಿಕೆಜಿಯಂತೆಯೇ ಖಡಕ್ ಮಾತು ಇಷ್ಟವಾಗುತ್ತೆ. ಇಷ್ಟಾಗ್ಯೂ ಅವರು ಮಾಡಿದ ಚಹಾದ ರುಚಿ, ನಾಲಗೆಯ ಒಗರು ಮರೆಯಲಾಗದು.

ಪ್ರೊ. ಜಿಕೆಜಿ ಉತ್ತಮ ವಿಮರ್ಶಕರು, ರಂಗಚಿಂತಕರು. ನಾನು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯನಾಗಿದ್ದಾಗ “ಷೇಕ್ಸ್ ಪಿಯರ್ ನಾಟಕಗಳ ಪಾತ್ರಗಳು” ಬಗ್ಗೆ ವಿಮರ್ಶಾತ್ಮಕ ಪುಸ್ತಕ ಬರೆದಿದ್ದರು. ಆ ಪುಸ್ತಕ ಬಿಡುಗಡೆಗೆ ಸಾಹಿತ್ಯ, ಸಂಗೀತ ದಿಗ್ಗಜ ಪಂಡಿತ ರಾಜೀವ್ ತಾರಾನಾಥ ಬಂದಿದ್ದರು. ಆಗ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು, ನಾನು ಆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತಾಡಿದ್ದೆ.

ನಾನು ಚಿಕ್ಕವನಿದ್ದಾಗ ‘ಪ್ರಜಾವಾಣಿ” ಪತ್ರಿಕೆ ಮನೆಗೆ ಬರುತ್ತಿತ್ತು. ಆಗಲೇ ಸಾಪ್ತಾಹಿಕದ ಎಲ್ಲಾ ಬರಹ ಓದುತ್ತಿದ್ದೆ. ನನಗೆ ಚೆನ್ನಾಗಿ ನೆನಪಿದೆ. ಜಿ.ಕೆ. ಗೋವಿಂದರಾವ್ ಅವರ “ಈಶ್ವರ ಅಲ್ಲಾ” ಎಂಬ ಕಿರು ಕಾದಂಬರಿ ರೂಪದ ಧಾರಾವಾಹಿ ಪ್ರಕಟವಾಗುತ್ತಿತ್ತು. ಅದು, ದೀಪಾವಳಿ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮಿನಿ ಕಾದಂಬರಿ ಅಥವಾ ನೀಳ್ಗತೆ. ಆಗ ಓದಿದಾಗ ಅದೆಷ್ಟು ಅರ್ಥ ಆಗಿತ್ತೋ ಗೊತ್ತಿಲ್ಲ. ಆದರೆ, ಆ ಶೀರ್ಷಿಕೆ, ಅದರ ಲೇಖಕರು ಮನಸ್ಸಲ್ಲಿ ಶಾಶ್ವತವಾಗಿ ಅಚ್ಚೊತ್ತಿದ್ದವು. ಆ ಬರಹದ ಲೇಖಕರನ್ನು ಮುಂದೊಂದು ದಿನ ಜೀವನದಲ್ಲಿ ಭೇಟಿ ಆಗಿ ಸಂವಾದ ಮಾಡುತ್ತೇನೆ ಎಂದು ಕನಸು ಮನಸ್ಸಲ್ಲು ಅಂದುಕೊಂಡಿರಲಿಲ್ಲ.

ಮುಂದೆ ಕನ್ನಡದ ಪ್ರಯೋಗಿಕ ಸಿನಿಮಾಗಳಲ್ಲಿ ಅಲ್ಲದೆ ಜನಪ್ರಿಯ ಸಿನಿಮಾಗಳಲ್ಲಿ ಜಿಕೆಜಿಯವರು; ಪತ್ನಿ ಮಂಜುಳಾರಾವ್ ಪ್ರಯೋಗಿಕ ಸಿನಿಮಾಗಳಲ್ಲೂ ಅಭಿನಯಿಸಿದಾಗ ನೆನಪಲ್ಲಿ ಉಳಿದರು. ನಾನು ಬೆಂಗಳೂರಿಗೆ ಬಂದ ನಂತರ ಜಿಕೆಜಿ ಅವರ ನಾಟಕ ಅಭಿನಯ ನೋಡಿದೆ. ಭಾಷಣ ಕೇಳಿದೆ. ಜನಪರ ಸಂಘಟನೆಯ ಪ್ರತಿಭಟನೆಯಲ್ಲಿ ಕಂಡೆ. ರಂಗಭೂಮಿಯ ಹೊಸ ಪ್ರಯೋಗಗಳ ಕಟು ವಿಮರ್ಶೆ ಮಾಡಿದ್ದನ್ನೂ ಓದಿದೆ. ಯಾವುದೇ ವಿಚಾರವನ್ನು, ಹೇಳಬೇಕಾದ್ದನ್ನು ಖಡಕ್ಕಾಗಿ ಹೇಳುತ್ತಿದ್ದರು. ಬರಹ, ಪತ್ರಿಕೆ, ಪ್ರಕಟಣೆ. ಚಳವಳಿಯ ಭಾಗವಾಗಿದ್ದ ನನ್ನನ್ನು ಅವರ ಮನದೊಳಗೆ ತೆಗೆದುಕೊಂಡರು. ಪರಿಚಯದ ನಂತರ ರಾಜ್ಯದ ಹಲವೆಡೆ ಸಾಹಿತ್ಯ, ಸಾಂಸ್ಕೃತಿಕ ಸಮಾರಂಭಗಳಿಗೆ ಜತೆಯಲ್ಲಿ ಹೋಗಿದ್ದೇನೆ. ಪ್ರವಾಸದಲ್ಲಿ ಷೇಕ್ಸ್‌ ಸ್ಪಿಯರ್ ನಾಟಕಗಳ ಮಹತ್ವದ ಬಗ್ಗೆ, ಸಮಕಾಲೀನ ಸಾಂಸ್ಕೃತಿಕ ತಲ್ಲಣಗಳ ಬಗ್ಗೆ, ಯಾವುದಕ್ಕೂ ಸ್ಪಂದಿಸದ ಯುವ ಜನಾಂಗದ ಮೌನದ ಬಗ್ಗೆ ಮಾತಾಡಿದ್ದೆವು.

ಬುದ್ದಿಜೀವಿ ಗುಂಪಲ್ಲಿ ಜಿ.ಕೆ.ಜಿ. ಅವರದ್ದೂ ಮುಂಚೂಣಿ ಹೆಸರು. ವ್ಯವಸ್ಥೆಯ ವಿರುದ್ಧದ ದನಿಗೆ, ಪ್ರತಿಭಟನೆಗೆ ಸದಾ ಮುಂದೆ. ಟೌನ್ ಹಾಲ್ ಬಳಿ, ಸ್ವಾತಂತ್ರ್ಯ ಉದ್ಯಾನವನದ ಬಳಿ ನಡೆದ ಅನೇಕ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಕೇಂದ್ರದ ಪೌರತ್ವ ಕಾಯ್ದೆ ವಿರುದ್ಧ ನಡೆದ ಧೀರ್ಘ ಪ್ರತಿಭಟನೆಯಲ್ಲೂ ಇವರದ್ದು ಪ್ರಮುಖ ಪಾತ್ರ, ಶತಾಯುಷಿ ಎಚ್.ಎಸ್. ದೊರೆಸ್ವಾಮಿ, ಸಾಹಿತಿ ದೇವನೂರು ಮಹಾದೇವ ಅವರ ಜೊತೆ ಇವರ ಸಾಥ್ ಇತ್ತು. ಜೊತೆಗೆ ದೆಹಲಿ ಬಳಿ ನಡೆದ ಧೀರ್ಘ ರೈತ ಚಳವಳಿಗೂ ಇವರ ಬೆಂಬಲ ಇತ್ತು.

ರಾಜ್ಯಸಭೆಗೆ ಖ್ಯಾತನಟಿ ಹೇಮಾಮಾಲಿನಿ ರಾಜ್ಯದಿಂದ ಸ್ಪರ್ಧೆ ಮಾಡಿದ್ದಾಗ. ಅವಳ ವಿರುದ್ದ ಪ್ರಗತಿಪರ ಚಿಂತಕ ಕೆ. ಮರುಳಸಿದ್ದಪ್ಪ ಅವರನ್ನು ನಿಲ್ಲಿಸಿದ್ದರು. ಇದು ಸಾಂಕೇತಿಕ ಸ್ಪರ್ಧೆ ಆದರೂ, ಪ್ರಜಾಪ್ರಭುತ್ವದ ನೈತಿಕತೆ, ಪ್ರಾಮಾಣಿಕ ಅಭ್ಯರ್ಥಿ ಪರ ನಿಲುವು ಇರಬೇಕಾದ್ದು ಪ್ರತಿ ಮತದಾರನ ಕರ್ತವ್ಯ. ಆಗ ಪ್ರೆಸ್ ಕ್ಲಬ್ ಒಳಗೆ, ಕೆಎಂಎಸ್ ಪರ ಪತ್ರಿಕಾಗೋಷ್ಠಿ ಆದಾಗ ಜಿಕೆಜಿ, ಗಿರೀಶ ಕಾರ್ನಾಡ, ಬರಗೂರು ರಾಮಚಂದ್ರಪ್ಪ, ಕೊಂಡಜ್ಜಿ ಮೋಹನ್ ಅವರ ಜೊತೆ ನಾನೂ ಭಾಗಿಯಾಗಿದ್ದೆ.

ಬಹು ವರ್ಷಗಳ ಹಿಂದೆಯೇ ನಾನೊಂದು ಮಹತ್ವದ ರಾಜಕೀಯ ವಿಚಾರದ ಸಭೆಯ ಚರ್ಚೆಯಲ್ಲಿ ಜಿ.ಕೆ.ಜಿ. ಜೊತೆ ಸೇರಿದ್ದೆ. ಅದು ಎಸ್.ಆರ್. ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಸಂದರ್ಭ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಘೋಷಿಸಿದ್ದ ರಾಜ್ಯಪಾಲ ಆಂಧ್ರ ಮೂಲದ ವೆಂಕಟಸುಬ್ಬಯ್ಯನವರ ವಿರುದ್ಧದ ಸಭೆಯದು. ಖ್ಯಾತ ಕಲಾವಿದ, “ಆಕಾಶವಾಣಿ ಈರಣ್ಣ” ಎಂದೇ ಖ್ಯಾತಿ ಹೊಂದಿದ್ದ ಎ.ಎಸ್. ಮೂರ್ತಿ ಅವರು ತಮ್ಮ “ಕಲಾಮಂದಿರ’ದಲ್ಲಿ ವ್ಯವಸ್ಥೆ ಮಾಡಿದ್ದ ಸಭೆ. ಅಂದು ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ ಲೋಕದ ದಿಗ್ಗರೇ ಭಾಗಿಯಾಗಿದ್ದರು. ನಾನೇ ಚಿಕ್ಕವಯಸ್ಸಿನ ತರುಣ. ಕವಿ ಸಿದ್ದಯ್ಯ ಪುರಾಣಿಕ, ಜಿ.ಕೆ.ಜಿ, ಸುಮತೀಂದ್ರ ನಾಡಿಗ, ನಗರಿ ಬಾಬಯ್ಯ, ಹರಿಹರಪ್ರಿಯ, ಸಿ.ವಿ. ರಾಜಗೋಪಾಲ ಅವರುಗಳಿದ್ದ ಸಭೆಯಲ್ಲಿ ಕೇಂದ್ರದ ಕೈಗೊಂಬೆ ರಾಜ್ಯಪಾಲರ ನಿಲುವನ್ನು ಖಂಡಿಸಿದ್ದೆವು.

ಜಿಕೆಜಿ ಅವರಿಗೆ ಮಠಮಾನ್ಯಗಳ ಬಗ್ಗೆ ತಿರಸ್ಕಾರಕ್ಕಿಂತ ಅಲ್ಲಿನ ಕಿಲುಬುಗಟ್ಟಿದ ಸಂಪ್ರದಾಯ, ಆಚಾರ, ವಿಚಾರ ಹಾಗೂ ಅವರು ಪ್ರತಿಪಾದಿಸುವ ಮೌಡ್ಯಗಳ ವಿರುದ್ಧ ಅಪಾರ ಸಿಟ್ಟಿತ್ತು. ಸದಾ ಒಂದಿಲ್ಲೊಂದು ಸುದ್ದಿಯ ಕೇಂದ್ರವಾಗಿರುತ್ತಿದ್ದ ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಸ್ವಾಮಿಗಳ ಗೊಂದಲ, ಹಿಂದುತ್ವದ ಬಗೆಗಿನ ಅವರ ಮೃದು ಧೋರಣೆ ಬಗ್ಗೆ ಕಟುವಾಗಿ ಟೀಕಿಸುತ್ತಿದ್ದರು. ಆದರೂ, ಅವರು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಜನಪರ ಚಟುವಟಿಕೆಗಳಿಗೆ, ಅವರ ರಂಗಭೂಮಿ ಬದ್ಧತೆಗೆ ಶರಣಾಗಿದ್ದರು. ರಂಗತಜ್ಞ ಪ್ರೊ. ಸಿಜಿಕೆ ಅವರ ಒತ್ತಾಯಕ್ಕೆ ಒಮ್ಮೆ ಸಾಣೇಹಳ್ಳಿ ವಿಚಾರ ಸಂಕಿರಣ ಹಾಗೂ ನಾಟಕೋತ್ಸವಕ್ಕೆ ಹೋದವರು, ಮತ್ತೆಮತ್ತೆ ಸ್ವಾಮಿಗಳ ಸಂಪರ್ಕದಲ್ಲಿದ್ದು ಸಲಹೆ ಸೂಚನೆ ನೀಡುತ್ತಿದ್ದರು. ಒಮ್ಮೆ ನನ್ನನ್ನೂ ಸಾಣೇಹಳ್ಳಿಗೆ ಜೊತೆಯಲ್ಲಿ ಕರೆದೊಯ್ದು ಸ್ವಾಮಿಗಳ ನಾಟಕ ಚಟುವಟಿಕೆ ಬಗ್ಗೆ ಮೆಚ್ಚುಗೆಯ ಮಾತಾಡಿದ್ದರು.

ಜಿ.ಕೆ.ಜಿ ಅವರಿಗೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಕೊಂಡ ಯುವಜನಾಂಗದ ಬಗ್ಗೆ ಅಪಾರ ಪ್ರೀತಿ – ಗೌರವ, ಅವರನ್ನು ಸ್ನೇಹಭಾವದಿಂದ ಕಂಡು, ಮನಸ್ಸು ಗೆಲ್ಲುತ್ತಿದ್ದರು. ಮಾಧ್ಯಮಗಳಿಗೆ ತಾವು ಬರೆಯುತ್ತಿದ್ದ ವಸ್ತುನಿಷ್ಠ ಬರಹಗಳನ್ನು ಓದಿದ ಕೆಲವು ಸಾಹಿತ್ಯ ವಿದ್ಯಾರ್ಥಿಗಳ ಜೊತೆ ಚರ್ಚಿಸುತ್ತಿದ್ದರು. ಹೀಗೆ ತೊಡಗಿಸಿಕೊಂಡವರಲ್ಲಿ ನನ್ನ ಕಿರಿಯ ಮಿತ್ರ ನಟರಾಜ ಹುಳಿಯಾರ್ ಪ್ರಮುಖ. ಅವನಿಗೆ ತಾವು ಪ್ರಕಟಿಸುತ್ತಿದ್ದ “ನಾಗರಿಕತೆ ಮತ್ತು ಅರಾಜಕತೆ” ಎಂಬ ವಿಮರ್ಶೆಯ ಲೇಖನಗಳ ಗುಚ್ಚವನ್ನು ನೀಡಿ ಮುನ್ನುಡಿ ಬರೆಯುವಂತೆ ಕೇಳಿದ್ದು ಅವರ ದೊಡ್ಡತನ. ಸಮಕಾಲೀನ ಅನೇಕ ಪ್ರಶ್ನೆಗಳನ್ನೆತ್ತಿಕೊಂಡು ವೈಚಾರಿಕವಾಗಿ ವಿಶ್ಲೇಷಿಸಿದ ಬರಹಗಳು ಇಷ್ಟವಾಗಿದ್ದವು. ಆ ಬಗ್ಗೆ ಕೆಲವು ಮಾತು ಬರೆದಿದ್ದೆ:

“ನಮ್ಮ ಬದುಕಿನಲ್ಲಿ ವೈಚಾರಿಕ ಬದುಕನ್ನು ಹಿಗ್ಗಿಸಿದ ಸಾಹಿತ್ಯದ ಕ್ಯಾನ್ವಾಸ್ ದೊಡ್ಡದು. ಈ ಕ್ಯಾನ್ವಾಸಲ್ಲಿ ಪಾಶ್ಚಾತ್ಯ ಚಿಂತಕರು ನಮ್ಮ ದೇಶ – ನಾಡಿನ ವೈಚಾರಿಕತೆಯ ಬೆಳಕಿನ ದೀವಿಗೆ ಹಿಡಿದು ಹೊರಟವರ ಪ್ರಭಾವದ ಬರಹಧಾರೆಯೇ ಇದೆ. ಸಂಸ್ಕೃತಿ ಚಿಂತನೆ ಹಾಗೂ ಅಭಿವ್ಯಕ್ತಿಗೆ ರಾಜಕೀಯ ಲೇಪನವೂ ಈ ಕೃತಿಯಲ್ಲಿ ಆವರಿಸಿಕೊಂಡಿದೆ. ಇನ್ನೂರಕ್ಕೂ ಹೆಚ್ಚು ಪುಟಗಳಲ್ಲಿ ಜಿಕೆಜಿ ಹೇಳ ಹೊರಟಿರುವುದು ‘Socio leterary & political Analysis ಸಮಾಜೋ ಧಾರ್ಮಿಕ ಚಳವಳಿಯ ಹಿನ್ನೆಲೆಯ ಇಣುಕು ಇಲ್ಲಿದೆ. “ಗಾಂಧಿ, ಗೋಡೆ ಮತ್ತು ನಾವು” ಎಂಬ ಆರಂಭದ ಲೇಖನವೇ ಅವರ ಸತ್ಯ ಶೋಧನೆಯ ಲೋಕದ ಅನ್ವೇಷಣೆಯನ್ನು ಸೂಚಿಸುತ್ತದೆ. “ಗಾಂಧಿ V/s ಗೋಡೆ” ಎಂದು ಪರಿಭಾವಿಸಿ ಓದುತ್ತಾ ಹೋದರೆ ಜಿಕೆಜಿ ಎತ್ತುವ ಒಂದು ಪ್ರಶ್ನೆ ‘ಗಾಂಧಿ ಸತ್ಯ”ದಂತೆ, “ಗೋಡ್ಲೆ ಸತ್ಯ”ವೂ ಇದೆಯೇ? ಎಂಬುದು. ಗಾಂಧಿ ಕೊಂದ ಗೋಡೆಯ ಹಿನ್ನೆಲೆಗೆ ಒತ್ತು ನೀಡುವ ಆರ್.ಎಸ್.ಎಸ್. ಅಪಾಯಕಾರಿ ನಿಲುವುಗಳಿಗೆ ಸಾವರ್ಕರ್ ಕನಸಿನ ಮಾತೃಭೂಮಿ ಪರಿಕಲ್ಪನೆ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುತ್ತಾರೆ. ಲೇಖನದ ಕೊನೆಯಲ್ಲಿ ಗಾಂಧೀಜಿಯವರ ಕನಸುಗಳ ಸಹಾಯದಿಂದ ನಮ್ಮ ಕನಸನ್ನೂ ನಾವು ಕಾಣಬೇಕಾಗಿದೆ ಎಂದೇಳುತ್ತಲೇ. ‘ಗಾಂಧೀಜಿಯವರ ಕನಸನ್ನಷ್ಟೇ ನನಸು ಮಾಡುವುದಲ್ಲ ನಮ್ಮ ಕರ್ತವ್ಯ. ಪ್ರಕೃತಿ ಸೃಷ್ಟಿಸಿದ ಪ್ರತಿ ಜೀವಿಗೂ ತನ್ನದೇ ಕನಸು ಸಾಧ್ಯವಿದೆ. ತನ್ನದೇ ಭವಿಷ್ಯದ ಕನಸುಗಳಿವೆ. ಆಸೆಗಳಿವೆ”. (ಪುಟ ೧೧) ಎಂಬ ಅರ್ಥಪೂರ್ಣ ಹಾಗೂ ಮೌಲಿಕ ಮಾತು ದಾಖಲಿಸುತ್ತಾರೆ.

ಪುಸ್ತಕದ ಕೊನೆಯ ಭಾಗದಲ್ಲಿ ಕವಿ ಎ.ಕೆ. ರಾಮಾನುಜನ್, ಪತ್ರಕರ್ತ ವೈಎನೈ, ನಾಟಕಕಾರ ಕಾರ್ನಾಡ, ರಾಜಕೀಯ ಮುತ್ಸದ್ದಿ ಜಾರ್ಜ್ ಬಗ್ಗೆ ಬರೆವ ಮಾತುಗಳು ವಿಶೇಷ ಮುದ್ರೆ ಒತ್ತುತ್ತವೆ. ಅದರಲ್ಲೂ ನನ್ನ ಕುತೂಹಲದ ಕವಿ, ಜಾನಪದ ವಿದ್ವಾಂಸ ಎ.ಕೆ. ರಾಮಾನುಜನ್ ಬಗ್ಗೆ ತಿಳಿಯದ ಅನೇಕ ಪ್ರಸಂಗಗಳನ್ನು, ಅವರ ಅಧ್ಯಯನದ ಆಸಕ್ತಿಗಳನ್ನು ದಾಖಲಿಸುತ್ತಾರೆ. “ನಾನು ಮನೆಯಲ್ಲಿ ಕೆಳಗಡೆ ಅಮ್ಮನೊಡನೆ ತಮಿಳು, ಮಹಡಿಮೇಲೆ ಅಪ್ಪನೊಡನೆ ಇಂಗ್ಲಿಷು ಹಾಗೂ ಹೊರಗಡೆ ಕನ್ನಡ ಮಾತನಾಡುತ್ತಿದ್ದೆ” ಎಂಬ ಬಹುಭಾಷಾತಜ್ಞ ರಾಮಾನುಜನ್ ಮಾತು, ಅವರ “ಅಂಗುಲ ಹುಳುವಿನ ಪರಾಕಾಯ ಪ್ರವೇಶ’ದಂತೆ, ಭಾಷಾ ಕಲಿಕೆ, ಬರವಣಿಗೆ, ಸಂವಹನಶಕ್ತಿಯ ಕುತೂಹಲಿಯ ಅನಾವರಣ ಮಾಡುತ್ತಾರೆ.

ಸಾಹಿತ್ಯದ ಗಂಭೀರ ಓದು, ಚರ್ಚೆ, ಬರವಣಿಗೆ, ಭಾಷಣ, ಉಪನ್ಯಾಸಗಳು, ರಾಜಕೀಯ ಹಾಗೂ ಕಲಾ ಮಾಧ್ಯಮಕ್ಕೂ ಅನ್ವಯಿಸಬಹುದಾದ ಜಿಕೆಜಿ, ಕುತೂಹಲ ಮೂಡಿಸಿದ ಅನನ್ಯ ವ್ಯಕ್ತಿ. ಯಾವ ವ್ಯಕ್ತಿಯ ಬಗ್ಗೆಯೇ ಆಗಲಿ, ಇದ್ದಾಗ ಅರಿಯದೆ, ಹೋದ ನಂತರ ಕೆದಕುತ್ತ ಹೋಗುವ ನನ್ನಂಥವನ ಮನಸ್ಥಿತಿಯೂ ದೂರಾಗಿ, ಹಲವು ಕ್ರಿಯಾಶೀಲ ವ್ಯಕ್ತಿಗಳ ಒಡನಾಟದಲ್ಲಿನ ಅನುಭವದ ಬುತ್ತಿಯ ರುಚಿಯನ್ನಾದರೂ ನೋಡಬೇಕು ಎಂಬುದು ಪ್ರಾಮಾಣಿಕ ಅಭಿಪ್ರಾಯ. ಜಿಕೆಜಿ ಅವರಲ್ಲಿ ಬೀದಿ ಹೋರಾಟದ ಕೆಚ್ಚು ಇತ್ತು. ಕ್ಲಾಸ್ ರೂಂನಲ್ಲಿ ಪಾಶ್ಚಾತ್ಯ ಹಾಗೂ ಕನ್ನಡ ಸಾಹಿತ್ಯ ಬೆಸೆವ ಬೋಧನೆಯೂ ಇತ್ತು.

ಸಂವೇದನಾಶೀಲ ಬರಹಗಾರ ನಟರಾಜ ಹುಳಿಯಾರ ಅವರ ಮುನ್ನುಡಿಯ ಈ ಮಾತು ಚಿಂತನಾರ್ಹ: ‘ಸಮಾಜದ ನಾಯಕತ್ವ ವಹಿಸಬೇಕಾದ ಬುದ್ಧಿಜೀವಿಗಳು ಕಳ್ಳ ಮೌನದಲ್ಲಿ ಹಾಗೂ ಸಿನಿಕತನದಲ್ಲಿ ಕಳೆದುಹೋಗಿರುವಾಗ, ಜಿಕೆಜಿ ಥರದವರ ಮಾತು, ಬರಹಗಳು ನಮ್ಮಲ್ಲಿ ಸ್ವಲ್ಪವಾದರೂ ಚೈತನ್ಯ ತುಂಬಬಲ್ಲವು”. ಜಿಕೆಜಿ ಅವರು ಕರೋನಾದ ಲಾಕ್ ಡೌನ್ ದಿನಗಳನ್ನು ಚೆನ್ನಾಗಿ ಬಳಸಿಕೊಂಡು ಹೊಸ ಪುಸ್ತಕ ಬರೆದಿದ್ದರು. ಅದು “ಗಾಂಧೀಜಿಯವರ ಉಪವಾಸಗಳು ಮತ್ತು…” ಎಂಬ ಈ ಕೃತಿ ಮೈಸೂರಿನ ಅಭಿರುಚಿ ಪ್ರಕಾಶನ ತರುತ್ತದೆ ಎಂದಿದ್ದರು. ನಂತರದ ಮಾಹಿತಿ ಲಭ್ಯವಿಲ್ಲ.

ಕೃಪೆ: ಕೆಂಧೂಳಿ ವಾರಪತ್ರಿಕೆ, ಸಂಪಾದಕರು: ತುರುವನೂರು ಮಂಜುನಾಥ್

‍ಲೇಖಕರು Admin

30 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading